• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಜದ ಮಜದ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ವಾರದಲ್ಲಿನ ಒಂದೋ ಎರಡೋ ದಿನ ರಜೆ, ತಿಂಗಳಲ್ಲಿ ಒಂದೋ ಎರಡೋ ದಿನ ರಜೆ, ವರ್ಷದಲ್ಲಿನ ಒಂದು ರಜೆ ಅಂತೆಲ್ಲಾ ನಾವು ಕಂಡಿದ್ದೇವೆ. ಜೀವಮಾನವೆಲ್ಲಾ ದುಡಿಯುತ್ತಲೇ ಇರುವ ಮಂದಿಯನ್ನೂ ನಾವು ಕಂಡಿದ್ದೇವೆ. ಈ ರಜೆಯ ಬಗ್ಗೆ ಒಂದಷ್ಟು ವಿಚಾರಗಳನ್ನು ನೋಡೋಣ.

ಕೆಲಸ ಮಾಡುವವರು ಕೆಲಸದಿಂದ ಹೊರಗೆ ಇರುವ, ವಿದ್ಯಾರ್ಥಿಗಳು ಶಾಲೆಗೇ ಹೋಗದೇ ಇರುವುದು ವಾರದ ರಜೆ. ಅಡುಗೆ ಮನೆಯಲ್ಲಿ ನಿರಂತರವಾಗಿ ದುಡಿಯುವವರು ಅಡುಗೆಮನೆಗೆ ಹೋಗದಿರುವುದನ್ನು ತಿಂಗಳ ರಜೆ ಎನ್ನಬಹುದು. ಕಡ್ಡಾಯವಾಗಿ ಏಕಾದಶಿ ಮಾಡಿದರೆ ಮಾತ್ರ ತಿಂಗಳಿಗೆ ಎರಡು ದಿನ ರಜೆ. ಅಡುಗೆಮನೆ ರಜೆಯಲ್ಲಿ ಒಂದೆರಡು ಪೈಕಿಯೂ ಇವೆ. ಒಂದೋ ಇಡೀ ದಿನ ಹೊರಗೇ ತಿನ್ನೋದು ಅಥವಾ ಮನೆಯಲ್ಲಿನ ಮತ್ಯಾರೋ ಬೇಯಿಸಿ ಹಾಕೋದು ಅಂತಾದಾಗ ಆ ಮನೆಯ ಗೃಹಿಣಿಗೆ ರಜೆ. ಸಾಮಾನ್ಯವಾಗಿ ಮಿಕ್ಕವರ ರಜೆಯ ದಿನದಂದೇ ಆಕೆಗೆ ಕೆಲಸ ಹೆಚ್ಚು, overtime ದುಡಿಮೆ ಆದರೆ ಪಗಾರ ಇರೋದಿಲ್ಲ.

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

ವಿದ್ಯಾರ್ಥಿ ದೆಸೆಯಲ್ಲಿ ಇಂಥಾ ರಜೆಗಳ ವಿನ್ಯಾಸ ಸ್ವಲ್ಪ ಭಿನ್ನ. ಶಾಲೆಯ ಸಮಯದಲ್ಲಿ, ಒಂದು ದಿನ ಓದುವುದಿಲ್ಲ ಎಂಬ ರಜೆಯೇ ಇಲ್ಲ. ಸರಸ್ವತಿ ಪೂಜೆ ಮಾಡಿದ ದಿನ ನಮಗೆ ಓದಿಗೆ ರಜೆ ಇತ್ತು. ಬೇಸಿಗೆ ರಜೆ ಎಂದರೆ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದುಕೊಂಡು ಬನ್ನಿ ಎಂದೋ, ರಜೆಯಲ್ಲಿ ಏನು ಘನಂಧಾರಿ ಕೆಲಸ ಮಾಡಿರಿ ಎಂಬ ಪ್ರಬಂಧ ಬರೆದುಕೊಂಡು ಬನ್ನಿ ಎಂದೋ ಇನ್ನೇನೋ homework ಇರುತ್ತಿತ್ತು. ರಜೆಯ ಮಜವೇ ಬೇರೆಯಾದರೂ ಅದನ್ನು ಹೇಗೆ ಅನುಭವಿಸುತ್ತೇವೆ ಎಂಬುದರ ಮೇಲೆ ಅವಲಂಬಿತ.

