• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರಣ್ಯದಲ್ಲಿ ‘ಗಂಗಾ ಕಾವೇರಿ’ ಸೇರಿದ ಹೊತ್ತು!

By Staff
|

ಆನೂರ್‌ ಅನಂತಕೃಷ್ಣ ಶರ್ಮರ ಮೃದಂಗ, ಎಂ. ಕೆ. ಪ್ರಾಣೇಶ್‌ರ ಕರ್ನಾಟಕ ಶೈಲಿಯ ಕೊಳಲು, ಗೋಡ್ಖಿಂಡಿಯವರ ಹಿಂದೂಸ್ತಾನಿ ಶೈಲಿಯ ಕೊಳಲು, ಮಧುಸೂದನರ ತಬಲ, ಅರುಣ್‌ ಅವರ ತಾಳಮದ್ದಲೆ ಮೇಳೈಸಿದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚುವ ಆಸೆ ಯಾರಿಗೆ ತಾನೇ ಬರುವುದಿಲ್ಲ! ಕೇಳಿ, ಒಂದು ಸಂಗೀತಾನುಭವ.

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

Praveen Godkhindi and friends performing at Ganga-Kaveri concertಜೂನ್‌ ತಿಂಗಳು ಬಂದಿತೆಂದರೆ ಎಂದಿನಂತೆ ವಿದ್ಯಾರಣ್ಯ ಕನ್ನಡ ಕೂಟಕ್ಕೆ ದತ್ತಿನಿಧಿ ಸಂಗ್ರಹಿಸುವ ಸಡಗರ. ಕರ್ನಾಟಕದಲ್ಲಿ ಅಶಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಸಂಘ, ಸಂಸ್ಥೆಗಳಿಗೆ ಕಿಂಚಿತ್ತಾದರೂ ನೆರವಾಗುವ ಉದ್ದೇಶದಿಂದ ವರ್ಷಕ್ಕೆ ಎರಡು ಬಾರಿ ದತ್ತಿನಿಧಿ ಸಂಗ್ರಹಕ್ಕಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಈ ಸತ್ಕಾರ್ಯದಲ್ಲಿ ಕರ್ನಾಟಕದ ಅನೇಕ ಕಲಾವಿದರು, ಗಾಯಕರು, ನಟ-ನಟಿಯರು ಕಾರ್ಯಕ್ರಮಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ. ಕಳೆದ ವರ್ಷ ಜೂನ್‌ 4ರಂದು ವಿದ್ಯಾರಣ್ಯದ ರಂಗ ತಂಡ ‘‘ಶಿಕರ’’ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್‌ ಕಾರ್ನಾಡರ ‘‘ತಲೆದಂಡ’’ ನಾಟಕ ಆಡಿ ಜಯಭೇರಿ ಬಾರಿಸಿತ್ತು.

ಈ ಬಾರಿ ದತ್ತಿನಿಧಿ ಸಂಗ್ರಹಕ್ಕೆಂದು ನಿಯೋಜಿತವಾಗಿದ್ದ ಕಾರ್ಯಕ್ರಮ ಖ್ಯಾತ ಕೊಳಲುವಾದಕ ಪ್ರವೀಣ್‌ ಗೋಡ್ಖಿಂಡಿ ಮತ್ತು ಸಂಗಡಿಗರ ‘‘ಗಂಗಾ ಕಾವೇರಿ’’. ವಿದ್ವಾನ್‌ ಆನೂರ್‌ ಅನಂತಕೃಷ್ಣ ಶರ್ಮರ ಮೃದಂಗ, ವಿದ್ವಾನ್‌ ‘‘ನಾದಜ್ಯೋತಿ’’ ಎಂ. ಕೆ. ಪ್ರಾಣೇಶ್‌ ಅವರ ಕರ್ನಾಟಕ ಶೈಲಿಯ ಕೊಳಲು, ‘‘ಸುರಮಣಿ’’ ಪ್ರವೀಣ್‌ ಗೋಡ್ಖಿಂಡಿಯವರ ಹಿಂದೂಸ್ತಾನಿ ಶೈಲಿಯ ಕೊಳಲು, ವಿದ್ವಾನ್‌ ಅರುಣ್‌ ಕುಮಾರ್‌ ಅವರ ತಾಳಮದ್ದಲೆಗಳು, ವಿದ್ವಾನ್‌ ಎಸ್‌. ಮಧುಸೂದನ ಅವರ ತಬಲ ವಾದನಗಳಿದ್ದ ‘‘ಗಂಗಾ ಕಾವೇರಿ’’ ತಂಡದ ಸಂಗೀತ ಸಮಾರಾಧನೆಯ ರುಚಿಯ ಬಲ್ಲವರೇ ಬಲ್ಲರು!

