ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿ, ನೀನಿಲ್ಲದೆ ನಾ ಹೇಗಿರಲಿ ?

By Staff
|
Google Oneindia Kannada News
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
[email protected]

ನಮ್ಮ ಮದುವೆಯಲ್ಲಿ ತೆಗೆದ ಚಿತ್ರಗಳನ್ನು ನೋಡುತ್ತಿದ್ದೆ. ಕಿವಿ, ಕೈ, ಕುತ್ತಿಗೆಗೆ ಮದುವೆಗೆ ಬಂದ ಬಂಧು-ಬಳಗದವರು ಅವರವರಿಗೆ ಸರಿ ಎನಿಸಿದಂತೆ ತೊಡಿಸಿದ್ದ ಅನೇಕ ಆಭರಣಗಳು, ತಲೆಯ ಮೇಲೆ ಹೂವಿನ ಹೆಡಿಗೆಯನ್ನೇ ಹೊರಿಸಿದಂತೆ ವಿವಿಧ ಬಗೆಯ ಹೂವುಗಳು, ಜರಿಯಿಂದ ತುಂಬಿ, ಹೊಳೆಯುತ್ತಿರುವ ಭಾರದ ಸೀರೆ, ಮುಖಕ್ಕೆ ಸ್ವಲ್ಪವೂ ಒಪ್ಪುತ್ತಿಲ್ಲದ, ಗೋಡೆಗೆ ಬಳಿದ ಸುಣ್ಣ-ಬಣ್ಣದಂತೆ ಕಾಣುತ್ತಿರುವ ಗಾಢ ಮೇಕಪ್ಪು...... ನನಗೇ ಅಪರಿಚಿತವಾಗಿ ತೋರುತ್ತಿರುವ ನನ್ನದೇ ಮುಖ! ಈ ಚಿತ್ರದಲ್ಲಿರುವುದು ನಾನಾ? ನಿಜವಾಗಿಯೂ ಅಲ್ಲಿದ್ದದ್ದು ನಾನೇನಾ?

ಹೌದು, ಬಹುಪಾಲು ಮದುವೆಗಳು ನಡೆಯುವುದೇ ಹಾಗೆ. ಅರ್ಧ ನಿದ್ರೆ, ಅರ್ಧ ಎಚ್ಚರದಲ್ಲಿ ಎಲ್ಲಿಗೋ ನಡೆದುಕೊಂಡು ಹೋದಂತೆ. ತುಂಬಿತುಳುಕುವ ಜನಜಂಗುಳಿಯಲ್ಲಿ , ನಮ್ಮ ಪ್ರಯತ್ನವಿಲ್ಲದೆ ಹಿಂದಿನವರಿಂದ ಮುಂದೆ ಮುಂದೆ ತಳ್ಳಿಸಿಕೊಂಡು ಎಲ್ಲೋ ಹೋಗಿ ಬಿದ್ದಂತೆ! ಮದುವೆ ಎಂದರೆ ಏನು ? ಅದೃಷ್ಟ , ಆಕರ್ಷಣೆ, ಆಕಸ್ಮಿಕ, ಅನಾಹುತ, ಅಪರಾಧ...... ಅರ್ಥಗಳು ಅಸಂಖ್ಯ! ಪ್ರತಿಯಾಬ್ಬರ ಬದುಕಿನಲ್ಲೂ ಮದುವೆಯೆಂಬುದೊಂದು ಮಹತ್ವದ ಘಟ್ಟ , ಆದರೆ ಈ ಬಹುದೊಡ್ಡ ನಿರ್ಣಯವೊಂದರ ನಿರ್ಣಾಯಕರು ಮಾತ್ರ ಬೇರೆ ಯಾರೆಲ್ಲಾ ! ಈಗ ಕಾಲ ಬಹಳ ಮುಂದುವರೆದಿದ್ದು, ಬೇರೆಲ್ಲಾ ಪರಿಸ್ಥಿತಿಗಳು ಬಹಳಷ್ಟು ಬದಲಾಗಿದ್ದರೂ ಮದುವೆಯ ವಿಷಯದಲ್ಲಿ ಮಾತ್ರ ಅಂತಹ ಹೆಚ್ಚಿನ ಬದಲಾವಣೆಗಳು ಆದಂತಿಲ್ಲ. ಹಿಂದಿದ್ದ ಅದೇ ಸ್ಟಾಂಡರ್ಡ್‌ ಈಗಲೂ ಮುಂದುವರಿದುಕೊಂಡೇ ಬಂದಿದೆ.

