• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಖ ಎಲ್ಲಾರಿಗೆ ಎಲ್ಲೈತವ್ವಾ?

By Staff
|

ಸುಖ ಎಲ್ಲಾರಿಗೆ ಎಲ್ಲೈತವ್ವಾ?

ಬೂಟು ಧರಿಸಿದವನಿಗೆ ಮಾತ್ರ ಅದು ಎಲ್ಲಿ ಕಚ್ಚುತ್ತಿದೆ ಎಂದು ತಿಳಿದಿರುತ್ತದೆಯೇ ಹೊರತು ನೋಡುವವರಿಗಲ್ಲ. ನಾವು ಬೆನ್ನಟ್ಟಿಹೋಗುವ ಸುಖ ನಮ್ಮ ಕೈಗೆ ಸಿಗುವುದಿಲ್ಲ, ಒಂದು ವೇಳೆ ಸಿಕ್ಕರೂ, ಅದನ್ನು ಸುಖ ಎಂದು ಭಾವಿಸುವ ನಮ್ಮ ಮನಸ್ಥಿತಿಯೇ ಬದಲಾಗಿರುತ್ತದೆ. ಎಷ್ಟೆಲ್ಲಾ ಕಷ್ಟಪಟ್ಟು ಸುಖ ಅಂದುಕೊಂಡಿದ್ದನ್ನು ಕೈಗೆಟುಕಿಸಿಕೊಂಡ ಕೂಡಲೇ ಅದರ ಆಕರ್ಷಣೆಯೇ ಕಡಿಮೆಯಾಗಿ ಹೋಗುವುದೊಂದು ವಿಪರ್ಯಾಸವೇ ಸರಿ.

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲಿ

ಧನದಿಂದ ಸಂತೋಷ ಕೆಲವರಿಗೆ ಲೋಕದಲಿ

ಸತಿಯಿಂದ ಸಂತೋಷ ಕೆಲವರಿಗೆ ಲೋಕದಲಿ

ಸುತರಿಂದ ಸಂತೋಷ ಕೆಲವರಿಗೆ ಲೋಕದಲಿ

ಇನಿತು ಅವರವರ ಸಂತೋಷ ಅವರವರಿಗಾಗಲಿ

ಎನಗೆ ನಿನ್ನನ್ನು ನೆನೆವ ಸಂತೋಷ ಒಂದಿರಲಿ ರಂಗವಿಠಲಾ।

ಶ್ರೀಪಾದರಾಜರಿಂದ ವಿರಚಿತವಾಗಿರುವ ಈ ಉಗಾಭೋಗ ಸುಖ, ಸಂತೋಷಗಳು ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ ಎಂಬುದನ್ನು ಸೊಗಸಾಗಿ ನಿರೂಪಿಸುತ್ತಿದೆ. ಸುಖ! ಕಾಲದಿಂದ ಕಾಲಕ್ಕೆ, ಮನಸ್ಸಿನಿಂದ ಮನಸ್ಸಿಗೆ ವಿಭಿನ್ನವಾದ ಅನುಭವ ಕೊಡುವ ಇದರಂಥ ಸಂಕೀರ್ಣ ಮನಸ್ಥಿತಿ ಇನ್ನೊಂದಿರಲಾರರು. ಸುಖ ಎಂದರೇನು? ಅದೆಲ್ಲಿರುತ್ತದೆ? ಹೇಗಿರುತ್ತದೆ? ಯಾರಿಗೆ ಯಾವುದು ಸುಖ? ಸುಖ ಎಂದುಕೊಂಡಿದ್ದೇ ನಮ್ಮ ದು:ಖಕ್ಕೆ ಕಾರಣವಾಗುವುದೇಕೆ? ಕೇಳುತ್ತಾ ಹೋದರೆ ಪ್ರಶ್ನೆಗಳ ಸರಮಾಲೆಯೇ ಇದೆ. ಆದರೆ ಉತ್ತರ ಮಾತ್ರ ಸುಲಭವಲ್ಲ.

