• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಲೋಕ! ಲೋಕ... ಸ್ನೇಹ ಲೋಕ!

By Staff
|
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

ದುಗುಡ ಮಡುವಾದ ಮೋಡವ ತಡೆದು

ಕಂಬನಿಗರೆಸುವ ಬೆಟ್ಟಗಳು

ಮನಸಿಗೆ ಮೆತ್ತಿದ ಕೊಳೆಯನು ತೊಳೆಯುವ

ನಿರ್ಮಲ ಸ್ನಾನಘಟ್ಟಗಳು!

ಗೆಳೆಯರಿರಲಿ ಈ ಬಾಳಿನಲಿ

ಗೆಳೆಯರಿರಲಿ ಕೊನೆ ತನಕ!

- ಇವು ಕವಿ ಬಿ.ಆರ್‌ ಲಕ್ಷ್ಮಣರಾಯರ ‘‘ಗೆಳೆಯರಿರಲಿ....’’ ಕವನದಲ್ಲಿನ ಮುದ್ದಾದ ಸಾಲುಗಳು! ಕವಿಯೇನೋ ತಮ್ಮ ಈ ಕವನದ ಮೂಲಕ ‘‘ಗೆಳೆಯರಿರಲಿ ಕೊನೆತನಕ’’ ಎಂದು ಹಾರ್ದಿಕವಾಗಿ ಹಾರೈಸಿದ್ದಾರೆ. ಅದು ಎಲ್ಲರ ಪಾಲಿಗೂ ನಿಜವಾಗುವುದು ಅನುಮಾನವೇ. ಬಹಳಷ್ಟು ಸಂದರ್ಭಗಳಲ್ಲಿ ಈ ಸ್ನೇಹ ಒಂದು ಸವಿಗನಸಿನಂತೆ, ಸಕ್ಕರೆಗಿಂತ ಸಿಹಿಯಾದ ನೆನಪೊಂದನ್ನು ಎದೆಯಲ್ಲಿ ಉಳಿಸಿ ಹಾಗೆಯೇ ಕರಗಿ ಹೋಗುವುದೇ ಹೆಚ್ಚು.

ಸ್ನೇಹ ಬದುಕಿನ ಯಾವುದೇ ಕಾಲಘಟ್ಟದಲ್ಲಿ ಅರಳಿಕೊಳ್ಳಬಹುದು. ಬಾಲ್ಯದಲ್ಲಿಯೋ, ಯುೌವ್ವನದಲ್ಲಿಯೋ ಅಥವಾ ಬದುಕಿನ ಮತ್ತಾವುದೋ ಹಂತದಲ್ಲಿ ಪ್ರಾರಂಭವಾಗುವ ಗೆಳೆತನ, ಕಾಲವೆಂಬ ಹಳಿಯ ಮೇಲೆ ಬದುಕಿನ ಬಂಡಿ ಉರುಳುತ್ತಾ ನಡೆದಂತೆ ಮಸುಕಾಗುತ್ತಾ ಹೋಗುತ್ತದೆ. ಶಾಲಾಕಾಲೇಜು ದಿನಗಳಲ್ಲಿ ಶುರುವಾದ ಸ್ನೇಹ ಓದು ಮುಗಿದ ನಂತರ, ಉದ್ಯೋಗದೊಂದಿಗೆ ಬೆಸೆದ ಸ್ನೇಹ ವರ್ಗಾವಣೆಯ ನಂತರ, ಬ್ರಹ್ಮಚಾರಿ ಬದುಕಿನ ಸ್ನೇಹ ವಿವಾಹದ ನಂತರ ದೂರವಾಗುವುದು ಸಹಜ.

