ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದಂಥ ನಾಡಿಗೊಬ್ಬ ರನ್ನದಂಥ ‘ರಾಜ’

By Staff
|
Google Oneindia Kannada News

ಚಿನ್ನದಂಥ ನಾಡಿಗೊಬ್ಬ ರನ್ನದಂಥ ‘ರಾಜ’
ಕನ್ನಡ ಪತ್ರಿಕೆಗಳು, ಎಲೆಕ್ಟ್ರಾನಿಕ್‌ ಮಾಧ್ಯಮಗಳು ವರನಟನಿಗೆ ಮೊದಲ ಬಾರಿಗೆ ಯೋಗ್ಯ ಗೌರವ ಸಲ್ಲಿಸಿವೆ. ಕನ್ನಡ ಮಾಧ್ಯಮಗಳು ಮಾತ್ರವಲ್ಲ, ಆಂಗ್ಲ ಮಾಧ್ಯಮಗಳೂ ರಾಜ್‌ ನಿಧನದ ವರ್ತಮಾನವನ್ನು ಪರಿಣಾಮಕಾರಿಯಾಗಿ ಬಿಂಬಿಸಿವೆ. ಆ ಮೂಲಕ ಕನ್ನಡ ಪ್ರೀತಿಯನ್ನು ಅರ್ಥಪೂರ್ಣವಾಗಿ ಹಂಚಿವೆ.

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

[email protected]

ಏಪ್ರಿಲ್‌ ಹನ್ನೆರಡರ ಬುಧವಾರ ಕರ್ನಾಟಕದ ಪಾಲಿಗೆ ದುರ್ದಿನವಾಗಿ ಪರಿಣಮಿಸಿತು. ಅದು ಚಿತ್ರರಂಗದ ಧ್ರುವತಾರೆಯೊಂದು ಅಸ್ತಂಗತವಾಗಿ, ಎಲ್ಲೆಡೆ ಗಾಢಾಂಧಕಾರ ತುಂಬಿಕೊಂಡ ಕರಾಳ ದಿನ. ರಾಜ್‌ಕುಮಾರ್‌ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರೆನ್ನುವ ಸುದ್ದಿ, ಅಸಂಖ್ಯಾತ ರಾಜ್‌ ಅಭಿಮಾನಿಗಳ ಹೃದಯಕ್ಕೆ ಬರಸಿಡಿಲಿನಂತೆ ಬಂದು ಅಪ್ಪಳಿಸಿದ ಕೆಟ್ಟ ದಿನ. ರಾಜ್‌ ಎಂಬ ಹಿರಿಯ ಆಲದಮರದ ಬೇರು ನಮ್ಮೆಲ್ಲರ ಹೃದಯದಲ್ಲಿ ಅದೆಷ್ಟು ಆಳವಾಗಿ ಇಳಿದಿತ್ತೆಂಬುದು ಅರಿವಾಗಿದ್ದೂ ಆಗಲೇ. ಒಬ್ಬ ನಟನಿಗೆ ದೊರಕಬಹುದಾದ ಅತ್ಯುತ್ತಮ ಪುರಸ್ಕಾರವೆಂದರೆ ಅದೇ ಅಲ್ಲವೇ? ಜನರ ಹೃದಯದಲ್ಲಿ ದೊರಕುವ ಸ್ಥಾನಕ್ಕಿಂತ ಮಿಗಿಲಾದ ಪ್ರಶಸ್ತಿ ಬೇರೆ ಯಾವುದಿದ್ದೀತು? ಆ ಮಟ್ಟಿಗೆ ರಾಜ್‌ಕುಮಾರ್‌ ಬಹಳ ಅದೃಷ್ಟವಂತರು. ಒಂದು ಜನಾಂಗವನ್ನೇ ಆವರಿಸಿಕೊಂಡ ರಾಜ್‌ರಂತಹ ನಟ ಹಿಂದೆಯೂ ಇರಲಿಲ್ಲ, ಮುಂದೆಯೂ ಬರಲಿಕ್ಕಿಲ್ಲ!