Is it possible to be Happy all the time like a kid?ಮೊಬೈಲು, ಇಮೈಲುಗಳ ಈ ಹೊಸಯುಗದಲ್ಲಿ ಪತ್ರ ವ್ಯವಹಾರ ಅಪರೂಪವಾಗಿರಬಹುದು. ಆದರೆ ಹಿಂದೆಲ್ಲಾ ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋದ ಮಗಳಿಗೆ ತಾಯಿಯಿಂದ ಬರುವ ಪತ್ರದಲ್ಲಿ ಒಂದು ಸಾಲು ತಪ್ಪದೆ ಕಾಣಿಸಿಕೊಳ್ಳುತ್ತಿತ್ತು. ‘‘ನಾವೆಲ್ಲ ಇಲ್ಲಿ ಕ್ಷೇಮ. ನೀನು ಸುಖವಾಗಿದ್ದೀಯಾ ಮಗಳೇ?’’ ಮಗಳು ಅಲ್ಲಿ ಹೇಗಿರುತ್ತಿದ್ದಳೋ, ಸಂತಸದ ಹೊನಲಿನಲ್ಲೇ ತೇಲುತ್ತಿದ್ದಳೋ, ಕಣ್ಣೀರಿನ ಕಡಲಿನಲ್ಲಿ ಮುಳುಗಿರುತ್ತಿದ್ದಳೋ ಯಾರಿಗೆ ಗೊತ್ತು? ಮಗಳಿಂದ ಅಮ್ಮನಿಗೆ ಬರುವ ಪ್ರತ್ಯುತ್ತರದಲ್ಲಿ ಒಂದು ಸಾಲು - ‘‘ನಾನು ಸುಖವಾಗಿದ್ದೀನಮ್ಮಾ. ನನ್ನ ಬಗ್ಗೆ ಏನೂ ಯೋಚನೆ ಮಾಡಬೇಡ.’’ ಅಷ್ಟೇ ಸಾಕು, ತಾಯಿಯ ಹೃದಯಕ್ಕೆ ಅದರಿಂದ ಪರಮ ಸುಖ!

ಬಾಲ್ಯದಲ್ಲಿ ನಾವು ಕೇಳುತ್ತಿದ್ದ ಕಥೆ ಅದಾವುದೇ ಆಗಿರಲಿ, ಎಲ್ಲದರ ಅಂತ್ಯ ಮಾತ್ರ ಒಂದೇ ‘‘ಕೊನೆಯಲ್ಲಿ ಅವರು ಸುಖವಾಗಿದ್ದರಂತೆ!’’ ಎಂಬುದು. ಅದೊಂದು ಮನುಷ್ಯ ಸಹಜ ಆಸೆ. ಕಷ್ಟ ಬೇಡೆಂಬಾಸೆ, ಕಡುಸುಖವ ಕಾಂಬಾಸೆ. ಹೇಗಾದರೂ ಸರಿ, ಸುಖವಾಗಿರಬೇಕು ಎಂಬುದು ಎಲ್ಲರ ಹೃದಯದ ಹಂಬಲ. ಮುಂದೆಂದೋ ಸುಖವಾಗಿರಲೆಂದು ಇಂದು ಪಾಡು ಪಡುತ್ತೇವೆ. ಎಂದೋ ಸಿಗುವ ಸುಖದ ಕನವರಿಕೆಯಲ್ಲಿ ಇಂದಿನ ನೋವುಗಳನ್ನು ಮರೆಯುತ್ತೇವೆ. ಹಾಗಾಗಿ ನಮ್ಮ ಮಾತುಕತೆಗಳಲ್ಲಿ ಈ ಪದದ ಉಪಯೋಗ ಬಹಳ ಹೆಚ್ಚು. ನಾವು ಯಾರನ್ನಾದರೂ ಮನದುಂಬಿ ಹಾರೈಸಲು ಬಯಸಿದಲ್ಲಿ ಅದಕ್ಕೆ ‘‘ಸುಖವಾಗಿರು’’ ಎಂಬುದಕ್ಕಿಂತ ಮತ್ತೊಂದು ಮಿಗಿಲಾದ ಪದ ಸಿಗಲಾರದು.

