ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡ ನೋಡ ಹೋದೆ! ಕವಿತೆಯಾಡನೆ ಬಂದೆ!!

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

"Of what I call God, And fools call Nature"
- Robert Browning

ವಸಂತ ಮತ್ತೆ ಬಂದಿದ್ದಾನೆ! ಕೊರೆವ ಚಳಿಯನ್ನು ಕೊಂದಿದ್ದಾನೆ. ಪ್ರಕೃತಿ ಮತ್ತೊಂದು ಹೊಸ ಹುಟ್ಟು ಪಡೆದು, ಹಸಿರುಟ್ಟು ನಿಂತಿದೆ. ನಮ್ಮ ಮನೆಯ ಹಿಂದಿರುವ ಪೊದೆಗಳ ನಡುವೆ ಅದೇನೋ ಸಂಭ್ರಮ ಎದ್ದು ಕಾಣುತ್ತಿದೆ. ಬೆಳಕು ಹರಿದೊಡನೆ ಬಿಡುವಿಲ್ಲದಂತೆ ನಡೆದಿರುತ್ತದೆ ಅಲ್ಲಿ, ಹಾಡುಹಕ್ಕಿಗಳ ವೃಂದಗಾನ! ಕೋಗಿಲೆ ಹಾಡುತ್ತಿದೆ. ಅದನ್ನು ಮೀರಿಸುವಂತೆ ಕಾಗೆಯೂ ದನಿ ತೆಗೆದು ಹಾಡುತ್ತಿದೆ. ಋತುರಾಜ ವಸಂತ ಬಂದಿದ್ದಾನೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಾಗಿಲ್ಲ! ಕೋಗಿಲೆಯಷ್ಟು ಇಂಪಿನ ದನಿ ಇರದಿದ್ದರೇನಂತೆ? ಕಾಗೆಯೂ ಹೀಗೆ ಹಾಡಬಹುದಲ್ಲವೇ? - ನನ್ನ ಹಾಡು ನನ್ನದು, ನನ್ನ ರಾಗ ನನ್ನದು!!

ಗಿಡ ನೆಡಿ ಗಿಡ ನೆಡಿ
ಮನೆಯ ಮುಂದೊಂದು ಗಿಡ ನೆಡಿ
ಮನೆಯ ಹಿಂದೊಂದು ಗಿಡ ನೆಡಿ
ನೆಟ್ಟ ಗಿಡಕೆ ನೀರು ಹಾಕಿ, ಬಾಳು ಕೊಡಿ....

ಬೆಂಗಳೂರು ದೂರದರ್ಶನ ಕೇಂದ್ರ ಪ್ರಾರಂಭವಾದ ಹೊಸದರಲ್ಲಿ, ಈ ಪರಿಸರ ಗೀತೆ ಮನೆಮನೆಗಳಲ್ಲಿ ಮೊಳಗುತ್ತಿತ್ತು. ಎಷ್ಟೋ ಜನರಿಗೆ, ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸುವ ಇಷ್ಟವಿದ್ದರೂ, ಬೆಂಗಳೂರಿನಂತಹ ಕಾಂಕ್ರೀಟ್‌ ಕಾಡಿನಲ್ಲಿ ಸಿಕ್ಕಿಬಿದ್ದವರಿಗೆ, ಇಂತದೊಂದು ಆಸೆ ಈಡೇರುವುದು ಸುಲಭದ ಮಾತಲ್ಲ. ನಿವೇಶನದ ಜಾಗ ಮನೆಗೇ ಸಾಲದಾದಾಗ, ಅದರಲ್ಲಿ ಗಿಡಗಳಿಗೂ ಪಾಲು ಕೊಡುವಷ್ಟು ಔದಾರ್ಯವಾದರೂ ಯಾರಿಗಿರಲು ಸಾಧ್ಯ? ಸ್ವಂತ ಮನೆಯಿದ್ದವರದು ಈ ಪಾಡಾದರೆ, ಗುಬ್ಬಿಗೂಡುಗಳಂತಹ ಬಾಡಿಗೆ ಮನೆಗಳಲ್ಲಿ ದಿನ ದೂಡುವವರಿಗೆ ಇದೊಂದು ಬಲು ದುಬಾರಿಯ ಕನಸೇ ಸರಿ! ಹಾಗಾಗಿ, ಚಿಕ್ಕ ಹಳ್ಳಿ, ಪಟ್ಟಣಗಳಲ್ಲಿ ಬೆಳೆದು, ಅನಿವಾರ್ಯವಾಗಿ ಬೆಂಗಳೂರನ್ನು ಸೇರಿದವರಿಗೆ ಮೊದಮೊದಲಿಗೆ ಉಸಿರುಗಟ್ಟಿದ ಅನುಭವ ಆಗುತ್ತದೆ!

