• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆನಕ, ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ !

By Super
|

ಆಗಾಗ ದಿನಪತ್ರಿಕೆಗಳಲ್ಲಿ, ದೂರದರ್ಶನಗಳಲ್ಲಿ ಎರಡು ಬಾಯಿ, ಮೂರು ಕಣ್ಣು ಎರಡು ತಲೆ....ಹೀಗೆಲ್ಲ ಅನೇಕ ರೀತಿಯ ದೇಹ ವೈಚಿತ್ರ್ಯಗಳೊಡನೆ ಹುಟ್ಟಿರುವ ಶಿಶುಗಳ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ಹಾಗೆಯೇ ನಮ್ಮ ವೈದ್ಯಕೀಯ ಪರಿಭಾಷೆಯಲ್ಲಿಯೇ ಹೇಳುವುದಾದರೆ, ಇವನೂ ಕೂಡ ಅಬ್‌ನಾರ್ಮಲ್‌ ಬೇಬಿಯೇ! ಸ್ಫುರದ್ರೂಪವಿರುವುದು ಬೇಡ, ಎಲ್ಲರಂತೆ ಸಹಜ ರೂಪ ಕೂಡ ಇಲ್ಲದ, ಬಹು ಅಪರೂಪದ ರೂಪ ಇವನದು. ಇವನಾರೆಂದು ನಿಮಗೆ ತಿಳಿದಿರಬಹುದಲ್ಲವೇ? ಇನ್ನೂ ಗುರುತು ಹತ್ತಲಿಲ್ಲವೇ? ಸರಿ ಬನ್ನಿ, ಈ ಬಾಲಕನಿಗೆ ಸಂಬಂಧಪಟ್ಟವರನ್ನೇ ಕೇಳಿದರಾಯಿತು - ‘ನಮ್ಮಮ್ಮ ಶಾರದೆ, ಉಮಾ ಮಹೇಶ್ವರಿ, ನಿಮ್ಮೊಳಗಿಹನಾರಮ್ಮ?'

ಈಗ ಉತ್ತರ ಸಿಕ್ಕಿರಬಹುದು. ಅವನೇ ಗಣಪ, ಗಜಾನನ, ವಿಘ್ನನಿವಾರಕ, ವಿನಾಯಕ! ನಮ್ಮೆಲ್ಲರ ಹೆಮ್ಮೆಯ ಗಣನಾಥ! ಇವನು ಒಂದು ತರಹ ಯೂನಿವರ್ಸಲ್‌ ದೇವರು! ಇತರ ದೇವಾನುದೇವತೆಗಳ ಹೆಸರೆತ್ತಿದೊಡನೆ ಹರಳೆಣ್ಣೆಯಂತೆ ಕೈಗಂಟಿಕೊಳ್ಳುವ ಜಾತಿಯ ಜಿಡ್ಡು ಗಣೇಶನಿಗೆ ಅನ್ವಯಿಸುವುದಿಲ್ಲ. ಗಣೇಶನ ಹೆಸರು ಕೇಳದವರಿಲ್ಲ. ಅವನು ಎಲ್ಲಾ ವರ್ಗದ, ಪ್ರಾಂತ್ಯದ, ಭಾಷೆಯ ಜನರಿಗೂ ಬಹಳ ಬೇಕಾದವನು. ಆದ್ದರಿಂದ ಇವನನ್ನು ವಿಶ್ವಸುಂದರ ಪಟ್ಟಕ್ಕೆ ಆಯ್ಕೆ ಮಾಡದಿದ್ದರೂ, ವಿಶ್ವಪ್ರಿಯ ಅನ್ನಲು ಅಡ್ಡಿಯಿಲ್ಲ. ವಿಶ್ವಾದ್ಯಂತ, ವಿವಿಧ ರೂಪಗಳಲ್ಲಿ ವಿರಾಜಿಸುತ್ತಿರುವ ವಿಘ್ನೕಶ, ನಮ್ಮಂತಹ ವಿಶ್ವಮಾನವರನ್ನು ಹರಸಲು ಸದಾ ಸಿದ್ಧನಾಗಿಯೇ ನಿಂತಿರುವ ವಿಶ್ವದೈವ!