ವಾರ ಎಂದರೆ ಸೋಮವಾರದಿಂದ ಭಾನುವಾರದವರೆಗೆ ಅನ್ನೋದು ಎಲ್ಲರಿಗೂ ಗೊತ್ತು. ವಾರಾಂತ್ಯ ಅಥವಾ weekend ಎಂದರೆ ಶನಿವಾರ ಮತ್ತು ಭಾನುವಾರ. ಮೊದಲೈದು ದಿನಗಳು ಎಂಬ ಯುದ್ಧ ಮುಗಿದ ಸಂಭ್ರಮವನ್ನು 'war ಅಂತ್ಯ' ಎನ್ನುತ್ತಾರೆ ಎಂಬುದು ಕುಹಕ. ವಾರಾಂತ್ಯ ಎಂದರೆ ರಜೆ, ಶುಕ್ರವಾರ ಸಂಜೆಯಿಂದ ಭಾನುವಾರ ರಾತ್ರಿಯವರೆಗೆ ರಜೆ. ಶುಕ್ರವಾರ ಸಂಜೆಯ 'ರಜೆ' ಎಂಬ ಮೂಡ್ ಪ್ರಖರವಾಗಿದ್ದು ಭಾನುವಾರ ಸಂಜೆಯ ವೇಳೆಗೆ ಮನಸ್ಸಿಗೆ ಮಂಕು ಆವರಿಸಿರುತ್ತದೆ. ಅದಕ್ಕೆ ಇರಬೇಕು ಸೋಮವಾರ ಕೆಲಸಕ್ಕೆ ಹೋಗಬೇಕು ಅಂದ್ರೆ ಅದೇನೋ ಸಂಕಟ.

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ

ಕಾಲ ಒಂದಿತ್ತು. ವಾರದ ರಜೆ ಎಂದರೆ ಅದು ಧಾರ್ಮಿಕ ಅಂತಲೇ ಅರ್ಥವಿತ್ತು. ಇಂದಿಗೂ ಮುಸ್ಲಿಂ ದೇಶಗಳಲ್ಲಿ ಶುಕ್ರವಾರ ರಜೆ. Jewishಗಳಲ್ಲಿ ಶನಿವಾರ ರಜೆ ಮತ್ತು ಕ್ರಿಶ್ಚಿಯನ್ ದೇಶಗಳಲ್ಲಿ ಭಾನುವಾರ. ಹಿಂದೂಗಳಲ್ಲೂ ಭಾನುವಾರವೇ ರಜೆ ಎಂದು ಇದ್ದರೂ ಅದಕ್ಕೆ ಧಾರ್ಮಿಕ ಸಂಬಂಧ ಇದೆ ಅನ್ನೋದು ಅನುಮಾನ. ಪಾಶ್ಚಿಮಾತ್ಯ ದೇಶಗಳಲ್ಲಿನ ಫ್ಯಾಕ್ಟರಿ'ಗಳಲ್ಲಿ jewish ಮತ್ತು ಕ್ರಿಶ್ಚಿಯನ್ ಧರ್ಮದವರು ಒಟ್ಟಿಗೆ ಕೆಲಸಮಾಡುತ್ತಿದ್ದುದರಿಂದ ವಾರದಲ್ಲಿ ಎರಡೂ ದಿನಗಳು ರಜೆ ಇರಬೇಕಿತ್ತು. ವಾರದಲ್ಲಿನ ಎರಡು ರಜೆ ಎಂಬೋದರ ಹಿಂದೆ ಹೆನ್ರಿ ಫೋರ್ಡ್ ಅವರ ಪಾತ್ರವೂ ಇದೆ.

ವೀಕೆಂಡ್ ಆದ ಮೇಲೆ ಈಗ ಲಾಂಗ್ ವೀಕೆಂಡ್ ಬಗ್ಗೆ ನೋಡೋಣ. ವಾರದಲ್ಲಿ ಎರಡು ದಿನ ಇರುವವರಿಗೆ ಶುಕ್ರವಾರವೋ ಅಥವಾ ಸೋಮವಾರವೋ ರಜೆ ಬಂದಲ್ಲಿ ಅದು ಲಾಂಗ್ ವೀಕೆಂಡ್ ಎನಿಸಿಕೊಳ್ಳುತ್ತೆ. ಸೋಮವಾರ ರಜೆ ಬಂದಿದ್ದು, ಅವರೇ ಶುಕ್ರವಾರವೂ ರಜೆ ಹಾಕಿಕೊಂಡು extra ಲಾಂಗ್ ವೀಕೆಂಡ್ ಮಾಡಿಕೊಳ್ಳೋದು ಅವರಿಗೆ ಬಿಟ್ಟದ್ದು.

