• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಸಿವಿನ ನಂಟು ಓದುಗರ ಪತ್ರಗಳ ಗಂಟು

By Staff
|
(‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ’ - ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ಈ ಲೇಖನದಲ್ಲಿ ನಾನು ಬಳಸಿದ್ದ ‘ಕದನ್ನ’ ಪದದ ಬಗ್ಗೆ, ಲೇಖಕ ಮಿತ್ರರಿಂದ ತಿಳಿದು ಬಂದ ವಿದ್ವತ್ಪೂರ್ಣ ಅಭಿಪ್ರಾಯ, ಅನಿಸಿಕೆಗಳೂ ಜೊತೆಗಿವೆ! - ಕೆ. ತ್ರಿವೇಣಿ ಶ್ರೀನಿವಾಸರಾವ್‌)
ತ್ರಿವೇಣಿಯವರೆ,

‘ಅನ್ನಬ್ರಹ್ಮ’ನ ಬಗೆಗಿನ ನಿಮ್ಮ ಲೇಖನ ಸೊಗಸಾಗಿದೆ. ಮನುಷ್ಯನನ್ನು ಬೇರೆ ಯಾವುದರಿಂದಲೂ ಸಂತೃಪ್ತಿ ಪಡಿಸಲು ಸಾಧ್ಯವಿಲ್ಲ. ಅನ್ನದಾನದಿಂದ ಮಾತ್ರ ಅವನನ್ನು ತೃಪ್ತಿಪಡಿಸಲು ಸಾಧ್ಯ ಎಂಬುದು ಸತ್ಯ. ಅನ್ನದಾನವೇ ಶ್ರೇಷ್ಠ ಎಂಬುದೂ ಸತ್ಯ. ಮನಮುಟ್ಟುವಂತಹ ಲೇಖನಗಳು ಹೀಗೆಯೇ, ಇನ್ನೂ ಹೆಚ್ಚು ಬರಲಿ.

ವಂದನೆಗಳು.

-ಸಂಪಿಗೆ ಶ್ರೀನಿವಾಸ, ಬನವಾಸಿ ಬಳಗ, ಬೆಂಗಳೂರು

*

ಶ್ರೀಮತಿ ತ್ರಿವೇಣಿರಾವ್‌ ಅವರಿಗೆ ನಮಸ್ಕಾರಗಳು.

ಕೆಲಸದ ಒತ್ತಡಗಳ ನಡುವೆ ತಮ್ಮ ಲೇಖನಗಳ ಬಗೆಗೆ ಬರೆಯಲು ಸಾಧ್ಯವಾಗಲಿಲ್ಲ. ಈಗ ಸ್ವಲ್ಪ ಆರಾಮಿದೆ. ಆದ್ದರಿಂದ ತಮ್ಮ ಲೇಖನಗಳು ಪ್ರಕಟವಾದ ದಿನವೇ ಓದಿರುತ್ತೇನೆ. ಈ ಬಾರಿಯೂ ತಾವು ಆಯ್ಕೆ ಮಾಡಿಕೊಂಡಿರುವ ವಿಷಯ ಚೆನ್ನಾಗಿದೆ.

ನಾನು ಪ್ರತಿ ಬಾರಿ ಊಟ ಮಾಡಿದಾಗಲೂ ಮರೆಯದೆ ನುಡಿಯುವ ಎರಡು ಮಾತುಗಳೆಂದರೆ - ‘ಅನ್ನಧಾತೋ ಸುಖೀಭವ!’ ಇದಕ್ಕೆ ಕಾರಣವನ್ನು ತಾವೇ ಲೇಖನದಲ್ಲಿ ಸವಿವರವಾಗಿ ಬರೆದಿರುತ್ತೀರಿ. ನಮ್ಮ ಕಡೆ ‘ಅನ್ನದ ಋಣ, ತಾಯಿಯ ಋಣ’ ತೀರಿಸದೆ ಇರುವವರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅದರಿಂದ ಏನೂ ಫಲವಿಲ್ಲ ಎಂಬ ಜನಜನಿತವಾಗಿರುವ ಮಾತಿದೆ. ಇದಕ್ಕೆ ನನ್ನದೂ ಸಹಮತವಿದೆ. ತಾವು ಅನ್ನದ ಬಗ್ಗೆ ಲೇಖನ ಬರೆದು, ನನ್ನಲ್ಲಿ ಅನ್ನದ ಋಣ ಹೊರಿಸಿರುತ್ತೀರಿ. ಈ ಅನ್ನದ ಋಣವನ್ನು ಹೇಗೆ ತೀರಿಸಲಿ ತ್ರಿವೇಣಿ ಅಕ್ಕಾ?

