ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮ ಚಂದ್ರಮ ಕೈಗೆ ಸಿಗುವನೇ?

By Staff
|
Google Oneindia Kannada News

ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಅಂದು, ಜಗತ್ತಿನ ಪಾಲಿಗೊಂದು ಸಂಭ್ರಮ, ರೋಮಾಂಚನ ಉಂಟು ಮಾಡಿದ ಅದ್ಭುತ ದಿನ! ಆಕಾಶದ ಚಾವಣಿಗೆ ತೂಗು ಹಾಕಿದ ಮಾಣಿಕ್ಯ ದೀಪದಂತೆ ಕೈಗೆಟುಕದೆ, ಕಣ್ಣು ಮಿಟುಕಿಸಿ ಕಾಡುತ್ತಿದ್ದ ಚಂದ್ರ ಅಂದು ವಿಜ್ಞಾನಿಗಳ ಮುಂದೆ ಶರಣಾಗತನಾಗಿದ್ದ! ಯುಗಾಂತರದಿಂದ ಬಚ್ಚಿಟ್ಟುಕೊಂಡಿದ್ದ ತನ್ನ ರಹಸ್ಯಗಳನ್ನೆಲ್ಲ ಅವರೆದುರು ಅನಾವರಣಗೊಳಿಸಿ ಬಿಟ್ಟಿದ್ದ! ಗಗನ ಯಾತ್ರಿಗಳು, ತಮ್ಮ ಬೂಟು ಕಾಲುಗಳಿಂದ ನುಣುಪಾದ ಚಂದ್ರನ ಮೈಮೇಲೆಲ್ಲಾ ಓಡಾಡಿ, ಧೂಳೆಬ್ಬಿಸಿ ಬಂದಿದ್ದು ನಮಗೀಗ ಪಠ್ಯಗಳಲ್ಲಿ ಓದಿದ ಹಳೆಯ ವಿಷಯ. ಆದರೆ ಈ ಸಮಾಚಾರ ಪ್ರಕಟವಾದ ದಿನ ಹೇಗಿದ್ದಿರಬಹುದು? ಅದೆಷ್ಟು ಭಾವಜೀವಿಗಳ ಹೃದಯ ಆಘಾತದಿಂದ ಚಡಪಡಿಸಿ ಹೋಗಿರಬಹುದು?

ಆಮೇಲೆ ಉರಿವ ಗಾಯದ ಮೇಲೆ ಬರೆಯೆಳೆದಂತೆ ಹೊರಬಿದ್ದ ಕಹಿಸತ್ಯಗಳಾದರೂ ಕಡಿಮೆಯೇ? ನಮ್ಮ ಬರಿಗಣ್ಣಿಗೆ ಸುಂದರವಾದ ಹೆಣ್ಣಿನ ನುಣುಪಾದ ಕೆನ್ನೆಯಂತೆ ತೋರುವ ಚಂದ್ರ ನಿಜದಲ್ಲಿ ಹಾಗಿಲ್ಲವೇ ಇಲ್ಲ! ಬೆಣ್ಣೆಯ ಮುದ್ದೆಯಂತೆ ತೋರುವ ಚಂದ್ರನ ಮೈತುಂಬಾ ತಗ್ಗು ದಿಣ್ಣೆಗಳು! ಚಂದ್ರನಿಂದ ಹೊರಹೊಮ್ಮುವ ಯಾವ ಬೆಳಕನ್ನು ಕವಿಗಳು ನೊರೆ ಹಾಲಿಗೆ ಹೋಲಿಸಿ ಸಂತೋಷ ಪಡುತ್ತಿದ್ದರೋ, ಆ ಬೆಳದಿಂಗಳು ಕೂಡ ಅವನ ಸ್ವಯಾರ್ಜಿತವಲ್ಲ, ಉರಿ ಮುಖದ ಸೂರ್ಯ ಅರೆಮನಸ್ಸಿನಿಂದ ಕೊಟ್ಟ ಸಾಲ! ಚಂದ್ರಮುಖಿ ಎಂದು ಇನ್ನು ಯಾವ ಹೆಣ್ಣನ್ನು ತಾನೇ ಮುದ್ದಿನಿಂದ ಕರೆಯಲಾದೀತು? ಅಷ್ಟಕ್ಕೂ ಸುಮ್ಮನಾಗದ ಈ ಗಗನಯಾತ್ರಿಗಳು ಅದನ್ನೂ ಅಲ್ಲಿಂದ ತಂದು ತೋರಿಸಿಯೇ ಬಿಟ್ಟರಲ್ಲ, ಹಲವು ತರದ ಶಿಲೆಗಳು - ಚಂದ್ರನಲ್ಲೂ ಕಲೆಗಳು!

