ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಂದರ ಸ್ವಪ್ನದಲ್ಲಿ ಮುಳುಗಿದ್ದ ಸುಬ್ಬನ ದಂತ ಭಗ್ನ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊದಲಿಗೆ ನಾನು ಯಾರು ಅಂತ ಹೇಳಿಬಿಡ್ತೀನಿ. ನಾನು ಬರಗೂರು ಕಮಲಾಕರ ರಾಮಕೃಷ್ಣ ಆಲಿಯಾಸ್ ಬಕರಾ ಆಲಿಯಾಸ್ ರಾಮಣ್ಣಿ. ನನ್ನ ಅರ್ಧ ಅಂಗಿ ಅರ್ಥಾತ್ ಹಾಫ್ ಷರಟು ಏಕಮೇವ ಅದ್ವಿತೀಯ ವಿಶಾಲೂ. ದಿನನಿತ್ಯದಲ್ಲಿ ಹಗಲಿನಲ್ಲಿ ಬೇರೆ ವಿಧಿಯಿಲ್ಲ ಆದರೆ ರಾತ್ರಿ ಊಟ ಮಾತ್ರ ಒಟ್ಟಿಗೆ ಮಾಡ್ತೀವಿ. ಅಂದ್ರೆ ಒಂದು ಹೊತ್ತು ಮಾತ್ರ ತನ್ನ ಪಾಡಿಗೆ ಮೇಯ್ವ, ಇನ್ನೊಮ್ಮೆ ನನ್ನೊಂದಿಗೆ ಮೇಯ್ವ ನನ್ನ ಹೃದಯದ ಒಡತಿ ಆಗಿರೋದ್ರಿಂದ ಅವಳ 'ಏಕಮೇವ'.

ನನ್ನ ಸ್ನೇಹಿತನೇ ಸುಬ್ಬ. ಸುಬ್ಬ ಒಬ್ಬ ಸೀದಾಸಾದಾ ಮನುಷ್ಯ. ಆರಕ್ಕೇಳದ ಮೂರಕ್ಕಿಳಿಯದ ಸರ್ವೇ ಸಾಧಾರಣ ಮಧ್ಯಮವರ್ಗದ ಪ್ರಾಣಿ. ತನ್ನ ನಡೆನುಡಿಯಿಂದ ಇನ್ನೊಬ್ಬರಿಗೆ ಹಿಂಸೆಯಾಗುತ್ತೆ ಅನ್ನೋ ಪರಿವೆ ಇಲ್ಲದೆ ತನ್ನಿಷ್ಟದಂತೆ ನಡೆಯೋ ಸುಬ್ಬನ ನಡೆ ಕೆಲವೊಮ್ಮೆ ಇಷ್ಟವಾಗುತ್ತೆ, ಹಲವೊಮ್ಮೆ ರೇಗುತ್ತೆ, ಒಮ್ಮೆ ಅಯ್ಯೋ ಅನ್ನಿಸುತ್ತೆ ಮತ್ತೊಮ್ಮೆ ಹಾಳಾಗ್ ಹೋಗ್ಲಿ ಇವನ ಜೊತೆ ಏನು ಜಗಳ ಆಡಿ ಸಾಧಿಸೋದು ಅಥವಾ ಬುದ್ದಿ ಹೇಳಿ ತಿದ್ದೋದು ಅಂತ ಸುಮ್ಮನಾಗ್ತಿದ್ದೆ.

You should exercise everyday : Conditions apply

ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?

ಸುಬ್ಬ ಇತ್ತೀಚೆಗೆ ವಾರ್ಷಿಕ ಚೆಕ್-ಅಪ್-ಗೆಂದು ಡಾಕ್ಟರ್ ಬಳಿ ಹೋಗಿದ್ದ. "ಹೀಗೂ ಉಂಟೇ? ಸುಬ್ಬ ಅವರು ವಾರ್ಷಿಕ ಪರೀಕ್ಷೆಗೆ ಹೋಗಿದ್ದಾದರೂ ಏಕೆ? ಅಲ್ಲಿ ನಡೆದಿದ್ದಾದರೂ ಏನು?" ಎನ್ನುವಷ್ಟು ಮಜಾ ಏನಿಲ್ಲ, ಈ ಸುದ್ದಿ ಬಿಡಿ. ನಾ ಹೇಳಿದೆ, ಅವನು ಹೋಗಿದ್ದ ಅಷ್ಟೇ!