My Marriage photo K. Triveni Srinivasarao, Illinois, USಮದುವೆ ಎಂದರೆ ಮುಗಿಯದಷ್ಟು ಅಚ್ಚರಿ! ಈ ಮದುವೆ ಬಗ್ಗೆ ಮಾತಾಡದವರೇ ಇಲ್ಲ ಅನ್ನುವಷ್ಟು ಇದರ ಬಗೆಗೆ ಉಕ್ತಿಗಳಿವೆ. Its an agreement in which a man loses his bachelor degree and woman gains her master ಎನ್ನುವ ವ್ಯಂಗ್ಯೋಕ್ತಿಗಳಿಂದ ಹಿಡಿದು ಮದುವೆಯನ್ನು ಜೈಲು, ಖೆಡ್ಡ, ಸರ್ಕಸ್‌...........ಇನ್ನೂ ಯಾವಯಾವುದಕ್ಕೋ ಹೋಲಿಸಿ, ರೋಸಿಹೋದವರಿದ್ದಾರೆ. ಈ ಕಟಕಿಗಳನ್ನೆಲ್ಲ ಒಪ್ಪದ ಸಜ್ಜನರು ಮದುವೆಯನ್ನು ಬಹುಜನ್ಮದ ಪೂಜಾ ಫಲ ಎಂದೇ ತಿಳಿದು ವಿನೀತವಾಗಿ ಸ್ವೀಕರಿಸಿರುವುದೂ ಉಂಟು. ಎಲ್ಲೋ ಇದ್ದು, ಯಾರೋ, ಏನೋ ಆಗಿದ್ದವರು ‘ಮದುವೆ’ ಎಂಬ ಈ ಮೂರಕ್ಷರದ ಬಂಧನಕ್ಕೆ ಸಿಲುಕಿದ ಕೂಡಲೇ ಬದುಕಿನ ಕೊನೆಯ ತನಕ ಜೊತೆಯಾಗಿ ನಡೆದುಹೋಗುವ ಈ ವ್ಯವಸ್ಥೆ ಖಂಡಿತ ಸಾಮಾನ್ಯವಂತೂ ಅಲ್ಲವೇ ಅಲ್ಲ. ಮದುವೆಗಳೆಲ್ಲಾ ಸುಖ ತರದಿದ್ದರೂ ಅದೊಂದು ಬಗೆಯ ಅನುಬಂಧ ಬೆಸೆಯುವುದು ಮಾತ್ರ ನಿಜ. ಮೂರೇ ಮೂರು ಗಂಟು, ಬಿಡಿಸಲಾರದ ನಂಟಾಗಿ ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ?’ ಎಂದು ಬೇಂದ್ರೆಯವರೇ ಬೆರಗಾಗಿ ಹೋಗುವಷ್ಟು !

ಮದುವೆ ಎಂಬುದು ಬಹಳ ಗಂಭೀರ ವಿಷಯವಾಗಿದ್ದರೂ ಆ ಕುರಿತು ಪ್ರಚಲಿತದಲ್ಲಿರುವ ಜೋಕು-ಜೋಕಾಲಿಗಳಿಗೆ ಲೆಕ್ಕವಿಲ್ಲ. ಮದುವೆ ಮನೆಗಳು ಜಗಳ, ರಗಳೆ, ಕಿರಿಕಿರಿಗಳ ಆಗರವಾದಂತೆ ತಮಾಷೆ, ನಗೆಮಾತುಗಳ ಸಾಗರವೂ ಹೌದು. ನೀವೂ ಗಮನಿಸಿರಬಹುದು - ಪತ್ರಿಕೆಗಳ ಜನಪ್ರಿಯ ಅಂಕಣವಾದ ‘ಕೇಳಿ-ಹೇಳಿ’, ‘ನೀವೂ ಕೇಳಿ’ ಮುಂತಾದ ಪ್ರಶ್ನೋತ್ತರ ವಿಭಾಗದಲ್ಲಿ ಕೇಳಲಾಗುವ ಅತಿ ಹೆಚ್ಚಿನ ಪ್ರಶ್ನೆಗಳು ಈ ಮದುವೆಗಳನ್ನು ಕುರಿತದ್ದೇ. ಅದರಲ್ಲಿ ಇಂದಿಗೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವನ್ನು ಹೇಳುತ್ತೇನೆ ಕೇಳಿ -

