ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಗೊರೆಯಾಂದ ತಂದಾ.....

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಉಡುಗೊರೆ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಪ್ರತಿಯಾಬ್ಬರು ಜೀವಮಾನದಲ್ಲಿ ಒಮ್ಮೆಯಾದರೂ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ಕೊಟ್ಟಿರುತ್ತಾರೆ, ಅಥವಾ ಪಡೆದೇ ಇರುತ್ತಾರೆ. ಉಡುಗೊರೆ ಎಂದರೆ ಅದೇನೂ ಬಹಳ ಬೆಲೆಬಾಳುವ ವಿದೇಶೀ ಕಾರೋ, ಭವ್ಯ ಬಂಗಲೆಯೋ ಆಗಬೇಕೆಂದೇನೂ ಇಲ್ಲ. ಅದು ಆಗಷ್ಟೇ ಗಿಡದಿಂದ ಬಿಡಿಸಿದ, ಅರಳಿ ನಗುವ ಒಂದು ಚೆಂಗುಲಾಬಿಯಾಗಿಬಹುದು, ಘಲಗುಟ್ಟುವ ಹಸಿರು ಗಾಜಿನಬಳೆಗಳಾಗಿರಬಹುದು, ಸುಗಂಧಭರಿತ ಬಾಟಲಿ, ಪುಟ್ಟ ಕರವಸ್ತ್ರ , ಟೈಪಿನ್ನು, ತಂಪು ಕನ್ನಡಕ, ಪಾರ್ಕರ್‌ ಪೆನ್ನು, ಕೈಗಡಿಯಾರ...ಏನೂ ಆಗಿರಬಹುದು. ಅದೊಂದು ಮನಸ್ಸಿನ ಬೆಚ್ಚನೆಯ ಭಾವನೆಗಳನ್ನು ಪ್ರತಿನಿಧಿಸುವ, ಪ್ರತಿಬಿಂಬಿಸುವ ಸುಂದರ ಸಂಕೇತ ಅಷ್ಟೇ. ಯಾರೊಬ್ಬರಿಗೂ ಅದರ ಬೆಲೆ ಮುಖ್ಯವೇ ಅಲ್ಲ. ಪ್ರತಿಯಾಂದನ್ನೂ ಲೆಕ್ಕದಲ್ಲಿ ಅಳೆಯುವ ನಾವು ಉಡುಗೊರೆಗಳ ಬೆಲೆಯನ್ನು ಕೇಳುವ ಸಾಹಸಕ್ಕೆ ಮಾತ್ರ ಹೋಗುವುದಿಲ್ಲ!

ಕೆಲವು ಮದುವೆಯ ಮಮತೆಯ ಕರೆಯೋಲೆಗಳ ಮೇಲೆ ‘ಆಶೀರ್ವಾದವೇ ಉಡುಗೊರೆ’ ಎಂದು ಮುದ್ದಾದ ಅಕ್ಷರಗಳಲ್ಲಿ ಮುದ್ರಿಸಿರುವುದುಂಟು. ಆದರೆ ಇದನ್ನು ಪೂರ್ತಿಯಾಗಿ ನಂಬುವಂತಿಲ್ಲ. ಏಕೆಂದರೆ ‘ಉಡುಗೊರೆ ನಿಷೇಧಿಸಲಾಗಿದೆ’ ಎಂಬ ಆ ಸಂದೇಶವನ್ನು ನಿಜವೆಂದು ನಂಬಿಕೊಂಡು, ಬರಿಗೈಯಲ್ಲಿ ಅಂತಹ ಮದುವೆಗಳಿಗೆ ಹೋದರೆ, ನಮ್ಮನ್ನು ಹೊರತುಪಡಿಸಿ ಉಳಿದವರೆಲ್ಲರ ಬಳಿಯಲ್ಲಿ ಮೆರೆಯುತ್ತಿರುವ ಭಾರೀ ಗಾತ್ರದ ಉಡುಗೊರೆ ಪೊಟ್ಟಣಗಳು ನಮ್ಮನ್ನು ಬೇಸ್ತು ಬೀಳಿಸುವುದಂತೂ ಖಂಡಿತ. ಉಡುಗೊರೆಗಳು ನಮ್ಮ ಬದುಕಿನಲ್ಲಿ ಅದೆಷ್ಟು ಹಾಸುಹೊಕ್ಕಾಗಿ ಬೆರೆತು ಹೋಗಿದೆಯೆಂದರೆ, ಮದುವೆ, ಮುಂಜಿಯಂತಹ ಶುಭಕಾರ್ಯಗಳಲ್ಲಿ, ಸಂಬಂಧಿಸಿದವರಿಗೆ - ಅವರು ಬೇಡವೆಂದರೂ - ಉಡುಗೊರೆ ಕೊಡದ ಹೊರತು ನಮ್ಮ ಮನಸ್ಸಿಗೆ ಕಿಂಚಿತ್ತೂ ಸಮಾಧಾನವೆನಿಸದು.

