• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೈರಿಯ ಹೊಟ್ಟೆಯಾಳಗೆ ನಾನಾ ಗುಟ್ಟುಗಳು!

By Staff
|

ಒಂದು ವೇಳೆ ಡೈರಿಯನ್ನು ಯಾರಾದರೂ ತೆಗೆದು ನೋಡಿದರೂ, ಅದರಲ್ಲಿ ಏನಿದೆ ಎಂದು ಯಾರಿಗೂ ತಿಳಿಯದಂತೆ ಮಾಡುವ ಉಪಾಯವೂ ನನ್ನಲ್ಲಿತ್ತು. ಯಾಕೆಂದರೆ ನಾನು ಬರೆಯುತ್ತಿದ್ದ ವಿವರಗಳೆಲ್ಲ ಸಂಕೇತಗಳಲ್ಲಿ, ನಿಗೂಢ ಭಾಷೆಯಲ್ಲಿರುತ್ತಿತ್ತು. ಅದೇಕೋ ಡೈರಿ ಬರಹಗಳಿಗೆ ನಾನು ಏಳು ಸುತ್ತಿನ ಕೋಟೆಯಂತಹ ಭಾರೀ ಭದ್ರತೆ ಕಲ್ಪಿಸಿದ್ದೆ!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

venivas@hotmail.com

Diary, for private use onlyಹೊಸ ವರ್ಷ ಅಬ್ಬರದೊಂದಿಗೆ ಕಾಲಿಟ್ಟಿದ್ದಾಗಿದೆ. ಹೊಸ ವರ್ಷದಲ್ಲಿ ಏನೇನು ಮಾಡಬೇಕೆಂದು ನಿರ್ಣಯಗಳನ್ನು ಕೈಗೊಳ್ಳುವುದೊಂದು ರೂಢಿ. ಅದರಲ್ಲಿ ಎಷ್ಟು ಜನ ಯಶಸ್ವಿಯಾಗುತ್ತಾರೋ ಬಿಡುತ್ತಾರೋ ಅದು ಬೇರೆಯ ವಿಷಯ. ನಾನೂ ಕೂಡ ಪ್ರತಿವರ್ಷವೂ ತಪ್ಪದೆ ಒಂದು ನಿರ್ಣಯವನ್ನು ಕೈಗೊಳ್ಳುತ್ತೇನೆ. ಅಂತಹ ಮಹತ್ವದ್ದೇನಲ್ಲ. ಈ ವರ್ಷವಾದರೂ ತಪ್ಪದೆ ದಿನಚರಿಯನ್ನು ಬರೆದಿಡಬೇಕೆಂದುಕೊಳ್ಳುವುದೇ ಆ ನಿರ್ಧಾರ. ಆದರೆ ಇದನ್ನು ಒಂದು ವರ್ಷವೂ ನಾನು ಪೂರ್ತಿಯಾಗಿ ಪಾಲಿಸಿಲ್ಲವೆನ್ನುವುದೇ ವಿಶೇಷ.

ಹೊಸ ವರ್ಷದ ಮೊದಲ ದಿನವೇ ದಪ್ಪ ರಟ್ಟಿರುವ ಪುಸ್ತಕವನ್ನು ತೆಗೆದುಕೊಂಡು, ಮೊದಲ ಪುಟದಲ್ಲಿ ಹೊಸವರ್ಷದ ಇಸವಿಯನ್ನು ದೊಡ್ಡದಾಗಿ ಬರೆದು ಪ್ರಾರಂಭವನ್ನಂತೂ ಮಾಡುತ್ತೇನೆ. ಮೊದಲ ಕೆಲವು ವಾರಗಳಲ್ಲಿ ವಿವರವಾಗಿ ಅಲ್ಲದಿದ್ದರೂ, ಒಂದು - ಎರಡು ಸಾಲುಗಳ ಬರಹಗಳಿರುತ್ತವೆ. ನಂತರದ ಪುಟಗಳಲ್ಲಿ, ಆಗಸದಲ್ಲಿ ಚುಕ್ಕಿಗಳು ಚೆಲ್ಲಾಡಿರುವಂತೆ ಅಲ್ಲೊಂದು ಇಲ್ಲೊಂದು ಎಂಟ್ರಿಗಳು. ಹೊಸ ವರ್ಷ ನಿಧಾನವಾಗಿ ಹಳತಾಗುತ್ತಾ ನಡೆದಂತೆ ...ಡೈರಿ ಬರೆದಿಡುವ ಉತ್ಸಾಹವೂ ಮುಸುಕಾಗಿ ಮುಂದಿನ ಪುಟಗಳೆಲ್ಲ ಖಾಲಿ! ಖಾಲಿ! ಮೇರಾ ಜೀವನ್‌ ಕೋರಾ ಕಾಗಜ್‌, ಕೋರಾ ಹಿ ರಹ್‌ ಗಯಾ.. ಎಂಬ ಸಾಲಿನಂತೆ ನನ್ನ ಜೀವನದಲ್ಲಿ ಆಮೇಲೆ ಯಾವ ಘಟನೆಗಳು ನಡೆದೇ ಇಲ್ಲ ಎಂದಲ್ಲ. ಆದರೆ ಅವುಗಳಿಗೆ ದಿನಚರಿಯಲ್ಲಿ ಸೇರ್ಪಡೆಯಾಗುವ ಅದೃಷ್ಟ ಇರಲಿಲ್ಲ ಅಷ್ಟೆ.

