ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಳಿಸಾರು ಮತ್ತು ನನ್ನಮ್ಮನ ಅಕ್ಕರೆ (ಭಾಗ 2)

By Super Admin
|
Google Oneindia Kannada News

ಸಾರು ರುಚಿಯೆನಿಸಬೇಕಾದರೆ, ಬೇಳೆಯನ್ನು ಮೆತ್ತಗಾಗುವಂತೆ ಬೇಯಿಸಿಕೊಳ್ಳುವುದು ಅತ್ಯಗತ್ಯ. ಕುಕ್ಕರುಗಳಲ್ಲಿ ಕೇಳುವುದೇ ಬೇಡ. ನಿಮಿಷಗಳಲ್ಲಿ ಎಂತಹ ಗಟ್ಟಿ ಬೇಳೆಯಾದರೂ ಹಣ್ಣಾಗಿ ಬೆಂದು ಹೋಗಿರುತ್ತದೆ. ತೆರೆದ ಪಾತ್ರೆಯಲ್ಲಿ ಬೇಳೆ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿಭಿನ್ನ ರುಚಿಗೆ ಕೆಲವರು ತೊಗರಿ ಬೇಳೆಯ ಜೊತೆಗೆ ಹೆಸರು ಬೇಳೆ, ಕಡಲೆ ಬೇಳೆಯನ್ನು ಬೆರೆಸುತ್ತಾರಾದರೂ, ತೊಗರಿಬೇಳೆಯಂತೂ ಕಡ್ಡಾಯ. ಕೆಲವು ದಿನಗಳ ಹಿಂದೆ, ಅಮೆರಿಕದಲ್ಲಿ ತೊಗರಿಬೇಳೆಯ ಬೆಲೆ ಗಗನಕ್ಕೇರಿದಾಗ ಹೌಹಾರಿದ ಸಾರು ಪ್ರಿಯರಲ್ಲಿ ನಾನೂ ಒಬ್ಬಳು! ತೊಗರಿಬೇಳೆಯ ಜೊತೆ ಒಂದು ಟೊಮ್ಯಾಟೊ ಬೇಯಲು ಹಾಕಿದರೆ ಸಾರಿಗೆ ಹೆಚ್ಚುವರಿ ರುಚಿ ಲಭ್ಯವಾಗುತ್ತದೆ.

ನುಣ್ಣಗೆ ಬೆಂದ ಬೇಳೆಯನ್ನು ನೋಡಿದಾಗಲೆಲ್ಲ ನನಗೆ ಬೇಂದ್ರೆಯವರ ''ಬೆಳಗು’’ ಕವಿತೆಯ ''ನುಣ್ಣನೆ ಎರಕವ ಹೊಯ್ದಾ’’ ಸಾಲು ನೆನಪಾಗುವುದೊಂದು ವಿಶೇಷ. ಈ ನುಣ್ಣನೆಯ ಬೇಳೆಯನ್ನು ಕಡೆದು, ಆ ಬೇಳೆಯ ಕಟ್ಟಿಗೆ, ಸಾರಿನ ಪುಡಿ, ಹುಣುಸೆ ರಸ, ಉಪ್ಪು ಬೆರೆಸಿ ಹದವಾಗಿ ಕುದಿಸಬೇಕು. ಸಾರಿನ ಪುಡಿ ಮನೆಯಲ್ಲಿ ಮಾಡಿಕೊಳ್ಳಲು ಆಗದಿದ್ದರೆ, ಅಂಗಡಿಗಳಲ್ಲಿ ಸಿಗುವ ಸಿದ್ಧ ಸಾರಿನ ಪುಡಿಗಳಿಗೆ ಮೊರೆ ಹೋಗಬಹುದು. ಸಿಹಿ ಇಷ್ಟವಾಗುವಂತಿದ್ದರೆ ಮಾತ್ರ ಒಂದು ಪುಟ್ಟ ಚೂರು ಬೆಲ್ಲ, ಇಲ್ಲದಿದ್ದರೆ ಇಲ್ಲ. ಸಾರಿನ ಪುಡಿಯ ಘಾಟು ವಾಸನೆ ಹೋಗುವ ತನಕ ಸಾರು ಕುದಿಯಬೇಕು. ಹೀಗೆ ಕುದಿಯುವಾಗಲೇ ಕೊತ್ತುಂಬರಿ ಸೊಪ್ಪನ್ನು ಹಾಕಬೇಕು. ಕೊನೆಗೆ ಒಂದು ಸೌಟಿನಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಸಾಸುವೆ, ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ಅಲ್ಲಿಗೆ ಘಮಘಮಿಸುವ ತಿಳಿಸಾರಿನ ಅವತಾರವಾದಂತೆ!

