• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಕ್ಕು ಮರಿ......ದಂಡಮ್‌! ದಶಗುಣಮ್‌!!

By Staff
|

K. Triveni Srinivasarao, Illinois, USಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

ಚಲನಚಿತ್ರವೆಂದ ಮೇಲೆ ಅದಕ್ಕೆ ಫೂರಕವಾಗಿ ಒಂದು ಕತೆ ಇರಲೇಬೇಕು. ಈಗ ಬರುತ್ತಿರುವ ಎಲ್ಲಾ ಚಿತ್ರಗಳಿಗೆ ಈ ಮಾತು ಅನ್ವಯಿಸದಿದ್ದರೂ, ಈವರೆಗೂ ಬಂದ ಬಹುಪಾಲು ಚಿತ್ರಗಳಿಗೆ ಹಿನ್ನೆಲೆಯಾಗಿ ಒಂದು ಕಥಾವಸ್ತು ಇದ್ದೇ ಇರುತ್ತದೆ. ಆ ಒಂದು ಕತೆಯ ಎಳೆಯನ್ನು ಎಲ್ಲಿಯೂ ತೊಡಕಾಗದಂತೆ, ಕಲಾತ್ಮಕವಾಗಿ ವಿಸ್ತರಿಸಿಕೊಂಡು ಹೋಗುವುದು ನಿರ್ದೇಶಕನ ಕೆಲಸ. ಕಾಲಕಾಲಕ್ಕೆ ಬದಲಾಗುವ ಜನಜೀವನದ ಸ್ಥಿತ್ಯಂತರಗಳು ಅಂದಂದಿನ ಚಲನಚಿತ್ರಗಳಲ್ಲಿ ಪ್ರತಿಫಲನಗೊಳ್ಳುತ್ತಾ ಹೋಗುತ್ತವೆ. ಈವರೆಗೂ ಬಂದಿರುವ ಚಿತ್ರಗಳನ್ನು ಅವಲೋಕಿಸಿದಾಗ, ಅಲ್ಲಿ ಸಮಾಜದಲ್ಲಿ ಆಗಿರುವ ಬದಲಾವಣೆಗಳನ್ನು ನಿಖರವಾಗಿ ಗುರುತಿಸಬಹುದು.

ಬದಲಾಗುತ್ತಿರುವ ನಮ್ಮ ನಂಬಿಕೆಗಳು, ಆದರ್ಶಗಳು, ಜೀವನಮೌಲ್ಯಗಳಿಗೆ ತಕ್ಕಂತೆ ತೆರೆಯ ಮೇಲೆ ಬರುವ ಪಾತ್ರಗಳೂ ಕೂಡ ಬದಲಾಗತೊಡಗಿದವು. ಉದಾಹರಣೆಗೆ ಹಿಂದಿನ ಸಿನಿಮಾಗಳಲ್ಲಿ ಕಂಡು ಬರುವ ಅವಿಭಕ್ತ ಕುಟುಂಬಗಳನ್ನು, ಮನೆ ಮಂದಿಯ ಹಿತಕ್ಕಾಗಿ ದುಡಿದು, ತುಳಸಿಕಟ್ಟೆಯ ಮುಂದೆ ಹಾಡುತ್ತಾ, ದಣಿದು ಬರುವ ಗಂಡನ ಟೈ, ಶೂ ಬಿಚ್ಚಿ ಉಪಚರಿಸುವ ಗೃಹಿಣಿಯರನ್ನು ಇಂದಿನ ಸಿನಿಮಾದಲ್ಲಿ ಕಾಣುವುದು ಅಪರೂಪ. ಆ ಜಾಗದಲ್ಲಿ ದುಡಿಯುವ ಮಹಿಳೆಯರ, ವಿದ್ಯಾರ್ಥಿ ಜೀವನದ, ನಗರ ಜೀವನದ ನೂರೆಂಟು ಸಮಸ್ಯೆಗಳ ಕುರಿತಾದ ಚಿತ್ರಗಳು ಮೂಡಿಬಂದವು. ನಾವು ಹಿಂದಿನ ಇತಿಹಾಸವನ್ನು ಅರಿಯಲು ಆ ಕಾಲದಲ್ಲಿ ಬರೆಯಲ್ಪಟ್ಟ ಪ್ರಾಚೀನ ಗ್ರಂಥಗಳ, ಶಾಸನಗಳ ಮೊರೆ ಹೋಗುವಂತೆ, ಮುಂದೆಂದೋ ನಡೆಯಬಹುದಾದ ಅಧ್ಯಯನಕ್ಕೆ ಇವತ್ತಿನ ಚಿತ್ರಗಳೇ ಒಂದು ಆಕರವಾದರೂ ಆಗಬಹುದೇನೋ!