ದಿನಚರಿ ಬರೆಯಲೆಂದೇ ಅಂಗಡಿಗಳಲ್ಲಿ ಸಿಗುವ ಪುಸ್ತಕವನ್ನು ನಾನು ಉಪಯೋಗಿಸುವುದಿಲ್ಲ. ಚಿಕ್ಕಂದಿನಿಂದ ಪ್ರಾರಂಭವಾದ ಈ ಅಭ್ಯಾಸಕ್ಕೂ ಒಂದು ಕಾರಣವಿದೆ. ಆ ಪುಸ್ತಕ ಅಪ್ಪಿತಪ್ಪಿ ಯಾರ ಕಣ್ಣಿಗೆ ಬಿದ್ದರೂ, ಅದೊಂದು ಡೈರಿ ಎಂಬುದು ತಕ್ಷಣ ಗೊತ್ತಾಗಬಾರದು ಎಂಬುದೇ ಆ ಉದ್ದೇಶ. ಅವಿಭಕ್ತ ಕುಟುಂಬಗಳಲ್ಲಿ ಬೆಳೆದ ನಮಗೆ ಈಗಿನ ಮಕ್ಕಳಿಗೆ ಸಿಗುವ ಪ್ರತ್ಯೇಕ ಕೋಣೆ ಕನಸಿನ ಮಾತಾಗಿತ್ತು. ಡೈರಿ ಯಾರ ಕೈಗಾದರೂ ಸಿಕ್ಕುಬಿದ್ದರೆ, ಅವರೂ ಓದಿ, ಗುಂಪಿನ ನಡುವೆ ಅದನ್ನು ನಗೆಪಾಟಲು ಮಾಡುವ ಭಯವಿದ್ದೇ ಇತ್ತು. ಹಾಗಾಗಿ ಆಗ ನಾನು ಬರೆಯುತ್ತಿದ್ದುದು ಶಾಲೆಯ ನೋಟ್‌ಬುಕ್ಕಿನಲ್ಲಿ. ತೆರೆದು ನೋಡದ ಹೊರತು ಅದೊಂದು ಡೈರಿ ಎಂಬ ಸುಳಿವು ಯಾರಿಗೂ ಸಿಗುತ್ತಿರಲಿಲ್ಲ.

ಒಂದು ವೇಳೆ ಯಾರಾದರೂ ತೆಗೆದು ನೋಡಿದರೂ, ಅದರಲ್ಲಿ ಏನಿದೆ ಎಂದು ಯಾರಿಗೂ ತಿಳಿಯದಂತೆ ಮಾಡುವ ಇನ್ನೊಂದು ಉಪಾಯವೂ ನನ್ನಲ್ಲಿತ್ತು. ಯಾಕೆಂದರೆ ನಾನು ಬರೆಯುತ್ತಿದ್ದ ವಿವರಗಳೆಲ್ಲ ಸಂಕೇತಗಳಲ್ಲಿ, ನಿಗೂಢ ಭಾಷೆಯಲ್ಲಿರುತ್ತಿತ್ತು. ಅದರಲ್ಲಿ ಏನೇನೂ ರಹಸ್ಯ ಇರುತ್ತಿರಲಿಲ್ಲವಾದರೂ, ಅದೇಕೋ ಏನೋ ಡೈರಿ ಬರಹಗಳಿಗೆ ನಾನು ಏಳು ಸುತ್ತಿನ ಕೋಟೆಯಂತಹ ಭಾರೀ ಭದ್ರತೆ ಕಲ್ಪಿಸಿದ್ದೆ!

