ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳುವ ಜಗದೊಳು ತೇಲಿಬರುತಿದೆ ಕ್ರಿಸ್‌ಮಸ್‌ ಹಾಯಿದೋಣಿ

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ನವವರುಷವು ಬರುವ ಮೊದಲೇ
ಭುವಿಗಿಳಿದಿದೆ ಉಲ್ಲಾಸ
ಸಂಭ್ರಮವಿದೆ ಸಂತಸವಿದೆ
ಇದು ಕ್ರಿಸ್‌ಮಸ್‌ ಮಾಸ!

ಇದು ಸರಿಯಾಗಿ ವರುಷದ ಹಿಂದೆ ದಟ್ಸ್‌ಕನ್ನಡದ ಪುಟಗಳಲ್ಲಿ ಪ್ರಕಟವಾಗಿದ್ದ ನನ್ನದೇ ಕವನದ ಸಾಲು! ಈಗ ಮತ್ತೆ ಹೊಸ್ತಿಲಿನಲ್ಲಿ ಹೆಜ್ಜೆ ಇಟ್ಟಿದೆ ಕ್ರಿಸ್‌ಮಸ್‌. ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರಯ ನಮಗೆ ಮಾತ್ರ. ಈ ಪ್ರಕೃತಿಗಲ್ಲವಲ್ಲ ! ಯುಗಯುಗಾದಿ ಕಳೆದು ಯುಗಾದಿ ಮರಳಿ ಬರುವಂತೆಯೇ, ಕ್ಯಾಲೆಂಡರಿನಲ್ಲಿ ದಿನ, ವಾರ, ತಿಂಗಳುಗಳು ಬದಲಾಗಿ ಮತ್ತೊಂದು ಹೊಸ ಕ್ರಿಸ್‌ಮಸ್‌. ಇಲ್ಲೀಗ ಹಿಮ ಮುಸುಕಿದ, ಮಂಕು ಬಡಿಸಿಕೊಂಡ, ಶೀತಲ ಸಂಜೆಗಳು. ಹೊರಗೆ ಕಾಲಿಟ್ಟರೆ ಚಳಿ ಬೆನ್ನಟ್ಟುವ ಈ ಹೊತ್ತಿನಲ್ಲಿ ಮನೆಮನೆಯೂ ಒಂದು ಬೆಚ್ಚನೆಯ ಗೂಡಿನಂತೆ. ಬಾಚಿ ತಬ್ಬಿಕೊಳ್ಳಲು ಕಾದಿರುವ ತಾಯ ತೋಳಿನಂತೆ! ಯಾವುದೇ ಗೌಜು, ಗದ್ದಲವನ್ನು ಒಲ್ಲೆನೆಂದು ನಿರಾಕರಿಸುವ ವಿರಕ್ತ ಹೃದಯ. ದಪ್ಪನೆಯ ಹೊದಿಕೆಯ ಅಡಿಯಲ್ಲಿ ‘ಲೋಕದ ಚಿಂತೆ ನಮಗೇಕೆ?’ ಎಂದು ಮುದುರಿ ಮಲಗಲು ಬಯಸುವ ಸೋಮಾರಿ ಮೈಮನಸ್ಸುಗಳಿಗೆ ಚುರುಕು ಮುಟ್ಟಿಸಲೆಂದೇ ಮತ್ತೆ ಬಂದಿದೆ ಕ್ರಿಸ್‌ಮಸ್‌!

