• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಂಡಿ ಸಿಟಿಯಲ್ಲೂ ಸುರಿದ ಮುಂಗಾರು ಧಾರೆ!

By Staff
|

"ನಾ ನೋಡಲಾರೆ ಕನ್ನಡ ಚಿತ್ರ" ಎಂದು ಬೆನ್ನು ತಿರುಗಿಸಿ ಹೊರನಡೆದವರನ್ನೂ ಮತ್ತೆ ಥಿಯೇಟರಿನತ್ತ ಸೆಳೆಯುತ್ತಿರುವುದೇ ಮುಂಗಾರು ಮಳೆ ಚಿತ್ರದ ನಿಜವಾದ ಯಶಸ್ಸು!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

Ganesh and Sanjana Gandhi in Mungaru Maleಜೂನ್ 10ರ ಭಾನುವಾರ ಬೆಳಗ್ಗೆ ಗಾಳಿ ನಗರ ಶಿಕಾಗೋದಲ್ಲಿ ಮುಂಗಾರು ಮಳೆ! ಬೆಳಗ್ಗೆ ಹತ್ತು ಘಂಟೆಗೆ ಸಿನಿಮಾ ಶುರು ಎಂದು ತಿಳಿದು ನನಗೆ ಆತಂಕ ಶುರುವಾಯಿತು. ಯಾಕೆಂದರೆ ನಮ್ಮದು ಸೂರ್ಯವಂಶ! ವಾರದ ಉಳಿದ ದಿನ ವಿಧಿ ಇಲ್ಲದೆ ಬೇಗ ಏಳುವ ಮಕ್ಕಳನ್ನು ವಾರಾಂತ್ಯದಲ್ಲಿ ಡಿಸ್ಟರ್ಬ್ ಮಾಡುವಂತಿಲ್ಲ! ಅದರಲ್ಲೂ ಈಗ ಇಲ್ಲಿಯ ಮಕ್ಕಳಿಗೆ ಬೇಸಿಗೆ ರಜ ಬೇರೆ.

ಮಕ್ಕಳಿಗೆ ಹಿಂದಿನ ದಿನವೇ ಟಿಕೆಟ್ ಮೊದಲೇ ಬುಕ್ ಮಾಡಿದ್ದರೂ,ತೀರಾ ತಡವಾಗಿ ಬಂದವರ ಟಿಕೆಟ್ ಬೇರೆಯವರಿಗೆ ಕೊಡಲಾಗುತ್ತದೆ ಎಂದು ಕನ್ನಡ ಕೂಟದಿಂದ ಬಂದಿದ್ದ ಬೆದರಿಕೆ ಇಮೈಲುಗಳನ್ನು ಓದಿ ಹೇಳಿ, ಎಷ್ಟೇ ಕಷ್ಟವಾದರೂ ಸರಿ, ಬೆಳಗ್ಗೆ 9.30ಕ್ಕೆ ಮೊದಲು ಚಿತ್ರಮಂದಿರದಲ್ಲಿರಲು ಸಹಕರಿಸಬೇಕೆಂದು ಕರಾರು ವಿಧಿಸಿದ್ದಾಯಿತು.

ಏನೇ ತಿಪ್ಪರಲಾಗ ಹಾಕಿದರೂ ನಾವು ಹೊರಡುವುದು ತಡವಾಗಿಬಿಟ್ಟಿತು. ದಾರಿಯಲ್ಲೇ ಗಡಿಯಾರ ಹತ್ತರ ಮುಳ್ಳು ಸಮೀಪಿಸತೊಡಗಿತ್ತು. ನಮ್ಮ ಗೆಳೆಯರೊಬ್ಬರಿಗೆ ಸ್ಥಳ ಕಾದಿರಿಸಬೇಕೆಂದು ಫೋನಿನಲ್ಲೇ ವಿನಂತಿ ಮಾಡಿಕೊಂಡೆವು. ಕರಾವಳಿ ಕಡೆಯವರಾದ ಅವರು "ಬೈರಾಸು" ಹಾಸಿ ಸ್ಥಳ ಕಾದಿಡುವುದಾಗಿ ಭರವಸೆ ನೀಡಿದ್ದರಿಂದ, ಚಿತ್ರಮಂದಿರ ತುಂಬಿದ್ದರೂ ನಮಗೇನೂ ತೊಂದರೆಯಾಗಲಿಲ್ಲ. ಸಿನಿಮಾಗಳನ್ನು ಟೈಟಲ್ ಕಾರ್ಡಿನಿಂದ ನೋಡದ ಹೊರತು ನನಗೆ ಚಿತ್ರ ನೋಡಿದ ಸಂತೋಷ ದೊರೆಯುವುದಿಲ್ಲ. ಸದ್ಯ, ಸಿನಿಮಾ ಹತ್ತಕ್ಕೆ ಎಂದಿದ್ದರೂ, ನಾವು ಹೋದ ಕೆಲವು ನಿಮಿಷಗಳ ನಂತರವಷ್ಟೇ ಶುರುವಾಯಿತು "ಹನಿ ಹನಿ ಪ್ರೇಮ್ ಕಹಾನಿ!"

