• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೇ ದಿನಕರ, ಶುಭಕರ, ಧರೆಗೆ ಬಾ!

By Staff
|
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

ಜಪ ಕುಸುಮ ಸಂಕಾಶಮ್‌

ಕಾಶ್ಯಪೇಯಮ್‌ ಮಹದ್ಯುತಿಮ್‌

ತಮೋಘ್ನಮ್‌ ಸರ್ವ ಪಾಪಘ್ನಮ್‌

ಪ್ರಣತೋಸ್ಮಿ ದಿವಾಕರಮ್‌

ಲೋಕವನ್ನು ಮುತ್ತಿದ ಅಂಧಕಾರವನ್ನು ತನ್ನ ಕಿರಣಗಳಿಂದ ಓಡಿಸುವ ಸೂರ್ಯ ನಮ್ಮ ಕಣ್ಣಿಗೆ ಕಾಣಿಸುವ ದೇವರು! ಪುಣ್ಯನದಿ, ಸರೋವರ ತೀರಗಳಲ್ಲಿ ಆಸ್ತಿಕರು ಸೂರ್ಯೋದಯ, ಸೂರ್ಯಾಸ್ತಗಳಲ್ಲಿ ತಮ್ಮೆರಡು ಕೈಗಳಿಂದ ಅರ್ಘ್ಯ ಪ್ರಧಾನ ಮಾಡುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುವಂತಹುದು. ಇದು ನೋಡುವ ಕಣ್ಣುಗಳಿಗಷ್ಟೇ ಅಲ್ಲದೆ, ಕ್ಯಾಮೆರಾ ಕಣ್ಣಿಗೂ ಪ್ರೀತಿಯ ದೃಶ್ಯವೇ.

‘ಇಲ್ಲಿ ಚೆಲ್ಲಿದ ನೀರು ಅಲ್ಲಿ ಹೋಗಿ ತಲುಪೀತೇ?’ ಎಂಬ ಪ್ರಶ್ನೆ ಅನೇಕ ಚಿಂತಕರನ್ನು ಕಾಡಿದ್ದಿರಲೂಬಹುದು. ಆದರೆ ಇಂತಹ ಗಂಭೀರ ತರ್ಕಗಳ ಹಂಗಿಲ್ಲದ ಸಾಮಾನ್ಯ ಜನರಿಗೆ, ಅದು ಭೂಮಿಯನ್ನು ಬಿಡದೆ ಪೊರೆಯುತ್ತಿರುವ ಆ ಪ್ರತ್ಯಕ್ಷ ದೈವಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸುವ ಒಂದು ವಿಧಾನ ಮಾತ್ರ! ‘‘ಈ ನೆಲದ ಜಲವ ಸವಿದು ರವಿ ಕರುಣೆ ಮರೆಯಬೇಡ’’ ಎಂದಿರುವ ಕವಿಯ ಇಂಗಿತ ಕೂಡ ಇದೇ ಇರಬಹುದು.

