ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಮರೆತಿರುವ ಉಳಿತಾಯದ ಮಹಾಮಂತ್ರ!

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ಜೀವನದಲ್ಲಿ ಆಗಾಗ ಎಡರುತೊಡರುಗಳು ಬರುವುದು ಸಾಮಾನ್ಯ. ಬಾಳಿನದೋಣಿ ಇಂತಹ ಅನಿರೀಕ್ಷಿತ ಅಲೆಗಳಿಗೆ ಸಿಕ್ಕು ಹೊಯ್ದಾಡುವುದು ಸಹಜ. ಇದಕ್ಕೆ ಯಾರೊಬ್ಬರ ಬದುಕೂ ಕೂಡ ಹೊರತಲ್ಲ. ಆದರೆ ಕೆಲವು ಜನರ ಜೀವನದಲ್ಲಿ ಇಂತಹ ಏರಿಳಿತಗಳು ಸ್ವಲ್ಪ ಅಧಿಕ. ನಾವು ಹಾಗೇ ನಮ್ಮ ಸುತ್ತಮುತ್ತಲಿನ ಜನರ ಜೀವನ ವಿಧಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಇದಕ್ಕೆ ಕಾರಣಗಳನ್ನು ಕಂಡುಹಿಡಿಯುವುದು ಕಷ್ಟವೇನಲ್ಲ. ಅತಿ ವೈಭವಯುತ ಬದುಕು ನಡೆಸುತ್ತಿದ್ದವರು, ಸಮಾಜದಲ್ಲಿ ಆಗರ್ಭ ಶ್ರೀಮಂತರೆನಿಸಿಕೊಂಡವರು, ಇದ್ದಕ್ಕಿದ್ದಂತೆ ಒಂದು ದುರ್ದಿನ ನಿಲ್ಲಲು ನೆಲೆಯೂ ಇಲ್ಲದಂತಹ ಕಂಗಾಲು ಸ್ಥಿತಿಯಲ್ಲಿ ಬೀದಿಗೆ ಬಂದು ನಿಂತುಬಿಟ್ಟಿರುತ್ತಾರೆ! ಅವರು ಸೂರೆಗೊಂಡಿದ್ದ ಅಷ್ಟೆಲ್ಲಾ ಸಂಪತ್ತು ಏನಾಗಿ ಹೋಯಿತು? ಎಲ್ಲಿ ಹೋಯಿತು? ಎಂದು ನಮ್ಮಂತಹ ಶ್ರೀಸಾಮಾನ್ಯರು ಬೆರಗಾಗುವುದಿದೆ. ಯಾಕೆ ಕೆಲವರಿಗೆ ಮಾತ್ರ ಹೀಗಾಗುತ್ತದೆ? ಮಧುರವಾಗಿ ನುಡಿಯುತ್ತಿದ್ದ ಅವರ ಜೀವನಸಂಗೀತದ ತಾಳ, ತಪ್ಪಿದ್ದಾದರೂ ಅದೆಲ್ಲಿ?

ಸಮಾಜದಲ್ಲಿ ಸಾಹುಕಾರರೆನಿಸಿಕೊಂಡ ಇವರ ಪಾಡೇ ಹೀಗಾದರೆ, ನಿಯಮಿತ ಆದಾಯವಿರುವ ಸಾಧಾರಣ ಜನರ ಪಾಡೇನು ಎಂದು ನಮಗೆ ಅನ್ನಿಸಬಹುದು. ಆದರೆ ಅವರು ತಮ್ಮ ತಮ್ಮ ಪರಿಮಿತಿಯಲ್ಲಿ ಚೆನ್ನಾಗಿಯೇ ಬದುಕುತ್ತಿರುತ್ತಾರೆ! ಆರಕ್ಕೇರದ ಮೂರಕ್ಕಿಳಿಯದ ಅತಿ ಸಾಮಾನ್ಯ ಜನರೂ ಕೂಡ, ತಮ್ಮ ಜೀವನವನ್ನು ಒಂದು ನೆಮ್ಮದಿಯ ಬಿಂದುವಿನಲ್ಲಿ ಸ್ಥಿರವಾಗಿ ನಿಲ್ಲಿಸಿಕೊಂಡಿರುತ್ತಾರೆ. ಅದು ಹೇಗೆ? ಇದು ನಿಜವಾಗಿಯೂ ಸೋಜಿಗವೆನಿಸುವ ಸಂಗತಿಯಾದರೂ, ಖಂಡಿತವಾಗಿಯೂ ಇಲ್ಲಿ ನಡೆದಿರುವುದು ಪವಾಡವೇನಲ್ಲ ! ಅವರ ಸುಸ್ಥಿತಿಗೆ, ಅವರ ಹಿತಮಿತವಾದ ಜೀವನವಿಧಾನವೊಂದೇ ಏಕೈಕ ಕಾರಣ.