ವಂದನೆಗಳು.

-ರಘುನಾಥ್‌ ಪಿ. ಜಿ., ಬೆಂಗಳೂರು

*

ತಾಯೇ,

‘ತುತ್ತು ಅನ್ನ ತಿನ್ನೋಕೆ........ ’ ಇಂದು ಓದಿದೆ.

ನನಗೆ ‘ಕದನ್ನ ’ ಬಗ್ಗೆ ಅರ್ಥ ಆಗಲಿಲ್ಲ (ಅಲ್ಪ ಮತಿ ನಾನು! ). ಹೆಚ್ಚಿನ ವಿವರ ತಿಳಿಸಿದರೆ ನಾನು ಧನ್ಯ.

ಮನುಷ್ಯನಿಗೆ ಎಲ್ಲ ರಸಕ್ಕಿಂತಲೂ ಅನ್ನ ರಸವೇ ಮುಖ್ಯ. ದೇವಳದ ಧರ್ಮಾರ್ಥ ಅನ್ನವನ್ನು ( ಸಂತರ್ಪಣೆಯ ‘ಅನ್ನ ದಾನದ’ ಅನ್ನವನ್ನು ) ಗುರು ನಾನಕರು ‘ವಿಷ ’ ಎಂದು ಬಣ್ಣಿಸಿದ್ದಾರಂತೆ! ದಾಸೋಹದ ಅನ್ನ ಮನುಷ್ಯನಲ್ಲಿ ದುಡಿದು ತಿನ್ನುವ ಛಲವನ್ನು ಕ್ಷೀಣ ಮಾಡುತ್ತದಂತೆ! ಅದಕ್ಕೇ, ಇಂದಿಗೂ ಗುರುದ್ವಾರಗಳಲ್ಲಿ ಊಟ ಮಾಡುವ ಮೊದಲು ತಮ್ಮಿಂದಾದ ಕರ ಸೇವೆಯನ್ನು ಮಾಡಿಯೇ ಉಣ್ಣ ಬೇಕಂತೆ. ಈ ಕರ ಸೇವೆ ಎಂಬುದು ಗುರುದ್ವಾರಕ್ಕೆ ಬರುವ ಭಕ್ತಜನರ ಪಾದರಕ್ಷೆಯ ಧೂಳನ್ನು ಒರೆಸುವ ರೂಪದಲ್ಲಿ ಇರಬಹು ದು ಅಥವಾ ಗುರುದ್ವಾರದ ಶೌಚಾಲಯಗಳನ್ನು ತೊಳೆಯುವ ರೂಪದಲ್ಲಿ ಕೂಡಾ ಇರಬಹುದಂತೆ! ..... ಅಂತೂ ‘ಫ್ರೀ ಮೀಲ್‌ ’ ಸಲ್ಲದು! ಇದು ಸಿಖ್‌ ತತ್ವ!

ಆದರೆ, ಹಿಂದೂ ಧರ್ಮದಲ್ಲಿ ‘ಅನ್ನ ದಾನವೇ ಮಹಾದಾನ’. ಇದಕ್ಕಿಂತ ಮಿಗಿಲಾದ ದಾನ ಇನ್ನೊಂದಿಲ್ಲವಂತೆ! ಹಿಂದೂ ಮನುಷ್ಯನ ಷೋಡಶ ಕರ್ಮಗಳಲ್ಲಿ ಅನ್ನದಾನಕ್ಕೇ ಹೆಚ್ಚಿನ ಮಹತ್ವ. ಇದರ ಅರ್ಥ ಪ್ರತೀ ಧಾರ್ಮಿಕ ವಿಧಿಯಲ್ಲಿ ‘ಅನ್ನ ದಾನ’ ಮಾಡಿ, ಮನುಜನು ತನ್ನ ಸಂಪತ್ತನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂದಲ್ಲವೇ? ಊಟಕ್ಕೆ ಮೊದಲು ‘ಗೋಗ್ರಾಸ’ ಇಡಬೇಕೆನ್ನುವುದು ನಮ್ಮ ಸಂಸ್ಕೃತಿ. ಇದರ ಅರ್ಥ ನಮ್ಮ ಸಾಕು ಪ್ರಾಣಿಗಳಿಗೂ ಅನ್ನ ಇಟ್ಟು ಉಣ್ಣಬೇಕೆಂದಲ್ಲವೇ?