ರಾಜ್‌ಕುಮಾರ್‌ ಭೌತಿಕ ಶರೀರ ನಮ್ಮಿಂದ ದೂರವಾಗಿ ದಿನಗಳೇ ಕಳೆದರೂ, ಅದೆಷ್ಟೋ ಮನಸ್ಸುಗಳು ಇನ್ನೂ ಆ ಅಘಾತದಿಂದ ಹೊರ ಬಂದಿಲ್ಲ. ಆ ದು:ಖ ಸದ್ಯಕ್ಕೆ ಆರುವಂತಹದೂ ಅಲ್ಲ. ಅದು ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಬಿದ್ದಿರುವ ದೊಡ್ಡ ಹೊಡೆತ. ಕಾಲ ಮಾತ್ರ ಮಾಯಿಸಬಲ್ಲಂತಹ ನೋವು ತುಂಬಿದ ಗಾಯ. ಜೀವಂತ ದಂತಕಥೆಯಾಗಿದ್ದ ರಾಜ್‌ಕುಮಾರ್‌ ಕುರಿತು, ಈ ಒಂದು ವಾರದಲ್ಲಿ, ಎಲ್ಲಾ ಪತ್ರಿಕೆಗಳಲ್ಲೂ ಸುರಿದು, ಹರಿದುಹೋದ ಬರಹಗಳ ಮಹಾಪೂರಕ್ಕೆ ಲೆಕ್ಕವೇ ಇಲ್ಲ. Raj kumar ಆದರೆ ರಾಜ್‌ ಇಲ್ಲವಾದ ನೋವನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಅಕ್ಷರಗಳೇ ಬಸವಳಿದು ಹೋದವು. ರಾಜ್‌ ನೆನಪುಗಳನ್ನು ಹಿಡಿದಿಡುವಲ್ಲಿ ಮಾತುಗಳು ಸೋತು ಹೋದವು. ರಾಜ್‌ ವಿಧಿವಶರಾದ ಸಮಾಚಾರ ತಿಳಿದೊಡನೆ ಮರುಗದ ಮನಸ್ಸುಗಳು, ಕಂಬನಿ ಮಿಡಿಯದ ಕಣ್ಣುಗಳೇ ಇಲ್ಲವೆನ್ನಬಹುದು.

ರಾಜ್‌ಕುಮಾರ್‌ ಮರಣದ ವಾರ್ತೆ ಕ್ಷಣದಲ್ಲೇ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದಾಗಿತ್ತು. ಕರ್ನಾಟಕದಲ್ಲೇ ಇರುವ ಶೋಕತಪ್ತ ಅಭಿಮಾನಿಗಳು ಗುಂಪುಗುಂಪಾಗಿ ಪಾರ್ಥಿವ ಶರೀರ ದರ್ಶನಕ್ಕಾಗಿ ರಾಜ್‌ ನಿವಾಸದತ್ತ ಧಾವಿಸಿದರು. ಕೊನೆಯ ಬಾರಿಗೆ ತಮ್ಮ ಮೆಚ್ಚಿನ ನಟನನ್ನು ನೋಡಿದ ಸಮಾಧಾನವಾದರೂ ಅವರ ಪಾಲಿಗಿತ್ತು. ಆದರೆ ಕರ್ನಾಟಕದಿಂದ, ದೇಶದಿಂದಲೇ ಹೊರಗಿರುವ ಕನ್ನಡಿಗರ ಮನದ ಬೇಗುದಿ ಹೇಳತೀರದು. ಪರಿಚಿತರಲ್ಲಿ, ಆತ್ಮೀಯರಲ್ಲಿ ದೂರವಾಣಿಯ ಮೂಲಕ ದು:ಖ ಹಂಚಿಕೊಂಡರೂ ಸಮಾಧಾನವಾಗದು. ತಾಯ್ನಾಡಿನಿಂದ ದೂರವಿರುವ ನೋವು ಉಮ್ಮಳಿಸುವುದು, ಈ ರೀತಿ ಆಪ್ತರನ್ನು ಮೃತ್ಯು ನುಂಗಿ ಹಾಕಿದಾಗಲೇ.

