• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲಾ ಮರೆತು ಹರಟೆ ಹೊಡೆಯೋಣ ಬನ್ನಿ....

By Staff
|

ಎಲ್ಲಾ ಮರೆತು ಹರಟೆ ಹೊಡೆಯೋಣ ಬನ್ನಿ....

‘ಹಾಳು ಹರಟೆಯಿಂದ ಸಮಯ ವ್ಯರ್ಥ’ ಎಂದು ಯಾರೆಷ್ಟೇ ದೂರಿದರೂ ಹರಟೆ ಕೊಡುವ ಸಂತಸ ಕಡಿಮೆಯೇನಿಲ್ಲ. ‘ಮಾತು ಮನೆ ಕೆಡಿಸುವುದು’ ಎನ್ನುವ ಮಾತಿನಲ್ಲಿಯೂ ನಿಜವಿದೆ. ಹೀಗಾಗಿ ಹರಟೆ ಕಾಡುಹರಟೆಯಾಗದಂತೆ ಎಚ್ಚರವಹಿಸಿದರೆ ಸಾಕು. ಆದರೆ ಮಾತಾಡದವರು ಏನೆಲ್ಲಾ ಮಹತ್ಸಾಧನೆಗಳನ್ನು ಮಾಡಿದ್ದರೂ, ಅಂತಹವರಿಂದ ಹರಟೆಯ ಸಾಧನೆ ಮಾತ್ರ ಅಸಾಧ್ಯ!

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರೊಬ್ಬರ ಬಳಿ ಮಾತಾಡುತ್ತಿದ್ದೆ. ಅವರು ಹೇಳುತ್ತಿದ್ದರು - ‘‘ನಮ್ಮ ಮನೆಯಲ್ಲಿ ಈಗ ಯಾರೂ ಇಲ್ಲ. ಎಲ್ಲರೂ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲೆಂದು ಊರಿಗೆ ಹೋಗಿದ್ದಾರೆ. ನಾನೊಬ್ಬನೇ ಇದ್ದೇನೆ. ನನಗಂತೂ ಈ ಮದುವೆ, ಮುಂಜಿ ಮನೆಗಳ ಗಲಾಟೆ ಆಗೋದಿಲ್ಲಪ್ಪಾ. ತಲೆನೋವು ಬಂದು ಬಿಡುತ್ತದೆ’’ ಅವರು ಹೇಳುತ್ತಲೇ ಇದ್ದರು. ಆದರೆ ನಾನು ಅದನ್ನು ಕೇಳುತ್ತಿರಲಿಲ್ಲ. ಯಾಕೆಂದರೆ ನನ್ನ ಮನಸ್ಸು ಆಗಲೇ ಮದುವೆ ಮನೆಗಳ ಗದ್ದಲದ ನಡುವೆ ಕಳೆದುಹೋಗಿತ್ತು.

ನಾನು ಉತ್ಸವ ಪ್ರಿಯೆ. ನನಗಂತೂ ಸಮಾರಂಭಗಳಲ್ಲಿ ಭಾಗವಹಿಸುವುದು ತುಂಬಾ ಇಷ್ಟ. ಯಾಕೆಂದಿರಾ? ಇದ್ದಬದ್ದ ಒಡವೆಗಳನ್ನು ಹೇರಿಕೊಂಡು, ರೇಷ್ಮೆ ಪತ್ತಲ ಉಟ್ಟು ಉತ್ಸವಮೂರ್ತಿಯಂತೆ ಮೆರೆಯಬೇಕೆಂದಂತೂ ಖಂಡಿತ ಅಲ್ಲ. ಮದುವೆ, ಮುಂಜಿ ಮುಂತಾದ ಸಂಭ್ರಮದ ಸಮಾರಂಭಗಳಲ್ಲಿ ಭಾಗವಹಿಸಲು ಅನೇಕರಿಗೆ ಅನೇಕ ಕಾರಣಗಳಿರುತ್ತವೆ. ಕೆಲವರಿಗೆ ಮದುವೆಮನೆಗಳು ತಮ್ಮಲ್ಲಿರುವ ಬೆಲೆಬಾಳುವ ಒಡವೆಗಳನ್ನೆಲ್ಲಾ ಪ್ರದರ್ಶಿಸುವ ಅಂಗಳವಾದರೆ, ಮತ್ತೆ ಕೆಲವರಿಗೆ ಒಂದು ದಿನವಾದರೂ ಆರೋಗ್ಯದ ಕಾಳಜಿ ಮರೆತು, ಡಯಟ್‌ ಭೂತದಿಂದ ಮುಕ್ತರಾಗಿ ಮೃಷ್ಟಾನ್ನ ಸವಿಯುವ ಹಂಬಲ. ಕೆಲವರಿಗೆ ಮದುವೆಗೆ ತಯಾರಿರುವ ಮಗನಿಗೋ, ಮಗಳಿಗೋ ಯೋಗ್ಯ ಸಂಗಾತಿಯನ್ನು ಹುಡುಕಲು ಇದೊಂದು ನೆಪ.