Merry Christmasಕ್ರಿಸ್‌ಮಸ್‌ ವರ್ಷದ ಕೊನೆಯ ಹಬ್ಬ. ನಮಗೆ ಹಬ್ಬಗಳು ಅಪರೂಪವಲ್ಲ. ಹಿಂದು, ಹಬ್ಬಗಳಲ್ಲಿ ಎಲ್ಲರಿಗಿಂತ ಮುಂದು. ಆದರೆ ಕ್ರೈಸ್ತಧರ್ಮೀಯರಿಗೆ ಇರುವ ಕೆಲವೇ ಹಬ್ಬಗಳಲ್ಲಿ, ಕ್ರಿಸ್ತ ಹುಟ್ಟಿದ ದಿನವಾದ ಕ್ರಿಸ್‌ಮಸ್‌ ಪ್ರಮುಖವಾದುದು. ಹಾಗಾಗಿ ಇದಕ್ಕಾಗಿ ಸಿದ್ಧತೆಗಳೂ ಬಹಳ. ಕಾರ್ತೀಕ ಮಾಸದಲ್ಲಿ ಮನೆಯ ಮುಂದೆ ಮಿನುಗುವ ಆಕಾಶಬುಟ್ಟಿ, ಸಾಲುದೀಪಗಳು ದೀಪಾವಳಿಯನ್ನು ಸ್ವಾಗತಿಸುವಂತೆಯೇ, ಕ್ರಿಸ್‌ಮಸ್‌ಗೆ ಕೆಲವು ದಿನಗಳ ಮೊದಲೇ ಮನೆಯಂಗಳಗಳೆಲ್ಲ ದೀಪಾಲಂಕಾರದಿಂದ ಕಣ್ಣಿಗೆ ಹಬ್ಬ ಉಂಟುಮಾಡುತ್ತವೆ. ಬಿಸಿಲಿಗೆ ಸೊರಗದೆ, ಕೊರೆವ ಚಳಿಗೂ ಮರುಗದೆ, ಸರ್ವಋತುಗಳಲ್ಲೂ ಸಮಾನವಾಗಿ ಕಂಗೊಳಿಸುವ ಕ್ರಿಸ್‌ಮಸ್‌ ಮರಗಳಿಗೆ ಈಗ ಎಲ್ಲಿಲ್ಲದ ರಾಜಮರ್ಯಾದೆ. ಬಾಡಿಗೆ ಬಿಡಾರಗಳಿಂದ ಹಿಡಿದು, ಅಧ್ಯಕ್ಷರ ಶ್ವೇತಭವನದವರೆಗೂ... ವಿವಿಧ ಗಾತ್ರಗಳಲ್ಲಿ, ವೈವಿಧ್ಯಮಯ ಅಲಂಕಾರಗಳಲ್ಲಿ ಮರಗಳು ಸಾರ್‌ ಮರಗಳು!

ಕ್ರಿಸ್‌ಮಸ್‌, ಇದ್ದವರು ಇಲ್ಲದವರೊಂದಿಗೆ ಹಂಚಿಕೊಳ್ಳುವ ಹಬ್ಬ. ಉಡುಗೊರೆಗಳನ್ನು ಕೊಡುವ, ಕೊಳ್ಳುವ ಮೂಲಕ ಸಂಬಂಧಗಳನ್ನು ನವೀಕರಿಸಿಕೊಳ್ಳುವ ಹಬ್ಬ. ಹಾಗಾಗಿ ಅಂಗಡಿಗಳಲ್ಲಿ ವ್ಯಾಪಾರವೂ ಜೋರು. ಅದ್ಧೂರಿಯಾಗಿ ಸಿಂಗಾರಗೊಂಡ ಶಾಪಿಂಗ್‌ ಮಳಿಗೆಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಒಡ್ಡುವ ಆಸೆ, ಆಮಿಷಗಳು, ನಡೆಸುವ ಪೈಪೋಟಿಗಳು ಒಂದೆರಡಲ್ಲ. ಸದಾಕಾಲ ಜನರಿಂದ ಗಿಜಿಗುಟ್ಟುವ ಈ ಮಾಯಾಬಜಾರುಗಳಲ್ಲಿ ಕಣ್ಣು ಕಂಡಿದ್ದನ್ನೆಲ್ಲ ಕೊಳ್ಳಲೇಬೇಕೆಂಬ ಕಡ್ಡಾಯವೇನಿಲ್ಲ. ಬೇಕೆನಿಸಿದರೆ ಕೊಳ್ಳಬಹುದು, ಅಥವಾ ‘ತೋಟ ನಿಮ್ಮದಾದರೇನು? ನೋಟ ನಮ್ಮದು’ ಎಂದು ಬರೀ ಬೆರಗಿನಿಂದ ನೋಡುತ್ತಾ ನಿಲ್ಲಬಹುದು.

