ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಬ್ರಹ್ಮ ಕಪಾಲವನ್ನು ಹಿಡಿದು, ಭಿಕ್ಷೆಗೆ ಬಂದು ನಿಂತಿದ್ದಾನೆ ಈ ಮುದ್ದು ಮುಖದ ಜಂಗಮ. ಅವನು ಕೊಟ್ಟಿದ್ದು ತೆಗೆದುಕೊಂಡು ಹೋಗುವ ಸಾಧಾರಣ ಜಂಗಮನಲ್ಲ, ಭಾವಶುದ್ಧವಿಲ್ಲದವರಲ್ಲಿ ಭಿಕ್ಷೆಯನೊಲ್ಲದ ಚೆನ್ನ ಚೆಲುವ ಜಂಗಮ, ಮದನನ ಮದವಿಳಿಸಿ ಬಂದ ಅಂದಗಾರ ಜಂಗಮ, ಕರಾಳ ವಿಷವನ್ನು ಕಂಠದಲ್ಲಿ ಧರಿಸಿಯೂ ನಸು ನಗುವ ಜಂಗಮ, ಕೊರಳಲ್ಲಿ ಹಾವು, ಕೈಯಲ್ಲಿ ತ್ರಿಶೂಲ, ಡಮರುಗ ಹಿಡಿದು, ಗಜಚರ್ಮ ಉಟ್ಟು ಬಂದಿರುವ ಜೋಗಿ ಜಂಗಮ, ಗಿರಿಜೆಯ ಮನಸ್ಸನ್ನು ಕದಿಯಲೆಂದೇ ಬಂದು ನಿಂತಿರುವ ಕೋಲುಮಂಡೆ ಜಂಗಮ!

ಶಿವ-ಪಾರ್ವತಿಯರು, ನಮ್ಮ ಭಾರತೀಯ ಸಂಸ್ಕೃತಿಗೊಂದು ಸುಂದರ ಸಂಕೇತ! ಈ ಮಣ್ಣಿನ ಸಾರ ಹೀರಿ ಅರಳಿ ನಿಂತಿರುವ, ಗೀತ-ನೃತ್ಯ-ಸಾಹಿತ್ಯಕ್ಕೆ ಅವರೇ ಸ್ಪೂರ್ತಿಯ ಸೆಲೆ, ಚೈತನ್ಯದ ನೆಲೆ. ಕೈಲಾಸ ಪರ್ವತ ಅವರ ನಿವಾಸ. ಆದರೆ ಭಕ್ತಿ ತುಂಬಿದ ಹೃದಯಗಳಲ್ಲೇ ಅವರ ನಿತ್ಯ ವಾಸ! ನಮ್ಮ ಪುರಾಣದ ಕತೆಗಳನ್ನು ಕೇಳಿ ತಿಳಿದಿದ್ದವರಿಗೆಲ್ಲ ಗೊತ್ತಿರುವ ವಿಷಯವೇ ಇದು. ಪರೀಕ್ಷೆಗಾಗಿ ಹಗಲಿರುಳು ಓದುವ ಜಾಣಹುಡುಗನ ಗಮನವನ್ನು ಇತರ ವಿದ್ಯಾರ್ಥಿಗಳು, ಬೇರೆಡೆಗೆ ಸೆಳೆದು ಚಂಚಲಗೊಳಿಸುವುದಿಲ್ಲವೇ? ಈ ದೇವತೆಗಳ ಸ್ವಭಾವವೂ ಸ್ವಲ್ಪ ಹಾಗೆಯೇ. ತಾವೂ ಒಂದೆಡೆ ಕುಳಿತು ತಪಸ್ಸು ಮಾಡುವುದಿಲ್ಲ, ಮಾಡುವವರನ್ನೂ ಸುಮ್ಮನೆ ಬಿಡುವುದಿಲ್ಲ. ತಪಸ್ಸಿನಲ್ಲಿ ಮೈಮರೆತ ಋಷಿ-ಮುನಿಗಳ ಮುಂದೆ ಅಪ್ಸರೆಯರ ನೃತ್ಯವೇರ್ಪಡಿಸಿ, ಅವರ ಬ್ರಹ್ಮಚರ್ಯ ಕೆಡಿಸುವುದು ದೇವತೆಗಳ ಒಂದು ಪ್ರಿಯವಾದ ಹವ್ಯಾಸ. ಅವರು ಯಾವುದೋ ಮಹತ್ತರ ಲೋಕಕಲ್ಯಾಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಆ ಕೆಲಸ ಮಾಡಿರುತ್ತಾರೆ, ಆ ಮಾತು ಬೇರೆ. ಆದರೆ ಹಿಂದೆಲ್ಲಾ ಇದೇ ಉಪಾಯ ಯಶಸ್ವಿಯಾಗಿತ್ತೆಂದು, ಅದನ್ನೇ ಪ್ರಳಯರುದ್ರನ ಮುಂದೆಯೂ ಪ್ರಯೋಗಿಸಲು ಬಂದರೆ ನಡೆದೀತೇ? ಈ ಬಾರಿಯ ಪ್ರಯೋಗಕ್ಕೆ ಬಲಿಪಶುವಾದವನು ಮಾತ್ರ ಮನ್ಮಥ!