ಹೀಗೆ ಹಲವಾರು ನೆನೆಪುಗಳು ನನ್ನನ್ನು ಕಲಕಿದುವು.

ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಓದಿದ ಮೇಲೆ ಹಸಿವು ಬೇರೆ ಶುರು ಆಯಿತು! ಬಿಸ್ಕಿಟ್‌(ನಿಮ್ಮ ಕೂಕೀಸ್‌) ಡಬ್ಬಕ್ಕೆ ದಾಳಿ ಇಡುತ್ತೇನೆ.

ವಂದನೆಗಳು.

-ಎಸ್‌. ಮಧುಸೂದನ ಪೆಜತ್ತಾಯ, ಬೆಂಗಳೂರು

*

‘ಕದನ್ನ’ ವಿಷಯ ನನಗೂ ಗೊತ್ತಿಲ್ಲ, ನಾನು ತಿಂದಿಲ್ಲ. ನನ್ನ ಪನ್‌ ಪ್ರಕಾರ: ಅನ್ನ ತಿನ್ನುವಾಗಲೂ ಜಗಳ (= ಯುದ್ಧ, ಕದನ) ಮಾಡುತ್ತಿದ್ದ ತ್ರಿವೇಣಿಯವರು ಮತ್ತು ಅವರ ಸಹೋದರ ಸಹೋದರಿಯರ (ಬಾಲ್ಯದಲ್ಲಿ) ವಿಷಯದಲ್ಲಿ, ಅವರ ಹೆತ್ತವರು ಪ್ರೀತಿಯಿಂದ ಅನ್ನ ಬಡಿಸುವುದನ್ನೇ ‘ಕದನ್ನ’ ಎನ್ನುತ್ತಿದ್ದರೋ ಏನೋ ಅಂತ ನನ್ನದೊಂದು ಕೇವಲ ‘ಪನ್‌’ ಗುಮಾನಿ!

ಇತಿ ‘ಪನ್‌’ಗನಾಮ ನಿಪುಣ,

-ಶ್ರೀವತ್ಸ ಜೋಶಿ, ಮೇರಿಲ್ಯಾಂಡ್‌

*

ತ್ರಿವೇಣಿಯವರೆ,

ಕದನ್ನ -ಕಿಟ್ಟೆಲ್ಲಿನಲ್ಲಿ ಆಪ್ತೆಯಲ್ಲಿ ಎರಡರಲ್ಲೂ ಈ ಪದ ಇದೆ. ಕಿಟ್ಟೆಲ್‌ ಪ್ರಕಾರ ಇದು ಸಾಮಾನ್ಯವಾಗಿ ದೊರಕುವ ಪದ. ಬೊಂಬಾಯಿ ಸರ್ಕಾರದ ಶಿಕ್ಷಣವಿಭಾಗದ 5ನೆಯ(ತರಗತಿಯ?) ಪುಸ್ತಕದ 76ನೆಯ ಪುಟದಲ್ಲಿ ಈ ಪದ ಇದೆ. ಪುಸ್ತಕ 1868ರಲ್ಲಿ ಪ್ರಕಟವಾಗಿದೆ ಎಂದು ಹೇಳಿರುವುದರಿಂದ ಅದನ್ನು ನೋಡಿ ಬಳಕೆ ಏನು ಎಂದು ತಿಳಿದುಕೊಳ್ಳುವುದು ಕಷ್ಟವೆಂದು ಕಾಣುತ್ತದೆ.

