• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಪಾದಗಳು ಎಂದ ಕೂಡಲೇ ಸಾಮಾನ್ಯವಾಗಿ ಮೊದಲಿಗೆ ದೈವಿಕ ಭಾವನೆಗಳು ಬರುತ್ತವೆ. ಹಾಗಾಗಿ ಮೊದಲಿಗೆ ಒಂದಷ್ಟು ಪಾದದ ಮೇಲಿನ ಲೋಕದ ಸಂಬಂಧವಾಗಿ ಮಾತುಗಳು.

"ಆದದ್ದೆಲ್ಲಾ ಒಳಿತೇ ಆಯಿತು, ನಮ್ಮ ಶ್ರೀಧರನ ಪಾದ ಸೇವೆಗೆ ಸಾಧನ ಸಂಪತ್ತಾಯಿತು" ಎಂಬ ಪದದ ಸಾಹಿತ್ಯವಿದೆ. ಜೀವನದಲ್ಲಿ ಏನೇ ಆದರೂ, ಏನೇ ಆಪತ್ತು ಬಂದರೂ ಆದದ್ದೆಲ್ಲಾ ಯಾವುದೋ ಒಂದು ಒಳ್ಳೆಯದಕ್ಕೆ ಅಂತಲೇ ಭಾವಿಸಿ ಎದುರಿಸಬೇಕು ಅಂತ ಸಕಾರಾತ್ಮಕವಾಗಿ ಆಲೋಚಿಸುವವರು ಹೇಳುತ್ತಾರೆ.

ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ!

ಸಾಮಾನ್ಯವಾಗಿ ಸೇವೆ ಎಂದಾಗ ಅದು ಪಾದಸೇವೆ ಎಂದೇ ಹೇಳೋದು, ಅರ್ಥಾತ್ ಸಂಪೂರ್ಣ ಸಮರ್ಪಣೆ ಅಂತ. ದೈವದ ವಿಷಯದಲ್ಲಿ ಹೇಳುವಾಗ ಪಾದಕಮಲಗಳಿಗೆ ಸಮರ್ಪಿತ ಎಂಬ ಭಾವದಿಂದ ಹೇಳಲಾಗುತ್ತದೆ. ನೀನಡಿಯಿಟ್ಟ ಪಾದದಡಿಯ ಧೂಳೇ ಎನಗೆ ಶ್ರೀರಕ್ಷೆ ಎಂಬ ಮಾತುಗಳನ್ನು ಹೇಳುವಾಗ ಆ ಪಾದದ ಪಾವಿತ್ರ್ಯತೆ ಅರ್ಥವಾಗುತ್ತದೆ. ಮಹಾವಿಷ್ಣುವಿನ ಪಾದಗಳ ಕುರಿತಾಗಿ ಹಲವಾರು ಕಥೆಗಳಿವೆ.

ಬಲಿ ಚಕ್ರವರ್ತಿಯ ಕಥೆ ಯಾರಿಗೆ ತಾನೇ ಗೊತ್ತಿಲ್ಲ? ತನ್ನ ಒಂದು ಪಾದದಿಂದ ಭೂಮಿಯನ್ನು ಆವರಿಸಿ ಇರಿಸಿ, ಮತ್ತೊಂದು ಪಾದದಿಂದ ಆಕಾಶವನ್ನು ಆವರಿಸಿದಾಗ ಬ್ರಹ್ಮದೇವನು ಆ ಶ್ರೀ ಪಾದವನ್ನು ತನ್ನ ಕಮಂಡಲದ ನೀರಿನಿಂದ ತೊಳೆದನಂತೆ. ಆ ಶ್ರೀಪಾದದಿಂದ ಹರಿದ ನೀರೇ ಗಂಗೆ ಅಂತ ಪುರಾಣ ಹೇಳುತ್ತದೆ. ಪಾದದ ಕಥೆ ಇಲ್ಲಿಗೇ ಮುಗಿಯಲಿಲ್ಲ. ತನ್ನ ಮೂರನೆಯ ಪಾದವನ್ನು ಎಲ್ಲಿಡಬೇಕು ಎಂದಾಗ ಆ ಬಲಿಚಕ್ರವರ್ತಿ ತನ್ನ ತಲೆಯನ್ನೇ ನೀಡಿದ. ಆ ತ್ರಿವಿಕ್ರಮಪಾದ ಬಲಿಯ ತಲೆಯನ್ನು ಒತ್ತಲು ಅವನು ಪಾತಾಳವನ್ನು ಸೇರಿ ಇಂದಿಗೂ ಮಾನ್ಯನಾಗಿದ್ದಾನೆ.