ಭಾರತೀಯರಲ್ಲಂತೂ ಉಡುಗೊರೆ ಕೊಡುವ, ತೆಗೆದುಕೊಳ್ಳುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಗುರು ಹಿರಿಯರನ್ನು, ಆತ್ಮೀಯರನ್ನು, ಮಕ್ಕಳನ್ನು, ರೋಗಿಗಳನ್ನು ನೋಡಲು ಹೋಗುವಾಗ, ಏನಾದರೂ ಕೊಡುಗೆಯನ್ನು ತೆಗೆದುಕೊಂಡು ಹೋಗಲೇಬೇಕೆಂಬುದು ನಮ್ಮ ಒಂದು ವಾಡಿಕೆ. ತನ್ನ ಬಾಲ್ಯ ಸಖನಾದ ಶ್ರೀಕೃಷ್ಣನ ಮನೆಗೆ ಹೋಗುವಾಗ, ಮನೆಯೆಲ್ಲಾ ಜಾಲಾಡಿ, ಕೊನೆಗೆ ಸಿಕ್ಕಿದ ಹಿಡಿ ಅವಲಕ್ಕಿಯನ್ನೇ ದೇಹವನ್ನು ಹಿಡಿಯಾಗಿಸಿ ತೆಗೆದುಕೊಂಡು ಹೋದ ಕಡುಬಡವ ಸುಧಾಮನ ಕಥೆಯೇ ಇದಕ್ಕೊಂದು ನಿದರ್ಶನ! ಶುಭಕಾರ್ಯವನ್ನು ಪ್ರಾರಂಭಿಸುವ ಮೊದಲು, ಕುಟುಂಬದ ಹಿರಿಯರ ಪಾದಪೂಜೆ ಮಾಡಿ, ಸೂಕ್ತ ಉಡುಗೊರೆಗಳಿಂದ ಅವರನ್ನು ಮೊದಲು ಸಂತೋಷಪಡಿಸುವ ರೂಢಿಯೂ ನಮ್ಮಲ್ಲಿದೆ.