Shivaraj Kumar in Jogiಹೀಗೆ ವಿವಿಧ ಕಾಲಘಟ್ಟಗಳಲ್ಲಿ ಹಾದು ಬಂದಿರುವ ಕನ್ನಡ ಚಿತ್ರರಂಗಕ್ಕೆ ಈಗ ಸಿಕ್ಕಿರುವ ಹೊಸ ಸರಕೆಂದರೆ, ಅದು ಪಾತಕಿಗಳ ಜೀವನ ವೃತ್ತಾಂತ! ಹಿಂದಿ ಚಿತ್ರಲೋಕವನ್ನು ಭೂಗತ ಮಾಫಿಯಾ ಆಳುತ್ತಿರುವಂತೆ, ನಮ್ಮ ಕನ್ನಡ ಚಿತ್ರರಂಗವನ್ನು ಈಗ ಗೆಲ್ಲಿಸುತ್ತಿರುವರು ರೌಡಿಗಳು! ಅಂದರೆ ರೌಡಿಗಳ ಬದುಕಿನ ಸುತ್ತ ಸುತ್ತುವ ಕತೆಗಳು!

ಹಾಗೆ ನೋಡಿದರೆ ಗೂಂಡಾಗಳು, ರೌಡಿಗಳು ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಬಂದವರೇನಲ್ಲ. ರೌಡಿ ರಂಗಣ್ಣ, ಚೂರಿ ಚಿಕ್ಕಣ್ಣ....ಮುಂತಾದ ಹೆಸರಿನ ಚಿತ್ರಗಳು ಯಾವಾಗಲೋ ಬಂದಿವೆ. ಇನ್ನು, ಕಳ್ಳ-ಪೋಲೀಸ್‌ ಕತೆಯನ್ನು ಆಧರಿಸಿದ ಚಿತ್ರಗಳಿಗೆ, ಕರ್ತವ್ಯ ನಿರತ ದಕ್ಷ ಅಧಿಕಾರಿಯ ಇಬ್ಬರು ಮಕ್ಕಳಲ್ಲಿ, ಒಬ್ಬ ತಂದೆಗೆ ತಕ್ಕ ಮಗನಾಗಿ, ಇನ್ನೊಬ್ಬ ಕಾನೂನಿನ ಕೈಗೆ ಸಿಗದ ಸಮಾಜ ಕಂಟಕನಾಗುವ ಕತೆಯುಳ್ಳ ಚಿತ್ರಗಳಂತೂ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಅದೆಷ್ಟು ಬಂದಿವೆಯೋ ಲೆಕ್ಕವಿಲ್ಲ. ಆದರೂ ಪೂರ್ಣ ಪ್ರಮಾಣದಲ್ಲಿ ಇಂತಹ ಕತೆಯನ್ನು ಹೊಂದಿದ್ದ ಚಿತ್ರ ‘ಓಂ’. ‘ಓಂ’ ಚಿತ್ರದಿಂದ ಈ ರೀತಿಯ ಮಚ್ಚು ಚಿತ್ರಗಳಿಗೆ ಓಂಕಾರವನ್ನು ಹಾಕಿಕೊಟ್ಟ ಉಪೇಂದ್ರರ ಪಟ್ಟಿಗೆ ದರ್ಶನ್‌, ಸುದೀಪ್‌ ಮುಂತಾದ ನುರಿತ ನಟರಲ್ಲದೆ, ಅನೇಕ ನವ ನಾಯಕನಟರೂ ಹೆಮ್ಮೆಯಿಂದ ಸೇರ್ಪಡೆಯಾಗುತ್ತಿದ್ದಾರೆ.