ಭೂಮಿಯಿಂದ ಬಹು ದೂರದಲ್ಲಿ ತಣ್ಣಗೆ ನಗುತ್ತಿರುವ ಈ ಚಂದ್ರಮ ನಮ್ಮ ಮೇಲೆ ಬೀರಿರುವ ಶೀತಲ ಪ್ರಭಾವ ಅಷ್ಟಿಷ್ಟಲ್ಲ. ಅವನು ನಮ್ಮಿಂದ ದೂರವಿದ್ದರೂ, ನಮಗೆಂದೂ ಅವನು ದೂರದವನಾಗಿರಲೇ ಇಲ್ಲ! ಅವನೊಡನೆ ನಮಗೆ ಬಲು ಹತ್ತಿರದ ನಂಟು. ಹಾಗಾಗಿಯೇ ಅವನು ಚಂದಕ್ಕಿ ಮಾಮಾ, ಚಕ್ಕುಲಿ ಮಾಮಾ! ಈ ಮುದ್ದಿನಮಾಮನನ್ನು ನೋಡಿಕೊಂಡು ತುತ್ತುಣ್ಣುವ ಹಸುಕಂದಗಳು, ತಮ್ಮ ಪುಟ್ಟ ಕೈಗಳಿಂದ ತಾರಮ್ಮಯ್ಯ.. ಎಂದು ಬೇಡುವುದು ರಘುಕುಲ ರಾಮ 'ಚಂದಿರ"ನನ್ನೇ!

'ನಾನೂ ಓಡಲು, ತಾನೂ ಓಡುವ... ಚಂದಿರನೆಗೆಲ್ಲಿಗೆ ಓಡುವನಮ್ಮ?" - ಎಂದು ಅಮ್ಮನನ್ನು ಪೀಡಿಸುತ್ತಲೇ ಬೆಳೆದು ದೊಡ್ಡವರಾದವರು ನಾವೆಲ್ಲ. ನಾವು ನಿತ್ಯ ಪೂಜಿಸುವ ದೇವಾನುದೇವತೆಗಳೆಲ್ಲ ಚಂದಿರ ವದನದ ಸುಂದರ ವದನರೇ! ಅಷ್ಟು ಮಾತ್ರ ಏಕೆ? ನಮಗೆ ಮಿಲನ ಮಹೋತ್ಸವದ ಮಧುರ ನೆನಪನ್ನು ಅಮರವಾಗಿರಿಸಿಕೊಳ್ಳಲು ಚಂದ್ರ ಮಂಚವೇ ಆಗಬೇಕು, ಕೈತಪ್ಪಿಹೋದ ಪ್ರಣಯಿಯನ್ನು ನೆನೆಸಿಕೊಂಡು ಸಂಕಟಪಡಲೂ, ಹುಣ್ಣಿಮೆ ರಾತ್ರಿಯ ಏಕಾಂತವೇ ಆಗಬೇಕು!

'ಬೆಳದಿಂಗಳಾಗಿ ಬಾ... ತಂಗಾಳಿಯಾಗಿ ನಾನು... ಆನಂದವ ನೀಡುವೆ..." ಎಂಬ ಹಾಡು ನೆನಪಿದೆ ಅಲ್ಲವೇ? ಚಿ. ಉದಯಶಂಕರ್‌ ಸಾಹಿತ್ಯ, ಜಿ. ಕೆ ವೆಂಕಟೇಶ್‌ ಸಂಗೀತ, ಗಾನ ಗಂಧರ್ವ ರಾಜಕುಮಾರ್‌ ಗಾಯನ ... ಇವುಗಳ ಮಿಲನದಿಂದ ರೂಪುಗೊಂಡಿರುವ ಈ ಹಾಡು ಬೆಳದಿಂಗಳಿನಷ್ಟೇ ಮನಸ್ಸಿಗೆ ಮುದ ನೀಡುತ್ತದೆ. ಈ ಬೆಳದಿಂಗಳು ಕವಿಗಳ ಪಾಲಿಗೊಂದು ಅಕ್ಷಯ ಪಾತ್ರೆ. ಕವಿಗಳು ಮತ್ತು ಪ್ರೇಮಿಗಳನ್ನು ಹಾಲು ಬೆಳದಿಂಗಳು ಪರವಶರನ್ನಾಗಿ ಮಾಡಿದರೆ, ವಿರಹಿಗಳು ಮತ್ತು ಚೋರರು ಅದನ್ನು ನಿಂದಿಸುತ್ತಾರಂತೆ!