ನನಗೂ ಹಾಗೆಯೇ ಆಗುತ್ತಿತ್ತು. ಹಸಿರ ಹೆಸರಿಲ್ಲದ, ರಣರಣ ಬಿಸಿಲು ಸುರಿವ ಅಪರಾಹ್ನಗಳಲ್ಲಿ, ನಿರ್ಜೀವ ಕಟ್ಟಡಗಳಲ್ಲಿನ ಬದುಕು ಒಮ್ಮೊಮ್ಮೆ ಅಸಹನೀಯ ಎನ್ನಿಸಿಬಿಡುತ್ತಿದ್ದುಂಟು. ಎಂದಾದರೊಮ್ಮೆ ಮನೆಯ ವಾತಾವರಣ ಬಿಸಿಯಾಗಿ, ಬೇಸರವಾಗಿ ಎಲ್ಲಿಯಾದರೂ, ಯಾರೂ ಇಲ್ಲದ ತಣ್ಣನೆಯ ಜಾಗದಲ್ಲಿ ಕುಳಿತು, ನೆಮ್ಮದಿ ಪಡೆಯಬೇಕೆಂದು ಬಯಸುತ್ತಿದ್ದೆ. ಆದರೆ ಹೋಗುವುದಾದರೂ ಎಲ್ಲಿಗೆ? ಮತ್ತೆ, ಮತ್ತೆ ಎದುರಾಗುವ, ಕಾರಣಗಳನ್ನು ಕೇಳುವ, ಉತ್ತರ ಬಯಸುವ, ಸುಮ್ಮನಿದ್ದರೂ ಸುಮ್ಮನಿರದ, ಹೀಗಿದ್ದರೂ ಕೊಂಕುವ , ಹಾಗಿದ್ದರೂ ಕೆಣಕುವ ಈ ಪ್ರಪಂಚದ ಜನರಿಂದ ಮುಖ ಮರೆಸಿಕೊಂಡು ಹೋಗುವುದಾದರೂ ಅದೆಲ್ಲಿಗೆ? ಅಲ್ಲಿ ಹಿತ್ತಲಿಲ್ಲ, ಅಂಗಳವೂ ಇಲ್ಲ, ಮನ ಬಿಚ್ಚಿ ಅಳಲೂ ಕೂಡ ಬಾವಿಕಟ್ಟೆಯ ಬಳಿಯ ಏಕಾಂತವಿಲ್ಲ. ಹಿಂದಿನ ಬಾಗಿಲು ತೆರೆದರೆ ಅಲ್ಲೂ ಜನ, ಬದಿಯ ಕಿಟಕಿಯಲ್ಲೂ ಹಣಿಕುವ ಜನ, ಅಕ್ಕಪಕ್ಕವಿರಲಿ.... ಮನೆಯ ಮೇಲೆ ಕೂಡ ಜನ! ಓ ದೇವರೇ, ಈ ಜನಾರಣ್ಯದಿಂದ ಒಮ್ಮೆ ನನ್ನನ್ನು ಪಾರು ಮಾಡಯ್ಯಾ....ಎಂದು ಮನಸ್ಸು ಹೊಗೆಗೂಡಿನಲ್ಲಿ ಸಿಕ್ಕಿಹಾಕಿಕೊಂಡ ಉಬ್ಬಸ ರೋಗಿಯಂತೆ ಚಡಪಡಿಸಿ ಹೋಗುತ್ತಿತ್ತು. ಇದು ಬೆಂಗಳೂರೆಂಬ ಮಾಯಾನಗರಿ ವ್ಯಕ್ತಿ ಸ್ವಾತಂತ್ರ್ಯದ ಖಾಸಗೀ ಪರಿಧಿಯನ್ನು ನಾಜೂಕಾಗಿ ನಾಶಪಡಿಸುವ ಪರಿ!