Sudeepಶಿವರಾಜ್‌ ಕುಮಾರ್‌ ಅಭಿನಯಿಸಿದ್ದ ‘ಓಂ’ ನಿಜ ಜೀವನದ ರೌಡಿಯಾಬ್ಬನ ಕುರಿತು ಬಂದ ಮೊದಲನೆಯ ಚಿತ್ರ. ಇದಕ್ಕೂ ಮೊದಲು ಬಂದಿದ್ದ ಶಂಕರನಾಗ್‌ - ದೀಪಿಕಾ ಅಭಿನಯದ ‘ಹೊಸಜೀವನ’ ಕೂಡ ರೌಡಿಯಾಬ್ಬನ ಕತೆಯನ್ನು ಹೊಂದಿದ್ದ ಚಿತ್ರವೇ. ಆದರೆ ಅದು ಕಾಲ್ಪನಿಕ ಕತೆಯನ್ನು ಹೊಂದಿದ್ದ ಚಿತ್ರ. ಇವತ್ತಿನ ದಿನ ಪಡ್ಡೆ ಹುಡುಗರ ಬಾಯಲ್ಲಿ ನಲಿದಾಡುತ್ತಿರುವ ‘ಕೆಂಚಾಲೋ ಮಂಚಾಲೋ...’ ಹಾಡು ಹುಟ್ಟುವ ಬಹಳಷ್ಟು ಮೊದಲೇ ಹಂಸಲೇಖ ಅವರು ಪಕ್ಕಾ ರೌಡಿಗಳ ಭಾಷೆಯಲ್ಲೇ - ಬ್ಲೇಡು, ಬಾಟ್ಲು ... ಮುಂತಾದ ಪದಗಳನ್ನು ಬಳಸಿ ‘ಚಾಕು ಚೈನು ನನ್ನ ಎಡಗೈ ಬಲಗೈ....ಸಾಯೋಕು ಸಾಯ್ಸೋಕು ನಾನು ಸೈ’ ಎಂದು ಈ ಚಿತ್ರಕ್ಕೆ ಹಾಡು ಬರೆದಿದ್ದರು! ಉಪೇಂದ್ರ ನಿರ್ದೇಶನದಲ್ಲಿ ಬಂದ ‘ಓಂ’ ಚಿತ್ರದ ಬಗ್ಗೆ ಇಲ್ಲಿ ಹೆಚ್ಚಿನ ವಿವರಣೆ ಅನಗತ್ಯ. ಸಾತ್ವಿಕ ಯುವಕನೊಬ್ಬ ರೌಡಿಯಾಗಿ ಪರಿವರ್ತನೆ ಹೊಂದುವ ಕತೆಯನ್ನು ಹೊಂದಿದ್ದ ಓಂ, ಈ ದಿನ ಮತ್ತೆ ಬಿಡುಗಡೆಯಾದರೂ ನಿಸ್ಸಂಶಯವಾಗಿ ಗಲ್ಲಾಪೆಟ್ಟಿಗೆಯನ್ನು ಸೂರೆಗೊಳ್ಳುವ ಕಸುವನ್ನು ಹೊಂದಿದ್ದ ಗಟ್ಟಿ ಚಿತ್ರ!