ಸಾರು ಕುದಿಯುವ ಹಂತದಲ್ಲಿ ಮನೆ ತುಂಬ ಹರಡುವ ಪರಿಮಳವನ್ನು ಆಸ್ವಾದಿಸಿಯೇ ಸವಿಯಬೇಕು. ಸಾರು ಕುದಿದಷ್ಟು ರುಚಿ ಹೆಚ್ಚು ಎನ್ನುತ್ತಾರೆ. ಹಾಗೆಂದು ವಿಪರೀತ ಕುದಿಸಿದರೆ ಸಾರಿನಲ್ಲಿರುವ ನೀರೆಲ್ಲಾ ಆವಿಯಾಗಿ, ತಿಳಿಸಾರಿನ ಬದಲು, ಬಗ್ಗಡದಂತಹ ಗಟ್ಟಿ ಸಾರಿನ ರುಚಿ ನೋಡಬೇಕಾದ ಪಾಡು ನಮ್ಮದಾಗುತ್ತದೆ. ಸಾರು ಹದವಾಗಿ ಕುದಿಯಬೇಕು. ಆದರೆ ಉಕ್ಕಿ ಸುರಿದು ಹೋದರೆ, ಅದರಲ್ಲಿರುವ ಸಾರವೆಲ್ಲವೂ ನಷ್ಟವಾದಂತೆಯೇ. ''ಉಕ್ಕಿದರೆ ಸಾರಲ್ಲ, ಸೊಕ್ಕಿದರೆ ಹೆಣ್ಣಲ್ಲ’’ ಎಂಬ ಗಾದೆಯೂ ಸಾರು ಉಕ್ಕಿದರೆ ರುಚಿ ಕೆಡುತ್ತದೆ ಎಂದು ನಮ್ಮನ್ನು ಎಚ್ಚರಿಸುತ್ತಿದೆ.

Relationship between My Mother and Tilisaaru

ನಮ್ಮ ಮನೆಗೆ ಒಮ್ಮೆ ಗುಜರಾತಿ ಮಿತ್ರರು ಬಂದಿದ್ದರು. ಅವರ ಮಗು ನಮ್ಮ ಸಾರನ್ನು ನೋಡಿ ''ಸೂಪ್‌, ಸೂಪ್‌’’ ಎಂದು ಬಾಯಲ್ಲಿ ನೀರೂರಿಸುತ್ತಿತ್ತು. ಸಾರನ್ನು ಕೆಲವರು ಸೂಪ್‌ ಎಂದು ಅನುವಾದಿಸುತ್ತಾರೆ. ಸಾರನ್ನೂ ಸೂಪಿನಂತೆ ಬಟ್ಟಲಿನಲ್ಲಿ ಹಾಕಿಕೊಂಡು ಕುಡಿಯಬಹುದಾದರೂ ಸೂಪೇ ಬೇರೆ. ಸಾರೇ ಬೇರೆ. ಕನ್ನಡೇತರರು - ಈಚೆಗೆ ಕನ್ನಡಿಗರೂ - ಸಾರನ್ನು ''ರಸಂ’’ ಎಂದು ಕರೆಯುತ್ತಾರಾದರೂ ನನಗೇಕೋ ಸಾರು ಪದದಲ್ಲಿರುವ ಮಾಧುರ್ಯ ಆ ಪದದಲ್ಲಿ ಕಂಡುಬಂದಿಲ್ಲ! ಬಹುಶ: ಇದಕ್ಕೆ ನನ್ನ ಪೂರ್ವಾಗ್ರಹವೂ ಕಾರಣವಿರಬಹುದು.