ಸೂರ್ಯ ಈ ಭುವಿಯ ಕಣ್ಣು. ಚೈತನ್ಯದ ಚಿಲುಮೆ. ನಮ್ಮ ಪುರಾಣಗಳ ಪ್ರಕಾರ - ಸಪ್ತಾಶ್ವಗಳಿಂದ ಕೂಡಿದ ತನ್ನ ಬಂಗಾರದ ರಥದಲ್ಲಿ ಕುಳಿತು, ಅಂತರಿಕ್ಷದಲ್ಲಿ ಸಂಚರಿಸುವ ತೇಜಸ್ವೀ ಪುರುಷ! ಅವನ ಕೆಲಸಕ್ಕೆ ಎಂದಿಗೂ ವಿರಾಮವೆಂಬುದಿಲ್ಲ. ಎಂದು ಸೂರ್ಯ ಆಯಾಸವೆಂದು ದಣಿವಾರಿಸಿಕೊಳ್ಳಲು ಒಂದು ಕಡೆ ಕಾಲುಚಾಚಿ ಕುಳಿತುಕೊಳ್ಳುವನೋ ಅಂದು ಈ ಭೂಮಿಯ ಕಥೆ ಮುಗಿದಂತೆ. ಸೂರ್ಯ ಹುಟ್ಟಿದ ಎಷ್ಟೋ ಹೊತ್ತಿನ ನಂತರ ಕಣ್ತೆರೆಯುವ ಬಹುಪಾಲು ಜನರಿಗೆ ಸೂರ್ಯೋದಯದ ಮಹತ್ವ ಅರಿವಾಗುವುದು ಕಷ್ಟ. ಹಲ್ಲು ಕಟಗುಟ್ಟಿಸುವ ಚಳಿಯಲ್ಲಿ ಸರಕಾರೀ ಆಸ್ಪತ್ರೆಯ ಮುಂದಿನ ಕಲ್ಲು ಬೆಂಚಿನ ಮೇಲೆ, ಯಾವ ಘಳಿಗೆಯಲ್ಲಿ ಏನು ಸುದ್ದಿ ಹೊರಬರುವುದೋ ಎಂದು ಆತಂಕದಿಂದ ಕಾಯುತ್ತಾ, ದೇವರೇ, ಅಂಧಕಾರ ತುಂಬಿದ ಈ ಇರುಳು ಮುಂದೆ ಸರಿಯುತ್ತಲೇ ಇಲ್ಲವೇ? ಎಂದು ಕ್ಷಣಕ್ಕೊಮ್ಮೆ ಕೈಗಡಿಯಾರ ನೋಡಿಕೊಳ್ಳುತ್ತಾ ಕುಳಿತವರಿಗೆ ಮಾತ್ರ, ಭೂಮಿಯನ್ನು ಚುಂಬಿಸುವ ಮೊತ್ತ ಮೊದಲ ಸೂರ್ಯ ಕಿರಣ ನೀಡುವ ನೆಮ್ಮದಿ, ಭರವಸೆಗಳು ಅರ್ಥವಾಗುವುದು ಸಾಧ್ಯ!

ಸೂರ್ಯ ಈ ಭೂಮಿಯನ್ನು ಸುತ್ತುತ್ತಿದ್ದಾನೆಯೇ ಅಥವಾ ಭೂಮಿಯೇ ಸೂರ್ಯನನ್ನು ಸುತ್ತುತ್ತಿದೆಯೇ ಎಂಬ ಜಿಜ್ಞಾಸೆ ಒಂದು ಕಾಲದಲ್ಲಿತ್ತು, ಈಗಿಲ್ಲ. ‘‘ಆ ಸೂರ್ಯನ್ನ ಸುತ್ತೋದು ಭೂಮಿ ಕಣೋ’’ ಎಂಬುದು ಸಣ್ಣ ಮಗುವಿಗೂ ತಿಳಿದುಹೋಗಿರುವ ಸತ್ಯ. ಈಗ ತಾನೇ ಸಂಕ್ರಾಂತಿ ಮುಗಿದಿದೆ. ಪರಿವರ್ತನೆಯೊಂದೇ ಇಲ್ಲಿ ನಿತ್ಯ ಸತ್ಯ, ಚಲನೆಯೊಂದೇ ಬದುಕಿನ ನಿಯಮ ಎನ್ನುವ ಮಾತಿಗೆ ಪುರಾವೆ ಒದಗಿಸುವವನಂತೆ ಸೂರ್ಯ ಕೂಡ ತನ್ನ ಪಥವನ್ನು ಬದಲಿಸಿದ್ದಾನೆ. ಪ್ರತಿದಿನವೂ ನಮಗಾಗಿ ಹೊಸ ಬೆಳಕಿನ, ಹೊಸ ಗಾಳಿಯ, ಹೊಸ ಬಾಳಿನ ಭರವಸೆ ಹೊತ್ತು ತರುವ ದಿವಾಕರ ನಮ್ಮ ಇಂದಿನ ಅತಿಥಿ! ಸೂರ್ಯಾವಲೋಕನದ ಜೊತೆಗೆ ಸೂರ್ಯಾಭಿವಂದನ! ರವಿ ಕರುಣೆಯನ್ನು ನೆನೆಯುತ್ತಲೇ ಕನ್ನಡ ಕಾವ್ಯಾಗಸದಲ್ಲಿ ನಡೆದಿರುವ ರವಿಯ ಸ್ಮರಣೆ!