ಅಲ್ಲೇನಾಯ್ತು ಅಂದ್ರೆ "ನೋಡಿ ಮಿ.ಸುಬ್ಬಣ್ಣ, ಬೀದಿಯಲ್ಲಿ ಬೋಂಡಾ, ಸಿಕ್ಕ ಸಿಕ್ಕಲ್ಲಿ ಸಿಹಿ, ಎಲೆ ಮುಂದೆ ಕೂತಾಗ ಇದೆ ಕೊನೆ ಊಟ ಅನ್ನೋ ಹಾಗೆ ತಿನ್ನೋದು, ಕೂತ ಕಡೆಯಿಂದ ಎದ್ದೇಳದೇ ಇರೋದು ಎಂದೆಲ್ಲಾ ಅತ್ಯುತ್ತಮ ಗುಣಗಳ ಖನಿಜ ಆಗಿರುವ ನಿಮಗೆ ವ್ಯಾಯಾಮದ ಅಗತ್ಯ ಖಂಡಿತ. ಈಗಲೇ ಇದರ ಕಡೆ ಗಮನ ಕೊಡಿ, ಇಲ್ಲದಿದ್ದರೆ ನಲವತ್ತಾದ ಮೇಲೆ ಫಲವತ್ತಾಗಿರೋ ಈ ದೇಹಕ್ಕೆ ನಾ ಮುಂದು ತಾ ಮುಂದು ಅಂತ ಖಾಯಿಲೆಗಳು ಕ್ಯೂ ನಿಂತುಕೊಳ್ಳುತ್ತೆ... ಎಚ್ಚರ" ಅಂತ ಪಾಶ ತೋರಿಸಿ ನುಡಿದಿದ್ದರು ಡಾ|ಯಮಸುತ!

ಇದೇ ವಿಷಯ ನಿಮಗೆ ಹೇಳಿದ್ರೆ ಭಾಳಾ ಸೀರಿಯಸ್ಸಾಗಿ ಯೋಚನೆ ಮಾಡ್ತಿದ್ರಿ ಅಲ್ವೇ? ಆದರೆ ಈ ಸುಬ್ಬ, ಅಲ್ಲಿಂದ ವಾಪಸ್ ಬಂದ ಮೇಲೆ, ಚಾಚೂ ತಪ್ಪದೆ ನನ್ನ ಮುಂದೆ ಈ ವಿಷಯ ಹೇಳಿ "ನೋಡಿದ್ಯೇನೋ ನಮ್ ಡಾಕ್ಟ್ರು ನನ್ ಬಗ್ಗೆ ಎಷ್ಟು ಚೆನ್ನಾಗಿ ಹೇಳಿದ್ರೂ? ನಾನು ಅತ್ಯುತ್ತಮ ಗುಣಗಳ ಖನಿಜ ಅಂದ್ರು ಕಣೋ... ಈಗ ಅದೇನೋ ವ್ಯಾಯಾಮ ಅಂದ್ರಲ್ಲಾ ಅದಕ್ಕೇನ್ ಮಾಡಬೇಕು ಹೇಳೋ"...

You should exercise everyday : Conditions apply

ಯಾರೋ ಏನೋ ಕೇಳ್ತಿದ್ದಾರೆ ಅಂದ್ರೆ ಅವಕಾಶ ಬಿಡಲಿಕ್ಕಾಗುತ್ತಾ... ವ್ಯಾಯಾಮ ಅಂದ್ರೇನು ಅದರ ಆಯಾಮ ಎಷ್ಟು ಅಂತೆಲ್ಲ ಪುಸ್ತಕದಲ್ಲಿ ಚಿತ್ರ ಬರೆದು ವಿವರಣೆ ಕೊಡುತ್ತಿದ್ದೆ. ಆದರೆ ಆಗ ಕೇಳಿದ್ದು 'ಅಯ್ಯಯ್ಯಮ್ಮ' ಅನ್ನೋ ಸಣ್ಣ ದನಿಯ ಚೀತ್ಕಾರ. ಸುಬ್ಬನಿಗೇನಾಯ್ತು ಎಂದು ತಲೆ ಎತ್ತಿದರೆ, ಸುಬ್ಬ ಅದ್ಯಾಕೋ ವಿಶಾಲೂ ಥರಾ ಕಾಣ್ತಿದ್ದ... "ಏಕೆ ಹೀಗಾಯ್ತೋ ನಾನು ಕಾಣೆನು" ಅಂತ ಹಾಡುವಾ ಅಂದುಕೊಂಡೆ ಆದರೆ ವಿಶಾಲೂ 'ಸುಬ್ಬ ಹೋಗಿ ಅರ್ಧ ಘಂಟೆ ಆಯ್ತು' ಅಂದ್ಲು. ಓ! ನಿಜವಾಗ್ಲೂ ನನ್ ವಿಶಾಲೂ'ನೇ ಕೂತಿರೋದು!

ಈಗ ವಿಷಯ ಏನಪ್ಪಾ ಅಂದ್ರೆ, ಸುಬ್ಬ ನನ್ನಿಂದ ಅರ್ಧ ವಿದ್ಯೆ ಕಲಿತು ಹೋಗಿದ್ದ. ಅರ್ಧ ವಿದ್ಯೆ ಹೊತ್ತು ವ್ಯಾಯಾಮದ ರಣರಂಗಕ್ಕೆ ಕಾಲಿಟ್ಟಿದ್ದಾನೆ. ವ್ಯಾಯಾಮದ ಒಳಗೆ ಹೊಕ್ಕು ಹೊರಬರಲಾದರೆ ಸಿಕ್ಕಾಪಟ್ಟೆ ಫಿಟ್ ಆಗಿಬಿಡ್ತಾನಾ?