Save Money, Save Time, Save Environmentನನಗೆ ಚೆನ್ನಾಗಿ ನೆನಪಿದೆ- ನಾವು ಚಿಕ್ಕವರಿದ್ದಾಗ ಹತ್ತಾರು ಕೋಣೆಗಳಿದ್ದ ನಮ್ಮ ಮನೆಯ ಯಾವುದಾದರೂ ಒಂದು ಕೋಣೆಯ ದೀಪ ಅನವಶ್ಯಕವಾಗಿ ಉರಿಯುತ್ತಿದ್ದರೆ, ಊಟದ ತಟ್ಟೆಗೆ ಅಗತ್ಯಕ್ಕಿಂತ ಹೆಚ್ಚಿಗೆ ಬಡಿಸಿಕೊಂಡು ಅದನ್ನು ತಿನ್ನದೆ ಚೆಲ್ಲಿದರೆ, ಮನೆಯ ಯಾವುದೇ ವಸ್ತುವನ್ನು ಅಚಾತುರ್ಯದಿಂದ ಹಾಳುಗೆಡವಿದರೆ, ಅದಕ್ಕೆ ಕಾರಣರಾದವರಿಗೆ ಹಿರಿಯರಿಂದ ಚೆನ್ನಾಗಿ ಛೀಮಾರಿಯಾಗುತ್ತಿತ್ತು. ಹಾಗೆಂದೊಡನೆ ಅವರು ಅತಿ ಕೃಪಣರಾಗಿದ್ದರೆಂದು ಅರ್ಥವಲ್ಲ. ಮನೆಯಲ್ಲಿ ವಾರಗಟ್ಟಲೆ ಬಂದು ಉಳಿದು ಹೋಗುತ್ತಿದ್ದ ಅತಿಥಿ, ಅಭ್ಯಾಗತರಿಗೆ ಆಗ ಲೆಕ್ಕವೇ ಇರಲಿಲ್ಲ. ಆ ಬಗ್ಗೆ ಯಾರೊಬ್ಬರದೂ ಆಕ್ಷೇಪ ಇರುತ್ತಿರಲಿಲ್ಲ. ಆದರೆ ಉಪಯುಕ್ತ ವಸ್ತುವೊಂದು, ನಿಷ್ಕಾರಣದಿಂದ, ವ್ಯರ್ಥವಾಗಿ ಹೋಗಬಾರದೆಂಬುದೇ ಅವರೆಲ್ಲರ ಘನ ಉದ್ದೇಶವಿದ್ದಂತಿತ್ತು. ನಮ್ಮ ತಂದೆ ಶರಟಿನ ಸಡಿಲವಾದ ಗುಂಡಿಗಳನ್ನು ತಮ್ಮ ಕೈಯಾರೆ ಹೊಲಿದುಕೊಳ್ಳುತ್ತಿದ್ದ ಚಿತ್ರ ಈಗಲೂ ನನ್ನ ಕಣ್ಣಲ್ಲಿದೆ. ಹೊಸ ಬಟ್ಟೆಗಳ ಟ್ಯಾಗ್‌ ಕೂಡ ಮಾಸದೆ ಮೂಲೆ ಸೇರುತ್ತಿರುವ ನಮ್ಮ ಮನೆಗಳಲ್ಲಿ, ಹೊಲಿಯಲು ಸೂಜಿ, ದಾರವಾದರೂ ಈಗ ಎಲ್ಲಿದೆ?