Darshan in Dasaದರ್ಶನ್‌ ಅಭಿನಯದ ಮೆಜೆಸ್ಟಿಕ್‌, ಕರಿಯ... ಮುಂತಾದ ಚಿತ್ರಗಳು ಯಶಸ್ಸು ಗಳಿಸಿದ್ದೇ ತಡ, ನಂತರ ಬಂದ ಸಾಲು ಸಾಲು ಚಿತ್ರಗಳಿಗೆಲ್ಲ ಅದೇ ಕತೆ, ಇಲ್ಲವೇ ಅದರಂತದ್ದೇ ಮತ್ತೊಂದು ಕತೆ! ಈಗ ಅಮೆರಿಕದಲ್ಲೂ ಪ್ರದರ್ಶನ ಕಾಣುತ್ತಿರುವ ಜೋಗಿಯಿಂದ ಹಿಡಿದು .... ಕಲಾಸಿಪಾಳ್ಯ, ದಾಸ, ಓಂಕಾರ, ಉಡೀಸ್‌, ಗುನ್ನ, ಮೆಂಟಲ್‌ ಮಂಜ, ಡೆಡ್ಲೀ ಸೋಮ...... ಈ ಪಟ್ಟಿ ಇನ್ನೂ ಸದ್ಯಕ್ಕೆ ನಿಲ್ಲುವ ಸೂಚನೆ ಇಲ್ಲ. ನಾಯಕರ ಕೈಯಿಂದ ಹಿಗ್ಗಾಮುಗ್ಗ ತದುಕಿಸಿಕೊಳ್ಳುತ್ತಿದ್ದ ರೌಡಿಯೇ ಚಿತ್ರದಲ್ಲಿ ಮುಖ್ಯನಾದ ಮೇಲೆ ಹಿಂಸಾಚಾರ, ಹೊಡೆದಾಟ, ವಿವಿಧ ಬಗೆಯ ಸಾಹಸ ಪ್ರದರ್ಶನಕ್ಕೆ ಯಥೇಚ್ಚ ಅವಕಾಶ! ಈ ನಾಯಕನಿಗೆ ಸಾಮ,ಭೇದ,ದಾನ ಇದಾವುದರಲ್ಲೂ ನಂಬಿಕೆ ಇಲ್ಲ. ಈ ಸಮಾಜವನ್ನು ಸರಿದಾರಿಗೆ ತರಲು ಅವನು ಕಂಡು ಹಿಡಿದುಕೊಂಡ ಏಕೈಕ ಉಪಾಯವೆಂದರೆ ಅದು ದಂಡಮ್‌.... ದಶಗುಣಮ್‌! ಕಟುಕನ ಮನೆಯ ಗಿಳಿಯಂತೆ ಹೊಡಿ, ಬಡಿ, ಕಡಿ... ಮುಂತಾದ ಮಾತುಗಳು ನಟರಿಗೆ, ಅವರ ಅಭಿಮಾನಿಗಳಿಗೆ ಬಾಯಿಪಾಠವಾಗಿ ಹೋಯಿತು. ನಂತರದ ಚಿತ್ರಗಳಲ್ಲಿ ‘ಓಂ’ ಚಿತ್ರದಲ್ಲಿದ್ದ ಕಲಾತ್ಮಕತೆ ಮಾಯವಾಗಿ ರಕ್ತಪಾತವೊಂದೇ ಪ್ರಧಾನವಾಯಿತು. ಕೊಲೆ, ಚೆಲ್ಲಾಪಿಲ್ಲಿಯಾದ ಕೈಕಾಲುಗಳು, ಕಚಕ್ಕೆಂದು ತರಕಾರಿ ಕೊಚ್ಚಿದಷ್ಟೇ ಸುಲಭವಾಗಿ ರುಂಡ-ಮುಂಡಗಳನ್ನು ಚೆಂಡಾಡುವ ದೃಶ್ಯಗಳು ಮಾಮೂಲಾದವು.