ಶಿಶ್ತಿನ ಸಿಪಾಯಿ ನನ್ನಪ್ಪನ ಸೆನ್ಸ್ ಆಫ್ ಹ್ಯೂಮರ್ರುಶಿಶ್ತಿನ ಸಿಪಾಯಿ ನನ್ನಪ್ಪನ ಸೆನ್ಸ್ ಆಫ್ ಹ್ಯೂಮರ್ರು

ಇಲ್ಲದ್ ಯೋಚನೆ ಶುರುವಾಯ್ತು. ಮತ್ತೆರಡು ವಾರ ಸುಬ್ಬ ಪತ್ತೇನೇ ಇಲ್ಲ. ಒಂದು ಸಂಜೆ ನಾನು ಮನೆಗೆ ಬಂದವನೇ, 'ಸುಬ್ಬನ್ನ ನೋಡ್ಕೊಂಡ್ ಬರ್ತೀನಿ. ಅಲ್ಲಿ ಕಾಫಿ ಸಿಗದೇ ಇದ್ರೆ ವಾಪಸ್ ಬಂದು ಕುಡೀತೀನಿ' ಅಂದೆ. ಅದಕ್ಕೆ ವಿಶಾಲೂ "ನಾನು ಮಧ್ಯಾಹ್ನ ಹೋಗಿ ಬಂದಿದ್ದೀನಿ. ಮೊದಲು ಕಾಫಿ ಕೊಡ್ತೀನಿ. ಆಮೇಲೆ ವಿಷಯ ಹೇಳ್ತೀನಿ" ಅಂದ್ಲು. ಇಷ್ಟು ಸೊಗಸಾಗಿ ಹೇಳಿದ್ಲು ಅಂದ್ರೆ ಏನೋ ಎಡವಟ್ಟು ಆಗಿದೆ ಅಂತಾಯ್ತು. ದೊಡ್ಡ ಕಥೆಯೇ ಇರಬೇಕು ಅಂತ ಮೊದಲು ಬಟ್ಟೆ ಬದಲಿಸಿ ಕಥೆ ಕೇಳೋಕ್ಕೆ ಸಿದ್ದವಾದೆ.

ಸುಬ್ಬಿ ಬಾಯಿಂದ ವಿಶಾಲೂ ಕಿವಿಗೆ ಬಿದ್ದು, ನಂತರ ಅವಳ ಬಾಯಿಂದ ಬಂದು ನನ್ನ ಕಿವಿಗೆ ಬಿದ್ದ ವಿಚಾರ, ಈಗ ನನ್ನ ಬಾಯಿಂದ ನಿಮ್ಮ ಕಿವಿಗೆ.

You should exercise everyday : Conditions apply
You should exercise everyday : Conditions apply

***
ಜೀವನದಲ್ಲಿ ಎಂದೂ ಹರಕಲು ಚಪ್ಪಲಿ ಬಿಟ್ಟು ಮತ್ತೊಂದನ್ನು ಪಾದಕ್ಕೆ ಅಲಂಕರಿಸದ ನಮ್ ಸುಬ್ಬ ರನ್ನಿಂಗ್ ಶೂಗಳನ್ನು ಖರೀದಿಸಿದ್ದಾನೆ. ದೊಗಲೆ ಪ್ಯಾಂಟ್ ಧರಿಸೋ ಸುಬ್ಬ ವ್ಯಾಯಾಮದ ಓಟದ ದಿರಿಸು ಹಾಕಿದ್ದಾನೆ. ಲೋಟ ಬಿಟ್ಟರೆ ಎರಡೂ ಅಂಗೈಯಲ್ಲೇ ತುಂಬಿಕೊಂಡೇ ನೀರು ಕುಡಿಯೋ ಸುಬ್ಬ ನೀರಿನ ಬಾಟ್ಲಿ ಕೊಂಡುಕೊಂಡಿದ್ದಾನೆ. ಮದುವೆಯಲ್ಲಿ ಮಾವ ಕೊಟ್ಟ ಕೈಗಡಿಯಾರವನ್ನೇ ಇದುವರೆಗೂ ಕಟ್ಟುತ್ತಿದ್ದ ಸುಬ್ಬನ ಕೈಗೆ ಓಟ, ನಡಿಗೆ ಇತ್ಯಾದಿಗಳನ್ನು ರೆಕಾರ್ಡ್ ಮಾಡೋ ಫಿಟ್-ಬಿಟ್ ಬಂದಿದೆ. ಬಿಡಿ, ಒಟ್ಟಾರೆ ನಮ್ ಸುಬ್ಬ ಓಡಿ ಹೋಗೋದಕ್ಕೆ ಅಲ್ಲಲ್ಲ ದಿನವೂ ಓಡೋಕ್ಕೆ ರೆಡಿಯಾದ.