ಕವಿಗಳಿಗೆ ಪ್ರಕೃತಿ ಸೌಂದರ್ಯವನ್ನು ವರ್ಣಿಸುವ, ಆ ಅಲೌಕಿನ ಚೆಲುವನ್ನು ತಮ್ಮ ಕಾವ್ಯದಲ್ಲಿ ಕಡೆದಿಡುವ ಹಂಬಲ ಇಂದು ನಿನ್ನೆಯದಲ್ಲ. ಒಂದಾನೊಂದು ಕಾಲದಲ್ಲಿ, ಕೆಂಪನೆಯ ಕಿತ್ತಳೆ ಹಣ್ಣಿನಂತೆ ತೋರುತ್ತಿದ್ದ ಸೂರ್ಯನನ್ನು ತಿನ್ನಲು ಗಗನಕ್ಕೇ ಹಾರಿದ್ದನಂತೆ ನಮ್ಮ ಬಾಲ ಹನುಮ! ಅಂದ ಮೇಲೆ ಅದೇ ಸೂರ್ಯ ನಮ್ಮ ಕವಿಗಳ ಕಲ್ಪನೆಗೂ ಆಹಾರವಾಗಿರುವುದರಲ್ಲಿ ಅಚ್ಚರಿಯೇನಿದೆ?

ರಸಋಷಿ ಕುವೆಂಪು ಎಲ್ಲರೂ ಬಲ್ಲಂತೆ ನಿಸರ್ಗದ ಕವಿ. ಅದರಲ್ಲೂ ಸೂರ್ಯ, ಸೂರ್ಯೋದಯ, ಸೂರ್ಯಾಸ್ತಗಳನ್ನು ವಿಧವಿಧವಾಗಿ ಬಣ್ಣಿಸಿ ಈ ಕವಿ ಬರೆದಂತೆ ಮತ್ತಾರೂ ಬರೆದಿರಲಾರರು. ಕುವೆಂಪು ಅವರಿಗೆ ಕತ್ತಲ ಬಸಿರ ಸೀಳಿ ಉದಯಿಸುವ ರವಿಯ ಮೇಲೆ ಬಹಳ ಮಮತೆ ಇದ್ದಿರಬೇಕು. ಅವರು ತಮ್ಮ ಮೈಸೂರಿನ ಮನೆಯನ್ನು ‘‘ಉದಯರವಿ’’ ಎಂದು ಹೆಸರಿಸಿರುವುದೇ ಅದಕ್ಕೆ ಸಾಕ್ಷಿ! ಕವಿಯ ಪಾಲಿಗೆ ಸೂರ್ಯ ಬರೀ ಬೆಳಕನ್ನಷ್ಟೇ ನೀಡಬಲ್ಲ ಒಂದು ಸಾಮಾನ್ಯ ಆಕಾಶಕಾಯವಲ್ಲ. ಈ ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆಯನ್ನು ಹರಿಸಲು ದಯಮಾಡಿಸುವ ಮಾಯಗಾರ! ಒಮ್ಮೆ, ‘‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣು’’ ಎಂದು ಆಧ್ಯಾತ್ಮದ ಆಳಕ್ಕಿಳಿಯುವ ಕವಿ ಮತ್ತೊಮ್ಮೆ -

ಓಡು ಹೊರಗೆ ಓಡು ನೋಡು

ಬಂದ ನೋಡು ದಿನಮಣಿ!