ವಿದ್ಯಾರಣ್ಯ ಕನ್ನಡ ಕೂಟದ ಬಾಲಕರಾದ ಆಕಾಶ್‌ ಮಟ್ಟು ಮತ್ತು ನಿಖಿಲ್‌ ಶಿವ ಹಾಡಿದ ‘‘ಗಜಮುಖನೆ ಗಣಪತಿಯೆ’’, ‘‘ವಂದೇ ಮಾತರಂ’’ ಗೀತೆಗಳೊಂದಿಗೆ ಕಾರ್ಯಕ್ರಮ ಮೊದಲಾಯಿತು. ದತ್ತಿನಿಧಿ ಸಮಿತಿಯ ಮುಖ್ಯಸ್ಥರಾದ ಸುಧಾಕರ್‌ ಮಟ್ಟು ಅವರು ಕಲಾವಿದರನ್ನು ಸಭೆಗೆ ಪರಿಚಯಿಸಿ, ಸರ್ವರಿಗೂ ಸ್ವಾಗತ ಕೋರಿದರು.

ವೇದಿಕೆ ಮೇಲೆ ಜೋಡಿ ದೀಪಗಳೊಡನೆ ವಿರಾಜಿಸುತ್ತಿದ್ದ ಗಣನಾಯಕ, ತನಗೆ ಕೊಟ್ಟ ಮೊದಲ ಮರ್ಯಾದೆ ಸ್ವೀಕರಿಸಿ ಸುಪ್ರೀತನಾದನೆಂದು ಕಾಣುತ್ತದೆ. ಏಕೆಂದರೆ, ನಂತರ ಹರಿದ ಸಂಗೀತ ಸುಧಾಮೃತಸಾರಕ್ಕೆ ಬಿಡುವೇ ಇಲ್ಲ. ಭೋಜನ ವಿರಾಮವನ್ನೂ ಕೊಡದೆ ಕಲಾವಿದರು ಸಭಿಕ ಸಮುದಾಯವನ್ನು ಸಂಗೀತ ಶರಧಿಯಲ್ಲಿ ಒಮ್ಮೆ ತೇಲಿಸಿದರೆ ಮತ್ತೊಮ್ಮೆ ಮುಳುಗಿಸಿಯೇ ಬಿಟ್ಟರು.

‘‘ಗಂಗಾ-ಕಾವೇರಿ ನದಿಗಳ ಜೋಡಣೆ’’ ನಿಜವಾಗಿ ಇದೊಂದು ಸುಂದರ ಕಲ್ಪನೆ! ವಾಸ್ತವ ಜಗತ್ತಿನಲ್ಲಿ ಇದು ಎಷ್ಟರಮಟ್ಟಿಗೆ ಸಾಧ್ಯವಾಗಲಿದೆಯೋ ಕಾದು ನೋಡಬೇಕು. ಆದರೆ ಸಂಗೀತ ಲೋಕದಲ್ಲಂತೂ ಈಗಾಗಲೇ ಸಾಧ್ಯವಾಗಿದೆ. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತಗಳ ಜೊತೆಗೆ ಪಶ್ಚಿಮದಿಂದ ಹರಿದುಬಂದಿರುವ ಪಾಶ್ಚಾತ್ಯ ಸಂಗೀತ ಮಿಶ್ರಣದ ರಸಪಾಕ, ಈ ಗಂಗಾ-ಕಾವೇರಿ ಸಂಗೀತ ಕಾರ್ಯಕ್ರಮ. ಉತ್ತರ ಮತ್ತು ದಕ್ಷಿಣದ ಪುಣ್ಯನದಿಗಳಾದ ಗಂಗೆ, ಕಾವೇರಿಯರ ಹೆಸರನ್ನೇ ಈ ಕಾರ್ಯಕ್ರಮ ಹೊಂದಿರುವುದಂತೂ ಬಹಳ ಅರ್ಥಪೂರ್ಣವಾಗಿದೆ.