ನಮ್ಮ ಹಬ್ಬಗಳಿಗಿರುವಂತೆಯೇ ಇಲ್ಲಿಯೂ ಕಥೆಗಳಿವೆ, ಪ್ರತೀತಿಗಳಿವೆ. ಅದರಲ್ಲೂ ‘ಕ್ರಿಸ್‌ಮಸ್‌ ಈವ್‌’ ಎಂದು ಕರೆಯಲಾಗುವ ಕ್ರಿಸ್‌ಮಸ್‌ ಹಿಂದಿನ ಸಂಜೆಯ ಕುರಿತಂತೆ ಅನೇಕ ರೋಚಕ ಕಟ್ಟುಕಥೆಗಳಿವೆ! ದೇಶ, ಭಾಷೆ ಬೇರೆಯಾದರೇನು? ಆಸೆ, ಭರವಸೆಗಳ ಬೆನ್ನುಹತ್ತುವುದು ಯಾವುದೇ ಮಾನವಜೀವಿಯ ಮೈಗಂಟಿದ ಗುಣ ತಾನೇ? ಶಿವ ಕಾಮನನ್ನು ಸುಟ್ಟ ಹೋಳಿಹುಣ್ಣಿಮೆಯ ದಿನ ಮಳೆ ಬಂದು ಭುವಿ ತಂಪಾಗುತ್ತದೆ ಎಂದು ನಾವು ನಂಬುವ ಹಾಗೆಯೇ ಕ್ರಿಸ್‌ಮಸ್‌ ಹಬ್ಬದ ಮುನ್ನಾ ದಿನ ಹಿಮ ಸುರಿದರೆ, ಅದು ಮುಂಬರಲಿರುವ ದಿನಗಳಿಗೊಂದು ಶುಭಸೂಚನೆ ಎಂದು ಇಲ್ಲಿಯವರೂ ನಂಬುತ್ತಾರೆ. ಅದು ಹೇಗೋ, ಸಾಧಾರಣವಾಗಿ ಕ್ರಿಸ್‌ಮಸ್‌ ದಿನಗಳಲ್ಲಿ ಭಾರೀ ಹಿಮಪಾತವೂ ಅಗುತ್ತದೆ. ‘ನಿನ್ನ ಒಂದು ಕೆನ್ನೆಗೆ ಹೊಡೆದವರಿಗೆ ಇನ್ನೊಂದು ಕೆನ್ನೆಯನ್ನೂ ತೋರಿಸು’ ಎಂದ, ತನ್ನನ್ನು ಶಿಲುಬೆಗೇರಿಸಿದವರನ್ನೂ ಕೂಡ ಕ್ಷಮಿಸಿಬಿಡು ಎಂದು ದೇವರಲ್ಲಿ ಕೇಳಿಕೊಂಡ ಕರುಣಾಳು ಕ್ರಿಸ್ತ ತನ್ನವರ ನಂಬಿಕೆಯನ್ನು ಸುಳ್ಳಾಗಿಸುತ್ತಾನಾದರೂ ಯಾಕೆ?

