ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊತ್ತಿತೋ ಹೊತ್ತಿತೋ ಕನ್ನಡದ ದೀಪ!

By Staff
|
Google Oneindia Kannada News
ನಮಸ್ಕಾರ,

ನೀವು ಬರೆದ ಐರಾವತ ಬಸ್ಸಿನಲ್ಲಿ ಯಜಮಾನನಾದ ಕನ್ನಡ -ಎಂಬ ಲೇಖನ ಓದಿದೆ. ಚೆನ್ನಾಗಿ ಮೂಡಿಬಂದಿದೆ. ಇದಕ್ಕೆ ಪೂರಕವಾಗಿ ನನ್ನ ಅನುಭವದ ಚಿತ್ರಣ ನೀಡುವೆ:

ಕಳೆದ ಏಪ್ರಿಲ್‌ ತಿಂಗಳಲ್ಲಿ ನಾನು ನನ್ನ ತಮ್ಮ ಹೈದರಾಬಾದಿಗೆ ಹೋಗಬೇಕಾಗಿ ಬಂತು. ಸರಿ ರಾಜ್ಯ ರಸ್ತೆ ಸಾರಿಗೆಯಲ್ಲೇ ಹೋಗೋಣ ಅಂತ ನಿರ್ಧರಿಸಿ ನಾವು ಐರಾವತ ಹತ್ತಿದೆವು ಅಂದು ಕನ್ನಡವೇ ಸತ್ಯ ಕಾರ್ಯಕ್ರಮ ನಡೆದ ದಿನವಾದ್ದರಿಂದ ನಾವು ಬೆಂಗಳೂರು ಬಿಡುವಷ್ಟರಲ್ಲೇ 2 ತಾಸು ವಿಳಂಬವಾಯಿತು. ಸರಿ ಮುಂದೆ ಬೆಂಗಳೂರು ಗಡಿ ದಾಟುತ್ತಿದ್ದಂತೆ ಟೀವಿ ಹಾಕಿದರು ಅದರಲ್ಲಿ ಕಂಡ ದೃಶ್ಯ(ಯಾವುದು ಅಂತ ಚಿತ್ರ ನೋಡಿದ್ದವರಿಗೆ ತಿಳಿದಿರುತ್ತದೆ)ಸಭ್ಯ ನಾಗರಿಕರನ್ನು ಕೆರಳಿಸುವಂತಿತ್ತು. ಕಾರಣ ಅವರು ಹಾಕಿದ್ದು ತೆಲುಗು ಚಿತ್ರ ಅದೂ ಬಾಯ್ಸ್‌ ಎಂಬ ಅದ್ಭುತ ಚಿತ್ರ! ನಾನು ಮೊದಲ ಬಾರಿ ಈ ರೀತಿಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರಿಂದ ನನ್ನ ತಮ್ಮನನ್ನು ಕೇಳಿದೆ - ಮುಂದೆ ಕನ್ನಡ ಚಿತ್ರ ಹಾಕುತ್ತಾರಲ್ವಾ? ಅಂತ. ಅದಕ್ಕೆ ಅವನು ಹೇಳಿದ ಕನ್ನಡ ಇರಲಿ ನೆಟ್ಟಗಿರೋ ಹಿಂದಿ ಚಿತ್ರವನ್ನೂ ಹಾಕುವುದಿಲ್ಲ ಅಂದ. ಒಂದು ಚಿತ್ರಹಾಕಿದರೆ ಹೆಚ್ಚು ಅಂದ. ಅಯ್ಯೋ ಕನ್ನಡದ ಗತಿಯೇ ಅಂತ ಮನಸ್ಸಿನಲ್ಲೇ ಅಂದು ಕೊಂಡೆ.

