ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂಕೊಚ್ಚಿ ಕಿವಿಕಚ್ಚುವವರಿಂದ ಇರಿ ಎಚ್ಚರ

By Staff
|
Google Oneindia Kannada News

ಸ್ವಯಂಕೊಚ್ಚಿ ಕಿವಿಕಚ್ಚುವವರಿಂದ ಇರಿ ಎಚ್ಚರ
ಹೊಗಳಿಕೆ ಸಕಾರಣವಾಗಿ, ಸಕಾರಾತ್ಮಕವಾಗಿದ್ದರೆ ಮಾತ್ರ ವ್ಯಕ್ತಿಯ ಬೆಳವಣಿಗೆ ಸಾಧ್ಯ. ಹೊಗಳಿಕೆಯನ್ನು ಸ್ವೀಕರಿಸುವಷ್ಟೇ ಸರಳವಾಗಿ ತೆಗಳಿಕೆಯನ್ನೂ ಸ್ವೀಕರಿಸುವ ಮನಸ್ಥಿತಿ ಬೇಕು. ಆದರೆ ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಈ ನಡುವೆ ಸ್ವತುತ್ತೂರಿ ಅಂದ್ರೆ; ಸ್ವಯಂ ಹೊಗಳಿಕೊಳ್ಳುವ ಪರಿಪಾಠ ಬೇರೆ ಆರಂಭಗೊಂಡಿದೆ.

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

[email protected]

ಮನುಷ್ಯನ ದೌರ್ಬಲ್ಯಗಳು ಹಲವಾರು. ಅದರಲ್ಲಿ ಹೊಗಳಿಕೆಗೆ ಮರುಳಾಗುವ ಗುಣವೂ ಒಂದು. ವ್ಯಕ್ತಿಯೊಬ್ಬನ ಈ ಬಲಹೀನತೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಜನಗಳು ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವುದು ಎಲ್ಲೆಲ್ಲೂ ಕಂಡುಬರುವ ಸಾಮಾನ್ಯ ಸಂಗತಿ. ತಾವು ಈ ಪ್ರಶಂಸೆಗೆ ನಿಜವಾಗಿಯೂ ಅರ್ಹರೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವ ಜನಗಳಂತೂ ಕಡಿಮೆಯೇ. ಹಾಗೆಂದು ಹೊಗಳಿಕೆ ಎಂದರೆ ಮುಜುಗರ ಪಡುವ ಜನರೂ ಇಲ್ಲದಿಲ್ಲ. ಕುವೆಂಪು ಅವರಂತಹ ಕೆಲವರು ಮಾತ್ರ ‘ಕೀರ್ತಿ ಶನಿ ತೊಲಗಾಚೆ’ ಎಂದು ಪ್ರಸಂಸೆಯನ್ನೂ, ಅದರಿಂದ ಬರುವ ಪ್ರಸಿದ್ಧಿಯನ್ನೂ ದೂರವಿಟ್ಟಿರಬಹುದು. ಆದರೆ ಅಂತಹವರು ಖಂಡಿತವಾಗಿಯೂ ಅಲ್ಪಸಂಖ್ಯಾತರು! ಅಷ್ಟಕ್ಕೂ ಹೊಗಳಿಕೆಯನ್ನು ಬಯಸದವರಾರು? ಎಂತಹ ದಯಾಮಯನಾದ ದೇವನಾದರೂ, ನಮ್ಮ ಬೇಡಿಕೆಗಳಿಗೆ ತಥಾಸ್ತು ಎನ್ನುವುದು ಅವನನ್ನು ಪರಿಪರಿಯಾಗಿ ಸ್ತುತಿಸಿದ ನಂತರವೇ ಅಲ್ಲವೇ?

‘ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸದಿರಯ್ಯಾ..’ ಎಂಬ ಈ ಮಾತನ್ನು ಬಸವಣ್ಣನವರು ಅಂದೇ ನುಡಿದಿದ್ದರು. ಅಂದ ಮೇಲೆ ಹೊಗಳುವ, ಹೊಗಳಿಸಿಕೊಳ್ಳುವ ಈ ಚಾಳಿ ಈಚೆಗಷ್ಟೇ ಪ್ರಾರಂಭವಾಗಿದ್ದಂತೂ ಅಲ್ಲವೇ ಅಲ್ಲ ಎಂದಾಯಿತು. ಹೊಗಳಿಕೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು ಬಹಳ ಪ್ರಾಚೀನ ಕಾಲಕ್ಕೇ ಹೋಗಿ ಮುಟ್ಟಬಹುದು.