ಆದರೆ, ಈಗಲೂ ಇದೇ ರೀತಿಯ ಮನೋಭಾವವಿರುವ ಜನಗಳು ಇರಬಹುದಾದರೂ ಅಂತವರ ಸಂಖ್ಯೆ ಈಗ ಕಡಿಮೆಯಾಗಿದೆ. ಈಗ ಉಳಿತಾಯದ ಬಗ್ಗೆ ಒಂದು ರೀತಿಯ ಉದಾಸೀನ ಮನೋಭಾವವೇ ಹೆಚ್ಚಾಗಿ ಕಂಡುಬರುತ್ತಿದೆ. ಬಹುಪಾಲು ಮನೆಗಳಲ್ಲಿ ಯಾರೂ ನೋಡದಿದ್ದರೂ ಟೀವಿಗಳು ತಮ್ಮ ಪಾಡಿಗೆ ತಾವು ಠೀವಿಯಿಂದ ಉಲಿಯುತ್ತಾ, ನಲಿಯುತ್ತಿರುತ್ತವೆ, ರೇಡಿಯೋ ಶಬ್ದ ರಾಕ್ಷಸನಂತೆ ಕಿರುಚಿಕೊಳ್ಳುತ್ತಿರುತ್ತದೆ. ನಲ್ಲಿಯಲ್ಲಿ ನೀರು ಹನಿಹನಿಯಾಗಿ ಇಡೀ ರಾತ್ರಿ ಹರಿದು ಹೋಗಿರುತ್ತದೆ. ಅಡಿಗೆ, ತಿಂಡಿಗಳಂತೂ ತಿನ್ನುವುದಕ್ಕಿಂತ ಕಸದ ಬುಟ್ಟಿ ಸೇರುವುದೇ ಹೆಚ್ಚು. ಇಲ್ಲಿ ನಾವು ಗಮನಿಸಲೇಬೇಕಾದ ಅಂಶವೆಂದರೆ, ಇದಾವುದೂ ನಮಗೆ ಪುಕ್ಕಟೆಯಾಗಿ ಬಂದುದಲ್ಲ. ಇದಕ್ಕೆಲ್ಲಾ ಈಗಾಗಲೇ ಬೆಲೆ ತೆತ್ತಿದ್ದೇವೆ ಅಥವಾ ಮುಂದೆ ಖಂಡಿತ ತೆರಲಿದ್ದೇವೆ.

ಇನ್ನು ಅನೇಕರು, ಕೈಯಲ್ಲಿ ಜೀವನಕ್ಕೆ ಸಾಕಾಗುವಷ್ಟು ಹಣವಿಲ್ಲದವರು ಮಾತ್ರ ಉಳಿತಾಯ ಮಾಡಬೇಕು ಎಂದು ತಪ್ಪು ತಿಳಿದುಕೊಂಡಿರುತ್ತಾರೆ. ಇದು ಸ್ವಲ್ಪ ಸರಿಯಾದರೂ ಪೂರ್ತಿ ಸರಿಯಲ್ಲ. ಏಕೆಂದರೆ ಇವತ್ತು ನಮ್ಮ ಬೊಗಸೆ ತುಂಬಿರುವ ಹಣ, ನಾಳೆಯೂ ಹೀಗೆಯೇ ಇದ್ದೇ ಇರುತ್ತದೆ ಎಂಬುದಕ್ಕೆ ಯಾವ ಖಾತರಿಯೂ ಇಲ್ಲ. ಆದ್ದರಿಂದ ನಾವು ಇವತ್ತಿನದನ್ನು ಇವತ್ತಿಗೇ ಮುಗಿಸದೆ, ಮುಂದೆಂದೋ ಬರುವ ಆ ದಿನಗಳಿಗಾಗಿಯೂ ಕೂಡಿಡಬೇಕಾಗುತ್ತದೆ. ‘ಅಯ್ಯೋ, ದುಡ್ಡು ಇರೋದೇ ಖರ್ಚು ಮಾಡುವುದಕ್ಕೆ ಅಲ್ವಾ? ಬಿಡಿ, ಹೋಗುವಾಗ ತಲೆ ಮೇಲೆ ದುಡ್ಡು ಹೊತ್ತುಕೊಂಡು ಹೋಗುತ್ತಾರಾ?’ ಎಂಬ ಉಡಾಫೆ ಮಾತುಗಳನ್ನು ಕೇಳದವರಾರು? ಹೌದು, ದುಡ್ಡನ್ನು ಯಾರೊಬ್ಬರೂ ತಲೆಯ ಮೇಲೆ ಹೊತ್ತು ಹೋಗುವುದಿಲ್ಲವಾದರೂ, ದುಡ್ಡು ಕೊನೆಯಘಳಿಗೆಯವರೆಗೂ ಅತ್ಯವಶ್ಯಕವಾಗಿ ಬೇಕಾಗುವ ವಸ್ತು. ಹಣವೇ ಎಲ್ಲವೂ ಅಲ್ಲವಾದರೂ, ಹಣವಿಲ್ಲದೆ ‘ತೃಣಮಪಿ ನಚಲತಿ’ ಎಂಬ ವಸ್ತುಸ್ಥಿತಿಯನ್ನು ಕೂಡ ನಿರಾಕರಿಸಲಾಗದು!

