• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ

By Staff
|
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

venivas@hotmail.com

ಮನುಷ್ಯನ ಆಸೆಗಳು, ಅನುದಿನದ ಅಗತ್ಯವನ್ನೂ ಮೀರಿದ ದುರಾಸೆಗಳು, ಬಾಳಿನುದ್ದಕ್ಕೂ ಶ್ರಮಿಸಿದರೂ ಪೂರೈಸದಂತಹ ಮಹತ್ವಾಕಾಂಕ್ಷೆಗಳು ಬಹಳ ಇರಬಹುದು. ಆದರೆ ಅವುಗಳಲ್ಲಿ ನಮಗೆ ತೀರಾ ಅನಿವಾರ್ಯವಾಗಿ ಬೇಕಾಗಿದ್ದೇನು? ಮಾನವನ ಮೂಲಭೂತ ಅಗತ್ಯಗಳಲ್ಲಿ ಮುಖ್ಯವಾದುದು ಒಂದು ಆಹಾರ, ಇನ್ನೊಂದು ಬಟ್ಟೆ. ಪ್ರಾಮಾಣಿಕವಾಗಿ ಯೋಚಿಸಿ ನೋಡಿದಾಗ, ನಮ್ಮ ಎಲ್ಲಾ ಹೋರಾಟಗಳು, ಕಸರತ್ತುಗಳು ಇದನ್ನು ಪೂರೈಸಿಕೊಳ್ಳುವುದಕ್ಕಾಗಿಯೇ ನಡೆಯುತ್ತಿರುವುದನ್ನು ಕಾಣಬಹುದು. ಆದ್ದರಿಂದಲೇ ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ -ಎಂದಿರುವ ದಾಸರ ಮಾತಿಗೆ ಅಷ್ಟೊಂದು ಮಹತ್ವ! ಮೊದಲು ಹೊಟ್ಟೆಯ ಹಸಿವು ತಣಿದರೆ ಆಮೇಲೆ ತೆರೆದುಕೊಳ್ಳುತ್ತದೆ ನೋಡಿ, ನಮ್ಮ ಕೊನೆ ಮೊದಲಿಲ್ಲದ ಆಕಾಂಕ್ಷೆಗಳ ಆಕಾಶ!

ಒಂದು ವೇಳೆ, ಜಗತ್ತಿನ ಜೀವರಾಶಿಗಳಿಗೆ ಈ ಹಸಿವು ಎಂಬುವುದೇ ಇರದಿದ್ದರೆ ಹೇಗಿರುತ್ತಿತ್ತು ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಇವತ್ತು ಚಟುವಟಿಕೆಯ ಗೂಡಾಗಿ, ಗಿಜಿಗುಟ್ಟುತ್ತಿರುವ ಪ್ರಪಂಚ ಚಲನೆಯೇ ಇಲ್ಲದಂತೆ ಒಂದೆಡೆ ಸುಮ್ಮನೆ, ಸತ್ತ ಹಾವಿನಂತೆ ಬಿದ್ದುಕೊಂಡಿರುತ್ತಿತ್ತು. ಬೆಳಕು ಹರಿಯುವ ಮೊದಲೇ ಚಿಲಿಪಿಲಿ ಹೊರಡಿಸುತ್ತ ಆಹಾರ ಹುಡುಕಲು ಹೊರಡುವ ಹಕ್ಕಿಗಳಿಗೆ ಬೆಳಗಾಗಿದ್ದೇ ತಿಳಿಯುತ್ತಿರಲಿಲ್ಲ, ಕಾರ್ಖಾನೆಗಳಲ್ಲಿ ಸೈರನ್‌ ಮೊಳಗುತ್ತಿರಲಿಲ್ಲ, ಹಾಲು, ತರಕಾರಿಗಳ ವ್ಯಾನುಗಳು ಸರಕು ತುಂಬಿಕೊಂಡು ಹೊರಡುತ್ತಿರಲಿಲ್ಲ, ಹಾದಿ ಬೀದಿಗಳ ಉಪಹಾರ ಗೃಹಗಳಲ್ಲಿ ಜನ ಸಾಲುಗಟ್ಟಿ ನಿಲ್ಲುತ್ತಿರಲಿಲ್ಲ....ಬದುಕಲು ನೂರೆಂಟು ದಾರಿಗಳನ್ನು ಕಲಿಸುವ ಶಾಲಾ ಕಾಲೇಜುಗಳು, ಬ್ಯಾಂಕುಗಳು, ಸಿನಿಮಾ ಮಂದಿರಗಳು, ಬಸ್ಸುಗಳು, ರೈಲುಗಳು... ರಸ್ತೆಗಳ ತುಂಬಾ ಕಾಣಸಿಗುವ ನೂರೆಂಟು ಆಸೆಗಳನ್ನು ಹೊತ್ತ ಜನರು, ಬೇಡುವವರು, ನೀಡುವವರು.... ಉಹುಂ ಯಾವುದೂ ಇರುತ್ತಿರಲಿಲ್ಲ, ಇದ್ದರೂ ಹೀಗಿರುತ್ತಿರಲಿಲ್ಲ!