ಗಣೇಶ ಬೇರೆ ದೇವರುಗಳಂತೆ ಭಾರತವೊಂದನ್ನೇ ನಂಬಿ ಕೂತ ಸಂಪ್ರದಾಯವಾದಿಯಲ್ಲ. ಚೀನಾ, ಹವಾಯಿ, ಟಿಬೆಟ್‌, ಬರ್ಮಾ, ಮಂಗೋಲಿಯ, ಕಾಂಬೋಡಿಯಾ, ಜಪಾನ್‌, ನೇಪಾಳ, ಶ್ರೀಲಂಕಾ, ಆಫ್ರಿಕಾ.... ಮುಂತಾದ ದೇಶಗಳಲ್ಲೂ ಬೇರೆ ಬೇರೆ ಹೆಸರಿನಿಂದ ಇವನಿಗೆ ಪೂಜೆ ಸಲ್ಲುತ್ತಿದೆ. ನಮ್ಮಲ್ಲಿ ಇವನು ಗಜಮುಖನಾದರೆ, ಚೀನಾದಲ್ಲಿ ಅವರಿಗೆ ಬಹು ಪ್ರಿಯವಾದ ಡ್ರಾಗನ್‌ ಮುಖ! ಇರಾನಿನಲ್ಲಿ ನಡೆದ ಉತ್ಖನನದಲ್ಲಿ , ಗಣೇಶ ವಿಗ್ರಹವೊಂದು ಪತ್ತೆಯಾಗಿದ್ದು, ಅದೀಗ ಫ್ರಾನ್ಸಿನ ಸಂಗ್ರಹಾಲಯದಲ್ಲಿ ಸಂರಕ್ಷಿತ. ಭಾರತದ ಗಣೇಶನಿಗೂ, ಇತರೆಡೆಯ ಗಣೇಶನಿಗೂ, ರೂಪ, ಆಕಾರ, ದೇಹ ಲಕ್ಷಣದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ, ಸುಮಾರಾಗಿ ಎಲ್ಲೆಡೆಯೂ ಎದ್ದು ಕಾಣುವ ಸಮಾನ ಅಂಶವೆಂದರೆ ಗಣೇಶನ ಡೊಳ್ಳು ಹೊಟ್ಟೆ. ಭಾರತೀಯರು ನೀಡಿದ ಮೋದಕವನ್ನು ಮೆಲ್ಲುವಷ್ಟೇ ಪ್ರೀತಿಯಿಂದ, ವಿದೇಶೀಯರು ಕೊಟ್ಟ ಕೇಕು, ಬಿಸ್ಕತ್ತುಗಳನ್ನೂ ಸ್ವಾಹಾ ಮಾಡುವ ಈ ವಾತಾಪಿ ಗಣಪತಿ ದೊಡ್ಡಹೊಟ್ಟೆಯವನು ಎಂಬ ಬಗ್ಗೆ ಯಾವ ದೇಶದವರಿಗಾದರೂ ಅನುಮಾನ ಇರುವುದು ಹೇಗೆ ಸಾಧ್ಯ? ಒಟ್ಟಿನಲ್ಲಿ ಜಗದೆಲ್ಲ ಜನರ ಹೃದಯಗಳಲ್ಲೂ ಇರುವ ನಂಬಿಕೆಯೆಂದರೆ, ಗಣೇಶನೆಂದರೆ ಆನಂದದಾಯಕ, ಆನಂದಮಯ!