Are they wasting time?ನನ್ನ ಗೆಳತಿಯೊಬ್ಬಳು ಮದುವೆ ಮನೆಯಲ್ಲಿ ಧರಿಸುವ ಉಡುಗೆತೊಡುಗೆಗಳ ಬಗ್ಗೆ ಅದೆಷ್ಟು ತಲೆಕೆಡಿಸಿಕೊಳ್ಳುತ್ತಿದ್ದಳೆಂದರೆ, ನನಗಂತೂ ಇಷ್ಟೊಂದು ಹಿಂಸೆ ಕೊಡುವ ಈ ಸಮಾರಂಭಕ್ಕೆ ಇವಳು ಹೋಗಬೇಕಾದರೂ ಯಾಕೆ ಎಂದು ಅನ್ನಿಸಿಬಿಡುತ್ತಿತ್ತು. ಸೀರೆ, ಒಡವೆಗಳು ತಟ್ಟನೆ ಜನರ ಕಣ್ಣಿಗೆ ಬೀಳುವುದೇನೋ ಸರಿ, ಆದರೆ ಕಾಲಿನ ಕಿರುಬೆರಳಿನ ಉಗುರು ಬಣ್ಣ ಹೇಗಿದ್ದರೇನಂತೆ? ಅದನ್ನು ಯಾರಾದರೂ ನೋಡುತ್ತಾರೆಯೇ ಎಂಬುದು ನನ್ನ ಅನುಮಾನ. ಉಹುಂ, ಹಂಸಲೇಖ ಹೇಳಿದ ಹಾಗೆ ತಲೆಯಿಂದ ಉಂಗುಷ್ಟದವರೆಗೂ ಎಲ್ಲಾ ಮಾತಿಲ್ಲ! ಕೊಂಕಿಲ್ಲ! ಆದರೆ, ಅದನ್ನೂ ಗಮನಿಸುವ ಸಮಾನ ಅಭಿರುಚಿಯವರಿರುತ್ತಾರೆಂದು ನನಗೆ ಆಮೇಲೆ ತಿಳಿಯಿತು.

ಇದೇನು? ಈ ಲೇಖನ ಗೊತ್ತುಗುರಿಯಿಲ್ಲದೆ ಎತ್ತೆತ್ತೆಲೋ ಸಾಗುತ್ತಿದೆ ಎಂದು ಅನಿಸುತ್ತಿದೆಯಲ್ಲವೇ? ನಾನೇನು ಮಾಡಲಿ? ನಾನು ಈ ಲೇಖನಕ್ಕೆ ಆರಿಸಿಕೊಂಡಿರುವ ವಿಷಯವೇ ಹರಟೆ. ಎಲ್ಲಿ? ಹೇಗೆ? ನಡೆಯಬೇಕೆಂಬ ಕಟ್ಟುಪಾಡುಗಳಾದರೂ ಹರಟೆಗೆಲ್ಲಿದೆ? ಸರಿ, ನನಗೆ ಸಮಾರಂಭಗಳಲ್ಲಿ ಭಾಗವಹಿಸಲು ಇಷ್ಟ ಎಂದೆನಲ್ಲವೇ? ಮತ್ತೆ ಆ ವಿಷಯಕ್ಕೇ ಬರುತ್ತೇನೆ.