ಆದರೆ, ಉದಯ ವಾಹಿನಿ ವರನಟನ ನಿಧನದ ಕೆಲವೇ ಘಂಟೆಗಳಿಂದ ಹಿಡಿದು, ಅವರು ಮಣ್ಣು ಸೇರುವ ಘಳಿಗೆಯವರೆಗಿನ ಪ್ರತಿಯೊಂದು ಕ್ಷಣವನ್ನೂ ನೇರಪ್ರಸಾರ ಮಾಡಿತು. ಆ ದೃಶ್ಯಗಳನ್ನು ನೋಡುತ್ತಿದ್ದ ನಮ್ಮಲ್ಲಿ, ನಾವೆಲ್ಲೋ ದೂರದಲ್ಲಿಲ್ಲ, ರಾಜ್‌ ಮನೆಯ ಒಳಗೆ ಇದ್ದೇವೆ ಎಂಬ ಅನುಭವ ಮೂಡುವಂತೆ ಮಾಡಿತು. ನಡುನಡುವೆ ರಾಜ್‌ ಜೊತೆ ನಡೆಸಿದ ಹಳೆಯ ಸಂದರ್ಶನಗಳು, ಕವಿರತ್ನ ಕಾಳಿದಾಸ, ಎರಡು ಕನಸು ಮುಂತಾದ ಚಿತ್ರಗಳು, ರಾಜ್‌ ಅಭಿನಯಿಸಿರುವ ಚಿತ್ರಗಳ ಗೀತೆಗಳೂ ಪ್ರಸಾರವಾಗುತ್ತಿದ್ದವು. ಆ ಚಿತ್ರಗಳಲ್ಲಿ ದಾಖಲಾಗಿರುವ ರಾಜ್‌ರ ಅಚ್ಚಳಿಯದ ಅಭಿನಯ ನೋಡುತ್ತಿದ್ದಂತೆ, ರಾಜ್‌ಕುಮಾರ್‌ ನಮ್ಮನ್ನು ಅಗಲಿ ಎಲ್ಲಿಯೂ ಹೋಗಿಲ್ಲ, ಇಲ್ಲೇ ನಮ್ಮ ಸುತ್ತಮುತ್ತ ಎಲ್ಲೋ ಇದ್ದಾರೆ ಎಂಬ ಸಾಂತ್ವನ ಭಾವವೊಂದು ಮನಸ್ಸನ್ನು ಆವರಿಸುತ್ತಿತ್ತು. ಅದೂ ಸರಿಯೇ, ‘‘ಮುಂದಿನ ನನ್ನ ಜನ್ಮ, ಬರೆದಿಟ್ಟನಂತೆ ಬ್ರಹ್ಮ, ಇಲ್ಲಿಯೇ ...ಈ ಮಣ್ಣಿನಲ್ಲಿಯೇ’’ ಎಂದು ಹಾಡಿರುವ ರಾಜ್‌ ನಮ್ಮನ್ನಗಲಿ ಹೋಗುತ್ತಾರಾದರೂ ಅದೆಲ್ಲಿಗೆ?

