• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲವಿನ ಋಣವ ತೀರಿಸಲೆಂತೋ?

By Staff
|


ಋಣ ಭಾರ :

ಸಾಲ ಮತ್ತು ಋಣ ಈ ಎರಡು ಪದಗಳ ಅರ್ಥವೂ ಒಂದೇ ಆದರೂ ನಾವು ಅದನ್ನು ಬೇರೆ ಬೇರೆ ಅರ್ಥದಲ್ಲಿ ಬಳಸುತ್ತೇವೆ. ಸಾಲ ಸ್ವಪ್ರಯತ್ನದಿಂದ ಆಗುವುದಾದರೆ, ಋಣಗಳು ನಮ್ಮ ಅರಿವಿಲ್ಲದೆ ನಮ್ಮ ಹೆಗಲೇರುತ್ತವೆ. ಸಾಲ ಬಹುತೇಕ ಸಂದರ್ಭಗಳಲ್ಲಿ ಹಣ,ಚಿನ್ನ ಮುಂತಾದ ಭೌತಿಕ ರೂಪದಲ್ಲಿದ್ದರೆ ಋಣ ಅಗೋಚರ. ಕೆಲವರು ಏನನ್ನಾದರೂ ಸಾಲವಾಗಿ ಪಡೆದಾರು. ಆದರೆ ಚಿಟಿಕೆ ಉಪ್ಪನ್ನು ಮಾತ್ರ ಬೇರೆಯವರಿಂದ ಸಾಲವಾಗಿ ಸ್ವೀಕರಿಸಲು ಭಯಪಡುತ್ತಾರೆ. ಯಾಕೆಂದರೆ ಅದು ಉಪ್ಪಿನ ಋಣವಾಗಿ ಜನ್ಮಾಂತರದಲ್ಲೂ ಹಿಂಬಾಲಿಸುವ ಹೊರೆಯಾಗಿ ಕಾಡುವುದಂತೆ. ಅಧರ್ಮದ ವಿರುದ್ಧ ಸೊಲ್ಲೆತ್ತದಂತೆ, ಭೀಷ್ಮ, ದ್ರೋಣಾದಿಗಳ ನಾಲಿಗೆಯನ್ನೇ ಕಟ್ಟಿ ಹಾಕಿದ್ದು ಅವರುಂಡಿದ್ದ ಕೌರವನ ಅನ್ನದ ಋಣವೇ ತಾನೇ?

ಮಾತೃ ಋಣ, ಪಿತೃ ಋಣ, ಭೂಮಿಯ ಋಣ, ನೀರಿನ ಋಣ... ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಶಬ್ದಗಳಿವು. ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗುತ್ತಿರುತ್ತದೆ. ಈ ಋಣಗಳನ್ನು ಸಾಲ ಕೊಟ್ಟವರಂತೆ ತಲೆ ಮೇಲೆ ಕೂತು ಯಾರೂ ವಸೂಲು ಮಾಡುವುದಿಲ್ಲವಾದರೂ, ಆ ಋಣವನ್ನು ಕಳೆದುಕೊಳ್ಳುವ ಹೊಣೆ ನಮ್ಮ ಮೇಲಿರುತ್ತದೆ. ಸಾಮಾನ್ಯ ಜನಗಳಿಗಿಂತ ಸಿನಿಮಾ ಜನ ಈ ಋಣಗಳ ಬಗ್ಗೆ ಸ್ವಲ್ಪ ಹೆಚ್ಚೇ ಭಾವುಕರಾಗುತ್ತಾರೆ. ನಾಯಕ ನಟನಾದವನು ತೆರೆಯ ಮೇಲೆ ನಾಡ ಬಾವುಟ ಕೈಯಲ್ಲಿ ಹಿಡಿದು ಹಾಡಿ, ಕುಣಿದು ಕುಪ್ಪಳಿಸಿ ತನ್ನ ತಾಯ್ನಾಡ ಋಣವನ್ನು ಸುಲಭವಾಗಿ ಕಳೆದುಕೊಂಡರೆ, ನಾಯಕಿಯರು ಯಥಾಶಕ್ತಿ ಅತ್ತೂ ಕರೆದು ಮಣ್ಣಿನ ಋಣ, ಕಣ್ಣೀರಿನ ಋಣ ತೀರಿಸುತ್ತಾರೆ.

