• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಪರದೆ ಇಳಿದ ಮೇಲೂ ನೆನಪುಳಿಯುವ ಬದುಕು ನಮ್ಮದಾಗಲಿ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಯಾವುದೇ ದೇಶ, ಭಾಷೆ, ಜಾತಿ ಮತ ಅಂತ ತೆಗೆದುಕೊಂಡರೂ ಅವರವರದ್ದೇ ಆದ ಸಭೆ ಸಮಾರಂಭಗಳು ಇರುತ್ತವೆ. ಆಯಾ ಸಮಾರಂಭಕ್ಕೆ ಮುಂಚೆ ಎಷ್ಟು ಕೆಲಸಗಳು ಇರುತ್ತದೋ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಕೆಲಸ ಸಮಾರಂಭದ ನಂತರ ಇರುತ್ತದೆ. ಆದರೆ ಎರಡೂ ಮನಸ್ಸಿನ ಭಾವನೆಗಳು ಮಾತ್ರ ವಿರುದ್ಧ ದಿಕ್ಕಿನದ್ದಾಗಿರುತ್ತದೆ.

   ಚಳಿಗಾಳಿಗೆ ತತ್ತರಿಸುತ್ತಿದೆ ಅಮೇರಿಕಾ | ಈ ವಿಡಿಯೋ ನೋಡಿ | Oneindia Kannada

   ನಮ್ಮದೇ ಪಯಣದ ಒಂದು ವಿಚಾರ ಕೈಗೆತ್ತಿಕೊಳ್ಳುತ್ತೇನೆ ಕೇಳಿ. ಭಾರತ ಪ್ರವಾಸ ಮಾಡಬೇಕು ಎಂದಾಗ ಅದಕ್ಕೆ೦ದು ಟಿಕೆಟ್ ಗಾಗಿ ಹುಡುಕಾಟ ನಡೆಯುತ್ತದೆ. ಯಾವ್ಯಾಯ flight ಅನುಭವಗಳು ಈ ಮುಂಚಿನ ಪಯಣದಲ್ಲಿ ಹೇಗಿತ್ತು ಅಂತ ಮನಸ್ಸಿಗೆ ತಂದುಕೊಂಡು ಕೆಟ್ಟ ಅನುಭವದ flight ಗಳನ್ನು ಪರಿಗಣಿಸದೇ ಹೋಗೋದು ಎಂಬೆಲ್ಲಾ homework ಮಾಡಿ ಆಮೇಲೆ ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ಪಯಣಿಸಬಹುದು, ರಜೆ ಇತ್ಯಾದಿ ಇತ್ಯಾದಿ ಎಲ್ಲವನ್ನೂ ಪರಿಗಣಿಸಿ ಇಂಥಾ ದಿನಗಳಿಗೆ ಅಂತ ನಿರ್ಧರಿಸಿ, ಟಿಕೆಟ್ block ಮಾಡಿಸಿ, ರಜೆ approve ಮಾಡಿಸಿಕೊಂಡು ನಂತರ ಟಿಕೆಟ್ ಮಾಡಿಸಿಕೊಳ್ಳುವುದೇ ದೊಡ್ಡ ಹಂತವಾಗಿರುತ್ತದೆ.

   ಶ್ರೀನಾಥ್ ಭಲ್ಲೆ ಅಂಕಣ; ಆಚಾರವಂತ ಈ ನಾಲಿಗೆ ಅಂತ ಅನ್ನೋಣವೇ?