Raj kumarಉದಯ ಟೀವಿಯಂತೆಯೇ, ಇತರ ವಾಹಿನಿಗಳು ಕೂಡ ರಾಜ್‌ ಅಂತ್ಯಕ್ರಿಯೆಯ ನೇರಪ್ರಸಾರ ಮಾಡಿದ್ದವು. ಆದರೆ ಸದ್ಯಕ್ಕೆ ಅಮೆರಿಕಾ ಕನ್ನಡಿಗರ ಮನೆಬಾಗಿಲನ್ನು ತಲುಪಿರುವುದು ಉದಯ ಟೀವಿ ಮಾತ್ರವೇ. ಕನ್ನಡದ ಅಮೂಲ್ಯ ಆಸ್ತಿಯನ್ನು ಕಳೆದುಕೊಂಡೆವೆಂದು ಕೊರಗುತ್ತಿದ್ದ, ನಮ್ಮ ಸಂಕಟದಲ್ಲಿ ಜೊತೆಯಾದ ಉದಯ ಟೀವಿ ಆಡಳಿತ ವರ್ಗಕ್ಕೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಆದರೆ ಉದಯವಾಹಿನಿಯ ಕಾರ್ಯಕ್ರಮಗಳು ಸ್ಥಳೀಯ ಕಾಲಮಾನಕ್ಕುನುಗುಣವಾಗಿ ಪ್ರಸಾರವಾಗುವುದರಿಂದ, ರಾಜ್‌ ನಿಧನದ ಸುದ್ದಿ ಅಲ್ಲಿಂದ ಬಿತ್ತರಗೊಂಡಿದ್ದು ಬಹಳ ತಡವಾಗಿ. ಕೊನೆಯಪಕ್ಷ ಇಂತಹ ಕೆಲವು ವಿಶೇಷ ಸಂದರ್ಭಗಳಲ್ಲಾದರೂ, ಸುದ್ದಿಯ ನೇರಪ್ರಸಾರವಿದ್ದರೆ ಉತ್ತಮ ಎನಿಸಿತು.

ಅಲ್ಲಿಯವರೆಗೂ ವಿಶ್ವವ್ಯಾಪಿ ಓದುಗರಿಗೆ, ರಾಜ್‌ ಕುರಿತ ವರದಿಗಳನ್ನು ಉಣಬಡಿಸಿದ್ದು ಅಂತರ್ಜಾಲದಲ್ಲಿರುವ ಪತ್ರಿಕೆಗಳು! ಅಮೆರಿಕಾದ ಬಹುಪಾಲು ಜನ ಕನ್ನಡಿಗರಿಗೆ ರಾಜ ನಿರ್ಗಮನದ ಸುದ್ದಿ ಮೊದಲು ತಿಳಿದಿದ್ದೇ ‘‘ದಟ್ಸ್‌ ಕನ್ನಡ’’ ದ ಮೂಲಕ ಎಂದರೆ ತಪ್ಪಾಗದು. ಇದಲ್ಲದೆ ಇಮೈಲುಗಳ ಮೂಲಕ, ಯಾಹೂ ಹರಟೆ ಕಿಟಕಿಗಳ ಮೂಲಕ, ಮಿಂಚಿನ ವೇಗದಲ್ಲಿ ಹರಿದಾಡಿದ ಸಂದೇಶಗಳಿಗೂ ಕಡಿಮೆ ಇಲ್ಲ.

ನಂತರದ ವಿದ್ಯಮಾನಗಳನ್ನು ತಿಳಿಯಲು ಹಪಹಪಿಸುತ್ತಿದ್ದ ಓದುಗರನ್ನು ತಣಿಸಲು, ಅಂತರ್ಜಾಲದಲ್ಲಿನ ಎಲ್ಲಾ ಪತ್ರಿಕೆಗಳೂ ಪೈಪೋಟಿಗಿಳಿದಂತೆ ಸುದ್ದಿಗಳನ್ನು ತಂದು ಉಣಬಡಿಸಿದವು. ತನ್ನ ಅಂತರ್ಜಾಲ ಆವೃತ್ತಿಯನ್ನು ಪ್ರಾರಂಭಿಸಿದ ಮೇಲೆ ಅಮೆರಿಕಾದಲ್ಲಿಯೂ ಮನೆಮಾತಾಗಿರುವ ‘‘ವಿಜಯ ಕರ್ನಾಟಕ’’ ರಾಜಾಂತ್ಯದ ಈ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿತು. ರಾಜ್‌ಕುಮಾರ್‌ ಅವರನ್ನು ಹತ್ತಿರದಿಂದ ಬಲ್ಲ ಅನೇಕರಿಂದ ಮಾಹಿತಿಪೂರ್ಣ ಲೇಖನಗಳನ್ನು ಬರೆಸಿ, ಪ್ರಕಟಿಸಿ ‘‘ಸಮಸ್ತ ಕನ್ನಡಿಗರ ಹೆಮ್ಮೆ’’ ಎಂಬ ತನ್ನ ಹಿರಿಮೆಯನ್ನು ಸಾರ್ಥಕ ಪಡಿಸಿಕೊಂಡಿತು.