ಹಸಿವು ಆಳಿನಿಂದ ಹಿಡಿದು ಅರಸನವರೆಗೆ ಎಲ್ಲರಿಗೂ ಒಂದೇ. ಎಂತಹ ಶ್ರೀಮಂತ ಕೂಡ ಹಸಿವಾದಾಗ ಅನ್ನವನ್ನೇ ತಿನ್ನಬೇಕೇ ಹೊರತು ತನ್ನಲ್ಲಿ ರಾಶಿರಾಶಿಯಾಗಿರುವ ಹಣವನ್ನು ತಿನ್ನಲಾರ! ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂಬ ವರಬೇಡಿ, ತಿನ್ನುವ ಅನ್ನ ಕೂಡಾ ಚಿನ್ನವಾದಾಗ, ಹಸಿವಿನಿಂದ ಕಂಗಾಲಾದ ಮೈದಾಸ ಯಾರಿಗೆ ಗೊತ್ತಿಲ್ಲ? ಹಾಗಾಗಿಯೇ ಅನ್ನಕ್ಕೆ ಅಷ್ಟೊಂದು ಮಹತ್ವ. ಅನ್ನದಾನ ಎಲ್ಲಕ್ಕಿಂತ ಶ್ರೇಷ್ಟದಾನವೆನ್ನುತ್ತಾರೆ. ಅದಕ್ಕೆ ಕಾರಣವೂ ಇದೆ. ಎಷ್ಟೇ ಧನಕನಕಗಳನ್ನು ಕೊಟ್ಟರೂ ಮನುಷ್ಯನನ್ನು ದಣಿಸುವುದು ಸಾಧ್ಯವೇ ಇಲ್ಲ. ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ! ಆದರೆ ಹೊಟ್ಟೆ ತುಂಬ ತಿನ್ನಿಸುವುದರಿಂದ ಮಾತ್ರ ಒಬ್ಬನನ್ನು ಪೂರ್ಣ ತೃಪ್ತಿಗೊಳಿಸುವುದು ಸಾಧ್ಯ! ಆದ್ದರಿಂದಲೇ ಇರಬೇಕು - ಅನ್ನದಾನ, ಅನ್ನ ಸಂತರ್ಪಣೆಗಳಿಲ್ಲದೆ ನಮ್ಮ ಯಾವ ಪುಣ್ಯಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ನಮ್ಮ ಜೀವವನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವ ಅನ್ನ ನಮಗೆ ದೇವರು. ಅನ್ನವೆಂದರೆ ಬರೀ ಅಗುಳಲ್ಲ, ಅನ್ನಬ್ರಹ್ಮ!