ಯಾರಿಗೇ ಆಗಲಿ, ಉಡುಗೊರೆಯನ್ನು ಕೊಡುವಾಗ, ಅದನ್ನು ಎರಡೂ ಕೈಗಳಲ್ಲಿ ಹಿಡಿದು ಹೃತ್ಪೂರ್ವಕವಾಗಿ ಒಪ್ಪಿಸುವ ನಮ್ಮ ವಿಧಾನವೇ ಬಲು ಸೊಗಸಿನದು. ಇಲ್ಲಿ ಕೊಡುವ, ತೆಗೆದುಕೊಳ್ಳುತ್ತಿರುವ ಕ್ರಿಯೆಗಳು ಮಾತ್ರ ಕಣ್ಣಿಗೆ ಕಾಣಿಸಿದರೆ, ಕೊಡುವ ಮನಸ್ಸಿನ ಹಿಂದಿರುವ ಗೌರವಾದರಗಳು ಅಗೋಚರವಾಗಿರುತ್ತವೆ. ಸುಸಂಸ್ಕೃತ ಭಾರತೀಯರಾದ ನಮಗೆ ಅತಿಥಿ ಕೊಟ್ಟ ಉಡುಗೊರೆಯನ್ನು ಅವನ ಮುಂದೆಯೇ ತೆರೆದು ನೋಡುವುದು ಅಷ್ಟು ಮರ್ಯಾದೆ ಎನಿಸದು. ಅದು ನಮ್ಮ ಸಂಯಮಹೀನತೆ ಮತ್ತು ದುರಾಸೆಯನ್ನು ವ್ಯಕ್ತಪಡಿಸುವುದೇನೋ ಎಂಬ ಅಳುಕು ನಮ್ಮದು. ಆದರೆ ಕೆಲವರಿಗೆ ಅತಿಥಿಯ ಅನುಮತಿ ಪಡೆದು, ಅವರ ಮುಂದೆಯೇ ಉಡುಗೊರೆಯ ಪೊಟ್ಟಣವನ್ನು ಪರಪರ ಹರಿದು ಒಳಗೇನಿದೆ ಎಂದು ತೆರೆದು ನೋಡಿ, ಅದನ್ನು ಮುಕ್ತ ಮನಸ್ಸಿನಿಂದ ಪ್ರಶಂಸಿಸುವುದು ಆತ್ಮೀಯತೆಯ ದ್ಯೋತಕ ಅನಿಸುತ್ತದಂತೆ. ಹೌದು, ಅದೂ ನಿಜವೇ! ಅತಿಥಿ ನಮಗಾಗಿ ತಂದುಕೊಟ್ಟ ವಿಶ್ವಾಸದ ಉಡುಗೊರೆಯನ್ನು ನಾವು ನೋಡಿದೆವು, ಇಷ್ಟಪಟ್ಟೆವು ಎಂದು ಅವರು ಇರುವಾಗಲೇ ತಿಳಿಸಿ ಬಿಡುವುದರಲ್ಲೂ ತಪ್ಪೇನೂ ಕಾಣಿಸುತ್ತಿಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಕೇಳುವುದೇ ಬೇಡ, ಅವರು ಎಲ್ಲಾ ಶಿಷ್ಟಾಚಾರಗಳನ್ನು ಗಾಳಿಗೆ ತೂರುವುದೇ ಸೈ.

ಉದ್ಯಮಿಗಳು ತಮ್ಮ ಶಾಖೆಗಳನ್ನು ಇತರ ಜಾಗಗಳಲ್ಲಿ ವಿಸ್ತರಿಸಲು, ಹೊಸ ಉತ್ಪನ್ನಗಳನ್ನು ಪ್ರಚಾರ ಮಾಡಲು, ಗ್ರಾಹಕರ ಒಲುಮೆಯನ್ನು ಸಂಪಾದಿಸಲು ಉಡುಗೊರೆಗಳನ್ನು ನೀಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ವಹಿಸಿಕೊಟ್ಟ ಕೆಲಸವನ್ನು ಸಕಾಲದಲ್ಲಿ ಮುಗಿಸಿ, ಗುರಿ ಸಾಧಿಸಿದ ಕೆಲಸಗಾರರಿಗೆ ಕೊಡುವ ಉಡುಗೊರೆಗಳು, ಅವರ ಕಾರ್ಯವೈಖರಿಯನ್ನು ಕುರಿತು ಮೆಚ್ಚಿಗೆ ವ್ಯಕ್ತಪಡಿಸುವ, ಪ್ರೋತ್ಸಾಹಿಸುವ ಒಂದು ಜನಪ್ರಿಯ ಪದ್ಧತಿ. ಉಡುಗೊರೆಗಳು ಹೀಗೆ ವಿಶ್ವವ್ಯಾಪಿಯಾಗಿದ್ದರೂ, ಉಡುಗೊರೆಗಳಿಗೂ ಅವುಗಳದೇ ಆದ ನೀತಿ-ನಿಯಮಗಳಿವೆ. ದೇಶ ಕಾಲೋಚಿತ ವಿಧಿ-ವಿಧಾನಗಳಿವೆ.