ಕಾಮನಬಿಲ್ಲಿನ ಝೇಂಕಾರದೊಂದಿಗೆ, ಗತ್ತಿನಿಂದ ಬಂದ ಮದನನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಬೂದಿ ಮಾಡಿದ ಈ ಕಾಲಭೈರವ ಆಮೇಲೆ ಮಾಡಿದ್ದೇನು ಗೊತ್ತಾ? ಪಾರ್ವತಿಯ ಭಕ್ತಿಗೆ ಒಲಿದು ಅವಳನ್ನೇ ವರಿಸುತ್ತಾನೆ. ವಿಷಯ ಹೀಗಿದ್ದ ಮೇಲೆ ಆ ಬಡಪಾಯಿ ಕಾಮನನ್ನು ಹಾಗೆಯೇ ಜೀವಸಹಿತ ಬಿಟ್ಟಿದ್ದರಾಗುತ್ತಿತ್ತಲ್ಲ? ಮಹಾದೇವನ ಈ ಲೀಲಾವಿಲಾಸವನ್ನು ಕಂಡ ಕವಿಯಾಬ್ಬ ನಮ್ಮಂತೆಯೇ ಬೆಕ್ಕಸ ಬೆರಗಾಗಿ ಉದ್ಗಾರ ತೆಗೆಯುತ್ತಿದ್ದಾನೆ - ‘ಪಾಪ! ಕಾಮನನ್ನು ಸುಟ್ಟು ಬೂದಿ ಮಾಡಿದಂತ ಶಿವನು ಶಿವೆಯ ಮದುವೆಯಾದನಂತೆ! ಈ ವಿಚಿತ್ರ ಕಂಡಿರಾ? ಅರಿಯಲೆಂದೇ ಬಂದಿರಾ?’ ಶಿವನ ಈ ಕೃತ್ಯ ನಮ್ಮ ಅಲ್ಪಮತಿಗಳಿಗೆ ಎಟುಕದೇ ಇರಬಹುದು. ಆದರೆ ಅದಕ್ಕೊಂದು ಘನ ಉದ್ದೇಶವಿಲ್ಲದೆ ಇದ್ದೀತೇ? ಶಿವ ಮಾಡಿದ್ದು ಸರಿಯೇ ಆಯಿತು - ಮುಕ್ಕಣ್ಣನ ಮೂರನೆಯ ಕಣ್ಣಿನ ಉರಿಗೆ ಸುಟ್ಟು ಬೂದಿಯಾದರೂ, ಮತ್ತೆ ಹುಟ್ಟಿ ಬಂದು, ಈ ಜಗವನ್ನು ಹೀಗೆ ಅಟ್ಟಾಡಿಸುತ್ತಿರುವ ಕಾಮನಿಗೆ, ಶಿವನ ಅಷ್ಟು ಅಂಕೆಯೂ ಇರದಿದ್ದರೆ, ಇನ್ನೆಷ್ಟೆಲ್ಲ ಆಟ ಆಡಿರುತ್ತಿದ್ದನೋ!