ಆನೂರ್‌ ಅನಂತಕೃಷ್ಣ ಶರ್ಮರು ವಿವರಣೆ ನೀಡಿದ ನಂತರ, ಕದನ ಕುತೂಹಲ ರಾಗದಲ್ಲಿರುವ ರಚನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾಣೇಶ್‌ ಅವರಿಂದ ಕರ್ನಾಟಕ ಶೈಲಿಯಲ್ಲಿ ರಾಮನಾಥಪುರಂ ಶ್ರೀನಿವಾಸ ಅಯ್ಯಂಗಾರ್‌ ಅವರ ಒಂದು ಕೀರ್ತನೆ. ನಂತರ ಪ್ರಾಣೇಶ್‌ ಮತ್ತು ಪ್ರವೀಣ್‌ ಜೋಡಿ ಕೊಳಲಿನಲ್ಲಿ ಹಿಂದೋಳ ಮತ್ತು ಮಾಲ್‌ಕೌಂಸ್‌ ರಾಗಗಳ ಜುಗಲಬಂದಿ. ಆಮೇಲಿನ ಸರದಿ ದೇವರನಾಮ, ಭಜನ್‌ಗಳದ್ದು.

ವಿದ್ವಾನ್‌ ಎಂ. ಕೆ. ಪ್ರಾಣೇಶ್‌ ಅವರ ‘‘ಕೃಷ್ಣಾ ನೀ ಬೇಗನೆ ಬಾರೊ’’ ಹಾಡಿನೊಂದಿಗೆ ಶುರುವಾದ ಕೊಳಲು ನಾದದ ಸೆಲೆಗೆ, ಪ್ರವೀಣ್‌ ಗೊಡ್ಖಿಂಡಿಯವರಿಂದ ಹಿಂದೂಸ್ತಾನಿ ರಾಗದಲ್ಲಿ ತುಳಸೀದಾಸರ ‘‘ಶ್ರೀರಾಮಚಂದ್ರ ಕೃಪಾಳು ಭಜ ಮನ ಹರಣ ಭವ ಭಯ ದಾರುಣಮ್‌’’ ನಂತರ ಮೀರಾ ಭಜನ್‌ ‘‘ಪಾಯೋಜಿ ಮೈನೆ ರಾಮ್‌ ರತನ್‌ ಧನ್‌ ಪಾಯೊ’’ ಜೊತೆಗೂಡಿದವು.

