ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಡಲು ಮೋಡ, ಹೆಣೆಯಲು ಹಾವು, ಏನದು ಹೇಳು?

By Staff
|
Google Oneindia Kannada News


ಹೆಣ್ಣಿನ ನೀಳ ಜಡೆಯನ್ನು ಕವಿಗಳು ನುಣುಪಾಗಿ ಹೊಳೆಯುವ ಕಪ್ಪು ನಾಗರಕ್ಕೆ ಹೋಲಿಸುತ್ತಾರೆ. ನಾಗವೇಣಿ, ನೀಲವೇಣಿ, ಕೃಷ್ಣವೇಣಿಯರೆಂದು ಜಡೆಯ ಲಕ್ಷಣದಿಂದಲೇ ಅವಳನ್ನು ಹೆಸರಿಸಲಾಗುತ್ತದೆ. ಹೆಣ್ಣಿನ ಬೆನ್ನ ಮೇಲೆ ಜಲಪಾತದಂತೆ ಹರಡಿರುವ ಕೇಶರಾಶಿಯನ್ನು ಕೆ.ಎಸ್‌.ನ - ’ದೂರದಲಿ ಗಿರಿಯ ಮೇಲೆ ಇಳಿದಂತೆ ಮುಗಿಲ ಮಾಲೆ ’ ಎಂದು ಸುಂದರವಾದ ಹೋಲಿಕೆಯಲ್ಲಿ ಹಿಡಿದಿಡುತ್ತಾರೆ. ಆದರೆ ಈಗ ಅನುಕೂಲತೆಯ ದೃಷ್ಟಿಯಿಂದ ಬಹುಪಾಲು ಜನರು ತಮ್ಮ ಕೂದಲನ್ನು ಕತ್ತರಿಗೆ ಒಪ್ಪಿಸಿರುತ್ತಾರಾದ್ದರಿಂದ ಉದ್ದ ಜಡೆಗಳು ಕಾಣಸಿಗುವುದು ಬಹಳ ಅಪರೂಪ. ಆದರೂ ಹೆಂಗಸರನ್ನು ನಾಗವೇಣಿಯರ ಬದಲಿಗೆ ವೃಶ್ಚಿಕ ವೇಣಿಯರೆಂದು ಕರೆಯುವ ಸಾಹಸವನ್ನು ಯಾಕೋ ಇನ್ನೂ ಯಾರೂ ಮಾಡಿದಂತಿಲ್ಲ.

ಹಾಗೆಂದು ಕವಿಗಳ ಸೂಕ್ಷ್ಮ ದೃಷ್ಟಿಗೆ ಈ ವ್ಯತ್ಯಾಸ ಗೋಚರವಾಗಿಲ್ಲವೆಂದರೆ ತಪ್ಪಾಗುತ್ತದೆ - ‘ಜಡೆ’ ಎಂಬುದು ರಾಷ್ಟ್ರಕವಿ ಶಿವರುದ್ರಪ್ಪನವರ ಒಂದು ಕವನ. ಇದರಲ್ಲಿ ವಿವಿಧ ನಮೂನೆಯ ಜಡೆಗಳನ್ನೆಲ್ಲ ಹಿಡಿದು ಕವಿ ಒಂದೆಡೆ ಕಲೆ ಹಾಕಿದ್ದಾರೆ. ‘ಚೇಳ್‌ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ, ಮಲ್ಲಿಗೆಯ ಕಂಪು ಜಡೆ, ಕೇದಗೆಯ ಹೆಣೆದ ಜಡೆ, ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ, ಬೆವರಿನಲಿ ಧೂಳಿನಲಿ ನೆನೆದಂಟಿರುವ ಗಂಟು ಜಡೆ, ‘ಕುರುಕುಲ ಜೀವಾಕರ್ಷಣ ಪರಿಣತ’ - ಆ ಪಾಂಚಾಲಿಯ ಜಡೆ, ಸೀತೆಯ ಕಣ್ಣೀರೊಳು ಮಿಂದ ಜಡೆ’ - ಹೀಗೆ ಜಡೆಗಳಲ್ಲಿರುವ ವೈವಿಧ್ಯವನ್ನು ಕಂಡು ಬೆರಗಾಗಿ ‘ಓ ಓ ಈ ಜಡೆಗೆಲ್ಲಿ ಕಡೆ!’ ಎಂದು ಉದ್ಗಾರ ತೆಗೆದಿದ್ದಾರೆ.