ನಮ್ಮ ದೇವಾಲಯಗಳಿಗೂ, ಅನ್ನದಾನಕ್ಕೂ ಬಿಡಿಸಲಾರದ ಅನುಬಂಧವಿದೆ. ಇದೇಕೆ ಹೀಗೆಂದು ಒಮ್ಮೊಮ್ಮೆ ನನಗೆ ಆಶ್ಚರ್ಯವಾಗುತ್ತದೆ. ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆಯುವುದು... ಸರ್ವಜ್ಞ ಕವಿಯ ಪ್ರಕಾರ - ಇವು ವ್ಯಕ್ತಿಯಾಬ್ಬ ಅಳವಡಿಸಿಕೊಳ್ಳಬಹುದಾದ ಅತಿ ಉತ್ಕೃಷ್ಟವಾದ ಜೀವನ ಮೌಲ್ಯಗಳು! ‘ಹಸಿದ ಜನರ ಮುಂದೆ ದೇವರು ಪ್ರತ್ಯಕ್ಷನಾಗಲು ಬಯಸಿದರೆ, ಅವನು ಬ್ರೆಡ್‌ ರೂಪದಲ್ಲಿಯೇ ಬರಬೇಕು’ ಎನ್ನುತ್ತಾನೆ ಒಬ್ಬ ಆಂಗ್ಲ ಸಾಹಿತಿ. ಹಸಿದ ಹೊಟ್ಟೆಯ ಮುಂದೆ ಯಾವ ದೇವರೂ ಇಲ್ಲ, ಭುಕ್ತಿ ಇಲ್ಲದೆ ಭಕ್ತಿ ಹುಟ್ಟಲಾರದು ಎಂಬ ಸತ್ಯವನ್ನು ಅರಿತುಕೊಂಡು, ನಮ್ಮ ಪೂರ್ವಿಕರು ಇಂತಹ ಆಚರಣೆಗಳನ್ನು ಜಾರಿಗೆ ತಂದಿರಬಹುದೇ? ನಮ್ಮ ದೇವಸ್ಥಾನಗಳು ನಡೆಸುವ ಈ ಅನ್ನದಾನ ಕಾರ್ಯವನ್ನು, ಕನ್ನಡದ ಖ್ಯಾತ ಕಾದಂಬರಿಕಾರರೊಬ್ಬರು ಕೆಲವು ದಿನಗಳ ಹಿಂದೆ, ಭಿಕ್ಷೆಗೆ ಹೋಲಿಸಿದ್ದರು. ಆದರೆ ಅವರ ಈ ನಿಲುವು ಬಹಳ ಜನ ಪ್ರಜ್ಞಾವಂತ ಓದುಗರಿಗೆ ಸಮ್ಮತವಾಗಿರಲಿಲ್ಲ!

ಊಟ ಬಲ್ಲವನಿಗೆ ರೋಗವಿಲ್ಲ - ಎನ್ನುತ್ತದೆ ಒಂದು ಗಾದೆ! ನಾವು ಸೇವಿಸುವ ಆಹಾರದ ಪ್ರಮಾಣ ಎಷ್ಟಿರಬೇಕು? ಇದನ್ನು ಎಲ್ಲರಿಗೂ ಅನ್ವಯಿಸುವಂತೆ ಖಚಿತವಾಗಿ ಹೇಳಲು ಬರುವುದಿಲ್ಲ. ಒಬ್ಬ ಎರಡೇ ಇಡ್ಲಿಗೆ ತೃಪ್ತನಾದರೆ, ಮತ್ತೊಬ್ಬನಿಗೆ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಆಗಿಹೋಗಿಬಿಡಬಹುದು. ಆದರೆ, ಒಂದು ನಂಬಿಕೆಯ ಪ್ರಕಾರ - ನಾವು ಸೇವಿಸುವ ಅನ್ನಕ್ಕೂ, ನಮ್ಮ ಆಯಸ್ಸಿಗೂ ನಿಕಟ ಸಂಬಂಧವಿದೆಯಂತೆ. ದೇವರು ಪ್ರತಿಯಾಬ್ಬ ಜೀವಿಗೂ, ಅವನು/ಅದು ಸೇವಿಸುವ ಆಹಾರದ ಪ್ರಮಾಣವನ್ನು ಮೊದಲೇ ಅಳತೆ ಮಾಡಿಟ್ಟಿರುತ್ತಾನಂತೆ. ಯಾರು ಅದನ್ನು ಹೆಚ್ಚಿನ ಪ್ರಮಾಣದಲ್ಲಿ, ವೇಗವಾಗಿ ತಿಂದು ಮುಗಿಸುತ್ತಾರೋ, ಅಷ್ಟೇ ಬೇಗ ಅವರ ಜೀವಿತಾವಧಿ ಮುಗಿದುಹೋಗುತ್ತದೆ ಎಂಬುದು ಇದರ ಅರ್ಥ.