ಈ ಸುಖ ಎಲ್ಲಿ ಸಿಗುತ್ತದೆ? ಸುಖ, ಸಂತೋಷ ಅಂಗಡಿಯಲ್ಲಿ ಮಾರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಒಂದು ವೇಳೆ ಅದನ್ನೂ ಆ ರೀತಿ ಮಾರುವಂತಿದ್ದರೆ ಏನೇನಾಗುತ್ತಿತ್ತು ಎಂದು ಒಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ. ಅದಕ್ಕೂ ಮೀಸಲಾತಿಗಳು, ಮೋಸದ ಕಾನೂನು ಕಟ್ಟಲೆಗಳು, ಉಳ್ಳವರ ಕೊಳ್ಳುಬಾಕತನ, ಇಲ್ಲದವರ ಹಾಹಾಕಾರ, ಕಾಳಸಂತೆಯ ಖದೀಮರ ಕಾರಸ್ಥಾನಗಳ ನಡುವೆ ನಮ್ಮಂತಹ ಆರಕ್ಕೇರದ, ಮೂರಕ್ಕಿಳಿಯದ ಮಧ್ಯಮವರ್ಗದ ಜನರಿಗೆ ಕೊನೆಗೆ ಮೂಸಿ ನೋಡಲಾದರೂ ಸುಖ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಗಿಲ್ಲವೆನ್ನುವುದೇ ಸಮಾಧಾನದ ಸಂಗತಿ.

ಅನೇಕ ಸಲ ನಾವು ಯಾವುದನ್ನೋ ಸುಖವೆಂದು ಭ್ರಮಿಸುತ್ತೇವೆ. ಆದರೆ ಅಲ್ಲಿ ಸುಖದ ಹಾಜರಾತಿ ಇರುವುದೇ ಇಲ್ಲ. ನೀವು ಪರಸ್ಪರ ವೈಷಮ್ಯ ಇರುವ ಎರಡು ಕುಟುಂಬಗಳ ನಡುವೆ ಆಪ್ತವಾಗಿ ಓಡಾಡಿಕೊಂಡಿದ್ದರೆ ಒಂದು ವಿಷಯ ಅನುಭವಕ್ಕೆ ಬಂದಿರುತ್ತದೆ. ಆ ಕುಟುಂಬದವರು ತುಂಬಾ ಸುಖವಾಗಿದ್ದಾರೆಂದು ಈ ಕುಟುಂಬದವರೆಲ್ಲ ಒಮ್ಮತದಿಂದ ನಿರ್ಧರಿಸಿರುತ್ತಾರೆ. ಅವರಿಗೇ ನಮಗಿಂತ ಸಂತೋಷವಾಗಿರಲು ಹೆಚ್ಚು ಕಾರಣಗಳಿವೆ ಎಂದು ಇನ್ನೊಂದು ಕುಟುಂಬ ಕುದಿಯುತ್ತಿರುತ್ತದೆ. ಇಬ್ಬರ ಅಂತರಂಗವನ್ನೂ ತಿಳಿದು ನಡುವೆ ತಟಸ್ಥರಾಗಿರುವ ನಿಮಗೆ ನಿಚ್ಚಳವಾಗಿ ಗೊತ್ತಾಗಬೇಕಾದ ಸತ್ಯವೇನೆಂದರೆ - ‘‘ಸುಖವೆಂಬುದು ಈ ಎರಡು ಕುಟುಂಬಗಳಲ್ಲಿಯೂ ಇಲ್ಲವೇ ಇಲ್ಲ’’ ಎಂಬುದು!