‘ಸರ್‌, ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ, ನಿಜವೇ?’ ಎಂಬ ಓದುಗರೊಬ್ಬರ ಸಹಜ ಕುತೂಹಲಕ್ಕೆ ಆ ಪತ್ರಿಕೆಯ ಸಂಪಾದಕರು ಕೊಟ್ಟಿದ್ದ ಕಿಡಿಗೇಡಿ ಉತ್ತರ - ‘ಖಂಡಿತ ನಿಜ, ತೀರಾ ವಯಸ್ಸಾದ ಮೇಲೆ ಪ್ರೀತಿಸಲು ಶುರುಮಾಡಿದರೆ ಆ ಮದುವೆ ನಡೆಯುವುದು ಸ್ವರ್ಗದಲ್ಲಿ ಅಲ್ಲದೆ ಇನ್ನೆಲ್ಲಿ ?’. ಇನ್ನೊಂದು ಪ್ರಶ್ನೆ - ‘ವರ ವಧುವಿನ ಕೊರಳಿಗೆ ಮಾಂಗಲ್ಯ ಕಟ್ಟುವ ಸಮಯದಲ್ಲಿ ವಾದ್ಯದವರು ಡೋಲನ್ನು ಜೋರಾಗಿ ಬಾರಿಸಲು ಕಾರಣವೇನು?’ ಇದರ ನಿಜವಾದ ಕಾರಣವೇನೋ ಯಾರಿಗೆ ಗೊತ್ತು ? ಅಲ್ಲಿದ್ದ ಉತ್ತರ ಮಾತ್ರ ಇದು- ‘ವರನ ಮಿತಿಮೀರಿದ ಎದೆಬಡಿತ ಸುತ್ತಲೂ ಇರುವವರಿಗೆ ಕೇಳದಿರಲಿ ಅಂತ’. ಇದೇ ತರಹದ್ದೇ ಇನ್ನೊಂದು ತರಲೆ ಪ್ರಶ್ನೆ - ‘ಮದುವೆಯಾಗಿರುವ ಹೆಣ್ಣನ್ನು ತಾಳಿ ನೋಡಿ ಗುರುತಿಸಬಹುದು, ಮದುವೆಯಾದ ಗಂಡನ್ನು ನಾವು ಗುರುತಿಸುವುದು ಹೇಗೆ?’ ಈ ಪ್ರಶ್ನೆಗೆ- ಇದು ಸರಿಯಾದ ಉತ್ತರವೇ ? ಅಥವಾ ಇದೇ ಸರಿಯಾದ ಉತ್ತರವೇ ?- ‘ಹ್ಯಾಪುಮೋರೆ ಮತ್ತು ಪೆಚ್ಚು ನಗೆ!’

ಇದು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿರೇಮಗಳೂರು ಕಣ್ಣನ್‌ ಅವರಿಂದ ಕೇಳಿಸಿಕೊಂಡ ನಗೆಹನಿ - ಮದುವೆಯಾಗಲಿರುವ ವರನನ್ನು ಅವರು ಕರೆದು ಕೇಳಿದರಂತೆ - ‘ನಿನಗೆ ಹುಡುಗಿಯ ರೂಪ ಮುಖ್ಯವೋ? ಗುಣ ಮುಖ್ಯವೋ?’ ಅದಕ್ಕೆ ಅವನು ಬಹಳ ಪ್ರಾಮಾಣಿಕವಾಗಿ ಉತ್ತರಿಸಿದನಂತೆ - ‘ಗುಣವನ್ನು ತಿದ್ದಿಕೊಳ್ಳಬಹುದು, ರೂಪವನ್ನು ತಿದ್ದಲು ಸಾಧ್ಯವೇ? ಆದ್ದರಿಂದ ನನಗೆ ರೂಪವೇ ಮುಖ್ಯ’. ಇದೇ ಪ್ರಶ್ನೆಗೆ ಇನ್ನೊಬ್ಬ ಪ್ರಾಕ್ಟಿಕಲ್‌ ಮೈಂಡೆಡ್‌ ವರ ಮಹಾಶಯ ಕೊಟ್ಟ ಸಿಂಪ್ಲಿ ಸುಪರ್ಬ್‌ ಉತ್ತರ- ‘ನನಗೆ ಗುಣವೂ ಮುಖ್ಯವಲ್ಲ , ರೂಪವೂ ಅಲ್ಲ, ‘ರೂಪಾ’ಯಿಯೇ ಬಹುಮುಖ್ಯ’! ಹೀಗೆ ಮದುವೆಯ ವಿಷಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುವ ಆದ್ಯತೆಗಳು!

