ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಇತ್ತ ದರಿ ಅತ್ತ ಪುಲಿ ಅಂತಾದರೆ ಯಾವುದು ದಾರಿ?

|
Google Oneindia Kannada News

"ಇತ್ತ ದರಿ ಅತ್ತ ಪುಲಿ" ಎಂಬುದು ಒಂದು ಗಾದೆಯ ಮಾತು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನಲಾಗಿದೆ. ಹೇಗೆ ವೇದ ಸುಳ್ಳಾಗಲು ಸಾಧ್ಯವಿಲ್ಲವೋ ಹಾಗೆಯೇ ಗಾದೆಯೂ ಸುಳ್ಳಾಗಲು ಸಾಧ್ಯವಿಲ್ಲ ಎಂದೂ ಅರ್ಥೈಸಿಕೊಳ್ಳೋಣ. ಇತ್ತ ದರಿ ಅತ್ತ ಪುಲಿ ಎಂದರೆ ನೀವೊಂದು ಪಂಚಿಂಗ್ ಬ್ಯಾಗ್ ಎಂದುಕೊಳ್ಳಿ. ಎರಡೂ ಕಡೆಗೂ ಕುಸ್ತಿಯ ಗ್ಲೋವ್ಸ್ ಧರಿಸಿರುವವರು ಇದ್ದಾರೆ ಎಂದುಕೊಳ್ಳಿ. ಇತ್ತ ಬಂದರೂ ಹೊಡೆತ ಅತ್ತ ಹೋದರೂ ಹೊಡೆತ. ಈಗ ಈ ಗಾದೆಯನ್ನೇ ಕೊಂಚ ಹಿಗ್ಗಾಮುಗ್ಗಾ ಎಳೆದಾಡೋಣ ಬನ್ನಿ.

ಬಹಳ ವರ್ಷಗಳ ಕಾಲ 'ಇತ್ತ ದರಿ ಅತ್ತ ಪುಲಿ' ಎಂಬುದನ್ನು 'ಇತ್ತ ನರಿ ಅತ್ತ ಪುಲಿ' ಅಂತಲೇ ಅರ್ಥೈಸಿಕೊಂಡಿದ್ದೆ. ಅದರ ಕಲ್ಪನೆಯ ರೂಪವೂ ಹೀಗಿತ್ತು. ಒಂದು ಕಾಡಿನಲ್ಲಿ ದಾರಿ. ಆ ಕಡೆ ಈ ಕಡೆ ದಟ್ಟ ಅಡವಿ. ಒಂದು ಕಡೆಯಲ್ಲಿ ಹುಲಿ ಎದುರಾಗಿದೆ. ಹಿಂದೆ ತಿರುಗಿ ಓಡುವಾ ಎಂದರೆ ಅಲ್ಲೊಂದು ನರಿ. ಅಡವಿಯೊಳಗೆ ಓಡುವುದಂತೂ ಆಗದ ಮಾತು. ಬದುಕಿ ಉಳಿಯಬೇಕಾದರೆ ಮಾಡೋದೇನು?

ಮೊದಲೇ ನರಿ ಕಿಲಾಡಿ ಪ್ರಾಣಿ. ಅದು ಆಕ್ರಮಣವನ್ನೇ ಮಾಡದೆ ಹುಲಿಯ ಜೊತೆ ಒಪ್ಪಂದಕ್ಕೆ ಬಂದು, 'ನೀನು ಈ ವೇಸ್ಟ್ ಬಾಡಿಯನ್ನ ಕೊಂದು ತಿಂದು ನನಗೂ ಒಂದಿಷ್ಟು ಉಳಿಸು' ಅಂತ ಕೇಳಬಹುದು. ಅದು 60-40 ಅಥವಾ 80-20 ಪಾಲು ಎಂಬಂತೆ ಹಂಚಿಕೊಳ್ಳಬಹುದೇ? ಬಹುಪಾಲು ಹುಲಿಗೆ ಸಿಗಲೇಬೇಕು ಎಂದಾದಾಗ ಹುಲಿಗೆ 'ಸಿಂಹ ಪಾಲು' ದೊರೆಯುತ್ತದೆ ಎನ್ನಬಹುದೇ? ಹಾಗಿದ್ದರೆ ಅದನ್ನು Lion share ಎನ್ನುತ್ತಾರೋ Tiger Share ಎನ್ನುತ್ತಾರೋ ಎಂಬೆಲ್ಲಾ ಪ್ರಶ್ನೆಗಳು ತಲೆಗೆ ಬರುತ್ತಿದ್ದವು.

Srinath Bhalle Column: Which Way For Escape If There Is a Tiger And Valley?

