ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನೊಲುಮೆ ನಮಗಿರಲಿ ತಂದೆ...

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಮೈಯ ಕೊಟ್ಟಿರಿ ಮಾಟ ಕೊಟ್ಟಿರಿ
ತಿದ್ದಿದಿರಿ ಕಗ್ಗಲ್ಲನು
ನಿಮ್ಮ ಮೋಹಕ ದನಿಯ ಕೊರಳಲಿ
ಇಟ್ಟು ಕಾಯ್ದಿರಿ ನನ್ನನು
ಬನ್ನಿ ಹರಸಿರಿ ತಂದೆಯೇ
ಆಸೀನರಾಗಿರಿ ಮುಂದೆಯೇ..!

ಇವು ಗಾಯಕ ರಾಜು ಅನಂತಸ್ವಾಮಿಯವರು, ತಮ್ಮ ತಂದೆ ದಿವಂಗತ ಮೈಸೂರು ಅನಂತಸ್ವಾಮಿಯವರ ಸವಿ ನೆನಪಿಗಾಗಿ ಕವಿ ಲಕ್ಷೀನಾರಾಯಣ ಭಟ್ಟರಿಂದ ಬರೆಸಿಕೊಂಡ ಸಾಲುಗಳು. ತನ್ನೆದುರು ಈಗಿಲ್ಲದಿದ್ದರೂ, ತನ್ನ ತುಂಬ ತುಂಬಿಕೊಂಡಿರುವ ತಂದೆಯನ್ನು ಕುರಿತು, ಒಬ್ಬ ಮಗನಲ್ಲಿ ಇರಬಹುದಾದ ಗೌರವ, ಅಭಿಮಾನಗಳು ‘ಬನ್ನಿ ತಂದೆಯೇ, ಆಸೀನರಾಗಿರಿ ಮುಂದೆಯೇ’ ಎಂಬ ಭಟ್ಟರ ಸಾಲುಗಳಲ್ಲಿ ಸುಂದರವಾಗಿ ಅಭಿವ್ಯಕ್ತಗೊಂಡಿದೆ!

ಅಮ್ಮನ ಎದೆಯಾಳದಲ್ಲಿ, ಗಾಳಕ್ಕೆ ಸಿಲುಕಿದ ಮೀನಾಗಿ ಚಡಪಡಿಸಿದ ನಮ್ಮೆಲ್ಲರ ಹೃದಯ ತಾಯಿಗಾಗಿ ಮಿಡಿಯುವಷ್ಟು, ಅದೇಕೋ ತಂದೆಯನ್ನು ಅರಿಯಲೇ ಇಲ್ಲ. ತಾಯಿಯನ್ನು ಬಗೆಬಗೆಯಾಗಿ ಬಣ್ಣಿಸಿ, ನಮ್ಮ ಪದ ಭಂಡಾರ ಖಾಲಿಯಾಯಿತೇ ಹೊರತು ನಮಗಂತೂ ಇನ್ನೂ ತೃಪ್ತಿಯಾಗಿಲ್ಲ. ಅವಳನ್ನು ಅದೆಷ್ಟು ಉಪಮಾನಗಳಿಂದ ಕರೆದರೂ, ಅದೂ ಸಾಲದಾಯಿತೆಂಬ ಕೊರಗು ಇದ್ದೇ ಇದೆ! ಹಾಗಾಗಿ ನಮಗೆ ಭೂಮಿಯೂ ತಾಯಿ, ಗಿಡ, ಮರ, ನದಿಗಳನ್ನೊಳಗೊಂಡ ನಿಸರ್ಗವೂ ತಾಯಿ, ನಡೆದಾಡುವ ನಾಡೂ ತಾಯಿಯೇ, ಆಡುವ ನುಡಿ ಕೂಡ ಮಾತೃಭಾಷೆಯೇ!