Triveni Srinivasa Rao writes on the importance of Savingಉಳಿತಾಯಕ್ಕೂ, ಜಿಪುಣತನಕ್ಕೂ ನಡುವೆ ಇರುವುದು ಒಂದು ಅತಿ ಸೂಕ್ಷ್ಮವಾದ ರೇಖೆ ಮಾತ್ರ. ಈ ವ್ಯತ್ಯಾಸವನ್ನು ನಿಖರವಾಗಿ ಗುರುತಿಸಿಕೊಳ್ಳಲು ಅರಿಯದವರು, ಎಲ್ಲಾ ಇದ್ದೂ ಏನನ್ನೂ ಅನುಭವಿಸದೆ, ಉಣ್ಣುವ ಊಟ, ಉಡುವ ಬಟ್ಟೆಗೂ ತಮ್ಮನ್ನು ತಾವು ವಂಚಿಸಿಕೊಳ್ಳುತ್ತಾ, ನತದೃಷ್ಟ ಬದುಕು ನಡೆಸುವ ಜನರನ್ನೂ ನಾನು ಕಂಡಿದ್ದೇನೆ. ಇಂತವರು ಸಮಾಜದಲ್ಲಿ ಅಪಹಾಸ್ಯಕ್ಕೆ, ಅವಹೇಳನಕ್ಕೆ ಗುರಿಯಾಗುವುದು ಅಪರೂಪವೇನಲ್ಲ. ಉಳಿತಾಯವೆಂದರೆ ಖಂಡಿತವಾಗಿಯೂ ಅಸಹ್ಯ ತರಿಸುವ ಜಿಗುಟುತನವಲ್ಲ. ಅದು ಸುಖ ಸಂಸಾರಕ್ಕೊಂದು ಸುವರ್ಣ ಸೂತ್ರ. ಉಳಿತಾಯದ ಅತಿ ಸರಳ ವ್ಯಾಖ್ಯೆಯೆಂದರೆ, ಬೇಕಾದುದನ್ನೂ ಕೊಳ್ಳದೇ ಇರುವುದಲ್ಲ, ಬೇಡವಾದುದನ್ನು ಕೊಳ್ಳದಿರುವುದು ಎಂದು. ಅನಗತ್ಯವಾಗಿ ಎಲ್ಲೋ, ಹೇಗೋ ಪೋಲಾಗಿ ಹೋಗುವ ಹಣದ ಹರಿವಿಗೊಂದು ಸಣ್ಣ ತಡೆ ಹಾಕಿದರೂ ಸಾಕು , ಮುಂದೊಂದು ದಿನ ಅದು ಗಣನೀಯ ಪ್ರಮಾಣದ ಕಣ್ತುಂಬುವ ಮೊತ್ತವಾಗಿ ಬೆಳೆದು ನಿಂತಿರುತ್ತದೆ. ‘ಸಾಲ ಮಾಡಲು ಬೇಡ, ಸಾಲದೆಂದೆನಬೇಡ, ನಾಳೆಗೆ ಹೇಗೆಂಬ ಚಿಂತೆ ಬೇಡ’ - ಎಂಬ ನಾಣ್ಣುಡಿಯಾಂದಿದೆ. ಇದರಲ್ಲಿ ಮೊದಲೆರಡನ್ನು ಯಾವುದೇ ತಕರಾರಿಲ್ಲದೆ, ಒಪ್ಪಿಕೊಳ್ಳಬಹುದು. ಆದರೆ ನಾಳೆಯ ಚಿಂತೆಯನ್ನು ಮರೆತು ಕುಳಿತರೆ ಮಾತ್ರ ಮುಂದೆಂದೋ ಬರುವ ಆಪತ್ತುಗಳಿಗೆ ಇಂದೇ ಆಹ್ವಾನ ನೀಡಿದಂತೆ!

