ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈರಿಯ ಹೊಟ್ಟೆಯಾಳಗೆ ನಾನಾ ಗುಟ್ಟುಗಳು!

By Staff
|
Google Oneindia Kannada News


Cultivate habit of writing diary ನನಗಂತೂ ಆತ್ಮಚರಿತ್ರೆ ಬರೆಯುವ ಇರಾದೆ ಇಲ್ಲ! ಆತ್ಮಚರಿತ್ರೆ ಬರೆಯುವಂತಹ ಕಷ್ಟದ ಕೆಲಸ ಬೇರೊಂದಿಲ್ಲವೆಂದೇ ನನ್ನ ಧೃಡ ನಂಬಿಕೆ. ‘‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’’ ಎಂದು ಅಂದಂದಿನ ಬದುಕು ಅಂದು ಬದುಕುವವರೇ ನಿಜವಾಗಿ ಸುಖಿಗಳು. ಬದಲಾಗಿ ಪ್ರತಿಯೊಂದನ್ನು ಬರೆದಿಡುವ ಹುಚ್ಚು ಅಂಟಿಸಿಕೊಂಡರೆ ಮನಸ್ಸಿನ ನೆಮ್ಮದಿ ಕದಡುವುದು ಖಚಿತ ಎಂಬ ವಾದದಲ್ಲೂ ಹುರುಳಿದೆ. ಬೇರೇನೂ ಬೇಡ, ಯಾವುದಾದರೂ ಸುಂದರ ತಾಣಗಳಿಗೆ ಹೋದಾಗ ಅಲ್ಲಿಯ ಚಿತ್ರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನೂ ಹೊತ್ತು ನೋಡಿ. ಹೋಗಿರುವ ಸ್ಥಳದ ದೃಶ್ಯ ವೈಭವಗಳನ್ನು ಪೂರ್ಣವಾಗಿ ಸವಿಯುವುದು ಸಾಧ್ಯವಾಗುವುದಿಲ್ಲ. ಮನಸ್ಸು ಅರ್ಧ ಇಲ್ಲಿದ್ದರೆ ಉಳಿದರ್ಧ ಕ್ಯಾಮೆರಾದ ನಿಗಾ ವಹಿಸುವುದರಲ್ಲಿರುತ್ತದೆ.

ಪ್ರತಿಯೊಂದನ್ನೂ ಅಲ್ಲವಾದರೂ ಬದುಕಿನ ಕೆಲವು ಆಪ್ತ ವಿವರಗಳನ್ನಾದರೂ ಒಂದೆಡೆ ದಾಖಲಿಸಬೇಕೆಂಬ ಅನಿಸಿಕೆ ನನ್ನಲ್ಲಿ ಮೂಡಲು ಕಾರಣವಾದ ಘಟನೆಯೊಂದಿದೆ -

ಆಗಾಗ, ನಮ್ಮ ಸಂಸಾರದ ಸರ್ವಸದಸ್ಯರು ವಿರಾಮದಲ್ಲಿ ಒಂದೆಡೆಗೆ ಸೇರಿದಾಗ, ಮಾತು ಎತ್ತೆತ್ತಲೋ ಸುತ್ತಿಕೊಂಡು ಕೊನೆಗೆ ಬಂದು ಸೇರುವುದು ನಮ್ಮ ಗತ ಬದುಕಿನ ಕಡೆಗೆ. ಮಕ್ಕಳು ತಮ್ಮ ಬಾಲ್ಯದ ಕೆಲವು ವರ್ಷಗಳನ್ನು ಭಾರತದಲ್ಲೇ ಕಳೆದಿರುವುದರಿಂದ ಅಲ್ಲಿಯ ನೆನಪುಗಳು, ಮಾತುಗಳು ಅವರಿಗೆ ಬಹಳ ಮುದ ನೀಡುತ್ತವೆ. ಮಗ ಒಮ್ಮೊಮ್ಮೆ ಕೇಳುವುದುಂಟು - ‘‘ಅಮ್ಮ, ನಾನು ಮಾತು ಕಲಿಯತೊಡಗಿದಾಗ, ನಾನಾಡಿದ ಮೊದಲ ಪದ ಯಾವುದು? ಎಂದು?’’ ಈ ಸಹಜ ಪ್ರಶ್ನೆಗೆ ತಡವರಿಸುವಂತಾಗುತ್ತದೆ.

ಹೌದಲ್ಲಾ! ಆ ದಿನ ಚೆನ್ನಾಗಿ ನೆನಪಿದೆ. ಆ ದಿನದ ಬೆರಗು ನಿನ್ನೆ ಮೊನ್ನೆ ಅನುಭವಿಸಿದಂತಿದೆ. ಆದರೆ ಆ ದಿನ ಯಾವುದೆಂದು ಕರಾರುವಾಕ್ಕಾದ ನೆನಪಿಲ್ಲ. ಮಗುವಿನ ಬಾಯಲ್ಲಿ ತೊದಲುತೊದಲಾಗಿ ಹೊರಹೊಮ್ಮಿದ ಆ ಮೊದಲ ನುಡಿಮುತ್ತು ಯಾವುದದು? ಆ ನುಡಿ ಕೇಳಿ ಅನುಭವಿಸಿದ ಪುಳಕ ನೆನಪಿದೆ. ಆದರೆ ಎಂದು? ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ‘‘ಕಂದನು ನುಡಿದ ಮೊದಲನೆ ನುಡಿಯೇ ಅಮ್ಮಾ! ಅಮ್ಮಾ!’’ ಎಂಬ ತತ್ವಕ್ಕೆ ಜೋತು ಬಿದ್ದು ಹೇಳಿಯೇ ಬಿಡುತ್ತೇನೆ. ನಿನ್ನ ಮೊದಲ ಮಾತು ‘‘ಅಮ್ಮಾ’’ ಎಂದಾಗಿತ್ತು. ಈ ಉತ್ತರ ನಿಜವೇ ಇರಬಹುದಾದರೂ ಆ ಬಗ್ಗೆ ದಿನಚರಿಯಲ್ಲಿ ಒಂದೇ ಒಂದು ಸಾಲು ಸಾಕ್ಷಿ ನುಡಿದಿದ್ದರೆ?