ಸಾಮಾನ್ಯ ಅರ್ಥದಲ್ಲಿ, ಖರ್ಚು ಮಾಡುವುದಕ್ಕೆ ಕೈತುಂಬಾ ಹಣವಿರುವ ಸ್ಥಿತಿಯನ್ನೇ ನಾವು ಸುಖ ಎಂದು ಭಾವಿಸಿಕೊಳ್ಳುವುದರಿಂದ, ಹಣವಂತರೆಲ್ಲ ಸುಖಿಗಳಾಗಿದ್ದಾರೆಂದೇ ತಿಳಿಯುತ್ತೇವೆ. ಯಾರಾದರೂ ತಮಗೆ ನೋವಿದೆ ಎಂದು ಹೇಳಿದರೆ ‘‘ಕೂತು ತಿಂದರೂ ಕರಗದಷ್ಟು ಹಣವಿರುವ ನಿನಗೇನು ಧಾಡಿ?’’ ಎಂದು ಅವರ ವ್ಯಥೆಯನ್ನು ತಳ್ಳಿ ಹಾಕುವವರೇ ಹೆಚ್ಚು. ಬಡತನದ ಬೇಗೆಯನ್ನು ಅನುಭವಿಸಿದವರಿಗೆ, ಬಡತನಕ್ಕಿಂತ ದೊಡ್ದ ದು:ಖ ಇನ್ನೊಂದಿಲ್ಲ ಎಂದು ಅನ್ನಿಸುವುದರಿಂದ ಹೊಟ್ಟೆ ಬಟ್ಟೆಗೆ ನೆಟ್ಟಗಿದ್ದರೆ ಅದೇ ಸುಖ ಎಂದು ನಂಬುವವರೇ ಅಧಿಕ.

ಈ ನಂಬಿಕೆಯೇ ನಿಜವಾಗಿದ್ದರೆ, ತೆರಿಗೆ ತಪ್ಪಿಸಿಕೊಳ್ಳಲು ಯಾರುಯಾರದ್ದೋ ಹೆಸರಿನಲ್ಲಿ ಆಸ್ತಿ ಖರೀದಿಸುವ ರಾಜಕಾರಣಿಗಳು ಅತ್ಯಂತ ಸುಖಿಗಳ ಪಟ್ಟಿಯಲ್ಲಿ ಮೊದಲು ಇರಬೇಕಾಗಿತ್ತು. ನಂತರದ ಸ್ಥಾನ ಸಿನಿಮಾ ತಾರೆಗಳದ್ದಾಗಬೇಕಾಗಿತ್ತು. ಅಧಿಕಾರದಾಸೆಗಾಗಿ ಎಂತಹ ನೀಚತನಕ್ಕೂ ಇಳಿಯುವ, ಪ್ರತಿ ಕ್ಷಣವೂ ಕುರ್ಚಿ ಅಲುಗಾಡುವ ದು:ಸ್ವಪ್ನದಿಂದ ತತ್ತರಿಸುವ ರಾಜಕಾರಣಿಗಳನ್ನು ಸುಖಿಗಳೆಂದು ಕರೆಯಲಾದೀತೇ? ಐಷಾರಾಮದಲ್ಲಿ ಬದುಕುವ ಸಿನಿಮಾದವರನ್ನು ಸುಖಿಗಳೆಂದು ಒಪ್ಪಿಕೊಳ್ಳೋಣವೆಂದರೆ, ಅಕಾಲದಲ್ಲಿ ಮರಣ ಹೊಂದಿದ ನಟನಟಿಯರ ಮುಖಗಳು ಕಣ್ಮುಂದೆ ಸುಳಿಯುತ್ತವೆ. ಅಷ್ಟೊಂದು ಸುಖವಿದ್ದ ಬದುಕನ್ನು ಎಡಗಾಲಲ್ಲಿ ಒದ್ದು ನಟನಟಿಯರು ಆತ್ಮಹತ್ಯೆಗೆ ಶರಣಾಗುವುದಾದರೂ ಯಾಕೆ ಮತ್ತೆ?