ಯಾವ ತರ್ಕಕ್ಕೂ ನಿಲುಕದ ಈ ಮಾತನ್ನು ವೈಜ್ಞಾನಿಕವಾಗಿ ವಿವೇಚಿಸುವುದು ಕಷ್ಟವಾದರೂ, ಮನುಷ್ಯ ತಿನ್ನುವುದಕ್ಕಾಗಿ ಬದುಕಬಾರದು, ಬದುಕುವುದಕ್ಕಾಗಿ ಮಾತ್ರ ತಿನ್ನಬೇಕು ಎಂಬ ನೀತಿಯಾಂದು ಇದರ ಹಿಂದೆ ಅಡಕವಾಗಿರುವುದಂತೂ ಸ್ಪಷ್ಟ. ನಮ್ಮ ಹೊಟ್ಟೆಯ ಮೂರನೆ ಒಂದು ಭಾಗವನ್ನು ಆಹಾರದಿಂದ, ಇನ್ನೊಂದು ಭಾಗವನ್ನು ನೀರಿನಿಂದ, ಉಳಿದೊಂದು ಭಾಗವನ್ನು ಹಾಗೆಯೇ ಖಾಲಿಯಾಗಿ ಇರಿಸಬೇಕೆನ್ನುತ್ತದೆ ಆರೋಗ್ಯ ಶಾಸ್ತ್ರ! ಒಟ್ಟಿನಲ್ಲಿ, ಮಿತಭುಕ್‌, ಹಿತಭುಕ್‌, ಋತಭುಕ್‌ ಎಂಬ ಉಕ್ತಿ ನಮ್ಮ ದೇಹ,ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸುಂದರ, ಸುವರ್ಣ ಸೂತ್ರ!

ಹೊಟ್ಟೆಯ ಹಸಿವನ್ನು ತಣಿಸಲು ಆಹಾರ ಬೇಕಾದರೂ ಅದನ್ನು ತಯಾರಿಸುವುದರಲ್ಲೂ, ಸೇವಿಸುವುದರಲ್ಲೂ ನಿರ್ದಿಷ್ಟ ನಿಯಮಗಳಿವೆ. ಆಹಾರದ ವಿಷಯದಲ್ಲಿ ಈ ನೀತಿ-ನಿಯಮಗಳನ್ನು ಪಾಲಿಸುವವರು ಹಳೆಯದಾದ ಆಹಾರವನ್ನು ಸೇವಿಸುವುದಿಲ್ಲ. ರಾತ್ರಿ ಮಾಡಿದ್ದು ಬೆಳಗಿಗೆ, ಬೆಳಗಿನದ್ದು ರಾತ್ರಿಗೆ ತಂಗಳು ಎಂಬುದು ಸಾಮಾನ್ಯ ಅರ್ಥವಾದರೂ, ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವ ನಿಷ್ಟಾವಂತರಿಗೆ ಆಹಾರ ತಯಾರಿಸಿ, ಕೆಲವೇ ಘಂಟೆಗಳು ಕಳೆದರೂ ಅದು ಬಳಕೆಗೆ ನಿಷಿದ್ಧ ಅನ್ನಿಸಿಕೊಳ್ಳುತ್ತದೆ.

