• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಣ್ಣ ಬರಲಿಲ್ಲ ಯಾಕೋ ಕರಿಯಾಕ?

By Staff
|
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

venivas@hotmail.com

ಎಲ್ಲಾ ಹೆಣ್ಣುಮಕ್ಕಳ ಮನಸ್ಸಿನಾಳವನ್ನು ಪಾತಾಳ ಗರಡಿ ಹಾಕಿ ಹುಡುಕಿದರೆ, ಅಲ್ಲಿ ನಿಮಗೆ ಏನೇನೆಲ್ಲ ದೊರಕುತ್ತದೋ ಗೊತ್ತಿಲ್ಲ . ಆದರೆ ಅಲ್ಲಿ ಸಿಗಲೇಬೇಕು. ಪ್ರೀತಿ-ವಾತ್ಸಲ್ಯದ ಮೂರ್ತಿಯಾಗಿ, ಹನಿಯುತ್ತಿರುವ ಒಲುಮೆಯಿಂದ ಹನಿಗಣ್ಣಾದ ಒಬ್ಬ ಅಣ್ಣ , ಅಥವಾ ಹುಂಬತನ, ಕೀಟಲೆ, ಇಷ್ಟು ದುಡುಕು, ಅಷ್ಟು ಕೋಪ, ಅಪಾರ ಮಮತೆ ತುಂಬಿಕೊಂಡ ಒಬ್ಬ ತುಂಟ ತಮ್ಮ!

ಯಾಕೆಂದರೆ, ಅವರು ಹೆಣ್ಣು ಬೆಳೆದಂತೆಲ್ಲ , ಅವಳ ನೆನಪಿನ ಭಾಗವಾಗಿ ಬೆಳೆದು ಬಂದವರು. ಅವಳ ಹೃದಯದ ಒಂದು ಭಾಗವಾಗಿ ಉಳಿದು ಹೋದವರು. ತಾಯಿ ಕೊಟ್ಟ ಮುತ್ತಿನಲ್ಲೂ , ತಂದೆ ಕೊಟ್ಟ ಪೆಟ್ಟಿನಲ್ಲೂ ಪಾಲುದಾರರಾಗಿದ್ದವರು. ಅವಳ ಮದುವೆಯ ದಿನ ನಡೆದ ಹೋಮಕ್ಕೆ, ಹಿಡಿ ತುಂಬ ಮಲ್ಲಿಗೆ ಮೊಗ್ಗಿನಂತಹ ಅರಳು ಸುರಿಯುವುದರಿಂದ ಹಿಡಿದು, ಮೊದಲ ಮಗುವಿನ ತೊಟ್ಟಿಲನ್ನು ತಲೆಯ ಮೇಲೆ ಹೊತ್ತು ತಂದಿಟ್ಟವರು! ಅಮ್ಮನ ಮೆತ್ತನೆಯ ಬಸಿರಿನ ತೆಕ್ಕೆಯಲ್ಲಿ ನಮ್ಮಂತೆಯೇ ಹಾಯಾಗಿ ಮಲಗಿದ್ದು, ಅವಳ ಬೆಚ್ಚನೆಯ ಉಸಿರಿಗೆ ಪುಳಕಗೊಂಡು, ನಮ್ಮ ಹಾಗೆಯೇ ಫಕ್ಕೆಂದು ನಕ್ಕವರು. ಅದಕ್ಕೇ ಅವರು ಒಂದೇ ಉಸಿರು, ಬಸಿರುಹಂಚಿಕೊಂಡ ‘ಒಡಹುಟ್ಟಿದವರು!’

Anna Baralilla Kariyaaka..... (A Painting by Raja Ravi Verma)ಇಂತಹ ಮುದ್ದಿನ ಅಣ್ಣ-ತಮ್ಮಂದಿರನ್ನು ಹೊರತುಪಡಿಸಿದ ಬಾಲ್ಯದ ನೆನಪುಗಳು, ಪರಿಪೂರ್ಣವಾಗಿರುವುದಾದರೂ ಹೇಗೆ ಸಾಧ್ಯ? ‘ಮನೆ ಮನೆ ಮುದ್ದು ಮನೆ’ ಎಂಬ ಆ ಸುಂದರ ಸವಿನೆನಪಿನ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳುವ ಇತರ ಚಿತ್ರಗಳಾವುವು ಗೊತ್ತೇ? ಇದಕ್ಕೆ ಉತ್ತರ ಕವಿ ಲಕ್ಷ್ಮೀನಾರಾಯಣಭಟ್ಟರ ಕವಿತೆಯ ಈ ಸಾಲುಗಳಲ್ಲಿದೆ;