ಬೂಟು ಧರಿಸಿದವನಿಗೆ ಮಾತ್ರ ಅದು ಎಲ್ಲಿ ಕಚ್ಚುತ್ತಿದೆ ಎಂದು ತಿಳಿದಿರುತ್ತದೆಯೇ ಹೊರತು ನೋಡುವವರಿಗಲ್ಲ. ನಾವು ಬೆನ್ನಟ್ಟಿಹೋಗುವ ಸುಖ ನಮ್ಮ ಕೈಗೆ ಸಿಗುವುದಿಲ್ಲ, ಒಂದು ವೇಳೆ ಸಿಕ್ಕರೂ, ಅದನ್ನು ಸುಖ ಎಂದು ಭಾವಿಸುವ ನಮ್ಮ ಮನಸ್ಥಿತಿಯೇ ಬದಲಾಗಿರುತ್ತದೆ. ಎಷ್ಟೆಲ್ಲಾ ಕಷ್ಟಪಟ್ಟು ಸುಖ ಅಂದುಕೊಂಡಿದ್ದನ್ನು ಕೈಗೆಟುಕಿಸಿಕೊಂಡ ಕೂಡಲೇ ಅದರ ಆಕರ್ಷಣೆಯೇ ಕಡಿಮೆಯಾಗಿ ಹೋಗುವುದೊಂದು ವಿಪರ್ಯಾಸವೇ ಸರಿ. ಅದಕ್ಕೇ ಇರಬೇಕು ಸುಖದ ಹಂಬಲವನ್ನು ಬಲ್ಲವರು ಮರೀಚಿಕೆಗೆ ಹೋಲಿಸಿರುವುದು. ಒಟ್ಟಿನಲ್ಲಿ ಸುಖದ ಹುಡುಕಾಟ ನಿರಂತರ.

ಅದೇ ರೀತಿ ಸುಖವೆಂದುಕೊಂಡಿದ್ದರಲ್ಲಿ ಸುಖವಿರುವುದಿಲ್ಲ. ಒಬ್ಬರಿಗೆ ಸುಖವೆನಿಸಿದ್ದು ಮತ್ತೊಬ್ಬರಿಗೂ ಸುಖ ತರಲಾರದು. ತಂಪಾದ ಕೆಸರು ರಾಡಿಯಲ್ಲಿ ಮುಳುಗಿರುವ ಎಮ್ಮೆಗೆ ತನಗಿಂತ ಸುಖಿ ಯಾರಿಲ್ಲವೆಂಬ ಭಾವನೆ ಇದ್ದರೂ ಇರಬಹುದು. ಆದರೆ ಕೆಸರು ಬಟ್ಟೆಗೆ ಸಿಡಿದರೂ ಕಿರಿಕಿರಿ ಅನುಭವಿಸುವ ನಮಗೆ ಅದು ಸುಖವೆನಿಸದು. ಮಾದಕ ವ್ಯಸನಗಳಲ್ಲಿ ಮುಳುಗಿ ಸ್ವರ್ಗಸುಖ ಅನುಭವಿಸುತ್ತಿದ್ದೇನೆಂದು ಭಾವಿಸುವ ವ್ಯಕ್ತಿಯನ್ನು ನೋಡಿ ಪ್ರಜ್ಞಾವಂತನೊಬ್ಬನಿಗೆ ಕನಿಕರವೆನಿಸುತ್ತದೆಯೇ ಹೊರತು ತನಗೂ ಅಂತಹ ಸುಖ ಬೇಕೆನಿಸುವುದಿಲ್ಲ.

ಗುರಿ ತಲುಪಿದ ಆನಂದಕ್ಕಿಂತಲೂ, ಗುರಿಯತ್ತ ನಡೆಯುವ ಪಯಣವೇ ಸೊಗಸು. ಇದೇ ಮಾತು ಸುಖಕ್ಕೂ ಅನ್ವಯಿಸುತ್ತದೆ. ಎಂದೋ ಸುಖವಾಗಿರಬೇಕೆಂದು,ಅದಕ್ಕಾಗಿ ಇಂದು ತಯಾರಿ ಮಾಡಿಟ್ಟುಕೊಳ್ಳುವುದರಲ್ಲಿಯೇ ಜನ ಸುಖ ಕಾಣುತ್ತಾರೆಯೇ ಹೊರತು ಆ ಫಲವನ್ನು ಅವರು ಅನುಭವಿಸುತ್ತಾರೆಂಬ ಖಾತರಿ ಇಲ್ಲ. ನಿವೃತ್ತಿಯ ನಂತರ ಸುಖವಾಗಿರಬೇಕೆಂದು ಹೊಟ್ಟೆಬಟ್ಟೆ ಕಟ್ಟಿ, ಒಂದು ದಿನವೂ ವಿರಾಮವಿಲ್ಲದಂತೆ ದುಡಿಯುವ ವ್ಯಕ್ತಿ ನಿವೃತ್ತಿಯ ದಿನವೇ ಮರಣಿಸಿದಲ್ಲಿ, ಅವನಿಗೆ ಸುಖ ಪಡುವ ಅವಕಾಶ ಇನ್ನೆಲ್ಲಿ ಒದಗೀತು? ತನ್ನ ಕನಸಿಗಾಗಿ ಹಗಲಿರುಳು ದುಡಿದಿದ್ದು ಮಾತ್ರವೇ ಅವನ ಪಾಲಿನ ಸುಖ.