ಪ್ರೀತಂ ಪಾತ್ರಧಾರಿ ಗಣೇಶ, ಹುಡುಗಿಯನ್ನು ಕಂಡು ಗುಂಡಿಗೆ ಬೀಳುವ ದೃಶ್ಯದೊಂದಿಗೆ ಆರಂಭವಾಗುವ ಚಿತ್ರ, ಶಿಕಾಗೊ ಪ್ರೇಕ್ಷರನ್ನೂ ತನ್ನ ಬುಟ್ಟಿಗೆ ಕೆಡವಿಕೊಳ್ಳುವ ಹವಣಿಕೆಯಲ್ಲಿತ್ತು. ಎಲ್ಲೂ ಅಡೆತಡೆಗಳಿಲ್ಲದೆ ಸುಖವಾಗಿ ಸಾಗುವ ಸಿನಿಮಾ ನಿಧಾನವಾಗಿ ಪ್ರೇಕ್ಷರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳತೊಡಗಿತು. ಉದಯ ಟಿವಿಯಿಂದಾಗಿ "ಕಾಮಿಡಿ ಟೈಮ್ ಗಣೇಶ್" ಇಲ್ಲಿ ಬಹಳ ಜನಕ್ಕೆ ಪರಿಚಿತನೇ ಆಗಿರುವುದರಿಂದ, "ನಾಯಕ ಯಾರು?" ಎಂದು ಪ್ರಶ್ನಿಸುವ ಪ್ರಮೇಯವಿರಲಿಲ್ಲ.

"ಸುಧಾ" ವಾರಪತ್ರಿಕೆಯಲ್ಲಿ ಯೋಗರಾಜ ಭಟ್ಟರು ಬರೆಯುತ್ತಿದ್ದ "ಮುಂಗಾರು ಮಳೆ ಸುರಿದಿದ್ದು ಹೇಗೆ?" ಲೇಖನ ಮಾಲೆಯನ್ನು ಕೂಡ ಕೆಲವರು ಓದಿದ್ದರಿಂದ ಚಿತ್ರದ ಬಗ್ಗೆ ಕುತೂಹಲ ಸಹಜವಾಗಿತ್ತು.

ಸಿನಿಮಾ ಕಥೆಯ ಬಗ್ಗೆ ಹೆಚ್ಚು ಹೇಳುವುದು ಅನಗತ್ಯ. ಎಲ್ಲೆಲ್ಲೂ ಈಗ ಅದೇ ರಾಗ! ಅದೇ ಹಾಡು! ಒಂದು ತಾಜಾ ಪ್ರೇಮ ಕತೆ, ಜೊತೆಗೆ ಸಹಜ, ಸುಂದರ ಅಭಿನಯ, ಪ್ರಕೃತಿ ವೈಭವ, ಜೋಗದ ಜಲಪಾತದ ನಿತೋತ್ಸವ ಎಲ್ಲವೂ ಸೇರಿ ಚಿತ್ರ ಕಾವ್ಯವಾಗಿದೆ. ಅಶ್ಲೀಲದ ಹಂಗಿಲ್ಲದ ನವಿರಾದ ಸಂಭಾಷಣೆ ಹಿತವೆನಿಸುತ್ತದೆ. "ಪ್ರೇಮ ಮಧುರ, ತ್ಯಾಗ ಅಮರ" ಎಂಬ ಸಂದೇಶ ಸಾರುವ ಅಂತ್ಯವೇ ಚಿತ್ರವನ್ನು ಉಳಿದ ಚಿತ್ರಗಳಿಂದ ಭಿನ್ನವಾಗಿಸಿದೆ.

ನಾನು ಗಮನಿಸಿದ ಹಾಗೆ, ಇಲ್ಲಿ ಸಿನಿಮಾ ನೋಡುವ ಜನರು ಅಲ್ಲಿಯಂತೆ (ಕರ್ನಾಟಕ) ಸುಲಭವಾಗಿ ಸಿನಿಮಾದ ಡೈಲಾಗುಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸ್ವಲ್ಪ ಬಿಗುಮಾನವೇ ಎನ್ನಬಹುದು. ಆದರೆ ಈ ಚಿತ್ರದ ಪಂಚ್ ಕೊಡುವ, ತಿಳಿಹಾಸ್ಯ ಬೆರೆತ ಸಂಭಾಷಣೆಗಳಿಗೆ ಮುಕ್ತವಾಗಿ ನಗುತ್ತಾ, ಸಂತಸ ಅನುಭವಿಸುತ್ತಿದ್ದುದು ಗಮನ ಸೆಳೆಯುತ್ತಿತ್ತು. ಪರಭಾಷಾ ಗಾಯಕರಿಂದ "ಒಲವೇ", "ಹೇಳು" ಇತ್ಯಾದಿ ಪದಗಳು ಕೆಟ್ಟದಾಗಿ ಉಚ್ಚಾರಣೆಯಾಗಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಸಾಹಿತ್ಯ, ಸಂಗೀತ ಅತಿ ಮಧುರ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more