ಹಿಂದಿನ ಬಹಳಷ್ಟು ಚಿತ್ರಗಳಲ್ಲಿ ನಾಯಕ ರೈತನಾಗಿಯೋ, ಶಿಕ್ಷಕನಾಗಿಯೋ, ವಕೀಲ, ವೈದ್ಯ, ಚಾಲಕ, ಕಾರ್ಮಿಕ, ....ಹೀಗೆ ಜನಸಾಮಾನ್ಯರಂತೆ ಯಾವುದೋ ಒಂದು ಉದ್ಯೋಗದಲ್ಲಿರುತ್ತಿದ್ದ. ತಾನಿದ್ದ ಕಡೆಯಲ್ಲೇ ಪ್ರಾಮಾಣಿಕತೆ, ನ್ಯಾಯ ನೀತಿಗಳನ್ನು ಮೆರೆಯುತ್ತಾ, ಅನ್ಯಾಯವನ್ನು ಪ್ರತಿಭಟಿಸುತ್ತಾ ಜನಮನದಲ್ಲಿ ತನ್ನದೇ ಆದ ಛಾಪು ಮೂಡಿಸಿ ಬಿಡುತ್ತಿದ್ದ. ಈಗ ಬರುತ್ತಿರುವ ಚಿತ್ರಗಳನ್ನು ಗಮನಿಸಿದರೆ, ಅದರಲ್ಲಿ ನಾಯಕನಿಗೆ ಮಾಡಲು ಯಾವ ಕೆಲಸವೂ ಇರುವುದಿಲ್ಲ. ಅಷ್ಟು ದುಬಾರಿ ಕಾರು, ವಿದೇಶ ಯಾತ್ರೆಗಳನ್ನು ಮಾಡಲು ಅವನಿಗೆ ಹಣ ಎಲ್ಲಿಂದ ಬರುತ್ತದೆ? ಎಂಬ ತರ್ಕಕ್ಕಂತೂ ಆಸ್ಪದವೇ ಇಲ್ಲ. ಈಗ ನಾಯಕನಿಗೆ ಯಾವ ಉದ್ಯೋಗದ ಅವಶ್ಯಕತೆಯೂ ಇಲ್ಲ! ಅವನ ಪೂರ್ಣಾವಧಿ ವೃತ್ತಿಯೇ ರೌಡಿಸಂ! ಮಚ್ಚು,ಲಾಂಗುಗಳಿಂದ ಅಲಂಕೃತನಾಗಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣವನ್ನು ಲೀಲಾಜಾಲವಾಗಿ ಮಾಡುವ ನಾಯಕನ ಮುಂದೆ ನಿಲ್ಲುವ ಎದೆಗಾರಿಕೆ ಯಾರಿಗಿದ್ದೀತು? ಯಾರೇ ಎದುರು ಬಂದರೂ ಅವರಿಗೆ ಹಾಡಿನ ಮೂಲಕ ಸವಾಲು ಹಾಕುವುದು ಇದ್ದೇ ಇದೆ - ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಶಿಷ್ಯಾ?