ಕಾಮದಹನದ ನಂತರ, ಪಾರ್ವತಿ-ಪರಶಿವರ ಪ್ರಣಯ ಪ್ರಸಂಗ ಸಫಲವಾಗಿ, ಅದು ಪಾರ್ವತಿ ಪರಿಣಯದಲ್ಲಿ ಪರ್ಯವಸಾನವಾದ ಕಥೆ ಎಲ್ಲರಿಗೂ ತಿಳಿದಿರುವುದೇ. ಅಲ್ಲಿಂದ ಮುಂದೆ ಕವಿ ಕಲ್ಪನೆಯಾಂದು ಇಲ್ಲಿ ಹೂವಾಗಿ ಅರಳಲಿದೆ......ಈ ಮದುವೆ ಹಿಮವಂತನ ಪತ್ನಿ, ಅಂದರೆ ಪಾರ್ವತಿಯ ತಾಯಿಗೇಕೋ ಅಷ್ಟು ಸಮಾಧಾನ ನೀಡಿದಂತಿಲ್ಲ. ಊರಿನ ಜನ ಅಳಿಯನ ಬಗೆಗೆ ಆಡುತ್ತಿರುವ ಗುಸುಗುಸು ಆಕೆಯ ಕಿವಿಗೆ ಬಿದ್ದಿದೆ. ಆದರೆ ಅವರ ಮಾತಿನ ಮೇಲೆ ಅವಳಿಗೆ ನಂಬಿಕೆ ಬರುತ್ತಿಲ್ಲ. ಯಾಕೆಂದರೆ, ಇದೇ ಜನ, ಮದುವೆಯ ದಿನ ಮೃಷ್ಟಾನ್ನ ಭೋಜನ ಸವಿದು ‘ಎಂಥಾ ಚೆಲುವಗೆ ಮಗಳ ಕೊಟ್ಟನು ಗಿರಿರಾಜನು ನೋಡಮ್ಮಯ್ಯಾ...’ ಎಂದು ಹಾಡಿ ಹೊಗಳಿದ್ದವರು. ಅವರಿವರನ್ನು ಕೇಳುವುದಕ್ಕಿಂತ ಮಗಳನ್ನೇ ಕೇಳಿದರೆ ಮೇಲಲ್ಲವೇ? ಅಳಿಯನ ಗುಣಾವಗುಣಗಳ ಬಗ್ಗೆ ಮಗಳಿಗಿಂತ ಮತ್ತಾರಿಗೆ ತಾನೇ ತಿಳಿದಿರುತ್ತದೆ? ತಾಯಿ ತನ್ನ ಮಗಳನ್ನು ಏಕಾಂತದಲ್ಲಿ ಕರೆದು ಪಿಸುದನಿಯಲ್ಲಿ ಕೇಳುತ್ತಿದ್ದಾಳೆ - ‘ಹೌದೇನೇ ಉಮಾ, ಹೌದೇನೇ?’ ಹೆಣ್ಣು ಹೃದಯದ ತಲ್ಲಣ ಹೆಂಗರುಳ ಕವಿ ಶಿವರುದ್ರಪ್ಪನವರಿಗಲ್ಲದೆ ಇನ್ನಾರಿಗೆ ತಿಳಿದೀತು? ಮಗಳು ಒಮ್ಮೆ ‘ಇಲ್ಲಮ್ಮ, ನೀನು ಕೇಳಿದ್ದೆಲ್ಲಾ ಸುಳ್ಳು’ ಅಂದುಬಿಡಲಿ, ಎಂದು ನೂರು ನಿರೀಕ್ಷೆಗಳನ್ನು ಹೊತ್ತು, ಆ ಹೆತ್ತ ಕರುಳು ಕೇಳುತ್ತಿರುವ ಪ್ರಶ್ನೆಗಳಾದರೂ ಅದಾವುವು?