ಹಿರಿಯರು, ಅದರಲ್ಲೂ ಅತಿಥಿಗಳು, ಋಷಿ ಮುನಿಗಳು ಅಥವಾ ಯತಿಗಳು ಆಗಮಿಸಿದಾಗ ಅವರ ಪಾದಗಳನ್ನು ತೊಳೆಯುವುದು ಒಂದು ಕ್ರಮ. ದೊಡ್ಡ ಹರಿವಾಣದಲ್ಲಿ ಅವರ ಪಾದಗಳನ್ನು ಇರಿಸಿ ಪಾದಗಳನ್ನು ತೊಳೆದು, ಕೈವಸ್ತ್ರದಲ್ಲಿ ಒರೆಸುವುದು ಪದ್ಧತಿ.

ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ!

ಸುಧಾಮನ ಪಾದಗಳನ್ನು ಶ್ರೀಕೃಷ್ಣ ತೊಳೆದನೆಂದು ಹೇಳಲಾಗಿದೆ ... ಶ್ರೀಕೃಷ್ಣನ ಕಥೆಗಳಲ್ಲಿ ಪಾದಕ್ಕೆ ಬಹಳ ಮಹತ್ವವಿದೆ. ಈ ಬಾಲಕೃಷ್ಣನ ಪಾದ ಮಹಾಬಲ ಪಾದ. ಶಕಟನನ್ನು ಒದ್ದಿದ್ದಕ್ಕೆ ಬಂಡಿಯೇ ಪುಡಿಪುಡಿಯಾಯ್ತು ... ಫಣಿಯ ತಲೆಗಳ ಮೇಲೆ ನಾಟ್ಯವಾಡಿದ್ದಕ್ಕೆ ಆ ಮಹಾಸರ್ಪವೇ ಶರಣಾಗಿ ಊರು ಬಿಟ್ಟು ಹೋಯ್ತು. ಕುರುಸಭೆಗೆ ಆಗಮಿಸಿದ ಕೃಷ್ಣನ ಆ ಮಹಾಪಾದದ ಹೆಬ್ಬೆರಳು ಭುವಿಯನ್ನು ಒತ್ತಿದ್ದಕ್ಕೆ ಸಿಂಹಾಸನಾರೂಢನಾಗಿದ್ದ ದುರುಳ ದುರ್ಯೋಧನ ಉರುಳುರುಳಿ ಬಿದ್ದ ... ಕುರುಕ್ಷೇತ್ರದ ಯುದ್ಧದ ಮುನ್ನ ದುರ್ಯೋಧನ ಮತ್ತು ಅರ್ಜುನರು ಶ್ರೀಕೃಷ್ಣನ ಸಹಾಯ ಬೇಡಲು ಬಂದಾಗ, ಅರ್ಜುನನು ಮಲಗಿರುವ ಶ್ರೀಕೃಷ್ಣನ ಪಾದಗಳ ಬಳಿ ಕುಳಿತಿದ್ದಕ್ಕೇ ಅವನಿಗೆ ಸಹಾಯ ಬೇಡುವ ಮೊದಲ ಅವಕಾಶ ಸಿಕ್ಕಿದ್ದು. ಯುದ್ಧದ ಸಮಯದಲ್ಲಿ, ಆ ಮಹಾಪಾದದ ಬೆರಳೊಂದು ಭುವಿಯನ್ನು ಒತ್ತಿದ್ದಕ್ಕೆ ರಥವು ಕೆಳಕ್ಕೆ ಹೋಗಿ ಕರ್ಣನ ಅಸ್ತ್ರದಿಂದ ಆಗಬೇಕಿದ್ದ ಅನಾಹುತ ತಪ್ಪಿ ಅರ್ಜುನನ ತಲೆ ಉಳಿಯಿತು. ಅಂಥಾ ಶ್ರೀಕೃಷ್ಣನ ಪಾದಕ್ಕೇ ಬೇಡನೊಬ್ಬನ ಬಾಣವು ತಾಗಿ ಅವನ ಅವಸಾನಕ್ಕೆ ಮೂಲವಾಯಿತು ಎನ್ನಲಾಗಿದೆ.

