ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಣೆಯಾಗಿರು ನನ್ನ ಮಲ್ಲಿಗೆ

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ನಮ್ಮ ಶಾಲಾದಿನಗಳಲ್ಲಿ ಒಂದು ವಿಚಿತ್ರ ನಡೆಯುತ್ತಿತ್ತು. ನಮ್ಮ ಜೊತೆಗೆ ಒಡನಾಡಿಕೊಂಡಿರುತ್ತಿದ್ದ ನಮ್ಮ ಸಹಪಾಠಿಗಳಲ್ಲಿ ಒಬ್ಬಳು ಒಂದು ದಿನ ಇದ್ದಕ್ಕಿದ್ದಂತೆ ಅದೆಲ್ಲೋ ನಾಪತ್ತೆಯಾಗಿಬಿಡುತ್ತಿದ್ದಳು. ನಮ್ಮ ಜೊತೆಗೆ ಕುಳಿತು ಊಟ ಮಾಡುತ್ತಿದ್ದ, ಹರಟುತ್ತಿದ್ದ, ಪಠ್ಯ ವಿಷಯಗಳ ಬಗೆಗೆ ಆಸಕ್ತಿಯಿಂದ ಚರ್ಚಿಸುತ್ತಿದ್ದ ಅವಳು, ನಮಗೂ ತಿಳಿಸದಂತೆ ಅದೆಲ್ಲಿ ಮಾಯವಾಗಿ ಹೋದಳೋ, ಎಂದು ನಮಗೆ ಕೆಲವು ದಿನ ಅವಳದೇ ನೆನಪು ಕಾಡುತಿತ್ತು. ಆದರೆ ಅವಳು ಒಬ್ಬಳೇ ಹೋಗಿರಲಿಲ್ಲ, ಅವಳ ಜೊತೆಗೆ ಇನ್ನೊಬ್ಬನಿದ್ದ ಎಂದು ನಮಗೆ ತಿಳಿಯುತ್ತಿದ್ದುದು ಮಾತ್ರ ಬಹಳ ತಡವಾಗಿ. ಈ ರೀತಿ ಕಣ್ಮರೆಯಾದ ಅವರನ್ನು ‘ಓಡಿಹೋದವರು’ ಎಂದು ಬಹಳ ಹೀನಾಯವಾಗಿ ಮಾತನಾಡಿಕೊಳ್ಳುತ್ತಿದ್ದರು.

ಈ ಕಡೆ ಚಿಕ್ಕವರಿಗೆ ಚಿಕ್ಕವರೂ ಅಲ್ಲದ, ಎಲ್ಲಾ ಬಲ್ಲ ದೊಡ್ಡವರೂ ಅಲ್ಲದ ನಮಗೆ, ಈ ರೀತಿ ಓಡಿ ಹೋದವರ ಬಗೆಗೆ ಇನ್ನಿಲ್ಲದ ಕುತೂಹಲ. ನೂರಾರು ಮೈಲುಗಳ ದೂರವಿರುವ ಬೆಂಗಳೂರಿಗೋ, ಮುಂಬಯಿಗೋ ಯಾರಾದರೂ ಓಡಿಹೋಗುವುದಾದರೂ ಸಾಧ್ಯವಿದೆಯೇ? ಕೊನೆಯ ಪಕ್ಷ ಬಸ್ಸು, ರೈಲುಗಳಲ್ಲಾದರೂ ಹೋಗಬಹುದಿತ್ತಲ್ಲವೇ? ಗುರುತು , ಪರಿಚಯವಿರದ ಹೊಸ ಊರಿನಲ್ಲಿ ಅವರು ಏನು ಮಾಡುತ್ತಾರೆ? ಅರ್ಧಕ್ಕೆ ನಿಂತಿರುವ ಅವಳ ಓದಿನ ಗತಿಯೇನು? ಪರೀಕ್ಷೆಗಾದರೂ ಅವಳು ಬರುತ್ತಾರೆಯೇ? ಬಂದರೂ ಪರೀಕ್ಷೆಗೆ ಸೇರಿಸುತ್ತಾರೆಯೇ? ...... ಮುಂತಾದ ನೂರೆಂಟು ಪ್ರಶ್ನೆಗಳು ನಮ್ಮ ತಲೆ ತಿನ್ನುತ್ತಿದ್ದವು. ಆದರೆ ಈ ಕುರಿತು ಯಾರನ್ನೂ, ಏನೂ ಕೇಳುವಂತಿರಲಿಲ್ಲ, ಕೇಳಿದರೂ ಬೈಸಿಕೊಳ್ಳುವುದು ಖಂಡಿತ ಎಂದು ತಿಳಿದಿರುತ್ತಿದ್ದುದರಿಂದ, ಅವು ನಮ್ಮನಮ್ಮಲ್ಲೇ ಉಳಿದುಹೋಗಿಬಿಡುತ್ತಿದ್ದವು.