ಸುಖ ಎಲ್ಲರಿಗೂ ಒಲಿಯುವುದಿಲ್ಲ. ಕೆಲವರು ಮಾತ್ರ ಸುಖವಾಗಿರುತ್ತಾರೆ, ಹಲವರು ಇಲ್ಲ. ಯಾಕೆ ಹೀಗೆ? ಎಂಬ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮನ್ನು ಕಾಡದಿರದು. ನಾವು ಜನ್ಮಾಂತರಗಳನ್ನು ನಂಬುತ್ತೇವಾದ್ದರಿಂದ ಅದಕ್ಕೂ ನಮ್ಮಲ್ಲಿ ಉತ್ತರವಿದೆ. ನಮ್ಮ ಸುಖ-ದು:ಖದ ಲೆಕ್ಕಾಚಾರಗಳು ಜನ್ಮಾಂತರದಲ್ಲೇ ತೀರ್ಮಾನವಾಗಿರುತ್ತವೆ. ಹಿಂದಿನ ಜನ್ಮದಲ್ಲಿ ಮಾಡಿದ ಸತ್ಫಲಗಳಿಗೆ ಸಿಗುವ ಪ್ರತಿಫಲವೇ ಈ ಜನ್ಮದ ಸುಖಭೋಗಗಳು. ಬಹಳ ಕಷ್ಟದಲ್ಲಿರುವ ವ್ಯಕ್ತಿಗಳನ್ನು ಕುರಿತು ಮಾತಾಡುವಾಗ ‘‘ಅವರು ಸುಖ ಪಡುವುದನ್ನು ಕೇಳಿಕೊಂಡು ಬಂದಿಲ್ಲ’’ ಎಂಬುದು ಬಹು ಸಾಮಾನ್ಯವಾಗಿ ಕೇಳಿ ಬರುವ ಮಾತು.

ಇದನ್ನೇ ಕನಕದಾಸರು ‘‘ಮುನ್ನ ಕೊಟ್ಟು ಪಡೆಯಲಿಲ್ಲ, ಬಯಸಲೇತಕೇ?’’ ಎನ್ನುತ್ತಾರೆ. ಬ್ಯಾಂಕಿನಲ್ಲಿ ಠೇವಣಿಯನ್ನೇ ಇರಿಸದೆ, ಬಡ್ಡಿಗಾಗಿ ಆಸೆ ಪಡುವುದೇಕೆ ಎನ್ನುವಷ್ಟೇ ಸರಳವಾಗಿದೆ ಅವರ ಮಾತಿನ ಇಂಗಿತ. ಮಾಡಿದ್ದನ್ನೇ ಉಣ್ಣುವ, ಕೊಟ್ಟಿದ್ದನ್ನೇ ಪಡೆಯುವ ನಮ್ಮ ಕರ್ಮ ಸಿದ್ಧಾಂತವನ್ನು ನಂಬುವುದು, ನಂಬದಿರುವುದು ಪೂರ್ತಿ ವ್ಯಕ್ತಿಗತ ವಿಷಯ. ಆದರೂ ಮುಂದೆಂದೋ ಬರುವ ಕಷ್ಟ-ಕಾರ್ಪಣ್ಯಗಳಿಗೆ ಭಯಪಟ್ಟಾದರೂ, ಇಂದು ಒಳಿತು ಮಾಡಲು ಪ್ರೇರಣೆ ಸಿಗುವಂತಾದರೆ ಅದರಿಂದ ಕೇಡೇನಿರದು.