ತನ್ನ ಅಂತರ್ಜಾಲ ಆವೃತ್ತಿಯನ್ನು ಬಹಳ ಹಿಂದಿನಿಂದಲೇ ಪ್ರಕಟಿಸುತ್ತಿರುವ ಕನ್ನಡಪ್ರಭ ‘‘ಮಣ್ಣು ಸೇರಿತು ಕನ್ನಡದ ಹೊನ್ನು’’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಒಂದೊಂದು ಲೇಖನವೂ ಸಂಗ್ರಹ ಯೋಗ್ಯವಾಗಿತ್ತು. ಗಾಯಕನಾಗಿ ರಾಜ್‌, ನಾಯಕನಾಗಿ ರಾಜ್‌, ವಿನಯವಂತ ರಾಜ್‌, ಆಧ್ಯಾತ್ಮ ಯೋಗಿ ರಾಜ್‌, ಸಂಸಾರಿ ರಾಜ್‌, ಪರೋಪಕಾರಿ ರಾಜ್‌, ಗೋಕಾಕ್‌ ಚಳುವಳಿಯಲ್ಲಿ ರಾಜ್‌...ಹೀಗೆ ನಟಸಾರ್ವಭೌಮನ ಬದುಕಿನ ಎಲ್ಲಾ ಮಗ್ಗುಲುಗಳನ್ನು ಮೊಗೆಮೊಗೆದು ಓದುಗರ ಮುಂದೆ ರಾಶಿ ಹಾಕಿಬಿಟ್ಟಿತು. ಯಾವಾಗಲೂ ಕನ್ನಡ ವಿರೋಧಿ ಧೋರಣೆ ಅನುಸರಿಸಿ, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಕನ್ನಡಪ್ರಭ ಈ ಬಾರಿ ಅಂತಹ ತಪ್ಪೆಸಗಲಿಲ್ಲ. ಕನ್ನಡದ ಕುಲಪುತ್ರ ರಾಜ್‌ಗೆ ತನ್ನ ಈ ಲೇಖನಮಾಲೆಯ ಮೂಲಕ ಸಾರ್ಥಕ ಶ್ರದ್ಧಾಂಜಲಿ ಸಲ್ಲಿಸಿ, ಸರ್ವರಿಂದಲೂ ಸೈ ಅನ್ನಿಸಿಕೊಂಡಿತು.

ಕೆಲವು ಅಂತರ್ಜಾಲ ತಾಣಗಳಲ್ಲಿ ರಾಜ್‌ ವಿರುದ್ಧ ಹಗುರವಾದ ಮಾತುಗಳನ್ನಾಡಿ, ಮೊದಲೇ ನೊಂದಿರುವ ಕನ್ನಡಿಗರನ್ನು ಮತ್ತಷ್ಟು ಕೆಣಕುವ ಪ್ರಯತ್ನವೂ ನಡೆಯಿತು. ಒಬ್ಬ ವ್ಯಕ್ತಿ ಸತ್ತನೆಂದರೆ ಅವನು ಬಿಟ್ಟುಹೋಗಿರುವ ಆಸ್ತಿಪಾಸ್ತಿಗಳಿಗಾಗಿ ಕಿತ್ತಾಟ ನಡೆಯುವಂತೆಯೇ, ರಾಜ್‌ ಮರಣದ ಬೆನ್ನಿಗೇ ‘‘ರಾಜ್‌ ಕರ್ನಾಟಕಕ್ಕೆ, ಕನ್ನಡಿಗರಿಗೆ ಏನು ಕೊಟ್ಟಿದಾರೆ?’’ ಎನ್ನುವ ಅಸಹ್ಯಕರ ತಕರಾರೊಂದನ್ನು ಗಾಳಿಯಲ್ಲಿ ತೂರಿ ಬಿಡಲಾಯಿತು. ಅಷ್ಟಕ್ಕೂ ಈ ಪ್ರಶ್ನೆ ರಾಜ್‌ ಮಟ್ಟಿಗೆ ಹೊಸದೇನೂ ಅಲ್ಲ.