   ಆಮೇಲೆ ಬೇಕೂ ಬೇಡದ shopping ನಡೆಯುತ್ತದೆ. ಎಲ್ಲ ಮುಗಿದು, ಲಗೇಜ್ ಪ್ಯಾಕ್ ಮಾಡಿ ಹೊರಡುವುದೇ ಒಂದು ಸಮಾರಂಭ. ಆಮೇಲೆ ಫ್ಲೈಟ್ ಹತ್ತೋದು, ಬೆಂಗಳೂರಿನಲ್ಲಿ ಇಳಿಯೋದು, ಅಲ್ಲಿ ಓಡಾಟ, ಊಟ ತಿಂಡಿ, ಭೇಟಿ ಎಲ್ಲವೂ ಒಂದು ರೀತಿ ಸಮಾರಂಭವಾದರೆ, ವಾಪಸ್ ಬರುವುದು ಇನ್ನೊಂದು ರೀತಿ. ಇಲ್ಲಿ ಗಮನಿಸಬೇಕಾದ್ದು ಎಂದರೆ, ಎಲ್ಲ ಸಮಾರ೦ಭಕ್ಕೂ ತೆರೆ ಎಳೆಯುವ ಹಂತ ಇದ್ದೇ ಇರುತ್ತದೆ ಅಂತ. ಕೊನೆಯ ದಿನಗಳಲ್ಲಿ ಮತ್ತೆ ಲಗೇಜ್ ತುಂಬಿಸೋದು, ವಾಪಸ್ ಬರೋದು, ಕೆಲಸಕ್ಕೆ ಹೋಗೋದು ಇತ್ಯಾದಿ ಇತ್ಯಾದಿ. ಭಾರತ ಪ್ರವಾಸ ಮಾಡುವ ಮುನ್ನ ಮತ್ತು ಅಲ್ಲಿ ಕಳೆವ ದಿನಗಳ ಹುರುಪು ಎಷ್ಟಿರುತ್ತೋ ಅಷ್ಟೇ ಬೇಸರ ವಾಪಸ್ ಬರುವಾಗ ಮೂಡಿರುತ್ತದೆ.

   ಈಗ ಹೇಳಿದ ಒಂದು ಸನ್ನಿವೇಶ ಇಂದು ಆಡುವ ಮಿಕ್ಕೆಲ್ಲಾ ಮಾತುಗಳ ಒಂದು ಸಾಮಾನ್ಯ ಅಂಶ ಅಥವಾ ರಚನೆ ಆಗಿರುತ್ತದೆ ಅನ್ನಿ. ರಜಾ ದಿನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಒಂದು ಪ್ರವಾಸಕ್ಕೆ ಹೋಗಬೇಕು ಎಂದಾಗಲೂ ಮೇಲಿನ ಎಲ್ಲಾ ಅಂಶಗಳು ಅಲ್ಲಿರುತ್ತವೆ. flight ಇರಬಹುದು ಅಥವಾ ಕಾರು, ಬಸ್, ಟ್ರೈನ್ ಏನು ಬೇಕಾದರೂ ಆಗಿರಬಹುದು. ಆದರೆ ಮೊದಲಿನ ಹುರುಪು ನಂತರ 'ಥತ್, ನಾಳೆಯಿಂದ ಅದೇ ಬಾಸ್ ಮುಖ ನೋಡಬೇಕು ಎಂಬ ಬೇಸರ' ಮಾತ್ರ ಸಾಮಾನ್ಯ ಅಂಶ.

   ಶ್ರೀನಾಥ್ ಭಲ್ಲೆ ಅಂಕಣ; ಬುದ್ಧಿಗೆ ಕಸರತ್ತು ನೀಡಬೇಕಾದ್ದು ಯಾಕೆ?

   ಒಂದು ಮದುವೆಯ ಸಮಾರಂಭ ತೆಗೆದುಕೊಂಡರೆ ಅದೊಂದು ದೊಡ್ಡ ಪ್ರಾಜೆಕ್ಟ್ ಎಂದರೆ ತಪ್ಪಾಗಲಾರದು. ಗಂಡು/ಹೆಣ್ಣಿಗಾಗಿ ಹುಡುಕಾಟದಿಂದ (ಅವಶ್ಯಕತೆ ಇದ್ದರೆ) ಶುರುವಾಗಿ ಮದುವೆಯ ಸಮಾರಂಭ ಸರಳವಾಗಿ ಮುಗಿಯುವ ತನಕ ಒಂದು ಹಂತ. ಆಮೇಲಿನದ್ದು ಇನ್ನೊಂದು ರೀತಿ. ಮನೆಗೆ ಬಂದ ಜನಗಳೆಲ್ಲಾ ತಮ್ಮ ತಮ್ಮ ಗೂಡಿಗೆ ಸೇರಿದ ನಂತರ ಮತ್ತೆ ನೀವು ನೀವಾಗಿ ಇರುವಾಗ, ಎಲ್ಲ ಗದ್ದಲ ಕಡಿಮೆಯಾಗಿ ಸಂಪೂರ್ಣ ಶಾಂತವಾದಾಗ ಕೆಲವೊಮ್ಮೆ ಮನಸ್ಸಿಗೆ ಹಾಯ್ ಎನಿಸಬಹುದು. ಆದರೆ ಹಲವು ಬಾರಿ ಮನ ಭಣಗುಟ್ಟೋದು ಸಹಜ. ಇದ್ದೊಬ್ಬಳ ಮಗಳ ಮದುವೆ ಆಗಿ, ಮನೆಯಿಂದ ಹೋಗಾಯ್ತು ಎಂದಾಗ ಹೀಗೆ ಆಗೋದು ಸಹಜ ಅಂತ ಕೇಳಿದ್ದೇನೆ. ನನ್ನ ಮನೆಯಲ್ಲಂತೂ ನೋಡಿಲ್ಲ.