ಈ ಕರ್ಮ ಸಿದ್ಧಾಂತವನ್ನು ಒಪ್ಪದ ‘‘ಋಣಮ್‌ ಕೃತ್ವಾ ಘೃತಂ ಪಿಬೇತ್‌’’ ಎನ್ನುವ ಚಾರ್ವಾಕವಾದಿಗಳಿಗೂ ನಮ್ಮಲ್ಲಿ ಕಡಿಮೆ ಇಲ್ಲ. ಇರುವಷ್ಟು ದಿನ ಎಲ್ಲಾ ರೀತಿಯ ಸುಖಗಳನ್ನೂ ಸೂರೆಗೊಂಡು ಬಿಡಬೇಕೆನ್ನುವ ಮನೋಭಾವ ಈ ಜನರದು. ಅದೊಂದು ಸುಖದ ಹಸಿವು. ಸಮುದ್ರವನ್ನೇ ಬೊಗಸೆಯಲ್ಲಿ ಹಿಡಿದು ಗಟಗಟನೆ ಕುಡಿದುಬಿಟ್ಟ ಅಗಸ್ತ್ಯ ದಾಹ. ಈ ರೀತಿಯ ಸುಖದ ಹಪಾಹಪಿ ನೋಡುವವರಲ್ಲಿ ಓಕರಿಕೆ ತರಿಸುವುದುಂಟು. ಮನಸ್ಸಿನ ತಣಿಯದ ಬಯಕೆಗಳನ್ನು ಪೂರೈಸಲು ತನ್ನದೇ ಆದ ಇತಿಮಿತಿ ಹೊಂದಿರುವ ದೇಹ ಎಂದಿಗೂ ಸಹಕರಿಸದು. ಹಿತಮಿತ ಜೀವನ ವಿಧಾನವನ್ನು ಧಿಕ್ಕರಿಸಿ, ವಿಷಯಸುಖಗಳ ಬೇಟೆಯಾಡಲು ಹೊರಟವರು ಕೈಯಲ್ಲಿರುವ ಹಣವನ್ನು ಮಾತ್ರವಲ್ಲದೆ, ಅಮೂಲ್ಯ ಆರೋಗ್ಯ, ಆಯುಷ್ಯಗಳನ್ನೂ ಕಳೆದುಕೊಂಡು ನಾಶವಾಗಿ ಹೋಗುತ್ತಾರೆ. ಅತಿಯಾಗದ, ಮಿತಿ ಮೀರದ ಹಿತಮಿತವೇ ಸುಖ!

ಇರಲಿ, ಸುಖದ ಬಗ್ಗೆ ಏನೇ ವಿವರಣೆ ನೀಡಬಹುದಾದರೂ ಅದರ ಪೂರ್ಣ ಸ್ವರೂಪವನ್ನು ಕಣ್ಮುಂದೆ ತರುವುದು ಸಾಧ್ಯವಿಲ್ಲ. ಒಟ್ಟಿನಲ್ಲಿ ಸುಖ ಮತ್ತು ದೇವರು ಎರಡೂ ಒಂದೇ. ಕಣ್ಣಿಗೆ ಕಾಣದೊಂದು ಮನಸ್ಸಿನ ಮಧುರ ಅನುಭವ. ಇದೆ ಅಂದುಕೊಂಡರೆ ಇದೆ, ಇಲ್ಲ ಅಂದರೆ ಇಲ್ಲ. ಇದೆ ಎಂದು ವಾದಿಸುವವರು ಅದನ್ನು ತಮ್ಮಲ್ಲಿಯೇ ಕಂಡುಕೊಂಡಿರುತ್ತಾರೆ. ಇಲ್ಲವೆನ್ನುವವರು ಅದನ್ನು ಹೊರಗೆಲ್ಲೋ ಹುಡುಕಿ ನಿರಾಶರಾಗಿರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more