ಬೃಗು ಮಹರ್ಷಿಯು ಒಮ್ಮೆ ತ್ರಿಮೂರ್ತಿಗಳನ್ನು ಕಾಣುವ ಇಚ್ಛೆಯಿಂದ ಸ್ವರ್ಗಲೋಕಕ್ಕೆ ಹೋಗುತ್ತಾರೆ. ಬ್ರಹ್ಮಲೋಕದಲ್ಲಿ ಬ್ರಹ್ಮದೇವ ತನ್ನದೇ ಕೆಲಸದಲ್ಲಿ ತಲ್ಲೀನ. ಕೈಲಾಸದಲ್ಲಿ ರುದ್ರ ದೇವಾ ತಪಸ್ಸಿನಲ್ಲಿ ಮಗ್ನ. ಆಗಲೇ ರೋಷದ ಕೊಡ ತುಂಬಿತ್ತು. ಮುಂದೆ ಸಾಗಿ ವೈಕುಂಠಕ್ಕೆ ಸಾಗಲು ಅಲ್ಲಿ ಮಹಾವಿಷ್ಣು ಯೋಗನಿದ್ರೆಯಲ್ಲಿದ್ದಾನೆ. ಅತ್ಯಂತ ಕುಪಿತನಾದ ಮಹಾಮುನಿ ಸೀದಾ ಅವನಲ್ಲಿ ಬಂದು ವಕ್ಷಸ್ಥಳಕ್ಕೆ ಒದೆಯುತ್ತಾನೆ. ವಿಷ್ಣುವಿನ ವಕ್ಷದಲ್ಲಿ ಮಹಾಲಕ್ಷ್ಮಿ ವಾಸಿಸುತ್ತಿರಲು, ಆ ತಾಯಿಗೆ ಅವಮಾನವಾದಂತಾಗಿ ವೈಕುಂಠವನ್ನೇ ಬಿಟ್ಟು ತೆರಳುತ್ತಾಳೆ. ಯೋಗನಿದ್ರೆಯಿಂದ ಎದ್ದ ವಿಷ್ಣು ಕ್ಷಮೆಯಾಚಿಸಿ ಋಷಿಯ ಪಾದವನ್ನು ಒತ್ತುವ ಕ್ರಿಯೆಯಲ್ಲಿ ಬೃಗುವಿನ ಪಾದದಲ್ಲಿದ್ದ ಕಣ್ಣನ್ನು ಹೊಸಕಿ ಹಾಕುತ್ತಾನೆ. ಋಷಿಯ ಅಹಂಕಾರ ಅಲ್ಲಿಗೆ ದಮನವಾಗುತ್ತದೆ. ಮುಂದೆ ಈ ಘಟನೆ ಶ್ರೀ ವೆಂಕಟೇಶ್ವರನ ಕಥೆಗೆ ಮೂಲವಾಗುತ್ತದೆ.

'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ!

ಈಗ ಮೇಲಿನ ಲೋಕದಿಂದ ವ್ಯಾವಹಾರಿಕ ಲೋಕಕ್ಕೆ ಬರೋಣ.

ಮದುವೆಯ ಸಂದರ್ಭದಲ್ಲಿ, ಕಾಶೀಯಾತ್ರೆಯ ಸಮಯದ ಒಂದು ಪದ್ಧತಿ ಎಂದರೆ ಅಳಿಯದೇವರ ಪಾದಗಳನ್ನು ಮಾವ ತೊಳೆದು ಮದುವೆಯ ಮಂಟಪಕ್ಕೆ ಕರೆದು ತರೋದು. ಆಗಿರೋದು ಒಂದೇ ಮದುವೆಯಾದರೂ ಈ ಕ್ರಿಯೆ ನನಗೆ ಮಹಾ ಹಿಂಸೆ ತಂದಿತ್ತು.