Advice for Young Girls!ಎಷ್ಟೋ ದಿನಗಳ ನಂತರ, ಆ ಕಾಣೆಯಾದ ಗೆಳತಿಯನ್ನು ನಾವು ಇನ್ನೇನು ಮರೆತೇಬಿಟ್ಟೆವು ಅಂದುಕೊಳ್ಳುವಷ್ಟರಲ್ಲಿ ಆಕೆ ಹಿಂತಿರುಗಿರುತ್ತಿದ್ದಳು. ಮನೆಯವರಿಗೆ ತಿಳಿಯದಂತೆ, ಗುಟ್ಟಿನಲ್ಲಿ ಅಲ್ಲಿ, ಇಲ್ಲಿ ಭೇಟಿಯಾಗುತ್ತಿದ್ದ ಅವಳ ಮುಖದಲ್ಲಿ ನಗು ಸತ್ತು ಹೋಗಿರುತ್ತಿತ್ತು. ಹಿಂದಿರುತ್ತಿದ್ದ ಹುಡುಗಾಟಿಕೆ ಮಾಯವಾಗಿರುತ್ತಿತ್ತು. ಯಾವುದೋ ತಪ್ಪಿಗೆ ಪಶ್ಚಾತ್ತಾಪ ಪಡುವಂತಿರುವ, ಮಾಡಿದ ತಪ್ಪಿನಿಂದ ಹೊರಬರಲಾರದಂತಹ ಅಸಹಾಯಕ ಮುಖಭಾವ. ಅರ್ಧಕ್ಕೆ ನಿಂತು ಹೋಗಿರುವ ವಿದ್ಯಾಭ್ಯಾಸದ ಬಗ್ಗೆ ಮಾತ್ರ ದೊಡ್ಡದೊಂದು ನಿರಾಸೆ ಅವಳಲ್ಲಿ ಎದ್ದು ಕಾಣುತ್ತಿತ್ತು. ಒಣಗಿ ಕಡ್ಡಿಯಂತಾದ ಕೈಕಾಲುಗಳು, ಗುಳಿ ಬಿದ್ದ ಕೆನ್ನೆ, ಕೈಯಲ್ಲೊಂದು ಅಪೌಷ್ಟಿಕತೆಯಿಂದ ಸೊರಗಿದ ಮಗು ಬೇರೆ. ನಮ್ಮ ಜೊತೆಜೊತೆಗೆ ಆಡಿ ನಲಿಯುತ್ತಿದ್ದು, ಈಗ ನಮಗಿಂತ ಅದೆಷ್ಟೋ ಹಿರಿಯಳಂತೆ ಕಾಣುತ್ತಿದ್ದ ಅವಳನ್ನು ಕಂಡು ನಮಗೆ ಇನ್ನಿಲ್ಲದಂತೆ ಮರುಕ ಉಕ್ಕಿ ಬರುತ್ತಿತ್ತು.

ಯಾವುದೋ ಸಣ್ಣ ಗಲ್ಲಿಯಲ್ಲಿನ, ಪುಟ್ಟ ಮನೆಯಾಂದರಲ್ಲಿ ವಾಸವಿರುತ್ತಿದ್ದ ಅವಳ ಜೊತೆಗೆ ಗಂಡನೆನ್ನಿಸಿಕೊಂಡ ಒಬ್ಬ ಹುಡುಗನೂ ಇರುತ್ತಿದ್ದ. ಅವನದೂ ಅದೇ ಗೆಲುವಿಲ್ಲದ ಕಣ್ಣುಗಳು, ನಿರಾಸಕ್ತಿ ತುಂಬಿದ ನಿಸ್ತೇಜ ಮುಖ. ಅವರು, ಎಲ್ಲೋ ಹೋಗಿ, ಯಾರಿಗೂ ಹೇಳದೆ, ಯಾರನ್ನೂ ಕೇಳದೆ ಮದುವೆಯಾಗಿ ಬಂದಿರುತ್ತಿದ್ದರು. ಅವರ ಪಾಲಿಗೆ ಅದೊಂದು ಆದರ್ಶಮಯ ಪ್ರೇಮವಿವಾಹ. ಆದರೆ ನಿಜವಾಗಿಯೂ, ಅದು ಅಕಾಲದಲ್ಲಿ ಚಿಗುರಿ ನಿಂತ ಪ್ರೇಮ. ಅದೊಂದು ಅರೆಬೆಂದ ತೀರ್ಮಾನ, ಅವಸರದ ಮದುವೆ!