ದರಿ ಎಂದರೆ ನರಿ ಅಂತ ಅಂದುಕೊಂಡಿದ್ದು ನನ್ನ ಅಪರಿಮಿತ ಕನ್ನಡ ಜ್ಞಾನದ ಪರಿಣಾಮ. ಆದರೂ ತಪ್ಪಿಲ್ಲ ನೋಡಿ. ಎರಡು ಪ್ರಾಣಿಗಳ ನಡುವೆ ಸಿಕ್ಕಿಬಿದ್ದರೆ ಯಾವ ಪ್ರಾಣಿಗೆ ಆಹಾರವಾಗಬಹುದು ಎಂಬ ಚಿಂತೆ ನಮಗೇಕೆ ಅಂತೀನಿ. ತಪ್ಪಿಸಿಕೊಳ್ಳಬಹುದೇ ಎಂಬ ಆಲೋಚನೆ ಅಷ್ಟೇ ನಮ್ಮ ಆಲೋಚನೆಯಾಗಬೇಕು.

ಈಗ ಈ ಎರಡು ಪ್ರಾಣಿಗಳ ಮಧ್ಯೆಯೇ ಸಿಲುಕಿದ್ದೀವಿ ಎಂದುಕೊಂಡರೆ, ಎತ್ತ ಸಾಗಿದರೂ ಆಪತ್ತು. ಅಕಸ್ಮಾತ್ ತಪ್ಪಿದರೆ ವಿಪತ್ತು. ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುವ ಸಾಧ್ಯತೆಯ ಸಂಪತ್ತು ಬಹುಶಃ ಶೂನ್ಯ. ಸಾಧ್ಯತೆಯೇ ಇಲ್ಲಾ ಎಂದು ಅರಿತರೂ, ನೋಡ್ರಪ್ಪಾ, ನಿಮ್ಮಿಬ್ಬರಲ್ಲಿ ಯಾರಿಗೆ ಅದೃಷ್ಟ ಇದೆಯೋ ನೀವೇ ಪರೀಕ್ಷೆ ಮಾಡಿ ಅಂತ ಸುಮ್ಮನೆ ಕೂರುವುದಿಲ್ಲ. ಅವುಗಳು ಬಂದು ಆಕ್ರಮಣ ಮಾಡಲಿ ಎಂದು ತಟಸ್ಥ ಕೂರುವ ಬದಲಿಗೆ, ಹೇಗೆ ತಪ್ಪಿಸಿಕೊಳ್ಳುವುದು ಎಂದು ಭೀತಿಯಲ್ಲೇ ಆಲೋಚಿಸುವುದು ಸರ್ವೇ ಸಾಮಾನ್ಯ. ಅಂದ ಹಾಗೆ, ಸರ್ವೇ ಸಾಮಾನ್ಯ ಅಂದಿದ್ದು, ಎಲ್ಲರಿಗೂ ಕಾಡಿನ ದಾರಿಯಲ್ಲಿ ವಾಕಿಂಗ್ ಮಾಡಿ ಅಭ್ಯಾಸವಿದೆ. ನರಿ ಮತ್ತು ಹುಲಿಯನ್ನು ಭೇಟಿ ಮಾಡಿ ತಪ್ಪಿಸಿಕೊಂಡು ಬಂದಿರುವ ಹತ್ತು ವರುಷಗಳ ಅನುಭವ ಇದೆ ಅಂತ ಹೇಳಲಿಲ್ಲ, ಬದಲಿಗೆ ಸಾಮಾನ್ಯ ಜ್ಞಾನ ಅಂತ ಹೇಳಿದ್ದು.

ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳೋದು ದೊಡ್ಡವರ ಗುಣ
ಇಷ್ಟೆಲ್ಲಾ ಆಲೋಚನೆಗಳ ನಡುವೆ ಮಿಸ್ ಆಗಿರುವ ಒಂದು ಅಂಶ ಒಂದಿದೆ. ಇದನ್ನು ತಲೆಗೆ ತೆಗೆದುಕೊಂಡಿದ್ದರೆ ಬಹುಶಃ ಪದಪ್ರಯೋಗ ನರಿ ಅಲ್ಲಾ ಎಂದು ಅನ್ನಿಸಬಹುದಿತ್ತು. ಏನದು? ಒಂದೆಡೆ ನರಿ ಮತ್ತೊಂದೆಡೆ ಹುಲಿ ಅಂದಾಗ, ಹುಲಿಯನ್ನು ಕಂಡ ನರಿ ಅಲ್ಲೇ ಇದ್ದೀತೆ? ಜೊತೆಗೆ ಹುಲಿಗೆ ಪೈಪೋಟಿ ನೀಡೀತೇ? ಯಾರಿಗೆ ಎಷ್ಟು ಪಾಲು ಎಂಬುದೆಲ್ಲಾ, ನರಿಯು ಅಲ್ಲಿಂದ ಓಡಿ ಹೋಗದೇ ಇದ್ರೆ ಮಾತ್ರ. ಅಲ್ಲಿಗೆ ಅಜ್ಞಾನದ ಮೋಡ ಚದುರಿತು ಅಂತಾಯ್ತು.