ಮದುವೆಯಾಗಿ ಅತ್ತೆಯ ಮನೆಗೆ ಅಡಿಯಿಡುವ ಮುನ್ನ ಆ ಸೊಸೆಯು ಹೊಸ್ತಿಲಿನ ಮೇಲಿನ ಅಕ್ಕಿ ತುಂಬಿದ ಪಾವನ್ನು ಒದ್ದು ಒಳಗೆ ಬರಬೇಕು. ಒದ್ದು ಎಂದರೆ ಫುಟ್ಬಾಲ್\'ನಂತೆ ಅಲ್ಲ. ಬದಲಿಗೆ ತನ್ನ ಬಲಪಾದದಿಂದ ಮೆಲ್ಲನೆ ನೂಕಿ, ಅಕ್ಕಿಯನ್ನು ಮನೆಯಲ್ಲಿ ಚೆಲ್ಲುವಂತೆ ಮಾಡಿ ಅಡಿಯಿಡಬೇಕು. ಅವಳದಲ್ಲದ ಪ್ರಭಾವದಿಂದ ಒಳಿತುಗಳಾದರೆ ಸೊಸೆಯ ಕಾಲ್ಗುಣ ಚೆನ್ನಾಗಿದೆ ಅಂತಾಗುತ್ತದೆ. ಅದರ ಬದಲಿಗೆ ಹೆಚ್ಚುಕಮ್ಮಿಯಾದರೆ ಮುಗೀತು ಆ ಸೊಸೆಯ ಕಥೆ. ಇಲ್ಲಿ ಕಾಲ್ಗುಣ ಎಂದೇ ಹೇಳಿದ್ದರೂ ಅದು ಪಾದಗುಣ ಅಂತ ಅರ್ಥೈಸಿಕೊಳ್ಳತಕ್ಕದ್ದು.

ಒಂದು ಸಿನಿಮಾದ ದೃಶ್ಯ, ಅದರಲ್ಲಿ ಒಬ್ಬ ಮಹಾ ಪಾಪಿಷ್ಠನ ಎಂಟ್ರಿ ಆಗುತ್ತೆ. ಅವನೆಷ್ಟು ದುಷ್ಟ ಎಂದರೆ ಅವನು ಪಾದ ಇಟ್ಟರೆ ಅವನ ಪಾದದಡಿಯ ಹುಲ್ಲು ಸುಟ್ಟು ಹೋಗುತ್ತೆ. ಪಾದ ಎಂದ ಮೇಲೆ ಗಜಪತಿ ಗರ್ವಭಂಗ ಮರೆಯೋದು ಹೇಗೆ? 'ಮಡಗಬೇಕು ಪಾದ' ಎಂಬ ಡೈಲಾಗ್ ಧೀರೇಂದ್ರ ಗೋಪಾಲ್ ಅವರ ವಿಶಿಷ್ಟ ದನಿಯಲ್ಲಿ ಗಮನ ಸೆಳೆದಿತ್ತು.

ಏನೋ ಒಂದು ವಿಷಯ ಹೇಳಿದಾಗ, ಅದೇ ವಿಷಯ ಹಿಡಿದು ಅದನ್ನೇ ರುಬ್ಬುತ್ತಾ ವಿಪರೀತ ತಲೆ ತಿನ್ನುತ್ತಿದ್ದರೆ 'ಯಪ್ಪಾ ತಂದೆ, ನಿನ್ನ ಪಾದ ಎಲ್ಲಿ ತೋರಿಸು ಹಿಡ್ಕೋತೀನಿ' ಅಂತಾರೆ ಅರ್ಥಾತ್ ಮೊದಲು ನನ್ನ ತಲೆ ತಿನ್ನೋದ್ ನಿಲ್ಲಿಸು ಅಂತ. ಸ್ನೇಹಿತರ ವಲಯದಲ್ಲೇ ಯಾರಾದರೂ ಒಂದು ಮಹತ್ಕಾರ್ಯ ಮಾಡಿದ್ದರೆ "ತಮ್ಮ ಪಾದದ xerox ಇದ್ರೆ ಕೊಡ್ತೀರಾ ಸರ್?" ಎಂದು ರೇಗಿಸುವುದೂ ಇದೆ.

ಮಾನವ ಪಾದದಲ್ಲಿ ಮೂರು ಭಾಗಗಳಿರುತ್ತದೆ. ಮುಂಭಾಗ, ಮಧ್ಯಭಾಗ ಮತ್ತು ಹಿಂದಿನ ಭಾಗ. ಪಾದದ ಮಧ್ಯಭಾಗ ಕೊಂಚ ಹೆಚ್ಚೇ sensitive. ಕಚಗುಳಿ ಇಡೋಕ್ಕೆ ಮಜವಾಗಿರುತ್ತೆ. ಕಚುಗುಳಿ ಇಡಿಸಿಕೊಂಡವರು ಒದೆಯಬಹುದು ಹುಷಾರು. ಹಿಮ್ಮಡಿ ಭಾಗದ ಪಾದ ಹಲವರಿಗೆ ಸೀಳಿರುತ್ತೆ. ಪಾದದ ಮುಂಭಾಗದಲ್ಲಿ ಕಾಲ್ಬೆರಳುಗಳು ಇರುತ್ತವೆ. ಡಯಾಬಿಟಿಸ್ ಇರುವವರು ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಹೊರಗೆ ಓಡಾಡುವಾಗ ಬರಿಗಾಲಿನಲ್ಲಿ ಓಡಾಡಬಾರದು ಅಂತಾರೆ ವೈದ್ಯರು.