ಬೇರೆಯವರಿಗೆ ತಿಳಿಯಬಾರದೆಂದು ಈ ರೀತಿ ಗುಪ್ತ ಭಾಷೆಯಲ್ಲಿ ಬರೆಯಲ್ಪಟ್ಟ ವಿವರಗಳು ಅದೆಷ್ಟು ಕಬ್ಬಿಣದ ಕಡಲೆಯಾಗಿರುತ್ತಿದ್ದವೆಂದರೆ, ಕೆಲವು ದಿನಗಳ ನಂತರ ಅದನ್ನು ಓದಲು ಪ್ರಯತ್ನಿಸಿದಾಗ ಅದೇನೆಂದು ನನಗೇ ಅರ್ಥವಾಗುತ್ತಿರಲಿಲ್ಲ. ಬರೆದಿದ್ದ ಸಂದರ್ಭವೇ ಮರೆತುಹೋಗಿರುತ್ತಿತ್ತು. ಅರ್ಥವಾಗುವಂತಿದ್ದ ವಿವರಗಳು ತೀರಾ ಅಮುಖ್ಯವಾಗಿರುತ್ತಿದ್ದವು. ಯಾರನ್ನೋ ದೂರುವಂತಹ, ಇನ್ನಾರನ್ನೋ ಆರೋಪಿಸುವಂತಹ, ಆ ಹೊತ್ತಿನ ಅಸಮಾಧಾನವನ್ನಷ್ಟೇ ಸೂಚಿಸುವಂತಿರುತ್ತಿದ್ದ ಅರೆಬೆಂದ ಬರವಣಿಗೆ. ಅವುಗಳನ್ನು ಮುಂದೆ ಓದಬೇಕೆಂದು ನನಗೆ ಅನ್ನಿಸುತ್ತಿರಲಿಲ್ಲ. ಹಾಗಾಗಿ ನಾನೇ ಅತ್ಯಂತ ಮುತುವರ್ಜಿಯಿಂದ ಬರೆದಿಟ್ಟ ಪುಟಗಳನ್ನೆಲ್ಲಾ ನಾನೇ ಬುಡಸಮೇತ ಕಿತ್ತು ಹರಿದು ಹಾಕಿಬಿಡುತ್ತಿದ್ದೆ. ಆದರೂ ಪ್ರತಿವರ್ಷ ಬರೆಯುವ, ಹರಿಯುವ ಪರಿಪಾಠವಂತೂ ನಡೆದೇ ಇರುತ್ತಿತ್ತು.

ದಿನಚರಿ ಬರೆಯುವುದು ನಿಜವಾಗಿ ಅಗತ್ಯವೇ ಎಂಬ ಪ್ರಶ್ನೆ ನನ್ನನ್ನು ಅದೆಷ್ಟೋ ಬಾರಿ ಕಾಡಿದೆ. ಮುಂದೆಂದೋ ಆತ್ಮಚರಿತ್ರೆ ಬರೆಯುವ ಹಂಬಲವಿದ್ದವರಿಗೆ ದಿನಚರಿ ಬರೆಯುವುದು ನಿಜಕ್ಕೂ ಪ್ರಯೋಜನಕಾರಿ. ಕುವೆಂಪುರವರ ಆತ್ಮಕಥನ ‘‘ನೆನಪಿನ ದೋಣಿ’’ ಅವರ ದಿನಚರಿಯ ಪುಟಗಳಿಂದಾಗಿ ವಿಷಯ ಸಮೃದ್ಧವಾಗಿದೆ. ದಿನಚರಿ ಬರೆಯುವ ಅಭ್ಯಾಸವಿರದ ಲೇಖಕರು ತಮ್ಮ ಜೀವನಗಾಥೆಯನ್ನು ಕಾಗದದ ಮೇಲೆ ಭಟ್ಟಿ ಇಳಿಸುವಾಗ ನಿಖರತೆ ಸಾಧಿಸುವಲ್ಲಿ ಸೋಲುತ್ತಾರೆ. ಕೆಲವು ಕಡೆ ನೆನಪಿನ ಆಧಾರಗಳಿಂದಷ್ಟೇ ವಿವರಗಳನ್ನು ದಾಖಲಿಸುತ್ತಾರೆ. ಈ ರೀತಿ ಬರೆಯುವಾಗ ತಪ್ಪುಗಳಾಗುವ ಸಂಭವ ಇದ್ದೇ ಇರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more