ರಾಜ - ಮಹಾರಾಜರುಗಳು ಆಸ್ಥಾನವನ್ನು ಪ್ರವೇಶಿಸುವಾಗ ಅವರಿಗೆ ಬಹು ಪರಾಕ್‌ ಹಾಡಿ ಕರೆತರುವುದು ಜಾರಿಯಲ್ಲಿದ್ದ ಒಂದು ಕ್ರಮ. ಈ ರೀತಿ ಆಳರಸರನ್ನು ಹಾಡಿ ಹೊಗಳಲೆಂದೇ ಹೊಗಳುಭಟರನ್ನು ನೇಮಿಸಿಕೊಳ್ಳುತ್ತಿದ್ದರಂತೆ. ಇಂತಹ ಭಟ್ಟಂಗಿಗಳಿಗೆ ಸಂಬಳ ಕೊಟ್ಟು ಅವರಿಂದ ಬಹು ಪರಾಕ್‌ ಹೇಳಿಸಿಕೊಳ್ಳುವುದರಿಂದ ಆ ರಾಜರುಗಳಿಗೆ ಅದಿನ್ನೆಂತಹ ಸಂತೋಷ ದೊರಕುತ್ತಿತ್ತೋ ದೇವರೇ ಬಲ್ಲ! ಸಿಂಹಾಸನಾರೂಢ ಚಕ್ರವರ್ತಿಯ ಹಿರಿಮೆ, ಪರಾಕ್ರಮಗಳನ್ನು ಸಭಿಕರಿಗೆ, ಪ್ರವಾಸಿಗಳಿಗೆ ಪರಿಚಯಿಸಿಕೊಡುವ ಉದ್ದೇಶವೂ ಅದರಲ್ಲಿ ಅಡಗಿದ್ದಿರಬಹುದೇನೋ. ನಿಜವಾಗಿಯೂ ಆ ದೊರೆ ಅಷ್ಟೆಲ್ಲಾ ಬಿರುದುಬಾವಲಿಗಳಿಗೆ ಯೋಗ್ಯನಾಗಿರುತ್ತಿದ್ದನೋ ಇಲ್ಲವೋ, ಒಟ್ಟಿನಲ್ಲಿ ಅಧಿಕಾರದಲ್ಲಿರುವ ಅರಸನಿಗೆ ಕಡ್ಡಾಯವಾಗಿ ಸಲ್ಲಬೇಕಾದ ರಾಜಮರ್ಯಾದೆಗಳಲ್ಲಿ ಈ ಹೊಗಳಿಕೆಯೂ ಒಂದಾಗಿತ್ತು!

ಹೊಗಳಿಕೆ ಬೇಡವೆಂದರೂ ಕೆಲವು ಕ್ಷೇತ್ರಗಳಲ್ಲಿ ಅದು ಅನಿವಾರ್ಯ. ಉದಾಹರಣೆಗೆ ಜಾಹೀರಾತು ಕಂಪನಿಗಳು. ತಮ್ಮ ಉತ್ಪನ್ನಗಳನ್ನು ಅತಿಶಯವಾಗಿ ಬಣ್ಣಿಸಿ ಹೇಗಾದರೂ ಅವು ಮಾರಾಟವಾಗುವಂತೆ ಮಾಡಬೇಕಾದುದು ಅವುಗಳ ಹೊಣೆ. ಹಾಗಾಗಿ ಈ ವಸ್ತು ಏನೆಲ್ಲ ಉತ್ತಮ ಗುಣಗಳನ್ನು ಹೊಂದಿದೆ, ಇದನ್ನು ಉಪಯೋಗಿಸಿದರೆ ಹೇಗಿದ್ದವರು ಹೇಗೆಲ್ಲಾ ಆಗಿಹೋಗುತ್ತಾರೆ ಎಂದು ಒಂದಕ್ಕೆರಡಾಗಿ ಹೊಗಳಿ ಜಾಹೀರಾತು ಕೊಡುವುದು ಅಗತ್ಯ. ಒಂದು ಉತ್ತಮ ಗುಣಮಟ್ಟದ ವಸ್ತುವಿಗೆ ಜಾಹೀರಾತು ಬೇಕಾಗಿಯೇ ಇಲ್ಲ ಎಂಬ ವಾದ ಆಕರ್ಷಕವೆನಿಸಿದರೂ, ಪ್ರಚಾರವಿಲ್ಲದಿದ್ದರೆ ಎಷ್ಟೇ ಉತ್ತಮ ವಸ್ತುವಾದರೂ ಮಾರುಕಟ್ಟೆಯಲ್ಲಿ ನೆಲ ಕಚ್ಚುವುದು ಖಚಿತ ಎಂಬ ವಾದವೂ ಕೂಡ ಅಷ್ಟೇ ನಿಜವೆನ್ನಿಸುತ್ತದೆ!