'ಇದು ಹಾಲಗಡಲಿನ ಸೀಮಿ...ಚಂದ್ರಮನೇ ಸ್ವಾಮಿ!" - ಬೆಳದಿಂಗಳು ಚೆಲ್ಲಿಕೊಂಡ ಆಕಾಶವನ್ನು ಕಂಡಾಗ ಬೇಂದ್ರೆಯವರ ಕಲ್ಪನೆ ಮಾತಾಗಿದ್ದು ಹೀಗೆ. ನಿಸರ್ಗದ ಕವಿ ಕುವೆಂಪು ಅವರು ಭುವಿಯ ಭಾಗ್ಯವಾಗಿ ಬರುವ ಬೆಳದಿಂಗಳನ್ನು ಕುರಿತು 'ಬೆಳದಿಂಗಳು ಹಾಲ್‌ ಚೆಲ್ಲಿದೆ ಹುಣ್ಣಿಮೆ ಇರುಳಲ್ಲಿ... ಬನದಂಚಿನ ಹೊಳೆ ತುಂಗೆಯ ಸಕ್ಕರೆ ಮರಳಲ್ಲಿ" ಎಂದು ಬರೆಯುತ್ತಾರೆ. ಮಲೆನಾಡಿನವರ ಎದೆಯಲ್ಲಿ ಪ್ರೀತಿ ಉಕ್ಕಿಸುವ ತುಂಗೆಯ ದಡದುದ್ದಕ್ಕೂ ಹರಡಿದ ಮರಳು ಕೂಡ, ತಿಂಗಳ ಬೆಳಕಿನ ನಶೆಯೇರಿದ ಕವಿಯ ಕಣ್ಣಿಗೆ ಸಕ್ಕರೆ ರಾಶಿಯಂತೆ ಗೋಚರಿಸುತ್ತಿದೆ! ಇನ್ನು, ಜಿ.ಪಿ ರಾಜರತ್ನಮ್‌ ಅವರ ಹೆಂಡ ಕುಡುಕ ರತ್ನ ಬೆಳದಿಂಗಳನ್ನು ಹೀಗಲ್ಲದೆ ಮತ್ತೆ ಯಾವ ವಿಧದಿಂದ ಬಣ್ಣಿಸಲು ಸಾಧ್ಯ?

ಬೆಳದಿಂಗಳ್‌ ರಾತ್ರಿಲಿ ಈಚೋರಿ ಬತ್ತಂದ್ರೆ
ಈಚ್ಲೆಂಡ ಚೆಲ್ದಂಗೆ ನೆಪ್ಪಾಯ್ತದೆ
ಆಕಾಶದ್‌ ಚಂದ್ರನ್ನ ಪಡಖಾನೆ ದೀಪಕ್ಕೆ
ಹೋಲಿಸ್ದೆ ಹೋಯ್ತಂದ್ರೆ ತೆಪ್ಪಾಯ್ತದೆ!

ಇಲ್ಲೊಂದು ಲೋಕ ವಿಲಕ್ಷಣವಾದ ಉಪಮಾನವಿದೆ. ಅದು ಕವಿ ಲಕ್ಷ್ಮೀನಾರಾಯಣಭಟ್ಟರ ಕವಿತೆಯಲ್ಲಿ ಬರುವ ಅಪರೂಪದ ಹೋಲಿಕೆ. ಸಾಮಾನ್ಯವಾಗಿ ಕವಿ ಕಲ್ಪನೆಯಲ್ಲಿ ಭೂಮಿ ಹೆಣ್ಣಾದರೆ ಆಕಾಶ ಪುರುಷ! 'ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ..." ಎಂಬುದು ಕಾವ್ಯಗಳಲ್ಲಿ ಒಮ್ಮತದಿಂದ ಕೇಳಿ ಬರುವ ಅಭಿಪ್ರಾಯ. ಬಹುಶ: ಈ ಚರ್ವಿತ ಚರ್ವಣ ಹೋಲಿಕೆಗೆ ಬೇಸತ್ತರೋ ಎಂಬಂತೆ ಭಟ್ಟರು ತಮ್ಮ ಕವಿತೆಯಾಂದರಲ್ಲಿ ಬಾನನ್ನು ಹೆಣ್ಣು, ಭೂಮಿಯನ್ನು ಗಂಡಾಗಿಸಿದ್ದಾರೆ! ಅವರ ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು... ಎಂಬ ಕವಿತೆಯಲ್ಲಿ ಹೀಗಿದೆ