ಜಪಾನೀಯರಲ್ಲಿ ಉಡುಗೊರೆಗಳಿಗೆ ಬಹಳ ಮಹತ್ವ. ಒಳಗಿರುವ ವಸ್ತು ಅದೇನೇ ಇದ್ದರೂ, ಅದನ್ನು ಸುತ್ತಿದ ಮೇಲಿನ ಹೊದಿಕೆ ಮಾತ್ರ ಬಹಳ ಆಕರ್ಷಕವಾಗಿರಬೇಕೆಂದು ಅವರು ಬಯಸುತ್ತಾರಂತೆ. ಅವರ ಎದುರಿನಲ್ಲಿ ಉಡುಗೊರೆಗಳನ್ನು ಹೊರಗೆ ತೆಗೆಯುವಾಗ ಹೊದಿಕೆಯನ್ನು ನೋಯಿಸದಂತೆ ಬಿಡಿಸುವ ದಿವ್ಯ ಎಚ್ಚರವಿರಬೇಕು. ಚೀನೀಯರು ಕಾಲವನ್ನು ‘ಸಾವು’ ಎಂದು ಭಾವಿಸುವುದರಿಂದ, ಚೀನೀ ಗೆಳೆಯನಿಗೆ ಗಡಿಯಾರದ ಉಡುಗೊರೆ ಕೊಟ್ಟರೆ, ಅವನೊಂದಿಗಿನ ನಿಮ್ಮ ಸ್ನೇಹವೂ ಕಾಲವಾಗುವ ಸಾಧ್ಯತೆ ಇದೆ. ಮಲೇಶಿಯನ್ನರಿಗೆ ಮೊದಲನೆಯ ಭೇಟಿಯಲ್ಲೇ ಉಡುಗೊರೆ ಕೊಟ್ಟರೆ, ಅವರಿಗೆ ನಿಮ್ಮ ಉದ್ದೇಶದ ಮೇಲೆಯೇ ಅನುಮಾನ ಬರಬಹುದು. ಆದ್ದರಿಂದ ಅವರಿಗೆ ಉಡುಗೊರೆ ಕೊಡಲೇಬೇಕೆಂಬ ಬಯಕೆ ನಿಮಗಿದ್ದರೆ ಸ್ವಲ್ಪ ಆತ್ಮೀಯತೆ ಮೂಡುವವರೆಗೆ ಕಾಯದೆ ವಿಧಿಯಿಲ್ಲ. ರಶಿಯನ್ನರ ಮನೆಗೆ ಹೂಗುಚ್ಛವನ್ನು ಒಯ್ಯುವಾಗ, ಅದರಲ್ಲಿರುವ ಹೂವುಗಳು ಬೆಸ ಸಂಖ್ಯೆಯಲ್ಲಿದೆಯೇ ಎಂದು ಎರಡೆರಡು ಬಾರಿ ಎಣಿಸಿಕೊಳ್ಳುವುದು ಒಳಿತು. ಸಮ ಸಂಖ್ಯೆಯ ಹೂವುಗಳೇನಿದ್ದರೂ ಅಲ್ಲಿ ಶೋಕದ ಮನೆಗೆ ಮಾತ್ರ ಮೀಸಲು. ತೈವಾನಿಗರಿಗೆ ಕೊಡುವ ಉಡುಗೊರೆ, ತೈವಾನ್‌ ದೇಶದಿಂದ ಹೊರಗೆ ತಯಾರಾಗಿದ್ದರೆ ಒಳ್ಳೆಯದು. ಉಡುಗೊರೆಗಳನ್ನು ಕೊಡುವಾಗ ಕಪ್ಪು- ಬಿಳುಪು ಬಣ್ಣ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಅಶುಭವೆಂದೇ ಪರಿಗಣಿಸಲಾಗುತ್ತದೆ. ಆದರೆ ಇಟಲಿಯಲ್ಲಿ ಮಾತ್ರ ನೇರಳೆ ಬಣ್ಣ ವರ್ಜ್ಯ. ಕೊರಿಯನ್ನರಿಗೆ ನಾಲ್ಕು ಸಂಖ್ಯೆಗೆ ಸಂಬಂಧಪಡುವ ಏನೇ ಕೊಟ್ಟರೂ ಅದು ಅಪಶಕುನವಂತೆ. ನಾಲ್ಕು ಚಕ್ರಗಳ ಕಾರನ್ನು ಉಡುಗೊರೆಯಾಗಿ ಕೊಟ್ಟು ಅವರ ಕೋಪಕ್ಕೆ ಗುರಿಯಾಗುವುದಕ್ಕಿಂತ, ಎರಡೇ ಗಾಲಿಗಳಿರುವ ಸೈಕಲ್‌ ಕೊಟ್ಟು ಅವರನ್ನು ಮೆಚ್ಚಿಸುವುದು ಎರಡು ರೀತಿಯಿಂದ ಉತ್ತಮ ಎಂಬ ಯೋಚನೆ ನಿಮಗೂ ಬಂದಿತು ತಾನೇ?