Gunnaಈ ಮಾತೆಲ್ಲ ಇರಲಿ, ಚಿತ್ರಗಳ ಬಗ್ಗೆ, ಅದರ ಗುಣಮಟ್ಟದ ಬಗ್ಗೆ ಯಾರೆಷ್ಟೇ ಭಾಷಣ ಬಿಗಿದರೂ, ದಿನದ ಕೊನೆಯಲ್ಲಿ ಮುಖ್ಯವಾಗುವುದು, ಆ ಚಿತ್ರ ಎಷ್ಟು ಹಣ ಗಳಿಸಿತು ಎಂಬುದೊಂದೇ! ಈಗ ಸದ್ಯದಲ್ಲಿ ಹಣ ಮಾಡುತ್ತಿರುವುದು ಕೂಡ ಇಂತಹ ಚಿತ್ರಗಳೇ! ದರ್ಶನ್‌ ತಮ್ಮ ರೌಡಿ ಇಮೇಜಿನಿಂದ ಹೊರಬರಲು ಮಾಡಿದ ಚಿತ್ರ ‘ನನ್ನ ಪ್ರೀತಿಯ ರಾಮು’ ಪತ್ರಿಕೆಗಳಲ್ಲಿ ಪ್ರಶಂಸೆಗಳಿಸಿದರೂ ಬಾಕ್ಸ್‌ ಆಫೀಸಿನಲ್ಲಿ ಮುಗ್ಗರಿಸಿತು. ಆದ್ದರಿಂದ ಮತ್ತಷ್ಟು, ಮಗದಷ್ಟು ಇದೇ ರೀತಿಯ ಚಿತ್ರಗಳು ತೆರೆ ಕಾಣುವುದರಲ್ಲಿ ಯಾವ ಅನುಮಾನವಿಲ್ಲ. ಆದರೆ ಈಗ ಎಲ್ಲರ ಮುಂದಿರುವ ಪ್ರಶ್ನೆ ಎಂದರೆ - ಇಂತಹ ಸಿನಿಮಾದಿಂದ, ಯಾರಿಗಾದರೂ, ಏನಾದರೂ ಉಪಯೋಗವಿದೆಯೇ? ಈ ಸಿನಿಮಾಗಳ ಹಿಂದಿರುವ ನಿರ್ಮಾಪಕರು, ನಿರ್ದೇಶಕರು ತಮ್ಮ ಈ ಚಿತ್ರಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಜನ ಮೆಚ್ಚಿದ್ದನ್ನು ನೀಡುತ್ತಾ ಹೋಗುವುದು ಅವರ ಕರ್ತವ್ಯ ಮಾತ್ರವಲ್ಲದೆ, ಅವರಿಗೂ ಕೂಡ ಅವರದ್ದೇ ಆದ ಸಾಮಾಜಿಕ ಜವಾಬ್ದಾರಿ ಎಂಬುದು ಇರುತ್ತದಲ್ಲವೇ? ಅದಕ್ಕೆ ನ್ಯಾಯ ಒದಗುವುದು ಹೇಗೆ?

ಸಿನಿಮಾಗಳಿಂದ ಸಮಾಜಕ್ಕೆ ಏನಾದರೂ ಉತ್ತಮ ಸಂದೇಶವಿರಬೇಕೇ? ಅಥವಾ ಸಿನಿಮಾ ಬರೀ ಮನರಂಜನೆಗಾಗಿ ಮಾತ್ರವೇ ಎಂಬುದು ಎಂದಿನಿಂದಲೂ ಚರ್ಚೆಯಲ್ಲಿರುವ ಪ್ರಶ್ನೆಯೇ. ಈ ಬಗ್ಗೆ ವಿದ್ವಾಂಸರ ಅಭಿಮತ ಏನೇನಿವೆಯೋ ನಾನರಿಯೆ. ಆದರೆ ನನಗನ್ನಿಸುವಂತೆ ಯಾವುದೇ ಸಮಾಜವನ್ನು ತಿದ್ದುವುದಾಗಲೀ, ತಿದ್ದಿ ಬುದ್ಧಿ ಹೇಳುವುದಾಗಲೀ ಸಿನಿಮಾದಿಂದ ಸಾಧ್ಯವಿಲ್ಲ. ಅದರ ಕೆಲಸವೂ ಅದಲ್ಲ. ಇದೇ ಮಾತು ಸಾಹಿತ್ಯಕ್ಕೂ ಕೂಡ ಅನ್ವಯಿಸುತ್ತದೆ. ಆದರೂ ಒಂದು ಉತ್ತಮ ಚಿತ್ರ ಏನೊಂದನ್ನೂ ನೇರವಾಗಿ ಬೋಧನೆ ಮಾಡದೆ, ತನಗೇ ಅರಿವಿಲ್ಲದಂತೆ ಒಂದು ಸಣ್ಣ ಸಂದೇಶವೊಂದನ್ನು ಮನಸ್ಸಿನಲ್ಲಿ ತೂರಿಬಿಡುವ ಸಾಧ್ಯತೆಗಳಿವೆ ಅಲ್ಲವೇ? ಆದರೆ ಈ ಕ್ರಿಯೆ ಆಕಸ್ಮಿಕವಾಗಿರಬೇಕೇ ಹೊರತು, ಚಿತ್ರ ಅದನ್ನೇ ಒಂದು ಉದ್ದೇಶವಾಗಿಟ್ಟುಕೊಂಡು ಪಾಠ ಹೇಳಲು ನಿಂತಾಗ ಬೋರು ಹೊಡೆಸುವುದು ಖಂಡಿತ!