ಮಸಣದ ಬೂದಿಯ ಮೈಗೆ ಬಳಿದು ಶಿವ
ಊರೂರನು ತಿರಿದುಂಬುವನಂತೆ?
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ?
ಹೌದೇನೇ? ಉಮಾ, ಹೌದೇನೇ?
ಜನರೆನ್ನುವುದಿದು ನಿಜವೇನೇ?

ಗಿರಿಜೆಯ ತಾಯಿ ತನ್ನ ಮಗಳ ಲೋಕ ವಿಲಕ್ಷಣ ಸಂಸಾರ ನೋಡಿ ಕೊರಗುವುದರಲ್ಲಿ ಅತಿಶಯೋಕ್ತಿ ಏನಿಲ್ಲ ಬಿಡಿ. ಎಲ್ಲಾ ತಾಯಂದಿರದೂ ಇದೇ ಪಾಡು. ಮಗಳು ಹೋದ ಮನೆಯಲ್ಲಿ ಸುಖವಾಗಿದ್ದಾಳೆಯೋ, ಇಲ್ಲವೋ ಎಂದು ಚಿಂತಿಸಿ, ಚಿಂತಿಸಿ ದು:ಖ ಪಡುವುದು ಅವರ ಹಣೆಬರಹ. ಇದು ಅಂದಿಗೇನೂ ಇಂದಿಗೂ ಸಹಜ, ನಿಜ! ಆದರೆ ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ, ಸುಖ-ದು:ಖಗಳನ್ನು, ಬೇವು-ಬೆಲ್ಲದಂತೆ ತಿಳಿದು, ಬದುಕನ್ನು ಸಮಚಿತ್ತದಿಂದ ನೋಡಬಲ್ಲ ನಮ್ಮ ಜನಪದರ ಅಭಿಪ್ರಾಯವೂ ಹೀಗೆಯೇ ಇದೆಯಲ್ಲಾ? ಮಳೆ ಬರದ, ಬೆಳೆ ಇರದ, ತಮ್ಮ ದುಗುಡ, ದುಮ್ಮಾನಗಳೇ ಬೆಟ್ಟದಷ್ಟಿದ್ದರೂ, ಅವರಿಗೆ, ಅದಕ್ಕಿಂತ ಜಗನ್ಮಾತೆಯ ಕಷ್ಟವೇ ದೊಡ್ಡದಾಗಿ ಕಾಣುತ್ತಿದೆ! ಆಕೆಯ ದು:ಖಕ್ಕೆ ಅವರ ಮನ ಮಿಡಿಯುತ್ತಿದೆ -

ಕೇಳಬೇಡ ಶಿವನೇಳಿಗೆ ಗೌರಿಯ ಗೋಳು ಗೊಳಿಸಿಬಿಟ್ಟ
ಹೇಳದೆ ಕೇಳದೆ ತನ್ನ ತಲೆಯಾಳಗೆ ಗಂಗೆಯ ತಂದಿಟ್ಟ
ಗೌರಿಯಾದರೂ ಎಂಥಾ ಚೆಲುವಿ ನೋಡು ಅವಳ ದೈವ ಕೆಟ್ಟ
ಅಂಥ ಇಂಥದಲ್ಲ ಹೆಣ್ಣಿನ ಜನುಮಕೆ ಸವತಿಯೆಂಬುವ ಪೆಟ್ಟ!