ಮದುವೆ, ಮುಂಜಿ ಮುಂತಾದ ಸಮಾರಂಭಗಳಲ್ಲಿ ನಡೆಯುವ ಔಪಚಾರಿಕ ವಿಧಿವಿಧಾನಗಳಲ್ಲಿ ನನಗಿರುವ ಅಸಕ್ತಿ ಅಷ್ಟಕಷ್ಟೆ. ಆದರೆ ಅಲ್ಲಿ ಗುಂಪುಗುಂಪುಗಳಾಗಿ ನಡೆಯುವ ಹರಟೆಗಳಲ್ಲಿ ಭಾಗವಹಿಸುತ್ತಾ ನಕ್ಕುನಲಿಯುವುದು ನನಗೆ ತುಂಬಾ ಪ್ರಿಯವಾದ ಸಂಗತಿ. ಎಷ್ಟೋ ದಿನಗಳಿಂದ ಸಂಪರ್ಕದಲ್ಲೇ ಇರದ ಸ್ನೇಹಿತರು, ನೆಂಟರಿಷ್ಟರು, ಎಲ್ಲಿದ್ದಾರೆಂದೇ ತಿಳಿಯದಿದ್ದ ಪರಿಚಿತರು, ಎಲ್ಲಾ ಒಂದೆಡೆಗೆ ಮಾತಿಗೆ ಸಿಗುವುದು ಇಲ್ಲಿ ಮಾತ್ರ. ಇಂತಹ ಸುವರ್ಣ ಅವಕಾಶಗಳನ್ನು ಕಳೆದುಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತದೆ? ಆದರೆ ಈ ದೇಶಕ್ಕೆ ದಾರಿ ತಪ್ಪಿ ಬಂದು ಸಿಕ್ಕಿಹಾಕಿಕೊಂಡ ಮೇಲೆ, ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಸಮಾರಂಭಗಳನ್ನು ತಪ್ಪಿಸಿಕೊಂಡು ಕೊರಗುವುದು ನನಗೆ ಸಾಮಾನ್ಯವಾಗಿಬಿಟ್ಟಿದೆ.

ಹಾಳು ಹರಟೆಯಿಂದ ಸಮಯ ವ್ಯರ್ಥ ಎಂದು ಯಾರೆಷ್ಟೇ ದೂರಿದರೂ ಹರಟೆ ಕೊಡುವ ಸಂತಸ ಕಡಿಮೆಯೇನಿಲ್ಲ. ಮಾತು ಮನೆ ಕೆಡಿಸುವುದು ಎನ್ನುವ ಮಾತಿನಲ್ಲಿಯೂ ನಿಜವಿದೆ. ಆದರೆ ಮಾತಾಡದವರು ಏನೆಲ್ಲಾ ಮಹತ್ಸಾಧನೆಗಳನ್ನು ಮಾಡಿದ್ದರೂ, ಅಂತಹವರಿಂದ ಹರಟೆ ಮಾತ್ರ ಸಾಧ್ಯವಿಲ್ಲ. ಹುಬ್ಬುಗಂಟಿಕ್ಕಿಕೊಂಡೇ ಇರುವ ಜನರೂ ಕೂಡ ಹರಟೆಗೆ ಕಂಟಕವಾಗಿ ಪರಿಣಮಿಸಬಲ್ಲರು. ಹರಟೆ ಸುಗಮವಾಗಿ ಸಾಗಲು ಅಲ್ಲಿ ಸಮಾನಮನಸ್ಕರ, ಸರಸಿಗಳ ಗುಂಪೊಂದು ಇರಲೇಬೇಕು. ಸಮಯ ಸಂದರ್ಭವರಿತು, ಮಾತಿಗೊಂದು ಪ್ರತಿಮಾತನ್ನು ಜಾಣತನದಿಂದ ಪೋಣಿಸಬಲ್ಲ, ಸರಸ ಸ್ವಭಾವದವರೊಡನೆ ಹರಟುವ ಸುಖವೇ ಸುಖ!