Most successful rowdy movie Kariyaಉದಾಹರಣೆಗೆ ಹಿಂದೆ ಬಹಳಷ್ಟು ಸಾರಿ ನೋಡಿದ್ದರೂ ಇವತ್ತಿಗೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಬಂಗಾರದಂತಹ ಸಿನಿಮಾ ಬಂಗಾರದ ಮನುಷ್ಯನನ್ನೇ ತೆಗೆದುಕೊಳ್ಳೋಣ. ಇದರಲ್ಲೊಂದು ಮನ ಮಿಡಿಯುವ ದೃಶ್ಯವಿದೆ. ರಾಜ್‌ಕುಮಾರ್‌ ಊಟ ಮಾಡಲು ಕುಳಿತಿರುತ್ತಾರೆ. ಇನ್ನೇನು ತುತ್ತು ಕಲೆಸಿ, ಬಾಯಿಗಿಡುವಷ್ಟರಲ್ಲಿ, ಅವರನ್ನು ಕುರಿತು ಆಡುವ ಹೀಯಾಳಿಕೆ ಮಾತುಗಳು ಕೇಳಿಸುತ್ತವೆ. ಅನ್ನಕ್ಕೊಮ್ಮೆ ನಮಸ್ಕರಿಸಿ, ಮನೆಯನ್ನು ತ್ಯಜಿಸಿ ಹೊರಟು ನಿಲ್ಲುತ್ತಾರೆ. ಎಂತಹ ಕಲ್ಲೆದೆಯನ್ನೂ ಕರಗಿಸಿ ಬಿಡುವ ಅದ್ಭುತ ಅಭಿನಯವದು! ಚಿಕ್ಕ ವಯಸ್ಸಿನಲ್ಲಿ ಈ ಸಿನಿಮಾ ನೋಡಿದಾಗ, ಸನ್ನಿವೇಶದ ಗಂಭೀರತೆಯನ್ನು ಅರಿಯದ ನನ್ನ ಮನಸ್ಸಿಗೆ ಅನ್ನಿಸುತ್ತಿದ್ದುದು ಹೀಗೆ - ಯಾರೋ ಅವಿವೀಕಿಗಳು ಆಡಿದ ಮಾತಿಗೆ ರಾಜ್‌ ಯಾಕೆ ಮನೆ ಬಿಟ್ಟು ಹೋಗಬೇಕು? ಅವರದೇ ಎಷ್ಟೋ ಚಿತ್ರಗಳಲ್ಲಿ ಮಾಡಿದಂತೆ, ತಮ್ಮನ್ನು ಮೂದಲಿಸಿದವರಿಗೆ ಒದ್ದು ಬುದ್ಧಿ ಕಲಿಸಬಾರದಿತ್ತೇ ಎಂದು. ಆದರೆ, ಈ ಚಿತ್ರ ಅಂತಹ ಯಾವ ಪ್ರತಿಕಾರಕ್ಕಿಳಿಯದೆ, ತನ್ನ ತಣ್ಣನೆಯ ವಿಷಾದದೊಂದಿಗೆ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಪಾರ. ಸಿನಿಮಾ ನೋಡಿಬಂದ ದಿನವೆಲ್ಲ ತಾಳ್ಮೆ, ಒಲುಮೆ, ಕರುಣೆಗಳೇ ಮೇಲುಗೈಯಾದ ಮಹೋನ್ನತ ವ್ಯಕ್ತಿತ್ವದ ಮಹಾನ್‌ ಪ್ರಭಾವವೊಂದು ನಮ್ಮನ್ನು ಆವರಿಸಿಬಿಟ್ಟಿದ್ದು ನಿಜವಲ್ಲವೇ?