ಆಗ ತಾನೇ ತಯಾರಿಸಿದ ತಾಜಾ ಆಹಾರ ಆರೋಗ್ಯದ ದೃಷ್ಟಿಯಿಂದ ಕೂಡ ಉತ್ತಮ. ಆದರೆ ಪ್ರತಿ ಬಾರಿ ಹೊಸ ಅಡಿಗೆಯನ್ನು ತಯಾರಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಇಂದಿನ ಜನರ ಬಹುಪಾಲು ಸಮಯ ಟ್ರಾಫಿಕ್‌ ಸಿಗ್ನಲ್ಲುಗಳಲ್ಲಿಯೇ ಜಾರಿಹೋಗುವುದರಿಂದ, ಅಡಿಗೆ ಮಾಡಲು ವ್ಯಯಿಸುವ ಕಾಲವನ್ನು ಉಳಿಸಿಕೊಳ್ಳಲು, ಎಂದೋ, ಯಾವಾಗಲೋ ಮಾಡಿದ ಪದಾರ್ಥಗಳನ್ನು ಮತ್ತೆ ಮತ್ತೆ ಬಿಸಿಮಾಡಿ ಬಳಸುವ ರೂಢಿ ಪ್ರಾರಂಭವಾಯಿತು. ಒಂದು ಕಾಲದಲ್ಲಿ ತಂಗಳು ಪೆಟ್ಟಿಗೆ ಎಂದು ತಿರಸ್ಕಾರದಿಂದ ಕರೆಸಿಕೊಳ್ಳುತ್ತಿದ್ದ ಫ್ರಿಜ್‌, ಇಂದು ನಮ್ಮ ಜೀವನದ ಅಗತ್ಯಗಳಲ್ಲಿ ಒಂದಾಗಿ ಹೋಗಿದೆ!

ಎಲ್ಲರೂ ಉಣ್ಣುವ ಅನ್ನ ಒಂದೇ ಆದರೂ, ಉಣ್ಣುವವರ ಅಂತಸ್ತಿಗೆ ತಕ್ಕಂತೆ ಅದರ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ವಿಶೇಷ ಸಮಾರಂಭಗಳಲ್ಲಿ, ಉಳ್ಳವರ ಮನೆಗಳಲ್ಲಿ, ನಿತ್ಯವೂ ಪಂಚ ಭಕ್ಷ್ಯ ಪರಮಾನ್ನಗಳಿದ್ದರೆ, ಕೈಯಲ್ಲಿ ಕಾಸಿಲ್ಲದೆ ಅವರಿವರಲ್ಲಿ ತಿರಿದುಂಬುವವರದು ಭಿಕ್ಷಾನ್ನ! ಸಮಾಜದಲ್ಲಿ ಅತಿ ಎತ್ತರದ ಸ್ಥಾನದಲ್ಲಿರುವ, ಸರ್ವಸಂಗ ಪರಿತ್ಯಾಗಿಗಳಾದ, ಮಠಗಳಲ್ಲಿನ ಸ್ವಾಮಿಗಳ ಸುಗ್ರಾಸ ಭೋಜನವೂ ಭಿಕ್ಷವೆಂದೇ ಕರೆಸಿಕೊಳ್ಳುತ್ತದೆ! ಭಿಕ್ಷಾನ್ನಕ್ಕಿಂತ ಹೀನ ಕದನ್ನ. ಈ ಪದವೇ ಇಷ್ಟು ಶುಷ್ಕವಾಗಿರುವಾಗ, ಇನ್ನು ಸಾಕ್ಷಾತ್‌ ಕದನ್ನ ಹೇಗಿರುವುದೋ? ಹೋಗಲಿ, ಈ ಕದನ್ನವಾದರೂ ಬೇಕೆನಿಸಿದಾಗ ಸಿಗುತ್ತದೋ? ಇಲ್ಲ.

‘ಘನ್ನ ಮಹಿಮ ನಿನ್ನ ಕರುಣೆ ತಪ್ಪಿದ ಮೇಲೆ ‘ಕದನ್ನಕ್ಕೆ’ ಬಾಯಿ ಬಿಡಿಸುವೆಯಲ್ಲೋ ಹರಿಯೇ’ ಎನ್ನುತ್ತಾರೆ ರಂಗವಿಠಲ ಅಂಕಿತದ ಶ್ರೀಪಾದರಾಜರು! ಕನ್ನಡನಾಡಿನ ಅನೇಕ ಪ್ರತಿಭಾವಂತರು, ಕವಿ,ಸಾಹಿತಿಗಳೆಲ್ಲ ಎಂದೋ ಒಮ್ಮೆ ವಾರಾನ್ನದ ರುಚಿ ಕಂಡವರೇ! ಈಗ ಶಾಲೆಗಳಲ್ಲಿ ಬಿಸಿಯನ್ನದ ಬಿಸಿ ಊಟ. ಪತ್ರಕರ್ತರ ಪಾಡು ಚಿತ್ರಾನ್ನವೆಂಬ ಕ್ರೂರ ವ್ಯಂಗ್ಯವಿದ್ದರೆ, ನಮ್ಮ ದಟ್ಸ್‌ ಕನ್ನಡದ ಓದುಗರಿಗೆ ಎಂದಿಗೂ ತಪ್ಪದ ವೈವಿಧ್ಯಮಯ ವಿಚಿತ್ರಾನ್ನ!