ರಾಜ್‌ಕುಮಾರ್‌ ಅವರಿಗಿಂತಲೂ ಅಧಿಕ ಪಟ್ಟು ಹಣವನ್ನು ಈಗಾಗಲೇ ಸಂಪಾದಿಸಿಕೊಂಡಿರುವ ಉದ್ದಿಮೆದಾರರನ್ನು, ಕಾಳಸಂತೆಯ ಖದೀಮರನ್ನು, ರಾಜಕಾರಣಿಗಳನ್ನು, ಕ್ರಿಕೆಟ್‌ ತಾರೆಗಳನ್ನು... ಇನ್ನೂ ಅನೇಕರನ್ನು ಕಾಡದ ಈ ಬೇತಾಳ ಪ್ರಶ್ನೆ, ರಾಜ್‌ ಅವರನ್ನು ಮಾತ್ರ ಬಿಡದೆ ಕಾಡಿದ್ದರ ಹಿಂದೆ ಅದಾವ ರಾಜಕೀಯವಿದೆಯೋ ಬಲ್ಲವರಾರು?

ಈಗಾಗಲೇ ಅನೇಕರು ಬರೆದಿರುವಂತೆ, ತಮ್ಮ ಅಸಂಖ್ಯಾತ ಅಭಿಮಾನಿಗಳಲ್ಲಿ ಕನ್ನಡ ಅಭಿಮಾನವನ್ನು ಬಿತ್ತಿರುವುದೇ ರಾಜ್‌ ಮಾಡಿದ ಅತ್ಯಂತ ದೊಡ್ಡ ಕೆಲಸ. ಅಷ್ಟಕ್ಕೂ ಒಬ್ಬ ಕಲಾವಿದನಾಗಿ ರಾಜ್‌ ನಾಡಿಗೆ ಏನು ತಾನೇ ಮಾಡಬೇಕಾಗಿತ್ತು? ನಾಡಿಗೆ ಏನಾದರೂ ಮಾಡಲೆಂದೇ ಗದ್ದುಗೆ ಏರುವ ನೂರಾರು ಜನ ಮಂತ್ರಿಮಹೋದಯರೇ, ಏನೇನು ಮಾಡದೆ, ತಲೆಮಾರುಗಳಿಗಾಗುವಷ್ಟು ಗಂಟು ಕಟ್ಟಿಕೊಂಡು, ಸದ್ದಿಲ್ಲದೆ ಗಾದಿ ಇಳಿದು ಹೋಗುತ್ತಿರುವಾಗ, ಒಬ್ಬ ಕಲಾವಿದನಾಗಿ, ರಾಜ್‌ ಈ ಸಮಾಜಕ್ಕೆ ಏನಾದರೂ ಮಾಡಬೇಕೆಂದು ನಿರೀಕ್ಷಿಸುವುದು ಭಂಡತನವಲ್ಲದೆ ಮತ್ತೇನು?