ಮಕ್ಕಳಿಗಂತೂ ಬಹಳ ಇಷ್ಟದ ದೇವರೆಂದರೆ ಗಣೇಶನೇ. ಅವನು ಅವರ ಪಾಲಿಗೆ ಆಡಲು ಬಂದ ಗೆಳೆಯ. ‘ಗಣೇಶ ಬಂದ, ಕಾಯಿ ಕಡುಬು ತಿಂದ....' ಎಂದು ತೊದಲು ನುಡಿಗಳಲ್ಲಿ ಹಾಡದ ಮಕ್ಕಳು ವಿರಳ. ಮನೆಯ ಹಿರಿಯರು ಸ್ವಲ್ಪ ಧಾರ್ಮಿಕ ಮನೋಭಾವದವರಾದರೆ, ಆ ಮನೆಯ ಮಗುವು ಕಲಿಯುವ ಮೊದಲ ಶ್ಲೋಕಗಳ ಪಟ್ಟಿಯಲ್ಲಿ ‘ಬೆನಕ ಬೆನಕ ಏಕದಂತ....' ಇರಲೇಬೇಕು. ಈಗಿನ ಹೈಟೆಕ್‌ ಯುಗದಲ್ಲಿ ಹುಟ್ಟಿದ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ , ಆದರೆ ನಾವು ಓದುತ್ತಿದ್ದ ದಿನಗಳಲ್ಲಿ , ಪರೀಕ್ಷೆಗೆ ಹೊರಟು ನಿಂತಾಗ ಬಹುಮುಖ್ಯವಾದ ಪ್ರವೇಶಪತ್ರವನ್ನು ಬೇಕಾದರೂ ಮರೆತಿರುತ್ತಿದ್ದರು. ಆದರೆ ಗಣೇಶನಿಗೊಂದು ಡೈವ್‌ ಹೊಡೆದು, ‘ಗುರೂ, ಇದೊಂದು ಸಲ ಹೇಗಾದರೂ ಮಾಡಿ ಮುಂದೆ ದಾಟಿಸಿಬಿಡಪ್ಪ , ಮುಂದಿನ ಸಲ ನಿನ್ನ ಸಹಾಯ ಕೇಳದಂತೆ ನಾವೇ ಓದಿಕೊಂಡು, ಪಾಸಾಗುತ್ತೇವೆ' ಎಂದು ವಿಶೇಷ ಭಕ್ತಿಯಿಂದ ಕೇಳಿಕೊಳ್ಳಲು ಮಾತ್ರ ಮರೆಯುತ್ತಿರಲಿಲ್ಲ.

ಇಂತಹ ಕೋರಿಕೆಗಳಿಗೆಲ್ಲ ಮಣಿದು, ಕಡುಬು, ಚಕ್ಕುಲಿಹಾರದ ಹರಕೆಯ ಆಮಿಷಕ್ಕೆ ಆಸೆಪಟ್ಟು, ಪರಮ ದಡ್ಡರನ್ನೆಲ್ಲಾ ಪಾಸು ಮಾಡಿಸಿಬಿಡಲು, ಗಣೇಶನೇನು ಲಂಚ ತಿಂದು, ಕೇಳಿದಷ್ಟು ಮಾರ್ಕುಗಳನ್ನು ತುಂಬಿಸಿಕೊಡುವ ಭ್ರಷ್ಟ ಅಧಿಕಾರಿಯೇ ? ಓದದೆ, ಬರೆಯದೆ, ಕ್ಲಾಸುಗಳಿಗೆ ಕೂಡ ಸರಿಯಾಗಿ ಹಾಜರಾಗದೆ, ಈಗ ಹುಸಿ ದೈವಭಕ್ತಿ ತೋರುತ್ತಿರುವ ಈ ಅಲಂಕಾರ ವಿದ್ಯಾರ್ಥಿಗಳ ಹಣೆಬರಹವೇನೆಂದು ಅವನಿಗೆ ಗೊತ್ತಿಲ್ಲವೇ? ಇದ್ದುದ್ದರಲ್ಲೇ ಸ್ವಲ್ಪ ಯೋಗ್ಯರೆನಿಸಿದವರ ಅರ್ಜಿಗಳನ್ನು ಮಾತ್ರ ಕೈಗೆತ್ತಿಕೊಂಡು, ಇನ್ನುಳಿದ ಮಂಕುಸಾಮ್ರಾಣಿಗಳು ಇಪ್ಪತ್ತೊಂದಲ್ಲ , ಎಪ್ಪತ್ತೊಂದು ನಮಸ್ಕಾರ ಹಾಕುತ್ತೇನೆಂದರೂ ಜಗ್ಗದೆ, ನೂರೊಂದು ತೆಂಗಿನಕಾಯಿಗಳಿಗೂ ಬಗ್ಗದೆ, ಅವರನ್ನೆಲ್ಲಾ ಅದದೇ ತರಗತಿಗಳಲ್ಲಿ ಒಂದೆರಡು ವರ್ಷ ಕೂಡಿಸುವಂತೆ ಆದೇಶ ಹೊರಡಿಸಿ, ತನ್ನ ವಾಹನವಾದ ಇಲಿಯನ್ನು ಹೊರಡಿಸಿಕೊಂಡು ಅದೆಲ್ಲಿಗೋ ಸಂಚಾರ ಹೊರಟುಬಿಡುತ್ತಿದ್ದ.

