• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದೂ ಮನೆ ಮನಗಳ ಚುಕ್ಕಿಚಿತ್ರ ಮತ್ತು ಸೌಭಾಗ್ಯ

By Staff
|

Rangoli in South Korea
ರಂಗೋಲಿ ನಮ್ಮ ಬದುಕಿನಲ್ಲಿ ಆಪ್ತ, ಅವಿನಾಭಾವ ಸಂಬಂಧ ಪಡೆದಿದೆ. ಭಾರತೀಯ ಮನೆ ಮನಗಳ ಅಪರೂಪದ ಬೆಸುಗೆ ರಂಗೋಲಿ. ನಮ್ಮತನದ ಸಂಕೇತವಾದ ರಂಗೋಲಿ ಸಂಸ್ಕೃತಿಯನ್ನು ಹೆಚ್ಚು ಹೆಚ್ಚು ಹಾಕುವುದರ ಮೂಲಕ ಜೀವಂತವಾಗಿ ಇಡೋಣ...ಅಲ್ವೆ!

* ಧವಳ

ರಂಗೋಲಿ ಭಾರತೀಯ ಸಂಸ್ಕೃತಿಯ ಆಹ್ಲಾದಕರ ಕಲೆ ರಂಗೋಲಿ. ನಮ್ಮ ಮನೆಮನೆ ಮನಗಳಲ್ಲಿ ಸದಾ ಖುಷಿಯ ಸ್ಥಾನ ಪಡೆದಿರುವ ಸೃಜನಶೀಲ ಕಲೆ. ಮನೆಯ ಮುಂದೆ ಸ್ವಚ್ಛವಾಗಿ ಗುಡಿಸಿ ನೀರು ಇಲ್ಲವೇ ಸೆಗಣಿಯಿಂದ ಸಾರಿಸಿ ಬಿಳಿಯ ಪುಡಿಯಿಂದ ಹೊಸ್ತಿಲು ಹಾಗೂ ಅಂಗಳದಲ್ಲಿ ಪುಟ್ಟ ಗೆರೆಗಳ ಚುಕ್ಕಿ ಚಿತ್ರವನ್ನು ರಂಗೋಲಿ ಪುಡಿ ಇಲ್ಲವೇ ಚಾಕ್ ಪೀಸಿನಿಂದ ಎಳೆದು ಬಿಟ್ಟರೆ ಆಯ್ತು. ಅಲ್ಲಿಂದ ಆ ಮನೆಯ ಹೆಣ್ಣುಮಗಳ ದಿನಚರಿ ಆರಂಭ. ಭಾನುವಾರದಿಂದ ಶನಿವಾರದ ತನಕ ಮುಂಜಾನೆ ದಿನಕ್ಕೊಂದು ರೇಖಾ ಕೃತಿ, ತ್ರಿಭುಜಾಕೃತಿ, ಹೂವಿನ, ಪಕ್ಷಿ ಪ್ರಾಣಿಗಳ ಚಿತ್ರಗಳು ಮನೆಯ ಮುಂದೆ ರಾರಾಜಿಸಿ ಕೇವಲ ಮನೆಯವರಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ನಡೆಯುತ್ತಿರುವ ಎಲ್ಲರ ಮನವನ್ನು ಥಟ್ಟನೆ ಸೆಳೆಯುತ್ತದೆ. ಅದು ರಂಗೋಲಿಯ ವಿಶೇಷತೆ. ಅದೇ ರಂಗವಲ್ಲಿಯಲ್ಲಿರುವ ಆಪ್ತತೆ.

ರಂಗವಲ್ಲಿ, ರಂಗೋಲಿ, ಮುಗ್ಗು, ಕೋಲಂ.. ಹಲವಾರು ಹೆಸರಿನಿಂದ, ಆಯಾ ಪ್ರದೇಶ ಭಾಷೆಗಳಿಗೆ ಅನುಗುಣವಾಗಿ ಜನಪ್ರಿಯವಾಗಿದೆ ರಂಗೋಲಿ. ಆದರೆ, ಈ ಚಿತ್ತಾರದ ಸಂಭ್ರಮ ನಮ್ಮ ದಕ್ಷಿಣ ಭಾರತೀಯರಲ್ಲಿ ಇದ್ದಷ್ಟು ಉತ್ತರ ಭಾರತೀಯರಲ್ಲಿ ಕಾಣ ಸಿಗುವುದಿಲ್ಲ. ಮನೆ ಬಾಗಿಲು ತೊಳೆದಿಲ್ಲ ರಂಗೋಲಿ ಇಟ್ಟಿಲ್ಲ ಎನ್ನುವುದನ್ನು ವಚನವೊಂದರಲ್ಲಿ ಬಸವಣ್ಣನವರು ಹೊಸಲಿನಲ್ಲಿ ಬೆಳೆದ ಹುಲ್ಲನ್ನು ಉದಾಹರಿಸಿ ಹೇಳುತ್ತಾರೆ. ಅಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಈ ಕಲೆ.