ಇಂದು ರಾಜಪ್ರಭುತ್ವ ಮುಗಿದು ಪ್ರಜಾಪ್ರಭುತ್ವ ಪ್ರಾರಂಭವಾಗಿದ್ದರೂ, ಅಧಿಕಾರಸ್ಥರನ್ನು ಅನೇಕ ವಿಶೇಷಣಗಳಿಂದ ಓಲೈಸುವ ಪ್ರವೃತ್ತಿ ಮಾತ್ರ ಕಡಿಮೆಯಾಗಿಲ್ಲ. ರಾಜಕಾರಣಿಗಳಿಗೂ ಈ ಹೊಗಳಿಕೆಗೂ ಅನ್ಯೋನ್ಯ ನಂಟು. ಇವರನ್ನು ಹೊಗಳಿ ಹೊನ್ನಶೂಲಕ್ಕೇರಿಸಲು ಯಾರೂ ಕಷ್ಟಪಡಬೇಕಾಗಿಲ್ಲ. ಅದರಲ್ಲೂ ಇತ್ತೀಚೆಗೆ ನಡೆದ ರಾಜಕೀಯ ಏರುಪೇರಿನ ಸಂದರ್ಭದಲ್ಲಂತೂ, ಮಾಜಿ - ಹಾಲಿ ಮಂತ್ರಿಗಳೆಲ್ಲ ಟೀವಿ ಕ್ಯಾಮರದ ಎದುರು ಮುಖ ತೋರಿಸಿ ತಮಗಿಂತ ಉತ್ತಮರು ಇನ್ನಿಲ್ಲವೆಂದು ಹೊಗಳಿಕೊಂಡಿದ್ದನ್ನು ಕಾಣದವರಾರು? ತನ್ನ ಬಣ್ಣಿಸಿಕೊಳ್ಳುವಾಗ, ಇದಿರ ಹಳಿಯದಿದ್ದರೆ ಇವರ ಬೇಳೆ ಬೇಯುವುದಾದರೂ ಹೇಗೆ? ಏನು ಒಳ್ಳೆಯದಾಗಿದ್ದರೂ ಅದು ತಮ್ಮಿಂದಲೇ. ಅನಿಷ್ಟಕ್ಕೆಲ್ಲ ವಿರೋಧಪಕ್ಷದ ಶನೀಶ್ವರನೇ ಗತಿ. ರಾಜಕಾರಣಿಗಳು ತಮ್ಮ ಭಾಷಣಕ್ಕೆ ಚಪ್ಪಾಳೆ ಹೊಡೆಯಲು, ಜೈಕಾರ ಕೂಗಲು ಜನರನ್ನು ಲಾರಿಗಳಲ್ಲಿ ತುಂಬಿಕೊಂಡು ಬರುತ್ತಾರೆಂಬ ಅಣಕವಿದೆ. ಈ ರೀತಿ ಬರುವ ಜನಗಳಿಗೆ ನಾನಾ ರೀತಿಯ ಆಮಿಷಗಳನ್ನು ಒಡ್ಡಲಾಗಿರುತ್ತದೆ.