ಇದೇ ಕವಿತೆಯಲ್ಲಿ ‘ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ ಹರಡಿರುವ ತಾಯ ಜಡೆ’ ಎಂಬ ಸುಂದರ ಸಾಲೊಂದು ಬರುತ್ತದೆ. ಹುಟ್ಟಿದ ನಂತರ ಮೊದಲು ನೋಡುವ ಅಮ್ಮನ ಮಮತೆ ತುಂಬಿದ ಮುಖದಂತೆಯೇ ಅವಳ ಜಡೆಯೂ ಮಕ್ಕಳ ನೆನಪಿನಲ್ಲಿ ಅಚ್ಚೊತ್ತಿರುತ್ತದೆ. ನನ್ನ ಅಮ್ಮನಿಗೆ ಉದ್ದವಾದ, ದಟ್ಟ ಕೂದಲು ಇದ್ದರೂ ಅದನ್ನೆಂದೂ ಅವಳು ಹರಡಿಕೊಳ್ಳುತ್ತಿರಲಿಲ್ಲ. ಹೆಂಗಸರ ಬಿರಿಮುಡಿ ಮನೆಗೆ ಅನಿಷ್ಟಕಾರಿಯೆಂಬುದು ಅಮ್ಮನ ನಂಬಿಕೆಯಾಗಿತ್ತು. ತನ್ನ ಈ ನಂಬಿಕೆಯನ್ನು ಸಮರ್ಥಿಸಲು ದ್ರೌಪದಿಯ ಬಿಚ್ಚಿದ ಮುಡಿ ಕುರುವಂಶದ ವಿನಾಶಕ್ಕೆ ಕಾರಣವಾದ ಕಥೆಯನ್ನು ರಸವತ್ತಾಗಿ ಹೇಳುತ್ತಿದ್ದಳು. ತನ್ನ ನೀಳ ಕೂದಲನ್ನು ತುದಿಯವರೆಗೆ ಹೆಣೆದು, ನಂತರ ಅದನ್ನು ಸಿಂಬಿಯಂತೆ ಸುತ್ತಿ ತುರುಬು ಕಟ್ಟಿಕೊಳ್ಳುತ್ತಿದ್ದಳು. ಅದಕ್ಕೆ ಐದಾರು ‘ಯು’ ಆಕಾರದ ಪಿನ್ನುಗಳನ್ನು ಚುಚ್ಚಿ, ಗಟ್ಟಿಗೊಳಿಸಿದರೆ, ಅಲ್ಲಿಗೆ ಅಮ್ಮನ ಕೇಶಾಲಂಕಾರ ಮುಗಿದಂತೆ. ಕೊಟ್ಟ ಕೊನೆಗೆ ತುರುಬಿನ ನಡುವಿನ ಭಾಗಕ್ಕೆ ಈಗ ಅಪರೂಪವಾಗಿರುವ ‘ತಿರುಪಿನ ಹೂವು’ ಎಂಬ ಆಭರಣವನ್ನು ತಪ್ಪದೆ ಧರಿಸುತ್ತಿದ್ದಳು.

‘ತಿರುಪಿನ ಹೂವು’ ಎಂಬುದು ಕೆಂಪು, ಬಿಳಿ,ನೀಲಿ ಹರಳುಗಳಿಂದ ಕೂಡಿದ, ಹೂವಿನ ಆಕಾರದಲ್ಲಿರುವ ಒಂದು ಚಿನ್ನದ ಒಡವೆ. ಹೂವಿನ ಹಿಂದೆ ಇರುವ ಬೆಳ್ಳಿಯ ತಿರುವುಗಳನ್ನು ತುರುಬಿನಲ್ಲಿ ಸಿಕ್ಕಿಸುವುದರ ಹೊರತು ಇದಕ್ಕೆ ಹೆಚ್ಚಿನ ಭದ್ರತೆ ಇರುತ್ತಿರಲಿಲ್ಲ. ಕಳ್ಳರು ಇದನ್ನು ಲಪಟಾಯಿಸಲು ಹೆಚ್ಚಿನ ಶ್ರಮ ಪಡುವ ಅಗತ್ಯವಿರದು. ಅಮ್ಮನಿಗೆ ಇದು ಬಹಳ ಪ್ರೀತಿಯ ಆಭರಣವಾಗಿದ್ದಿರಬಹುದು. ತಂದೆಯ ವ್ಯವಸಾಯದ ಬದುಕಿನ ಕಷ್ಟನಷ್ಟಗಳಿಗೆ ಗುರಿಯಾಗಿ, ಅಮ್ಮನಿಗೆ ತವರಿನಿಂದ ಬಳುವಳಿಯಾಗಿ ಬಂದಿದ್ದ ನಗಗಳೆಲ್ಲ ಒಂದೊಂದಾಗಿ ಕಣ್ಮರೆಯಾದರೂ, ಇದೊಂದನ್ನು ಮಾತ್ರ ಬಹಳ ಕಾಲ ಅಮ್ಮನ ತುರುಬಿನಲ್ಲಿ ನೋಡಿದ ನೆನಪಿದೆ. ಆಮೇಲೆ ಅದೂ ಎಲ್ಲಿ ಮಾಯವಾಯಿತೋ?