ಅಪ್ಪನು ಬೆಳೆಸಿದ ಮಲ್ಲಿಗೆ ಚಪ್ಪರ ಹೂವನು ಚೆಲ್ಲಿತ್ತೇ

ಅಮ್ಮನು ಬಡಿಸಿದ ಊಟದ ರುಚಿಯು ಘಮ್ಮನೆ ಕಾಡಿತ್ತೇ

ಅಣ್ಣನ ಕೀಟಲೆ, ತಮ್ಮನ ಕಾಟಕೆ ಬಣ್ಣದ ಬೆಳಕಿತ್ತೇ!

ಎಂತಾ ಹದವಿತ್ತೇ? ಹರಯಕೆ ಏನೋ ಮುದವಿತ್ತೇ?

ನಮ್ಮ ಜನಪದ ಕವಿಗಳಂತೂ ಈ ಅನುಪಮ ಸೋದರ ವಾತ್ಸಲ್ಯವನ್ನು ಸವಿ ಸವಿಯಾದ ನುಡಿಗಳಲ್ಲಿ ಕಣ್ಣ ಮುಂದೆ ನಿಲ್ಲಿಸಿದ್ದಾರೆ. ಸಂಸಾರ ಬಂಧನದಲ್ಲಿ ಸಿಕ್ಕು, ಬಳಲಿ ಬೆಂಡಾಗಿ ಹೋದ ತಂಗಿ, ಎನಗೆ ಯಾರಿಲ್ಲಾಂತ ಮನದಾಗೆ ಮರುಗಿದರ ನೆನದಹಾಗೆ ಬಂದಿಳಿಯುವವನೂ ಅವನೇ. ‘ಕುದುರೇನ ತಂದಿವ್ನಿ, ಜೀನವ ಬಿಗಿದಿವ್ನಿ, ಬರಬೇಕು ತಂಗಿ ಮದುವೇಗೆ......’ ಎಂದು ಅಕ್ಕರೆ ತುಂಬಿದ ಸಕ್ಕರೆ ದನಿಯಲ್ಲಿ, ಆರ್ತನಾಗಿ ಕರೆಯುವ ಆಪ್ತಬಂಧುವೂ ಅವನೇ. ಅವನು ಅಣ್ಣ !

‘ಸರದಾರ ಬರುವಾಗ ಸುರಿದಾವು ಮಲ್ಲಿಗೆ... ದೊರೆ ನನ್ನ ತಮ್ಮ ಬರುವಾಗ, ಯಾಲಕ್ಕಿ ಗೊನೆ ಬಾಗಿ ಹಾಲ ಸುರಿದಾವ...’ ಎಂದು ಸೋದರಿ, ಅಭಿಮಾನದಿಂದ ನೆನೆಸಿಕೊಳ್ಳುವುದು ಅವನನ್ನೇ. ಅವನು, ಅಕ್ಕನ ಮಮತೆಯ ಮಡಿಲಲ್ಲಿಯೇ ಆಡಿ ಬೆಳೆದು, ಈಗ ಅಷ್ಟೆತ್ತರ ಬೆಳೆದು, ದೊಡ್ದವನಾಗಿರುವ ಪುಟ್ಟ ತಮ್ಮ !