ಅಮಾವಾಸ್ಯೆ ಮುಗಿದು ಆಷಾಢಕ್ಕೆ ಕಾಲಿಟ್ಟ ಆ ಶುಭಘಳಿಗೆ ಸಕಲ ಸಿದ್ಧತೆ ಮಾಡಿಕೊಂಡು ಹೊರಗೆ ಅಡಿಯಿಟ್ಟ ಸುಬ್ಬ. ಏನೋ ವಿಚಿತ್ರ ಅನುಭವ. ಅರ್ಥಾತ್ ಬೆಳಿಗ್ಗೆ ಆರು ಘಂಟೆ ಅಂದರೆ ಹೇಗಿರುತ್ತೆ ಅಂತಲೇ ಅರಿಯದ ಕೂಸು. ಬೆಚ್ಚಗೆ ಗುಬುರು ಹಾಕ್ಕೊಂಡೇ ಮಲಗಿ ಅಭ್ಯಾಸ ಇರೋ ಸುಬ್ಬನಿಗೆ ಹೊರಗೆ ಅಡಿಯಿಟ್ಟಾಗ ಚಳಿಯಾಯ್ತು.

ಥಂಡಿ ಇದ್ದಾಗ ಹೊರಗೆ ವಾಕ್ ಮಾಡಲು ಹೋಗಿ ಆ ಶೀತ ಎದೆಯಲ್ಲಿ ನಿಂತು ಡೈರೆಕ್ಟಾಗಿ ವೈಕುಂಠ ಸೇರಿದ ತಾತನ ನೆನೆದು ಹಾಗೆ ವಾಪಸ್ಸಾದ ಸುಬ್ಬ. ಹೊರಗೆ ಹೋಗಿ ಒಂದೇ ನಿಮಿಷದಲ್ಲಿ ಒಳಗೆ ಬಂದಿದ್ಯಾಕೆ ಎಂದು ಕೇಳಿದಳಾ ಸುಬ್ಬಿ. ವಿಷಯ ಅರಿತ ಮೇಲೆ ತಲೆ ಚಚ್ಚಿಕೊಂಡು 'ನಿಮ್ಮ ತಾತಂಗೆ 104 ವರ್ಷ ಆಗಿತ್ತು. ನಿಮಗೆ ಅದರ ಮೂರನೇ ಒಂದು ಭಾಗವೂ ಆಗಿಲ್ಲ' ಅಂದಳು. ನೂರಾನಾಲ್ಕರ ಮೂರನೇ ಒಂದು ಭಾಗ ಎಷ್ಟು ತಲೆ ಕೆಡಿಸಿಕೊಳ್ಳೋದ್ರಲ್ಲಿ ಒಂದು ದಿನ ಹೋಯ್ತು.

ಮರುದಿನ ಮಿಕ್ಕೆಲ್ಲ ಅಲಂಕಾರದ ಜೊತೆ ಹೊರಗೆ ಅಡಿಯಿಡುವ ಮುನ್ನ ಮಂಕಿ ಕ್ಯಾಪ್ ತೆಗೆದುಕೊಳ್ಳಲು ಮರೆಯಲಿಲ್ಲ. ಆದರೇನು ಸುಬ್ಬನ ಬೀದಿಯಲ್ಲಿ ಮಳೆ! ಒಂದೇ ಸಮ ಮಳೆ. ಪ್ರತಿ ಒಂದು ನಿಮಿಷಕ್ಕೆ ಒಂದು ಹನಿ ಅಂತಾರಲ್ಲ ಹಾಗೆ. ಇಂಥಾ ಮಳೆಯಲ್ಲಿ ಹೊರಗೆ ಹೋದ್ರೆ ದೇವರೇ ಗತಿ ಅಂತ ಒಳಗೆ ಬಂದ.