ಇವತ್ತಿನ ಮುಕ್ತ ಮಾರುಕಟ್ಟೆಯಂತೂ ನಮ್ಮನ್ನು ಎಂತಹ ಮಹಾನ್‌ ಕೊಳ್ಳುಬಾಕರನ್ನಾಗಿಸಿದೆ ಎಂದರೆ ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ನಾವು ಕೊಳ್ಳಲೇಬೇಕು. ಈ ಮಾಯಾಪ್ರಪಂಚದ ಪ್ರಲೋಭನೆಗಳಿಂದ ನಮ್ಮನ್ನು ಪಾರುಮಾಡಲು, ‘ಆಸೆಯೇ ದುಃಖಕ್ಕೆ ಮೂಲ’ ಎಂದ ಬುದ್ಧ ಇನ್ನೊಮ್ಮೆ ಬರಬಾರದೇ? ಎಂದು ಕೆಲವು ದಿನಗಳ ಹಿಂದೆ ಮಿತ್ರರೊಬ್ಬರು ಆಶಯ ವ್ಯಕ್ತಪಡಿಸಿದ್ದರು. ಆದರೆ ಈ ಉಚಿತ....ಉಚಿತ.... ಎಂದು ಮೋಡಿ ಬೀರುವ ಈ ಜಾಹಿರಾತುಮಯ ಲೋಕಕ್ಕೆ ಆ ಬುದ್ಧನೇನಾದರೂ ಇವತ್ತು ಬಂದಿದ್ದರೆ, ಅವನೂ ಕೂಡ ತನ್ನ ಕೈಲಾದಷ್ಟು ವಸ್ತುಗಳನ್ನು ತಪ್ಪದೆ ಕೊಂಡು ಟೋಪಿ ಹಾಕಿಸಿಕೊಳ್ಳುತ್ತಿದ್ದುದು ಮಾತ್ರ ಖಚಿತ! ಇವತ್ತಿನ ಒಂದು ಕೊಂಡರೆ ಮತ್ತೊಂದು ಉಚಿತ ಎಂಬ ಮಾಯಾಜಾಲದಲ್ಲಿ ಸಿಲುಕಿದ ನಾವು, ಕೊನೆಗೆ ಕೊಂಡು ತರುವ ಎರಡೂ ವಸ್ತುಗಳೂ ನಮಗೆ ಬೇಕಿಲ್ಲದಂತವೇ. ಆದರೂ ಅದೂ ಬೇಕು....ಇದೂ ಬೇಕು. ಕೊನೆ ಮೊದಲಿಲ್ಲದ ಬೇಕುಗಳು. ಎಲ್ಲಕ್ಕಿಂತ ಮೊದಲು ಈಗ ನಮಗೆ ಬೇಕು, ನಮ್ಮ ಬೇಕುಗಳಿಗೊಂದು ದೊಡ್ಡ ಬ್ರೇಕು!