ಅದೇಕೋ ಏನೋ, ನಮ್ಮ ಜನಪದರಿಗೆ ಅಣ್ಣನ ಮೇಲಿರುವ ಮನೆಮಗನಂತಹ ಮಮತೆ, ಅಣ್ಣನ ಹೆಂಡತಿ ಅತ್ತಿಗೆಯ ಮೇಲಿಲ್ಲ ಎಂದೇ ಹೇಳಬಹುದು. ಯಾರೋ ಒಬ್ಬಳು ಅತ್ತಿಗೆ ಮಾಡಿದ ತಪ್ಪಿಗೆ, ಇಡೀ ಅತ್ತಿಗೆಯರ ಕುಲಕ್ಕೇ ಇಂತಹದೊಂದು ಕಳಂಕ ಹೇಗೆ ಬಂದಿತೋ? ‘ಅತ್ತಿಗೆ ತವರಲ್ಲ , ಹಿತ್ತಾಳೆ ನಗವಲ್ಲ , ಮನೆಗೆ ಬಂದಳಿಯ ಮಗನಲ್ಲ’ ಎಂಬ ಅವರ ಗಟ್ಟಿ ನಿಲುವು ಯಾವ ಕಾರಣಕ್ಕೂ ಬದಲಾಗುವುದಿಲ್ಲ. ಬಹುಪಾಲು ಜನಪದ ಹಾಡುಗಳಲ್ಲಿ ತನ್ನ ಮದುವೆಗೆ ಮೊದಲು, ತಂಗಿಗಾಗಿ ಜೀವವನ್ನೇ ಕೊಡಲು ತಯಾರಿರುತ್ತಿದ್ದ ಅಣ್ಣ , ಮದುವೆಯಾದ ಮೇಲೆ ಮಾತ್ರ ಪೂರ್ತಿ ಬದಲಾಯಿಸಿ ಬಿಡುತ್ತಾನೆ. ಅದೂ ಕೂಡ ಎಷ್ಟರಮಟ್ಟಿಗೆಂದರೆ, ತನ್ನ ಮನೆ ಬಾಗಿಲಿನಲ್ಲಿ ಬಂದು ನಿಂತಿರುವ ಪ್ರೀತಿಯ ತಂಗಿಯನ್ನು ‘ಒಳಗೆ ಬಾರವ್ವಾ’ ಎಂದು ಕೂಡ ಕರೆಯುವ ಧೈರ್ಯವಿಲ್ಲದೆ, ‘ಕೋಟೆಯ ನೋಡಿ ತಿರುಗವ್ವಾ...’ ಎಂದು ನಿರ್ದಯೆಯಿಂದ ಹೇಳಿಬಿಡುವಷ್ಟು!

ಅದೇ ಊರಿನಲ್ಲಿ ಹುಟ್ಟಿ, ಬೆಳೆದಿರುವ ತಂಗಿ, ಅಲ್ಲೇ ಇರುವ ಕೋಟೆ, ಕೊತ್ತಲವನ್ನು ಈಗ ಈ ಅಣ್ಣ ಹೇಳಿದನೆಂದು ಹೊಸದಾಗಿ ನೋಡಬೇಕಾಗಿದೆಯೇ? ಅವಳು ಅಳುತ್ತಲೇ ಉತ್ತರಿಸುತ್ತಾಳೆ;

ಕೋಟೆಯ ನೋಡಿದೆ ಕೊತ್ತಲ ನೋಡಿದೆ

ನೋಡಿದೆ ಅಣ್ಣನ ಭುಜಬಲವ

ಮಡದಿಗಂಜುವನೇ ನನ್ನ ಅಣ್ಣಯ್ಯಾ..

‘ನೀರಿಲ್ಲದ ಕೆರೆಗೆ ಕರು ಬಂದಂತೆ’ ತಾಯಿಲ್ಲದ ತವರಿಗೆ ತಾನು ಯಾಕಾದರೂ ಬಂದೆನೋ ಎಂದು ತನ್ನನ್ನು ತಾನೇ ನಿಂದಿಸಿಕೊಳ್ಳುವ ತಂಗಿ, ಅಣ್ಣನಿಗೊಂದು ಪ್ರಶ್ನೆಯನ್ನು ಕೇಳುತ್ತಾಳೆ;

ಮೂಗುತಿ ಮುರಿದರೆ ಮರಳಿ ಮಾಡಿಸಬಹುದು

ಮಡದಿ ಸತ್ತರೆ ಮತ್ತೆ ತರಬಹುದು

ಒಡಹುಟ್ಟಿದವರನೆಲ್ಲಿ ತಂದೀಯಾ?