You should exercise everyday : Conditions apply

ಮರುದಿನ ಹಿಂದಿನ ದಿನ ಎಲ್ಲ ವೈಯಾರದ ಜೊತೆ ಒಂದು ಛತ್ರಿ! ಮನೆಯಿಂದ ಹೊರಗೆ ಹೊರಟಾಗ ಎದುರು ಮನೆ ತಾತ ಶಾರ್ಟ್ಸ್-ಟಿಷರಟು ಧರಿಸಿಕೊಂಡು ವಾಕಿಂಗ್ ಹೊರಟಿದ್ದರು. ಮಗ ಅಮೆರಿಕಾದಲ್ಲಿ ಚಡ್ಡಿ ಹಾಕ್ಕೊಂಡ್ ಓಡಾಡಿದರೆ ಇವರು ಇಲ್ಲಿ ಈ ವಯಸ್ಸಿನಲ್ಲಿ ಹಿಂಗೆ ಅಂತ ಬೀದಿಯವರ ಮಾತು. ಸುಬ್ಬನ ಮಂಕಿ-ಕ್ಯಾಪು ಮತ್ತು ಛತ್ರಿಯ ಅವತಾರ ಕಂಡು 'ಛಳಿಗೆ ಛತ್ರಿಯೇ?' ಅಂತಂದು ಮುಂದೆ ಹೋದರು. ಸುಬ್ಬನಿಗೆ ಅವರು ಏನಂದ್ರು ಅಂತ ಅರ್ಥವಾಗಿ, ಛತ್ರಿ ಇಡಲು ಮನೆ ಒಳಗೆ ಹೋದ್ರೆ ಸುಬ್ಬಿಗೆ ಉತ್ತರ ಕೊಡಬೇಕಲ್ಲಾ ಅಂತ ಮನೆ ಮುಂದೆ ಅಲ್ಲೇ ಮೂಲೆಯಲ್ಲಿ ಛತ್ರಿ ಇಟ್ಟು ಹೋದ.

ನಿಧಾನವಾಗಿ ಓಡಲು ಶುರು ಮಾಡಿದ ಸುಬ್ಬ, ಇನ್ನೂ ಪಕ್ಕದ್ ಮನೆ ಕಾಂಪೌಂಡ್ ದಾಟಿರಲಿಲ್ಲ, ಆಗಲೇ ಸುಸ್ತಾಯ್ತು. ಮತ್ತೆ ನಡಿಗೆ ಆರಂಭ. ನಾಲ್ಕು ಮನೆ ದಾಟಿದ ಮೇಲೆ ಮತ್ತೆ ಮೆಲ್ಲಗೆ ಓಟ. ಹೀಗೆ ಪುನರಾವರ್ತನೆ ಆಗಿ ಆಗಿ ಮೈಯೆಲ್ಲಾ ಒದ್ದೆಯಾಗಿ, ಓಡುವುದು / ನಡೆಯುವುದು ಅನ್ನೋಕ್ಕಿಂತ ಮೈತುರಿಸಿಕೊಳ್ಳುವುದೇ ಹೆಚ್ಚಾದ ಮೇಲೆ ವಾಪಸ್ಸಾದ ಸುಬ್ಬನಿಗೆ ಮನೆಯ ಮುಂದೆ ಬಂದು ನಿಂತಾಗ ದೊಡ್ಡ ಆಘಾತ! ಅಯ್ಯೋ ಪಾಪಾ, ಹೃದಯಾಘಾತ ಅಲ್ಲಾ, ಬರೀ ಆಘಾತ. ಇಟ್ಟ ಛತ್ರಿ ಇಟ್ಟೆಡೆ ಇರಲಿಲ್ಲ. ಹಾಗಂತ ಥ್ಯಾಂಕ್-ಯೂ ನೋಟ್ ಕೂಡ ಇರಲಿಲ್ಲ. ತೆಗೆದುಕೊಂಡು ಹೋದೋರಿಗೆ ಒಂದಿನಿತೂ ಮರ್ಯಾದೆ ಇಲ್ಲ, ಛೇ ಎಂದುಕೊಂಡು ಒಳ ನಡೆದ. ಬೆವರು ಬಂತು ಛತ್ರಿ ಹೋಯ್ತು!

ಜೀವನದಲ್ಲಿ ಯಾವುದೇ ಆಗಲಿ ಆರಂಭದಲ್ಲಿ ಕಷ್ಟವೇ ಸರಿ, ಆದರೆ ಕೊಂಚ ಅಭ್ಯಾಸ ಆದ ಮೇಲೆ ಆ ಕೆಲಸ ಜೀವನದ ಒಂದು ಭಾಗವಾಗುತ್ತದೆ. ಆದರೆ ಸುಬ್ಬನ ಕೇಸ್ ಬೇರೆ. ಒಂದು ವಾರವಾದರೂ ಎರಡು ಬೀದಿ ಓಟದಲ್ಲೇ ಸಾಗಲಿಲ್ಲ. ಓಟಕ್ಕಿಂತ ನಡೆಯೋದು, ನಿಲ್ಲೋದು, ಕೂರೋದೇ ಹೆಚ್ಚಾಯ್ತು. ತನ್ನ ಮನೆಯ ಸುತ್ತ ರೋಡ್'ಗಳು ಬರೀ ಏರಿಳಿತವೇ ಇದೆ ಎನ್ನಿಸಿ ಗಾಡಿ ಹಾಕ್ಕೊಂಡು ಶ್ರೀಮಂತರ ಬೀದಿಗೆ ತೆರಳಿದ.