ಆಗ ನಮ್ಮದೂ ಅದೇ ಕನಸುಗಳ ವಯಸ್ಸು. ಭಾವನೆಗಳಲ್ಲೇ ತೇಲಾಡುವ ಮನಸ್ಸು. ಪ್ರೇಮದ ಕುರಿತು ಬಹಳ ರಮ್ಯವಾದ ಕಲ್ಪನೆಗಳು ನಮಗೂ ಇರುತ್ತಿದ್ದವು. ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...., ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು... ಎಂದೆಲ್ಲಾ ಸುಂದರವಾಗಿ ಯೋಚಿಸುತ್ತಿದ್ದ ನಮಗೆ ಕೂಡ, ಸೋತ ಮುಖದಲ್ಲಿ ಬಂದು ನಿಂತಿರುವ ಆ ನಮ್ಮ ಗೆಳತಿಯನ್ನು ನೋಡಿ - ಒಂದು ಹೊತ್ತು ಊಟಕ್ಕಿದ್ದರೆ, ಇನ್ನೊಂದು ಹೊತ್ತು ಊಟಕ್ಕಿಲ್ಲದ ಈ ಗತಿಗೆಟ್ಟ ಸ್ಥಿತಿಯೇ ಪ್ರೇಮವೇ? ಹತಾಶೆಯ ಪರಮಾವಧಿಯಂತೆ ತೋರುತ್ತಿರುವ ಈ ದುರ್ಗತಿಯೇ ಪ್ರೇಮವೇ? ಸಿಡಿಮಿಡಿ ಮಾಡುವ ದುಡಿಯದ ಗಂಡ, ನರಳಿದಂತೆ ಅಳುವ ಮಗು, ಕಂಡರೂ ಕಾಣಿಸದಂತೆ ಮುಖ ಗಂಟಿಕ್ಕಿಕೊಳ್ಳುವ ಹೆತ್ತವರು, ಅಸಡ್ಡೆಯಿಂದ ನೋಡುವ ನೆರೆಹೊರೆಯವರು..... ಪ್ರೇಮ , ಪ್ರೀತಿ ಅಂದರೆ ಇದೇನಾ? ಬರೀ ಇಷ್ಟೇನಾ? ಎಂಬ ಭ್ರಮ ನಿರಸನ ಉಂಟಾಗಿಬಿಡುತ್ತಿತ್ತು.

