• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಣ್ಣ ಬರಲಿಲ್ಲ ಯಾಕೋ ಕರಿಯಾಕ’ - ಒಂದು ಸ್ಪಂದನ

By Staff
|
  • ಡಾ। ‘ಜೀವಿ’ ಕುಲಕರ್ಣಿ, ಮುಂಬಯಿ

jeevi@vsnl.com

ಈ ಸಲದ ನಾಗಪಂಚಮಿ ಹಬ್ಬಕ್ಕೆ ಸರಿಯಾಗಿ ‘ಅಣ್ಣ ಬರಲಿಲ್ಲ ಯಾಕೋ ಕರಿಯಾಕ’(ಕರಿಲಾಕ) ಎಂಬ ಶ್ರೀಮತಿ ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, (ಅಮೇರಿಕಾ) ಅವರ ಲೇಖನವನ್ನು ‘ದಟ್ಸ್‌ಕನ್ನಡ.ಕಾಂ’ನಲ್ಲಿ ಓದಿ ಸಂತೋಷವಾಯಿತು. ನಾಗಪಂಚಮಿ ಹಬ್ಬ ಇಂದಿಗೂ ಪಟ್ಟಣದಂತೆ ಹಳ್ಳಿಗಳಲ್ಲಿ ಕೂಡ ವಿಶೇಷ ಮಹತ್ವ ಪಡೆದಿರುವ ಹಬ್ಬ. ಅಣ್ಣ ತಂಗಿಯನ್ನು ತವರು ಮನೆಗೆ ಕರೆಯಲು ಬರುತ್ತಾನೆ. ಈ ಲೇಖನದಲ್ಲಿ ಪ್ರಸಿದ್ಧ ಹಾಡಿನ ಪ್ರಸ್ತಾಪವೇ ಕಾಣಲಿಲ್ಲ. ‘ಪಂಚಮಿ ಹಬ್ಬ’ ಎಂಬ ಹಾಡನ್ನು ಬರೆದವರು ಕವಿಭೂಷಣ ‘ಬೆಟಗೇರಿ ಕೃಷ್ಣಶರ್ಮ’ (ಆನಂದಕಂದರು). ಈ ಲೇಖನದ ಶೀರ್ಷಿಕೆ ನೋಡಿದೊಡನೆಯೇ -

‘ಪಂಚಮಿ ಹಬ್ಬಾ ಉಳಿತವ್ವ ದಿನ ನಾಕ

ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ’

- ಈ ಹಾಡು ನನ್ನ ಕರ್ಣಪಟಲದಲ್ಲಿ ನಿನಾದಿಸತೊಡಗಿತು.