ರಾಮಧ್ಯಾನದಲ್ಲಿ ಮೈಮರೆತ ನಮ್ಮನ್ನು ಎಚ್ಚರಿಸುವಂತೆ, ಕೃಷ್ಣನ ತುಂಟಾಟದ ನೆನಪು ತರುವ ‘‘ಬಾರೋ ಕೃಷ್ಣಯ್ಯಾ..’’ ಪ್ರಾಣೇಶ್‌ ಅವರಿಂದ. ಈ ವೇಣುಗಾನದ ಕರೆಗೆ ಮರುಳಾದ ನಾದಲೋಲ ಗೋಪಾಲ: ಅವನನ್ನು ಹಿಡಿಯಲು ಬೆನ್ನಟ್ಟಿ ಬಂದ ಹರಿದಾಸರು: ‘‘ಸುರರು ಬಂದು ಹರಿಯ ಕಂಡು ಹರುಷದಿ ಭುವಿಯೇ ಸ್ವರ್ಗ! ಭುವಿಯೇ ಸ್ವರ್ಗ!’’ ಅನ್ನುವಂತಿದ್ದ ನಾದಮಯ ಲೋಕವೊಂದು ಅಲ್ಲಿ ನಿರ್ಮಾಣವಾಗಿಹೋಗಿತ್ತು! ವೇದಿಕೆಗೆ ಹಿನ್ನೆಲೆಯಾಗಿ ಅರಮನೆಯ ಚಿತ್ರವಿರುವ ಪರದೆಯನ್ನು ಬಳಸಿದ್ದರಿಂದ ಈ ಕಾರ್ಯಕ್ರಮ ಯಾವುದೋ ರಾಜನ ಆಸ್ಥಾನದಲ್ಲಿ ನಡೆದಿರಬಹುದಾದ ಸಂಗೀತ ಕಛೇರಿಯನ್ನು ನೆನಪಿಗೆ ತರುವಂತಿತ್ತು.

ಒಮ್ಮೆ ಕರ್ನಾಟಕ ಶಾಸ್ತ್ರೀಯ ಮತ್ತೊಮ್ಮೆ ಹಿಂದೂಸ್ತಾನಿಯ ಮುರಳಿಗಾನದ ಮಾಯೆ. ಅತ್ತಿತ್ತ ಅಲುಗಾಡಿದರೆ ಎಲ್ಲಿ ಈ ದೈವಿಕ ಸಂಗೀತಕ್ಕೆ ಧಕ್ಕೆಯೊದಗೀತೋ ಎಂದು ಹೆದರಿ ನಾನಂತೂ ‘‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ’’ ಎಂದು ಮೊದಲ ಸಾಲಿನ ಕುರ್ಚಿಗಂಟಿಕೊಂಡು ಮಂತ್ರಮುಗ್ಧಳಂತೆ ಕುಳಿತುಬಿಟ್ಟಿದ್ದೆ! ಅತ್ತಿತ್ತ ಸುತ್ತುವ ಚಪಲಚಿತ್ತವನ್ನೂ ಹಿಡಿದು ಒಂದೆಡೆ ಕಟ್ಟಿ ನಿಲ್ಲಿಸುವಂತಿತ್ತು ಅನಂತ ಕೃಷ್ಣಶರ್ಮ, ಅರುಣ್‌ ಕುಮಾರ್‌ ಮತ್ತು ಮಧುಸೂದನ ಅವರ ಚಾಣಾಕ್ಷ ಬೆರಳುಗಳ ಥಕಧಿಮಿತಾ!

ಸತತ ಮೂರು ಘಂಟೆಗಳ ಕಾಲ ಸುರಿದ ಸಂಗೀತಧಾರೆಯದು. ಭೋಜನ ವಿರಾಮವನ್ನು ಕೊಡಲೊಪ್ಪದೆ ಸಭಿಕರ ಹಸಿವಿಗೆ ಕಾರಣರಾಗಿದ್ದಕ್ಕೆ ವಿದ್ವಾನ್‌ ಆನೂರ್‌ ಅನಂತಕೃಷ್ಣ ಶರ್ಮರು ಎರಡೆರಡು ಬಾರಿ ಕ್ಷಮೆ ಯಾಚಿಸಿದರು. ಗೋಕುಲ ಗೊಲ್ಲನ ಮುರಳಿಗಾನಕ್ಕೆ ಮನಸೋತು - ‘‘ಮೇವು ಮರೆತವು ಗೋವುಗಳೆಲ್ಲ, ಸಾವಧಾನವಾಗಿ ಹರಿದಳು ಯಮುನೆ’’ ಎನ್ನುತ್ತಾರೆ ದಾಸರು. ಅದರಂತೆ ಸಂಗೀತವೆಂಬ ಸುರಲೋಕದ ಅಮೃತಫಲವನ್ನೇ ಸವಿಯುತ್ತಿದ್ದ ನಮಗಾದರೂ, ಹಸಿವೆಲ್ಲಿ? ತೃಷೆ ಇನ್ನೆಲ್ಲಿ?