ಇಂಥಾ ಮನೋಭಾವದವರೇ ಹೆಚ್ಚಿರೋ ಆ ಏರಿಯಾದಲ್ಲಿ ಈಗಾಗಲೇ ಎಷ್ಟೋ ಸ್ಕೂಟರುಗಳು ನಿಂತಿದ್ದವು. ಹಗಲಿನಲ್ಲಿ ಮಾತ್ರ ಇರುವ ಬೀದಿ ಬದಿಯ ಟೀ ಅಂಗಡಿಗಳು, ನೇತುಹಾಕಿದ ಬಾಳೆಹಣ್ಣುಗಳು, ಎನರ್ಜಿ ಡ್ರಿಂಕುಗಳು, ವಿದ್ಯಾವಂತರು ತಿಂದು ಎಸೆವ ಆಹಾರಕ್ಕೆ ಕಾದು ಕುಳಿತಿರುವ ಬೀದಿ ನಾಯಿಗಳು ಒಂಥರಾ ಸೊಗಸಾದ ವಾತಾವರಣ ಕಲ್ಪಿಸಿತ್ತು. ಕೆಲವು ಕವಿಗಳು ಬರೆಯೋದಕ್ಕೆ 'ಮೂಡ್' ಬರಬೇಕು ಅಂತಾರಲ್ಲಾ ಹಾಗೆ ಓಡೋದಕ್ಕೂ 'ಮೂಡ್' ಕಲ್ಪಿಸೋ ವಾತಾವರಣ. ಓಟ ಮುಗಿಸಿ ಬಂದ ಮೇಲೆ ಟೀ, ಬನ್ನು ಮತ್ತು ಬಾಳೆಹಣ್ಣು ತಿನ್ನೋದು ಅಂತ ಸಂಕಲ್ಪ ಮಾಡಿಕೊಂಡು ಓಡಲು ಶುರು ಮಾಡಿದ ಸುಬ್ಬ.

You should exercise everyday : Conditions apply

ನಾಲ್ಕು ಅಂಗಡಿ ದಾಟಿದ ಕೂಡಲೇ ಎದ್ವಾತದ್ವಾ ಹುರುಪು. ಏನು ಇಷ್ಟು ದಿನ ಓಡಿದ್ದು ಸುಮ್ನೆ ಆಯ್ತಾ ಅಂದುಕೊಳ್ಳಬೇಡಿ. ಶ್ರೀಮಂತರ ಬೀದಿ ಅಂತ ಆಗ್ಲೇ ಹೇಳಿದ್ನಲ್ಲಾ, ಲೇಡಿ ಮಣಿಗಳು ಸಾರ್ ಲಲನಾಮಣಿಗಳು! ಅವರೇನು ದಿನಕ್ಕೆ ಹತ್ತು ಘಂಟೆ ಅಡುಗೆಮನೆಯಲ್ಲಿ ಕಳೆಯೋ 'ಘಾಟು'ಮಣಿಗಳು ಅಂದುಕೊಂಡಿರಾ? ನಾಲ್ಕು ಕಾಸು ಹೆಚ್ಚು ವೆಚ್ಚವಾದರೆ ತಿಂಗಳ ಕೊನೆಯ ಗತಿ ಏನು ಅಂತ ತಲೆಕೆಡಿಸಿಕೊಳ್ಳೋ 'ಚಿಂತಾ'ಮಣಿಯರು ಅಂದುಕೊಂಡಿರಾ? ಆ ದೇಹದ lip'ಗಳು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲೇ ಆಗದಂತೆ ಬೇರ್ಪಡಿಸುವಷ್ಟು lipstick ಜಡಾಯಿಸುವ ಕನ್ಯಾಮಣಿಗಳು. ಸುಬ್ಬಕುಮಾರ ಆ ಸೀನ್'ಗೇ ಬಿದ್ದ!

ತಾ ಓಡುತ್ತಾ ಎದುರಿಗೆ ಬರುವ ನಾನಾ ಮಣಿಯರಿಗೆ ಹಾಯ್, ಹಲೋ ಎನ್ನುತ್ತಾ ಎಂಜಾಯ್ ಮಾಡಿಕೊಂಡು ಒಂದು ಘಂಟೆಯ ನಂತರ ಸ್ಕೂಟರ್ ಬಳಿ ಬಂದ. ತಾ ಇಳಿಸಿದ ಬೆವರಿಗೆ ಕಂಡವರ ನೋಟದಿಂದ ಮೆಚ್ಚುಗೆ ಏನೋ ಗಳಿಸಿದ. ಆ ಕೈಕಾಲು ಕಿತ್ತುಹೋಗಿದ್ರಿಂದ ಕಿಕ್ ಹೊಡೆಯಲೇ ಆಗಲಿಲ್ಲ. ಯಾರೋ ಗಾಡಿ ಸ್ಟಾರ್ಟ್ ಮಾಡಿಕೊಟ್ಟ ಮೇಲೆ ಮನೆಗೆ ಬಂದು ಸೇರಿದ.