ಹಾಗಾದರೆ ತಂದೆ? ತಂದೆ ನಮಗೇನೂ ಉಪಕಾರ ಮಾಡಲೇ ಇಲ್ಲವೇ? ತಂದೆಯನ್ನು ನೆನೆಯುವ ಬಗ್ಗೆ ಯಾರೂ ಏನೂ ಹೇಳಿಯೇ ಇಲ್ಲವೇ? ಈ ಅನುಮಾನಕ್ಕಂತೂ ಆಸ್ಪದವೇ ಇಲ್ಲ. ಮಾತೃದೇವೋ ಭವ ಎಂದು ಬೋಧಿಸಿದ ಅದೇ ವೇದವೇ, ಅದೇ ದನಿಯಲ್ಲಿ ಪಿತೃ ದೇವೋ ಭವ ಎಂದೂ ಆಜ್ಞಾಪಿಸಲು ಮರೆತಿಲ್ಲ. ಈ ತಂದೆಯಾದರೋ ಸ್ವಲ್ಪ ನಿಧಾನಿ, ಸದಾ ವಟಗುಟ್ಟುವ ವಾಚಾಳಿ ಅಮ್ಮನೆದುರು ಬರಿದೇ ಹೂಂಗುಟ್ಟುವ ಮಹಾಮೌನಿ!

ನಮ್ಮದು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ. ತಂದೆಯೇ ಕುಟುಂಬದ ಯಜಮಾನ! ತಾಯಿ ತುಂಬಿ ಬಂದ ಮಮತೆಗೆ, ನೊರೆಹಾಲಿನಂತಹ, ಅಕಳಂಕ ಒಲವಿನ ಪ್ರತಿರೂಪವಾದರೆ, ತಂದೆ ಶಕ್ತಿ, ಶೌರ್ಯದ ಸಂಕೇತ! ನಮ್ಮ ಪುರಾಣ, ಇತಿಹಾಸಗಳಂತೂ, ಇಂತಹ ಅನೇಕ ಮಹಾನ್‌ ಪಿತೃಗಳ ಕಥೆಗಳಿಂದ ತುಂಬಿಹೋಗಿದೆ! ಇಲ್ಲಿ, ತಮ್ಮ ಉತ್ತಮ ನಡೆ-ನುಡಿಗಳಿಂದ ತಮ್ಮ ಮಕ್ಕಳಿಗಷ್ಟೇ ಅಲ್ಲ, ತಾವು ಜನಿಸಿದ ನಾಡಿಗೇ ಕೀರ್ತಿ ತರುವಂತಹ ಆದರ್ಶಪ್ರಾಯ ತಂದೆಯಂದಿರು ಆಗಿಹೋಗಿದ್ದಾರೆ. ಅವರ ಜೊತೆಗೆ, ನಚಿಕೇತನಂತಹ ಹಾಲುಗೆನ್ನೆಯ ಹಸುಳೆಯನ್ನು, ನರಕದ ನಾಯಕ ಯಮರಾಜನಿಗೆ ಒಪ್ಪಿಸಿದ ನಿಷ್ಟುರಿ ತಂದೆ ಇದ್ದಾನೆ, ಪ್ರಹ್ಲಾದನಂತಹ ಜಾಣ ಪುಟ್ಟನನ್ನು ಚಿತ್ರಹಿಂಸೆಗೊಳಿಸಿದ, ಪಿತೃಕುಲಕ್ಕೇ ಒಂದು ಕಳಂಕವೆನಿಸಿದ ಹಿರಣ್ಯಕಶಿಪುವೂ ಇಲ್ಲೇ ಇದ್ದಾನೆ, ಮಗನ ಪಾಲಿನ ಅಮೂಲ್ಯ ಯೌವನವನ್ನೇ ಕಸಿದುಕೊಂಡ ಯಯಾತಿಯಂತಹ ಸ್ವಾರ್ಥಿ ತಂದೆ ಇದ್ದಾನೆ, ತನ್ನ ನೂರು ಮಕ್ಕಳ ಅವನತಿಯನ್ನು ತನ್ನೆದುರೇ ಕಂಡು ಎದೆಯಾಡೆದುಕೊಂಡ, ಕುರುಡು ವ್ಯಾಮೋಹಿ ತಂದೆ ಧೃತರಾಷ್ಟ್ರನೂ ಈ ಸರತಿಯ ಸಾಲಿನಲ್ಲಿದ್ದಾನೆ!