ಉಳಿತಾಯವೆಂದರೆ, ಅದು ಬರಿಯ ಹಣಕ್ಕೆ ಮಾತ್ರ ಸೀಮಿತವಾದುದೇನೂ ಅಲ್ಲ. ಅದು ಪ್ರಾಕೃತಿಕ ಸಂಪನ್ಮೂಲಗಳಿಗೂ ಅನ್ವಯವಾಗುತ್ತದೆ. ಈಗ ಹಣ ಕೊಟ್ಟಾದರೂ ಕೊಳ್ಳುತ್ತಿರುವ ನೀರು , ಮುಂದೊಂದು ದಿನ ಹಣ ಕೊಟ್ಟರೂ ಸಿಗದಿರುವ ಪರಿಸ್ಥಿತಿ ಬರಬಹುದು. ಈಗ ಶುದ್ಧ ನೀರನ್ನು ಬೆಲೆಕೊಟ್ಟು ಕೊಳ್ಳುತ್ತಿರುವಂತೆ, ಮುಂದೊಂದು ದಿನ ಶುದ್ಧಗಾಳಿಯನ್ನು ಕೂಡ ಕೊಳ್ಳುವ ದಿನ ಬರಲಾರದೇ? ಈಗಾಗಲೇ ಭಣಗುಡುತ್ತಿರುವ ನಮ್ಮ ಚಿನ್ನದ ಗಣಿಗಳು, ಒಣಗಿ ನಿಂತಿರುವ ಕೆರೆಕಟ್ಟೆಗಳು, ಬಟ್ಟಬಯಲಾಗುತ್ತಾ ನಡೆದಿರುವ ದಟ್ಟಕಾಡುಗಳು, ದಿನದಿಂದ ದಿನಕ್ಕೆ ಬೃಹತ್‌ ಪ್ರಮಾಣದಲ್ಲಿ ವ್ಯಯವಾಗುತ್ತಾ, ಬೆಲೆ ಹೆಚ್ಚಿಸಿಕೊಳ್ಳುತ್ತಿರುವ ಇಂಧನ ಮೂಲಗಳು....ಇವುಗಳನ್ನೆಲ್ಲಾ ನೋಡಿದಾಗ, ಇಲ್ಲೆಲ್ಲಾ ನಾವು ಸ್ವಲ್ಪ ಜಾಣತನದಿಂದ ಮಿತಬಳಕೆ ಮಾಡಿಕೊಂಡು ಬಂದಿದ್ದರೆ ಒಳ್ಳೆಯದಿರುತ್ತಿತ್ತು, ಎಂದು ನಮಗೆ ಅನ್ನಿಸುತ್ತದೆ ಅಲ್ಲವೇ?

ಈ ಭೂಮಿಯಲ್ಲಿ ಎಲ್ಲವೂ ಇದೆ. ಅವಳು ಕಬ್ಬಿಣ, ಕಲ್ಲಿದ್ದಿಲಿನಿಂದ ಹಿಡಿದು ವಜ್ರವೈಢೂರ್ಯಗಳವರೆಗೆ ಬಹಳಷ್ಟು ಸಂಪನ್ಮೂಲಗಳನ್ನು ತನ್ನಲ್ಲಿ ಅಡಗಿಸಿಕೊಂಡು ‘ಬಹುರತ್ನಾ ವಸುಂಧರಾ’ ಅನ್ನಿಸಿಕೊಂಡಿದ್ದಾಳೆ. ಆದರೆ ಈ ಸಮಸ್ತ ಸಂಪತ್ತೆಲ್ಲವೂ ಒಮ್ಮೆ ಭೂಮಿಯಿಂದ ತೆಗೆದರೆ ಖಾಲಿಯಾಗಿಬಿಡುವುದೇ ಹೊರತು, ಅದು ಮತ್ತೆ ಮತ್ತೆ ತುಂಬಿಕೊಳ್ಳುವ ಅಕ್ಷಯ ಪಾತ್ರೆಯಲ್ಲ. ನಮ್ಮ ಭೂಮಿಗಿಂತ ಭಾರೀ ಭಾರೀ ಗಾತ್ರದ ಅದೆಷ್ಟೋ ಗ್ರಹರಾಶಿಗಳೇ ಅಸ್ತಿತ್ವದಲ್ಲಿದ್ದರೂ, ಕ್ಷಣಕ್ಷಣಕ್ಕೂ ಅಧಿಕಗೊಳ್ಳುತ್ತಿರುವ ಜನಸಂಖ್ಯೆಯ ಹಸಿವೆ, ಬಾಯಾರಿಕೆಗಳನ್ನು ತಣಿಸಿ, ಬದುಕಿಗೆ ತಣ್ಣನೆಯ ಆಸರೆ ನೀಡುವುದಕ್ಕೆ ಮಾತ್ರ ಇರುವುದೊಂದೇ ಭೂಮಿ!