ಈಗಲೂ ಕೆಲವು ಮನೆಗಳಲ್ಲಿ ಈ ಸಂಪ್ರದಾಯವಿರಬಹುದೇನೋ ಗೊತ್ತಿಲ್ಲ. ನಮ್ಮ ಮನೆಗಳಲ್ಲಂತೂ ಇದೆ. ಅದು ಊಟ ಮುಗಿದ ನಂತರ ಬಂದ ಅತಿಥಿಗಳೆಲ್ಲ ಒಂದೆಡೆ ಕಲೆತು, ತಾಂಬೂಲ ಸೇವಿಸುವ ಕಾರ್ಯಕ್ರಮ. ಎಲ್ಲರ ನಡುವೆ ಒಂದು ತಟ್ಟೆಯಲ್ಲಿ ಚಿಗುರೆಲೆ, ಬಣ್ಣ ಕಟ್ಟಿದ ಅಡಿಕೆ, ಸುಣ್ಣಗಳನ್ನು ಇಟ್ಟಿರಲಾಗುತ್ತದೆ. ಪಟ್ಟಾಂಗಕ್ಕೆ ರಂಗೇರುವ ಸಮಯವಿದು. ಮಾತಿನ ಮೋಡಿಯಲ್ಲಿ ಸಿಕ್ಕವರು ಅದೆಷ್ಟು ಎಲೆಗಳನ್ನು ಮಡಿಸಿ ನುಂಗಿದರೆಂಬ ವಿಷಯ ಲೆಕ್ಕಕ್ಕೇ ಸಿಕ್ಕದು. ಇಂತಹ ಹರಟೆಕಟ್ಟೆಯಲ್ಲಿ ಬಂದುಹೋಗದ ವಿಷಯವೇ ಇಲ್ಲವೆನ್ನಬಹುದು. ‘‘ಮೂಕಂ ಕರೋತಿ ವಾಚಾಲಂ’’ ಎನ್ನುವ ಉಕ್ತಿ ಇಲ್ಲಿಗೆ ಚೆನ್ನಾಗಿ ಅನ್ವಯವಾಗುತ್ತದೆ. ಎಂತಹ ಮೌನಿಗಾದರೂ ನಡುನಡುವೆ ಒಂದು ಮುತ್ತಿನಂತಹ ಮಾತಾಡಬೇಕೆನ್ನಿಸುವ ಆಸೆ ಆಗುವುದು ಸಹಜ. ಕೆಣಕು, ಕುಚೋದ್ಯದ ಮಾತಿನ ನಡುನಡುವೆ ಮಿಂಚಿನಂತೆ ಹುಟ್ಟಿಕೊಳ್ಳುವ ಹಾಸ್ಯಚಟಾಕಿಗಳಿಗೆ ಬರ ಉಂಟೇ?

ನಿರುದ್ದೇಶಿತವಾಗಿ ನಡೆಯುವ ಹರಟೆಗಳಲ್ಲಿಯೇ ಕೆಲವೊಮ್ಮೆ ಗಾಳಿಮಾತುಗಳು, ಗುಸುಗುಸುಗಳು ಜನ್ಮ ತಾಳುವುದುಂಟು. ಕ್ಷಣಿಕ ಹಾಸ್ಯಕ್ಕೆಂದು ಯಾರೊಬ್ಬರ ತೇಜೋವಧೆಯಾಗದಂತೆ ಎಚ್ಚರ ವಹಿಸದಿದ್ದರೆ ಅನರ್ಥ ಕಟ್ಟಿಟ್ಟ ಬುತ್ತಿ. ಉತ್ಸಾಹ, ಉಲ್ಲಾಸದಲ್ಲಿ ಸಾಗುತ್ತಿದ್ದ ಮಾತುಗಳು ಇದ್ದಕ್ಕಿದ್ದಂತೆ ಆವೇಶದ ದಾರಿ ಹಿಡಿಯುತ್ತವೆ. ಸರಸದ ಮಾತಿನ ಮಂಟಪ ವಿರಸದ ವೇದಿಕೆಯಾಗಿಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ಯಾರಾದರೊಬ್ಬರು ಸುಮ್ಮನಾಗುವುದೇ ಸರಿ. ಇಲ್ಲದಿದ್ದರೆ ಏನಾಗುತ್ತದೆಯೆಂದು ಗೊತ್ತಿದೆಯಲ್ಲವೇ? ಗೊತ್ತಿಲ್ಲದಿದ್ದರೆ ನಮ್ಮ ಜಾಣ ಸರ್ವಜ್ಞನನ್ನೇ ಕೇಳಿದರಾಯಿತು. ‘‘ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು ಆತುಕೊಂಡಂತೆ ಸರ್ವಜ್ಞ’’!