ಅದು ಹಳೆಯ ಕಥೆ. ಈಗ ನಾನು ಹೇಳಹೊರಟಿರುವುದು, ನಮ್ಮ ಮನೆಯ ಸಮೀಪ ಇರುವ ಅರಣ್ಯದ ಬಗ್ಗೆ. ಈ ನಮ್ಮ ಹೊಸ ಮನೆಗೆ ಬಂದ ಮೇಲೆ, ನಾನು ಪಡೆದುಕೊಂಡ ಸಿರಿಸೌಭಾಗ್ಯಗಳಲ್ಲಿ ಒಂದು ಈ ದೈವಿಕ ಏಕಾಂತ, ಮತ್ತೊಂದು ನಮ್ಮ ಮನೆಗೆ ಕಾಲ್ನಡಿಗೆಯ ದೂರದಲ್ಲಿರುವ ಸಂರಕ್ಷಿತ ಅರಣ್ಯ ಅಥವಾ ಫಾರೆಸ್ಟ್‌ ರಿಸರ್ವ್‌! ನಾವು ಯಾವುದೇ ಹೊಸ ಜಾಗಕ್ಕೆ ಹೋದಾಗ, ಶಾಲೆ, ಬ್ಯಾಂಕ್‌, ಅಂಚೆ ಕಛೇರಿ ಮುಂತಾದವುಗಳು ಹತ್ತಿರವಿರಲಿ ಎಂದು ಬಯಸುವುದು ಸಹಜ. ಆದರೆ ಇಲ್ಲಿ ಪುಟ್ಟ ಕಾಡೊಂದನ್ನು ಕೂಡ, ನಮ್ಮ ಕೈಗೆಟುಕುವಂತೆ ಇಟ್ಟುಕೊಳ್ಳಬಹುದು ಎಂಬ ಕಲ್ಪನೆಯೇ ನನ್ನನ್ನು ಪುಳಕಗೊಳಿಸಿತು. ಯಾರದ್ದಾದರೂ ಮನೆಯ ಸುತ್ತಮುತ್ತ ಇರುವ ಪುಟ್ಟ ಕೈತೋಟವನ್ನೇ ದೊಡ್ಡ ಅಚ್ಚರಿ ಎಂಬಂತೆ ನೋಡುತ್ತಿದ್ದ ನನಗೆ, ಇಲ್ಲಿ ಪ್ರತಿ ಮನೆಯ ಹಿಂದೆಯೂ ಚಿಕ್ಕಚಿಕ್ಕ ಕಾಡಿನಂತೆಯೇ ಒತ್ತಾಗಿ ಬೆಳೆದಿರುವ ಗಿಡ-ಮರಗಳನ್ನು ಕಂಡರೆ ವಿಸ್ಮಯವೆನಿಸದಿದ್ದೀತೇ?