ಮೊಸರನ್ನವನ್ನು ತಾಯಿಯೆನ್ನುತ್ತಾರೆ. ಭೋಜನದ ಪ್ರಾರಂಭದಲ್ಲಿ ಬಡಿಸುವ ಪಾಯಸವನ್ನು ತಾಯಿ ಎನ್ನುತ್ತಾರೆ. ಎಲೆ ತುದಿಯಲ್ಲಿ ಬಡಿಸುವ ತೊವ್ವೆಯನ್ನೂ ಕೆಲವರು ತಾಯಿಗೆ ಹೋಲಿಸುತ್ತಾರೆ. ಸಾರನ್ನು ಯಾರೂ ತಾಯಿ ಎಂದಿಲ್ಲವಾದರೂ, ಅದೇಕೋ ತಿಳಿಸಾರು ನನಗೆ ತಾಯಿಯ ನೆನಪನ್ನೇ ತರುತ್ತದೆ. ಬಾಲ್ಯದಲ್ಲಿ ಅಮ್ಮ ಮಾಡಿ ಹಾಕಿದ ತಿಳಿಸಾರಿನ ನೆನಪು ನನ್ನ ಮನದಾಳದಲ್ಲಿ ಗಟ್ಟಿಯಾಗಿ ನಿಂತಿರುವುದರಿಂದ ಹೀಗನ್ನಿಸಬಹುದು. ಅಮ್ಮ ಮಾಡುತ್ತಿದ್ದ ಬೇಳೆ ಸಾರು ಮಾತ್ರವಲ್ಲದೆ, ಬೇಳೆಯ ಹಂಗೇ ಇಲ್ಲದ ಗೊಡ್ಡು ಸಾರು, ಮಾವಿನ ಕಾಯಿ ಸಾರು, ಬಾಣಂತನದ ಸಮಯದಲ್ಲಿ ಮಾಡಿ ಹಾಕುತ್ತಿದ್ದ ಮೆಣಸಿನ ಸಾರು - ಇವೆಲ್ಲವೂ ಅಮ್ಮನ ನೆನಪನ್ನು ಸಾರಿನೊಡನೆ ಕಟ್ಟಿಹಾಕಿರಬೇಕೆಂದು ಭಾವಿಸುತ್ತೇನೆ.

ನಾನು ಬರೆದಿರುವ ''ಅಮ್ಮ’’ ಎಂಬ ಕವನದಲ್ಲಿಯೂ ಅಮ್ಮನ ನೆನಪನ್ನು ನಾನು ತಿಳಿಸಾರಿಗೇ ಹೋಲಿಸಿದ್ದೇನೆ. ಆ ಸಾಲುಗಳು ಹೀಗಿವೆ - ''ಇಲ್ಲಿ ಅಮೆರಿಕಾದ ಅಡುಗೆ ಮನೆಯಲ್ಲಿ ತಿಳಿಸಾರು ಕುದಿವಾಗ ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ’’. ತಿಳಿಸಾರು ಕುದಿವಾಗ ಅಮ್ಮ ಏಕೆ ನೆನಪಾಗುತ್ತಾಳೋ ಗೊತ್ತಿಲ್ಲ. ನನ್ನಲ್ಲಿ ತಾಯಿ, ತಾಯ್ನಾಡಿನ ಬಗೆಗೆ ಭಾವನಾತ್ಮಕ ಸೆಳೆತಗಳು ಹೆಚ್ಚಾಗಿರುದರಿಂದ ನನಗೆ ಮಾತ್ರ ಹೀಗನ್ನಿಸುತ್ತಿದೆಯೆಂದು ಮೊದಲು ತಿಳಿದಿದ್ದೆ. ಆದರೆ ಅನೇಕರಿಗೆ ನನ್ನಂತೆ ತಿಳಿಸಾರು ತಾಯಿಯ ಕೈ ಅಡಿಗೆಯನ್ನು ನೆನಪಿಸುತ್ತದೆಂದು ನಂತರ ತಿಳಿಯಿತು.