ಹರಟೆಯಿಂದಾಗುವ ಮುಖ್ಯ ಪ್ರಯೋಜನವೇನೆಂದರೆ ವಿಚಾರ ವಿನಿಮಯ. ಒಂದು ಉದಾಹರಣೆ ಕೊಡುತ್ತೇನೆ. ನೀವು ಮನೆಯೋ, ನಿವೇಶನವನ್ನೋ ಖರೀದಿಸಬೇಕೆಂದಿದ್ದರೆ, ಆ ವಿಷಯವನ್ನು ಹರಟೆ ಗುಂಪಿನ ನಡುವೆ ಪ್ರಸ್ತಾಪಿಸಿ ನೋಡಿ. ಎಷ್ಟು ಬಗೆಯ ಸಲಹೆಗಳು, ಉಪದೇಶಗಳು, ಅನುಭವದ ನುಡಿಗಳು ಹೊರಬರುತ್ತವೆ. ಆದರೆ ಯಾವುದನ್ನು ಎಷ್ಟು ಬಳಸಿಕೊಳ್ಳಬೇಕು ಎಂಬುದು ಅವರವರ ವಿವೇಚನೆಗೆ ಸೇರಿದ್ದು. ಎಲ್ಲವನ್ನೂ ನಂಬುವಂತಿಲ್ಲ, ನಂಬಬೇಕು, ನಂಬದೆ ಇರಬೇಕು, ನಂಬಿ ಕೆಡದಿದ್ದರೆ ಸರಿ.

ಕೆಲವು ವರ್ಷಗಳ ಹಿಂದೆ, ಬೆಂಗಳೂರು ಆಕಾಶವಾಣಿಯಲ್ಲಿ ಎ.ಎಸ್‌.ಮೂರ್ತಿಯವರು ನಡೆಸಿಕೊಡುತ್ತಿದ್ದ ‘‘ಮನೆ ಮಾತು’’ ಎಂಬ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ರುಚಿಯಾಗಿ ಹರಟುತ್ತಿದ್ದ ‘‘ಈರಣ್ಣ’’ನ ಮಾತುಗಳು ಉಪಯುಕ್ತ ಮಾಹಿತಿಯಿಂದ ಕೂಡಿರುತ್ತಿತ್ತು. ಹರಟೆ ಮುಗಿಸಿ, ಕಾಫಿ ಕುಡಿಯಲು ಮರೆತೇ ಹೋಗುತ್ತಿದ್ದ ಈ ಈರಣ್ಣನಿಗಾಗಿ ದಿನವೂ ಕಾಯುವವರಿದ್ದರು.