ನಾವೇಕೆ ಹೀಗೆ? ರಾಜರುಗಳ ರಾಜ್ಯದಾಹಕ್ಕಾಗಿ ನಡೆದ ಕ್ಷುಲ್ಲಕ ಯುದ್ಧಗಳ ನೆನಪಿಟ್ಟುಕೊಳ್ಳುತ್ತೇವೆ. ಯಾವುದೋ ಗೊತ್ತೇ ಇರದ ದೇಶದಲ್ಲಿ ನಡೆದ ರಕ್ತಪಾತದ ವಿವರಗಳನ್ನೆಲ್ಲಾ ಪರೀಕ್ಷೆಯ ಸಲುವಾಗಿಯಾದರೂ ಓದಿ ಮನದಟ್ಟು ಮಾಡಿಕೊಳ್ಳುತ್ತೇವೆ. ಭೂಮಿಗೇ ಭಾರವೆನ್ನಿಸುವಂತೆ ಬದುಕಿದ ಕ್ರೂರಿಗಳ ಜನನ ವರ್ಷ, ಮರಣ ವರ್ಷಗಳು ಚೆನ್ನಾಗಿ ತಿಳಿದಿದೆ. ನಮ್ಮ ಸ್ವಂತ ಬದುಕಿನ ಸಂಭ್ರಮಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಉದಾಸೀನ ತೋರುತ್ತೇವೆ. ಸರ್ವಾಧಿಕಾರಿಯೊಬ್ಬ ಅಧಿಕಾರ ವಹಿಸಿಕೊಂಡ ದಿನ ತಪ್ಪದೆ ನೆನಪಿಟ್ಟುಕೊಂಡಿದ್ದೇವೆ. ಆದರೆ...ನಮ್ಮದೇ ಬದುಕಿಗೆ ಸಂತೋಷವನ್ನು ತಂದು ಸುರಿದ ಅಸಂಖ್ಯ ಕ್ಷಣಗಳ ನೆನಪೇ ನಮಗಿರುವುದಿಲ್ಲ! ಅತಿ ಅಮೂಲ್ಯವೆನ್ನಿಸುವ ನಮ್ಮ ಖಾಸಗಿ ಸಂಗತಿಗಳು ದಿನಗಳೆದಂತೆ ಕಾಲದ ಕೈಚೀಲದಲ್ಲಿ ಅಡಗಿಕೊಂಡು ಕಣ್ಮರೆಯಾಗಿ ಹೋಗಿರುತ್ತವೆ.

ಈ ವರ್ಷವಾದರೂ ತಪ್ಪದೆ ದಿನಚರಿ ಬರೆಯುತ್ತೇನೆ. ಜೀವನದ ಸಣ್ಣ ಸಣ್ಣ ಖುಷಿಗಳ ಲೆಕ್ಕವನ್ನು ದಿನಚರಿಯ ಪ್ರತಿ ಪುಟಗಳಲ್ಲಿ ಹಿಡಿದಿಡುತ್ತೇನೆ.

ಗುಲಾಬಿ ಗಿಡದಲ್ಲಿ ಮೊದಲ ಹೂವರಳಿದ್ದು, ಮೊದಲ ಮಳೆ, ಮೊದಲ ಹಿಮ ನೆಲಕ್ಕಿಳಿದಾಗ ಇಡೀ ಮನಸ್ಸೇ ಹಿಗ್ಗಿ ಹೂವಾಗಿದ್ದು, ವಾಸಕ್ಕೊಂದು ಬೆಚ್ಚನೆಯ ಗೂಡು ಕಟ್ಟಿಕೊಂಡಾಗಿನ ಪುಲಕ, ಹೊಸ ಕಾರು ಕೊಂಡ ದಿನಾಂಕ, ಯಾವುದೋ ಕರೆಗೆ ಕಾದು ಕೂತಾಗಿನ ತವಕ, ನಿರೀಕ್ಷೆಗಳು ನಿಜವಾಗದ ನಿಟ್ಟುಸಿರು, ಆತ್ಮೀಯರೊಬ್ಬರು ವಿವಾಹ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡ ಶುಭ ಮುಹೂರ್ತ, ಗೆಳತಿಯ ಮಗುವಿಗೊಂದು ಮುದ್ದಾದ ಹೆಸರು ಬಂದ ದಿನ, ನಗೆಯ ಜೊತೆಜೊತೆಗೆ ನೋವಿನಲ್ಲಿ ಅದ್ದಿ ತೆಗೆದಂತಿರುವ ಹಸಿಹಸಿ ಭಾವನೆಗಳೆಲ್ಲವೂ ಅಕ್ಷರ ರೂಪದಲ್ಲಿ ಶಾಶ್ವತವಾಗುಳಿದರೆ ಚೆಂದವಲ್ಲವೇ?

ಈ ವರ್ಷ ನಾನು ನಿರ್ಣಯವಂತೂ ಮಾಡಿದ್ದಾಗಿದೆ. ನಿರ್ಣಯಗಳಿರುವುದೇ ಮುರಿಯುವುದಕ್ಕೆ ಎಂದು ಯಾರಂದರೋ? ಆ ಮಾತು ನಿಜವಾಗದಿರಲಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X