ಸಾವಿರಾರು ಎಕರೆಯಷ್ಟು ವಿಶಾಲ ಜಾಗವನ್ನು ಆಕ್ರಮಿಸಿಕೊಂಡಿರುವ ಈ ಅರಣ್ಯವೆಂದರೆ ನಿಸರ್ಗ ಪ್ರೇಮಿಗಳಿಗೆ ಪಂಚಪ್ರಾಣ! ಚಳಿಗಾಲದಲ್ಲಿ ಇಲ್ಲಿ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆಗ ಪ್ರಜಾಪ್ರಭುತ್ವದ ನಿಯಮಗಳನ್ನೆಲ್ಲಾ ಧಿಕ್ಕರಿಸಿ ಪ್ರಕೃತಿಯದ್ದೇ ಇಲ್ಲಿ ಸರ್ವಾಧಿಕಾರ! ಮುಚ್ಚಿದ ಗೇಟುಗಳ ಹಿಂದೆ, ಹಿಮ ಸುರಿದ, ಚಳಿ ಕೊರೆವ ಆ ಶೀತಲ ದಿನ, ರಾತ್ರಿಗಳಲ್ಲಿ ನಡೆದಿರಬಹುದಾದ ನಿಸರ್ಗ ವ್ಯಾಪಾರವನ್ನು ಕಂಡವರಾದರೂ ಯಾರು? ಗಾಢ ಮೌನದ ನಡುವೆಯೂ ಮಂದಗತಿಯಲ್ಲಿ ನುಡಿಯುತ್ತಿದ್ದ ಅರಣ್ಯಗೀತೆಗೆ ಕಿವಿಗೊಟ್ಟವರಾರು?

ಸೂರ್ಯರಶ್ಮಿಗಾಗಿ ಹಪಹಪಿಸುವ ಈ ಜನ, ವಾತಾವರಣದಲ್ಲಿ ಸ್ವಲ್ಪ ಬಿಸಿ ಕಾಣಿಸಿಕೊಳ್ಳುವುದನ್ನೇ ಕಾಯುತ್ತಿರುತ್ತಾರೇನೋ. ಕಾಲ್ನಡಿಗೆಯ ಮೂಲಕ ಮೈತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು, ಓಡಿ ದಣಿಯವು ಕಾಲ್ಗಳು ಎನ್ನುವವರು, ಪ್ರಕೃತಿ ಚಿತ್ರಗಳನ್ನು ಸೆರೆಹಿಡಿಯಲು ಬಂದಿರುವ ಕಲಾವಿದರು, ಗಾಳಕ್ಕೊಂದು ಹುಳು ಸಿಕ್ಕಿಸಿ, ಬೀಳಲಿರುವ ಮೀನಿಗೆ ಕಾದು ಕೂತಿರುವ, ದೊಗಲೆ ಚಡ್ಡಿಯ ಹವ್ಯಾಸಿ ಮೀನುಗಾರರು.....ವಿವಿಧ ಉದ್ದೇಶದಿಂದ ಬಂದಿರುವ ವಿಭಿನ್ನ ಜನ....ವನದ ತುಂಬಾ ಜನ! ಕವಿ ಲಕ್ಷ್ಮೀನಾರಾಯಣ ಭಟ್ಟರು ಹೇಳುವಂತೆ ;

ಬಿಸಿಲು ಕರೆದು ಬಾನು ಹೊಳೆದು ಹೊರಗೆ ಜೀವ ಜಾತ್ರೆ!
ಈ ಮರಗಳು... ಹೂಮಳೆ ಸುರಿಯುವ ಬಣ್ಣದ ಮೋಡಗಳು!

-ಹೂತುಂಬಿಕೊಂಡ ಯಾವುದೇ ಮರವನ್ನು ನೋಡಿದರೂ, ನನಗೆ ತಟ್ಟನೆ ನೆನಪಾಗುವ ಕವಿ ಶಿವರುದ್ರಪ್ಪವನರ ‘ಚೈತ್ರದಲ್ಲಿ’ ಕವಿತೆಯ ಸಾಲಿದು. ಹೊಸ ಹಸಿರಿನಿಂದ ನಳನಳಿಸುತ್ತಿರುವ ಮರಗಳನ್ನು ನೋಡಿ ಸಂತೋಷ ಅನುಭವಿಸಲು ನಾವೇನು ಕವಿಯೇ ಆಗಿರಬೇಕಾಗಿಲ್ಲ. ನೋಡುವವರ ಮನಸ್ಸಿನ ಭಕ್ತಿ,ಭಾವಗಳಿಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಗೋಚರಿಸುವ ಪರಮಾತ್ಮನಂತೆ ಈ ಮರಗಳು. ಒಮ್ಮೆ, ಲೋಕದ ಗೊಡವೆಯೇ ಬೇಡವೆಂದು ಧ್ಯಾನಸ್ಥನಾಗಿರುವ ಯೋಗಿಯಂತೆ ಕಾಣಿಸಿದರೆ, ಮತ್ತೊಮ್ಮೆ ಮಮತಾಮಯಿ ತಾಯಿಯಾಬ್ಬಳು ತನ್ನ ಕೋಟಿ ಕೈಗಳನ್ನು ಚಾಚಿ ಅಪ್ಪಿಕೊಳ್ಳಲು ಬಂದ ಹಾಗೆ!