ಈ ಲಾಂಗ್ ವೀಕೆಂಡ್ ಎಂಬ ವಿಚಾರವನ್ನು ಹಲವು ಜಗಜಟ್ಟಿ ಕಂಪನಿಗಳು ಕೊಂಚ ವಿಸ್ತಾರವಾಗಿ ಆಲೋಚನೆ ಮಾಡಿ ವಾರದಲ್ಲಿ ನಾಲ್ಕೇ ದಿನ ಕೆಲಸ ಮಾಡುತ್ತಾ, ಮೂರು ದಿನ ರಜೆ ಘೋಷಿಸಿದರೆ ಹೇಗೆ? ಅಂತ. ಆಹಾ! ಹಾಗಿದ್ರೆ ಪ್ರತೀ ವಾರವೂ ಲಾಂಗ್ ವೀಕೆಂಡ್ ಆಯ್ತು ಅನ್ನೋ ಸಂತಸ ಮನದಲ್ಲಿ ಮೂಡಬಹುದು. ಆದರೆ ಇದರಲ್ಲಿ ಅಡಗಿರುವ ಋಣಾತ್ಮಕ ಅಂಶಗಳನ್ನೂ ಪರಿಗಣಿಸಬೇಕು. ವಾರಕ್ಕೆ ನಲವತ್ತು ಘಂಟೆ ಕೆಲಸ ಮಾಡುವವರು ಐದು ದಿನಗಳ ಕಾಲ ಕೆಲಸ ಮಾಡಿದರೆ ದಿನಕ್ಕೆ ಎಂಟು ಘಂಟೆಗಳ ಕಾಲ ಕೆಲಸ ಮಾಡಿದಂತೆ ಆಯ್ತು. ಅದೇ ನಲವತ್ತು ಘಂಟೆಗಳ ಕೆಲಸವನ್ನು ನಾಲ್ಕೇ ದಿನದಲ್ಲಿ ಮಾಡಬೇಕು ಎಂದರೆ ದಿನಕ್ಕೆ ಹತ್ತು ಘಂಟೆಗಳ ಕಾಲ ಕೆಲಸ ಮಾಡಬೇಕು.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ದಿನನಿತ್ಯದಲ್ಲಿ ಹತ್ತು ಘಂಟೆಗಳ ಕಾಲದ ಕೆಲಸವನ್ನು ಮಾಡುತ್ತಾ ಸಾಗಿದರೆ ದೈನಂದಿನ ಕಾರ್ಯದಕ್ಷತೆ ಕುಂಠಿತವಾಗುತ್ತದೆ. ಕುರ್ಚಿಯ ಮೇಲೆ ಕೂಡುವ ದೇಹ ಇನ್ನೂ ಎರಡು ಘಂಟೆಗಳ ಕಾಲ ಹೆಚ್ಚು ಕೂಡುತ್ತದೆ. ದೇಹಕ್ಕೆ ವ್ಯಾಯಾಮ ಕಡಿಮೆಯಾಗುತ್ತದೆ. ಒತ್ತಡ ಹೆಚ್ಚುತ್ತದೆ. ಹಾಗಾಗಿ ಖಾಯಿಲೆಗಳೂ freeಯಾಗಿ ಬರಬಹುದು. ಕೆಲಸಗಾರರು ಕೆಲಸಕ್ಕೆ ಅಂತ ಒಂದು ದಿನ ಕಡಿಮೆ ಬಂದಾಗ ವಿದ್ಯುತ್ಶಕ್ತಿ, ನೀರು, ಸೆಕ್ಯೂರಿಟಿ ಎಂಬೆಲ್ಲಾ ಖರ್ಚುಗಳನ್ನು ತಗ್ಗಿಸಬಹುದು ಎಂಬ ಆಲೋಚನೆ ಕಂಪನಿಯವರುಗಳಿಗೆ ಇದ್ದರೂ ಕೊನೆಗೆ ಅದು ನಮ್ಮ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಎಚ್ಚರಿಕೆಯಲ್ಲಿರಬೇಕು. ಅತ್ಲಾಗೆ ಕಚೇರಿಯಲ್ಲೂ ದಕ್ಷತೆ ಕಡಿಮೆಯಾಗುತ್ತದೆ, ಇತ್ಲಾಗೆ ಮನೆಯ ಕೆಲಸಗಳಿಗೂ ಚೈತನ್ಯವಿಲ್ಲದೇ ಹೋಗುತ್ತದೆ. ಹೀಗಾದಾಗ ಸಂಸಾರದಲ್ಲಿ ಸರಿಗಮ ಹೋಗಿ ಅಪಸ್ವರವೇ ಮೂಡುತ್ತದೆ.