ಹೌದು! ಅದು ದೊಡ್ಡ ಪೆಟ್ಟೇ. ಹೆಣ್ಣು ಎಷ್ಟಾದರೂ ಕಷ್ಟ-ಕಾರ್ಪಣ್ಯಗಳನ್ನು ಉಸಿರೆತ್ತದೆ ಸಹಿಸಬಲ್ಲಳು. ಗಂಜಿಯ ಕುಡಿದಾದರೂ ಗಂಡನ ಮನೆಯಲ್ಲಿ ನೆಮ್ಮದಿಯಿಂದ ಇರಬಲ್ಲಳು. ಧನ, ಕನಕ, ನಗ, ನಾಣ್ಯಗಳನ್ನು ಇತರರೊಡನೆ ಹಂಚಿಕೊಂಡು ಸುಖಿಸಬಲ್ಲಳು. ಆದರೆ ತನ್ನ ಪ್ರಾಣಕ್ಕೆ ಪ್ರಾಣವಾದ ಇನಿಯನನ್ನೇ ಇನ್ನೊಂದು ಹೆಣ್ಣಿನೊಡನೆ ಹಂಚಿಕೊಳ್ಳುವುದೆಂದರೆ? ಅದು ಆಗುವ, ಹೋಗುವ ಮಾತೇ? ಅವಳ ಹೂವಿನಂತಹ ಹೃದಯವನ್ನು ಹಿಸುಕಿ ಹಾಕಿಬಿಡುವ ಉರುಳು - ಅದು ಸವತಿಯ ನೆರಳು! ಹೆಣ್ಣಿನ ಬಾಳನ್ನು ಕಣ್ಣೀರಾಗಿಸುವ ಇಂತದೊಂದು ದುರ್ಬುದ್ಧಿ ಮಾತ್ರ ಯಾವೊಬ್ಬ ಪುರುಷನಲ್ಲೂ ಇರಬಾರದು, ಬರಲೇಬಾರದು!

ಜನಪದರ ಅಭಿಪ್ರಾಯ ಕೇಳಿದಿರಲ್ಲ, ಒಪ್ಪಿದಿರಾ? ಈಗ ಇಲ್ಲೊಂದು ಕವನವಿದೆ ನೋಡಿ. ಹೆಣ್ಣು ನೋವು ಹೆಣ್ಣು ಅರಿಯಬಲ್ಲಳು ತಾನೇ? ಕವಯಿತ್ರಿ ವೈದೇಹಿಯವರು, ಗೌರಿಯ ಮನದ ಮಾತುಗಳನ್ನು ತಮ್ಮ ‘ಶಿವನ ಮೀಸುವ ಹಾಡು’’ ಕವನದಲ್ಲಿ ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಇಲ್ಲಿ ತ್ರಿಲೋಕ ಸಂಚರಿಸಿ, ದಣಿದು ಬಂದ ಶಿವನನ್ನು ಗೌರಿ ‘ಮುಗಿಯಿತೇ ಬೇಟೆ?’ ಎಂದು ವ್ಯಂಗ್ಯವಾಗಿ ಸ್ವಾಗತಿಸಿ, ನಗುವ ನಟರಾಜನನ್ನು ಸ್ನಾನಕ್ಕೆ ಕರೆದೊಯ್ಯುತ್ತಿದ್ದಾಳೆ, ತನ್ನ ಕಂಬನಿ ಬೆರೆತ ಬಿಸಿಬಿಸಿ ನೀರನ್ನು ಶಿವನ ತಲೆಗೆರೆಯುತ್ತಿದ್ದಾಳೆ -

ಇದೋ ಈ ತಂಬಿಗೆ ನೀರು
ಗಂಗೆಯವತಾರಕ್ಕೆ
ಇದು ಇಗೋ ಆ ಮಣಿಕರ್ಣಿಕೆಗೆ
ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು
ಕಡೆಯದಿಗೋ ನನ್ನ ಅನುದಿನದ ಬಡ ಕನಲು!