ಸಸ್ಯ ಪ್ರೀತಿ, ನಿಸರ್ಗ ಪ್ರೇಮ ಅನಾಥಪ್ರಜ್ಞೆ ತುಂಬಿ, ಹೊರಲಾರದ ಹೊರೆಯೆನಿಸಿದ ಬದುಕನ್ನು ಅದು ಹೇಗೆ ಸಹ್ಯವೆನಿಸಿಬಿಡಬಲ್ಲುದು ಎಂಬುದಕ್ಕೆ ಉದಾಹರಣೆಯಾಗಿ ನಾನು ಹತ್ತಿರದಿಂದ ಕಂಡ ವ್ಯಕ್ತಿ ಚಿತ್ರಣವೊಂದನ್ನು ಇಲ್ಲಿ ನೀಡಿದರೆ ತಪ್ಪಾಗಲಾರದು ಎಂದು ಭಾವಿಸಿದ್ದೇನೆ. ಅವರನ್ನು ಮುತ್ತೈದೆ ಎನ್ನಬೇಕೋ, ವಿಧವೆಯೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಗಂಡನಿದ್ದ, ಆದರೆ ಆಕೆಯ ಪಾಲಿಗಿಲ್ಲ! ಎಂಟನೆಯ ವಯಸ್ಸಿನಲ್ಲಿ ಮದುವೆಯಾಗಿದ್ದ ಅವರನ್ನು, ಗಂಡನ ಮನೆಯವರು ಯಾವುದೋ ಕಾಯಿಲೆಯ ಕ್ಷುಲ್ಲಕ ನೆಪ ಹೇಳಿ, ಮನೆಗೆ ಕರೆದುಕೊಂಡು ಹೋಗಿರಲೇ ಇಲ್ಲ. ಇತ್ತ, ತವರಿನಲ್ಲಿ ಬೆಳೆಯುತ್ತಿದ್ದ, ಅಣ್ಣ-ತಮ್ಮಂದಿರ ತುಂಬು ಸಂಸಾರದ ನಡುವೆ ಇವರೊಬ್ಬ ಅನಪೇಕ್ಷಿತ ಅತಿಥಿ, ಅಲ್ಲೇ ಸಾಗಬೇಕಾಗಿತ್ತು ಅವರ ಪರಿತ್ಯಕ್ತ ಬದುಕು!