ಅಪ್ತೆಯವರ ಪ್ರಕಾರ, ಕದ್‌ ಎನ್ನುವುದು ಕು ಎಂಬ ತುಣುಕಿನಂತೆ ಕೆಟ್ಟದ್ದನ್ನು ಸೂಚಿಸುತ್ತದೆ. ಇದಕ್ಕೆ ಉದಾಹರಣೆಗಳು ಕದಕ್ಷರಂ(ಕೆಟ್ಟ ಅಕ್ಷರ, ಬರಹ), ಕದಗ್ನಿಃ(ಮಂದವಾದ ಬೆಂಕಿ), ಕದಧ್ವನ್‌(ಕೆಟ್ಟ ರಸ್ತೆ), ಕದಪತ್ಯಂ(ಕೆಟ್ಟ ಮಗ/ಮಗಳು) ಇತ್ಯಾದಿ.

ಇನ್ನೂ ಹುಡುಕಿದಾಗ, ‘ಕೋಃ ಕತ್‌ ತತ್ಪುರುಷೇ ಅಚಿ’ ಎನ್ನುವ ಪಾಣಿನಿಯ ಸೂತ್ರ ಸಿಕ್ಕಿತು(6-3-101, ಅಂದರೆ 6ನೆಯ ಅಧ್ಯಾಯದ 3ನೆಯ ಪಾದದ 101ನೆಯ ಸೂತ್ರ). ಅಂದರೆ, (ನಾನು ಅರ್ಥೈಸುವಂತೆ) ಕು ಜಾಗಕ್ಕೆ ತತ್ಪುರುಷಸಮಾಸವಾದಾಗ ಮುಂದಿನ ಪದ ಯಾವುದಾದರಿಂದಲೂ ಅಚ್‌ ಇಂದ, ಅಂದರೆ ಸ್ವರದಿಂದ(ಅಚ್‌ ಅಂದರೆ ವ್ಯಾ ಕರಣದ ಪರಿಭಾಷೆಯಲ್ಲಿ ಸ್ವರಗಳು; ಏಕೆ ಎನ್ನುವುದು ಸ್ವಾರಸ್ಯವಾದ ಮತ್ತೊಂದು ವಿಷಯ) ಪ್ರಾರಂಭವಾದರೆ, ಆಗ ಅದು ಕದ್‌ ಆಗುತ್ತದೆ. ಮೇಲಿನ ಪದಗಳು ಇದಕ್ಕೆ ಉದಾಹರಣೆಗಳು. ಕು + ಬ್ರಾಹ್ಮಣ, ಕದ್ಬ್ರಾಹ್ಮಣ ಆಗುವುದಿಲ್ಲ, ಕುಬ್ರಾಹ್ಮಣ ಆಗೇ ಇರುತ್ತದೆ.

ಈ ವಿಚಾರ ಇನ್ನೂ ತಿಳಿಯಲು, ಆಕರಗಳು: ಚಕ್ರವರ್ತಿ ಶ್ರೀನಿವಾಸಗೋಪಾಲಾಚಾರ್ಯರ ‘ಶಬ್ದಾರ್ಥಕೌಸ್ತುಭ’. ಸುಮಿತ್ರ ಕತ್ರೆಯವರ ‘ಅಷ್ಟಾಧ್ಯಾಯಿ ಆಫ್‌ ಪಾಣಿನಿ’.

-ಕೃಷ್ಣಪ್ರಿಯ

*

ಆತ್ಮೀಯರೇ,

ಕದನ್ನ ಎಂಬ ಪದಕ್ಕೆ ವಾಮನ್‌ ಶಿವರಾಮ್‌ ಆಪ್ಟೆಯವರ ಸಂಸ್ಕೃತ ನಿಘಂಟುವಿನಲ್ಲಿ bad food ಎಂದು ಅರ್ಥವಿದೆ.

