• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರು ವರವನು ಕೊಟ್ರೆ...

By Staff
|

Seeking Gods Blessingsದೇವರು ವರ ಕೊಡಲು ಹೆಸರುವಾಸಿ ಎಂಬುದಂತೂ ನಿಜ. ಹಾಗಿದ್ದ ಮೇಲೆ ದೇವರನ್ನು ಯಾರು ಏನು ಕೇಳಿಕೊಳ್ಳುತ್ತಾರೆಂದು ನೋಡೋಣ. ‘‘ದೇವರು ವರವನು ಕೊಟ್ರೆ ನಿನ್ನೇ ಬೇಡುವೆ’’ ಎಂದೊಬ್ಬ ಪ್ರೇಮಿ ಹಾಡಿದರೆ, ಇನ್ನೊಬ್ಬ ಅಮರ ಪ್ರೇಮಿ, ದೇವರೇ ಬಂದು ಬೇಡಿಕೋ ಎಂದರೂ,‘‘ಬೇಡೆನು ಏನು ನೀನಿರುವಾಗ ಹೊಸ ಆಸೆ ನನಗೇಕೆ ಇನ್ನು?’’ ಎಂದು ತನ್ನ ಪ್ರೇಮವನ್ನೇ ದೈವತ್ವಕ್ಕೇರಿಸುತ್ತಾನೆ.

ವಿರಕ್ತ ಹರಿದಾಸರು ನಾನಿನ್ನೊಳೇನು ಬೇಡುವುದಿಲ್ಲ ಹೃದಯಮಂದಿರದಲಿ ನೆಲೆಸಿರು ದೊರೆಯೇ’’ ಎಂದು ವರ ಕೊಡುವವನನ್ನೇ ವಶವಾಗಿಸಿಕೊಳ್ಳುವ ಜಾಣತನ ತೋರುತ್ತಾರೆ. ಮತ್ತೊಂದು ದಾಸರ ಕೀರ್ತನೆಯಲ್ಲಿ ‘‘ಬೇಡದಂದದಿ ಮಾಳ್ಪ ವರ’’ ವನ್ನು ಕೇಳಿಕೊಳ್ಳುವ ಭಕ್ತನೊಬ್ಬನ ಕೋರಿಕೆ ಮಹತ್ವದ್ದೆನಿಸುತ್ತದೆ. ಇದರಲ್ಲಿ, ಏನೊಂದೂ ಬೇಕು ಅನ್ನಿಸದಂತಹ ಆಸೆ ರಹಿತ ಮನಸ್ಥಿತಿ, ಆಸೆ ಪಡುವ ಪ್ರತಿಯಾಂದೂ ದೊರಕಿದ್ದು, ಹೊಸದಾಗಿ ಮತ್ತೇನನ್ನೂ ಬೇಡದಂತಹ ಸಂತೃಪ್ತ ಸ್ಥಿತಿ - ಇವೆರಡರಲ್ಲಿ ಯಾವುದು ದೊರೆತರೂ ಅದಕ್ಕಿಂತ ಸೌಭಾಗ್ಯ ಮತ್ತೇನಿದೆ?

ಯಾವುದೇ ದೇವಾಲಯದಲ್ಲಿ ಹೋಗಿ ನೋಡಿದರೂ, ಭಕ್ತರು ಕಣ್ಣುಗಳನ್ನು ಮುಚ್ಚಿ, ತುಟಿಗಳಲ್ಲಿ ಪಿಟಿಪಿಟಿ ಎಂದು ದೇವರನ್ನು ಸ್ತುತಿಸುತ್ತಾ, ಜೊತೆಗೆ ತಮ್ಮ ಕೋರಿಕೆಗಳನ್ನು ಸಲ್ಲಿಸುತ್ತಿರುವ ಸಾಮಾನ್ಯ ದೃಶ್ಯವೊಂದು ಕಣ್ಣಿಗೆ ಬೀಳುತ್ತದೆ. ‘‘ಬ್ರೂಸ್‌ ಆಲ್‌ಮೈಟಿ’’ ಎಂಬ ಇಂಗ್ಲಿಷ್‌ ಚಿತ್ರದಲ್ಲಿ, ಜಗತ್ತಿನ ಭಕ್ತರೆಲ್ಲರ ಕೋರಿಕೆಗಳನ್ನು, ಏಕಕಾಲದಲ್ಲಿ ಕೇಳಿಸಿಕೊಳ್ಳುತ್ತಿರುವ ದೇವರ ತಲೆ ಚಿಟ್ಟು ಹಿಡಿದು ಹೋಗುವ ಹಾಸ್ಯಮಯ ಸನ್ನಿವೇಶವೊಂದಿದೆ.