ಆದರೆ ಗೃಹಿಣಿಯರು ಇದಕ್ಕಿಂತಲೂ ಹೆಚ್ಚು ಕೆಲಸ ಮಾಡಿದರೂ ಅದರ ಬಗ್ಗೆ ಎಲ್ಲೂ ವಿಷಯಗಳೇ ಹೊರಗೆ ಬರುವುದಿಲ್ಲ ಅಲ್ಲವೇ? ಇವರಿಗೂ ಸಲ್ಲಬಹುದಾದ ಒಂದಷ್ಟು ಅಧ್ಯಯನ ಕೆಲಸ ನಡೆದಿದೆ.

ವಾರದಲ್ಲಿ 60 ಘಂಟೆಗಳ ಕಾಲ ಕೆಲಸ ಮಾಡುವ ಹೆಂಗಳ ಬಗ್ಗೆ ಅಧ್ಯಯನ ಮಾಡಿದಾಗ ಹೊರಬಿದ್ದ ವಿಚಾರ ಕೊಂಚ ಗಂಭೀರವಾದದ್ದೇ ಅನ್ನಿ. ಹೀಗೆ ಎಡಬಿಡದೇ ಕೆಲಸ ಮಾಡುವ ಹೆಂಗಳಿಗೆ ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ, ಮಂಡಿ / ಬೆನ್ನು ನೋವು, diabetes ಇತ್ಯಾದಿ ಖಾಯಿಲೆಗಳು ಕಟ್ಟಿಟ್ಟ ಬುತ್ತಿ ಎಂಬುದು ಅರಿವಾಗಿದೆ. ಬಹುಶ: ಈ ಅಧ್ಯಯನ ಕೆಲಸಕ್ಕೆ ಕಚೇರಿಗೆ ಹೋಗುವ ಹೆಂಗಳ ಬಗ್ಗೆ ಹೇಳಿದ್ದರೂ ನಾನು ಆ ತಾರತಮ್ಯ ಮಾಡಲಾರೆ. ಒತ್ತಡ ಮನೆಯಲ್ಲೂ ಇರುತ್ತೆ, ಹೊರಗೂ ಇರುತ್ತೆ. ಮನೆಯಲ್ಲೇ ಇರ್ತೀರಲ್ಲಾ ಖಾಯಿಲೆ ಏಕೆ ಬರುತ್ತೆ ಅಂತ ಮೂಗುಮುರಿಯುವವರಿಗೆ ಈ ವಿಷಯದ ಅರಿವು ಮೂಡಿಸಬೇಕಿದೆ.

ವ್ಯಗ್ರಗೊಂಡ ಮನಸ್ಸನ್ನು ತಹಬದಿಗೆ ತರಲು ಧ್ಯಾನದ 10 ವಿಧಾನ

ನಾನೊಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಶನಿವಾರ ಅರ್ಧ ದಿನ ರಜೆ. ಅರ್ಥಾತ್ ಹೆಸರಿಗೆ ಮಾತ್ರ. ಹೇಗಿದ್ರೂ ಅರ್ಧ ದಿನ ಅಂತ ಊಟ ತೆಗೆದುಕೊಂಡು ಹೋಗದೆ ಇದ್ರೆ ಸಂಜೆ ಆರಕ್ಕೆ ಬಂದ ಮೇಲೆಯೇ ಊಟ! ತಾವೂ ಇರುತ್ತೇವೆ ಹಾಗಾಗಿ ಸಿಬ್ಬಂದಿಯೂ ಇರಲಿ ಎಂಬ ಉದ್ದೇಶದಿಂದಲೇ ಬೇಕೂ ಅಂತ ಹನ್ನೆರಡರ ವೇಳೆಗೆ ಅದೇನೋ ಕೆಲಸ ಹಚ್ಚುವುದು ವೇದ್ಯವಾಗುತ್ತಿತ್ತು.

ಮಳಿಗೆಗಳ ಸಿಬ್ಬಂದಿಯ ಎಲ್ಲಾ ಕೆಲಸಗಾರರಿಗೆ ಒಂದೇ ದಿನ ರಜೆ ಅಂತಿಲ್ಲ. ಕೆಲವರಿಗೆ ಸೋಮವಾರ ರಜೆ ಇರಬಹುದು ಮತ್ತೆ ಕೆಲವರಿಗೆ ಮಂಗಳವಾರ. ಹೀಗೆ. ಭಾನುವಾರದಂದು ಅವರ ಸಂಸಾರದವರು ರಜೆ ಅನುಭವಿಸುವಾಗ ಇವರು ಕೆಲಸ ಮಾಡಬೇಕಾಗುತ್ತೆ.