   ಇಲ್ಲಿ ನವೆಂಬರ್ ತಿಂಗಳ ಕೊನೆಯಿಂದ ಹಿಡಿದು ಜನವರಿ ಮೊದಲ ವಾರದವರೆಗೂ ಕ್ರಿಸ್ಮಸ್ ಪ್ರಯುಕ್ತ ದೀಪಾಲಂಕಾರ ಮಾಡಬಹುದು. ಆ ನಂತರ ಅದನ್ನು ಕಡ್ಡಾಯವಾಗಿ ತೆಗೆಯಲೇಬೇಕು ಅಂತ ಕಾಯ್ದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಹೋದ ಕಡೆಯೆಲ್ಲಾ, ಅರ್ಥಾತ್ ಹಲವಾರು ಮನೆಗಳು, ಮಾಲ್ ಅಥವಾ ಅಂಗಡಿಗಳೂ ಹೀಗೆ ಎಲ್ಲೆಲ್ಲೂ ದೀಪಗಳನ್ನು ನೋಡುತ್ತಾ ಆಮೇಲೆ ಒಂದು ದಿನ ಎಲ್ಲ ಅಲಂಕಾರಗಳನ್ನು ತೆಗೆದು ಕೆಳಗಿಳಿಸುವಾಗ ಶೂನ್ಯ ಭಾವನೆ ಮೂಡೋದು ಸಹಜ.

   ಶ್ರೀನಾಥ್ ಭಲ್ಲೆ ಅಂಕಣ; slang ಅಂದ್ರೆ ಆಡುಭಾಷೆ, ಅಶಿಷ್ಟಭಾಷೆ

   ಒಂದು ಸಾಂಘಿಕ ಚಟುವಟಿಕೆಯನ್ನೇ ಉದಾಹರಣೆ ತೆಗೆದುಕೊಂಡಾಗ, ಆ ಕಾರ್ಯಕ್ರಮದ ಮುಂಚೆ ಹಲವಾರು ದಿನಗಳ ತಾಲೀಮು, ನಂತರ ಸಮಾರಂಭದ ದಿನ ಕಾರ್ಯಕ್ರಮಗಳಾದ ನಂತರ ಬಂದಿಳಿದಿದ್ದ ಮಂದಿ ತಮ್ಮ ಮನೆಗಳಿಗೆ ಹೋಗೋದು ಸಹಜ. ಕಾರ್ಯಕಾರಿ ಸಮಿತಿ ಅಂತ ಉಳಿದವರು ಮಾಡಿರುವ ಸ್ಟೇಜ್ ಅಲಂಕಾರ ಕೆಳಕ್ಕೆ ಇಳಿಸಲೇಬೇಕು ಅಲ್ಲವೇ? ಇಂಥದ್ದೇ ಒಂದು ಸನ್ನಿವೇಶವನ್ನು 'ರಂಗನಾಯಕಿ' ಚಿತ್ರದಲ್ಲಿ ರಾಜಾನಂದ್ ಪಾತ್ರದಲ್ಲಿ ಬಹಳ ಸೊಗಸಾಗಿ ಹೇಳಲಾಗಿದೆ. ತೆರೆಯ ವಿಜೃಂಭಣೆ ನೋಡಿ ಇದೇ ನಿತ್ಯ ಸತ್ಯ ಎಂದುಕೊಳ್ಳಬೇಡ, ತೆರೆ ಕೆಳಕ್ಕೆ ಇಳಿಸಿದ ಮೇಲೆ ಅದರ ಹಿಂದೆ ಕಾಣೋದು ಪಳೆಯುಳಿಕೆಯಂತಹ ಬೊಂಬುಗಳು ಎಂಬ ಅರ್ಥದಲ್ಲಿ ಹೇಳಲಾಗಿದೆ.