‘ದಾನೆ ದಾನೆ ಪೆ ಲಿಖಾ ಹೈ ಖಾನೆವಾಲೆ ಕಾ ನಾಮ್‌’, ‘ದುಡಿದಿದ್ದು ಉಂಡೆಯೋ? ಪಡೆದಿದ್ದು ಉಂಡೆಯೋ?’ .... ಇಂತಹ ಆಡುನುಡಿಗಳು ನಮ್ಮಲ್ಲಿರುವ ‘ನಾನು’ ಎನ್ನುವ ಅಹಂಕಾರ ಭಾವನೆಯನ್ನು ಪೂರ್ಣ ಅಳಿಸಿಹಾಕಲು ನೆರವಾಗುತ್ತವೆ. ನಾವು ಗಳಿಸಿದ್ದೇವೆ ಎಂದು ಅಂದುಕೊಂಡಿರುವ ಈ ಅನ್ನ ನಮ್ಮದಲ್ಲ. ಅದರ ಪ್ರಾಪ್ತಿ ನಮಗಿದ್ದರೆ ಮಾತ್ರ ದೊರಕುತ್ತದೆ ಎಂದ ಮೇಲೆ, ನಾವು ಬೇರೆ ಯಾರಿಗೆ, ಏನನ್ನು ತಾನೇ ನೀಡಿದೆವೆಂದು ಬೀಗಿ, ಮೆರೆಯಲು ಸಾಧ್ಯ?

ನನಗನ್ನಿಸುವಂತೆ, ಈ ಅನ್ನದ ಋಣ ಎಂಬ ಪರಿಕಲ್ಪನೆ ನಮ್ಮಲ್ಲಿ ಅಲ್ಲದೆ ಬೇರೆಲ್ಲೂ ಕಾಣಸಿಗದು.

ತುತ್ತು ಅನ್ನ ಇಟ್ಟವನನ್ನು ಕೊನೆ ತನಕ ನೆನೆಯಬೇಕು, ಅನ್ನ ಇಟ್ಟವನ ಮನೆಗೆ ಕನ್ನ ಹಾಕಬೇಡ.... ಮುಂತಾದ ನಾಣ್ಣುಡಿಗಳು ಈ ನಂಬಿಕೆಯ ನೆಲೆಯಲ್ಲೇ ಹುಟ್ಟಿಕೊಂಡಂತಹವು. ದ್ರೌಪದಿಯಿಟ್ಟ ಅನ್ನದ ಅಗುಳನ್ನು ತಿಂದು, ತೃಪ್ತನಾಗಿ ತೇಗಿದ ಶ್ರೀಕೃಷ್ಣ, ಆಕೆ ಕರೆದಾಗೆಲ್ಲ ಬಂದೊದಗುವ ಬಂಧುವಾದ! ಸುಧಾಮನಿಂದ ಪಡೆದ ಹಿಡಿಯವಲಕ್ಕಿಗೆ ಪ್ರತಿಯಾಗಿ ಅವನಿಗೆ ಕೃಷ್ಣನಿಂದ ಸಕಲ ಐಶ್ವರ್ಯಗಳೇ ಸಂದಾಯವಾಯಿತು. ದುಷ್ಟ ಕೌರವನ ಅನ್ನದ ಋಣದಲ್ಲಿ ಬಿದ್ದಿದ್ದ ಭೀಷ್ಮ, ದ್ರೋಣಾಚಾರ್ಯರಂತಹ ಹಿರಿಯರು ತಮ್ಮ ಕಣ್ಣೆದುರೇ ನಡೆಯುತ್ತಿರುವ ಘೋರ ಅನ್ಯಾಯವನ್ನು ಕೊರಳೆತ್ತಿ ಖಂಡಿಸಲಾರದೆ, ಪುರಾಣದ ಪುಟಗಳಲ್ಲಿ ಬಹಳ ಕುಬ್ಜರಾಗಿ ಉಳಿದು ಹೋದರು!