ಅಮ್ಮನಿಗೂ, ಜಡೆಗೂ ಹೊಂದಿಕೆಯಾಗುವ ಇನ್ನೊಂದು ವಿಷಯವಿದೆ. ಗಂಗೆ, ಯಮುನೆ ಮತ್ತು ಗುಪ್ತಗಾಮಿನಿಯಾದ ಸರಸ್ವತಿ - ಈ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ನಡೆಸುವ ‘ವೇಣಿ ದಾನ’ ಎಂಬ ಧಾರ್ಮಿಕ ಆಚರಣೆಯಾಂದು ನಮ್ಮಲ್ಲಿದೆ. ‘ವೇಣಿ ದಾನ’ ಎಂದರೆ ನದಿಗೆ ಕೂದಲನ್ನು ದಾನ ಮಾಡುವುದು. ಈ ಪವಿತ್ರ ನದಿಗಳ ಸಂಗಮ ಸ್ಥಾನಕ್ಕೆ ದೋಣಿಯಲ್ಲಿ ಹೋಗಿ, ನದಿಗೆ ಬಾಗಿನ ಅರ್ಪಿಸಿ, ಹೆಂಡತಿಯ ಹೆರಳಿನ ತುದಿಯ ಅತಿ ಚಿಕ್ಕ ಭಾಗವನ್ನು ಪತಿಯೇ ಕತ್ತರಿಸಿ ನೀರಿಗೆ ಅರ್ಪಿಸುವುದು, ಮತ್ತಿತರ ವಿಧಿಗಳು. ಈ ಆಚರಣೆಯನ್ನು ನೆರವೇರಿಸಿದವರಿಗೆ ಜನ್ಮಾಂತರದಲ್ಲೂ ಸುಮಂಗಲಿತನ ಶಾಶ್ವತವಾಗಿ ದೊರಕುವುದೆಂಬ ನಂಬಿಕೆ. ಆದರೆ ಅಮ್ಮನ ಹಲವಾರು ಚಿಕ್ಕ ಚಿಕ್ಕ ಆಸೆಗಳಂತೆ ಇದೂ ಕೂಡ ನೆರವೇರಲಿಲ್ಲ.

‘ತ್ರಿವೇಣಿ’ ಎಂಬ ನನ್ನ ಹೆಸರಿಗೂ, ಜಡೆಗೂ ಸಂಬಂಧವಿದೆಯೆಂದು ನನಗೆ ಗೊತ್ತಾಗಿದ್ದು ಪ್ರಾಥಮಿಕ ಶಾಲೆಯಲ್ಲಿದ್ದಾಗ, ನಮ್ಮ ಮೇಷ್ಟರೊಬ್ಬರಿಂದ. ನಾನಾಗ ಎರಡು ಅಥವಾ ಮೂರನೆಯ ತರಗತಿಯಲ್ಲಿರಬಹುದು. ಅವರು ಅದೇ ತಾನೇ ಅಲ್ಲಿಗೆ ವರ್ಗವಾಗಿ ಬಂದಿದ್ದರು. ಶಾಲೆಯ ಎಲ್ಲಾ ಹುಡುಗಿಯರ ಹೆಸರುಗಳನ್ನು ಕೇಳಿಕೊಂಡು ಬಂದರು. ‘ನನ್ನ ಹೆಸರು ತ್ರಿವೇಣಿ’ ಎಂದೊಡನೆ, ಯಾವಾಗಲೂ ನಗುವಂತೆಯೇ ಇರುತ್ತಿದ್ದ ಅವರ ಮುಖದಲ್ಲಿ ಒಂದು ತಿಳಿಯಾದ ನಗು ಮೂಡಿತು. ‘ನಿನಗಿರುವುದು ಎರಡೇ ಜಡೆ, ನಿನ್ನನ್ನು ತ್ರಿವೇಣಿ ಎಂದು ಕರೆಯುವುದು ಹೇಗೆ ತಾನೇ ಸಾಧ್ಯ? ನಿನ್ನನ್ನು ನಾನು ಇಂದಿನಿಂದ ‘ಟುವೇಣಿ’ಎಂದು ಕರೆಯುತ್ತೇನೆ’ - ಎಂದು ಇಡೀ ತರಗತಿಯನ್ನು ಗೊಳ್ಳೆಂದು ನಗಿಸಿದ್ದರು. ನಾನು ಆ ಶಾಲೆಯಲ್ಲಿರುವವರೆಗೂ ತಮ್ಮ ಮಾತನ್ನು ಉಳಿಸಿಕೊಂಡಿದ್ದರು ಕೂಡ!

ಈಗಲೂ ಒಮ್ಮೊಮ್ಮೆ ಸಿಕ್ಕುತುಂಬಿದ ಜಡೆಯನ್ನು ನವಿರಾಗಿ ಬಾಚುವಾಗ, ಮುಖವೇ ನೆನಪಿಗೆ ಬಾರದ ಆ ನಮ್ಮ ಮೇಷ್ಟರ ಸವಿನೆನಪಿನ ಎಳೆಯಾಂದು ಮನಸ್ಸಿನಾಳದಿಂದ ಮೇಲೆದ್ದು ಬರುವುದುಂಟು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X