ಈಗಲೂ ಅಷ್ಟೇ, ಚಿತ್ರವೊಂದು ನಾವು ಜೀವಿಸುವ ಜೀವನದಷ್ಟೇ ಸುಂದರವಾಗಿರಲಿ, ಸಹಜವಾಗಿರಲಿ. ನಿಜ ಜೀವನದಲ್ಲಿ ನಾವು ಕಾಣುವ ಮನುಷ್ಯರಾರೂ ಕೈಯಲ್ಲಿ ಮಚ್ಚು, ದೊಣ್ಣೆ ಹಿಡಿದುಕೊಂಡು ‘ ಹೊಡಿಮಗ, ಹೊಡಿಮಗ....’ ಎಂದು ಅಟ್ಟಾಡಿಸಿಕೊಂಡು ಓಡುತ್ತಿರುವುದಿಲ್ಲ. ನಮ್ಮ ಪರಿಧಿಯಲ್ಲಿ ಬರುವವರೆಲ್ಲ, ನಮ್ಮ ಹಾಗೆಯೇ ಸುಖವಾದಾಗ ನಗುವ, ನೋವಾದಾಗ ಅಳುವ, ಭಾವನೆಗಳಿಗೆ ಸ್ಪಂದಿಸುವ ಸಾದಾ ಮಾನವರು! ನಮ್ಮ ಬದುಕಿನಲ್ಲಿ ಕಾಣಲು ಸಿಗದ ಅಂತಹ ವಿಕೃತ ಪಾತ್ರಗಳು ನಮ್ಮ ಸಿನಿಮಾದಲ್ಲಿ ತಾನೇ ಏಕಿರಬೇಕು?

ಇನ್ನಾದರೂ ನಮ್ಮ ಚಿತ್ರಗಳು ಕ್ರೌರ್ಯ, ಸ್ವಾರ್ಥ, ಮಾತ್ಸರ್ಯದ ನಡುವೆಯೇ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಮಾನವೀಯತೆಯ ಅಮೃತಗಳಿಗೆಗಳನ್ನಷ್ಟು ತನ್ನ ತೆಕ್ಕೆಯಲ್ಲಿ ಸೆರೆಹಿಡಿಯಲಿ. ನಮ್ಮ ನಡುವೆ ಪಾಪಿಗಳೇ ಇಲ್ಲವೆಂದಲ್ಲ, ಅವರು ಪಾತಾಳದಲ್ಲೇ ಇರಲಿ. ಅವರ ಪಾತಕಗಳು ಬೆಳ್ಳಿತೆರೆಯನ್ನು ರಕ್ತಸಿಕ್ತವಾಗಿಸುವುದು ಬೇಡ. ತೆರೆಯ ಮೇಲೆ ನಮ್ಮ-ನಿಮ್ಮೆಲ್ಲರ ಸಾಮಾನ್ಯ ಬದುಕಿನ ನೈಜ ಬಿಂಬಗಳಷ್ಟೇ ಮೂಡಿ ಬರಲಿ. ಸದಭಿರುಚಿಯ ಮಂದಾರ ಹೂವುಗಳು ನಮ್ಮೂರ ಅಂಗಳದಲ್ಲಿ ಮತ್ತೊಮ್ಮೆ ಅರಳಿ ನಗಲಿ!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more