ಮನಸನು ಕುಣಿಸುವ ಮಾಯೆಗೆ ಮಣಿಸುವ
ಹೆಣ್ಣಿನ ನಗೆಯೇ ಬಾನಾಗಿದೆ.
ಕಾಣದ್ದ ಕಂಡಂತೆ, ಅಮೃತವ ಉಂಡಂತೆ
ಬೆಪ್ಪಾದ ಗಂಡಂತೆ ಭುವಿಯಿದೆ!

ಇಡೀ ದಿನ ಹೊಟ್ಟೆಪಾಡಿಗಾಗಿ, ಒಂದಲ್ಲ ಒಂದು ವ್ಯವಹಾರದಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿರುವ ಈ ಲೋಕಕ್ಕೆ ಆಯಾಸವಾಗದೆ ಇದ್ದೀತೇ? ಪ್ರತಿ ಸಮಸ್ಯೆಗೂ ತನ್ನದೇ ಆದ ಪರಿಹಾರವನ್ನು ಕಂಡುಕೊಂಡಿರುವ ನಿಸರ್ಗ, ತನ್ನ ಈ ಮೈಕೈ ನೋವನ್ನು ಪರಿಹರಿಸಿಕೊಳ್ಳುವ ಉಪಾಯವೇ ಈ ಬೆಳದಿಂಗಳು ಎನ್ನುತ್ತಾರೆ ಕವಿ ಚೆನ್ನವೀರ ಕಣವಿಯವರು -

'ಲೋಕದ ಮೈ ನೋವಿಗೆ ಶ್ರೀಗಂಧದ ಸವಿಲೇಪ
ಆಕಾಶದ ಗುಡಿಯಿಂದಲಿ ಹೊರಸೂಸಿದ ಧೂಪ!"

ಇನ್ನು ಜನ ಜೀವನದ ಜೀವಾಳವಾದ ಜನಪದದಲ್ಲಿ ಬೆಳದಿಂಗಳು ಇಲ್ಲದಿದ್ದರೆ ಹೇಗೆ? 'ಬಾರಯ್ಯಾ ಬೆಳದಿಂಗಳೇ...ನಮ್ಮೂರ ಹಾಲಿನಂತ ಬೆಳದಿಂಗಳೇ" ಎಂಬ ಪಿ.ಕಾಳಿಂಗರಾಯರ ಓಲೈಸುವ ದನಿಗೆ, ಎಂತಹ ಹಟಮಾರಿ ಬೆಳದಿಂಗಳಾದರೂ ಓಡಿ ಬಂದು, ಅಂಗಳದ ತುಂಬ ಹರಡಿಕೊಳ್ಳಲೇಬೇಕು!

ನಮ್ಮೆಲ್ಲರ ನಲಿವುಗಳನ್ನು ಬಿಂಬಿಸುವ ಪ್ರಸನ್ನವದನದ ಚಂದ್ರಮನ ಆಂತರ್ಯದಲ್ಲಿ ನಿಜವಾಗಿಯೂ ಸಂತೋಷವಿದೆಯೇ? ಆ ನಗು ನಿಜವಾದ ನಗುವೇ? ಅಥವಾ ಅಳು ನುಂಗಿಕೊಂಡು ನಕ್ಕ ನಗೆಯೇ? ಈ ಚಂದಮಾಮನದೂ ನಮ್ಮ ಸಿನಿಮಾಗಳಲ್ಲಿ ಬರುವ ತ್ರಿಕೋನ ಪ್ರೇಮ ಕಥೆಯೇ. ಅದರಲ್ಲೂ, ತನ್ನ ಪ್ರಿಯತಮೆಯನ್ನು ಗೆಳೆಯನಿಗೆ ಬಿಟ್ಟುಕೊಟ್ಟು ತ್ಯಾಗರಾಜನಾಗಿ ನಿಲ್ಲುವ, ಕನ್ನಡ ನಟ ರಮೇಶ್‌ ಮಾಡುವಂತಹ ಪಾತ್ರ ಇವನದು. ಅದು ಹೇಗೆಂದಿರಾ? ನೀವೇ ನೋಡಿ. ಚಂದ್ರ ಅನಾದಿ ಕಾಲದಿಂದ ಇಳೆಯ ಒಲವಿಗಾಗಿ ಯಾಚಿಸುತ್ತಾ ಅವಳ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದರೆ, ಇವನನ್ನು ಕಣ್ಣೆತ್ತಿಯೂ ನೋಡದ ಅವಳು ರವಿಯಲ್ಲಿ ಅನುರಕ್ತೆ!