   ಮನೆಯಲ್ಲಿ ಒಬ್ಬರ ಜೀವಹಾನಿ ಆಗಿದೆ ಎಂದು ಅಂದುಕೊಳ್ಳಿ. ಸಮೀಪದ ಬಂಧುಗಳು ಬರುತ್ತಾರೆ, ಜೊತೆಗೇ ಇರುತ್ತಾರೆ. ಆ ನಂತರದ ಒಂದು ದಿನ, ಎಷ್ಟನೆಯ ದಿನವೋ ಗೊತ್ತಿಲ್ಲ, ಮನೆಯ ಮಂದಿ ಬಿಟ್ಟು ಹೊರಗಿನವರು ಎಲ್ಲರೂ ಕಡ್ಡಾಯವಾಗಿ ಹೋಗಲೇಬೇಕು ಎಂಬ ಶಾಸ್ತ್ರವಿದೆ. ಆ ದಿನ ಜೀವನದ ದೊಡ್ಡ ಶೂನ್ಯ ದಿನ ಅಂತಲೇ ಅಂದು ಅಪ್ಪನನ್ನು ಕಳೆದುಕೊಂಡ ದಿನಗಳಲ್ಲಿ ಅನ್ನಿಸಿದ್ದು. ನಾವೆಲ್ಲರೂ ಜೊತೆಯಲ್ಲೇ ಇದ್ದು, ಅಮ್ಮ ಇದ್ದಕ್ಕಿದ್ದ ಹಾಗೆ ಒಂಟಿಯಾದರಾ ಅಂತ ಆಲೋಚಿಸಿದಾಗ ಶೂನ್ಯ ಆವರಿಸಿದ್ದು ಸುಳ್ಳಲ್ಲ.

   ಒಂದು ದೊಡ್ಡ ಸಮಾರಂಭ ಅಂದಾಗ ಅಲ್ಲಿ ಕಾರ್ಯಕ್ರಮ ಆಯೋಜಕರು ಮಾತ್ರ ಮುಖ್ಯವಾಗೋದಿಲ್ಲ. ಬದಲಿಗೆ ಅಲ್ಲಿ ಇತರರೂ ಆಯಾ ಸಮಯಕ್ಕೆ ಮುಖ್ಯರಾಗಿಯೇ ಇರುತ್ತಾರೆ. ಆದರೆ ಆ ಸಮಯ ಜಾರಿದಂತೆ ಅವರು ಬೇಡವಾಗುತ್ತಾರೆ. ಒಂದು ಮದುವೆ, ಉಪನಯನ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಪುರೋಹಿತರ ಪಾತ್ರ ದೊಡ್ಡದು ಅಂತ ಎಲ್ಲರಿಗೂ ಗೊತ್ತು. ಆದರೆ ಆ ಸಮಯ ಮೀರಿದ ಕೂಡಲೇ ಅವರ ಬೇಕುಬೇಡಗಳನ್ನು ಗಮನಿಸುವವರೇ ಇಲ್ಲದೇ ಹೋಗುತ್ತಾರೆ. ಪೌರೋಹಿತ್ಯಕ್ಕೆ ಒಪ್ಪಿಸುವಾಗ ಇಂದ್ರ-ಚಂದ್ರ ಅಂತ ಹೊಗಳಿಯೇ ಬುಕ್ ಮಾಡುತ್ತಾರೆ. ಆದರೆ ಕೆಲಸವಾದ ಮೇಲೆ ಅವರ ಸಂಭಾವನೆ ನೀಡುವುದಕ್ಕೂ ತಡ ಮಾಡುತ್ತಾರೆ.

   ಎಷ್ಟೆಷ್ಟೋ ಸಮಾರಂಭಗಳಲ್ಲಿ ಸ್ಟೇಜ್ decoration ಮಾಡುವವರಿಗೆ, ಹೂವುಗಳ suppliersಗೆ, ಕೆಲವೊಮ್ಮೆ plannersಗಳಿಗೆ ಕೆಲಸವಾದ ಮೇಲೆ ಹಣ ನೀಡಲೇ ಸತಾಯಿಸುತ್ತಾರೆ. ಮೇಲೇರುವಾಗ ಬಳಸಿದ ಏಣಿಯನ್ನು ಹತ್ತಿದ ಮೇಲೆ ಒದೆಯುವುದು ಧರ್ಮವಲ್ಲ. ಆದರೆ ಇಂದಿನ ದಿನಗಳಲ್ಲಿ ಧರ್ಮ-ಕರ್ಮ ಅಂತ ನೋಡುವವರಾರು?