ಒಬ್ಬ ಕಲಾವಿದನಿಗೆ ಅಭಿನಯಿಸುವುದಷ್ಟೇ ಕೆಲಸ, ಗಾಯಕನಿಗೆ ಎದೆತುಂಬಿ ಹಾಡುವುದಷ್ಟೇ ಕೆಲಸ. ಅಷ್ಟನ್ನೂ ರಾಜ್‌ ನಿರ್ವಂಚನೆಯಿಂದ ಮಾಡಿ ತಮ್ಮ ಕರ್ತವ್ಯ ಮುಗಿಸಿದ್ದಾರೆ. ನಾನು ನೋಡಿದ ರಾಜ್‌ ಮೊದಲ ಚಿತ್ರ ಯಾವುದಿರಬಹುದೆಂದು ಯೋಚಿಸಿದಾಗ, ನನ್ನ ನೆನಪಿನ ಪರದೆಯ ಮೇಲೆ ಮಸುಕಾಗಿ ತೇಲಿ ಬಂದ ಚಿತ್ರಗಳೆಂದರೆ ‘‘ಶ್ರೀಕೃಷ್ಣದೇವರಾಯ’’ ಮತ್ತು ‘‘ಸಾಕ್ಷಾತ್ಕಾರ’’. ಸಾಕ್ಷಾತ್ಕಾರ ಚಿತ್ರದಲ್ಲಿ ‘‘ಜನ್ಮ ಜನ್ಮದ ಅನುಬಂಧ’’ ಎಂಬ ಹಾಡೊಂದಿದೆ. ಆ ಹಾಡಿನಲ್ಲಿ ಬರುವ ‘‘ಪುಣ್ಯ ಪುರುಷರ ಇತಿಹಾಸದಂತೆ, ಕನ್ನಡ ಜನರ ಔದಾರ್ಯದಂತೆ’’ ಎಂಬ ಸಾಲಿಗೆ ಪ್ರೇಕ್ಷಕ ವೃಂದದಿಂದ ಮೊಳಗಿದ್ದ ಹರ್ಷೋದ್ಗಾರ ಈಗಲೂ ನೆನಪಿದೆ. ಬಹುಶ: ಈಗ ಅನೇಕರ ಎದೆಯಲ್ಲಿ ಬೆಳೆದು ಹೆಮ್ಮರವಾಗಿರುವ ಕನ್ನಡಾಭಿಮಾನದ, ಮೊದಲ ಮೊಳಕೆಯೊಡೆಯಲು ಇಂತಹ ಯಾವುದೋ ಒಂದು ಅಮೃತಘಳಿಗೆಯೇ ಕಾರಣವಿರಬಹುದು. ಭಾಷೆಯೆಂದರೇನು? ಅಭಿಮಾನ ಎಂದರೇನು? ಎಂಬುದನ್ನೇ ಅರಿಯದ ಅನೇಕ ಎಳೆಯ ಮನಸ್ಸುಗಳಲ್ಲಿ ಕನ್ನಡಾಭಿಮಾನದ ಕಿಚ್ಚು ಹೊತ್ತಿಸಿದ್ದೇ ರಾಜ್‌ ಚಿತ್ರಗಳು. ಅದು ರಾಜ್‌ ಈ ನಾಡಿಗೆ ಸಲ್ಲಿಸಿದ ಅಮೂಲ್ಯ ಸೇವೆಯಲ್ಲದೆ ಮತ್ತೇನು?

ರಾಜ್‌ ಈಗ ನಮ್ಮೊಡನಿಲ್ಲ. ಅದು ಹುಟ್ಟು,ಸಾವುಗಳ ಮೂರು ದಿನದ ಬಾಳಿನ ಅನಿವಾರ್ಯಗಳಲ್ಲೊಂದು. ನಾವೀಗ ಅರಗಿಸಲೇಕೊಳ್ಳಬೇಕಾಗಿರುವ ಕಟುವಾಸ್ತವ. ಆದರೆ ಅವರು ನಮಗೆಂದೇ ಬಿಟ್ಟುಹೋಗಿರುವ ಇನ್ನೂರಕ್ಕೂ ಹೆಚ್ಚು ಚಿತ್ರಗಳು ನಮ್ಮೊಂದಿಗಿವೆ. ಪ್ರತಿ ಚಿತ್ರದಲ್ಲೂ ರಾಜ್‌ಕುಮಾರ್‌ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಅಜರಾಮರರಾಗಿದ್ದಾರೆ. ರಾಜ್‌ ತಮ್ಮ ಪ್ರಾಣದಂತೆ ಪ್ರೀತಿಸುತ್ತಿದ್ದ ಕನ್ನಡವನ್ನು ಬೆಳೆಸಿ, ಉಳಿಸುವುದೇ, ಕನ್ನಡ ಕುಲಕೋಟಿ ಡಾ. ರಾಜ್‌ಕುಮಾರ್‌ ಅವರಿಗೆ ಸಲ್ಲಿಸಬಹುದಾದ ಅತ್ಯಂತ ಅರ್ಥಪೂರ್ಣ ಶ್ರದ್ಧಾಂಜಲಿಯಲ್ಲವೇ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X