ಈಗ "ಇತ್ತ ದರಿ ಅತ್ತ ಪುಲಿ'ಯ ಚರ್ಚೆಗೆ ವಾಪಸ್ ಬರೋಣ. ಒಮ್ಮೆ ಹೀಗೆಯೇ ಪ್ರಯೋಗ ಮಾಡುವಾಗ ತಪ್ಪಿ "ಇತ್ತ ಪುಲಿ ಅತ್ತ ದರಿ' ಅಂತ ಅಂದೆ. ಕೇಳಿಸಿಕೊಂಡವರು ಕೆಟ್ಟದಾಗಿ ನಕ್ಕು, ಅದು "ಇತ್ತ ದರಿ ಅತ್ತ ಪುಲಿ' ಅಂತ ಅಂದರು. ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳೋದು ದೊಡ್ಡವರ ಗುಣ. ನಾನು ಯಾವತ್ತೂ ದೊಡ್ಡವ ಅಂತ ಹೇಳಿಕೊಂಡಿಲ್ಲ. ಹಾಗಾಗಿ ನಕ್ಕವರನ್ನೇ ಕೇಳಿದೆ 'ಈ ಇತ್ತವನ್ನು ಅತ್ತ ಹಾಕಿ, ಅತ್ತವನ್ನು ಇತ್ತ ಹಾಕಿದರೆ ತಪ್ಪು ಅಂತೀರಾ?'. ವಿಚಿತ್ರವಾಗಿ ನೋಡಿದರು. ನಾನು ಮತ್ತೆ ಹೇಳಿದೆ 'ಹೋಗಲಿ ಬಿಡಿ, ಈಗ ನಾನು ಇತ್ತ ಕಡೆಯಿಂದ ಹೇಳಿದೆ. ಅತ್ತ ಕಡೆ ಬಂದು ಹೇಳ್ತೀನಿ. ಈಗ ಇತ್ತ ಮತ್ತು ಅತ್ತಗಳನ್ನು ಅಲ್ಲೇ ಬಿಡಿ. ದರಿಯನ್ನು ತೆಗೆದು ಆ ಕಡೆ, ಪುಲಿಯನ್ನು ತೆಗೆದು ಈ ಕಡೆ ಬಿಟ್ಟರೆ ಬದುಕಿ ಉಳಿಯುವ ಸಾಧ್ಯತೆ ಎಷ್ಟು?'. ಆ ಘಳಿಗೆಯಲ್ಲಿ ಅವರ ಕಣ್ಣಿಗೆ ನಾನೇ ದರಿ, ನಾನೇ ಪುಲಿ ಅನ್ನಿಸಿದ್ದರೆ ಅದು ನನ್ನ ತಪ್ಪಲ್ಲ.

ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ
ವಿಷಯ ಇಷ್ಟೇ, ನಾನು ನೋಡುವಾಗ, ನನ್ನ ಎಡ ನಿಮ್ಮ ಬಲ ಆಗಿರುತ್ತದೆ. ಅದರಂತೆಯೇ ನಾನು ನೋಡುವಾಗಿನ ಬಲ ನಿಮ್ಮ ಎಡ ಆಗಿರುತ್ತದೆ. ಹಾಗಾಗಿ ನನ್ನ ಅತ್ತ ನಿಮ್ಮ ಇತ್ತ. ನನ್ನ ಇತ್ತ ನಿಮ್ಮ ಅತ್ತ. ಈಗ ಮತ್ತೊಂದು ಸಾಮ್ಯತೆ ಹೇಳ್ತೀನಿ ಕೇಳಿ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಅಂತಾರೆ. ಎಂಥಾ ಜಾಣ್ಮೆ! ಬೆಣ್ಣೆಯನ್ನು ಎಡಗಣ್ಣಿಗಾದರೂ ಹಚ್ಚಿ, ಬಲಗಣ್ಣಿಗಾದರೂ ಹಚ್ಚಿ ನನಗೇನು ಎಂಬಂತೆ.