ಹಿತ್ತಲ ತುಂಬ ಸುಗಂಧ ಬೀರುವ ಮಲ್ಲಿಗೆ, ಗುಲಾಬಿ, ಪಾರಿಜಾತ, ಮರುಗ, ದವನ...ವಿವಿಧ ಬಗೆಯ ಹೂಹಣ್ಣಿನ ಗಿಡಗಳನು ಸಾಕಿಕೊಂಡಿದ್ದು, ಅವುಗಳ ಪಾಲನೆ-ಪೋಷಣೆಯಲ್ಲೇ ದಿನದ ಬಹುಪಾಲು ಸಮಯವನ್ನು ಕಳೆಯುತ್ತಿದ್ದರು ಆಕೆ. ಪ್ರತಿ ದಿನವೂ ಬುಟ್ಟಿಯ ತುಂಬಾ ಹೂವುಗಳನ್ನು ಬಿಡಿಸಿಕೊಂಡು ಹೋಗಿ ಸಮೀಪದ ದೇವಾಲಯಕ್ಕೆ ತಲುಪಿಸುವುದನ್ನು ಮಾತ್ರ ಎಂದಿಗೂ ಮರೆಯುತ್ತಿರಲಿಲ್ಲ. ಗಂಡನ ಮರು ಮದುವೆ, ಮಕ್ಕಳು, ಆ ಮಕ್ಕಳ ಮುಂಜಿ,ಮದುವೆ...ಹೀಗೆ ಎಲ್ಲಾ ವಿಷಯಗಳು ಬೇಡದಿದ್ದರೂ ಅವರಿವರಿಂದ ತಿಳಿಯುತ್ತಿತ್ತು. ಆ ಮನಸ್ಸಿನಲ್ಲಿ ಅದೇನು ನೋವಿತ್ತೋ, ಅದಿನ್ನೆಂತಹ ಯಾತನೆಯ, ಒಂಟಿತನದ ಜ್ವಾಲಾಮುಖಿ ಅವರೆದೆಯಲ್ಲಿ ಉರಿಯುತ್ತಿತ್ತೋ ಗೊತ್ತಿಲ್ಲ. ಆದರೆ, ಅಂತಹ ಹತಾಶ, ನಿರಾಶ ಭಾವನೆಯನ್ನು ನಾನು ಒಂದು ದಿನವೂ ಅವರ ಮುಖದ ಮೇಲೆ ಕಾಣಲೇ ಇಲ್ಲ! ತಾವೇ ಬೆಳೆಸಿದ್ದ ಹೂಗಿಡಗಳ ಸಾನ್ನಿಧ್ಯದಲ್ಲಿ ಸಮಾಧಾನ, ಸಂತೃಪ್ತಿ ಹೊಂದುತ್ತಿದ್ದು, ಈಗ ಮರೆಯಾಗಿ ಹೋಗಿರುವ ಆ ಹಿರಿಯ ಜೀವವನ್ನು ಇವತ್ತಿಗೆ ನೆನೆದರೂ, ಅವರ ಪುಟ್ಟ ಬೆತ್ತದ ಬುಟ್ಟಿಯಲ್ಲಿರುತ್ತಿದ್ದ ಮರುಗ,ಮಲ್ಲಿಗೆಗಳ ನರುಗಂಪು ಹಿತವಾಗಿ ಸುತ್ತ ಸುಳಿದಂತಾಗುತ್ತದೆ!

ಪರಿಸರ ಪ್ರೇಮ ಒಂದು ಫ್ಯಾಷನ್‌ ಆಗಿಹೋಗಿರುವ ಹೊತ್ತಿನಲ್ಲಿ, ಈ ಮಾತನ್ನು ಬರೆಯಬೇಕೆನಿಸುತ್ತಿದೆ. ನಾವು ಪರಿಸರವನ್ನು ಪ್ರೀತಿಸುತ್ತೇವೆ, ರಕ್ಷಿಸುತ್ತೇವೆ ಎಂದು ಹೇಳಿಕೆಗಳನ್ನು ಕೊಡುವುದಕ್ಕಿಂತ, ಭಾಷಣಗಳನ್ನು ಬಿಗಿಯುವುದಕ್ಕಿಂತ, ನಾವು ಪರಿಸರವನ್ನು ಅದರ ಪಾಡಿಗೆ ಅದನ್ನು ಬಿಟ್ಟುಬಿಟ್ಟರೆ ಸಾಕು, ಅದು ಚೆನ್ನಾಗಿಯೇ ಇರುತ್ತದೆ! ಅಮೆರಿಕಾದ ನಿಸರ್ಗ ಸಂಪತ್ತು ತೀರಾ ಹಾಳಾಗದಿರಲು ಇಲ್ಲಿಯ ಹವಾಮಾನ ಕೂಡ ಕಾರಣವಿರಬಹುದು. ಇಲ್ಲಿ, ವರ್ಷದ ಕೆಲವು ತಿಂಗಳು ಮಾತ್ರ ಮನುಷ್ಯ ಹಸಿರನ್ನು ಸನಿಹದಿಂದ ಕಂಡು ಆನಂದಿಸಬಹುದೇ ಹೊರತು, ವ್ಯತಿರಿಕ್ತ ಹವಾಮಾನವಿರುವ ದಿನಗಳಲ್ಲಿ, ಉಸ್ತುವಾರಿಯ ಹೊಣೆ ಹೊತ್ತ ಕೆಲವೇ ಮಂದಿಯನ್ನು ಬಿಟ್ಟು ಮತ್ತಾರೂ ಸಸ್ಯಶ್ಯಾಮಲೆಯ ಸನಿಹ ಹೋಗುವ ಸಾಹಸಕ್ಕಿಳಿಯುವುದಿಲ್ಲ. ಇದು ತನ್ನ ರಕ್ಷಣೆಗೆ ಪ್ರಕೃತಿ ತಾನೇ ವಿಧಿಸಿಕೊಂಡಿರುವ ಬೇಲಿ ಇದ್ದರೂ ಇರಬಹುದೇನೋ!