A Hug is the Perfect Gift.....

ಉಡುಗೊರೆಗಳನ್ನು ಯಾರು ಯಾರಿಗಾದರೂ ಧಾರಾಳವಾಗಿ ಕೊಡಬಹುದು. ತಂದೆ ಮಗಳಿಗೆ, ತಾಯಿ ಮಗನಿಗೆ, ಅಣ್ಣ ತಂಗಿಗೆ, ಗೆಳೆಯ ಗೆಳೆಯನಿಗೆ....ಹೀಗೆ. ಆದರೆ ಪ್ರೇಮಿಗಳ ಬದುಕಿನಲ್ಲಿ ಈ ಉಡುಗೊರೆಗಳು ವಹಿಸುವ ಪಾತ್ರ ಸ್ವಲ್ಪ ಮುಖ್ಯ. ಹಾಗಾಗಿ ಅವನಿಂದ/ಅವಳಿಂದ ಪಡೆಯುವ ‘ಒಲವಿನ ಉಡುಗೊರೆ’ಗೆ ಎಲ್ಲಿಲ್ಲದ ಪ್ರಾಮುಖ್ಯ! ಯಾಕೆಂದರೆ, ತುಟಿ ಮೇಲೆ ಬರಲು ಆಳುಕಿ, ಮನದಲ್ಲೇ ಉಳಿದ ಮುನ್ನೂರ ಒಂದು ಮಾತುಗಳನ್ನು ಒಂದು ಸಣ್ಣ ‘ಪ್ರೇಮದ ಕಾಣಿಕೆ’ ಸುಲಭವಾಗಿ ತಿಳಿಸಿಬಿಡಬಲ್ಲದು. ಅದು ಪ್ರೇಮಿಗಳ ಪಾಲಿಗೆ ಬರೀ ವಿಸ್ಮಯಗಳೇ ತುಂಬಿದ ನಿಗೂಢ ಲಕೋಟೆ. ಅದರಲ್ಲಿ ಏನೆಲ್ಲಾ ಇದೆಯೋ ಬಲ್ಲವರಾರು? ಮೆಚ್ಚಿದ ಹುಡುಗನಿಗೆ ಕೊಡುವ ಕಾಣಿಕೆಯಲ್ಲಿ ಹುಡುಗಿಯ ಹೃದಯವೇ ಅಡಗಿದ್ದರೂ ಅಡಗಿರಬಹುದು. ಅದನ್ನು ಪಡೆದ ಮತ್ತೊಂದು ಭಾಗ್ಯಶಾಲಿ ಹೃದಯ ‘ನೀ ತಂದ ಕಾಣಿಕೆ, ಅನುರಾಗ ಮಾಲಿಕೆ, ಅದಕ್ಕಿಲ್ಲ ಹೋಲಿಕೆ’ ಎಂದು ಹಿಗ್ಗಿನಲ್ಲಿ ತೇಲಿ....ತೇಲಿ ಹೋಗಲೂಬಹುದು!