ಹೃದಯದ ಮಮತೆಯನ್ನೆಲ್ಲ ಎದೆಹಾಲಾಗಿ ಉಣಿಸಿದ ತಾಯಿಯ ಪ್ರೇಮಮಯ ವ್ಯಕ್ತಿತ್ವದೆದುರು, ತಂದೆಯದು ಸ್ವಲ್ಪ ಗಡುಸಿನ, ಬಿರುಸಿನ, ಅನಾಕರ್ಷಕ ವ್ಯಕ್ತಿತ್ವವೇ. ಅಮ್ಮನ ಮಾತು, ಮನಸ್ಸು ಎಲ್ಲಾ ತೆರೆದ ಪುಸ್ತಕದಂತೆ. ತೆಂಗಿನಕಾಯಿಯ ಗಟ್ಟಿ ಚಿಪ್ಪಿನ ಒಳಗೆ ಅಡಗಿರುವ, ಸಿಹಿ ಎಳನೀರಿನಂತಹ, ತಂದೆಯ ಅಂತ:ಕರಣ ಸುಲಭವಾಗಿ ಅರ್ಥವಾಗುವುದು ಕಷ್ಟವೇ. ಅದನ್ನು ಸಾವಧಾನದಿಂದ ತಿಳಿಯುವ ಪ್ರಯತ್ನವನ್ನು ನಾವೇ ಮಾಡಲಿಲ್ಲ, ಅಥವಾ ತಿಳಿಯುವ ಅವಕಾಶವೇ ನಮಗೆ ಸಿಗಲಿಲ್ಲ!

ನಿಮ್ಮ ಮನಸ್ಸಿನ ಪರದೆಯ ಮೇಲೆ, ಎಂದೋ ನಡೆದಿರಬಹುದಾದ ಆ ಘಟನೆಯನ್ನು ನೆನಪಿಸಿಕೊಳ್ಳಿ. ಅದು ನೀವು ಪಬ್ಲಿಕ್‌ ಪರೀಕ್ಷೆಯಲ್ಲಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ದಿನವಿರಬಹುದು. ಅಮ್ಮ, ಲಗುಬಗೆಯಿಂದ ಸಕ್ಕರೆ ಮಿಠಾಯಿ ತಯಾರಿಸಿ, ಪರಿಚಿತರೆಲ್ಲರಿಗೂ ಹಂಚಿ, ಹಿಗ್ಗಿ, ತನ್ನ ಆನಂದ ಪ್ರಪಂಚಕ್ಕೇ ತಿಳಿಯುವಂತೆ ಜಾಹೀರಾತು ನೀಡುತ್ತಿದ್ದರೆ, ತಂದೆ ಎಲ್ಲಿ? ಯಾವುದೋ ಗೋಡೆಗೊರಗಿ ಧ್ಯಾನಮಗ್ನನಂತೆ ನಿಂತ ತಂದೆಯ ಮುಖದಲ್ಲಿ ಹೌದೋ, ಅಲ್ಲವೋ ಎಂಬಂತೆ ಇಣುಕಿದ ಧನ್ಯತಾಭಾವವನ್ನು ಗುರುತಿಸುವ ಪುರುಸೊತ್ತಾದರೂ ಯಾರಿಗಿತ್ತು? ಇದಲ್ಲವಾದರೆ, ತಂದೆಯ ಮುಖದಲ್ಲಿ ಹೀಗೂ ಒಂದು ಭಾವ ಅಡಗಿದ್ದಿರಲೂಬಹುದೇನೋ, ಅದು - ನನ್ನ ಮಕ್ಕಳಲ್ಲವೇ ಅವರು, ಅವರು ಇರಬೇಕಾಗಿದ್ದು ಹೀಗೇ ತಾನೇ? - ಎಂಬ ತುಸು ಹಮ್ಮು ಬೆರೆತ ಹೆಮ್ಮೆ!