Merry Christmasಕ್ರಿಸ್‌ಮಸ್‌ ಹಿಂದಿನ ದಿನ ರಾತ್ರಿ ಬರುತ್ತಾನೆಂದು ಹೇಳಲಾಗುವ ಸಂತ ‘ಸಾಂತಾಕ್ಲಾಸ್‌’ ನ ಕಲ್ಪನೆಯೇ ರಮ್ಯ, ರೋಮಾಂಚಕ. ಎಂದೋ ನನಸಾಗಲೆಂದು ಬಯಸುವ ನಮ್ಮೆಲ್ಲರ ಹೊಂಗನಸುಗಳಂತೆಯೇ ಮನಮೋಹಕ! ದೊಡ್ಡ ಮೂಟೆಯನ್ನು ಬೆನ್ನ ಮೇಲೆ ಹೊರಲಾರದೆ ಹೊತ್ತ ಸಾಂತಾಕ್ಲಾಸ್‌ ಎಂಬ ಮೋಜುಗಾರ ಮುದುಕ ಹೊಗೆಕೊಳವೆಗಳ ಮೂಲಕ ಇಳಿದುಬಂದು ಮಕ್ಕಳು ಬೇಡಿದ ಉಡುಗೊರೆಗಳನ್ನೆಲ್ಲ ಕೊಟ್ಟು ಹೋಗುತ್ತಾನಂತೆ. ಇದನ್ನು ಚಿಕ್ಕಮಕ್ಕಳು ಈಗಲೂ ನಂಬುತ್ತವೆ. ಆ ಕೊಡುಗೆಗಳನ್ನು ಅಲ್ಲಿಟ್ಟವರು ತಮ್ಮ ತಮ್ಮ ತಂದೆತಾಯಿಗಳೇ, ಸಾಂತಾ ಅಲ್ಲ , ಎಂಬ ಸತ್ಯ ಅವರಿಗೆ ಅರಿವಾಗುವವರೆಗೂ! ಬಹುಶಃ ಅದು, ಬಾಲ್ಯ ತನ್ನ ಮುಗ್ಧತೆಯ ಕೋಶ ಒಡೆದುಕೊಂಡು, ಕಟುವಾಸ್ತವಗಳಿಗೆ ಮುಖಾಮುಖಿಯಾಗಿ ನಿಲ್ಲುವ ಕಠೋರ ಕ್ಷಣ!

ಇದೊಂದು ಸುಂದರ ದಂತಕಥೆಯಾದರೂ... ನೀವು ಸ್ವಲ್ಪ ಭಾವಪೂರ್ಣ ವ್ಯಕ್ತಿತ್ವದವರಾಗಿದ್ದರೆ, ಕ್ರಿಸ್‌ಮಸ್‌ ಹಿಂದಿನ ರಾತ್ರಿ ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಬಿಳುಪಾದ ಮಂಜಿನ ರಾಶಿ, ನಕ್ಷತ್ರಗಳೇ ಭುವಿಗಿಳಿದಂತೆ ಮಿನುಗುತ್ತಿರುವ ದೀಪಗಳು, ಮೌನದಿಂದ ತುಟಿಬಿಗಿದುಕೊಂಡ ನೀರವ ಬೀದಿಗಳನ್ನು ನೋಡುತ್ತಾ ನಿಂತಾಗ, ಯಾವುದೋ ಅಲೌಕಿಕ ಶಕ್ತಿಯಾಂದು ಈಗಲೋ, ಇನ್ನೊಂದು ಕ್ಷಣಕ್ಕೋ ಈ ಭೂಮಿಯನ್ನು ಪ್ರವೇಶಿಸಿ ಬಿಡುವುದೇನೋ ಎಂಬ ಅನುಭವವಾಗುವುದು ಮಾತ್ರ ನಿಜ! ಈ ಅನಿಸಿಕೆ - ದೇವತೆಗಳೆಂದರೆ ಬೆಳ್ಳಿ ಬೆಟ್ಟದ ನಡುವೆ, ಬೆಣ್ಣೆ ಮುದ್ದೆಯಂತಹ ಮೋಡಗಳ ನಡುವೆ ಸಂಚರಿಸುವ ಸುಖಜೀವಿಗಳು ಎಂಬ ಕಥೆಗಳನ್ನು ಕೇಳಿ ಬೆಳೆದ ನನ್ನ ಅಪ್ಪಟ ಭಾರತೀಯ ಮನಸ್ಸಿನ ಭ್ರಮೆಯಿದ್ದರೂ ಇರಬಹುದೇನೋ.