   ಇಲ್ಲಿ ಎರಡು ವಿಚಾರಗಳನ್ನು ಗಮನಿಸಬಹುದು. ಒಂದೆಡೆ, ತೆರೆ ಎಳೆದ ಮೇಲೆ, ಅರ್ಥಾತ್ ಸಮಾರಂಭ ಮುಗಿದ ಮೇಲೆ ಅಲ್ಲೊಂದು ಶೂನ್ಯ ವಾತಾವರಣ ಉಂಟಾಗುತ್ತದೆ. ಮತ್ತೊಂದೆಡೆ ಸಮಾರಂಭ ಮುಗಿದ ಮೇಲೆ ಅವರನ್ನು ಮರೆತೇಬಿಡುತ್ತಾರೆ.

   ಇದೆಲ್ಲದರ ಆಚೆ ಮತ್ತೊಂದು ವಿಚಾರ ಇದೆ. ಅದೇ flashback. ಇದು ಮಧುರವಾದದ್ದೂ ಆಗಬಹುದು, ನೋವಿನದ್ದೂ ಆಗಬಹುದು. ಮಧುರ ನೆನಪುಗಳನ್ನೇ ತೆಗೆದುಕೊಂಡರೆ, ನೆನಪುಗಳ ಮಾತು ಮಧುರ ಅಂತಾರಲ್ಲಾ ಅದು. ಒಂದು ಸಮಾರಂಭವಾದ ಮೇಲೆ ಅದನ್ನು ಕುರಿತು ಮಾತನಾಡೋದು, ಛೇಡಿಸುವುದು, ವಿಡಿಯೋಗಳನ್ನ ಅಥವಾ ಫೋಟೊಗಳನ್ನು ನೋಡಿ ಆನಂದಿಸುವುದು ಒಂಥರಾ ಸಂತೋಷ ನೀಡುತ್ತದೆ. ಮನಸ್ಸಿನಲ್ಲಿ ಆಹ್ಲಾದಕರ ಗಾಳಿ ಬೀಸುತ್ತದೆ.

   ಕೆಲವರಿಗೆ ಮತ್ತೆ ಮತ್ತೆ ಆ ದಿನಗಳನ್ನು ಮೆಲುಕು ಹಾಕುವ ಫೋಟೊಗಳನ್ನು ನೋಡುವುದು ಎಂದರೆ ಬಹಳ ಇಷ್ಟವಾದ ಕೆಲಸ. ಆ ಸಂದರ್ಭದಲ್ಲಿ ಜೊತೆಗೆ ಇದ್ದ ಮಂದಿ ಸಿಕ್ಕಾಗ ಅದರ ಬಗ್ಗೆ ಮಾತನಾಡಲು ಬಹಳ ಇಷ್ಟವಾಗುತ್ತದೆ. ಉದಾಹರಣೆಗೆ, ನಾವೊಂದು ಐದು ಸಂಸಾರಗಳು ಕಳೆದ ವರ್ಷ ಅಲಾಸ್ಕಾ cruise trip ಮಾಡಿದ್ದೆವು. ಈ ನಮ್ಮ ಗುಂಪು ಒಟ್ಟಿಗೆ ಸೇರಿದಾಗಲೆಲ್ಲಾ, ಇಂದಿಗೂ ಆ ಟ್ರಿಪ್ ಬಗ್ಗೆ ಮಾತಾಡದೇ ಇರೋದಿಲ್ಲ.

   ಅಂಕಪರದೆ ಮೇಲೇರುತ್ತದೆ ಎಂದರೆ ಅದೊಂದು ಆರಂಭ. ಅಂಕಪರದೆ ಕೆಳಕ್ಕೆ ಇಳಿದಾಗ ಅಲ್ಲೊಂದು ಅಂತ್ಯ. ಮೇಲೇರಿದಾ ಪರದೆ ಕೆಳಗಿಳಿಯುವ ತನಕ ಇರುವುದೇ ಜೀವನ. ಇಲ್ಲಿ ನಮ್ಮ ಆಟ ಇರುತ್ತದೆ. ಅಂತೆಯೇ ನಮ್ಮ ಜೀವನದಲ್ಲಿ ಹಲವಾರು ಮಂದಿಯ ಆಟಗಳೂ ಇರುತ್ತವೆ. ಪರದೆ ಇಳಿದ ಮೇಲೂ ನಮ್ಮ ಪಾತ್ರವನ್ನು ಮಿಕ್ಕವರು ಆಸ್ವಾದಿಸುವ ಬದುಕು ನಮ್ಮದಾಗಲಿ. ಏನಂತೀರಾ?

   English summary
   Lead your life in a way that others should remember you in your absence also
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more