ಪತ್ನಿ ಮಾಡುವ ಆರೋಪಗಳನ್ನು ಒಪ್ಪದ ಶಿವ ‘ನನ್ನ ಏನೆಂದುಕೊಂಡೆ? ನಿನ್ನ ಬಿಟ್ಟರೆ ನಾ ಶುದ್ಧ ಬೈರಾಗಿ’ ಎಂದು -ಭೂಲೋಕದ ಗಂಡಂದಿರಂತೆಯೇ -ಒಂದೇ ಮಾತಿನಲ್ಲಿ ಅದನ್ನು ತಳ್ಳಿಹಾಕಿ ಬಿಡುತ್ತಾನೆ. ಗೌರಿ ಕೂಡ ಕಲಹಕ್ಕೆ ಸಿದ್ಧಳಾಗಿಯೇ ಇದ್ದಂತೆ ಕೊಡುವ ಚಾಟಿಯೇಟಿನಂತಹ ಉತ್ತರವಿದು - ‘ಶಿವನೇ, ಈ ಮಾತಿಗೆ ನಾನೆಷ್ಟನೆಯ ನಾರಿ?’ ಗಂಡು ದಬ್ಬಾಳಿಕೆಯ ವಿರುದ್ಧ ಹೆಣ್ಣೊಬ್ಬಳ ಪ್ರತಿಭಟನೆಯ ದನಿಯನ್ನು ಸಂಕೇತಿಸುವ ಈ ಕವನದಲ್ಲಿ, ಕೊನೆಗೂ ಮನಸ್ಸನ್ನು ಗಾಢವಾಗಿ ತಟ್ಟುವುದು - ‘ಶಿವನಿದ್ದೂ ಶಿವನಿಲ್ಲದ ಚೋದ್ಯಗಳೆಲ್ಲ ಹೊಸದೇನು ಶಿವಕಾಮಿಗೆ?’ ಎಂಬ ವಿಷಾದವೊಂದೇ.

ಇದೇನಿದು? ಶಿವರಾತ್ರಿಯನ್ನು ಮುಂದಿಟ್ಟುಕೊಂಡು, ಶಿವನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದರೆ ಅವನು ಮುನಿಯುವುದಿಲ್ಲವೇ? ಅವನು ಕೋಪಗೊಂಡರೇನು ಗತಿ? ಹರ ಕೊಲ್ಲಲ್‌ ಪರ ಕಾಯ್ವನೇ? ಎಂದು ದಿಗಿಲುಗೊಂಡಿರಾ? ಖಂಡಿತವಾಗಿಯೂ ಇಲ್ಲ. ನಮ್ಮ ದೇವರುಗಳ ಹಿರಿಮೆಯೇ ಅದು. ಅವರು ಬರೀ ಹೊಗಳಿಕೆಯನ್ನು ಮಾತ್ರ ಬಯಸುವವರಲ್ಲ. ಅದರಲ್ಲೂ ನಮ್ಮ ಶಿವ ಪರಮ ಕರುಳಾಳು. ’ಕಾರುಣ್ಯ ಮೂರುತಿಯೇ, ಕಂಗಳು ಮೂರುಳ್ಳ ದೊರೆಯೇ’’ ಎಂದು ಅವನನ್ನು ವರ್ಣಿಸಲಾಗಿದೆ. ಬಸವಣ್ಣನವರು ಹೇಳಿರುವಂತೆ ಅವನು ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ, ಭಕ್ತಿ ಪ್ರಿಯ! ಹಾಗಿದ್ದ ಮೇಲೆ, ಅವನು ಮುಖಸ್ತುತಿ ಪ್ರಿಯನಾಗಿರುವುದಂತೂ ಸಾಧ್ಯವೇ ಇಲ್ಲ.