ಉಡುಗೊರೆಗಳನ್ನು ಕೊಡುವುದು ನಿರ್ಮಲ ಸ್ನೇಹದ ಸಂಕೇತವಾದರೂ, ಕೆಲವು ಸಲ ಸ್ನೇಹದ ಕೊಂಡಿಯೇ ಕಳಚಿಹೋಗುವ ಸಾಧ್ಯತೆಗಳೂ ಇಲ್ಲದಿಲ್ಲ. ಅದು ಹೇಗೆ ಅನ್ನುತ್ತಿರಾ? ಇದಕ್ಕೆ ನನ್ನದೇ ಒಂದು ವೈಯಕ್ತಿಕ ಅನುಭವದ ಆಧಾರವಿದೆ. ಭಾರತದಲ್ಲಿರುವ ನಮ್ಮ ಗೆಳೆಯರೊಬ್ಬರಿಗೆ, ನಾವು ಇಲ್ಲಿಂದ ಹೋಗುವವರ ಮೂಲಕ ಸ್ನೇಹಪೂರ್ವಕವಾಗಿ ಒಂದು ಉಡುಗೊರೆಯನ್ನು ಕಳಿಸಿಕೊಟ್ಟಿದ್ದೆವು. ಆ ಉಡುಗೊರೆಯನ್ನು ಕೊಳ್ಳುವಾಗ, ಅವರಿಗೆ ಇಷ್ಟವಾಗುವಂತಹ, ಮುಜುಗರ ಉಂಟುಮಾಡುವಷ್ಟು ದುಬಾರಿಯಲ್ಲದ, ಉಪಯುಕ್ತವಾದ ಉಡುಗೊರೆಯನ್ನೇ ಕಳಿಸಿದ್ದೇವೆಂಬುದು ನನ್ನ ಊಹೆ. ಅದು ಸರಿಯಿಲ್ಲದೆಯೂ ಇರಬಹುದು. ಏಕೆಂದರೆ, ಅವರಿಗೆ ಆ ನಲುಮೆಯ ಉಡುಗೊರೆಯ ಜೊತೆಗೆ, ನಮ್ಮ ಹೃದಯದ ಸದ್ಭಾವನೆಗಳ ಬದಲಿಗೆ ಮತ್ತಾವ ಅಹಿತಕರ ಸಂದೇಶ ರವಾನೆಯಾಯಿತೋ ಗೊತ್ತಿಲ್ಲ , ಅವರು ಅನಂತರ ಕಾರಣವನ್ನೂ ಹೇಳದೆ ನಮ್ಮಿಂದ ದೂರವಾಗಿಬಿಟ್ಟರು! ಈ ನೋವಿನ ಘಟನೆಯ ನಂತರ ನಾವು ಉಡುಗೊರೆಗಳನ್ನು ಆರಿಸುವಾಗ ಬಹಳ ಜಾಗರೂಕರಾಗಿಬಿಟ್ಟಿದ್ದೇವೆ. ಉಡುಗೊರೆ ಕೊಟ್ಟು ಇರುವ ಸ್ನೇಹ ಕಳೆದುಕೊಳ್ಳುವುದಕ್ಕಿಂತ, ಅಂತಹ ಉಡುಗೊರೆ ಕೊಡದಿರುವುದೇ ಮೇಲು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇವೆ.