ಹೀಗೆ ನಮ್ಮ ಬದುಕಿನ ಭಾಗವೇ ಆಗಿಹೋಗಿರುವ ಗಣೇಶನನ್ನು, ಅಮೆರಿಕಾದ ಪ್ರಖ್ಯಾತ ವಾಣಿಜ್ಯ ಸಂಸ್ಥೆಯಾಂದು ಚಪ್ಪಲಿಗಳ ಮೇಲೆ ಅಚ್ಚುಹಾಕಿಸಿ, ಮಾರಾಟಕ್ಕೂ ಇಟ್ಟುಬಿಟ್ಟಿತ್ತು. ನಂತರ ಪ್ರಪಂಚದಾದ್ಯಂತ ಇರುವ ಗಣೇಶ ಭಕ್ತರಿಂದ ತಪರಾಕಿ ತಟ್ಟಿಸಿಕೊಂಡು, ಕ್ಷಮೆ ಯಾಚಿಸಿದ ಘಟನೆ ಈಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ. ತಮ್ಮದೇ ರಾಷ್ಟ್ರಧ್ವಜವನ್ನೂ ಕೂಡ ಹಾಸಿಗೆ, ಹೊದಿಕೆ, ಚಪ್ಪಲಿಗಳಿರಲಿ, ಒಳಉಡುಪುಗಳ ಮೇಲೂ ಮುದ್ರಿಸಿ, ಧರಿಸಿ, ಆನಂದಪಡುವ ಈ ಅಮೆರಿಕನ್ನರ ಮನಸ್ಥಿತಿಯನ್ನಾದರೂ ಒಂದು ನೆಲೆಗಟ್ಟಿನಲ್ಲಿ ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ನಮ್ಮ ದೇಶದ ದೊಡ್ಡ ಕಲಾವಿದರಾದ ಎಮ್‌. ಎಫ್‌. ಹುಸೇನರು ವಿದ್ಯಾಧಿದೇವತೆಯಾದ ಸರಸ್ವತಿಯನ್ನು ಅಪಮಾನಕಾರಿಯಾಗಿ ಚಿತ್ರಿಸಿ, ಅನೇಕರ ನಂಬಿಕೆಗಳಿಗೆ ನೋವುಂಟುಮಾಡಿ, ಅನಗತ್ಯ ವಿವಾದಗಳಿಗೆ ಕಾರಣವಾಗಿದ್ದ ಸಂಗತಿ ಮಾತ್ರ ಬಡಪಟ್ಟಿಗೆ ಅರ್ಥವಾಗುವುದಲ್ಲ. ಇಂತಹ ವಿವಾದಗಳ ಹಿಂದಿರುವ ಸತ್ಯಾಸತ್ಯತೆಗಳು ಏನೇ ಇದ್ದರೂ, ಆಗ ಜನರ ಮನಸ್ಸುಗಳು ಸಮೂಹಸನ್ನಿಗೊಳಗಾದಂತೆ ವರ್ತಿಸುವುದು ಮಾತ್ರ ನಿಜ.