ಎಲ್ಲೋ ಕೆಲವರು ಮಾತ್ರ ಅಂದಿನ ಸ್ನೇಹವನ್ನು ಇಂದಿಗೂ ಹಸಿರಾಗಿಟ್ಟುಕೊಂಡಿರಬಹುದು. ಇನ್ನು ಹೆಂಗಸರ ವಿಷಯಕ್ಕೆ ಬಂದರೆ ಇದ್ದಿದ್ದೂ ಮೋಸವೇ. ಸಂಸಾರದ ಜಂಜಾಟದಲ್ಲಿ ಸಿಲುಕಿ, ತವರಿನ ಕಡೆಯ ಸಂಬಂಧಗಳೇ ವಿರಳವಾಗುತ್ತಾ ಹೋಗುವ ಅವರಿಗೆ, ಎಂದಿನದೋ ಸ್ನೇಹವನ್ನು ಕಾದಿರಿಸಿಕೊಳ್ಳುವುದಂತೂ ಇನ್ನೂ ಕಷ್ಟವೇ. ಆದರೆ ಸ್ನೇಹಿತರೊಡನೆ ಸಂಪರ್ಕ ಇಲ್ಲದಿದ್ದರೂ, ಆ ನೆನಪು ಮಾತ್ರ ಹಾಲಿನಲ್ಲಿ ಅಡಗಿದ ನೊರೆಯಂತೆ ಮನಸ್ಸಿನಲ್ಲಿ ಉಳಿದುಕೊಂಡಿರುತ್ತದೆ. ಎಲ್ಲೋ, ಯಾವುದೋ ಜನಜಂಗುಳಿಯ ನಡುವೆ ಬಹುಕಾಲ ಜೊತೆಗಿದ್ದ ಗೆಳೆಯನೋ, ಗೆಳತಿಯೋ ಎದುರಾದಾಗ ‘‘ನೆನಪೈತಾ ನಿಂಗೆ ಮರಕೋತಿ ಆಟ? ನೆನಪೈತಾ ನಿಂಗೆ ಬೆಳದಿಂಗಳೂಟ?’’ ಎಂದು ಮನಸ್ಸು ಒಂದು ಕ್ಷಣ ಆ ಮಧುರ ನೆನಪುಗಳಲ್ಲಿ ಮಿಂದೆದ್ದು ಬರುವುದುಂಟು.

A true friend is someone who thinks that you are a good egg even though he knows that you are slightly cracked ಇದು ಗೆಳೆತನದ ಬಗೆಗೆ ಇರುವ ಒಂದು ಸುಂದರ ವ್ಯಾಖ್ಯೆ. ಗೆಳೆಯನ ಗುಣದ ಜೊತೆಗೆ ಅವನ ದೋಷಗಳನ್ನೂ ಸ್ವೀಕರಿಸುವವನು ಮಾತ್ರವೇ ನಿಜವಾದ ಗೆಳೆಯ. ನಮ್ಮ ಆತ್ಮೀಯ ಮಿತ್ರರ ಮುಂದೆ ನಾವು ನಾವೇ ಆಗಿರುತ್ತೇವೆ. ಅಲ್ಲಿ ಬೇರಾವುದೇ ತೋರಿಕೆಯ ಅಹಂಕಾರಗಳಿರುವುದಿಲ್ಲ. ಗೆಳೆಯರೊಡನೆ ಸಂತಸವನ್ನು ಹಂಚಿಕೊಳ್ಳುವಷ್ಟೇ ಮುಕ್ತವಾಗಿ ನಮ್ಮ ಸಂಕಟವನ್ನೂ ಹಂಚಿಕೊಳ್ಳಲು ಸಾಧ್ಯ. ಇಂತದೊಂದು ಪರಿಪೂರ್ಣ ಗೆಳೆತನವೊಂದು ನಮ್ಮದಾಗಿಬಿಟ್ಟರೆ, ಅಲ್ಲಿಗೆ ಧನ್ಯ ನಮ್ಮ ಜೀವನ.

