ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ವರವನು ಕೊಟ್ರೆ...

By Staff
|
Google Oneindia Kannada News


ದೇವರಲ್ಲಿ ಪ್ರಾರ್ಥಿಸುವಾಗ ನೀವೆಲ್ಲ ಏನೇನು ವರಗಳನ್ನು ಬೇಡುತ್ತೀರೋ ಗೊತ್ತಿಲ್ಲ, ನನ್ನ ಬೇಡಿಕೆಯಂತೂ ಇದು. - ದೇವರೇ, ನಿರಾಸೆಯ ಸುಳಿಯಲ್ಲಿ ಸಿಕ್ಕರೂ ಮನಸ್ಸು ನಿನ್ನಲ್ಲಿ ನಂಬಿಕೆ ಕಳೆದುಕೊಳ್ಳದಂತೆ ಮಾಡು!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
    [email protected]
Seeking Gods Blessingsಈ ಪ್ರಪಂಚವನ್ನು ಸೃಷ್ಟಿಸಿ, ಪಾಲಿಸಿ, ಕೊನೆಗೆ ಪ್ರಳಯದೊಡನೆ ಅದನ್ನು ಲಯವಾಗಿಸುವ ಮಾಮೂಲು ಕೆಲಸಗಳ ಜೊತೆಗೆ ದೇವರ ಇನ್ನೊಂದು ಅತಿಮುಖ್ಯ ಕೆಲಸವೇನು ಗೊತ್ತಾ? ಅದು, ಭಕ್ತರು ಕರೆದಾಗಲೆಲ್ಲ, ಸಮಯಾಸಮಯವಿಲ್ಲದೆ ಬಂದು ವರ ಕೊಡುವುದು. ಅವರ ಕೋರಿಕೆಗಳನ್ನು ಈಡೇರಿಸುವುದು. ದೇವರನ್ನು ವರ ಬೇಡುವುದು ಭಕ್ತರ ಆಜನ್ಮ ಸಿದ್ಧ ಹಕ್ಕು! ಭಕ್ತ ಪರಾಧೀನರಾಗಿರುವ ದೇವರು ಈ ವರ ನಿನಗೇಕೆ? ಈಗೇಕೆ? ಆಮೇಲೆ ಕೊಟ್ಟರಾಗದೇ? ಎಂದು ವಿಚಾರಣೆ ಮಾಡುವಂತಿಲ್ಲ. ಹಾಗಾಗಿ ದೇವರು ವರಗಳನ್ನು ನೀಡುವ ವರದ! ಆಕ-ಸ್ಮಾತ್‌ ದೇವರು ಕೊಟ್ಟರೂ ಪೂಜಾರಿ ಕೊಡದಿದ್ದರೆ ಅದಕ್ಕೆ ದೇವರು ಹೊಣೆಗಾರನಲ್ಲ!

ನಮಗೆ ‘‘ಬೇಡುವೆನು ವರವನ್ನು’’ ಎಂದು ಏನಾದರೊಂದು ಬೇಡುತ್ತಲೇ ಇರುವ ದುರಭ್ಯಾಸ. ’’ಬೇಡಿದರೆ ಎನ್ನೊಡೆಯನ ಬೇಡುವೆ’’ ಎಂದು ಪ್ರತಿಯಾಬ್ಬರೂ ದೇವರಲ್ಲಿ ಅಧಿಕಾರ ವಾಣಿಯಿಂದ ಬೇಡುವವರೇ. ನಾವು ಬೇಡುವವರಾದರೆ, ನಮ್ಮ ದೇವರುಗಳು ನೀಡುವವರು. ಪ್ರಪಂಚದ ನಾನಾಕಡೆಯಲ್ಲಿ ಬೇಡುವ ಭಕ್ತರಿಗೆ ವರಗಳನ್ನು, ಏಕಕಾಲದಲ್ಲಿ ದಯಪಾಲಿಸಲು ಎರಡು ಕೈಯಿಂದಂತೂ ಸಾಧ್ಯವಿಲ್ಲ. ಹಾಗಾಗಿ ನಮ್ಮ ದೇವರುಗಳಿಗೆ ನಾಲ್ಕರಿಂದ ಸಹಸ್ರದವರೆಗೆ ಹೆಚ್ಚುವರಿ ಕೈಗಳು. ಬೇಡಿದಷ್ಟೂ ನೀಡಬಲ್ಲೆನೆಂಬ ಮಂದಹಾಸ, ಅಭಯ ಹಸ್ತ! ನಮ್ಮ ಪ್ರಾರ್ಥನಾ ಗೀತೆಗಳನ್ನೊಮ್ಮೆ ಗಮನಿಸಿ ನೋಡಿದರೆ ಕರ, ಶಿರವನ್ನು ಹಿಂಬಾಲಿಸಿ ಬರುವ ಮುಂದಿನ ಪದವೇ ವರ! ಕರ ಮುಗಿದು, ಶಿರ ಬಾಗಿದ ಮೇಲೆ ವರ ಬೇಡದಿರಲು ನಮಗೇನು ಹುಚ್ಚೇ?