ಹಚ್ಚ ಹಸಿರು ಬಯಲ ಮೇಲೆ

ಮಿರುಗುತಿಹವು ಹಿಮಮಣಿ!

ಎಂದು ಜಗತ್ತಿಗೆ ಬೆಳಕು ತರುವ ಬಾಲಕನನ್ನು ಕಂಡು ತಾವೂ ಮಗುವಿನಂತೆ ಆಡಿ ನಲಿದಿದ್ದಾರೆ. ಹಾಡಿ ಕುಣಿದಿದ್ದಾರೆ.

ಬೇಂದ್ರೆಯವರ ‘‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ’’ ಕವಿತೆಯಂತೂ ಬೆಳಗಿನ ಜಾವದ ಸಮಸ್ತ ಸೊಬಗನ್ನು ಪದಗಳ ರೂಪದಲ್ಲಿ ಶಾಶ್ವತವಾಗಿ ಸೆರೆ ಹಿಡಿದುಬಿಟ್ಟಿದೆ! ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ರಮ್ಯ ತಾಣದಲ್ಲಿ ಚಿತ್ರೀಕರಣಗೊಂಡು, ಬೆಳ್ಳಿಮೋಡ ಚಿತ್ರದಲ್ಲಿ ಬಳಕೆಯಾಗಿರುವ ಈ ಗೀತೆಯೊಂದು ಅದ್ಭುತ ದೃಶ್ಯ ಕಾವ್ಯವಾಗಿ ಅರಳಿದೆ! ಈ ಹಾಡನ್ನು ಎಲ್ಲಿ,ಯಾವಾಗ ಕೇಳಿದರೂ ಮುಂಜಾವಿನ ಶುಭ್ರ, ಶಾಂತ ಪರಿಸರವೊಂದು ಕಣ್ಮುಂದೆ ಬಂದು ನಿಲ್ಲುವುದು ಖಚಿತ. ಇಲ್ಲೂ ಅಷ್ಟೇ, ‘‘ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದವನು’’ ‘‘ದೇವ’’ನೆನ್ನುವುದರಲ್ಲಿ ಕವಿಗೆ ಯಾವುದೇ ಅನುಮಾನವಿಲ್ಲ!

ಈ ಕವಿತೆಯಲ್ಲಿ ಕವಿ ಶಿವರುದ್ರಪ್ಪನವರಿಗೆ ಬಾಗಿಲಿನ ಹೊರಗೆ ಬಂದು ನಿಂತಿರುವವರು ಯಾರೆಂದು ಚೆನ್ನಾಗಿ ತಿಳಿದಿದೆ. ಆದರೂ ಬಂದವರನ್ನು ನೀವು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ. ಬಾಗಿಲ ಮರೆಯಲ್ಲಿ ಅಡಗಿ ಕುಳಿತಿರುವ ಮಗುವನ್ನು ತಾನು ಕಂಡೇ ಇಲ್ಲವೆನ್ನುವಂತೆ ನಟನೆ ಮಾಡುತ್ತಿರುವ ತಾಯಿಯಂತಿದೆ ಅವರ ವರ್ತನೆ. ಕವಿ ಮತ್ತು ರವಿಯ ನಡುವೆ ನಡೆದಿರುವ ಈ ಕಣ್ಣುಮುಚ್ಚಾಲೆ ಆಟ ಒಂದು ಸುಂದರ ಕವಿತೆಯೊಂದನ್ನು ನಮಗೆ ಉಡುಗೊರೆಯಾಗಿ ತಂದಿದೆ.

ಯಾರವರು ಯಾರವರು ಯಾರು?

ಬಾಗಿಲಲಿ ಬಂದವರು ನಿಂದವರು ಯಾರು?

ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು?

ತುಂಬಿದ್ದ ಕತ್ತಲನು ಕಳೆದವರು ಯಾರು?