ಆದರೆ ಇದು ಅಷ್ಟು ಸುಲಭ ಸಾಧ್ಯವೇನಲ್ಲ. ನಿಜವಾದ ಗೆಳೆಯ/ಗೆಳತಿ ಎಲ್ಲಿರುತ್ತಾರೆ? ಹೇಗಿರುತ್ತಾರೆ? ಎಂದು ಪತ್ತೆ ಮಾಡಿಕೊಳ್ಳುವುದು ಬಣವೆಯಲ್ಲಿ ಸೂಜಿ ಹುಡುಕುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ. ಯಾವುದೇ ಸ್ವಾರ್ಥದ ಮುಖವಾಡಗಳಿಲ್ಲದ ನಿಜವಾದ ಸ್ನೇಹವನ್ನು ಗುರುತಿಸುವುದಂತೂ ಇದ್ದಿದ್ದೂ ಕಠಿಣ. ಇಂತಹ ಕೃತ್ರಿಮ ಸ್ನೇಹದಿಂದ ರೋಸಿದ ಮನಸ್ಸು, ಕೆಲವೊಮ್ಮೆ ನಕಲಿ ಮತ್ತು ಅಸಲಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫಲವಾಗಿ, ನಿರ್ಮಲ ಸ್ನೇಹವನ್ನು ಕೂಡ ಅನುಮಾನಿಸಿ ದೂರ ತಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

ಸ್ನೇಹದ ಬಗೆಗಿನ ಈ ಪೀಠಿಕೆ ಹಾಕುತ್ತಾ ನಾನು ಕೃಷ್ಣ -ಸುದಾಮ, ದುರ್ಯೋಧನ - ಕರ್ಣರ ಕಥೆ ಹೇಳುತ್ತೇನೆಂದು ನೀವಂದುಕೊಂಡಿದ್ದರೆ ಅದು ತಪ್ಪು. ನನಗೀಗ ನೆನಪಾಗುತ್ತಿರುವುದು ಸ್ನೇಹಲೋಕ! ಯಾವುದೀ ಸ್ನೇಹಲೋಕ ಎಂದಿರಾ? ಸ್ನೇಹಲೋಕವೆಂಬ ಯಶಸ್ವೀ ಚಲನಚಿತ್ರವಿದೆ, ನಟ ವಿಷ್ಣುವರ್ಧನ್‌ ‘ಸ್ನೇಹಲೋಕ’ವೆಂಬ ತಮ್ಮದೇ ಗೆಳೆಯರ ಗುಂಪನ್ನು ಕಟ್ಟಿಕೊಂಡಿದ್ದಾರೆ. ನಾನೀಗ ಹೇಳಲು ಹೊರಟಿರುವುದು ಆ ಸ್ನೇಹಲೋಕದ ಬಗೆಗಲ್ಲ. ಅದು ಅಂತರ್ಜಾಲದ ಮೂಲಕ ನನಗೆ ಲಭ್ಯವಾಗಿರುವ ಈ - ಸ್ನೇಹ ಲೋಕ!