ಹಬ್ಬಗಳನ್ನು ನಾವು ಯಾಕೆ ಮಾಡಬೇಕು? ಯಾವುದೋ ಉದ್ದೇಶದಿಂದ, ಯಾರೋ ರೂಢಿಗೆ ತಂದ ನಮ್ಮ ಹಬ್ಬಗಳು ಇವತ್ತಿಗೂ ಪ್ರಸ್ತುತವೇ? ಕೃಷಿಪ್ರಧಾನ ವ್ಯವಸ್ಥೆಗೆ ಖುಷಿ ತುಂಬುತ್ತಿದ್ದ ಹಬ್ಬಗಳು ಕಂಪ್ಯೂಟರ್‌ ಜಗತ್ತಿನಲ್ಲಿ ಬದುಕುತ್ತಿರುವ ನಮಗೇಕೆ ಬೇಕು? ಆಗಾಗ ತಲೆಯೆತ್ತುವ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಹಬ್ಬಗಳು ಹಬ್ಬಗಳೇ, ಅದು ಯಾವುದೇ ಇರಲಿ. ಅಂದಿನ ಸಂಭ್ರಮ ಇಂದಿಲ್ಲ ಎಂಬ ಕೊರಗು ಕಾಡಿದರೂ, ಅವು ನೀಡುವ ಆನಂದ ಇಂದಿಗೂ ಅದೇ ಬಗೆಯದು. ಹಬ್ಬಗಳು ಏನಿಲ್ಲವೆಂದರೂ ಈ ಬದುಕನ್ನು ಏಕತಾನತೆಯ ಅಪಾಯದಿಂದ ಪಾರು ಮಾಡುತ್ತವೆ. ಹಬ್ಬದ ಹೆಸರಿನಲ್ಲಿ ಒಂದು ದಿನವನ್ನಾದರೂ ಸ್ನೇಹಿತರೊಡನೆ, ಸಂಬಂಧಿಕರೊಡನೆ ಕಳೆಯಲು ಸದವಕಾಶ. ಹಬ್ಬಗಳನ್ನು ಆಚರಿಸಬಹುದು, ಅರ್ಥಹೀನವೆಂದು ಆಚರಿಸದೆಯೇ ಇರಬಹುದು. ಆದರೆ ತೀರಾ ಔಪಚಾರಿಕವಾಗಿ ಹೋಗುತ್ತಿರುವ ನಮ್ಮ ದೈನಿಕಕ್ಕೆ ಕಿಂಚಿತ್ತಾದರೂ ಹುರುಪು ಮೂಡಿಸುವ, ಈ ಹಬ್ಬಗಳನ್ನು ನಾವು ಕೈಬಿಟ್ಟಲ್ಲಿ, ತನ್ನಷ್ಟಕ್ಕೆ ತಾನು ನಡೆದುಕೊಂಡು ಹೋಗುವ ಯಂತ್ರ ಮತ್ತು ನಮ್ಮ ನಡುವೆ ಅಂತಹ ವ್ಯತ್ಯಾಸವೇನೂ ಉಳಿದಿರುವುದಿಲ್ಲ!