ಇನ್ನು ಚಿತ್ರರಂಗದ ಮಾತಿಗೆ ಬಂದರೆ, ಜನಪ್ರಿಯ ನಾಯಕ ನಟನ ಸುತ್ತಲೂ ಅವನನ್ನು ಹೊಗಳುವ ಒಂದು ದಂಡು ಸದಾ ಸಿದ್ಧವಾಗಿಯೇ ಇರುತ್ತದೆ. ಆ ನಾಯಕನ ಚಿತ್ರ ಬಿಡುಗಡೆಯಾದರೆ ಸಾಕು. ಅದು ಹೇಗಾದರೂ ಇರಲಿ, ಒಕ್ಕೊರಲಿನ ಜೈಕಾರ ಹಾಕುವ ಹಿಂಬಾಲಕರ ದಂಡು. ಇಂತಹ ಪರಿಸ್ಥಿತಿಯಲ್ಲಿ ಚಿತ್ರದ ಗುಣಮಟ್ಟವನ್ನಾಗಲೀ, ನಾಯಕನ ಅಭಿನಯ ಕಲೆಯನ್ನಾಗಲೀ ಒರೆಗೆ ಹಚ್ಚುವ ಪ್ರಯತ್ನ ನಡೆಯುವುದು ಅಸಾಧ್ಯ. ಅಭಿಮಾನಿಗಳೆಂಬ ಹೆಸರಿನ ಹೊಗಳುಭಟರ ನಡುವೆ ಖೈದಿಯಂತೆ ಸಿಕ್ಕಿಬೀಳುವ ನಟನ ಪ್ರತಿಭೆಗೆ ಉಸಿರು ಕಟ್ಟುತ್ತದೆ. ಪತ್ರಿಕೆಗಳಲ್ಲಿ ಬರುವ ಆರೋಗ್ಯಕರ ವಿಮರ್ಶೆಗಳನ್ನು ಯಾರೋ ತನ್ನ ವಿರುದ್ಧ ಮಾಡುತ್ತಿರುವ ಸಂಚು ಎಂದೇ ಭಾವಿಸುವ ಇಂತಹ ನಟರಿಂದ ನೈಜ ಅಭಿನಯ ಹೊರಹೊಮ್ಮುವುದಾದರು ಹೇಗೆ ಸಾಧ್ಯ?

ಇದು ದುಡ್ಡು ಕೊಟ್ಟು ಜನಗಳಿಂದ ಹೊಗಳಿಸಿಕೊಳ್ಳುವ ಪರಿಯಾದರೆ ಇದಕ್ಕಿಂತ ಕಿರಿಕಿರಿ ಉಂಟುಮಾಡುವ ಸಂಗತಿ ಇನ್ನೊಂದಿದೆ. ಅದು ತಮ್ಮನ್ನೇ ತಾವು ಹೊಗಳಿಕೊಳ್ಳುವುದು ಅಥವಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎಂಬ ಮಾತಿನಂತೆ, ಎಲ್ಲರಿಗೂ ಸ್ವಂತದ ಸಣ್ಣ ಸಾಧನೆಗಳೂ ಕೂಡ ಮಹತ್ವದ್ದಾಗಿಯೇ ಕಾಣುತ್ತವೆ. ಅದು ಬೇರೆಯವರಿಗೂ ರುಚಿಸುತ್ತದೆಂದು ಹೇಳಲು ಬರುವುದಿಲ್ಲ. ಮೊದಮೊದಲು ತಮಾಷೆಯೆನ್ನಿಸುವ ಇಂತಹ ಕೊಚ್ಚಿಕೊಳ್ಳುವ ಸ್ವಭಾವ ಬರುಬರುತ್ತಾ ಸುತ್ತಲಿನವರಿಗೆ ಅಸಹನೀಯ ಎನ್ನಿಸುವುದುಂಟು.

ಈಚಿನ ದಿನಗಳಲ್ಲಿ, ಇಂತಹ ಮಿತಿ ಮೀರಿದ ಸ್ವಪ್ರಶಂಸೆಗೆ ಸ್ವತುತ್ತೂರಿ ಎಂಬ ಹೊಸದೊಂದು ಪದವೇ ಸೃಷ್ಟಿಯಾಗಿ ಹೋಗಿದೆ. ಈ ಪ್ರವೃತ್ತಿ ಮಾತ್ರ ಯಾರೊಬ್ಬರಿಗೂ ಸೀಮಿತವಲ್ಲ. ಹೇಗಾದರೂ ಮುನ್ನುಗ್ಗು, ಗೆಲುವೊಂದೇ ನಿನ್ನ ಗುರಿ ಎಂದು ಸಾರುತ್ತಿರುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಬೇರೆಯವರು ತಮ್ಮ ಪ್ರತಿಭೆಯನ್ನು ಗುರುತಿಸಿ, ಗೌರವಿಸುವ ತನಕ ಕಾಯುತ್ತಾ ಕುಳಿತಿದ್ದರೆ ಅವಕಾಶಗಳು ಕೈತಪ್ಪಿ ಹೋಗುವ ಆತಂಕ ಎಲ್ಲರನ್ನೂ ಕಾಡುತ್ತಿರುತ್ತದೆ. ಹಾಗಾಗಿ ಯಾವ ಕ್ಷೇತ್ರದಲ್ಲಿ ನೋಡಿದರೂ ಸೆಲ್ಫ್‌ ಪ್ರಮೋಟಿಂಗ್‌, ಸೆಲ್ಫ್‌ ಮಾರ್ಕೆಂಟಿಂಗ್‌!