ಅಮೆರಿಕಾಗೆ ಬಂದ ಹೊಸದರಲ್ಲಿ ನಾನು ಅನುಭವಿಸಿದ ಒಂಟಿತನದ ಬಗ್ಗೆ ಈ ಹಿಂದೆ ನೆನಪು ಮಾಡಿಕೊಂಡಿದ್ದೆ. ಒಮ್ಮೆ ನಾನು ದಟ್ಸ್‌ ಕನ್ನಡದ ಬರಹಗಾರ್ತಿಯೆಂದು ಗುರುತಿಸಿಕೊಂಡ ಮೇಲೆ ನನ್ನಲ್ಲೆಂದೂ ಆ ಭಾವನೆ ಮತ್ತೆ ಕಾಣಿಸಿಕೊಳ್ಳಲೇ ಇಲ್ಲ. ಲೇಖನದಿಂದ ಲೇಖನಕ್ಕೆ ತುಳಸಿವನ ಬೆಳೆಯುತ್ತಾ ಹೋದಂತೆ ನನ್ನ ಸ್ನೇಹಿತರ ಗುಂಪು ಕೂಡ ಅದರೊಂದಿಗೆ ಬೆಳೆಯತೊಡಗಿತು. ನನ್ನ ಈ ಸ್ನೇಹಿತರಲ್ಲಿ ಕೆಲವರನ್ನು ಮಾತ್ರ ನೋಡಿದ್ದೇನೆ. ಕೆಲವರೊಡನೆ ಮಾತಾಡಿದ್ದೇನೆ. ಮತ್ತೆ ಕೆಲವರರನ್ನು ಎಂದಾದರೂ ಭೇಟಿ ಮಾಡುತ್ತೇನೋ, ಇಲ್ಲವೋ ತಿಳಿಯದು. ಏಕೆಂದರೆ, ಅವರು ನನ್ನಿಂದ ಬಹಳ ದೂರದಲ್ಲಿರುವವರು. ದೂರದಲ್ಲಿದ್ದೂ, ಪತ್ರಗಳಿಂದ ಹತ್ತಿರವಾದ ಪತ್ರ ಮಿತ್ರರು. ಪತ್ರಕ್ಕೊಂದು ಪತ್ರ, ಪತ್ರದ ಮೇಲೊಂದು ಪತ್ರ....ಹೀಗೆ ಪತ್ರಗಳ ಲೆಕ್ಕ ಬೆಳೆಸುತ್ತಲೇ ಇರುವ ಚಿತ್ರಗುಪ್ತರು!

ಸ್ನೇಹವೆಂಬುದು ಸಮಾನ ವಯಸ್ಕ, ಸಮಾನ ಮನಸ್ಕರ ನಡುವೆ ಮಾತ್ರ ಸಾಧ್ಯವೆಂಬುವ ಮಾತಿಗೆ ಅಪವಾದ ಈ ನನ್ನ ಸ್ನೇಹಿತರ ಬಳಗ. ಅಲ್ಲಿ ನನಗಿಂತ ಹಿರಿಯರೂ, ನನಗಿಂತ ಬಹಳ ಕಿರಿಯರೂ ಇದ್ದಾರೆ. ‘‘ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆಂದು ನನಗನ್ನಿಸುತ್ತಿದೆ. ಅವಳಾಗಿ ಏನೂ ಹೇಳುತ್ತಿಲ್ಲ. ನನ್ನ ಪ್ರೀತಿಯನ್ನು ಅವಳಿಗೆ ತಿಳಿಸುವುದು ಹೇಗಕ್ಕಾ?’’ - ಎಂದು ತಲೆಯ ಮೇಲೆ ಬೆಟ್ಟವನ್ನೇ ಹೊತ್ತಷ್ಟು ಗಾಂಭೀರ್ಯದಿಂದ ನನ್ನನ್ನು ಪ್ರಶ್ನಿಸುವ, ಮುಖದ ಮೇಲೆ ಮೀಸೆ ಕೂಡ ಮೂಡಿರದ ಅಬೋಧ ಮನಸ್ಸಿನ ಪುಟ್ಟ ತಮ್ಮಂದಿರು ಅಲ್ಲಿದ್ದಾರೆ.