ನಮ್ಮಂತೆ ಯೋಚಿಸಲಾರದ, ಮಾತಾಡಲಾರದ ಹಕ್ಕಿ ಪಕ್ಷಿಗಳೂ ಕೂಡ ಮುಂದೆ ಬರಲಿರುವ ಚಳಿ, ಮಳೆಯ ದಿನಗಳಿಗಾಗಿ ಕಾಳು ಕೂಡಿಡುತ್ತವೆ. ನಿಸರ್ಗವನ್ನು ನೋಡಿ, ನಾವು ಕಲಿಯಬೇಕಾದ ಪಾಠಗಳಲ್ಲಿ ಇದೂ ಒಂದು. ನಮ್ಮ ಪಾಲಿಗೂ ಉಳಿತಾಯ ತಪ್ಪಲ್ಲ, ಮಾಡಬಾರದ ಪಾಪವೂ ಅಲ್ಲ. ಆದರೆ ಹಾಗೊಂದು ಭಾವನೆ ಅಥವಾ ಭ್ರಮೆ ಇವತ್ತಿನ ಜನರನ್ನು, ಅದರಲ್ಲೂ ಯುವಜನರನ್ನು ಹೆಚ್ಚಾಗಿ ಕವಿದಂತಿದೆ. ಎಷ್ಟೇ ಮುನ್ನೆಚ್ಚರಿಕೆಯ ಹೆಜ್ಜೆಗಳನ್ನಿಟ್ಟರೂ, ಎಲ್ಲೋ ಆಯತಪ್ಪಿ ಕೆಳಗೆ ಬೀಳುವ ಈದಿನಗಳಲ್ಲಿ ಸ್ವಲ್ಪ ಲೆಕ್ಕಾಚಾರದ ಮನೋಭಾವ ಬೆಳೆಸಿಕೊಂಡರೆ ಒಳಿತು. ನಾವು ಹಾಕಿದ ಲೆಕ್ಕ ಅನೇಕ ಸಲ ತಪ್ಪಾಗುವುದೇ ಹೆಚ್ಚು, ಆ ಮಾತು ಬೇರೆ. ಹಾಗೆಂದು ಲೆಕ್ಕ ಬಲು ದುಃಖ , ಯಾರಿಗೆ ಬೇಕು ಈ ಲೆಕ್ಕ? ಎಂದು ಮೆದುಳನ್ನು ಗೋಜಲಾಗಿಸಿಕೊಳ್ಳುವ ಅಗತ್ಯವೂ ಇಲ್ಲ. ನಮ್ಮ ಆಯ ವ್ಯಯಗಳ ನಡುವೆ ದೊಡ್ಡದೊಂದು ಕಂದಕ ಇರದಿದ್ದರೆ ಆಯಿತು, ಅಲ್ಲಿಗೆ ನಮ್ಮ ಆಯವ್ಯಯದ ಪಟ್ಟಿ ಪರಿಪೂರ್ಣವಾಗಿದೆ ಎಂದೇ ಅರ್ಥ!

ಬದುಕು ಇಂದಿರುವಂತೆಯೇ ಮುಂದೆಯೂ ಸುಗಮವಾಗಿ ಸಾಗಲು, ಅಷ್ಟಿಷ್ಟು ಪೂರ್ವಯೋಜನೆಗಳು ಬೇಕು, ಖರ್ಚು ವೆಚ್ಚದ ಲೆಕ್ಕವಿಡಬೇಕು. ಆದರೆ ಖರ್ಚಾದ ಪ್ರತಿಪೈಸೆಗೂ ಕೊರಗುವ ಕಂಜೂಸಿನ ಮನೋಭಾವ ಬೆಳೆಸಿಕೊಂಡರೆ, ಬದುಕೇ ಒಂದು ಬಿಡಿಸಲಾರದಂತಹ ಕಗ್ಗಂಟಿನ ಲೆಕ್ಕವಾಗಿಬಿಡಬಹುದು. ಅದೇನೇ ಇರಲಿ, ಕೂಡಿ ಕಳೆಯುವ, ಎಣಿಸುವ, ಗುಣಿಸುವ, ಗಣಿತದ ಲೆಕ್ಕಾಚಾರದ ನಡುವೆ, ಸುತ್ತಮುತ್ತಲಿನ ಬದುಕಿನ ಅಗಣಿತ ರಸನಿಮಿಷಗಳು ನಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳುವ ದಿವ್ಯ ಎಚ್ಚರವೊಂದು ಸದಾ ಜೊತೆಯಲ್ಲಿರಲೇಬೇಕು. ಅಷ್ಟೆ, ಅಷ್ಟೇ...

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X