ಕೊನೆಯಲ್ಲಿ, ಹೊಟ್ಟೆ ತುಂಬಿದವರ, ಊಟದ ಮೇಜುಗಳಲ್ಲಿ ವ್ಯರ್ಥವಾಗುವ ಅನ್ನದ ಬಗ್ಗೆ ಬರೆಯದಿದ್ದರೆ ತಪ್ಪಾದೀತು. ಒಂದೆಡೆ ಹೊಟ್ಟೆಗೆ ಅನ್ನವಿಲ್ಲದೆ ಹಸಿವಿನಿಂದ ಜನ ಸಾಯುತ್ತಿದ್ದರೆ, ಮತ್ತೊಂದೆಡೆ ಧನಿಕರ ಆಡಂಬರದ ಮದುವೆಗಳಲ್ಲಿ, ಭೋಜನ ಕೂಟಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ....ಚೆಲ್ಲಾಡಿ ಹೋಗುವ ಭಕ್ಷ್ಯಭೋಜ್ಯಗಳು! ಸಮಾಜದ ಇಂತಹ ವೈರುಧ್ಯ, ವಿಪರ್ಯಾಸಗಳ ಬಗೆಗೆ ಕವಿ ನಿಸಾರ್‌ ಅಹಮದ್‌ ಒಂದೆಡೆ ನೋವಿನಿಂದ ಬರೆಯುತ್ತಾರೆ-

‘ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈಹೊತ್ತ ಬಡವನೊಬ್ಬ

ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬ!’

ಇದು, ಇವತ್ತಿಗೂ ನಾವೆಲ್ಲ ಪ್ರತಿದಿನವೂ ಕಾಣುತ್ತಲೇ ಇರುವ ದೃಶ್ಯ. ಆದರೆ ಈ ರೀತಿಯ ವೈಪರೀತ್ಯಗಳ ಕುರಿತು ಏನೇನೂ ಅನ್ನಿಸದಷ್ಟು ನಮ್ಮ ಸಂವೇದನೆಗಳೆಲ್ಲ ಮರಗಟ್ಟಿಹೋಗಿವೆ. ಕೆಲವೇ ಜನರಲ್ಲಿ ಅಷ್ಟು ಕಪ್ಪು ಹಣ ಹೇಗೆ ಬಂದಿತು? ಎಲ್ಲಿಂದ ಬಂದಿತು? ಉಳಿದವರು ಹೀಗೇಕೆ ಬರಿಗೈಯಲ್ಲಿದ್ದಾರೆ?....ದೇಶದ ಆರ್ಥಿಕ ಅಸಮತೋಲನದ ಬಗ್ಗೆ ಯೋಚಿಸುವುದನ್ನು ನಾವು ಎಂದೋ ನಿಲ್ಲಿಸಿದ್ದೇವೆ. ಯಥಾಸ್ಥಿತಿಯನ್ನು ಒಪ್ಪಿಕೊಂಡು, ಬಡತನವೆಂಬುದು ನಮ್ಮ ಆಡಳಿತದಲ್ಲಿ ಎಂದೋ ನಿರ್ನಾಮವಾಗಿ ಹೋಗಿದೆ ಎಂದು ಸುಳ್ಳು ಬೊಗಳುವ ಭಂಡರನ್ನೇ ಮತ್ತೆ ಮತ್ತೆ ಗೆಲ್ಲಿಸಿ ಕಳಿಸುವ ಅನಾಥ ಸ್ಥಿತಿಯಲ್ಲಿ, ಬರಗಾಲ, ದಾರಿದ್ರ್ಯಗಳ ಕುರಿತಾದ ಡಾಕ್ಯುಮೆಂಟರಿಯನ್ನು ದೂರದರ್ಶನದಲ್ಲಿ ನೋಡಿ, ಬಾಯಿಮಾತಿನ ಮರುಕ ವ್ಯಕ್ತಪಡಿಸುವುದನ್ನು ಬಿಟ್ಟು, ಬೇರೆ ಏನನ್ನೂ ಮಾಡಲಾರದಂತಹ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆ ಎಂದರೆ...ತಪ್ಪಾದೀತೇ??

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X