ರಂಗೋಲಿಗೆ ಸಂಬಂಧಪಟ್ಟಂತೆ ಅನೇಕ ಕಥೆಗಳು ಜಾರಿಯಲ್ಲಿವೆ. ಆದರೆ ಬಲಿ ಚಕ್ರವರ್ತಿ ಭೂಮಿಯನ್ನು ಆಳುತ್ತಿದ್ದ ಸಂದರ್ಭದಲ್ಲಿ ಆತನ ರಾಜ್ಯಭಾರದ ರೀತಿಗೆ ಇಡೀ ದೇವತೆಗಳಲ್ಲಿ ಬೆವರು ಕೀಳಲು ಆರಂಭ ಆಯ್ತು. ಆಗ ಅವರು ವಿಷ್ಣುವಿನ ಪಾದಕ್ಕೆ ಬಿದ್ದು ಅಪ್ಪ ತಂದೆ ಕಾಪಾಡು, ಈ ಬಲಿಯನ್ನು ಹೀಗೆ ಬಿಟ್ರೆ ಈತ ನಮ್ಮ ಪಾಪ್ಯುಲಾರಿಟಿಯನ್ನು ಹಾಳು ಮಾಡ ಬಿಡ್ತಾನೆ, ಈತನಿಗೊಂದು ಗತಿ ಕಾಣಿಸು ಅಂತ ಬೇಡಿ ಕೊಂಡಾಗ, ವಾಮನ ರೂಪಧಾರಿಯಾದ ಭಗವಂತ ಆತನನ್ನು ಪಾತಾಳಕ್ಕೆ ಕಳುಹಿಸಿದ.

ಆ ಸಂದರ್ಭದಲ್ಲಿ ಬಲಿಯ ಮೇಲೆ ಪ್ರೀತಿ ಉಕ್ಕಿ ಮಗನೆ ನಿನಗೊಂದು ವರ ಕೊಡ್ತೀನಿ ಕೇಳು ಏನು ಬೇಕು ಅಂದಾಗ ತಾನು ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ನೋಡಲು ಭೂಮಂಡಲಕ್ಕೆ ಬರುವ ಆಶಯ ವ್ಯಕ್ತಪಡಿಸುತ್ತಾನೆ. ಆಂಧ್ರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸಂಕ್ರಾಂತಿ ದಿನ, ಕರ್ನಾಟಕದ ಕೆಲವು ಕಡೆ ದೀಪಾವಳಿಯ, ಕೇರಳದವರಿಗೆ ತಿರು ಓಣಂ ದಿನ ಬಲಿ ಚಕ್ರವರ್ತಿಯ ಆಗಮನ ಆಗುತ್ತದೆ ಅನ್ನುವ ಅಪಾರವಾದ ನಂಬಿಕೆ ಇದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಒಂದಿದೆ, ಬಲಿ ಬರುವನೆಂದು ನಂಬಿರುವ ಆ ದಿನಗಳಲ್ಲಿ ರಂಗೋಲಿಗೆ ಹೆಚ್ಚು ಮಹತ್ವ!

ಮನೆಯ ಒಳಗೂ ಹೊರಗೂ ರಂಗೋಲಿ ರಾರಾಜಿಸುತ್ತದೆ. ಹಬ್ಬಗಳ ಸಂದರ್ಭದಲ್ಲಿ ವಿಶೇಷವಾಗಿ ಹಾಕುವ ರಂಗೋಲಿ ಹಲವಾರು ಬಣ್ಣ ಮತ್ತು ವಿನ್ಯಾಸಗಳಿಂದ ಮನ ಸೆಳೆಯುತ್ತದೆ. ಯಾವುದೇ ಒಂದು ಶುಭ ಕಾರ್ಯಕ್ರಮದಲ್ಲಿ ರಂಗೋಲಿ ಇರಲೇಬೇಕು. ದೇವರನ್ನು ಪೀಠದ ಮೇಲೆ ಕುಳ್ಳರಿಸುವ ಮುನ್ನ ಅದರ ಮೇಲೆ ಎರಡು ಗೆರೆಯನ್ನು ಎಳೆಯಲೇಬೇಕು. ಮದುವೆಯಂತಹ ಶುಭ ಕಾರ್ಯದಲ್ಲಿ ವಧುವರ ಕೂರುವ ಕಡೆ ರಂಗೋಲಿ ಪ್ರಾಧಾನ್ಯತೆ ಪಡೆದೇ ಇರುತ್ತದೆ.