ಮದುವೆಗಿರುವ ಕಾರಣಗಳು ಬೇರೆ ಬೇರೆ ಇದ್ದರೂ, ಮದುವೆಗೆ ಸುಭದ್ರ ಅಡಿಪಾಯವಾಗಿ ಇರಬೇಕಾಗಿದ್ದು ಮಾತ್ರ ಪ್ರೀತಿಯಾಂದೇ. ಈ ಪ್ರೀತಿಗೆ ಮಾತ್ರ ಯಾವ ಆದ್ಯತೆಗಳೂ ಇದ್ದಂತಿಲ್ಲ. ಪ್ರೀತಿ ಬೇಡುವುದು ಸೌಂದರ್ಯ, ಐಶ್ವರ್ಯ ಯಾವುದನ್ನೂ ಅಲ್ಲ. ಅದೂ ಕೇಳುವುದೆಲ್ಲಾ ಒಂದೇ- ತ್ಯಾಗ! ದಿಲ್‌ ಚೀಜ್‌ ಕ್ಯಾ ಹೈ? ಆಪ್‌ ಮೇರಿ ಜಾನ್‌ ಲೀಜಿಯೇ ....... ಎದೆಗೂಡಿನಲ್ಲಿರುವ ರಕ್ತದ ಕೊನೆಯ ಹನಿಯನ್ನೂ ನಿನಗೇ ಬಸಿದುಕೊಟ್ಟುಬಿಡುತ್ತೇನೆ ತೊಗೋ ಎನ್ನುವಂತಹ ಮಹಾತ್ಯಾಗ! ಕೊಡುವ ಒಲವಿನ ಉಡುಗೊರೆ ಯಾವುದೂ ಆಗಬಹುದಾದರೂ, ಅದು ರಕುತದಲ್ಲೇ ಬರೆದಿದ್ದರೆ ಅದರ ತೂಕವೇ ಬೇರೆ. ಪ್ರೀತಿಯೇ ಇಲ್ಲದ ಮದುವೆಗಳು ಇರಬಹುದಾದರೂ ತ್ಯಾಗ ಇಲ್ಲದ ಪ್ರೀತಿ ಮಾತ್ರ ಬಹುಕಾಲ ಬದುಕಿ ಉಳಿದ ಉದಾಹರಣೆಗಳಿಲ್ಲ !

‘ಪ್ರಥಮ ನೋಟದಲ್ಲಿ ಪ್ರಣಯ’ ಅನ್ನುವ ಮಾತು, ಅದು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹವೋ ಗೊತ್ತಿಲ್ಲ, ಯಾರಾದರೂ ಮೊದಲ ನೋಟದಲ್ಲಿಯೇ ಅವನನ್ನು/ಅವಳನ್ನು ಪ್ರೀತಿಸಿದೆ ಎಂದು ಹೇಳಿದರೆ, ನನಗಂತೂ ಅದೊಂದು ದೊಡ್ಡ ಜೋಕಿನಂತೆ ಕೇಳಿಸಿಬಿಡುತ್ತದೆ. ಪ್ರೀತಿ ಎನ್ನುವುದು ಮೊದಲನೋಟದಲ್ಲಿ ಹಾಳಾಗಿ ಹೋಗಲಿ, ಮೊದಲರಾತ್ರಿಯಲ್ಲಿ ಇರುವ ಬಗೆಗೂ ಗುಮಾನಿಗಳಿವೆ. ಅಂತಹದೊಂದು ನಿರ್ಮಲ ಪ್ರೀತಿ ಆವಿರ್ಭವಿಸಲು ಬೇಕು ಮತ್ತದೆಷ್ಟೋ ಅತಿ ದೀರ್ಘ ಹಗಲು-ರಾತ್ರಿ! ಸರಸ, ವಿರಸ, ಅಳು, ನಗು ಕಣ್ಣೀರು, ನಿಟ್ಟುಸಿರು ಬೆರೆತ ಅನುದಿನದ ಅನಂತಕ್ಷಣಗಳ ನಡುವೆ, ಅದು ಯಾವಾಗಲೋ ತನ್ನಿಂದತಾನೇ ಉದ್ಭವವಾಗಿ ನಿಲ್ಲುವ ಪರಮ ಪಾವನ ಮೂರ್ತಿ - ಈ ಪ್ರೀತಿ! ಸಿನಿಮಾಗಳಲ್ಲಿ ತೋರಿಸುವಂತೆ ನೋಡಿದ ಮರುಕ್ಷಣವೇ ಪ್ರೀತಿ ಹುಟ್ಟಿಕೊಳ್ಳುವ ಹಾಗಿದ್ದರೆ ಅದು ಪ್ರೀತಿ ಆಗಿರಲು ಹೇಗೆ ಸಾಧ್ಯ? ಅದು ಬೇರೇನೋ ಇರಬೇಕು. ಪ್ರೇಮವೆನಲು ಅಷ್ಟು ಹಾಸ್ಯವೇ?