ಹುಸೇನ್‌ ಅವರು ಹಿರಿಯರು. ದೇಶವೊಂದಕ್ಕೆ ಹೆಮ್ಮೆ ತರುವಂತಹ ಮಹಾನ್‌ ಕಲಾವಿದರು. ಆ ಬಗ್ಗೆ ಯಾರೊಬ್ಬರದೂ ಆಕ್ಷೇಪಣೆ ಇರಲಾರದು. ಆದರೆ ಅವರು ತಮ್ಮ ಕುಂಚಕ್ಕೆ ವಸ್ತುವಾಗಿಸಲು, ಈ ಪ್ರಕೃತಿಯಲ್ಲಿರುವ ಹೂವು, ಗಿಡ, ಬಳ್ಳಿ, ಪ್ರಾಣಿ, ಪಕ್ಷಿ, ಜಲಪಾತ...ಮುಂತಾದ ವಿಷಯ ವೈವಿಧ್ಯಗಳೇನಾದರೂ ಕಡಿಮೆಯಿತ್ತಾ? ಅಥವಾ ಚಿತ್ರಿಸಲು ಹೆಣ್ಣೇ ಆಗಬೇಕೆಂದಿದ್ದಲ್ಲಿ , ಪಿತಾಮಹನಷ್ಟು ವಯಸ್ಸಾಗಿರುವ ಇವರ ಮುಂದೆ ಬೆತ್ತಲೆ ನಿಲ್ಲಲು ತುದಿಗಾಲಲ್ಲಿ ನಿಂತಿರುವ ರೂಪದರ್ಶಿಯರಿಗಾದರೂ ಕೊರತೆ ಇತ್ತಾ ? ಎಲ್ಲವನ್ನೂ ಬಿಟ್ಟು ಇವರಿಗೆ ವಿಕೃತವಾಗಿ ಚಿತ್ರಿಸಲು ನಮ್ಮ ತಾಯಿ ಶಾರದೆ, ಲೋಕಪೂಜಿತೆಯೇ ಆಗಬೇಕಾಗಿತ್ತಾ ?

ಇನ್ನೊಂದು ವಿಚಿತ್ರವನ್ನು ಇಲ್ಲಿ ನೀವು ಗಮನಿಸಿದ್ದೀರಾ? ಇಂತಹ ಸೂಕ್ಷ್ಮ ವಿಚಾರಗಳು ಎದುರಾದಾಗ, ಗಟ್ಟಿದನಿಯೆತ್ತುವ ಸಾಮರ್ಥ್ಯವಿರುವ ವಿಚಾರವಾದಿಗಳೆನಿಸಿಕೊಂಡವರಾಗಲೀ, ಹಿರಿಯ ಸಾಹಿತಿಗಳಾಗಲೀ, ರಾಜಕೀಯ ನಾಯಕರಾಗಲೀ ತುಟಿ ಬಿಚ್ಚುವುದಿಲ್ಲ. ಎಲ್ಲರೂ ಸರಿಸಮಾನರು, ಕೆಲವರು ಮಾತ್ರ ಹೆಚ್ಚು ಸಮಾನರು ಎನ್ನುವ ಈ ವಿಚಾರವಂತರ ದ್ವಂದ್ವಗಳು ನಮ್ಮನಿಮ್ಮಂತರ ಜನಸಾಮಾನ್ಯರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ. ಇದರಲ್ಲಿ ಅವರದ್ದೂ ತಪ್ಪಿಲ್ಲವೆನ್ನಿ. ಇಂತಹ ನಾಜೂಕಿನ ವಿಷಯಗಳ ಬಗ್ಗೆ ಯಾರಾದರೂ ಉಸಿರೆತ್ತಿದ್ದೇ ಆದಲ್ಲಿ , ಅವರನ್ನು ಮೂಲಭೂತವಾದಿಯೆಂದೋ, ಕೋಮುವಾದಿಯೆಂದೋ ಹಣೆಪಟ್ಟಿ ಹಚ್ಚಿ ಮೂಲೆಗೆ ಒತ್ತಿಬಿಡುವ ಅಪಾಯವನ್ನು ಕೂಡ ಕಡೆಗಣಿಸುವಂತಿಲ್ಲ.