ಸಮಾಜದ ಎಲ್ಲಾ ರಂಗಗಳಲ್ಲಿಯೂ ಹರಡಿರುವ ಈ ಸ್ವತುತ್ತೂರಿಯ ಮಾಯೆ ಲೇಖಕ, ಸಾಹಿತಿಗಳನ್ನೂ ಬಿಟ್ಟಿಲ್ಲ. ಹಾಡಿದ್ದೇ ಹಾಡುವ ಕಿಸಬಾಯಿ ದಾಸರಂತೆ ಕೆಲವು ಲೇಖಕರಿಗೆ ತಮ್ಮನ್ನು ತಾವು ಹೊಗಳಿಕೊಳ್ಳುವ ಚಟ ಹಿಡಿದಂತಿದೆ. ಓದುಗರ ಮನಸ್ಥಿತಿಯ ಮೇಲೆ ಇದು ಎಂತಹ ಪರಿಣಾಮ ಬೀರಬಹುದು ಎಂಬ ಚಿಂತೆ ಇಲ್ಲದೆ ತಮ್ಮ ಹಿರಿಮೆಯನ್ನು ಬಡಬಡಿಸುವುದನ್ನು ಪತ್ರಿಕೆ, ದೂರದರ್ಶನಗಳಲ್ಲಿ ಕಾಣಬಹುದು. ‘ವಿದ್ಯಾ ದದಾತಿ ವಿನಯಂ’ ಎಂಬ ಸೂಕ್ತಿಗೆ ಕನ್ನಡಿ ಹಿಡಿಯುವಂತಿರುತ್ತಿದ್ದ ಅಂದಿನ ಕವಿ, ಸಾಹಿತಿಗಳ ಬಗ್ಗೆ ಕೇಳಿದ್ದ ಕತೆಗಳು ಈಗ ಕನಸು!

ಎಷ್ಟೇ ಪಾಂಡಿತ್ಯ ಹೊಂದಿದ್ದರೂ, ಪ್ರಚಾರಗಳಿಂದ ದೂರ ಉಳಿದು ತಮ್ಮ ಔನ್ನತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದ ಅಂದಿನ ಮಹಾನ್‌ ಸಾಹಿತಿಗಳ ಎದುರು, ಬರೆದಿದ್ದುದಕ್ಕಿಂತ ವಟವಟ ಬಾಯಿಮಾತಿನಿಂದಲೇ ಪ್ರಸಿದ್ಧರಾಗುತ್ತಿರುವ ಲೇಖಕರು ಕುಬ್ಜರಾಗಿ ಕಾಣಿಸುತ್ತಾರೆ. ಹೀಗೆ ಹೊಗಳಿಕೊಳ್ಳುವವರೆಲ್ಲ ಏನೂ ಸಾಧಿಸಿಯೇ ಇರುವುದಿಲ್ಲ ಎಂದು ನನ್ನ ಅಭಿಪ್ರಾಯವಲ್ಲ. ಆದರೂ ‘ಆಡದೆ ಮಾಡುವನು ರೂಢಿಯೊಳಗುತ್ತಮನು’ ಎಂಬ ಮಾತಿಗೆ ಆದರ್ಶಪ್ರಾಯರಾಗಿ ನಿಲ್ಲುವ ವಿನಯವಂತರಾದ ಕವಿ/ಸಾಹಿತಿ/ಲೇಖಕರಿಂದಷ್ಟೇ ಈ ಸಮಾಜಕ್ಕೆ ಏನಾದರೂ ಒಳಿತಾದೀತು.