ಹಿಂದೆಲ್ಲ ಹಳ್ಳಿಗಳಲ್ಲಿರುತ್ತಿದ್ದ ಅರಳಿಕಟ್ಟೆ ಹರಟೆಮಲ್ಲರಿಗೆ ಹೇಳಿ ಮಾಡಿಸಿದ ಜಾಗವಾಗಿತ್ತು. ಕೆಲವೊಮ್ಮೆ ಇವು ದುಡಿಯಲಾರದ ಮೈಗಳ್ಳರ ಆವಾಸವೂ ಆಗಿ, ಹರಟೆ ಕಟ್ಟೆಗೆ ‘‘ಸೋಮಾರಿ ಕಟ್ಟೆ’’ ಎಂಬ ಅಡ್ಡ ಹೆಸರು ಅಂಟಿಕೊಳ್ಳುತ್ತಿತ್ತು. ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಶ್ರಮಜೀವಿಗಳು, ತಮ್ಮ ಈ ದುಡಿಮೆಯ ನಡುವೆ ಬಿಡುವು ಮಾಡಿಕೊಂಡು ಹರಟುತ್ತಾ ನಡುನಡುವೆ ಹಾಡುಹಸೆಗಳನ್ನು ಹೇಳಿಕೊಂಡು ಖುಷಿ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಮ್ಮಲ್ಲಿ ವಿಫುಲವಾಗಿರುವ ಗಾದೆಗಳು,ಒಗಟುಗಳು ಜೀವ ತಳೆದಿರುವುದು ಕೂಡ ಇಂತಹ ರಸನಿಮಿಷಗಳಲ್ಲಿಯೇ ಇರಬೇಕು.

ಲಲಿತ ಪ್ರಬಂಧಗಳ ಒಂದು ಪ್ರಕಾರವನ್ನು ‘‘ಹರಟೆ’’ ಎಂದೇ ಗುರುತಿಸುವುದು ಗಮನಾರ್ಹ. ಮಲೆನಾಡಿನ ಮನೆಗಳಲ್ಲಿ, ಅಡಿಕೆ ಸುಲಿಯುವ ರಾತ್ರಿಯ ಸಂತಸದ ಅನುಭವಗಳನ್ನು ಅನೇಕ ಲೇಖಕ/ಲೇಖಕಿಯರು ತಮ್ಮ ಬರಹಗಳಲ್ಲಿ ಸೆರೆ ಹಿಡಿದಿಟ್ಟಿದ್ದಾರೆ. ಕೆಲಸದ ಹೊರೆಯನ್ನು ಕಡಿಮೆ ಎನಿಸುವ, ಮಾಡುತ್ತಿರುವ ಕೆಲಸದ ಆಯಾಸವನ್ನು ಬಗೆಹರಿಸುವ, ಹಿರಿಕಿರಿಯರೆನ್ನುವ ಅಂತರವನ್ನು ಮರೆಸುವ ಚೇತೋಹಾರಿ ಹರಟೆ ಮನಸ್ಸಿಗೆ ಮುದ ನೀಡುತ್ತಿತ್ತು.

ಹೆಂಗಸರು ಮಾತಾಡುವುದು ಹೆಚ್ಚು ಎನ್ನುತ್ತಾರೆ. ಅದನ್ನೇ ಅಳತೆಗೋಲಾಗಿ ಇರಿಸಿಕೊಂಡರೆ ಹರಟೆಯಲ್ಲಿಯೂ ಹೆಂಗಸರೇ ಮುಂದಾಗುತ್ತಾರೆ. ಈ ಮಾತನ್ನು ಒಂದು ಟೀಕೆಯಾಗಿ ಪರಿಗಣಿಸದೆ ಹೆಂಗಸರು ಗಂಡಸರಿಗಿಂತ ಹೆಚ್ಚು ಸ್ನೇಹಜೀವಿಗಳು ಎಂದು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಮಾತು ಕೆಲವರಿಗೆ ಬೇಕು ಎನ್ನಿಸಿದರೆ ಕೆಲವರಿಗೆ ಬೇಡ. ವಾಚಾಳಿಯೊಬ್ಬನಿಗೆ ದೀರ್ಘಪಯಣವೊಂದರಲ್ಲಿ ಪಕ್ಕದ ಸೀಟಿನಲ್ಲಿ ಮಾತೇ ಆಡದ ಮೂಕ ಪ್ರಯಾಣಿಕನಿದ್ದರೆ ಅದೊಂದು ಮುಗಿಯದ ಪಯಣ ಎನ್ನಿಸದಿರದು. ಮಾತೇ ಬೇಡವಾದವರಿಗೆ ಇಂತಹ ಸಮಯದಲ್ಲಿ, ಯಾರಾದರೂ ಮಾತಾಡಿಸುವುದೂ ಕೂಡ ಕಿರುಕುಳದಂತೆ ಭಾಸವಾಗುತ್ತದೆ. ‘‘ಮಾತು ಬೆಳ್ಳಿ,ಮೌನ ಬಂಗಾರ’’ ಎಂಬ ಮಾತನ್ನು ಒಪ್ಪದವರು ‘‘ಮಾತಾಡು ಸಾಕು, ಮೌನ ಬಿಸಾಕು’’ ಎಂದು ಅಂಗಲಾಚಬೇಕಾಗುತ್ತದೆ.