ಈ ಸೋದರ-ಸೋದರಿಯರ ಅನುಬಂಧವನ್ನು, ಬೇರೆಲ್ಲರಿಗಿಂತ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡವರೆಂದರೆ ನಮ್ಮ ಸಿನಿಮಾ ಮಂದಿ! ಸೆಂಟಿಮೆಂಟ್‌ ಪ್ರಧಾನವಾಗಿರುವ ಸಿನಿಮಾಗಳಿಗೆ ಇದಕ್ಕಿಂತ ಹೇಳಿಮಾಡಿಸಿದ ವಸ್ತು ಬೇರೊಂದಿರಲಾರದು. ಈ ಭ್ರಾತೃತ್ವದ ಎಳೆಯಾಂದನ್ನೇ ಆಧಾರವಾಗಿ ಹಿಡಿದುಕೊಂಡು, ಈವರೆಗೂ ಕನ್ನಡವೂ ಸೇರಿದಂತೆ, ಇತರ ಭಾಷೆಗಳಲ್ಲೂ ಬಂದಿರುವ ಚಲನಚಿತ್ರಗಳಿಗೆ ಲೆಕ್ಕವೇ ಇಲ್ಲ. ಇಂತಹ ಚಿತ್ರಗಳ ಹಾಡುಗಳೋ ಒಂದಕ್ಕಿಂತ ಒಂದು ಬಂಗಾರ! ಕೇಳುತ್ತಿದ್ದರೆ ಮನಸ್ಸಿನ ಮೃದು-ಮಧುರ ಭಾವನೆಗಳಲ್ಲಿ ಮಿಂದು ಮುದ್ದೆಯಾದ ಹಾಗೆ. ಅದರಲ್ಲೂ ಕಿಶೋರ್‌ಕುಮಾರ್‌ ತನ್ನ ಮುಪ್ಪಿಲ್ಲದ, ಸಾವಿಲ್ಲದ, ಸಿರಿಕಂಠದಲ್ಲಿ ಹಾಡಿರುವ ‘ಫೂಲೋಂಕಾ ತಾರೋಂಕಾ’ ಹಾಡು ನಂಬರ್‌ ಒನ್‌!

ಕನ್ನಡದಲ್ಲೂ ಅಷ್ಟೆ ,‘ಅಣ್ಣಾ...ನಿನ್ನ ಸೋದರಿಯಣ್ಣಾ...’ ಎಂಬ ಒಳ್ಳೆಯ ಹಾಡಿರುವ ಬಹಳ ಹಳೆಯದಾದ ‘ಒಂದೇ ಬಳ್ಳಿಯ ಹೂಗಳು’ ಚಿತ್ರದಿಂದ, ತೀರಾ ಇತ್ತೀಚೆಗಿನ ತವರಿಗೆ ಬಾ ತಂಗಿ, ತವರಿನ ತೊಟ್ಟಿಲು, ಗೌಡ್ರು ವರೆಗೆ ಎಲ್ಲವೂ ಕಣ್ಣೀರಕೋಡಿ ಲಾಂಛನದ ನಿರ್ಮಾಣಗಳೇ. ತೆರೆಯ ಮೇಲೆ ಅಣ್ಣ -ತಂಗಿಯರು ಪಡಬಾರದ ಪಾಡು ಪಡುತ್ತಾ , ಗೋಳಾಡುತ್ತಿದ್ದರೆ, ಇತ್ತ ಅದನ್ನು ನೋಡುತ್ತಿರುವ ಹೆಂಗರುಳ ಪ್ರೇಕ್ಷಕರ ಕಣ್ಣಿನಿಂದ ಕಂಬನಿ ಧಾರೆ. ಅತ್ತ ನಿರ್ಮಾಪಕನ ಜೇಬಿಗೂ ಧನ ಕನಕದ ಧಾರೆ!