ಹಾಗೆಂದು ಹೊಗಳಿಕೆ ಯಾವಾಗಲೂ ಕೆಟ್ಟದ್ದಲ್ಲ. ತಾಯಿಯ ಪ್ರೋತ್ಸಾಹದ ದನಿಯನ್ನು ಹಿಂಬಾಲಿಸುತ್ತಾ ದಟ್ಟೋ..ದಟ್ಟೋ ಎಂದು ತಟ್ಟಾಡುವ ಹೆಜ್ಜೆಗಳನ್ನಿಟ್ಟು ನಡೆಯಲು ಕಲಿಯುವ ಮಗುವಿಗೆ, ಅದೇ ಪ್ರೋತ್ಸಾಹ ಮುಂದೆ ತನ್ನ ಬಾಳಿನಲ್ಲಿಯೂ ದೃಢವಾಗಿ ಹೆಜ್ಜೆಯೂರಲು ಸಹಕಾರಿಯಾಗುತ್ತದೆ. ಬೆಳವಣಿಗೆಯ ಹಂತದಲ್ಲಿ ಮಕ್ಕಳಿಗೆ, ಹೆತ್ತವರಾಡುವ ಹಿತಮಿತವಾದ ಹೊಗಳಿಕೆಯ ಮಾತುಗಳು ಅವರ ಭವಿಷ್ಯವನ್ನು ಸುಂದರವಾಗಿ ರೂಪಿಸುತ್ತವೆ. ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಕರ ಹೊಗಳಿಕೆ ವಿದ್ಯಾರ್ಥಿಗಳಲ್ಲಿ ಅದೆಂತಹ ಅದಮ್ಯ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವ ವಿಷಯವೇ. ಬೆಳೆಯುತ್ತಿರುವ ಪ್ರತಿಭಾವಂತರಿಗೆ ದೊರಕುವ ಚಿಕ್ಕ ಪುಟ್ಟ ಪ್ರಶಂಸೆಗಳು ಕೂಡ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಮತ್ತಷ್ಟು ಉಜ್ವಲವಾಗಿಸುತ್ತದೆ. ತಾನು ಮಾಡುವ ಯಾವ ಕಾರ್ಯವೂ ಪರಿಪೂರ್ಣವಲ್ಲ ಎಂಬ ಕೀಳರಿಮೆಯಿಂದ ನರಳುವ ಅನೇಕರಿಗೆ ಸ್ನೇಹಿತರ, ಸಂಬಂಧಿಗಳ ಮೆಚ್ಚುಗೆಯ ಮಾತುಗಳು ಬದುಕಿನಲ್ಲಿ ಅಪಾರ ಭರವಸೆ ತುಂಬುತ್ತವೆ.

ಆದರೆ ಹೊಗಳಿಕೆ ಸಕಾರಣವಾಗಿ, ಸಕಾರಾತ್ಮಕವಾಗಿದ್ದರೆ ಮಾತ್ರ ವ್ಯಕ್ತಿಯ ಬೆಳವಣಿಗೆ ಸಾಧ್ಯ. ಹೊಗಳಿಕೆಯನ್ನು ಸ್ವೀಕರಿಸುವಷ್ಟೇ ಸರಳವಾಗಿ ತೆಗೆಳಿಕೆಯನ್ನೂ ಸ್ವೀಕರಿಸುವ ಮನಸ್ಥಿತಿ ಬೇಕು. ಆದರೆ ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ‘ಹೊಗಳುವವರು ಹಾಳು ಮಾಡಿದರು, ಬೈದವರು ಬದುಕಲು ಕಲಿಸಿದರು’ ಎಂಬ ಗಾದೆ ಮಾತಿನಲ್ಲಿರುವ ಒಳಮರ್ಮವನ್ನು ಅರಿತುಕೊಂಡರೆ, ಬರೀ ಹೊಗಳಿಕೆಯನ್ನು ಮಾತ್ರವಲ್ಲದೆ, ಕೂರಂಬಿನಂತೆ ಎರಗುವ ಟೀಕೆ-ಟಿಪ್ಪಣಿಗಳನ್ನೂ ಹಗುರವಾಗಿ ಸ್ವೀಕರಿಸಲು ನೆರವಾದೀತು!

ಸಾರ್ವಜನಿಕ ರಂಗದಲ್ಲಿ ಇರುವವರಂತೂ ಹೊಗಳಿಕೆಗಿಂತ ತೆಗಳಿಕೆಯನ್ನೇ ಮೊದಲು ನಿರೀಕ್ಷಿಸಿರುವುದು ಒಳ್ಳೆಯದು. ಸಮುದ್ರ ಮಥನ ಕಾಲದಲ್ಲಿ, ಅಮೃತ ಉದಿಸಿ ಬರುವ ಮುನ್ನ ಉಕ್ಕಿ ಬಂದ ವಿಷವನ್ನು ಕುಡಿಯಲು ಶಿವ ಹಿಂಜರಿದಿದ್ದರೆ, ಇಂದು ಅವನಿಗೆ ನಂಜುಂಡೇಶ್ವರನೆಂಬ ಹೆಸರಿನಿಂದ ಪೂಜೆಯೂ ಸಲ್ಲುತ್ತಿರಲಿಲ್ಲ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X