ನಮ್ಮ ತಾಯಿಯವರು ಸ್ವಲ್ಪ ಹಳೆಯ ಊಟವನ್ನು ಕಾಸಿ ಬಡಿಸುವ ಬಗ್ಗೆ ಸಂಸ್ಕೃತದಲ್ಲಿ ‘ಕದನ್ನತಾ ಚ ಉಷ್ಣತಯಾ ವಿರಾಜತೇ’ ಅಂದರೆ ‘ಹಳೆಯೂಟವೂ ಬಿಸಿಯಾಗಿದ್ದರೆ ಶೋಭಿಸುವುದು’ ಎಂದು ತಮಾಷಿಯಾಗಿ ಹೇಳುತ್ತಿದ್ದರು ಎಂಬುದು ನೆನಪಿಗೆ ಬರುತ್ತದೆ. ಇದನ್ನು ನಾವು microwave ovenನಲ್ಲಿ ಊಟವನ್ನು ಕಾಸಿ ತಿನ್ನುವಾಗಲೆಲ್ಲ ನೆನೆದುಕೊಂಡು ತಿನ್ನುತ್ತೇನೆ!

ಇಂತು ನಿಮ್ಮ ಮಿತ್ರ,

-ರಾಮಪ್ರಿಯನ್‌.

*

ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟುವಿನಲ್ಲಿ ‘ಕದನ್ನ’ ಎಂಬ ಶಬ್ದಕ್ಕೆ ‘ ಕೆಟ್ಟ ಅನ್ನ, ಕೀಳು ಆಹಾರ’ ಎಂಬ ಅರ್ಥಗಳನ್ನು ಕೊಟ್ಟಿದೆ.

-ಮೈ.ಶ್ರೀ. ನಟರಾಜ

*

ಶ್ರೀಮತಿ ತ್ರಿವೇಣಿಯವರೇ,

ತುತ್ತು ಅನ್ನ, ಬೊಗಸೆ ನೀರಿನ ಬಗ್ಗೆ ನೀವು ಬರೆದಿರುವ ಅಂಕಣವನ್ನು ಓದಿ, ಮತ್ತು ಶ್ರೀಯುತ ಪೆಜತ್ತಾಯರಿಂದ ಪ್ರಾರಂಭವಾದ ವಿದ್ಯುದಂಚೆಯ ಸರಣಿಯನ್ನೂ ಓದಿ ಅದರಲ್ಲಿ ಭಾಗವಹಿಸಿ ಬಹಳ ಆನಂದಿಸಿದೆ. ಆ ಸರಣಿಗೆ ಕದನ್ನ-ಕದನ-ಕಥನ ಎಂದು ಬೇಕಾದರೆ ಹೇಳಬಹುದು! ಹಾಗೆಯೇ ಮತ್ತಷ್ಟು ಆಲೋಚನೆಗಳು ಬರುತ್ತಿರುವುದರಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.

ಅನ್ನದ ಬಗ್ಗೆ ಹೇಳಿ-ಹಾಡಿ-ಬರೆದಿರುವರು ವೇದಕಾಲದಿಂದಲೂ ಬಹಳ ಮಂದಿ. ಇದರಲ್ಲಿ ಕಾಲಾನುಕ್ರಮವಾಗಿ ಹೇಳುವ ಪ್ರಯತ್ನ ಹೆಚ್ಚಾಗಿ ಮಾಡದೆ, ಉದಾಹರಣೆಗಾಗಿ ಕೆಲವನ್ನು ಮಾತ್ರ ನಿರೂಪಿಸುತ್ತೇನೆ. ಇದರೆಲ್ಲೆಲ್ಲ ‘ಅನ್ನ’ ಎಂದರೆ ‘ಬೆಂದಿರುವ ಅಕ್ಕಿ’ ಎಂಬ ಅರ್ಥವಲ್ಲ. ‘ಅತ್ತುಂ ಯೋಗ್ಯಂ ಅನ್ನಂ’ (ತಿನ್ನಲು ಯೋಗ್ಯವಾದ ಪದಾರ್ಥ, ಅಂದರೆ ಯಾವ ರೀತಿಯ ಆಹಾರವಾದರೂ ಅದು ಅನ್ನ) ಎಂಬ ಅರ್ಥದಿಂದ ನೋಡಬೇಕು.