ಕಾರ್ಯಕ್ರಮದ ಕೊನೆಯ ಹಾಡು ‘‘ಭಾಗ್ಯದ ಲಕ್ಷ್ಮೀ ಬಾರಮ್ಮಾ’’. ಈ ಹಾಡಿನ ಘೋಷಣೆಯಾಗುತ್ತಿದ್ದಂತೆ ಪ್ರೇಕ್ಷಕ ವೃಂದ ಒಮ್ಮೆ ಆನಂದದಿಂದ ಉದ್ಗಾರ ಹೊರಡಿಸಿತು. ಪುರಂದರದಾಸರ ಈ ಕೀರ್ತನೆ ನಮ್ಮ ಜನಕ್ಕೆ ಅದೇನು ಮೋಡಿ ಮಾಡಿದೆಯೋ ಕಾಣೆ. ಈ ಹಾಡು ಎಲ್ಲಿಯೂ ಸೋತಿದ್ದಿಲ್ಲ. ಪಂಡಿತ ಭೀಮಸೇನ್‌ ಜೋಶಿ ‘‘ನೋಡಿ ಸ್ವಾಮಿ ನಾವಿರೋದೇ ಹೀಗೆ’’ ಚಿತ್ರಕ್ಕಾಗಿ ‘‘ಲಕ್ಷ್ಮೀ....ಬಾರಮ್ಮಾ’’ ಎಂದು ಕರೆದಿದ್ದೂ ಜನಪ್ರಿಯ, ಜಯವಂತಿ ದೇವಿ ಹಾಡಿರುವ ಬಹಳ ಅಪರೂಪದ ಧಾಟಿಯಲ್ಲಿರುವ ‘‘ಭಾಗ್ಯಾದ ಲಕ್ಷ್ಮೀ ಬಾರಮ್ಮಾ’’ ಹಾಡೂ ಮನಸ್ಸಿಗೆ ಬಲು ಮುದ, ಇತ್ತೀಚೆಗೆ ನಗೆಹಬ್ಬಗಳಲ್ಲಿ ಬೇಡಿಕೆಯಲ್ಲಿರುವ ‘‘ಶುಕ್ರವಾರದ ನಮಾಜು ಟೈಮಿಗೆ ಮಜ್ಜಿಗೆಯೊಳಗಿನ ಮಕ್ಕನ್‌ನಂತೆ ಬರುವ ವಿಠಲನ ಬೇಗಂ’’ ಕೂಡ ಅಷ್ಟೇ ಜನಮೆಚ್ಚಿಗೆ ಪಡೆದಿದ್ದಾಳೆ.

ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆಯನ್ನಿಟ್ಟರೆ ಮೊದಲೇ ಹಸಿದಿದ್ದ ಪ್ರೇಕ್ಷಕರು ಖಂಡಿತ ಇರುವುದಿಲ್ಲವೆಂಬ ರಿಸ್ಕ್‌ ಊಹಿಸಿದ್ದ ದತ್ತಿನಿಧಿ ಸದಸ್ಯರರಲ್ಲೊಬ್ಬರಾದ ವೀಣಾ ಪ್ರಭು, ಕೊನೆಯ ಹಾಡಿಗೆ ಮೊದಲೇ, ಕಲಾವಿದರಿಗೆ ವಿದ್ಯಾರಣ್ಯ ಕನ್ನಡಕೂಟದ ಪರವಾಗಿ ಫಲಕಗಳನ್ನು ನೀಡಿ ವಂದನಾರ್ಪಣೆ ಸಲ್ಲಿಸಿದರು.