ಆ ಎಳೆಯ ವಯಸ್ಸಿನ ಪತ್ರ ಮಿತ್ರರಿಗೆ -‘‘ಈ ಪ್ರೇಮಗೀಮದ ಹುಚ್ಚು ಬಿಟ್ಟು ಮುಂದೆ ಬರಲಿರುವ ನಿನ್ನ ಪರೀಕ್ಷೆಗಳಿಗೆ ತೆಪ್ಪಗೆ ಓದಿಕೋ ಹೋಗು’’ ಎಂದು ಒರಟಾಗಿ ಉತ್ತರಿಸಲು ನನಗೆ ಮನಸ್ಸಾಗುವುದಿಲ್ಲ. ‘‘ಅವಳ ಪ್ರೀತಿ ನಿನಗೆ ತಿಳಿದ ಹಾಗೆ, ಅವಳ ಮೇಲಿರುವ ನಿನ್ನ ಪ್ರೀತಿ ಕೂಡ ನಿಜವೇ ಆಗಿದ್ದರೆ, ಕಾಲ ಬಂದಾಗ ಅವಳಿಗೆ ತಿಳಿದೇ ತಿಳಿಯುತ್ತದೆ ಬಿಡು. ನಿನ್ನ ಜೀವನವನ್ನು ಮೊದಲು ರೂಪಿಸಿಕೊಳ್ಳೋ ಮಂಕುತಿಮ್ಮಾ’’ ಎಂದು ತಮಾಷೆಯಿಂದಲೇ ಆ ಮಾತು ಮರೆಸಿಬಿಡುತ್ತೇನೆ.

ಈ ಲೇಖನದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಬಾರದೆಂದುಕೊಂಡಿದ್ದೆ. ಆದರೆ ನನ್ನ ಹಿರಿಯ ಗೆಳೆಯರ ಬಳಗದಲ್ಲಿ ಪ್ರಮುಖರಾದ ಚಿಕ್ಕಮಗಳೂರಿನ ಪೆಜತ್ತಾಯರ ಬಗ್ಗೆ ಹೇಳದಿದ್ದರೆ ಈ ಲೇಖನವೇ ಅಪೂರ್ಣವೆನಿಸೀತು. ಅವರು ದಟ್ಸ್‌ಕನ್ನಡದಲ್ಲಿ ಬರೆಯುವ ಎಲ್ಲ ಲೇಖಕರ ಪಾಲಿಗೆ ಗಾಡ್‌ಫಾದರ್‌ ಇದ್ದಂತೆ. ಅವರ ಪತ್ರವಿಲ್ಲದ ದಿನ ನಮಗೆ ಸಪ್ಪೆ! ಅರವತ್ತರ ನಂತರವೂ ಅಚ್ಚಳಿಯದ ಇವರ ಜೀವನೋತ್ಸಾಹವನ್ನು ಕಂಡು ನನಗೆ ಇನ್ನಿಲ್ಲದ ಬೆರಗು. ಏರಿಳಿತ ತುಂಬಿದ ಬದುಕಿನ ಪಯಣದಲ್ಲಿ, ಜೀವನ ಪ್ರೀತಿಯನ್ನು ಎಂದಿಗೂ ಜಾರಗೊಡದ ಈ ಹಿರಿಯರನ್ನು ಕುರಿತು ‘‘ದೇಶ ಅಲೆದ ಕೋಶ ತಿಳಿದ ಆಶಾವಾದಿ ಭೂತವೇ’’ ಎಂದು ನಾನೊಂದು ಭೂತಸ್ತುತಿಯನ್ನೇ ರಚಿಸಿ ಹತ್ತಿರದ ಮಿತ್ರರಿಗೆಲ್ಲ ಓದಲು ಕೊಟ್ಟಿದ್ದೆ.