ಆನಂತರ ಮನಸ್ಸು ತಡೆಯದೆ ನಿರ್ವಾಹಕರನ್ನು ಕೇಳಿದೆ ಕನ್ನಡ ಚಿತ್ರ ಹಾಕಿ ಎಂದು. ಅದಕ್ಕೆ ಅವರು ನಮಗೆ ಸಿಗುವ ಸಿಡಿನಾ ನಾವು ಹಾಕುತ್ತೇವೆ. ಈ ಮಾರ್ಗದಲ್ಲಿ ಬರುವ ಜನರ ಬೇಡಿಕೆ ಮೇರೆಗೆ ತೆಲುಗು ಅಥವಾ ಹಿಂದಿ ಚಿತ್ರ ಹಾಕುತ್ತೇವೆ ಅಂದರು. ಬೇಕಾದರೆ ಮೇಲಾಧಿಕಾರಿಗಳಿಗೆ ತಿಳಿಸಿ ನಮಗೇನು ಹಾಕಬಾರದು ಅಂತ ಇಲ್ಲಾ ಅಂದರು. ಸರಿ ಕನ್ನಡ ಸಿಡಿಯ ಅಲಭ್ಯತೆಯ ಕಾರಣ ತೆಲುಗು ನೋಡುವ ಕರ್ಮ ಯಾಕೆ ಅಂತ ಅದನ್ನು ತೆಗೆಸಿ ಹಿಂದಿ ಸಿನಿಮಾ ನೋಡಿದ್ದಾಯಿತು.

ನಿಮಗೆ ಈ ರೀತಿಯ ಅನುಭವ ಅದೂ ನಮ್ಮೂರಿಗೆ ಹೋಗುವಾಗ ಆಯಿತು ಅಂತ ಓದಿ ಆಶ್ಚರ್ಯ ಹಾಗೂ ದು:ಖ ಆಯಿತು. ಈ ರೀತಿಯ ಅನುಭವ ಬರೀ ನಗರದಿಂದ ಹೊರರಾಜ್ಯಕ್ಕೆ ಹೋಗುವ ಬಸ್‌ನಲ್ಲಿ ಮಾತ್ರ ಅಂತ ತಿಳಿದಿದ್ದೆ ಆದರೆ ಅದೂ ರಾಜ್ಯದ ಒಳಸಾರಿಗೆ ವ್ಯವಸ್ಥೆಯಲ್ಲೇ ಈ ರೀತಿಯ ಅವ್ಯವಸ್ಥೆಇರುವುದು ಖೇದಕರ ಸಂಗತಿ.

ಇದಕ್ಕೆ ನಮ್ಮ ಜನಗಳೇ ಕಾರಣ. ಎಲ್ಲಿ ಕನ್ನಡಕ್ಕೆ ತೊಂದರೆಯಾದರೂ, ಅಪಮಾನವಾದರೂ ಸಿಡಿದೇಳದೆ, ಪ್ರಶ್ನಿಸದೆ ನಮಗೆ ಸಂಬಂಧವೇ ಇಲ್ಲಾ ಅನ್ನುವ ಹಾಗೆ ವರ್ತಿಸುವುದರಿಂದ ಪರಿಸ್ಥಿತಿ ಹೀಗಾಗಿದೆ.

ಇನ್ನೊಮ್ಮೆ ನೀವು ಬಂದಾಗ, ಈ ರೀತಿಯ ಕೆಟ್ಟ ಅನುಭವಗಳು ಆಗದಿರಲೆಂದು ಆಶಿಸುವೆ.

- ಮಹೇಶ ಮಲ್ನಾಡ್‌

*

ತ್ರಿವೇಣಿಯವರೇ,

ನಿಮ್ಮ ‘ಐರಾವತ ಬಸ್ಸಿನಲ್ಲಿ ಯಜಮಾನನಾದ’ - ಕನ್ನಡ ಲೇಖನ ಓದಿ ಆನಂದ, ದುಃಖ ಎರಡೂ ಒಟ್ಟಿಗೇ ಆಯ್ತು. ಕನ್ನಡವನ್ನು ಎತ್ತಿ ಹಿಡಿಯುವ ಕೀರ್ತಿಗೆ ಪಾತ್ರರಾಗಿ ನೀವು ಮಾಡಿದ ಕೆಲಸ ಆನಂದ ಉಂಟು ಮಾಡಿದರೆ, ಕನ್ನಡಮ್ಮ, ಕನ್ನಡ ನಾಡಿನಲ್ಲೇ ಹೀಗೆ ಅನಾಥವಾಗಿದ್ದು ನೋಡಿ ದುಃಖವಾಯಿತು.