ಸಂಗೀತಗಾರರು ಭೋಜನಕ್ಕೆ ವಿರಾಮ ಕೊಡದ ಸೇಡು ತೀರಿಸಿಕೊಳ್ಳುವಂತೆ, ನಂತರ ವಿರಾಮವೇ ಇಲ್ಲದ ಭೋಜನ! ಕಾರ್ಯಕ್ರಮದ ಆಯೋಜಕರು ಎಂದಿಗಿಂತಲೂ ಹೆಚ್ಚಿನ ಪ್ರಮಾಣದ ಅಡುಗೆಗಳನ್ನು ಮಾಡಿಸಿ ತಂದಿಟ್ಟಿದ್ದರೋ, ಅಥವಾ ಕೃಷ್ಣನ ಒಲುಮೆಯಿಂದ ದ್ರೌಪದಿ ಉಟ್ಟ ಉಡುಗೆ ಅಕ್ಷಯವಾದಂತೆ, ಕೃಷ್ಣನಿಗೆ ಪ್ರಿಯವಾದ ಕೊಳಲುಲಿಗೆ, ಅಟ್ಟ ಅಡುಗೆಗಳೇ ಅಕ್ಷಯವಾದವೋ ಗೊತ್ತಿಲ್ಲ. ಒಟ್ಟಿನಲ್ಲಿ ಬಂದಿದ್ದವರೆಲ್ಲ ಉಂಡು, ಕೊಂಡುಹೋದರೂ ಟ್ರೇಗಳಲ್ಲಿ ಇನ್ನೂ ಹಲವು ಬಗೆಯ ರುಚಿಕರ ಪದಾರ್ಥಗಳು ಉಳಿದುಹೋಗಿದ್ದವು!

ಪ್ರವೀಣ್‌ ಗೋಡ್ಖಿಂಡಿ ಮತ್ತು ಎಲ್ಲಾ ಕಲಾವಿದರೂ ನಮ್ಮೆಲ್ಲರೊಂದಿಗೆ ನಗುನಗುತ್ತಾ ಬೆರೆತಿದ್ದು, ನಮ್ಮೊಡನೆ ಫೋಟೋದಲ್ಲಿ ಸೆರೆಯಾಗಲೊಪ್ಪಿದ್ದು ನಮಗೆ ಸಿಕ್ಕಿದ ಮತ್ತೊಂದು ಬೋನಸ್‌! ಈ-ಟಿವಿಯ ‘‘ರಾಗ ರಂಜಿನಿ’’ ಕಾರ್ಯಕ್ರಮದಿಂದಾಗಿ ಪ್ರವೀಣ್‌ ಗೋಡ್ಖಿಂಡಿಯವರ ಕಟ್ಟಾ ಅಭಿಮಾನಿಯಾಗಿರುವ ಶ್ರೀನಿ, ಪ್ರವೀಣ್‌ ಮೆರೂನ್‌ ಬಣ್ಣದ ರೇಷ್ಮೆ ಅಂಗಿಯನ್ನು ತೊಟ್ಟು ಬಂದಿರುತ್ತಾರೆಂದು ನನ್ನಲ್ಲಿ ಬೆಟ್‌ ಕಟ್ಟಿ ಸೋತ ಸಂಕಟವನ್ನು, ಪ್ರವೀಣ್‌ ಅವರಲ್ಲಿ ಹಂಚಿಕೊಂಡರು. ನೀವು ಬೆಟ್‌ ಸೋತ ಹಣ ನನಗೇನು ಬರುವುದಿಲ್ಲವಾದ್ದರಿಂದ ನಾನೇನೂ ಸಹಾಯ ಮಾಡಲಾರೆ ಎಂದು ಪ್ರವೀಣ್‌ ನಕ್ಕುಬಿಟ್ಟರು. ಬಹಳಷ್ಟು ಕಲಾವಿದರಂತೆ ಪ್ರವೀಣ್‌ ಕೂಡ ‘‘ಮೂಡಿ’’, ‘‘ರಿಸರ್ವ್‌’’ ಸ್ವಭಾವದವರೆಂದು ಭಾವಿಸಿದ್ದ ನನಗೆ ಅವರ ಸರಳ, ಸ್ನೇಹಮಯ ಸ್ವಭಾವ ಬೆರಗುಂಟುಮಾಡಿತು.