ದೀಪಾವಳಿಯ ದಿನವೇ ಇರಬೇಕು. ನಮಗೆ ನಡುರಾತ್ರಿ. ನಾನಿನ್ನೂ ಗಣಕದ ಮುಂದೆಯೇ ಇದ್ದೆ. ಸದ್ದು ಮಾಡಿದ ದೂರವಾಣಿಯನ್ನು ಮೇಲೆತ್ತಿದರೆ ಹಬ್ಬದ ಶುಭಾಶಯ ಹೇಳುತ್ತಿರುವ ಪೆಜತ್ತಾಯರ ಧ್ವನಿ. ನನಗೇನೋ ಹಬ್ಬದ ದಿನದಂದು ಅವರ ಅನಿರೀಕ್ಷಿತ ಶುಭಾಶಯವನ್ನು ಕೇಳಿ ಬಹಳ ಸಂತೋಷವಾಯಿತು. ಆದರೆ ಅವರಿಗೆ ಕಿವಿಯ ತೊಂದರೆಯಿಂದ ದೂರವಾಣಿಯ ಮಾತುಗಳನ್ನು ಕೇಳಿಸಿಕೊಳ್ಳಲು ಕಷ್ಟವಾಗುತ್ತದೆ. ಪೆಜತ್ತಾಯರ ಪ್ರೀತಿ ತುಂಬಿದ ನುಡಿಗಳು ನನ್ನನ್ನು ತಲುಪಿದವೇ ಹೊರತು ನನ್ನ ಮಾತುಗಳೊಂದೂ ಅವರಿಗೆ ಕೇಳಿಸಲೇ ಇಲ್ಲ. ಇದು ತಿಳಿದಿದ್ದು ಮರುದಿನ ಬಂದ ಅವರ ಪತ್ರದಿಂದ. ಆದರೆ ನಮ್ಮ ಪೆಜತ್ತಾಯರು ಇಷ್ಟಕ್ಕೆಲ್ಲ ನಿರಾಶರಾಗುವವರಲ್ಲವೆಂದು ನನಗೆ ಗೊತ್ತು. ಬಹುಶ:, ಅಂದು ಫೋನ್‌ ಕೆಳಗಿಟ್ಟೊಡನೆ ‘‘ಈ ಸಂಭಾಷಣೆ ನಮ್ಮ ಈ ಮೌನ ಸಂಭಾಷಣೆ’’ ಎಂದು ತಮ್ಮನ್ನೇ ತಾವು ತಮಾಷೆ ಮಾಡಿಕೊಂಡು ನಕ್ಕಿದ್ದರೂ ನಕ್ಕಿರಬಹುದೇನೋ!

ಅಪಾರ ಪಾಂಡಿತ್ಯ, ಉನ್ನತ ಜೀವನಾನುಭವ, ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿರುವ ನನ್ನೆಲ್ಲ ಸ್ನೇಹಿತ/ಸ್ನೇಹಿತೆಯರು ತಮ್ಮ ಹೆಸರನ್ನು ಉಲ್ಲೇಖಿಸಿದರೂ ಮುಜುಗರ ಪಡುವಂತಹ ಸಂಕೋಚದ ಸ್ವಭಾವದವರು. ಹಾಸ್ಯ ಪ್ರಜ್ಞೆಯ, ಸರಳ ವ್ಯಕ್ತಿತ್ವದ, ಪರೋಪಕಾರಿಗಳಾಗಿರುವ ಈ ನನ್ನ ಎಲ್ಲಾ ಮಿತ್ರರು ತಮ್ಮ ಪತ್ರಗಳಿಂದಲೇ ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಬದುಕನ್ನು ಪ್ರೀತಿಸುವುದನ್ನು, ಗೌರವಿಸುವುದನ್ನು ನಾನು ಈ ಮಿತ್ರರನ್ನು ನೋಡಿಯೇ ಕಲಿತೆ. ಇನ್ನೂ ಕಲಿಯುತ್ತಿದ್ದೇನೆ.