ಮರುದಿನ ಒಂದರ್ಧ ಘಂಟೆ ಮೊದಲೇ ಎದ್ದು ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಕನ್ನಡಿಯ ಮುಂದೆ ನಿಂತು ಎಲ್ಲ ಕೋನಗಳೂ ಸರಿಯಾಗಿದೆ ನೋಡಿಕೊಂಡು, ಸಾಧ್ಯವಾದಷ್ಟೂ ಹೊಟ್ಟೆ ಒಳಗೆ ಎಳೆದುಕೊಂಡು ಒಮ್ಮೆ ಬಾಡಿ ನೋಡಿಕೊಂಡ. ಸೂಪರ್ ಎಂದು ತನ್ನನ್ನೇ ಶ್ಲಾಘಿಸಿಕೊಂಡು ಉಸಿರು ಬಿಟ್ಟ. ಹೊರಗೆ ಬಂದ ಬುಸ್ಸನೆ ಗಾಳಿಗೆ ಕನ್ನಡಿಯ ಮುಂದೆ ಇಟ್ಟಿದ್ದ ವಸ್ತುಗಳು ನೆಲಕ್ಕೆ ಬಿತ್ತು. ಧಡಕ್ಕನೆ ಎದ್ದ ಸುಬ್ಬಿ 'ಏನಾಯ್ತು? ಬಿದ್ರಾ' ಅಂದ್ಲು. ಆಮೇಲೆ ಸುಬ್ಬನನ್ನು ನೋಡಿ 'ಆಗ್ಲೇ ಆಫೀಸಿಗೆ ಹೊರಟಿರಾ?' ಅಂತ ಅಚ್ಚರಿಯಾಯ್ತು. ಸುಬ್ಬ ನಕ್ಕು ನುಡಿದ 'ಇವತ್ತು ಭಾನುವಾರ ಕಣೇ' ಅಂದ. ಇನ್ನು ಹೆಚ್ಚು ಪ್ರಶ್ನೆ ಮಾಡಿದರೆ ನಿದ್ದೆ ಹೋಗುತ್ತೆ ಅಂತ ಮುಸುಕಿ ಹಾಕಿಕೊಂಡು ಮಲಗಿದಳು.

ಸರ್ವಸಜ್ಜಿತನಾದ ಸುಬ್ಬ ಶ್ರೀಮಂತರ ಬೀದಿಯಲ್ಲಿ ಓಡಲು ಸಿದ್ದ. ಹಿರಿಯ ಲಲನೆಯರ 'ಹಲೋ' ನೋಟ, ಕಿರಿಯ 'ಮಣಿ'ಯರ 'ಹಾಯ್' ನೋಟ, ಅತ್ಯಂತ ಕಿರಿಯರ 'ಯೋ ಅಂಕಲ್' ನೋಟವನ್ನು ಆಸ್ವಾದಿಸಿಕೊಂಡು ಹೊರಟ ಸುಬ್ಬ. ತಣ್ಣನೆಯ ಗಾಳಿ, ತಂಪು ನೋಟ, ಕಂಪು ಬೀರುವ ಹೂಗಳು, ಚಿಲಿಪಿಲಿ ಹಕ್ಕಿಗಳು, ಟಿಂಗು-ಟಿಂಗೆಂದು ಜುಟ್ಟು ಹಾರಿಸಿಕೊಂಡು ಓಡುವ ಪೆಣ್'ಗಳು ಆಹಾ, ಓಹೋ ಎಂದು ಮನದಲ್ಲೇ ಸುಂದರ ಸ್ವಪ್ನಗಳನ್ನು ಕಣ್ಣಲ್ಲಿ ತುಂಬಿಕೊಂಡಿದ್ದಕ್ಕೋ ಏನೋ ರಿಪೇರಿಗೆಂದು ರೋಡ್ ಅಗೆದು ಸರಿಯಾಗಿ ಮುಚ್ಚದೆ ಬಿಟ್ಟಿದ್ದ ಜಾಗದಲ್ಲಿ ಸುಬ್ಬನ ಭಾರದ ದೇಹದ ಕಾಲು ಊರಿ ಮುಗ್ಗರಿಸಿ ಬಿದ್ದು ಕನಸುಗಳೊಡನೆ ಒಂದೆರಡು ಹಲ್ಲುಗಳೂ ಭಗ್ನವಾದವು.

ಸುಬ್ಬನನ್ನು ಎತ್ತಲು ಹೋಗಿ ಬೆನ್ನು ಹಿಡಿಸಿಕೊಂಡವರ್ಯಾರು, ಸುಬ್ಬ ಮನೆಗೆ ಹೇಗೆ ಸೇರಿದ, ಸ್ಕೂಟರ್ ತಂದಿಟ್ಟವರ್ಯಾರು ಎಂಬುದೆಲ್ಲ ಇಲ್ಲಿ ಅಪ್ರಸ್ತುತ. ಆದರೆ ಕಾಲಿಗೆ ಬ್ಯಾಂಡೇಜ್ ಬಿಗಿದುಕೊಂಡು ಮಂಚ ಏರಿರುವ ಸುಬ್ಬನ ಸ್ಥಿತಿ ಮಾತ್ರ ಪ್ರಸ್ತುತ.