ಕನ್ನಡಿಗರು ಇನ್ನಾದರೂ ಬರೀ ಮಾತಷ್ಟೇ ಅಲ್ಲದೆ, ಕನ್ನಡದ ಅನುಷ್ಠಾನಕ್ಕೆ ಕೆಲಸ ಮಾಡಲು ಮುಂದಾಗುತ್ತಾರೆ ಎಂದು ಆಶಿಸೋಣ.

- ವೆಂಕಟೇಶ ಪ್ರಸಾದ್‌, ಯು. ಎಸ್‌. ಎ.

*

ತ್ರಿವೇಣಿಯವರಿಗೆ ನಮಸ್ಕಾರಗಳು.

ರಾಜ್ಯೋತ್ಸವ ಸಂದರ್ಭದಲ್ಲಿ ತುಳಸಿವನದಲ್ಲಿ ಕನ್ನಡದ ಪರಿಮಳ ಹರಡಿದ್ದಕ್ಕೆ ನಿಮಗೆ ಆತ್ಮೀಯ ಧನ್ಯವಾದಗಳು!

ನೀವು ಹೇಳಿದ ಮಾತು ನಿಜ. ಕನ್ನಡಕ್ಕಾಗಿ, ಕನ್ನಡಿಗರು ತಮ್ಮ ನೆಲದಲ್ಲೇ ತಮ್ಮ ಒತ್ತಾಯಿಸಬೇಕಾಗಿರುವುದು ಕಹಿ ಸತ್ಯ. ಇದಕ್ಕೆ ನಾವೇ ಹೊಣೆ ಎಂಬುದು ಅಷ್ಟೇ ಸತ್ಯ. ಕನ್ನಡಿಗರು ಸ್ವಾಭಿಮಾನಿಗಳಾಗಿ ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾಗಿದೆ.

ಸಿದ್ಧಯ್ಯ ಪುರಾಣಿಕರು ಹೇಳಿದಂತೆ ಎಲ್ಲಾ ಕನ್ನಡಿಗರು ಹೊತ್ತಿರುವ ದೀಪಕ್ಕೆ ಎಣ್ಣೆ, ಬತ್ತಿಯಾಗಬೇಕಿದೆ. ಹೊತ್ತಿತೋ ಹೊತ್ತಿತೋ ಕನ್ನಡದ ದೀಪ! ಮುಗಿಸಿರಿ ಮುಗಿಸಿರಿ ಶತಮಾನಗಳ ಶಾಪ! (ಸಿದ್ಧಯ್ಯ ಪುರಾಣಿಕರ ಕ್ಷಮೆ ಕೋರಿ)

ವಂದನೆಗಳು.

- ಸಂಪಿಗೆ ಶೀನಿವಾಸ, ಬನವಾಸಿ ಬಳಗ, ಬೆಂಗಳೂರು

*

ನಮಸ್ಕಾರಾ ರೀ . . .

ನಿಮ್ಮ ಲೇಖನವನ್ನು ದಟ್ಸ್‌ ಕನ್ನಡದಲ್ಲಿ ಓದಿದೆ. ಚೆನ್ನಾಗಿ ಬರುತ್ತಿವೆ. ನಿಮ್ಮ ಲೇಖನಿಯಿಂದ ಇಂತಹ ಅರ್ಥಪೂರ್ಣ ಲೇಖನಗಳು ಹರಿದು ಬರಲಿ.

ವಿಶ್ವಾಸಿ,

- ಆನಂದ್‌. ಜಿ.,ಬೆಂಗಳೂರು

*

ತ್ರಿವೇಣಿ ಶ್ರೀನಿವಾಸ್‌ ಅವರಿಗೆ ನನ್ನ ಅಭಿನಂದನೆಗಳು.

ನಾನು ಎಷ್ಟೋ ಸರಿ ಹೀಗೆ ಮಾಡಿದ್ದೇನೆ, ಜಯವನ್ನು ಕಂಡಿದ್ದೇನೆ... ಇದೇ ರೀತಿ ಎಲ್ಲರೂ ಪ್ರಯತ್ನ ಪಟ್ಟರೆ ಬಸ್ಸು, ಹೋಟೆಲ್ಲು ಎಲ್ಲ ಕಡೆ ಕನ್ನಡ ಅನಿವಾರ್ಯ ಆಗಿಬಿಡುತ್ತದೆ!