'ಇತ್ತ ದರಿ ಅತ್ತ ಪುಲಿ' ಎಂಬ ಗಾದೆ ಮಾತಿನಲ್ಲಿ ದರಿ ಎಂದರೆ ಕಂದರ ಆಂಗ್ಲದಲ್ಲಿ valley. ಪುಲಿ ಎಂದರೆ ಹುಲಿ. ಸನ್ನಿವೇಶ ಹೀಗಿರಬಹುದು. ಹುಲಿಯನ್ನು ಕಂಡು ತಪ್ಪಿಸಿಕೊಂಡು ಓಡುವಾಗ ಎದುರಿಗೆ ಒಂದು ಕಂದರ ಎದುರಾಗಿದೆ. ಅದನ್ನು ಹಾರಿ ಮತ್ತೊಂದು ಕಡೆ ಹೋಗಲು ನೀವೇನೂ ಬಾಹುಬಲಿ ಅಲ್ಲ. ಹಾಗಾಗಿ ಮುಂದೆ ಹೋಗಲಾಗದು. ಹಿಂದೆ ಸರಿದರೆ ಹುಲಿ ಕಾದಿದೆ, ಅಲ್ಲೂ ಉಳಿಗಾಲವಿಲ್ಲ. ಏನು ಮಾಡೋದು? ಇನ್ನೂ ಹೃದಯ ಢಮಾರ್ ಅನ್ನದೆ ಬದುಕಿದ್ದರೆ, ನನ್ನ ಆಲೋಚನೆಯ ಪ್ರಕಾರ ಹೇಳೋದಾದ್ರೆ, ಸುಮ್ಮನೆ ಇದ್ದಲ್ಲೇ ಇದ್ದುಬಿಡಬೇಕು ಅಥವಾ ತೊಪಕ್ಕನೆ ಬಿದ್ದು ಮಲಗಿಬಿಡಬೇಕು. ಯಾಕೆ ಅಂತ ನೋಡೋಣ.

ಆಕ್ರಮಣ ಮಾಡಿಯೇ ಬೇಟೆಯನ್ನು ತಿನ್ನೋದು
ಕೈಯಲ್ಲಿ ಆಯುಧ ಇಲ್ಲದವರ ಮೇಲೆ ಆಕ್ರಮಣ ಮಾಡಲಾರೆ ಅಂತೇನಾದರೂ ಆ ಹುಲಿಯು ವ್ರತ ಕೈಗೊಂಡಿದ್ದರೆ ಅದು ಬಹುಶಃ ವಾಪಸ್ ಹೋಗಬಹುದು. 'ಸತ್ತವನ ಅಥವಾ ಸತ್ತಂತಿರುವವನ ಮೇಲೆ ಆಕ್ರಮಣ ಮಾಡಲು ನಾನೇನು ಹೇಡಿ ಪ್ರಾಣಿಯೇ? ತಾನು ಹುಲಿ, ಆಕ್ರಮಣ ಮಾಡಿಯೇ ಬೇಟೆಯನ್ನು ತಿನ್ನೋದು' ಎಂಬ ಗರ್ವ ಆ ಹುಲಿಗೆ ಇದ್ದರೆ ಬಚಾವ್ ಆಗಬಹುದು. ಅಕಸ್ಮಾತ್ ಆ ಹುಲಿಯು, ವೇಗದ ಬೌಲರಿನಂತೆ ಓಡಿ ಬಂದು ನಿಮ್ಮ ಮೇಲೆ ಬಿದ್ದು ಕೊಲ್ಲಬೇಕು ಅಂದುಕೊಂಡು ಓಡಿ ಬಂದಾಗ, ಮಿಂಚಿನ ಶಕ್ತಿ ನಿಮ್ಮಲ್ಲಿ ಸಂಚಾರವಾಗಿ ತಪ್ಪಿಸಿಕೊಂಡರೆ ಆ ಹುಲಿಯೇ ಕಂದರದಲ್ಲಿ ಬೀಳಬಹುದು. ಅಥವಾ ಅಂದು ಹುಲಿಗೆ ಏಕಾದಶಿ ಉಪವಾಸವಾದರೆ ಖಂಡಿತ ಬಚಾವ್.