ಒಂದು ವೇಳೆ, ನಮ್ಮ ದೇವಾನುದೇವತೆಗಳು ಲಘು ವಿನೋದವನ್ನು ಅರಿಯದೆ, ಮುನಿದು ಶಪಿಸುವಂತಹ ಅರಸಿಕರಾಗಿದ್ದರೆ, ನಮ್ಮ ದಾಸ ಸಾಹಿತ್ಯದಲ್ಲಿ ‘ನಿಂದಾಸ್ತುತಿ’ ಎಂಬ ಸುಂದರ ಪ್ರಕಾರವೊಂದು ಬೆಳೆದು ಬರುತ್ತಲೇ ಇರಲಿಲ್ಲ. ಇಲ್ಲಿಯೂ ಕೂಡ ನವನೀತದಂತಹ ನವವಿಧ ಭಕ್ತಿಯೇ ಇರುತ್ತದೆ, ಆದರೆ ಅದು ನಿಂದನೆಯ ರೂಪದಲ್ಲಿ. ‘ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ ಹೇ ಗೋಪೀಜನಾಜಾರನೆಂದರೆ ಸಾಲದೇ?’ ಎನ್ನುವ ನಿಂದಾಸ್ತುತಿಯಲ್ಲಿ ಕೃಷ್ಣನನ್ನು ದಾಸರು ಜಾರನೆಂದು ನಿಂದಿಸುತ್ತಿಲ್ಲ, ಬದಲಿಗೆ ಅರಿತೋ, ಅರಿಯದೆಯೋ, ಜಾವಕೆ ಮಾಡುವ ಸಾವಿರ ತಪ್ಪುಗಳನ್ನೆಲ್ಲ, ಪರಮಾತ್ಮನ ಪಾದ ಕಮಲಗಳಲ್ಲಿ ಅರ್ಪಿಸಿ, ಕೃತಾರ್ಥರಾಗುವ ವಿಭಿನ್ನ ಪರಿಯಿದು! ಜಗವನ್ನೇ ಆಡಿಸುವ ಜಗದೀಶನನ್ನು, ತಮ್ಮ ಸಮವಯಸ್ಕ ಗೆಳೆಯನಂತೆ ಭಾವಿಸಿ, ಅವನೊಡನೆ ವಿನೋದ, ವಿರಸ, ಕಲಹ, ಲೇವಡಿಗಳನ್ನು ಮಾಡುವ ಇಂತಹ ಭಕ್ತಿಗೀತೆಗಳು ಬಹು ಚಂದ, ಮನಸ್ಸಿಗೆ ಪರಮಾನಂದ!

ಶಿವ ಮನಸ್ಸಿಗೆ ಅಭಿಮಾನಿ ದೇವತೆ. ‘ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ, ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ’ ಎಂದು ಶಿವನನ್ನು ಸ್ತುತಿಸಲಾಗಿದೆ. ಇದು ಶಿವ ಕರುಣೆ, ಶಿವನೊಲುಮೆ ನಮ್ಮ ಬಾಳಿಗೆ ಅದೆಷ್ಟು ಅಗತ್ಯ ಎಂಬುದನ್ನು ಸಾರಿ ಹೇಳುತ್ತಿದೆ. ಹುಚ್ಚು ಕುದುರೆಯಂತೆ ಎತ್ತೆತ್ತಲೋ ಹರಿದಾಡುವ, ನಮ್ಮ ಮನಸ್ಸನ್ನು ‘ತೈಲಧಾರೆಯಂತೆ’ ಏಕತ್ರಗೊಳಿಸಿ, ಅದನ್ನು ಸನ್ಮಾರ್ಗದಲ್ಲಿ ತೊಡಗಿಸುವ, ಮಾರನ ಗೆದ್ದ ಈ ಮನೋಹರ ಮೂರ್ತಿಯ ಕುರಿತು ಬರೆದಷ್ಟೂ ನನಗೆ ಸಾಲದೆನಿಸುತ್ತಿದೆ. ಕೊನೆಯದಾಗಿ ನನಗೆ ಅತ್ಯಂತ ಪ್ರಿಯವಾದ, ಶಿವನನ್ನು ವರ್ಣಿಸುವ, ಶ್ರೀ ಜಗನ್ನಾಥ ದಾಸರ ಪ್ರಾರ್ಥನಾ ಶ್ಲೋಕದೊಂದಿಗೆ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ. ಈ ಪುಟ್ಟ ಪುಟ್ಟ ಸಾಲುಗಳ ಹಿಂದೆ ಅಡಗಿರುವ ಪರಮೇಶ್ವರನ ಅನಂತ ಮುಖಗಳು ಅದೆಷ್ಟು ಅದ್ಭುತ! ಆಕರ್ಷಕ!!

ವಾಮದೇವ ವಿರಿಂಚಿತನಯ ಉ।
ಮಾಮನೋಹರ ಉಗ್ರದೂರ್ಜಟ।
ಸಾಮಜಾಜಿನವಸನ ಭೂಷಣ ಸುಮನೋತ್ತಂಸ।।
ಕಾಮಹರ ಕೈಲಾಸ ಮಂದಿರ।
ಸೋಮ ಸೂರ್ಯಾನಳವಿಲೋಚನ।
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ।।

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X