ಕಿತ್ತು ಹಾಕ್ರಿ ಮಹಮದ್‌ ರಫಿ, ಲತಾ ಮಂಗೇಶ್‌ಕರ್‌ ನ! ಕೇಳ್ರಿ ನಮ್ಮ ರಾಜ್‌ಕುಮಾರ್‌, ಪಿ.ಬಿ.ಶ್ರೀನಿವಾಸ್‌ ನ!!

ಸಕತ್‌ ಕೆಲಸ!

- ಅಪ್ಪಿ (ನಿರಂಜನ್‌)

*

ತ್ರಿವೇಣಿ ಅವರಿಗೆ,

ಈಗ ತಾನೇ ನೀವು ಬರೆದ ಲೇಖನ ಓದಿದೆ. ಇಂದಿನ ಪರಿಸ್ಥಿತಿಯನ್ನು ಬಿಂಬಿಸುವಂತಿದೆ!

ನಾನೂ ಕಡೂರಿನ ಹುಡುಗಿ. ಈಗ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಲೇಖನಗಳು ಹೀಗೇ ಬರುತ್ತಿರಲಿ ಎಂದು ಹಾರೈಸುತ್ತೇನೆ.

- ಶ್ವೇತಾ. ಕೆ.ಎಲ್‌., ಬೆಂಗಳೂರು

*

ನಮಸ್ಕಾರ,

ತುಳಸಿವನದಲ್ಲಿ ‘ಐರಾವತ ಬಸ್ಸಿನಲ್ಲಿ ಕನ್ನಡ ಯಜಮಾನ’ ಓದಿದೆ. ತುಂಬ ಚೆನ್ನಾಗಿದೆ. ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಮೂಡಬೇಕು. ಕನ್ನಡಿಗನ ಮನಸ್ಸಿನಲ್ಲಿ ಕನ್ನಡ ಜಾಗೃತಿ ಮೂಡಿಸಲು ಹೃದಯದಿಂದ ಕೂಗು ಹೊರಡಬೇಕು. ಪ್ರತಿಯೊಬ್ಬ ಕನ್ನಡಿಗನ ಅಂತರಾಳದಲ್ಲಿ ತಾನು ಕನ್ನಡಿಗ ಎಂಬ ಭಾವನೆ ಇದ್ದರೂ, ಆತನನ್ನು ಬಡಿದೆಬ್ಬಿಸಲು ಮಾಧ್ಯಮಗಳು ಅವಶ್ಯಕ ಎಂದು ನನ್ನ ಭಾವನೆ.

- ವಾಣಿ ಭಟ್‌, ಮಿಷಿಗನ್‌

*

ನಮಸ್ಕಾರ,

ಐರಾವತ ಬಸ್ಸಿನಲ್ಲಿ ಯಜಮಾನ - ಈ ಲೇಖನವನ್ನು ಓದಿದೆ, ತುಂಬಾ ಚೆನ್ನಾಗಿ ವಿವರಿಸಿದ್ದೀರ. ನಾನು ಕೂಡ ನಮ್ಮ ತವರೂರಾದ ಹಾಸನಕ್ಕೆ ಬಸ್ಸಿನಲ್ಲಿ ಹೋಗುವಾಗ, ಇದೇ ರೀತಿ ಕೇಳಿ ಕನ್ನಡ ಹಾಡುಗಳನ್ನು ಹಾಕಿಸುತ್ತೇನೆ.

ಧನ್ಯವಾದಗಳು,

- ವೆಂಕಟ ನಾರಾಯಣ, ಬ್ಲೂಮಿಂಗ್‌ಟನ್‌, ಇಲಿನಾಯ್‌ು


ಪೂರಕ ಓದಿಗೆ-
‘ಐರಾವತ’ ಬಸ್ಸಿನಲ್ಲಿ ‘ಯಜಮಾನ’ನಾದ ‘ಕನ್ನಡ’!


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X