ಅದೇ ರೀತಿಯಲ್ಲಿ ದೇವಾಲಯ, ಗೃಹಪ್ರವೇಶ ಮುಂತಾದ ಕಡೆ ಮಾಡುವ ಯಾಗದ ಆರಂಭಕ್ಕೆ ಮುನ್ನ ಹೋಮ ಕುಂಡವನ್ನು ರಂಗೋಲಿಯಿಂದ ಅಲಂಕರಿಸಲಾಗಿರುತ್ತದೆ. ಹೀಗೆ ಎಲ್ಲ ಕಡೆ ಇದು ವಿರಾಜಮಾನ! ಹಾಗಂತ ಕೇವಲ ಶುಭಕ್ಕೆ ಮಾತ್ರವಲ್ಲ ರಂಗೋಲಿ ಬಳಕೆ ಆಗುವುದು. ದುಷ್ಟ ಶಕ್ತಿಯ ಆವಾಹನೆಗೆ ಮುನ್ನವೂ ಮಾಡುವ ಪೂಜೆಗಳಲ್ಲಿ ರಂಗೋಲಿಗೆ ಆದ್ಯತೆ ಇದ್ದೆ ಇರುತ್ತದೆ. ಪೈಶಾಚಿಕ ವಿನ್ಯಾಸಗಳು ಇಲ್ಲಿ ರಾರಾಜಿಸುತ್ತದೆ ಅಷ್ಟೆ!

ದೇಶವಿಡೀ ಒಮ್ಮೆ ದೃಷ್ಟಿ ಹಾಯಿಸಿದರೆ ನಮಗೆ ರಂಗೋಲಿಯ ವಿನ್ಯಾಸಗಳಲ್ಲಿ ಹೋಲಿಕೆ ಇರುವ ಶೈಲಿಗಳು ಕಾಣ ಸಿಗುತ್ತದೆ. ದೇಶದ ಕೆಲವು ಕಡೆ ರಂಗೋಲಿ ಛಾವಣಿಯನ್ನು ಅಲಂಕರಿಸಿದ್ದರೆ, ನಮ್ಮಲ್ಲಿ ನೆಲದ ಸೊಬಗು ಹೆಚ್ಚಿಸಿರುತ್ತದೆ. ಬಂಗಾಲದಲ್ಲಿ ಅಲ್ಪನ, ಬಿಹಾರದಲ್ಲಿ ಅರಿಪನ, ರಾಜಸ್ತಾನದಲ್ಲಿ ಮದನ, ಕರ್ನಾಟಕ, ಮಹಾರಾಷ್ಟ್ರ, ಗುಜರಾತಿನಲ್ಲಿ ರಂಗೋಲಿ, ಉತ್ತರ ಪ್ರದೇಶದಲ್ಲಿ ಚೌಕಪೂರ್ಣ.. ಇವೆಲ್ಲ ಸ್ಥಳೀಯ ಹೆಸರುಗಳು. ಗಣಿತದ ವಿನ್ಯಾಸಗಳು, ಗೆರೆಗಳು, ಚುಕ್ಕೆಗಳು, ತ್ರಿಭುಜ, ವೃತ್ತ, ಸ್ವಸ್ತಿಕ್, ಕಮಲ, ಪಾದಗಳು, ಮೀನು ಹೀಗೆ ಹತ್ತು ಹಲವಾರು ರೀತಿಯಲ್ಲಿ ರಂಗೋಲಿ ಇರುತ್ತದೆ. ಕೇರಳದಲ್ಲಿ ಹೂವಿನಿಂದ ಅಲಂಕಾರ ಮಾಡುತ್ತಾರೆ. ಓಣಂ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ರಂಗೋಲಿ ರಾರಾಜಿಸುತ್ತದೆ. ತುಂಬೆ ಹೂವಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಅದೇ ರೀತಿ ಇತರ ಪ್ರದೇಶಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ದೀಪಗಳ ರಂಗೋಲಿ ಮನೆಯಂಗಳದಲ್ಲಿ ಹೊಳೆಯುತ್ತದೆ.