Jeevi Kulakarni, Mumbaiತ್ರಿವೇಣಿಯವರ ಲೇಖನ ಓದಿದಾಗ ನನಗೆ 1956ರಲ್ಲಿ ಅಕ್ಟೋಬರ್‌ 22ರಂದು ಪ್ರಾರಂಭಗೊಂಡ ಅಖಿಲ ಭಾರತ ಎರಡನೆಯ ಯುವಜನ ಮಹೋತ್ಸವವು ನೆನಪಾಯಿತು. ದೆಹಲಿಯ ‘ತಾಲಕಟೋರಾ ಗಾರ್ಡನ್ಸ್‌’ನಲ್ಲಿ ನೂರಾರು ಟೆಂಟುಗಳನ್ನು ಹಾಕಿದ್ದರು. ಮೂವತ್ತೊಂದು ವಿಶ್ವವಿದ್ಯಾಲಯಗಳ ಹದಿನಾರು ನೂರು ವಿದ್ಯಾರ್ಥಿಗಳು ಈ ಮಹೋತ್ಸವದಲ್ಲಿ ಭಾಗವಹಿಸಿದ್ದೆವು. ಅಂದಿನ ಪ್ರಧಾನಿ ಜವಾಹರಲಾಲ ನೆಹರು ಅವರು ಸಮ್ಮೇಳನವನ್ನು ಉದ್ಘಾಟಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದಿಂದ ಸುಮಾರು ಅರವತ್ತು ವಿದ್ಯಾರ್ಥಿಗಳು ಭಾಷಣ, ನೃತ್ಯ, ನಾಟಕ, ಸಂಗೀತ, ರೇಡಿಯೋ ನಾಟಕ ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದರು. ವಿಜಾಪುರ ವಿಜಯ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ।। ಟಿ.ರುಬೆನ್‌ ಅವರು ನಮ್ಮ ಕಮಿಟಿ-ಇನ್‌-ಚಾರ್ಜ್‌ ಆಗಿದ್ದರು. ನೃತ್ಯ ನಿರ್ದೇಶಕ ಮಹೇಶ ಹೆರಮ್ಜಾಳ್‌ ಹಿನ್ನೆಲೆ ಸಂಗೀತ ಒದಗಿಸಲು ತಮ್ಮ ವಾದ್ಯವೃಂದ ಸಮೇತ ಬಂದಿದ್ದರು. ನಾನಾಗ ಜ್ಯೂ.ಎಮ್‌.ಎ. ಕ್ಲಾಸಿನಲ್ಲಿ ಓದುತ್ತಿದ್ದೆ. ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’ ರೇಡಿಯೋ ರೂಪಕದಲ್ಲಿ ನನಗೊಂದು ಪಾತ್ರವಿತ್ತು. ಮೈಸೂರು ವಿಶ್ವವಿದ್ಯಾಲಯದ ಟೀಮಿನಲ್ಲಿ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ಬಂದಿದ್ದರು. ಅವರೂ ‘ಸ್ಮಶಾನ ಕುರುಕ್ಷೇತ್ರ’ ನಾಟಕವನ್ನೇ ಪ್ರದರ್ಶಿಸಲಿದ್ದರು. ವರಕವಿ ಬೇಂದ್ರೆಯವರ ಮಗ ವಾಮನ ಬೇಂದ್ರೆ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಗೋಕಾಕರ ‘ವಿಮರ್ಶಕ ವೈದ್ಯ’ ನಾಟಕದ ಪ್ರಧಾನ ಭೂಮಿಕೆಯಲ್ಲಿ ಅವರಿದ್ದರು. ಗಿರೀಶ ಕಾರ್ನಾಡ ಬಿ.ಎ. ವಿದ್ಯಾರ್ಥಿಯಾಗಿದ್ದರು. ಭಾಷಣ ಸ್ಪರ್ಧೆಯಲ್ಲಿ ಅಂತರ್‌-ವಿಶ್ವವಿದ್ಯಾಲಯ ಮಟ್ಟದಲ್ಲಿ ಅವರನ್ನು ಮೀರಿಸುವವರು ಯಾರೂ ಇರಲಿಲ್ಲ. ಅವರಿಗೆ ಪ್ರಥಮ ಪಾರಿತೋಷಕ ದೊರೆವುದೆಂಬ ಭರವಸೆ ನಮಗೆಲ್ಲಾ ಇತ್ತು. ಶಾಂತಮತಿ ಗಂಗೊಳ್ಳಿ (ಮದುವೆಯ ನಂತರ ಅವರೇ ಅನುರಾಧಾ ಧಾರೇಶ್ವರ ಎಂಬ ರೇಡಿಯೋ ಕಲಾವಿದೆಯಾಗಿ ಪ್ರಸಿದ್ಧಿ ಪಡೆದವರು) ನಮ್ಮ ತಂಡದಲ್ಲಿದ್ದರು. ಅದೊಂದು ಅಭೂತಪೂರ್ವ ಅನುಭವವಾಗಿತ್ತು.

ಇಷ್ಟೆಲ್ಲಾ ಪೀಠಿಕೆ ಬರೆಯಲು ಕಾರಣವಿದೆ. ಟ್ರೇನಿನಲ್ಲಿ ಪ್ರವಾಸ ಮಾಡುವಾಗ, ದೆಹಲಿಯಲ್ಲಿ ಟೆಂಟಿನಲ್ಲಿ ವಾಸಿಸುವಾಗ, ನಮ್ಮ ‘ಕೋರಸ್‌-ಸಾಂಗ್‌’ ಆಗಿದ್ದದ್ದು ಬೆಟಗೇರಿ ಕೃಷ್ಣ ಶರ್ಮರ ‘ಪಂಚಮಿ ಹಬ್ಬ’ ಎಂಬ ಹಾಡು. ಯುವಜನ ಮಹೋತ್ಸವದ ಬಗ್ಗೆ ನಾನು ಒಂದು ಲೇಖನವನ್ನು ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’ ಮಾಸ ಪತ್ರಿಕೆಯಲ್ಲಿ ಡಿಸೆಂಬರ್‌ 1956 ರ ಇಸ್ವಿಯಲ್ಲಿ ಬರೆದಿದ್ದೆ. ಆ ಲೇಖನದಲ್ಲಿಯ ಕೆಲಭಾಗ ಇಲ್ಲಿ ಉದ್ಧರಿಸಲು ಬಯಸುತ್ತೇನೆ. ‘ಪಂಚಮಿ ಹಬ್ಬಾ’ ಹಾಡು ಅಲ್ಲಿ ಎಷ್ಟು ಪ್ರಸಿದ್ಧವಾಗಿತ್ತು ಎನ್ನುವ ಬಗ್ಗೆ ವಾಚಕರಿಗೆ ಮನದಟ್ಟಾಗಬಹುದು.