ಇದು ಬಹಳ ಹಿಂದೇನಲ್ಲ, ಸ್ವಲ್ಪ ವರ್ಷಗಳ ಕೆಳಗೆ ಜನರಲ್ಲಿದ್ದ ಮನೋಭಾವವೇ ಬೇರೆ. ಅದು ’’ತಲೆಯನು ಬಾಚಲು ಅಮ್ಮನೇ ಬೇಕು, ಹೋಂ ವರ್ಕ್‌ ಮಾಡಿಸೆ ಅಪ್ಪನೇ ಬೇಕು’’ ಎಂಬ ಪರಿಮಿತಿಗಳಿದ್ದ ಕಾಲ. ತಂದೆ ಮಾಡುವ ಕೆಲಸಗಳೇ ಬೇರೆ. ತಾಯಿಯದೇ ಬೇರೆ ಎಂಬ ವರ್ಗೀಕರಣಗಳು ಆಗ ಬಲವಾಗಿದ್ದವು. ಪುಟ್ಟ ಮಗುವೊಂದನ್ನು ನೋಡಿಕೊಳ್ಳುವುದು, ಅದೂ, ಮಾತೇ ಆಡದ ಮುಗ್ಧ ಜೀವವನ್ನು ನಿರ್ವಹಿಸುವುದು ಬಹಳ ನಾಜೂಕಿನ ಕೆಲಸ. ಇದನ್ನು ಮಗುವಿನ ತಾಯಿಯಾಬ್ಬಳು ನಿಭಾಯಿಸುವಷ್ಟು ನವಿರಾಗಿ ತಂದೆಯಿಂದ ಸಾಧ್ಯವಿಲ್ಲ ಎಂಬ ಭಾವನೆಯಿತ್ತು. ಬಹುಶ: ಹಿಂದಿದ್ದ ಅವಿಭಕ್ತ ಕುಟುಂಬಗಳಲ್ಲಿ, ಮನೆಗಳಲ್ಲಿ ಬಹಳ ಜನಗಳು ಇರುತ್ತಿದ್ದುದರಿಂದ ತಂದೆಗೆ ಮಕ್ಕಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇರಲಿಲ್ಲವೇನೋ. ಆಗೆಲ್ಲ ಮಕ್ಕಳು ಬೆಳೆದು ದೊಡ್ಡವರಾಗುವರೆಗೂ ಅವರು ತಾಯಿಯ ಸ್ವತ್ತು. ತಂದೆಯೇನಿದ್ದರೂ ಮಕ್ಕಳ ಪಾಲಿಗೆ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ಅತಿಥಿ!

ಇವತ್ತಿನ ಪರಿಸ್ಥಿತಿ ಹಾಗಿಲ್ಲ. ತಮ್ಮ ಕುಸುಮ ಕೋಮಲ ಕಂದಮ್ಮಗಳನ್ನು ಅಮ್ಮನಿಗಿಂತ ಮಿಗಿಲಾಗಿ ಸಲಹುವ ಜಾಣ್ಮೆ ಇಂದು ಅಪ್ಪನ ಪಾಲಾಗಿದೆ. ಮೊದಲ ಬಾರಿ ತಾಯಿಯಾಗುವ ಹೆಣ್ಣಿಗೆ ಇರುವಷ್ಟೇ ಆತಂಕ, ಜವಾಬ್ದಾರಿಗಳು ತಂದೆಗೂ ಇರುತ್ತವೆ. ಅದಕ್ಕೆಂದೇ ಇಲ್ಲಿಯ ಆಸ್ಪತ್ರೆಗಳಲ್ಲಿ, ಮೊದಲ ಮಗು ಜನಿಸುವ ಮೊದಲು, ಮಗುವಿನ ಪಾಲನೆ-ಪೋಷಣೆಯ ಬಗೆಗೆ ಭಾವೀ ತಂದೆ, ತಾಯಿಯರಿಗೆ ವೈದ್ಯರು ಪ್ರಾಥಮಿಕ ತರಬೇತಿಗಳನ್ನು ಕೂಡ ನೀಡುವ ವ್ಯವಸ್ಥೆಯಿದೆ!