ಒಟ್ಟಿನಲ್ಲಿ ಅದೊಂದು ಮರೆಯಬಾರದ, ಮರೆಯಲೂ ಆಗದ ಮಧುರವಾದ ಕಾರ್ಯಕ್ರಮ. ಇಂತಹದೊಂದು ದಿವ್ಯ, ಭವ್ಯ ಕಾರ್ಯಕ್ರಮವನ್ನು ನಮ್ಮದಾಗಿಸಿದ ಗಂಗಾ ಕಾವೇರಿ ತಂಡದ ಎಲ್ಲಾ ಕಲಾವಿದರಿಗೂ, ಟಿಕೆಟ್‌ ಮಾರಾಟಕ್ಕೆ, ಕಾರ್ಯಕ್ರಮದ ಯಶಸ್ಸಿಗೆ, ಹಗಲಿರುಳೆನ್ನದೆ ಶ್ರಮಿಸಿದ ದತ್ತಿನಿಧಿ ಸಮಿತಿಯ ಸದಸ್ಯರಾದ ಸುಧಾಕರ್‌ ಮಟ್ಟು, ಪ್ರಸನ್ನ ಮೂರ್ತಿ, ಕಜೇಕರ್‌ ರಾಮಚಂದ್ರ, ಟಿ. ಎ. ಶ್ರೀಧರ, ವೀಣಾ ಪ್ರಭು, ದಿನೇಶ್‌ ಕಾದಮುದ್ದಿ, ಪುರುಷೋತ್ತಮ ಆಚಾರ್ಯ ಮತ್ತು ವಿದ್ಯಾರಣ್ಯದ ಅಧ್ಯಕ್ಷ ದತ್ತಮೂರ್ತಿ ಅಜ್ಜಂಪುರ ಅವರಿಗೆ ಎಲ್ಲಾ ಸಂಗೀತ ಪ್ರೇಮಿಗಳ ಪರವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು. ಯುವಸಮಿತಿಯ ಸದಸ್ಯರು ರಾಫಲ್‌ ಟಿಕೆಟ್‌ ಮಾರಾಟದ ಮೂಲಕ ದತ್ತಿನಿಧಿಗೆ ಸಾವಿರ ಡಾಲರುಗಳನ್ನು ಸಂಗ್ರಹಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮನುಜರ ದುಃಖ-ದುಗುಡ, ನೋವು-ನಿರಾಸೆಗಳೆಲ್ಲವನ್ನೂ ಮರೆಸಬಲ್ಲ ಶಕ್ತಿ ಇರುವ ಸಂಗೀತ ದೇವತೆಗೆ ಮೌನವಾಗಿ ನಮಿಸುತ್ತಾ ನಾವೆಲ್ಲ ಮನೆಯ ಹಾದಿ ಹಿಡಿದೆವು. ಬರುವ ಭಾನುವಾರ, ಜೂನ್‌, 10ರಂದು ವಿದ್ಯಾರಣ್ಯ ಕನ್ನಡ ಕೂಟ ಆಯೋಜಿಸಿರುವ ಚಲನಚಿತ್ರ ‘‘ಮುಂಗಾರು ಮಳೆ’’ ಯ ಕನಸು ಮನಸ್ಸಿನಲ್ಲಿ ಆಗಲೇ ಮೋಡಕಟ್ಟತೊಡಗಿತ್ತು!

‘‘ಗಂಗಾ-ಕಾವೇರಿ’’ ಕಾರ್ಯಕ್ರಮದ ಎಲ್ಲಾ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more