ಒಮ್ಮೊಮ್ಮೆ, ಯಾವುದೋ ಬೇಸರ ಮನಸ್ಸನ್ನು ಆವರಿಸುತ್ತದೆ. ಏನನ್ನೂ ಬರೆಯುವುದು ಬೇಡ ಅನ್ನಿಸುತ್ತದೆ. ಬರೆಯುವುದು ಏನಿಲ್ಲ, ಬರೆದಿದ್ದೆಲ್ಲ ಮುಗಿಯಿತು ಎಂಬ ಖಾಲಿತನ ಕಾಡುತ್ತದೆ. ಏನು ಬರೆದು ಏನಾಗಬೇಕಿದೆ? ಎಂಬ ಸಿನಿಕತನ ನನ್ನನ್ನು ಪೂರ್ತಿಯಾಗಿ ಆವರಿಸಿ ಕೊಳ್ಳುವ ಮುನ್ನ, ಈ ಗುಂಡಗಿನ ಭೂಗ್ರಹದ ಯಾವುದೋ ಮೂಲೆಯಿಂದ ಒಂದು ಬೆಚ್ಚಗಿನ ಪತ್ರ ಬಂದು ನನ್ನ ಅಂಚೆಪಟ್ಟಿಗೆ ತಲುಪುತ್ತದೆ.

ಆ ಪತ್ರದಲ್ಲಿ ನಾನೆಂದೂ ಕಂಡು ಕೇಳರಿಯದ ಜಾಗದಲ್ಲಿರುವ ಸ್ನೇಹಿತೆಯೊಬ್ಬರ ಸವಿನುಡಿ ಹೀಗಿರುತ್ತದೆ - ‘‘ನೀವೇಕೆ ಏನು ಬರೆದಿಲ್ಲ? ನಿಮ್ಮ ಬರಹಗಳು ನನ್ನ ನೊಂದ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ನಿಮ್ಮ ಲೇಖನ ಓದದಿದ್ದರೆ ಏನೋ ಕಳಕೊಂಡ ಅನುಭವ....’’ ಅಲ್ಲಿ ಬರೆದಿರುವುದೆಲ್ಲ ಖಂಡಿತ ನಿಜವಲ್ಲವೆಂದು ಪತ್ರದ ಎರಡು ತುದಿಗಳಲ್ಲಿರುವವರಿಗೂ ಗೊತ್ತು. ಪಕ್ಷಕ್ಕೋ, ತಿಂಗಳಿಗೋ ನಾನು ಬರೆಯುವ ಲೇಖನಗಳನ್ನು ಓದದೇ ಇರುವುದರಿಂದ ಅವರಿಗಾಗಲೀ, ನನಗಾಗಲೀ ಯಾವುದೇ ನಷ್ಟವಿಲ್ಲವೆಂಬುದು ಕೂಡ ಇಬ್ಬರಿಗೂ ಚೆನ್ನಾಗಿ ಗೊತ್ತು. ಆದರೂ ಆ ಪತ್ರದ ಹಿಂದಿರುವ ನಿರ್ಮಲ ಅಂತ:ಕರಣವೊಂದು ನನ್ನನ್ನು ಹಿತವಾಗಿ ತಾಗುತ್ತದೆ. ಅರ್ಥವಿಲ್ಲದ, ಸ್ವಾರ್ಥವಿಲ್ಲದ ಆ ಶುದ್ಧ ಸ್ನೇಹ ನನ್ನ ಕೈಹಿಡಿದೆಳೆಯುತ್ತದೆ. ಏನೂ ಬರೆಯಲಾರೆನೆಂದು ಮುಷ್ಕರ ಹೂಡಿದ್ದ ಕೈಗಳು ಮತ್ತೆ ಕೀಲಿಮಣೆಯನ್ನು ತಡವುತ್ತವೆ. ಮನಸ್ಸು ತನ್ನ ಪ್ರೀತಿಯ ಅದೇ ಸಾಲುಗಳನ್ನು ಮತ್ತೆ ಮತ್ತೆ ಗುನುಗತೊಡಗುತ್ತದೆ -

ಸ್ನೇಹವೆಂದರೆ ನಿಜದ ನಿಶಾನೆ

ಗುಟ್ಟನು ಕಾಯುವ ಹೃದಯ ಖಜಾನೆ

ಹೃದಯವಾಣಿಗೆ ಬೋಲೋ ಜೈ! ಬೋಲೋ ಜೈ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more