ಆಧುನಿಕತೆಯ ಜೊತೆಗೆ ದಾಪುಗಾಲು ಹಾಕುತ್ತಿರುವ ನವನಾಗರೀಕತೆಯಿಂದ, ನಮ್ಮ ಆಚಾರ-ವಿಚಾರ, ಹಾಡು-ಹಸೆ, ಹಬ್ಬ-ಹರಿದಿನ, ಕಲೆ-ಸಂಸ್ಕೃತಿಗಳು ಸೊರಗುತ್ತಿವೆ ಎಂಬುದು ಈಗ ಎಲ್ಲೆಡೆಗೂ ದೊಡ್ಡದಾಗಿ ಕೇಳಿಬರುತ್ತಿರುವ ಇನ್ನೊಂದು ವಾದ. ಅಷ್ಟಕ್ಕೂ ಇವತ್ತಿನ ಈ ಕಾಲಘಟ್ಟದಲ್ಲಿ ನಿಂತು, ಮುಂದೆಂದೋ ಸಂಭವಿಸಲಿರುವ ಸಾಮಾಜಿಕ ಸ್ಥಿತ್ಯಂತರಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ ಹೇಳಲು ನಾವು ಯಾರು? ಹಳೆಯ ನಂಬಿಕೆಗಳನ್ನು ಎದೆಯಲ್ಲಿ ಹೊತ್ತುಕೊಂಡೇ, ಬದಲಾವಣೆಯ ಹೊಸಗಾಳಿಗೂ ಮೈ ಒಡ್ಡಿಕೊಳ್ಳುವುದೊಂದೇ ಉಳಿದಿರುವ ದಾರಿ. ಜಾಗತೀಕರಣ ನಮ್ಮ ಸಂಸ್ಕೃತಿಯನ್ನು ನಾಶಮಾಡುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವವರು, ಇಂದಿನ ಈ ಕಲಸು ಮೇಲೋಗರವೇ ಮುಂದೆಂದೋ ಜನ್ಮತಾಳಲಿರುವ ಹೊಸ ಸಮಾಜವೊಂದರ, ಹೊಸ ಸಂಸ್ಕೃತಿಯ ಅಡಿಪಾಯ ಆಗಿರಲೂಬಹುದು ಎಂಬ ಮುಖ್ಯ ಸಂಗತಿಯನ್ನು ಮರೆಯುತ್ತಿದ್ದಾರೆ.

ಅದೆಲ್ಲ ಇರಲಿ, ಹೊಸ ಚಿಗುರಿನ ದಾಳಿಗೆ ಹಳೆ ಬೇರು ಕಂಪಿಸುತ್ತಿದೆಯಾ? ಹಬ್ಬಗಳು ಬೇಕಾ? ಬೇಡವಾ? ಈ ವಾದ-ವಿವಾದಗಳಿಗೆಲ್ಲ ಈಗ ಯಾರಿಗೆ ತಾನೇ ಪುರುಸೊತ್ತಿದೆ?

ಕ್ರಿಸ್‌ಮಸ್‌ ಹತ್ತಿರ ಬರುತ್ತಿದೆ, ಹೊಸ ವರುಷದ ಹಾಡಿಗೊಂದು ಹರುಷದ ಹಿನ್ನಲೆಯಂತೆ. ಗಾಳಿಯಾಡನೆ ಬೆರೆತ ಪರಿಮಳದಂತೆ ಹೊಸಚೇತನವೊಂದು ದಶದಿಕ್ಕುಗಳನ್ನು ಹಿತವಾಗಿ ತುಂಬುತ್ತಿದೆ. ಯುದ್ಧ, ಹಿಂಸೆ, ಸಾವು,ನೋವಿಗೆ ಭಯಗೊಂಡು, ರಚ್ಚೆ ಹಿಡಿದು ಅಳುತ್ತಿರುವ ಜಗವೆಂಬ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು, ಯಾವುದೋ ಕರುಣೆ ತುಂಬಿದ ದನಿಯಾಂದು ಮೆಲುವಾಗಿ ಸಂತೈಸುತ್ತಿರುವಂತಿದೆ. ಮಧುರಗಾನವೊಂದು ಅಲೆಅಲೆಯಾಗಿ ತೇಲಿಬರುತ್ತಿದೆ - ಜಿಂಗಲ್‌ ಬೆಲ್ಸ್‌...ಜಿಂಗಲ್‌ ಬೆಲ್ಸ್‌...ಜಿಂಗಲ್‌ ಆಲ್‌ ದಿ ವೇ....ನಿಮಗೆ ಕೇಳಿಸುತ್ತಿಲ್ಲವೇ? ಲೋಕದ ದುಷ್ಟ ಗದ್ದಲಗಳಿಗೆಲ್ಲ ಒಮ್ಮೆ ಕಿವುಡಾಗಿ, ಕಣ್ಮುಚ್ಚಿ ಆಲಿಸಿ.... ಓಹ್‌, ವಾಟ್‌ ಫನ್‌ ಇಟ್‌ ಇಸ್‌ ಟು ರೈಡ್‌...ಒನ್‌ ಹಾರ್ಸ್‌ ಓಪನ್‌...ಸ್ಲೇ...!!

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X