ಬಾಳ ನಂದನದಲ್ಲಿ ಮಂದಾರ ಗಂಧವನು

ತಂದು ತುಂಬಿದ ಕುಸುಮ ಸುಂದರನು ಯಾರು?

ಸೂರ್ಯನಂತೆ ಸಮತಾವಾದಿ, ಸಮಾನತಾವಾದಿ ಇನ್ನೊಬ್ಬರಿರಲಿಕ್ಕಿಲ್ಲ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎಂದು ಸವಾಲೆಸೆಯುವ ಮನೋಭಾವ ಅವನದಲ್ಲ. ನೀನಿರುವಲ್ಲಿಗೆ ನಾನೇ ನಡೆದು ಬರಬಲ್ಲೆ ಎಂಬ ವಿನಯವಂತನೀತ. ಧನಿಕರ ಬಂಗಲೆಗಳ ತಾರಸಿಯನ್ನು ತನ್ನ ಕಿರಣಗಳಿಂದ ನೇವರಿಸುವ ಸೂರ್ಯ ಅಷ್ಟೇ ಅಕ್ಕರೆಯಿಂದ ಬಡವರ ಗುಡಿಸಲುಗಳ ಒಳಗೂ ತೂರಿ ಬರುತ್ತಾನೆ. ಸಿರಿ ಸಂಪಿಗೆಗೂ, ಬಡ ನುಗ್ಗೇಮರಕ್ಕೂ ಸಮನಾದ ಸ್ನೇಹಸಿಂಚನ ಅವನದು. ಗಗನಚುಂಬಿಯಾಗಿರುವ ಗಿರಿಶೃಂಗಗಳಲ್ಲಿ ಮನೆಮಾಡಿಕೊಂಡಿರುವ ಈ ದಿವ್ಯಾಂಬರ ಸಂಚಾರಿ, ಮಣ್ಣ ಧೂಳಿನಲ್ಲಿ ಕಣ್ಣೀರಿಡುತ್ತಿರುವವರ ಸಹಚಾರಿಯೂ ಹೌದು. ಪತಿತಪಾವನರೆಂಬ ಭೇದಭಾವವಿಲ್ಲದೆ ಮನೆಮನೆಯ ಬಾಗಿಲುಗಳ ಮುಂದೆಯೂ ಬೆಳಕಿನ ರಂಗವಲ್ಲಿ ಬಿಡಿಸುವ ಸಹೃದಯಿ ಸೂರ್ಯ, ಕವಿ ಶಿವರುದ್ರಪ್ಪನವರದೇ ಮತ್ತೊಂದು ಕವಿತೆಯಲ್ಲಿ ಹೀಗೆ ಮೂಡಿಬರುತ್ತಾನೆ -

ಬಾಂದಳ ಚುಂಬಿತ ಶುಭ್ರ ಹಿಮಾವೃತ

ತುಂಗ ಶೃಂಗದಲಿ ಗೃಹವಾಸಿ

ದೀನ ಅನಾಥರ ದು:ಖಿ ದರಿದ್ರರ

ಮುರುಕು ಗುಡಿಸಲಲಿ ಉಪವಾಸಿ!