Advice for Young Girls!ವಯಸ್ಸಿಗೆ ಸಹಜವಾದ ಆಕರ್ಷಣೆಯನ್ನು ಪ್ರೇಮವನ್ನು ಭಾವಿಸಿಕೊಳ್ಳುವುದು ಹೊಸದೇನಲ್ಲ. ಇಂತಹ ಪ್ರಕರಣದಲ್ಲಿ ಕೆಲವು ವಿವಾಹದಲ್ಲಿ ಕೊನೆಗೊಂಡರೆ, ಬಹುಪಾಲು ಪ್ರೇಮಕಥೆಗಳಿಗೆ ದುರಂತ ಕಟ್ಟಿಟ್ಟ ಬುತ್ತಿ! ಏನೋ ಮಹತ್ತನ್ನು ಸಾಧಿಸಿಬಿಡುತ್ತೇವೆಂಬ ಆದರ್ಶದ ಗುಂಗಿನಲ್ಲಿ ಆಗುವ ಇಂತಹ ಪ್ರೇಮವಿವಾಹಗಳು ಸಫಲವಾಗುವುದು ಕೂಡ ಅಪರೂಪ. ಮದುವೆಯಾದ ಆರಂಭದ ದಿನಗಳಲ್ಲಿದ್ದ ಉತ್ಸಾಹ, ಪ್ರೇಮದ ಬಿಸಿ ಬದುಕಿನ ಘೋರ ವಾಸ್ತವತೆ ಕಣ್ಣೆದುರು ತೆರೆದುಕೊಳ್ಳುತ್ತಾ ಹೋದಂತೆ ಕ್ರಮೇಣ ತಣ್ಣಗಾಗುತ್ತಾ ಹೋಗುತ್ತದೆ. ತಾವು ತೆಗೆದುಕೊಂಡ ಈ ನಿರ್ಣಯ ದುಡುಕಿನದು ಅನ್ನಿಸಿ, ವಿವಾಹವೇ ಬಂಧನವಾಗಿ ಪರಿಣಮಿಸಿದರೂ ಆಶ್ಚರ್ಯವೇನಿಲ್ಲ . ಮದುವೆಯ ಸುಖದ ಜೊತೆಗೆ, ಮೈಮೇಲೆ ಹೇರಿಕೊಳ್ಳುವ ಹೊಸ ಹೊಸ ಜವಾಬ್ದಾರಿಗಳ ಭಾರವನ್ನು ಹೊರಲಾರದೆ ನಂಬಿಸಿ, ಕೈಕೊಟ್ಟು ಓಡಿಹೋಗುವ ವೀರಪ್ರೇಮಿಗಳ ಸಂಖ್ಯೆ ಕೂಡ ಸಾಕಷ್ಟು ದೊಡ್ಡದಾಗಿಯೇ ಇದೆ. ಇಂತಹ ಪ್ರೇಮಪ್ರಕರಣಗಳ ಪ್ರಭಾವ ಇಬ್ಬರ ಮೇಲೂ ಆಗುವುದಾದರೂ, ಹುಡುಗಿಯರ ಮೇಲೆ ಇವು ಬೀರುವ ಪ್ರಭಾವ ಹೆಚ್ಚು. ಆದ್ದರಿಂದ ದೈವಿಕವಾಗಿರುವ ಪ್ರೇಮವನ್ನು ಕಡೆಯಪಕ್ಷ ದೈಹಿಕ ಮಟ್ಟಕ್ಕಿಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಣ್ಣುಮಕ್ಕಳ ಮೇಲೆ ಬಹಳ.

ಇದು ಎಂದಿನದೋ ಕಥೆಯಲ್ಲ, ಇಂದಿಗೂ ನಡೆಯುತ್ತಲೇ ಇರುವ ಕಥೆ. ಹೆಣ್ಣುಮಕ್ಕಳು ಹಿಂದಿಗಿಂತ ಸುಶಿಕ್ಷಿತರಾಗುತ್ತಿರುವ, ಸ್ವಾವಲಂಬಿಗಳಾಗುತ್ತಿರುವ ಈ ಹೊತ್ತಿನಲ್ಲೂ ಯಾವುದೋ ಮೋಹಕ್ಕೆ, ಯಾರದೋ ದಾಹಕ್ಕೆ ಬಲಿಯಾಗಿ, ಕ್ರೈಂ ಸ್ಟೋರಿ ಕ್ಯಾಮರಾ ಮುಂದೆ ಕಣ್ಣೀರಿಡುವ ಅಮಾಯಕ ಹೆಂಗಳೆಯರಿಗೇನೂ ಕೊರತೆಯಿಲ್ಲ. ಆದರೆ ಹಿಂದಿಗೂ, ಇಂದಿಗೂ ಇರುವ ಒಂದೇ ವ್ಯತ್ಯಾಸವೇನೆಂದರೆ, ಅಂದು ಇಂತಹ ಪ್ರೇಮಪ್ರಕರಣದಲ್ಲಿ ಬೇಡದ ಬಸಿರನ್ನು, ಸಮಾಜದ ಕೆಂಗಣ್ಣಿಗೆ ಹೆದರಿ ಗರ್ಭಪಾತದ ಮೂಲಕ ಕೊನೆಗೊಳಿಸುತ್ತಿದ್ದರೆ, ಈಗ ಕೊನೆಗೆ ಡಿ.ಎನ್‌.ಎ ಪರೀಕ್ಷೆಗಾದರೂ ಇರಲಿ ಎಂದು ಮಗುವನ್ನು ಉಳಿಸಿಕೊಳ್ಳಲಾಗುತ್ತಿದೆ. ಆದರೆ ಆ ಪರೀಕ್ಷೆಗಳಿಂದ ಬರುವ ವರದಿಗಾಗಿಯೂ ಕಾಯದೆ, ಇನ್ನೊಂದು ಮದುವೆಯಾಗಿ ಬಿಡುವ ಭಂಡ ಗಂಡುಗಳಿರುವ ಈ ಸಮಾಜದಲ್ಲಿ, ಇಂತಹ ಅನೇಕ ಪ್ರಕರಣಗಳು ಆರಕ್ಷಕರಿಗೂ ಬಿಡಿಸಲಾರದ ಕಗ್ಗಂಟಾಗಿವೆ.