ವಿಪರ್ಯಾಸವೆಂದರೆ ಈ ಎಲ್ಲಾ ಋಣಗಳನ್ನು ನಾವು ಕಳೆದುಕೊಳ್ಳಲು ಪ್ರಯತ್ನಿಸಬಹುದೇ ಹೊರತು, ಪೂರ್ತಿ ಕಳೆದುಕೊಳ್ಳಲಾರೆವು. ತನ್ನ ಮಗುವನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮೊದಲ ಅಕ್ಷರವನ್ನು ಮಮತೆಯಿಂದ ಬರೆಸಿ, ವಿದ್ಯಾವಂತರನ್ನಾಗಿಸಿದ ತಂದೆ,ತಾಯಿಯ ಋಣವನ್ನು, ಒಂದಿಷ್ಟು ಹಣದ ಮೂಲಕ, ಉಡುಗೊರೆಗಳ ಮೂಲಕ ಕಳೆದುಕೊಳ್ಳುತ್ತೇವೆಂದು ಮಕ್ಕಳು ಭಾವಿಸಿದರೆ ಅಥವಾ ಭ್ರಮಿಸಿದರೆ ಅದಕ್ಕಿಂತ ಮೂರ್ಖತನ ಬೇರೇನಿದ್ದೀತು? ಇದೇ ರೀತಿ ಹೇಳ್ಕೊಳಕ್ಕೊಂದೂರಿನಿಂದ ಹಿಡಿದು, ತನ್ನಲ್ಲಿನ ಸಂಸ್ಕೃತಿ ಸಾರವನ್ನೇ ನಮಗರಿವಾಗುವ ಮೊದಲೇ ರಕ್ತದಲ್ಲಿ ತುಂಬಿಸಿಬಿಡುವ ನಾಡಿನ ಋಣ? ದೇಶದ ಋಣ? ಭಾಷೆಯ ಋಣ? ಕಳೆದುಕೊಂಡವರಿದ್ದಾರೆಯೇ? ಎಲ್ಲಿ?

ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಜೀವನವೆಂಬುದು ಋಣದ ರತ್ನ ಗಣಿಯೋ

ಎನ್ನುತ್ತಾನೆ ಋಣಭಾರದಡಿಯಲ್ಲಿ ಕುಸಿದು ಹೋಗಿರುವ ಒಬ್ಬ ಕವಿ. ಒಂದು ಜನ್ಮದಲ್ಲಿ ಪಡೆದ ಒಂದು ಋಣವನ್ನೇ ತೀರಿಸಲಾರದ ನಾವು, ಜನ್ಮಾಂತರಗಳಿಂದ ಹೊತ್ತು ತಂದ ಅಸಂಖ್ಯ ಋಣಗಳನ್ನು ಎಂದಿಗಾದರೂ ತೀರಿಸುವುದಿದೆಯೇ? ಋಣಗಳನ್ನು ಕಳೆದುಕೊಳ್ಳಲಾರೆವೆಂದು ಗೊತ್ತಿದ್ದರೂ ಋಣಮುಕ್ತರಾಗುವ ಹಂಬಲ ನಮಗೇಕೆ? ಒಂದಲ್ಲಾ ಒಂದು ವಿಧದಲ್ಲಿ ಪ್ರತಿಯೊಬ್ಬರೂ ಹಲವು ಋಣಗಳನ್ನು ಹೊತ್ತ ಚಿರಋಣಿಗಳು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more