ಈ ಸೂರ್ಯನಿಗೆ ನಮ್ಮ ಭೂಮಿಯ ಜೊತೆಗೆ ಅನಾದಿಕಾಲದಿಂದ ನಡೆದು ಬಂದಿರುವ ಪ್ರೇಮ ವ್ಯವಹಾರವಿದೆ. ಮದುವೆಯ ರಗಳೆಗೆ ಸಿಲುಕದೆ ಸಾಗಿ ಬಂದಿರುವ ಅನಂತ ಪ್ರಣಯ ಅವರದು. ಬಿ. ಆರ್‌. ಲಕ್ಷಣರಾವ್‌ ಅವರ ಕವಿತೆಯೊಂದರಲ್ಲಿ ಇಳೆ ಮತ್ತು ರವಿಯ ಮಧುರ ಮಿಲನದ ಬಗೆಗೊಂದು ಮೋಹಕವಾದ ವರ್ಣನೆ ಇದೆ. ತನ್ನ ಪ್ರಿಯತಮನ ಆಗಮನಕ್ಕಾಗಿ ಕಾದಿರುವ ಪ್ರೇಯಸಿಯ ಸಡಗರ, ಕಾತುರಗಳನ್ನು ಸೊಗಸಾಗಿ ಬಣ್ಣಿಸುತ್ತಿದೆ ಕವಿತೆ. ಹಸಿರು ಸೀರೆಗೊಪ್ಪುವ ಹೂ ಕುಬುಸ, ಇಬ್ಬನಿಯ ಮಾಲೆ ತೊಟ್ಟು ತನ್ನ ಇನಿಯನನ್ನು ಮೆಚ್ಚಿಸಲು ಕಾದು ನಿಂತಿದ್ದಾಳೆ ಭೂರಮಣಿ. ಅವಳ ನಿರೀಕ್ಷೆ ವ್ಯರ್ಥವಾಗಲಿಲ್ಲ. ಪ್ರಿಯೆಯನ್ನು ಕಾಣಲು ಸೂರ್ಯ ಬಾನಿನ ಅಂಚಿಂದ ಬಂದೇ ಬಿಟ್ಟ!

ಕಂಡೊಡನೆ ನೇಸರನ ಕೆಂಪಾದವು ಕೆನ್ನೆ

ಪುಲಕಿಸಿ ನಸು ಬಿಸಿಯೇರಿತು ಒಡಲು

ಅವನು ಸೋಕಿದೊಡನೆ

ನಾಚಿಕೆಯ ಮಂಜುತೆರೆ ಸರಿಸುತ ಪ್ರಿಯತಮನು

ಇಳೆಯ ಚುಂಬಿಸಿದನು!

‘ಚೆಲುವೆ ಯಾರೋ ನನ್ನ ತಾಯಿಯಂತೆ’’ ಕವಿತೆಯಲ್ಲಿ, ಕವಿ ಲಕ್ಷ್ಮೀನಾರಾಯಣ ಭಟ್ಟರು ನೇಯ್ದಿರುವ ಕಲ್ಪನೆಯಂತೂ ಮತ್ತೂ ಮನಮೋಹಕ! ಈ ಕವಿತೆಯಲ್ಲಿ ಉದಯರವಿ ಭೂತಾಯಿಯ ಹಣೆಗಿಟ್ಟ ಭಾಗ್ಯಬಿಂಬವಾಗಿದ್ದಾನೆ. ಕೆಂಪಗೆ, ಗುಂಡಗಿರುವ ಸೂರ್ಯ ಭೂದೇವಿಯ ಹಣೆಯಲ್ಲಿ ಕುಂಕುಮದ ಬೊಟ್ಟಿನಂತೆ ಕಾಣಿಸುತ್ತಿದ್ದಾನೆ ಎಂಬ ಉಪಮೆ ಅದೆಷ್ಟು ಸಮಂಜಸವೆನಿಸುತ್ತದೆ ಅಲ್ಲವೇ? ‘‘ಬಾ ಬಾ ಓ ಬೆಳಕೇ ಕರುಣಿಸಿ ಈ ನೆಲಕೆ’’ ಎಂಬ ಭಟ್ಟರದೇ ಇನ್ನೊಂದು ಕವಿತೆಯಲ್ಲಿ, ಸೂರ್ಯ ವಿಶ್ವದೆದೆಯ ಮೇಲೆ ಮೆರೆಯುತ್ತಿರುವ ಪುಟ್ಟ ಪದಕ! ಬಾಂದಳದ ನೊಸಲಿನಲ್ಲಿ ವಿರಾಜಿಸುವ ತಿಲಕ!