1. ಭೃಗುರ್ವೈ ವಾರುಣಿಃ। ... ಸ ತಪಸ್ತಪ್ತ್ವಾ। ಅನ್ನಂ ಬ್ರಹ್ಮೇತಿ ವ್ಯಜಾನಾತ್‌। ಅನ್ನಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ। ಅನ್ನೇನ ಜಾತಾನಿ ಜೀವಂತಿ। ಅನ್ನಂ ಪ್ರಯಂತ್ಯಭಿಸಂವಿಶಂತೀತಿ। ತದ್ವಿಜ್ಞಾಯ। ಪುನರೇವ ವರುಣಂ ಪಿತರಂ ಉಪಸಸಾರ। ...

ಇದು ತೈತ್ತಿರೀಯೋಪನಿಷತ್ತಿನ ಭೃಗುವಲ್ಲಿಯ ಒಂದು ಭಾಗ. ವರುಣನ ಮಗನಾದ ಭೃಗುವು ತನ್ನ ತಂದೆಯೂ, ಗುರುವೂ ಆದ ವರುಣನ ಹತ್ತಿರ ಹೋಗಿ ‘ನನಗೆ ಬ್ರಹ್ಮವನ್ನು ಉಪದೇಶಿಸು’ ಎಂದು ಕೇಳಿದಾಗ, ವರುಣನು ಅವನನ್ನು ತಪಸ್ಸು ಮಾಡಿಯೇ ನೀನದನ್ನರಿಯಬೇಕೆನ್ನುತ್ತಾನೆ. ಅವನು ತಪಸ್ಸನ್ನು ಮಾಡಿ - ಅನ್ನವೇ ಬ್ರಹ್ಮವೆಂದರಿತನು. ಅನ್ನದಿಂದಲೇ ಜೀವಿಗಳೆಲ್ಲ ಹುಟ್ಟುತ್ತವೆ. ಅನ್ನದಿಂದಲೇ ಹುಟ್ಟಿದ್ದವು ಬದುಕುತ್ತವೆ. ಅನ್ನದಲ್ಲೇ ಅವು ಹೋಗಿ ಲೀನವಾಗುತ್ತವೆ. ಇದನ್ನರಿತು, ಮತ್ತೆಯೂ (ಭೃಗುವು) ಅಪ್ಪ ವರುಣನ್ನು ಸಮೀಪಿಸಿದನು. ಇಂತೇ ಅವನು ಮನಸ್ಸು, ವಿಜ್ಞಾನ ಮತ್ತು ಆನಂದಗಳ ಬಗ್ಗೆಯೂ ಅರಿಯಲು ಮುಂದುವರಿಯುತ್ತಾನೆ.

2. ಅನ್ನಂ ನ ನಿಂದ್ಯಾತ್‌। ತದ್ವ್ರತಂ। ... ಅನ್ನಂ ನ ಪರಿಚಕ್ಷೀತ। ತದ್ವ್ರತಂ। .. ಅನ್ನಂ ಬಹು ಕುರ್ವೀತ। ತದ್ವ್ರತಂ। ...

ಇದೂ ಭೃಗುವಲ್ಲಿಯಲ್ಲೇ ಬರುತ್ತದೆ. ಇದರ ಅರ್ಥ ಹೀಗಿದೆ ಅನ್ನವನ್ನು ಬಯ್ಯಬಾರದು. ಅದು ವ್ರತವು. ... ಅನ್ನವನ್ನು ಬಿಸಾಡಬಾರದು (ದಂಡಮಾಡಬಾರದು). ಅದು ವ್ರತವು. ... ಅನ್ನವನ್ನು ಹೆಚ್ಚಾಗಿ ಮಾಡಬೇಕು. ಅದು ವ್ರತವು. ...

3. ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ 13ನೆಯ ಮತ್ತು 14ನೆಯ ಶ್ಲೋಕಗಳು (ಸಂಸ್ಕೃತದ ಪದ್ಯಗಳನ್ನು ಮೊದಲು ಬರೆದು ನಂತರ ಅವುಗಳ ಕನ್ನಡ ಪದ್ಯರೂಪ ಭಾಷಾಂತರವನ್ನು ಬರೆದಿದ್ದೇನೆ):

ಯಜ್ಞಶಿಷ್ಟಾಶ್ನಿನಸ್ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ।

ಭುಂಜತೇ ತೇ ತ್ವಘಂ ಪಾಪಾತ್‌ ಯೇ ಪಚಂತ್ಯಾತ್ಮಕಾರಣಾತ್‌।।13।।

ಯಜ್ಞದಿಂದುಳಿದದ್ದುಂಬ ಸಜ್ಜನರ್‌ ಪಾಪಮುಕ್ತರೈ ।

ತಮಗೆಂದೇ ಬೇಯಿಪಂಥ ದುರ್ಜನರ್‌ ಪಾಪವುಂಬರು ।।13।।

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾತ್‌ ಅನ್ನಸಂಭವಃ ।

ಯಜ್ಞಾತ್‌ ಭವತಿ ಪರ್ಜನ್ಯಃ ಯಜ್ಞಃ ಕರ್ಮಸಮುದ್ಭವಃ ।।14।।

ಅನ್ನದಿಂ ಜೀವಿಗಳ್‌ ಬರ್ಪರ್‌ ಮಳೆಯಿಂದನ್ನ ಬರ್ಪುದೈ ।

ಯಜ್ಞದಿಂ ಬರ್ಪುದು ಮಳೆ ಯಜ್ಞ ಬರ್ಪುದು ಕರ್ಮದಿಂ ।।14।।

ಇಲ್ಲಿ ಯಜ್ಞವೆಂದರೆ ಬೆಂಕಿಗೆ ತುಪ್ಪ, ಇಂಧನ ಇತ್ಯಾದಿ ಪದಾರ್ಥಗಳನ್ನು ಹಾಕಿ ಮಂತ್ರ ಹೇಳುವ ಯಜ್ಞವೇ ಎಂದೆಣಿಸಬೇಕಾಗಿಲ್ಲ. ಇಂದಿನ ಕಾಲದ ದೈನಂದಿನ ಕೆಲಸಗಳನ್ನೂ ಯಜ್ಞವೆಂದೇ ಭಾವಿಸಬಹುದು. ಈ ಭಾವನೆಯಿಂದ ನೋಡಿದರೆ 13ನೆಯ ಪದ್ಯವು ‘ನಾವು ದುಡಿಯುವುದು ನಮ್ಮ ಹೊಟ್ಟೆಪಾಡಿಗೆ ಮಾತ್ರವಾಗಿ, ಮತ್ತೆ ಯಾರಿಗೂ ಕೊಡದೆ ಅದರ ಫಲವನ್ನು ಅನುಭವಿಸುತ್ತೇವೆ’ ಎನ್ನುವುದು ತಪ್ಪು ಎಂದು ತೋರಿಸುತ್ತದೆ.

4. ಭಗವದ್ಗೀತೆ 17ನೆಯ ಅಧ್ಯಾಯದಲ್ಲಿರುವ ಕೆಲವು ಶ್ಲೋಕಗಳು

ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।

ಯಜ್ಞಃ ತಪಃ ತಥಾ ದಾನಂ ತೇಷಾಂ ಭೇದಮ್‌ ಇಮಂ ಶ್ರುಣು ।।

ಎಲ್ಲರ್ಗೂ ಇಷ್ಟಾದಾಹಾರ ಮೂರುರೀತಿಯದಿರ್ಪುದೈ ।

ಯಜ್ಞ ತಪಸ್‌ ದಾನಗಳೂ ಕೇ ಳ್‌ ಅವಲ್ಲಿರ್ಪ ಭೇದವಂ ।।

(ಜನಗಳಿಗೆ ಇಷ್ಟವಾಗಿರುವ ಆಹಾರಗಳಲ್ಲಿ ಮೂರು ತರಹದವು ಇರುವುವು. ಅಂತೆಯೇ ಮೂರು ತರಹದ ಯಜ್ಞಗಳೂ, ಮೂರು ತರಹದ ತಪಸ್ಸುಗಳು, ಮತ್ತು ಮೂರು ತರಹದ ದಾನಗಳು).