ರಂಗೋಲಿ ಪುಡಿ, ಸುಣ್ಣ, ಅಕ್ಕಿ, ರವೆಯಿಂದ ರಂಗೋಲಿ ಹಾಕಲಾಗುತ್ತದೆ. ಚುಕ್ಕೆ ಇಡುವ ರಂಗೋಲಿಯಲ್ಲಿ ಗೆರೆ, ಸುರಳಿ ಹೀಗೆ ಹಲವು ವಿಧ ಇದ್ದೇ ಇದೆ. ಸುರಳಿಯಲ್ಲಿ ಚುಕ್ಕೆಯಿಂದ ಆರಂಭ ಆದ ರಂಗೋಲಿ ಎಲ್ಲಿಯೂ ನಿಲ್ಲದೆ ಕೊನೆಗೆ ಯಾವುದರಿಂದ ಪ್ರಾರಂಭ ಆಗುತ್ತದೆಯೋ ಅಲ್ಲಿಗೆ ಬಂದು ಸೇರಬೇಕು. ಕೆಲವು ಕೇವಲ ಹೂವು, ಹಣ್ಣಿಗೆ ಸೀಮಿತ. ಇಲ್ಲಿ ಒಂದು ಸಂಗತಿಯನ್ನು ಗಮನಿಸಬೇಕು, ಪ್ರದೇಶ ಯಾವುದೇ ಇರಲಿ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗೋಲಿ ಡಿಜೈನುಗಳಿಗೆ ಹೆಚ್ಚು ಆದ್ಯತೆ ನೀಡುವುದು ಪ್ರಕೃತಿದತ್ತ ಸಂಗತಿಗಳಿಗೆ ಎಂಬುದೇ ಸತ್ಯ!

ಹಿಟ್ಟನ್ನು ಮುಷ್ಟಿಯಲ್ಲಿ ಹಿಡಿದು ಹೆಬ್ಬೆರಳು ಹಾಗೂ ತೋರು ಇಲ್ಲವೇ ಮಧ್ಯದ ಬೆರಳಿನ ಸಹಾಯದಿಂದ ನಿಧಾನವಾಗಿ ಜಾರಿಸುತ್ತಾ ಚುಕ್ಕಿ ಇಡಬೇಕು. ಆರರಿಂದ ಆರು, ಒಂದರಿಂದ ಹದಿನಾಲ್ಕು, ಹೀಗೆ ಹಲವಾರು ರೀತಿಯ ಲೆಕ್ಕಾಚಾರಗಳು ರಂಗೋಲಿಯಲ್ಲಿ ಇರುತ್ತದೆ. ಒಂದು ಚುಕ್ಕೆ ತಪ್ಪಿದರೂ ರಂಗೋಲಿ ದಾರಿ ತಪ್ಪಿ ಬಿಡುತ್ತದೆ. ಅದೇ ರೀತಿ ಹಾಕುವ ರಂಗೊಲಿಯು ಎಲ್ಲ ಕಡೆಯಿಂದಲೂ ಸಮವಾಗಿ ಇರಬೇಕು. ಒಂದು ಮನೆ ದೊಡ್ಡದು ಮತ್ತೊಂದು ಮನೆ ಚಿಕ್ಕದಾದರೆ ನೋಡೋಕೆ ಚೆನ್ನಾಗಿರಲ್ಲ.

ರಂಗೋಲಿಗೆ ತುಂಬುವ ಬಣ್ಣಗಳನ್ನು ಬಳಕೆ ಮಾಡುವ ಮುನ್ನ ಅದಕ್ಕೆ ಸ್ವಲ್ಪ ಮರಳು ಬೆರೆಸಿ ಆಗ ಅವು ಬಣ್ಣಗೆಡುವುದಿಲ್ಲ. ಸಮಯ, ಸಹನೆ ಇದ್ದರೆ ಫಿಲ್ಟರ್ ನಲ್ಲಿ ಉಳಿದಿರುವ ಕಾಫಿ, ಟೀ ಡಸ್ಟ್ ಒಣಗಿಸಿ ಇಡಿ ನಿಮ್ಮ ರಂಗೋಲಿ ಅಂದ ಹೆಚ್ಚಿಸುತ್ತದೆ. ರವೆಗೆ ಬಣ್ಣ ಹಾಕಿ ಒಣಗಿಸಿ ಉಪಯೋಗಿಸಿ. ಬಣ್ಣ ತುಂಬುವುದಕ್ಕೆ ಮುನ್ನ ಒಮ್ಮೆ ಟ್ರಯಲ್ ನೋಡಿ. ನಿಮ್ಮ ಕ್ರಿಯೇಟಿವಿಟಿ ರಂಗೋಲಿಯನ್ನು ಹೆಚ್ಚು ಸುಂದರಗೊಳಿಸುತ್ತದೆ.

ರಂಗೋಲಿ ನಮ್ಮ ಬದುಕಿನಲ್ಲಿ ಆಪ್ತ, ಅವಿನಾಭಾವ ಸಂಬಂಧ ಪಡೆದಿದೆ. ಭಾರತೀಯ ಮನೆ ಮನಗಳ ಅಪರೂಪದ ಬೆಸುಗೆ ರಂಗೋಲಿ. ನಮ್ಮತನದ ಸಂಕೇತವಾದ ರಂಗೋಲಿ ಸಂಸ್ಕೃತಿಯನ್ನು ಹೆಚ್ಚು ಹೆಚ್ಚು ಹಾಕುವುದರ ಮೂಲಕ ಜೀವಂತವಾಗಿ ಇಡೋಣ...ಅಲ್ವೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more