ಪ್ರೇಮ ವಂಚಿತ ಶಶಿಗೆ ಸ್ನೇಹದ ಸವಿ ಸಿಂಚನವಾದರೂ ಸಿಕ್ಕೀತೇ ಎಂದರೆ ಅದೂ ದಕ್ಕಲಿಲ್ಲ -

ಚಂದ್ರೋದಯಕೆ ಅಂಬುಧಿ ಹೆಚ್ಚುವುದಯ್ಯಾ...
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬೊಟ್ಟಿತೇ ಅಯ್ಯ?

ಸಾಗರಕ್ಕೂ, ಚಂದ್ರನಿಗೂ ಸ್ನೇಹವೇನೋ ಇದೆ. ಆದರೆ ಈ ಸಂಬಂಧದಲ್ಲಿ ಟೊಳ್ಳೆಷ್ಟು? ಗಟ್ಟಿಯೆಷ್ಟು? ಇದು ಕಷ್ಟ-ಸುಖಗಳಲ್ಲಿ ಸಮಾನ ರೀತಿಯಿಂದಿರುವ ಶಾಶ್ವತ ಸ್ನೇಹವೇ? ಅಥವಾ ಜೇಬಿನಲ್ಲಿ ನೋಟುಗಳು ತುಂಬಿದ್ದಾಗ ಸುತ್ತುವರೆದು, ಕೈ ಖಾಲಿಯಾದಾಗ ಮಾಯವಾಗುವ ಸಮಯ ಸಾಧಕ ಸ್ನೇಹವೇ? ಅಯ್ಯೋ... ಅದೇ ನಿಜವಾಗಿ ಹೋಯಿತು. ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿಯನ್ನು, ಅಚ್ಚಳಿಯದ ಅಮರ ಪ್ರೀತಿಗೆ ಹೋಲಿಸಿದ ಕವಿಯ ಮಾತುಗಳೆಲ್ಲ ಬರೀ ಕಲ್ಪನೆಯಲ್ಲೇ ಉಳಿದು ಹೋಯಿತು. 'ಯಾರಿಗ್ಯಾರೂ ಇಲ್ಲ... ಕೆಟ್ಟವಂಗೆ ಕೆಳೆ ಇಲ್ಲ..." ಎಂಬ ಶರಣರ ಅನುಭವವಾಣಿ ಮಾತ್ರ ಮತ್ತೊಮ್ಮೆ ಲೋಕದ ಕಟು ವಾಸ್ತವವೆಂದು ಸಾಬೀತಾಗಿ ಹೋಯಿತು!

ಹೊಸ ವರ್ಷದ ಆಚರಣೆಗೆ ಸೌರಮಾನ, ಚಾಂದ್ರಮಾನಗಳನ್ನು ಅನುಸರಿಸುವ ಪದ್ಧತಿ ಇದೆ. ಶುಕ್ಲ ಪಕ್ಷದಲ್ಲಿ ವೃದ್ಧಿಸುತ್ತಾ, ಕೃಷ್ಣ ಪಕ್ಷದಲ್ಲಿ ಕ್ಷೀಣಿಸುತ್ತಾ ಸಾಗುವ ಚಂದ್ರನ ಬೆಳವಣಿಗೆಯನ್ನು ಅಧಾರವಾಗಿಸಿಕೊಂಡಿರುವ ಒಂದು ಧಾರ್ಮಿಕ ವ್ರತಾಚರಣೆಯ ವಿವರಗಳು ಬಹಳ ಆಸಕ್ತಿದಾಯಕವಾಗಿವೆ. ಚಾಂದ್ರಾಯಣವೆಂಬ ಈ ವ್ರತ ಅಮಾವಾಸ್ಯೆ ದಿನದ ಉಪವಾಸದೊಂದಿಗೆ ಆರಂಭ. ಈ ವ್ರತದಲ್ಲಿ, ಆಹಾರ ಸೇವನೆಯ ಪ್ರಮಾಣ ಕೃಷ್ಣ ಪಕ್ಷದಲ್ಲಿ ಕ್ರಮೇಣ ಕಡಿಮೆಯಾಗುತ್ತಾ, ಶುಕ್ಲ ಪಕ್ಷದಲ್ಲಿ ಅಧಿಕಗೊಳ್ಳುತ್ತಾ ಹೋಗುತ್ತದೆ. ಇಂತಹ ವ್ರತ-ಉಪವಾಸಗಳ ಮುಖ್ಯ ಉದ್ದೇಶ ನಾಲಿಗೆಯ ಚಪಲವನ್ನು ನಿಗ್ರಹಿಸುವುದು!