ಆಯುಸ್‌-ಸತ್ತ್ವ-ಬಲಾರೋಗ್ಯ-ಸುಖ-ಪ್ರೀತಿ-ವಿವರ್ಧನಾಃ ।

ರಸ್ಯಾಃ ಸ್ನಿಗ್ಧಾಃ ಸ್ಥಿರಾಃ ಹೃದ್ಯಾಃ ಆಹಾರಾಃ ಸಾತ್ವಿಕ-ಪ್ರಿಯಾಃ ।।

ಆಯುಸ್ಸು, ಸತ್ತ್ವ, ಶಕ್ತಿ, ಆರೋಗ್ಯ ಮತ್ತು ಪ್ರೀತಿಗಳನ್ನು ಹೆಚ್ಚಿಸುವ, ರಸವುಳ್ಳ, ಎಳೆಯ, ಗಟ್ಟಿಯಾಗಿರುವ, ಮನಸ್ಸಿಗೆ ಸಂತೋಷ ತರುವ ಆಹಾರಗಳು ಸಾತ್ವಿಕರಿಗೆ ಇಷ್ಟವಾದವು.

ಕಟ್ವಮ್ಲ-ಲವಣಾತ್ಯುಷ್ಣ-ತೀಕ್ಷ್ಣ-ರೂಕ್ಷ-ವಿದಾಹಿನಃ ।

ಆಹಾರಾಃ ರಾಜಸಸ್ಯೇಷ್ಟಾಃ ದುಃಖ-ಶೋಕಾಮಯ-ಪ್ರದಾಃ ।।

ಕಹಿ, ಹುಳಿ, ಉಪ್ಪು, ಬಹಳ ಬಿಸಿ, ತೀಕ್ಷ್ಣ, ಒರಟು ಮತ್ತು ಸುಡುವ ಆಹಾರಗಳು ರಾಜಸ ಜನರಿಗೆ ಇಷ್ಟವು. ಅವು ದುಃಖ, ಶೋಕ ಮತ್ತು ರೋಗಗಳನ್ನು ತರುತ್ತವೆ.

ಯಾತ-ಯಾಮಂ ಗತ-ರಸಂ ಪೂತಿ ಪರ್ಯುಷಿತಂ ಚ ಯತ್‌ ।

ಉಚ್ಛಿಷ್ಟಂ ಅಪಿ ಚ ಅಮೇಧ್ಯಂ ಭೋಜನಂ ತಾಮಸ-ಪ್ರಿಯಂ ।।

ಹಳೆಯದು ರಸಕಳೆದಿರುವುದು, ಕೆಟ್ಟ ವಾಸನೆಯುಳ್ಳದ್ದು, ಎಂಜಲು, ಮತ್ತು ಮಲಿನವಾದದ್ದು - ಇಂತಹ ಊಟವು ತಾಮಸ ಜನಗಳಿಗೆ ಇಷ್ಟವು.

5. ಉದರ-ನಿಮಿತ್ತಂ ಬಹುಕೃತ-ವೇಷಂ ಹೊಟ್ಟೆಯ ಪಾಡಿಗಾಗಿ ನಾನಾ ವೇಷಗಳನ್ನು ಧರಿಸುತ್ತೇವೆ

6. ಅಲಂಕಾರ-ಪ್ರಿಯೋ ವಿಷ್ಣುಃ ಜಲಧಾರಾ-ಪ್ರಿಯಃ ಶಿವಃ ।

ಅನ್ನದಾನ-ಪ್ರಿಯೋ ಬ್ರಹ್ಮಾ ಬ್ರಾಹ್ಮಣೋ ಭೋಜನ-ಪ್ರಿಯಃ ।।

ಇದು ಕನ್ನಡಕ್ಕೆ ತರ್ಜುಮೆ ಮಾಡದೆಯೇ ಎಲ್ಲರಿಗೂ ಅರ್ಥವಾಗುವಂತೆ ಸರಳವಾದ ಸಂಸ್ಕೃತದಲ್ಲಿದೆಯೆಂದು ನಂಬಿದ್ದೇನೆ.

-ಹಂ. ಕ. ರಾಮಪ್ರಿಯನ್‌, ಕ್ಲಾರ್ಕವಿಲ್‌, ಮೇರಿಲೆಂಡ್‌

ಏನಿದು ಅನ್ನ ಪುರಾಣ? :

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more