ಇನ್ನು ದೇವರನ್ನು ನಂಬದ ನಾಸ್ತಿಕರಿಗೆ ದೇವರೂ ಇಲ್ಲ. ಅವನು ಕೊಡಲಿರುವ ವರಗಳಿಗಾಗಿ ಕಾದು ಕೂಡುವ ಜರೂರತ್ತೂ ಇಲ್ಲ! ನಾಸ್ತಿಕರಾಗಿರಲು ನಿಜವಾಗಿಯೂ ಧೈರ್ಯ ಬೇಕು ಅನ್ನಿಸುತ್ತದೆ. ಅವರಿಗೆ ಭಯವಾದಾಗ ಯಾರನ್ನು ನೆನೆಸಿಕೊಂಡು ಧೈರ್ಯ ತಂದುಕೊಳ್ಳುತ್ತಾರೆ? ಮನಸ್ಸು ಹತಾಶೆಯಿಂದ ಕುಸಿದು ಹೋದಾಗ, ಯಾವ ಭರವಸೆ ಅವರನ್ನು ಮುನ್ನಡೆಸುತ್ತದೆ? ಆ ಮಾತೆಲ್ಲ ಈಗ ಬೇಡ ಬಿಡಿ. ಒಟ್ಟಿನಲ್ಲಿ ಆಸ್ತಿಕರು ಪರಮ ಸುಖಿಗಳು. ಅವರಿಗೆ ಅತ್ತಾಗ ಕಣ್ಣೊರೆಸುವುದರಿಂದ ಹಿಡಿದು, ಬಿದ್ದಾಗ ಎತ್ತಿ ನಿಲ್ಲಿಸುವನಕ ದೇವರಿದ್ದಾನೆ. ಕವಿ ಪರಮೇಶ್ವರ ಭಟ್ಟರೆಂದಂತೆ - ‘‘ನನ್ನ ಜೀವನ ರಥದ ವಿಜಯದ ಮಹೋತ್ಸವಕೆ ತಾನೇ ಸಾರಥಿಯಾಗಿ ನಡೆಸುವನು ಜಯಕೆ’’ ಎಂದು ಬದುಕಿನ ಸೂತ್ರವನ್ನೇ ಒಡಲೆಂಬ ಗುಡಿಯಾಳಗಿರುವ ಒಡೆಯನಿಗೊಪ್ಪಿಸಿ ನೆಮ್ಮದಿಯಿಂದಿರುವ ಭಾಗ್ಯ ಆಸ್ತಿಕರಿಗುಂಟು.

ಚಿಕ್ಕವಯಸ್ಸಿನಲ್ಲಿ ಕೇಳುವ ಧೃವ, ಪ್ರಹ್ಲಾದ, ಮಾರ್ಕಾಂಡೇಯ ಮುಂತಾದ ಬಾಲಭಕ್ತರ ಪುಣ್ಯಕಥೆಗಳು ಮಕ್ಕಳ ಮೇಲೆ ಬೀರುವ ಪ್ರಭಾವ ಹೆಚ್ಚು. ದೇವರು ಎಂದಾದರೊಮ್ಮೆ ಪ್ರತ್ಯಕ್ಷನಾಗಿಯೇ ಬಿಟ್ಟರೆ ಏನೇನು ವರಗಳನ್ನು ಕೇಳಬೇಕೆಂದು ಮೊದಲೇ ಪಟ್ಟಿ ಸಿದ್ಧಪಡಿಸಿಕೊಂಡಿರುತ್ತಿದ್ದ ಮುಗ್ಧ ಬಾಲ್ಯದ ನೆನಪು ನನಗಿನ್ನೂ ಹಸಿರಾಗಿದೆ. ವರಗಳ ಪಟ್ಟಿ ಮೊದಲೇ ತಯಾರಿರುತ್ತಿದ್ದುದು ಏಕೆಂದರೆ - ದೇವರು ಪ್ರತ್ಯಕ್ಷನಾದಾಗ, ಅವನು ಘಂಟೆಗಟ್ಟಲೆ ನಮ್ಮ ಮುಂದೆ ನಿಂತಿರುವುದಿಲ್ಲವೆಂಬ ವಿಷಯ ಚಲನಚಿತ್ರಗಳಿಂದ ನಮಗೆ ಚೆನ್ನಾಗಿ ತಿಳಿದಿತ್ತು. ಅವನು ಕಣ್ಮುಂದೆ ನಿಂತಿರುವ ಒಂದೋ ಎರಡೋ ಘಳಿಗೆಗಳಲ್ಲಿ ವರಗಳನ್ನು ಕೇಳಿಕೊಳ್ಳದಿದ್ದರೆ, ದೇವರು ಏನೂ ಕೊಡದೆ ಠಣ್ಣನೆ ಮಾಯವಾದರೆ ಆಗುವ ನಷ್ಟವನ್ನು ತಪ್ಪಿಸಲು ಈ ಅಮೋಘ ಏರ್ಪಾಟು!