ಮದುವೆಯ ಬಗ್ಗೆ ಪರ, ವಿರೋಧ ಚರ್ಚೆಗೆ ಕುಳಿತರೆ ಎರಡೂ ಕಡೆಯಲ್ಲೂ ವಾದಿಸಲು ಸಮಾನ ಸ್ಪರ್ಧಿಗಳು ಸಿಗಬಹುದು. ನನ್ನ ಮತ ಮಾತ್ರ ವಿವಾಹದ ಪರವಾಗಿಯೇ. ದಿನದಿಂದ ದಿನಕ್ಕೆ ಸಂಕೀರ್ಣಗೊಳ್ಳುತ್ತಿರುವ ಆಧುನಿಕ ಬದುಕಿನಲ್ಲಿ ಮನುಷ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಏಕಾಂಗಿ, ಅಸುಖಿ. ನಿಷ್ಕಾರಣ ದುಃಖ, ನಿರಂತರ ತಬ್ಬಲಿತನದಿಂದ ಪರಿತಪಿಸುವ ಮಾನವ ಜೀವಿಗೆ ತನ್ನಂತಹುದೇ ಇನ್ನೊಂದು ಸಹಜೀವಿ ಮುಂದೆಬಂದು, ನಿನ್ನೆಲ್ಲ ನೋವು, ನಲಿವು, ಹತಾಶೆ, ನಿರಾಶೆಗಳಲ್ಲಿ ಸರಿಯಾಗಿ ಅರ್ಧಭಾಗ ನನಗಿರಲಿ ಎಂದು ತೆರೆದ ತೋಳುಗಳಿಂದ ಆಹ್ವಾನಿಸಿದರೆ, ಅದನ್ನು ಬೇಡವೆಂದು ನಿರಾಕರಿಸುವುದರಲ್ಲಿ ಇರುವ ಬುದ್ಧಿವಂತಿಕೆಯಾದರೂ ತಾನೇ ಏನು? ಆದರೆ ಮದುವೆಯಾಗಿಬಿಟ್ಟ ಮಾತ್ರಕ್ಕೆ ಇಂತಹದೊಂದು ಸ್ನೇಹ ಸಂಜೀವಿನಿ ದೊರಕಿಯೇ ಬಿಡುತ್ತದೆ ಎಂಬುದಕ್ಕೆ ಕೂಡ ಖಾತರಿ ಏನಿಲ್ಲ . ಬಾಳಸಂಗಾತಿಯಾಗಿ ಬಂದವನು/ಳು ಆತ್ಮಸಂಗಾತಿಯೂ ಆಗಿಬಿಟ್ಟಲ್ಲಿ , ಅದು ಬದುಕಿನ ಜೂಜಾಟದಲ್ಲಿ ಹೊಡೆದ ಭಾರೀ ಜಾಕ್‌ಪಾಟ್‌!

ಮದುವೆ ಆಗುವುದು, ಬಿಡುವುದು ಅವರವರ ಸ್ವಂತ ಆಯ್ಕೆ. ಮದುವೆಯಾಗಿಯೂ, ಆಗದೆಯೂ ಸುಖವಾಗಿರುವವರು ಬಹಳ ಜನರಿದ್ದಾರೆ. ಆದರೆ ಮದುವೆಯಾಗಿಯೂ, ಅದನ್ನು ಪ್ರೀತಿರಹಿತವಾಗಿಸಿಕೊಂಡು, ನೀರಸವಾಗಿ ನರಳುತ್ತಾ ಬದುಕುವುದಕ್ಕಿಂತ ಘೋರ ದುರಂತ ಮಾತ್ರ ಮತ್ತೊಂದಿಲ್ಲ !

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X