***
ಮರುದಿನ ವಿಶಾಲೂ ಜೊತೆ ನಾನು ಅರ್ಥಾತ್ ರಾಮಣ್ಣಿ, ಸುಬ್ಬನನ್ನು ನೋಡಲು ಹೋಗಿದ್ದೆ. ಅಲ್ಲಿ ಸೇರುವ ಮೊದಲೇ ದು:ಖ ಉಮ್ಮಳಿಸಿಕೊಂಡು ಸಿದ್ದನಾಗಿದ್ದ ನಾನು ಅವನನ್ನು ಕಂಡೊಡನೆ ಕಣ್ಣಲ್ಲಿ ನೀರು ಹಾಕಿಕೊಂಡೆ. ಅವನಾದರೋ ಮಂಚದ ಮೇಲೆ ಮಲಗಿ ಚಕ್ಕಲಿ ತಿನ್ನುತ್ತಿದ್ದ. ಮಾಮೂಲಿ ಉಭಯಕುಶಲೋಪರಿಯಾದ ಮೇಲೆ, ಮತ್ತೊಮ್ಮೆ ಅವನಿಂದ ಕಥೆ ಕೇಳಿ (ಲಲನಾಮಣಿಯರ ವಿಷಯ ಹೊರತುಪಡಿಸಿ) ಕಾಫಿ ಕುಡಿಯುತ್ತ ಅವನಿಗೆ ಹೇಳಿದೆ "ಅವತ್ತು ನಾನು ನಿನಗೆ ವ್ಯಾಯಾಮದ ಪಾಠ ಮಾಡ್ತಿದ್ದೆ. ನಿನಗೆ ಅನವಶ್ಯಕ ಅರ್ಜೆಂಟು. ಪೂರ್ತಿ ಕೇಳಿಸಿಕೊಳ್ಳದೆ ಅಭಿಮನ್ಯು ಥರಾ ಆಗಿಬಿಟ್ಟೆ. ಪೆಟ್ಟು ತಿಂದಿ. ಪೂರ್ತಿ ಕೇಳಿದ್ದರೆ ಪ್ರಹ್ಲಾದ ಕುಮಾರ ಆಗ್ತಿದ್ದಿ" ಅಂತ ನುಡಿದು, ನನ್ನ ಮಾತು ಅಷ್ಟು ಮುಖ್ಯ ಅನ್ನೋ ಬಿಲ್ಡಪ್ ಕೊಟ್ಟೆ.

ಸುಬ್ಬ ಚಕ್ಕುಲಿ ಮೆಲ್ಲುತ್ತ ನುಡಿದ "ಅಂದ್ರೆ ನಿನ್ನ ಪಾಠದಲ್ಲಿ ಆ ಕನ್ಯಾಮಣಿಯರ ಬಗ್ಗೇನೂ ವಿಷಯ ಇತ್ತಾ? ನೀನು ಆ ಬೀದಿಗೆ ಹೋಗ್ತಿದ್ಯಾ? ಅದು ಸರೀ, ನಿನಗೆ ಆ ರೋಡ್ ಅಗೆದಿದ್ದಾರೆ ಅಂತ ಹೇಗೆ ಗೊತ್ತಾಯ್ತೋ? ದಿನಾ ಆ ಕಡೆ ಹೋಗ್ತೀಯೇನೋ ರಾಮಾ!"

ಬೇಕಿತ್ತಾ ನನಗೆ? ವಿಶಾಲೂ ನೋಟಕ್ಕೆ ತತ್ತರಿಸಿ ಹೋದ ನಾನು ಸುಬ್ಬನ ಕೈಲಿದ್ದ ಚಕ್ಕುಲಿ ತಿನ್ನುತ್ತಾ ಕೂತೆ!

ಸುಬ್ಬ ಎಲ್ಲೆಲ್ಲೂ ಇದ್ದಾನೆ. ನಮ್ಮೆಲ್ಲರಲ್ಲೂ ಸುಬ್ಬ ಇದ್ದಾನೆ. ಅಷ್ಟೇ ಯಾಕೆ ಕೆಲವೊಂದು ಸನ್ನಿವೇಶ ಊಹಿಸಿಕೊಂಡಾಗ ಈ ಸುಬ್ಬ ನಾನೇನಾ ಅನ್ನಿಸಬಹುದು. ಏನಂತೀರಾ?

English summary
You should exercise everyday for your good health, to keep fit, but Conditions apply. What are those conditions? Read this humorous write up by Srinath Bhalle, Richmond, USA. Ultimately, everyone has Subbu in him. ಸುಂದರ ಸ್ವಪ್ನದಲ್ಲಿ ಮುಳುಗಿದ್ದ ಸುಬ್ಬನ ದಂತ ಭಗ್ನ!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X