ನಮ್ಮ ಪುರಾಣ,ಪುಣ್ಯಕಥೆಗಳು ಇಷ್ಟೊಂದು ವಿಫುಲವಾಗಿ ಸೃಷ್ಟಿಯಾಗುವಲ್ಲಿ ಈ ವರಗಳ ಕೊಡುಗೆಯೂ ಸಾಕಷ್ಟಿದೆ! ನಾನಾರೀತಿಯ ವರಗಳನ್ನು ಪಡೆದು, ಅದನ್ನು ದುರುಪಯೋಗ ಮಾಡಿಕೊಂಡು, ಲೋಕಕಂಟಕರಾಗಿ ಮೆರೆದ ದೇವ-ದಾನವರ ಕಥೆಗಳು ನಮ್ಮಲ್ಲಿ ಹೇರಳವಾಗಿವೆ. ಇವುಗಳನ್ನು ಕೇಳಿದಾಗ, ಒಂದು ಉತ್ತಮ ಉದ್ದೇಶದಿಂದಲೇ ಪ್ರಾರಂಭವಾಗಿ, ನಂತರ ಭ್ರಷ್ಟರ ಕೈಯಲ್ಲಿ ಸಿಕ್ಕು ವಿರೂಪಗೊಳ್ಳುವ ನಮ್ಮ ಸರಕಾರಿ ಯೋಜನೆಗಳ ನೆನಪಾಗುವುದಿಲ್ಲವೇ? ದಶರಥ ಕೊಟ್ಟ ವರಗಳ ಗಿಫ್ಟ್‌ ಚೆಕ್ಕನ್ನು ಕೈಕೇಯಿ ಸಕಾಲದಲ್ಲಿ ಎನ್‌ಕ್ಯಾಶ್‌ ಮಾಡಿಕೊಳ್ಳದಿದ್ದರೆ ಪಾರಾಯಣಕ್ಕೆಲ್ಲಿರುತ್ತಿತ್ತು ನಮಗೆ ರಾಮಾಯಣ? ಇನ್ನು, ಮಹಾಭಾರತದ ಕಥೆಗಳು ಸರಿಯಾಗಿ ಅರ್ಥವಾಗಬೇಕಾದರೆ, ಮೊದಲು ವರಗಳ ಸಿಕ್ಕಿನಲ್ಲಿ ಹೊಕ್ಕು ಬರಬೇಕು. ಅಲ್ಲಂತೂ ತರಾವರಿ ವರಗಳದ್ದೇ ಕಾರುಬಾರು!

ವರಗಳನ್ನು ಬೇಡುವುದರಲ್ಲಿ ಕೂಡ ಅದೆಂತಹ ಸೃಜನಶೀಲತೆ, ವೈವಿಧ್ಯಗಳು! ಒಬ್ಬೊಬ್ಬರೂ ವರ ಬೇಡುವ ಮುನ್ನ ಅದೆಷ್ಟು ಹೋಂವರ್ಕ್‌ ಮಾಡಿರುತ್ತಿದ್ದರೋ ಏನೋ! ಒಬ್ಬನಿಗೆ ಚಿರಂಜೀವಿಯಾಗುವ ವರ, ಇನ್ನೊಬ್ಬನಿಗೆ ಇಷ್ಟ ಬಂದಾಗ ಸಾಯುವ ವರ, ಮತ್ತೊಬ್ಬನಿಗೆ ಮುಟ್ಟಿದ್ದನ್ನೇ ಸುಟ್ಟು ಹಾಕುವ ವರ. ಒಬ್ಬ ರಾಕ್ಷಸ ಮನಸಾರೆ ನಿದ್ದೆ ಮಾಡಬೇಕೆನ್ನುವ ವರವನ್ನು ಕೇಳಿಕೊಂಡಿದ್ದನಂತೆ. ಅವನನ್ನು ಅರೆನಿದ್ದೆಯಲ್ಲಿ ಎಬ್ಬಿಸಿ ನಿದ್ರಾಭಂಗ ಮಾಡಿದವರ ಗತಿ ಗೋವಿಂದಾ! ನಿದ್ದೆಗಾಗಿ ಇಷ್ಟೊಂದು ಹಪಹಪಿಸಿದ ಆ ಪುಣ್ಯಾತ್ಮ ಜನ್ಮಾಂತರದಲ್ಲಿ ಯಾರೋ ಸಾಫ್ಟ್‌ವೇರ್‌ ಉದ್ಯೋಗಿಯೇ ಆಗಿದ್ದಿರಬೇಕು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X