‘ಮುಂಜಾವಿನಿಂದ ರಾತ್ರಿಯ ಹನ್ನೆರಡರವರೆಗೆ ಕಾರ್ಯಕ್ರಮ ಸಾಗಿರುತ್ತಿದ್ದವು. ಈ ಸಮಯದಲ್ಲಿ ನಾವು ಬೇರೆ ಬೇರೆ ಭಾಗದಿಂದ ಬಂದ ನಮ್ಮ ಬಂಧುಗಳನ್ನು ಭೇಟಿಯಾಗುವುದು ತುಂಬ ಕಷ್ಟವಾಗುತ್ತಿತ್ತು. ಊಟದ ಸಮಯದಲ್ಲಿ ತಾಸೆರಡು ತಾಸು ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿತ್ತು. 5-6 ನೂರು ಜನ ಒಮ್ಮೆಲೆ ಕೂಡುವ ವ್ಯವಸ್ಥೆ ಊಟದ ಮನೆಯಲ್ಲಿತ್ತು. ಅಲ್ಲಿಯ (ದಿಲ್ಲಿಯ) ಊಟ ನಮಗೆ ರುಚಿಸದಿದ್ದರೂ, ಅಲ್ಲಿ ನಮ್ಮ ಜೊತೆಯಲ್ಲಿರುವ ವಿವಿಧ ಪ್ರದೇಶದ ವಿದ್ಯಾರ್ಥಿಗಳೊಡನೆ ಮಾತನಾಡುವುದು ರುಚಿಸುತ್ತಿತ್ತು. ನಮ್ಮಷ್ಟೇ ಆತುರರಾಗಿದ್ದ ಬೇರೆ (ಪ್ರದೇಶದ) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಮ್ಮಿಂದ ಅನೇಕ ವಿಷಯ ಅರಿತುಕೊಳ್ಳುತ್ತಿದ್ದರು. ಒಮ್ಮೆ ಕನ್ನಡಿಗರೆಲ್ಲ ಕೂಡಿ ‘ಕ್ಯಾಂಪ್‌-ಫಾಯರ್‌’ ಮಾಡಿದ್ದೆವು. ಆಗ ಮೈಸೂರು ವಿಶ್ವವಿದ್ಯಾಲಯದ ‘ಮಿಸ್‌ ವಿಮಲಾ’ ಮೊದಲಾದವರು ಹಾಡಿದ ಕೆಲವು ಜಾನಪದ ಗೀತೆಗಳು, ಕೋಲಾಟದ ಪದಗಳು ಆಕರ್ಷಕವಾಗಿದ್ದವು. ನಮ್ಮ (ಕರ್ನಾಟಕ) ವಿಶ್ವವಿದ್ಯಾಲಯದ ಶಾಂತಮತಿ ಗಂಗೊಳ್ಳಿ ಹಾಡಿದ (ದೇಸಾಯಿ ದತ್ತಮೂರ್ತಿಯವರ) ‘ಸಖಿ ಮಾಧವನೇತಕೆ ಬಾರ’ ಎಂಬ ಹಾಡು, ಪಂಚಾಕ್ಷರಿಯವರು ಮಾಡಿದ ರಸಭರಿತ ಕೀರ್ತನೆ, ಶಾಮ ಜೋರಾಪುರರ ಕೊಳಲು, ರಸಿಕರ ಮನ ಸೂರೆಗೊಂಡವು. ಇವೆಲ್ಲಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಹಾಡಿದ ಹಾಡು- ‘ಪಂಚಮಿ ಹಬ್ಬಾ’.