ತಾಯಿಯ ಬೆಚ್ಚನೆಯ ಗರ್ಭದಿಂದ ಹೊರಬಂದ ಅಬೋಧ ಮಗು ತನ್ನ ತಂದೆ, ತಾಯಿಗಳನ್ನು ನೋಡುತ್ತಾ, ಅವರು ಕಲಿಸಿದ್ದನ್ನು ಕಲಿಯುತ್ತಾ, ಅವರ ಕಣ್ಣಿನಿಂದಲೇ ಈ ಜಗವನ್ನು ನೋಡುತ್ತಾ, ಅಪರಿಚಿತ ಪ್ರಪಂಚವನ್ನು ತನ್ನದಾಗಿಸಿಕೊಳ್ಳುತ್ತಾ ಹೋಗುತ್ತದೆ. ಪುಟ್ಟ ಮಗುವೊಂದನ್ನು ತಾಯಿ,ತಂದೆಗಳು ಕೈ ಹಿಡಿದು ನಡೆಸುತ್ತಿರುವ ಸಾಮಾನ್ಯ ದೃಶ್ಯ ಮಗುವಿನ ಭವಿಷ್ಯಕ್ಕೂ ಅನ್ವಯಿಸುತ್ತದೆ. ಆದರೆ ಬದಲಾಗುತ್ತಿರುವ ಸಮಾಜದ ಜೀವನ ವಿಧಾನಗಳಿಗೆ, ಹೊಸ ಆಲೋಚನೆಗಳಿಗೆ ತಕ್ಕಂತೆ, ‘ತಂದೆ-ತಾಯಿ-ಮಗು’-ಎಂಬ ಕುಟುಂಬದ ಪರಿಕಲ್ಪನೆ ಕೂಡ ಬದಲಾಗುತ್ತಿದೆ. ತಾಯಿ ಅಥವಾ ತಂದೆ ಏಕವ್ಯಕ್ತಿ ಪೋಷಕರಾಗಿರುವ ಹೊಸ ಕುಟುಂಬ ಪದ್ಧತಿಯಾಂದು ಈಗ ಮೆಲ್ಲನೆ ತಲೆ ಎತ್ತುತ್ತಿದೆ. ಇಂತಹ ವ್ಯವಸ್ಥೆಯನ್ನು ವಿವಾಹ ವಿಚ್ಛೇದನ, ಪತಿ-ಪತ್ನಿಯರಲ್ಲಿ ಒಬ್ಬರ ಮರಣ....ಇಂತಹ ಕೆಲವು ಅನಿವಾರ್ಯ ಪ್ರಸಂಗಗಳಲ್ಲಿ ಸ್ವಾಗತಿಸಬಹುದಾದರೂ, ಉಳಿದಂತೆ ಮಗುವಿನ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಅಷ್ಟೇನೂ ಉತ್ತಮವೆನಿಸದು.

ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ತಾಯಿಯಷ್ಟೇ ತಂದೆಯ ಪಾತ್ರವೂ ಹಿರಿದು. ತಾಯಿಯ ತುಂಬು ಪ್ರೀತಿ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದರೆ, ತಂದೆಯ ವಾತ್ಸಲ್ಯ ಮಗುವಿಗೆ ಬೆಚ್ಚಗಿನ, ಸುರಕ್ಷಿತ ಭಾವವನ್ನು ನೀಡುತ್ತದೆ. ಇಂತದೊಂದು ಭದ್ರತೆಯ ಭಾವನೆಯನ್ನು ತಾಯಿ ನೀಡುವುದು ಸಾಧ್ಯವಿಲ್ಲ. ಹಾಗಾಗಿ ಮಕ್ಕಳು ಈಜು, ಸೈಕಲ್‌ ಮುಂತಾದ ಕ್ರೀಡೆಗಳನ್ನು ಕಲಿಯಲು ತಂದೆಯನ್ನೇ ಆಶ್ರಯಿಸುತ್ತವೆ. ಬೆಳೆಯುತ್ತಿರುವ ಮಗುವಿನ ಎದುರು ಇರುವ ಮಾದರಿ ವ್ಯಕ್ತಿತ್ವವೆಂದರೆ ಅದು ತನ್ನ ತಂದೆಯದೇ. ಅಪ್ಪನ ಪ್ರತಿಯಾಂದು ಚಲನವಲನವನ್ನು ಗಮನಿಸುತ್ತಲೇ ಇರುವ ಮಗುವಿನ ಪುಟ್ಟ ಕಣ್ಣುಗಳಿಗೆ ತನ್ನ ತಂದೆಯೇ ಪುರುಷೋತ್ತಮ! ಮಗು ಅಮ್ಮನ ಮೃದು ಅಪ್ಪುಗೆಯಲ್ಲಿ ನೆಮ್ಮದಿಯಾಗಿರಲು ಹಾತೊರೆಯುವಂತೆ, ಗಾಳಿಯಲ್ಲಿ ಗಿರಗಿರ ತಿರುಗಿಸುವ, ಮೇಲಕ್ಕೆ ಎಸೆದು ಹಿಡಿಯುವ ಅಪ್ಪನ ಒರಟು ಆಟಗಳನ್ನೂ ಕಿಲಕಿಲ ನಗುತ್ತಾ ಆನಂದಿಸುತ್ತದೆ!

ಕೆಲವು ದಿನಗಳ ಹಿಂದೆ ತಾಯಂದಿರ ದಿನ ಮುಗಿಯಿತು. ಈಗ ತಂದೆಯಂದಿರ ದಿನವೂ ಮುಗಿದಿದೆ. ‘ನಾವು ನಮ್ಮ ತಂದೆ-ತಾಯಿಗಳನ್ನು ಈ ಒಂದು ದಿನ ಮಾತ್ರ ನೆನೆಯಬೇಕಿಲ್ಲ, ಪ್ರತಿದಿನವೂ ಅವರನ್ನು ಗೌರವಿಸುತ್ತೇವೆ. ಅವರಿಗೆ ನಮಸ್ಕರಿಸುತ್ತೇವೆ. ಈ ಫಾದರ್ಸ್‌ ಡೇ, ಮದರ್ಸ್‌ ಡೇ ಯಾಕೆ ಮಾಡಬೇಕು? ತಂದೆ, ತಾಯಿಗಳಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟು, ಆ ದಿನ ಮಾತ್ರ ಅವರನ್ನು ನೆನೆಯುವುದು ನಮ್ಮ ಸಂಸ್ಕೃತಿಯಲ್ಲ.’ - ಈ ರೀತಿಯ ಮಾತುಗಳು ಪ್ರತಿ ವರ್ಷದಂತೆ, ಈ ವರ್ಷವೂ ಮತ್ತೊಮ್ಮೆ ಪ್ರತಿಧ್ವನಿಸಿ ಹೋಯಿತು.

ಹೆತ್ತವರನ್ನು ದಿನವೂ ಪೂಜಿಸಿ, ಪ್ರೀತಿಸಿ. ಎಲ್ಲಾ ಸರಿ. ಆದರೆ ಆ ಪ್ರೀತಿಗೆ ಒಂದು ದಿನವನ್ನು ಸಾಂಕೇತಿಕವಾಗಿ ಮೀಸಲಾಗಿಟ್ಟು, ಅದನ್ನು ಸಂಭ್ರಮದಿಂದ, ಸಂತಸದಿಂದ ಆಚರಿಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮದು ಮಾತ್ರ ಶ್ರೇಷ್ಟ, ವಿದೇಶೀಯರ ಆಚರಣೆಗಳೆಲ್ಲ ಪೊಳ್ಳು, ಅರ್ಥಹೀನ ಎಂದು ದೂರುವುದು ನಮ್ಮ ಸಿನಿಕತನ, ಅಹಂಕಾರಗಳನ್ನಷ್ಟೇ ತೋರಿಸುವುದಿಲ್ಲವೇ?

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X