ಒಂದು ಉದಾತ್ತ ಉದ್ದೇಶದಿಂದ ಆರಂಭವಾಗಿರಬಹುದಾದ ಈ ಉಡುಗೊರೆಗಳನ್ನು ಕೊಡು/ಕೊಳ್ಳುವ ಆಚರಣೆ, ಬಹಳಷ್ಟು ಬಾರಿ ಪೊಳ್ಳು ಪ್ರತಿಷ್ಟೆಗಳನ್ನು ಮೆರೆಸುವ, ತಮ್ಮಲ್ಲಿರುವ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಸಾಧನವಾಗಿ ಬಳಕೆಯಾಗುತ್ತಿರುವುದನ್ನೂ ಅಲ್ಲಗಳೆಯುವ ಹಾಗಿಲ್ಲ. ಮದುವೆ ಮನೆಗಳಲ್ಲಂತೂ ಬೀಗರು-ಬೀಗರ ನಡುವಿನ ವಿರಸಕ್ಕೆ ಈ ಉಡುಗೊರೆಗಳೇ ನಾಂದಿ ಹಾಡುವುದಿದೆ. ಈಗೀಗ ತಮಗೆಂತಹ ಉಡುಗೊರೆ ಬೇಕೆಂಬುದನ್ನು ಮೊದಲೇ ನೋಂದಾಯಿಸಿಕೊಳ್ಳುವ ಅನುಕೂಲಗಳು ಎಲ್ಲಾ ಕಡೆ ಜಾರಿಗೆ ಬರುತ್ತಿವೆ. ಇವು ಅನಿರೀಕ್ಷಿತ ಉಡುಗೊರೆಗಳು ತರುವ ಸಂತಸವನ್ನೇ ಕಸಿದುಕೊಳ್ಳುತ್ತಿವೆ. ಇದನ್ನು, ತಮಗೆ ಹುಟ್ಟಲಿರುವ ಮಗು ಗಂಡೋ, ಹೆಣ್ಣೋ ಎಂದು ಸ್ಕ್ಯಾನಿಂಗ್‌ ಮೂಲಕ ಮೊದಲೇ ತಿಳಿದುಕೊಂಡು ಬಿಟ್ಟಿರುವ ದಂಪತಿಗಳ ಕುತೂಹಲರಹಿತ ಮನಸ್ಥಿತಿಗೆ ಹೋಲಿಸಬಹುದೇನೋ.

ಈ ಉಡುಗೊರೆಗಳ ಮಾತೆಲ್ಲ ಇರಲಿ, ನಮಗೀಗ ಲಭ್ಯವಾಗಿರುವ ಈ ಬದುಕು ತಾನೇ ಇನ್ನೇನು? ಪಶು, ಪಕ್ಷಿ, ಹಾವು, ಹಲ್ಲಿ, ಕ್ರಿಮಿ, ಕೀಟ.... ಏನು ಬೇಕಾದರೂ ಆಗಿಬಿಡಬಹುದಾಗಿದ್ದ ಅನಂತ ಸಾಧ್ಯತೆಗಳಿದ್ದ ನಮಗೆ ಈ ಮಾನವ ಜನ್ಮವೇ ದೊರಕಿರುವುದು ನಮಗೆ ಸಿಕ್ಕಿರುವ ‘ಅಮೂಲ್ಯ ಉಡುಗೊರೆ’ಯಲ್ಲದೆ ಬೇರೇನು? ಮತ್ತೆ ಮೇಲೆರಗಬಹುದಾದ ಸುನಾಮಿಯ ಭಯ, ಭೂಕಂಪದ ನಡುಕ, ಭಯೋತ್ಪಾದಕರ ಬೆದರಿಕೆ..... ಕ್ಷಣ ಕ್ಷಣದ ಆತಂಕದ ನಡುವೆಯೇ ಜೀವಿಸುತ್ತಿರುವ ನಮ್ಮನ್ನು, ತನ್ನ ನಿತ್ಯ ನೂತನ ಚೆಲುವಿನಿಂದ ಸೆಳೆಯುತ್ತಾ, ಮತ್ತೊಂದು ಹೊಸದಿನಕ್ಕೆ ನಮ್ಮನ್ನು ಅಣಿಗೊಳಿಸುತ್ತಿರುವ ಈ ಸತ್ಯ ಸುಂದರ ಬದುಕೇ ಆ ದೇವರು ನಮಗಿತ್ತಿರುವ ‘ಕರುಣೆಯ ಉಡುಗೊರೆ’ ಯಲ್ಲದೆ ಮತ್ತೇನು? ಇಂತಹದೊಂದು ಅಪರೂಪದ ಉಡುಗೊರೆ ನೀಡಿರುವ ಅವನಿಗೆ ನಾವೇಕೋ ಈವರೆಗೆ ತಿಳಿಸಿಯೇ ಇಲ್ಲವಲ್ಲ ?- ‘ಧನ್ಯವಾದ’!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X