ಪ್ರೇಮವಿವಾಹ ಯಶಸ್ವಿಯಾಗಲು ಪರಸ್ಪರ ಪ್ರೇಮದ ಜೊತೆಗೆ, ಧೈರ್ಯ, ಮುಂದಾಲೋಚನೆ, ಯಾವುದೇ ಎಡರುತೊಡರುಗಳು ಎದುರಾದರೂ, ಅದನ್ನು ಎದುರಿಸುವ ಛಲವೂ ಮನಸ್ಸಿನಲ್ಲಿರಬೇಕು. ಯಾಕೆಂದರೆ ಸಾಧಾರಣವಾಗಿ ಇಂತಹ ಮದುವೆಗಳಿಗೆ ಮನೆಯವರ ಒಪ್ಪಿಗೆ ಇರುವುದಿಲ್ಲ. ಸಾಂಪ್ರದಾಯಿಕವಾಗಿ ನಡೆದ ಮದುವೆಗಳಲ್ಲಿ, ಜೀವನದ ಕಷ್ಟ-ನಷ್ಟಗಳಲ್ಲಿ ಬಂದು ಕೈಹಿಡಿಯುವ ಹಿರಿಯರ ನೆರವೂ ಇಲ್ಲಿ ಒದಗುವುದಿಲ್ಲ. ಅಲ್ಲಿ ಪದ ಕುಸಿದರೆ ನೆಲವಾದರೂ ಇರುತ್ತದೆ, ಇಲ್ಲಿ ಅದೂ ಇಲ್ಲ. ಸ್ವಂತ ಸಾಮರ್ಥ್ಯದಿಂದ ಗುರಿ ಸೇರುವ ಆತ್ಮವಿಶ್ವಾಸವಿಲ್ಲದಿದ್ದರೆ, ಅಂತಹ ಮದುವೆಗಳು ಅರ್ಧದಲ್ಲೇ ಕುಸಿದುಬೀಳುವುದು ಸಾಮಾನ್ಯ.

ಪ್ರೇಮ, ಈ ಮಣ್ಣಿನ ಬದುಕಿಗೂ ಗಂಧದ ಪರಿಮಳ ತಂದು ತುಂಬಿರುವ ಅಪೂರ್ವ ವಸ್ತು! ಪ್ರೇಮವಿವಾಹ ತಪ್ಪಲ್ಲ. ಆದರೆ ಸೂಕ್ತ ಶಿಕ್ಷಣದ ನೆರವಿಲ್ಲದೆ, ಸರಿಯಾದ ಆರ್ಥಿಕ ಅಡಿಪಾಯವಿಲ್ಲದೆ, ಯಾವುದೋ ಆವೇಶ, ಆವೇಗದಲ್ಲಿ ನಡೆಯುವ ವಿವಾಹಗಳು ಯಶಸ್ವಿಯಾಗುವುದು ಅಸಾಧ್ಯ. ಇಂದು ನಮ್ಮ ನಡುವೆ ಇರುವ ಅದೆಷ್ಟೋ ಗಣ್ಯರು ಪ್ರೇಮವಿವಾಹ, ಅಂತರ್ಜಾತೀಯ ವಿವಾಹಗಳನ್ನು ಮಾಡಿಕೊಂಡು ಸುಖಜೀವನ ನಡೆಸುತ್ತಿದ್ದಾರೆ. ಆದರೆ, ಆ ಯಶಸ್ಸು, ಅವರ ಎಷ್ಟೋ ವರ್ಷಗಳ ಸಹನೆ, ಶ್ರದ್ಧೆ, ಪರಿಶ್ರಮಗಳ ಫಲ. ಖಂಡಿತವಾಗಿಯೂ ಅವು ರಾತ್ರೋರಾತ್ರಿ, ಹಿಂದೆಮುಂದೆ ಯೋಚಿಸದೆ, ಹುಸಿ ಆದರ್ಶಗಳ ಸೋಗಿನಲ್ಲಿ ಆಗಿಹೋದ ಆತುರದ ಮದುವೆಗಳಲ್ಲ. ಪ್ರೇಮವಿವಾಹ ಆಗುವುದು ದೊಡ್ದದಲ್ಲ, ಆದರೆ ತಮ್ಮ ಪ್ರೇಮವನ್ನು ಯಾವುದೇ ಕಾರಣಕ್ಕೂ ಈ ಜಗತ್ತಿನ ಮುಂದೆ ಸೋಲದಂತೆ ನೋಡಿಕೊಳ್ಳುವುದು ಮುಖ್ಯ! ಇಂತಹ ದೃಢನಿರ್ಧಾರವಿಲ್ಲದವರು ಪ್ರೇಮವಿವಾಹದ ಗೋಜಿಗೆ ಹೋಗದಿರುವುದೇ ಒಳ್ಳೆಯದು. ಏಕೆಂದರೆ, ಇವರು ತಾವು ಸೋಲುವುದು ಮಾತ್ರವಲ್ಲದೆ, ಪ್ರೇಮವಿವಾಹದ ಬಗ್ಗೆ ಬೇರೆಯವರಲ್ಲೂ ಭಯ ಮೂಡಿಸಿಬಿಡುತ್ತಾರೆ!