ಕಾಡು ನಮ್ಮನ್ನು ಇಷ್ಟೊಂದು ಕಾಡುವುದು ಯಾಕೆ? ನಾವೆಲ್ಲ ಕಾಡಿನಿಂದಲೇ ಬಂದವರು, ಕಾಡೇ ನಮ್ಮೆಲ್ಲರ ಮೂಲಸ್ಥಾನ! ಹಾಗಾಗಿ ಎಂದೋ ತೊರೆದು ಬಂದ ತವರಿನಂತೆ, ಈ ಕಾಡಿನ ನೆನಪು ಇಷ್ಟು ಗಾಢವಾಗಿ ನಮ್ಮನ್ನು ಆವರಿಸಿಕೊಳ್ಳುತ್ತದಾ? ನಾಡಿಗೆ ವಂಚಿಸುವುದು ಗೊತ್ತು, ಇನ್ನೊಬ್ಬನನ್ನು ಹೀನಾಯವಾಗಿ ಅವಮಾನಿಸುವುದು ಗೊತ್ತು. ಕಾಡಿಗೆ ಬಳಿ ಬಂದವರನ್ನೆಲ್ಲ ತನ್ನ ತಣ್ಣನೆಯ ತೆಕ್ಕೆಯಲ್ಲಿ ಸಲಹುವುದು ಮಾತ್ರ ಗೊತ್ತು! ನಾಡಿನಲ್ಲಿ ಕಳೆದುಕೊಂಡ ನೆಮ್ಮದಿಯನ್ನು ಕಾಡಿನಲ್ಲಿ ಹುಡುಕುವುದು ಸುಲಭ.

ಆದರೆ ನಮ್ಮ ಮನಸ್ಸು ಅದೆಷ್ಟು ವಿಚಿತ್ರವೆಂದರೆ, ಯಾವ ನಿಶ್ಶಬ್ದಕ್ಕೆ, ನಿರ್ಜನತೆಗೆ ಬಹುವಾಗಿ ಹಂಬಲಿಸುತ್ತೇವೋ, ಅದನ್ನು ನಾವು ಬಹಳ ಹೊತ್ತು ಸಹಿಸಿಕೊಳ್ಳಲಾರೆವು. ಯಾರಾದರೂ ನಮ್ಮನ್ನು ಅಪಹರಿಸಿ, ದಟ್ಟ ಕಾಡಿನ ನಡುವೆ ಇಟ್ಟುಬಿಟ್ಟರೆ, ಅಲ್ಲಿ ಕ್ಷಣವೊಂದು ಯುಗವಾದಂತೆ ಕಂಗೆಟ್ಟು ಹೋಗುತ್ತೇವೆ. ‘ ಹೇಗಾದರೂ ಇಲ್ಲಿಂದ ಪಾರು ಮಾಡಿ’ - ಎಂದು ಮೊರೆ ಇಡುವಂತಹ ಸಂದೇಶಗಳನ್ನು ನಾಡಿಗೆ ರವಾನಿಸತೊಡಗುತ್ತೇವೆ!

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X