ಈ ಅನುಪಮ ವಾತ್ಸಲ್ಯವನ್ನು ಒಂದು ಸುಂದರ ಆಚರಣೆಗಳ ಅಡಿಯಲ್ಲಿ ತಂದ ಹಬ್ಬಗಳೆಂದರೆ ರಕ್ಷಾಬಂಧನ ಮತ್ತು ನಾಗರಪಂಚಮಿ. ‘ತಣ್ಣಗಿರಲಿ ಅಣ್ಣ ತಮ್ಮಂದಿರ ಬೆನ್ನು-ಉದರ’ ಎಂಬ ಸೋದರಿಯರ ತುಂಬು ಹೃದಯದ ಹಾರೈಕೆಯನ್ನು ಅಕ್ಷರಶಃ ನಿಜವಾಗಿಸುವ ಹಬ್ಬ, ನಾಗರ ಪಂಚಮಿ! ಹೇಗೆಂದರೆ ಹಬ್ಬದಂದು ಸೋದರರ ಬೆನ್ನನ್ನು ತಣ್ಣನೆಯ ಹಾಲು ಮತ್ತು ಅದಕ್ಕಿಂತ ತಂಪಾಗಿರುವ ಹುತ್ತದ ಮಣ್ಣಿನಿಂದ ಪೂಜಿಸಲಾಗುತ್ತದೆ. ಅಣ್ಣ-ತಮ್ಮಂದಿರ ಕೈಗೆ ರಾಕಿ ಕಟ್ಟಿ ಶುಭ ಹಾರೈಸುವ ಪದ್ಧತಿಯಿದೆ. ಈಗೀಗ ಇದು ಭಾಷೆ, ಪ್ರಾಂತ್ಯಗಳ ಹಂಗು ತೊರೆದು ಎಲ್ಲೆಡೆಯೂ ಆವರಿಸಿಕೊಂಡಿದ್ದರೂ, ಮೂಲತಃ ಉತ್ತರಭಾರತದ್ದು. ಇದು ಅವತ್ತಿನಿಂದ ಇವತ್ತಿನವರೆಗೂ ಕಾಲೇಜ್‌ ಹುಡುಗಿಯರಿಗೊಂದು ವರದಾನವಾಗಿರುವ ಆಚರಣೆ ಕೂಡ. ಹಿಂದೆ ಮುಂದೆ ಸುತ್ತಿ ಮುಜುಗರ ಹುಟ್ಟಿಸುವ ಪುಂಡ ಹುಡುಗನನ್ನು ಹಿಡಿದು, ಅವನ ಕೈಗೊಂದು ರಾಕಿ ಬಿಗಿದು, ‘ನೀನೇ ನನ್ನ ಅಣ್ಣ’ ಎಂದು ಬಿಟ್ಟರೆ ಅಲ್ಲಿಗೆ ಮುಗಿಯಿತು ಅವನ ಕಥೆ! ಅಲ್ಲಿಂದ ಮುಂದೆ ಅವನೊಬ್ಬ ಹಲ್ಲು ಕಿತ್ತ ಹಾವು!

ಹಬ್ಬಗಳು ಅವತ್ತೂ ಬರುತ್ತಿದ್ದವು, ಇವತ್ತೂ ಬರುತ್ತಿವೆ. ಕೊರತೆಯಾಗಿರುವುದೆಲ್ಲ ಅಂದಿನ ಸಡಗರ, ಸಂಭ್ರಮಗಳಿಗೆ ಮಾತ್ರ. ಬದಲಿಗೆ ಒಂದೊಂದು ಹಬ್ಬವನ್ನೂ, ಸಂಪ್ರದಾಯದಂತೆಯೇ ಹಿಂಬಾಲಿಸಿ ಬರುವ ಅವವೇ ನೆನಪುಗಳು. ಕಲ್ಲಿನಂದದಿ ಬಿದ್ದು, ತಿಳಿಯಾದ ಎದೆಗೊಳವ ರಾಡಿಗೊಳಿಸಲು ಬರುವ ಹಳೆಯ ನೆನಪುಗಳಿಗೆ, ಈ ಹಬ್ಬಗಳು ಒಂದು ನೆಪ ಅಷ್ಟೆ. ಅವು ಕಾಲದ ಹುಚ್ಚುಹೊಳೆಯಲ್ಲಿ ಸಿಕ್ಕಿಯೂ ಮುಕ್ಕಾಗದ ಚಿತ್ರಗಳು, ಕಂಬನಿಯ ಉಪ್ಪು ಬೆರೆತ ನೆನಪಿನ ತುತ್ತುಗಳು, ಸಪ್ತ ಸಾಗರದಾಚೆಯ ಸುಪ್ತ ನೆನಪುಗಳು!

ಭೂಖಂಡಗಳನ್ನು ಹಾರಿ, ಅಣ್ಣನ ವಿಶಾಲವಾದ ವಾತ್ಸಲ್ಯದ ಪರಿಧಿಯನ್ನೂ ಮೀರಿ, ಬಹುದೂರ ಬಂದುಬಿಟ್ಟಿರುವ ನಮ್ಮಲ್ಲಿಗೆ, ‘ಚಿನ್ನದ ಹರಿಗೋಲಿಗೆ ರನ್ನದ ಹುಟ್ಟು ಹಾಕಿ’ ಜೋಕೆಯಲ್ಲಿ ಕರೆದೊಯ್ಯುವ ಅಣ್ಣ ಬಂದಾನಾದರೂ ತಾನೇ ಹೇಗೆ?

ಅದಕ್ಕೇ ಇರಬೇಕು. ಈ ಬಾರಿ ಪಂಚಮಿ ಹಬ್ಬಕ್ಕೆ ಕರೆಯಲು ಅಣ್ಣ ಬರಲೇ ಇಲ್ಲ !

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more