ಆ ಕಾಲ ಹೋಯಿತು ಬಿಡಿ. ಎಳೆಬಿಸಿಲಿಗೆ ಮೈಯೊಡ್ಡಿ ತಮ್ಮ ಸುಖದು:ಖ ಮಾತಾಡಿಕೊಳ್ಳುತ್ತಿದ್ದ ಆ ಜನರೆಲ್ಲ ಈಗೆಲ್ಲಿ ಹೋದರೋ? ಅಲ್ಲದೆ ಈಗ ಎದುರುಬದುರಾಗಿ ಕುಳಿತು ಹರಟೆ ಹೊಡೆಯಲು ಜನರಲ್ಲಿ ಸಮಯದ ಅಭಾವವಿದೆ. ಮೊದಲಿನಂತೆ ಈಗ ಒಬ್ಬರ ಮನೆಗೆ ಒಬ್ಬರು ಏನಾದರೊಂದು ಕಾರಣವಿಲ್ಲದೆ ಹೋಗುವುದೂ ಕಡಿಮೆಯೇ. ಹಳ್ಳಿಗಳು ಊರು, ಊರುಗಳು ನಗರ, ನಗರಗಳು ಮಹಾನಗರಗಳಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ತಲುಪುವ ವೇಳೆಯೂ, ವೆಚ್ಚವೂ ಮುಖ್ಯವೆನಿಸುವುದರಿಂದ ಈಗ ದೂರವಾಣಿಗಳಲ್ಲಿ ಹರಟೆ ಹೊಡೆಯುವವರೇ ಹೆಚ್ಚು. ಆಗಲೂ ಕೂಡ ಅಗತ್ಯಕ್ಕಿಂತ ಹೆಚ್ಚು ಮಾತಾಡಿದರೇ ‘‘ಅಯ್ಯೋ, ಇಷ್ಟು ಹೊತ್ತು ಮಾತನಾಡಿ ಎಷ್ಟೊಂದು ಸಮಯ ಹಾಳುಮಾಡಿದೆನೇ? ಎಂಬ ಅಳುಕು ಕಾಡುತ್ತದೆ.

ಹೌದು. ಮಾತನಾಡಿದರೆ ಸಮಯ ವ್ಯರ್ಥ ಎಂಬ ಭಾವನೆ ನಮ್ಮಲ್ಲಿ ಮೂಡತೊಡಗಿದ್ದು ಯಾವಾಗಿನಿಂದ? ಅದಿರಲಿ, ಮಾತಾಡದಿದ್ದರೆ ನಿಜವಾಗಿಯೂ ಆ ಕಾಲವನ್ನು ಇನ್ನಷ್ಟು ಉಪಯುಕ್ತವಾಗಿ ಕಳೆದಿರುತ್ತಿದ್ದೆವೇ? ಆತ್ಮೀಯರೊಡನೆ ಆಪ್ತವಾಗಿ ನಾಲ್ಕು ಮಾತಾಡಲೂ ವಿನಿಯೋಗವಾಗದ ನಮ್ಮ ಸಮಯ ನಿಜವಾಗಿಯೂ ವ್ಯರ್ಥವೇ ಅಲ್ಲವೇ? ನಿಮಗೇನನ್ನಿಸುತ್ತದೆ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more