ಅಂಗಡಿ ಮುಂಗಟ್ಟುಗಳಿಗೆ ವಾರದಲ್ಲಿ ಒಂದು ದಿನ ರಜೆ ನೀಡಲೇಬೇಕು ಅಂತ ರೂಲ್ಸ್ ಇತ್ತು ಅಂತ ಕೇಳಿದ್ದೆ. ಆದರೆ ಈ ನಡುವೆ ಹಾಗೇನಿಲ್ಲ ಎನಿಸುತ್ತದೆ. ಮಂಗಳವಾರದ ದಿನ ಕ್ಷೌರದ ಅಂಗಡಿಗೆ ರಜೆ ಅಂತ ಇತ್ತು. ನಮ್ಮಲ್ಲೇ ನಮಗೆ ನಂಬಿಕೆ ಕಡಿಮೆಯಾಗಿರುವ ಈ ದಿನಗಳಲ್ಲಿ ಮಂಗಳವಾರ haircut ಮಾಡಿಸಿಕೊಳ್ಳಬಾರದು ಎಂಬ ನಂಬಿಕೆ ಉಳಿದಿದೆಯೇ?

ರಜೆಯ ದಿನ ನಿಮಗೆ ಕಚೇರಿಯ ಕೆಲಸ ಹಚ್ಚಿದರೆ ಹೇಗನ್ನಿಸುತ್ತದೆ? ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ ಅಲ್ಲವೇ? ಒಂದು ನಿಮಿಷ ನಿಮ್ಮ ಆಲೋಚನೆ ಹಾಗೆಯೇ ಇಟ್ಟುಕೊಂಡಿರಿ.

ವಾರ್ಷಿಕ ರಜೆ ಎಂದರೇನು? ಅದನ್ನೇ ಹಬ್ಬಹರಿದಿನ ಅನ್ನೋದು ಅಲ್ಲವೇ? ಉದಾಹರಣೆಗೆ ವರ್ಷವೆಲ್ಲಾ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಗಣಪನಿಗೆ yearly off ಅಂತ ಸಿಗೋದೇ ಭಾದ್ರಪದ ಶುಕ್ಲ ಚತುರ್ಥಿ. ಹಾಗೇ ಸುಮ್ಮನೆ ಭೂಮಿಯಲ್ಲಿ ಸುತ್ತಾಡಿಕೊಂಡು ಹೋಗೋಣ ಅಂತ ಒಂದು ದಿನದ vacationಗೆ ಬಂದರೆ ನಾವು ಆತನ ಮುಂದೆ ಬೇಡಿಕೆಗಳ ಲಿಸ್ಟ್ ಅನ್ನು ಇಡುತ್ತೇವೆ. ಇದು ಸರಿಯೇ? ವಾರ್ಷಿಕ ಹಬ್ಬದ ದಿನ ಆಯಾ ದೇವರಿಗೆ ಬೇಡಿಕೆ ಸಲ್ಲಿಸೋದು ಬಿಟ್ಟು ವಂದನೆಗಳನ್ನು ಅರ್ಪಿಸಿದರೆ ಹೇಗೆ? ಸುಮ್ಮನೆ ಯೋಚಿಸಿ ನೋಡಿ.

ಸರಿ ಬಿಡಿ, ಈಗ ಬೇಸಿಗೆ ರಜೆ. ನಿಮ್ಮ ವಾರಾಂತ್ಯಗಳಲ್ಲಿ ಮಕ್ಕಳೊಂದಿಗೆ ನೆಮ್ಮದಿಯಾಗಿ ಕಾಲಕಳೆಯಿರಿ. ಆ ಮಕ್ಕಳದ್ದು ನೊಂದ ಮನವೇ ಆಗಿರಬಹುದು, ಉಲ್ಲಸಿತ ಮನವೇ ಆಗಿರಬಹುದು, ಇನ್ನೇನೋ ಆಗಿರಬಹುದು, ಅವರಿಗೆ ನಿಮ್ಮ ಅಮೂಲ್ಯ ಸಮಯವನ್ನು ನೀಡಿ, ಅವರೊಂದಿಗೆ ಅವರ ಅಮೂಲ್ಯ ಸಮಯವನ್ನು ಗಳಿಸಿರಿ... ಕಳೆಯದಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why do we need holidays? Why should we take break from hectic work schedule and go for vacation? How do you spend time in holidays?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more