ಮುಖ ಸೌಂದರ್ಯಕ್ಕೆ ಗಮನ ಕೊಡುವಷ್ಟು ಪಾದಗಳಿಗೆ ಸಾಮಾನ್ಯವಾಗಿ ಗಮನವೀಯುವುದಿಲ್ಲ. ಹೊಟ್ಟೆ ದಪ್ಪವಿದ್ದಾಗ ಪಾದಗಳೇ ಕಾಣದೇ ಹೋಗಬಹುದು ಹಾಗಾಗಿ ಬಗ್ಗಿ ಸೋಪುಜ್ಜಿ ತೊಳೆಯಲಾಗದು ಅಂತಾರೆ ಮಂದಿ. ಸರಿಯಪ್ಪಾ, ಒಂದು ಪಾದದಿಂದ ಮತ್ತೊಂದು ಪಾದವನ್ನು ಉಜ್ಜಿ ತೊಳೆದರಾಯ್ತಲ್ಲವೇ ಅಂದ್ರೆ ಹಾಗೆಲ್ಲಾ ಮಾಡಬಾರದು, ಸೋದರಮಾವನಿಗೆ ಸಾಲ ಆಗುತ್ತೆ ಅಂತಾರೆ !! ನಿಮಗೇನಾದರೂ ಈ ವಿಷಯ ಗೊತ್ತೇ?

ಸಮುದ್ರದ ದಂಡೆಯ ಮೇಲೆ ಹೆಜ್ಜೆಯೂರಿ ಸಾಗಿದಾಗ ನಮ್ಮ ಹೆಜ್ಜೆ ಮೂಡುತ್ತಾ ಸಾಗುತ್ತದೆ. ಅದು ಎಲ್ಲಿಯವರೆಗೆ ಇದ್ದೀತು ಎಂದರೆ ಅಲೆಯೊಂದು ಬಂದು ಗುರುತನ್ನು ಅಳಿಸಿ ಹೋಗುವವರೆಗೂ. ನಮ್ಮ ಜೀವನದಲ್ಲೂ ಹಾಗೇನೇ ಆದರೆ ಕೊಂಚ ಭಿನ್ನ ಅಷ್ಟೇ. ನಾವು ನಡೆಯುತ್ತಾ ಸಾಗಿದಂತೆ ಹೆಜ್ಜೆಯ ಗುರುತುಗಳು ಮೂಡುತ್ತಾ ಸಾಗುತ್ತೆ. ಒಂದಲ್ಲಾ ಒಂದು ದಿನ ಹೆಜ್ಜೆ ಅಳಿಸಿಹೋಗಬಹುದು ಆದರೆ ಗುರುತು ಅಷ್ಟು ಸುಲಭಕ್ಕೆ ಅಳಿಸಿ ಹೋಗೋದಿಲ್ಲ. ನಾವು ಹೇಗೆ ನಡೆದಿರುತ್ತೇವೆ ಎನ್ನುವುದರ ಮೇಲೆ ಆ ಹೆಜ್ಜೆಯ ಗುರುತು ಅನುಸರಿಸಲ್ಪಡುವ ಹೆಜ್ಜೆಗಳಾಗಬಹುದು ಅಥವಾ ಎಷ್ಟೋ ಹೆಜ್ಜೆಗಳಂತೆ ಅವೂ ಹೇಳ ಹೆಸರಿಲ್ಲದೇ ಅಳಿಯಬಹುದು.

ಪಾದವೂ ನಮ್ಮದೇ... ಹೆಜ್ಜೆಯೂ ನಮ್ಮದೇ... ಸರಿಯಾಗಿ ಊರೋಣ ಬನ್ನಿ...

English summary
When we speak about foots, usually divine feeling will come first.So here is the stories in relation to the foot and feelings around this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X