ಏನಾದರೊಂದು ಬೇಡುತ್ತಲೇ ಇರುವ ಬಹುಸಂಖ್ಯಾತ ಬೇಡುಬಾಕರ ನಡುವೆ, ಏನೂ ಬೇಡವೆನ್ನುವ ಅಪರೂಪದ ಸಜ್ಜನರನ್ನು ಕಂಡರೆ ದೇವರ ಮನಸ್ಸಿಗೆ ಹಾಯೆನ್ನಿಸದಿದ್ದೀತೆ? ಇಗೋ, ದೇವರಂತಹ ದೇವರೂ ಮೆಚ್ಚಿ ತಲೆದೂಗುವ ಕವಿ ಕೆ.ಎಸ್‌.ನರಸಿಂಹಸ್ವಾಮಿಯವರ ವಿನಯಭರಿತ ಸಾಲುಗಳಿವು -

‘‘ಎಲ್ಲವನ್ನೂ ಕೊಟ್ಟಿರುವೆ ಏನ ಬೇಡಲಿ?

ಜಗವ ನನಗೆ ಬಿಟ್ಟಿರುವೆ ಏಕೆ ಕಾಡಲಿ?’’

ಹೌದಲ್ಲವೇ! ವಾಸಕ್ಕೆ ಅನುಪಯುಕ್ತವೆನಿಸುವ ಬೃಹತ್‌ ಗಾತ್ರದ ಅಸಂಖ್ಯ ಗ್ರಹಗಳ ನಡುವೆ ಪುಟ್ಟದೊಂದು ತಾಯಿ ಭೂಮಿ, ಈ ಜಗವನ್ನು ಕತ್ತಲೆ ಮುಸುಕದಂತೆ ಪೊರೆಯಲೊಬ್ಬ ಧೀಮಂತ ಸೂರ್ಯ, ಅವನ ಧಗೆ ಅಸಹನೀಯವೆನಿಸಿದಾಗ ಭೋರೆಂದು ಸುರಿಯುವ ಮಳೆ, ಬೀಸಿ ಬರುವ ತಂಗಾಳಿ, ಕಣ್ಣಿಗೆ ಹಿತ ತುಂಬುವ ಹಸಿರು, ಮೆತ್ತನೆ ಮಕಮಲ್ಲು ಹುಲ್ಲು, ಪುಟ್ಟ ಯಜಮಾನಿಯಂತೆ ತಲೆ ಎತ್ತಿ ನಿಂತ ಹೂವು, ಅಮೃತ ಸದೃಶ ಹಾಲು, ಬಾಯಾರಿದ ನಾಲಿಗೆಗೆ ಜೀವಜಲ...

ದೇವರು ಏನು ತಾನೇ ಕೊಟ್ಟಿಲ್ಲ ನಮಗೆ? ಬಿ.ಆರ್‌.ಲಕ್ಷ್ಮಣರಾವ್‌ ಬರೆಯುವಂತೆ, ಎಲ್ಲವನ್ನೂ ಕೊಟ್ಟಿರುವ ದೇವರನ್ನೇ ಅಲ್ಲಗಳೆಯುವ ಬುದ್ಧಿಯನ್ನೂ ಕೂಡ ನಮಗೆ ದೇವರೇ ಕೊಟ್ಟಿದ್ದು!

ಕೈಯ ಕೊಟ್ಟೆ ಕೆಡವಲೆಂದು

ಕಾಲು ಕೊಟ್ಟೆ ಎಡವಲೆಂದು

ಬುದ್ಧಿ ಕೊಟ್ಟೆ ನಿನ್ನನ್ನೇ ಅಲ್ಲಗಳೆಯಲು!

ಈ ಬಾರಿ ದೇವರಲ್ಲಿ ಪ್ರಾರ್ಥಿಸುವಾಗ ನೀವೆಲ್ಲ ಏನೇನು ವರಗಳನ್ನು ಬೇಡುತ್ತೀರೋ ಗೊತ್ತಿಲ್ಲ, ನನ್ನ ಬೇಡಿಕೆಯಂತೂ ಇದು. - ದೇವರೇ, ನಿರಾಸೆಯ ಸುಳಿಯಲ್ಲಿ ಸಿಕ್ಕರೂ ಮನಸ್ಸು ನಿನ್ನಲ್ಲಿ ನಂಬಿಕೆ ಕಳೆದುಕೊಳ್ಳದಂತೆ ಮಾಡು! ಕ್ಷಣಕ್ಷಣವೂ ಬೆದರಿಕೆ ಒಡ್ಡುವ ಈ ಬದುಕಿಗಿಷ್ಟು ಅಭಯ ಪ್ರದಾನ ಮಾಡು!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X