ವಿಶ್ವದೆದೆಯ ಪದಕವೆ

ಬಾಂದಳದ ತಿಲಕವೆ

ನಿನ್ನೊಳಗಿರುವ ಸತ್ಯ ತೋರು

ಬಂಗಾರದ ಫಲಕವೇ!

ವಿಜ್ಞಾನ ಸೃಷ್ಟಿಯ ರಹಸ್ಯಗಳನ್ನೆಲ್ಲ ಒಂದೊಂದಾಗಿ ಬಿಡಿಸುತ್ತಾ ಹೋಗುತ್ತಿದೆ. ಆದರೂ ಹಲವಾರು ಸಂಗತಿಗಳನ್ನು ವಿವರಿಸಲು ಅದಕ್ಕೂ ಸಾಧ್ಯವಾಗಿಲ್ಲ. ಆ ಬಗ್ಗೆ ಪ್ರಯತ್ನಗಳಂತೂ ನಿಲ್ಲದೆ ನಡೆದೇ ಇವೆ. ಎಲ್ಲಿ ವಿಜ್ಞಾನ ಸೋತು ಕೈಚೆಲ್ಲುತ್ತದೋ, ಅಲ್ಲಿಂದ ತತ್ವಜ್ಞಾನದ ಮೊದಲ ಮೆಟ್ಟಿಲು ಪ್ರಾರಂಭವಾಗುತ್ತದಂತೆ. ಬೆಳಗಿನ ಬಿಸಿಲು, ಮುಂಜಾವದ ಇಬ್ಬನಿ, ಅಚ್ಚ ಬಿಳುಪಿನ ಪುಟ್ಟ ಹೂವು, ಕತ್ತಲ ಮೊಗ್ಗೊಡೆದು ಬರುವ ಹಗಲು, ಅದನ್ನು ತಳ್ಳಿಕೊಂಡೇ ಬರುವ ಇರುಳು, ಯಾರದೋ ನಿಯಂತ್ರಣಕ್ಕೆ ಒಳಪಟ್ಟಂತೆ ತನ್ನಿಂದತಾನೇ ಬದಲಾಗುವ ಋತುಗಳು, ಸುರಿಯುವ ಮಳೆ, ಕಡಲಿನತ್ತ ಗುರಿ ತಪ್ಪದೆ ಹರಿಯುವ ಹೊಳೆ....ಇವೆಲ್ಲವುಗಳ ಹಿಂದಿರುವ ಯಾವುದೋ ಒಂದು ಅಗೋಚರ ಹಸ್ತ ಯಾರದ್ದಿರಬಹುದು?

ಕೋಟ್ಯಾನುಕೋಟಿ ವರ್ಷಗಳಿಂದ ಬೆಳಗುತ್ತಿದ್ದು, ಈಗಲೂ ಇರುವ, ನಮ್ಮ ನಂತರವೂ ಇರುವ ತೇಜೋಮಯ ಸೂರ್ಯನ ಮುಂದೆ ನಮ್ಮ ಬದುಕು ಅದೆಷ್ಟು ಹ್ರಸ್ವ! ನಾವೆಷ್ಟು ಅಲ್ಪಾಯುಷಿಗಳು!! ಯುಗಯುಗಾಂತರಗಳಾಗಿ ಉರುಳುತ್ತಿರುವ ಕಾಲಚಕ್ರದ ಯಾವುದೋ ಒಂದು ಹಂತದಲ್ಲಿ, ಸಣ್ಣಗೆ ಬಂದು ಮರೆಯಾಗಿ ಹೋಗುವ ನಮ್ಮೆಲ್ಲರ ಮದ, ಮತ್ಸರ, ಅಹಂಕಾರಗಳಿಗೆ ಕಿಂಚಿತ್ತಾದರೂ ಅರ್ಥವಿದ್ದೀತೇ?

ಪ್ರೇಮ ಚಂದ್ರಮ ಕೈಗೆ ಸಿಗುವನೇ?

ಗ್ರಹಣ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more