ಅಧಿಕ ಆಹಾರ ಸೇವನೆಯೇ, ಎಲ್ಲಾ ತರಹದ ದೈಹಿಕ ಅನಾರೋಗ್ಯಕ್ಕೆ ಮೂಲ ಕಾರಣವಾಗುವುದರಿಂದ, ಅಪರೋಕ್ಷವಾಗಿ ಇಂತಹ ವ್ರತಗಳು ಶರೀರದ ಆರೋಗ್ಯವನ್ನು ಸುಸ್ಥಿಯಲ್ಲಿರಿಸಲು ನೆರವಾಗುತ್ತವೆ. ಆದರೆ, ನಾವು ಮಿತಿ ಮೀರಿ ಹೋಗುವ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಡಯಟ್‌ ತಜ್ಞರ ಸಲಹೆಗಳನ್ನು ಪಾಲಿಸುತ್ತೇವೆಯೇ ಹೊರತು, ಇಂತಹ ವ್ರತ-ಉಪವಾಸಗಳನ್ನು ಎಲ್ಲಿ ಮಾಡುತ್ತೇವೆ ಅಲ್ಲವಾ?

ಬಾಲ್ಯಾವಸ್ಥೆಯಿಂದ ಆರಂಭವಾಗುವ ನಮ್ಮ ಜೀವನ ಹಂತ ಹಂತವಾಗಿ ಮಾಗುತ್ತಾ, ಪಕ್ವಗೊಳ್ಳುತ್ತಾ ಹೋಗುತ್ತದೆ. ಆದರೆ ಮುಪ್ಪು ದೇಹವನ್ನು ಆವರಿಸಬಹುದೇ ಹೊರತು, ಮನಸ್ಸನ್ನು ಅಲ್ಲ. ನಮ್ಮ ಮನಸ್ಸು ಸಣ್ಣ ಸಣ್ಣ ವಿಷಯಗಳಲ್ಲೂ ಸಂತಸ ಅನುಭವಿಸುವ ಮಗುವಿನಂತೆಯೇ ಇದ್ದು ಬಿಟ್ಟರೆ, ಆಗ ಜೀವನ ಕಾರಿನ ಟಯರುಗಳಂತೆ ದಿನದಿಂದ ದಿನಕ್ಕೆ ಹಳೆಯದಾಗಿ, ಸವೆದು ಹೋಗುವುದಿಲ್ಲ.

ನಮ್ಮೆಲ್ಲರ ಬಾಲ್ಯದ ಗೆಳೆಯ ಚಂದ್ರ ಕೈಬೀಸಿ ಕರೆಯುತ್ತಿದ್ದಾನೆ. ಬನ್ನಿ, ಅವನೂರಿಗೆ ಒಮ್ಮೆ ಹೋಗಿ ಬರೋಣ. ದಿನ ನಿತ್ಯದ ಒತ್ತಡ,ಒದ್ದಾಟಗಳ ನಡುವೆ ಮರೆತೇ ಹೋಗಿರುವ ಈ ಹಳೆಯ ಹಾಡನ್ನು ಈಗ ಮತ್ತೊಮ್ಮೆ ಮೆಲುಕು ಹಾಕೋಣ-

ಚಂದಕ್ಕಿಮಾಮನ ಚಕ್ಕುಲಿ ಮಾಮನ
ಅಂದದ ಮುತ್ತಿನ ಕುಡಿಕೆ ಹೊತ್ತು ತರೋಣ
ಜಾರುಗುಪ್ಪೆ ಜಾರೋಣ ಹಕ್ಕಿಯಂತೆ ಹಾರೋಣ
ಬೆಳ್ಳಿ ಮೋಡ ಏರೋಣ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X