ಆದರೂ ಬೇಕಾದಾಗ ಮಾತ್ರ ಬೇಕಾದಷ್ಟು ಮಾತನಾಡುವ, ಬೇಡವಾದಾಗ ಕಂಡರೂ ಕಾಣದಂತೆಯೇ ಸುಮ್ಮನಿದ್ದುಬಿಡುವ, ನಮ್ಮ ಈ ಚಾಳಿಯನ್ನು ಒಂದು ರೀತಿಯ ಬೌದ್ಧಿಕ ಭಂಡತನವೆನ್ನದೆ ನಿರ್ವಾಹವಿಲ್ಲ. ಇದನ್ನೂ, ಸಭೆಯಾಳಗೆ ದ್ರೌಪದಿಯ ಸೀರೆಗಳ ಸೆಳೆವಾಗ ಅಲ್ಲಿ ನೆರೆದಿದ್ದ ಜನರ ಮನೋಭಾವವನ್ನೂ ಸರಿಯಾಗಿ ತಾಳೆ ಹಾಕಿ ನೋಡಿದರೆ ಎರಡರ ನಡುವೆ ಅಂತಹ ಭಾರೀ ವ್ಯತ್ಯಾಸವೇನೂ ಇರಲಾರದು. ದೇವರ ಕುರಿತಾದ ನಂಬಿಕೆಗಳು ವ್ಯಕ್ತಿಗತ. ಆದರೆ ಇನ್ನೊಬ್ಬರ ನಂಬಿಕೆಗಳನ್ನೂ ಕೂಡ ಗೌರವಿಸಬೇಕಾದ್ದು ಅತಿ ಅಗತ್ಯ!

ಈ ಮೇಲಿನ ಮಾತುಗಳನ್ನು ನಾನು ಯಾವುದೇ ಧರ್ಮದ, ವರ್ಗದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆಂದು ಯಾರೊಬ್ಬರೂ ಭಾವಿಸಬಾರದು. ಮನುಷ್ಯಮಾತ್ರರಿಗೆ ಇರಬೇಕಾದ ಸಹಜ ಸ್ವಾಭಿಮಾನದಿಂದ ಆಡಿದ ಮಾತುಗಳಿವು. ಅಷ್ಟಕ್ಕೂ ದೇಶದ ಸಂಸ್ಕೃತಿ ರಕ್ಷಣೆಯ ಹೊಣೆಯನ್ನು ಶಿವಸೇನೆ, ಭಜರಂಗದಳದವರ ಕೈಗೊಪ್ಪಿಸಿ ನಿಶ್ಚಿಂತರಾಗಿರುವ ನಮಗೆ, ನಮ್ಮ ಧರ್ಮ, ದೇವರು, ಸಂಸ್ಕೃತಿಗಳನ್ನು ಗೌರವಿಸದ, ನಮ್ಮದೆಂದು ಒಪ್ಪಿಕೊಳ್ಳದ ನಮಗೆ ಸ್ವಾಭಿಮಾನವಾದರೂ ಇನ್ನೆಲ್ಲಿಯದು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ganapathi, The World famous Indian God. An article by ThatsKannada-Tulasivana Columnist K.Triveni Srinivasarao on the occasion of Ganesha Chaturthi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more