ನನ್ನ ಅಮ್ಮನಿಗಂತೂ ಅಡುಗೆ ಮಾಡಲು ನನಗಿರುವ ಅನುಕೂಲದ ನಾಲ್ಕನೆಯ ಒಂದು ಭಾಗವೂ ಇರಲಿಲ್ಲವೆನ್ನಬಹುದು. ಕುಕ್ಕರ್‌ ಬಳಕೆಯಲ್ಲಿಲ್ಲದ ಕಾರಣ ತೆರೆದ ಪಾತ್ರೆಯಲ್ಲಿ ಬೇಳೆ ಬೇಯಿಸಬೇಕಾಗಿತ್ತು. ನಮ್ಮೂರಿನ ಗಡಸು ನೀರಿನಲ್ಲಿ ಬೇಳೆ ಎಂದೂ ಮೆತ್ತಗೆ ಬೇಯುತ್ತಿರಲಿಲ್ಲ. ಆದರೂ ಆ ಸಾರಿಗೆ ರುಚಿ ತುಂಬುತ್ತಿದ್ದುದು ಅಮ್ಮನ ಅಕ್ಕರೆಯಲ್ಲದೆ, ಬೇರೇನೂ ಅಲ್ಲವೆಂಬುದು ನನ್ನ ಗಟ್ಟಿ ನಂಬಿಕೆ. ಇದೇ ಮಾತನ್ನು ನನ್ನ ಅಕ್ಕನೂ ಈಚೆಗೆ ಧೃಡಪಡಿಸಿದಳು.

ತಿಳಿಸಾರು ಎಲ್ಲರಿಗೂ ಇಷ್ಟವೆನ್ನಿಸಬೇಕಾಗಿಲ್ಲ. ''ದಿನವೂ ಅನ್ನ, ಸಾರಿನ ಸಪ್ಪೆ ಊಟವೇ?’’ ಎಂದು ಮೂಗೆಳೆಯುವವರೂ ಇದ್ದಾರೆ. ಯಾವುದೇ ಸಂತಸ, ಸಂಭ್ರಮ, ವಿಶೇಷಗಳಿಲ್ಲದ ಸಪ್ಪೆ ಬದುಕನ್ನು ''ಸಾರನ್ನದಂತಹ ಬದುಕು’’ ಎಂದು ನಗೆಯಾಡಬಹುದು. ಸಸ್ಯಾಹಾರಿಗಳನ್ನು ''ಪುಳಿಚಾರು’’ ಎಂದು ವಿನೋದ ಮಾಡಲಾಗುತ್ತದೆ. ಅದೇನೇ ಇರಲಿ, ''ಊಟ ತನ್ನಿಚ್ಛೆ, ನೋಟ ಪರರಿಚ್ಛೆ’’ ಎಂಬುದಂತೂ ಅಂತಿಮ ಸತ್ಯ. ನಾವು ತಿನ್ನುವ ಅಡುಗೆ ಯಾವುದೇ ಇರಲಿ ಸತ್ವಪೂರ್ಣವಾಗಿರಲಿ. ಸಾರಯುಕ್ತವಾಗಿರಲಿ. ನನ್ನ ಪಾಲಿಗಂತೂ ಏನೇ ಬರಲಿ, ಸಾರಿರಲಿ! [ತಿಳಿಸಾರು ಮತ್ತು ನನ್ನಮ್ಮನ ಅಕ್ಕರೆ (ಭಾಗ 1)]

English summary
Tulasivana Columnist Triveni Srinivasarao writes on Tilisaaru(Rasam).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X