ಅದೊಂದು ವಯಸ್ಸು. ಅದು ಆಸೆ ತುಂಬಿರುವ ವಯಸ್ಸು. ಮೋಸ ಹೋಗುವ ವಯಸ್ಸು. ಇಬ್ಬನಿ ಮಣಿಯನ್ನು ಮುತ್ತೆಂದು ನಂಬುವ, ಮೋಹವನ್ನೇ ಪ್ರೇಮವೆಂದು ಭಾವಿಸಿಬಿಡುವ ವಯಸ್ಸು. ಆದರೆ ಈ ಹುಸಿಪ್ರೇಮ ಹೆಣ್ಣಿನ ಬದುಕನ್ನು ಮಣ್ಣುಪಾಲು ಮಾಡುವಷ್ಟು ಸಶಕ್ತ. ಪೋಷಕರು, ಶಿಕ್ಷಕರು ಈ ಸಮಯದಲ್ಲಿ ಸ್ವಲ್ಪ ನಿಗಾವಹಿಸಿದರೂ ಮುಂದಾಗಲಿರುವ ಅನಾಹುತಗಳನ್ನು ತಡೆಯಬಹುದು.

ಹೆಣ್ಣೇ, ಪ್ರೇಮದ ಹೆಸರಿನಲ್ಲಿ, ತ್ಯಾಗದ ಹೆಸರಿನಲ್ಲಿ ಇನ್ನೂ ಎಷ್ಟು ಕಾಲ ಮೋಸ ಹೋಗುತ್ತೀಯಾ? ಇನ್ನಾದರೂ ನೀನು ಜಾಣೆಯಾಗು. ಭ್ರಮೆಗಳನ್ನು, ಭಾವನೆಗಳನ್ನು ಕಳಚಿಕೊಂಡು ಜಗತ್ತನ್ನು ಅದು ಇರುವ ಹಾಗೆಯೇ ನೋಡಲು ಕಲಿ. ‘ಪ್ರೇಮ ಗಂಡಸಿನ ಬದುಕಿನ ಒಂದು ಭಾಗವಾದರೆ, ಹೆಣ್ಣಿನ ಬದುಕೇ ಪ್ರೇಮ’ - ಎಂಬ ದಾರಿ ತಪ್ಪಿಸುವ ಆಕರ್ಷಕ ಸುಳ್ಳುಗಳ ಪೊರೆ ಕಳಚಿಕೊಂಡು ಹೊರಗೆ ಬಾ. ಮೊದಲು ನಿನ್ನ ಬದುಕು, ವಸ್ತುಸ್ಥಿತಿಯ ಗಟ್ಟಿ ನೆಲದ ಮೇಲೆ ಆಲದ ಮರದಂತೆ ಬೇರೂರಿ ಬೆಳೆಯಲಿ, ಆಮೇಲೆ ಬೇಕಾದರೆ ಕೊಂಬೆ, ರೆಂಬೆಗಳಲ್ಲೂ ಪ್ರೇಮಪುಷ್ಪಗಳು ಅರಳಲಿ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X