‘ಪಚ್ಚಮಿ ಹಬ್ಬಾ ಉಳಿತವ್ವ ದಿನ ನಾಕ

ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ ।।ಪ।।

ನಮ್ಮ ತವರೂರು ಗೋಕುಲ ನಗರಾ ।

ಮನಿಯೆಂಥಾದ ರಾಜಮಂದಿರಾ ।

ನಮ್ಮ ಅಣ್ಣಯ್ಯ ದೊಡ್ಡ ಸಾವಕಾರಾ ।

ಹ್ಯಾಂಗಾದೀತ ತಂಗಿನ್ನ ಮರಿಯಾಕ-

ಅಣ್ಣ ಬರಲಿಲ್ಲ ಯಾಕೋ ಕರಿಲಾಕ..।।1।।

ನಮ್ಮ ತವರೀಲಿ ಪಂಚಮಿ ಭಾರಿ

ಮಣದ ತುಂಬಾ ಬಟ್ಟಲ ಕೊಬ್ಬರೀ

ಅಳ್ಳು ಅವಲಕ್ಕಿ ತಂಬಿಟ್ಟು ಸೂರಿ

ನಾನೂ ತಿನುವಾಕಿ ಬಂದ್‌ ಹಾಂಗ ಮನಕ-

ಅಣ್ಣ ಬರಲಿಲ್ಲ ಯಾಕೋ ಕರಿಲಾಕ ... ।।2।।’

ಣ್ಞ್ಚಛಿ Mಟ್ಟಛಿ ಎಂಬ ಕೂಗಿನೊಡನೆ ಮತ್ತೆ ಹಾಡಿಯಾಯಿತು. ನನ್ನ ಜೊತೆಗೊಬ್ಬ ಹುರುಪಿನಿಂದ ತಾಳವಿಕ್ಕುತ್ತಿದ್ದ. ಪಲ್ಲವಿಯನ್ನು ಮಾತ್ರ ಗಟ್ಟಿಯಾಗಿ ನಮ್ಮ ಜೊತೆಗೆ ಹೇಳುತ್ತಿದ್ದ. ಆದರೆ ಅವನ ಮುಖಚರ್ಯೆ ಮಾತ್ರ ಕನ್ನಡಿಗನಂತೆ ಇರಲಿಲ್ಲ. ಹಾಡು ಮುಗಿದ ಮೇಲೆ, what is this languege? ಎಂದು ಕೇಳಿದ. ‘ಕನ್ನಡ’ ಎಂದೆ ನಾನು. To which varsity do u belong? ಎಂದು ನಾನು ಕೇಳಿದೆ. ಅವನು ‘ಕಲಕತ್ತಾ’ ಎಂದ. ‘I want to take dowan this song in begali ಎಂದ. ಅವನಿಗೆ ಹಾಡು ಸೇರಿತೇನೆಂದು ಪ್ರಶ್ನಿಸಿದಾಗ ಅವನೆಂದ, Well, I do not understand this language. But tune is wonderful! ಎಂದು ಉತ್ತರಿಸಿದ. ನಾನಿದ್ದ ಟೆಂಟ್‌ ನಂಬರ ಕೇಳಿ ಮರುದಿನ ಬರೆದುಕೊಳ್ಳಲು ಬರುವುದಾಗಿ ಹೇಳಿದ. ಕೆಲವರು ಈ ಹಾಡಿನ ರೆಕಾರ್ಡನ್ನೂ ಮಾಡಿಕೊಂಡರು. ಇಷ್ಟೆಲ್ಲಾ ಆದರೂ ಈ ಹಾಡು ಬರೆದವರು ಧಾರವಾಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಕವಿಭೂಷಣ ‘ಬೇಟಗೇರಿ ಕೃಷ್ಣಶರ್ಮ (ಆನಂದಕಂದರು)’ ಎಂಬ ಸಂಗತಿ ನಮ್ಮಲ್ಲಿಯೇ ಬಹಳ ಜನರಿಗೆ ಗೊತ್ತಿರಲಿಲ್ಲ.

ಕೆಲವು ಹಾಡುಗಳು ಹಾಗೆಯೇ. ನಾಲಗೆಯಿಂದ ನಾಲಗೆಗೆ ದಾಟುತ್ತಾ ಬೆಳೆಯತೊಡಗುತ್ತವೆ ; ಕವಿ ಹಿನ್ನೆಲೆಗೆ ಸರಿದಿರುತ್ತಾನೆ.

ಇದನ್ನೂ ಓದಿ-

ಯಾಕೆ ಕಣ್ಣೀರು? ನಾವಿಲ್ಲವೇ ಅಣ್ಣಂದಿರು?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more