ಇಂಥಾ ಯಾವ ಅಸಹಜ ಸನ್ನಿವೇಶವೂ ಆಗದೇ ಇದ್ದಲ್ಲಿ ನೀವು ಹುಲಿಯ ಬಾಯಿಗೆ ಆಹಾರವಾಗುತ್ತೀರಿ. ಬದುಕಿದ್ದಾಗ ಯಾವ ಒಳ್ಳೆಯ ಕೆಲಸವನ್ನೂ ಮಾಡದೆ ಇದ್ದಾಗ ಕನಿಷ್ಠ ಈ ಸಮಯದಲ್ಲಿ ಒಬ್ಬರಿಗೆ ಆಹಾರಾಗಿ ಪುಣ್ಯ ಕಟ್ಟಿಕೊಳ್ಳಬಹುದು ಅಲ್ಲವೇ? ಹುಲಿಯಿಂದ ತಪ್ಪಿಸಿಕೊಂಡು ಕಂದರದಲ್ಲಿ ಬಿದ್ದರೆ ಯಾರಿಗೂ ಉಪಯೋಗವಿಲ್ಲ. ಕಂದರದಲ್ಲಿ ಬಿದ್ದರೆ, ಅಕಸ್ಮಾತ್ ಅಲ್ಲೇ ಗಿಡ, ಮರ, ಪೊದೆಗಳಲ್ಲಿ ಬಿದ್ದು ಉಳಿದಾಗ ಯಾರಾದರೂ ಬಂದು ಕಾಪಾಡಬಹುದು ಅಂತ ಆಸೆ ಇಟ್ಟುಕೊಳ್ಳದಿರುವುದು ಒಳಿತು.

ಅತ್ತೆ ಮತ್ತು ಸೊಸೆಗೆ ಸರಿ ಬರಲಿಲ್ಲ ಎಂದಾಗ
'ಇತ್ತ ದರಿ ಅತ್ತ ಪುಲಿ' ಮಾತನ್ನೇ ಮತ್ತೊಮ್ಮೆ ಆಲೋಚಿಸಿದರೆ, ನಿಜಕ್ಕೂ ದಿನನಿತ್ಯದ ಜೀವನದಲ್ಲಿ ಕಂಡಿರುತ್ತೇವೆ ಎಂಬುದು ಸುಳ್ಳಲ್ಲ. ಮದುವೆಯಾದ ಹೊಸತು ಅಂತಲೇ ಅಂದುಕೊಳ್ಳಿ. ಅತ್ತೆ ಮತ್ತು ಸೊಸೆಗೆ ಸರಿ ಬರಲಿಲ್ಲ ಎಂದಾಗ ತುತ್ತಾ- ಮುತ್ತಾ ಸನ್ನಿವೇಶ ಎದುರಾದ ಬಡಪಾಯಿ ಗಂಡಿನ ಸನ್ನಿವೇಶವೇ ಇದು. ಇಂಥಾ ಸನ್ನಿವೇಶವೇ ಎದುರಾಗಬಾರದು ಎಂದರೆ ಗಂಡು ಹೆಣ್ಣಿನ ಜಾತಕ ತೋರಿಸಿ ಎಷ್ಟು ಗುಣಗಳು ಕೂಡುತ್ತವೆ ಎನ್ನುವುದರ ಬದಲಿಗೆ, ಈ ಎರಡು ಹೆಂಗಳ ಜಾತಕ ಹೊಂದುತ್ತದೆಯೇ ಅಂತ ನೋಡುವುದೇ ಕ್ಷೇಮ. ಇವರಿಬ್ಬರು ಚೆನ್ನಾಗಿದ್ದರೆ, ಈ ಗಂಡುಪ್ರಾಣಿ ಸಕತ್ ಚೆನ್ನಾಗಿ ಇರುತ್ತಾನೆ ಎನ್ನಬಹುದು.

ತಾಯಿಯಾದವಳು 'ಹೆಂಡತಿ ಬಂದಳು ಅಂತ' ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲುಹಿ ದೊಡ್ಡವನನ್ನಾಗಿ ಮಾಡಿರುವ ಈ ತಾಯಿಯನ್ನೇ ಮರೆತೆಯಾ?' ಎಂಬ ಡೈಲಾಗ್ ಅನ್ನು ಅದೆಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆಯೋ ಲೆಕ್ಕವೇ ಇಲ್ಲ ಅಲ್ಲವೇ? ಇದು ಅತ್ತ ಕಡೆಯಿಂದ ಬಂದ ಮಾತು ಎಂದುಕೊಂಡರೆ ಈಗ ಇತ್ತ ಕಡೆಯಿಂದ ಏನು ಕೇಳಿಬರುತ್ತಿದೆ ನೋಡೋಣ ಬನ್ನಿ.

ಅಮ್ಮನ ಮಾತೇ ಮುಖ್ಯವಾಗಿದ್ರೆ ನನ್ನನ್ಯಾಕೆ ಮದುವೆ ಆಗಿದ್ದು?
"ನೀವಿನ್ನೂ ಬೆರಳು ಚೀಪುವ ಕೂಸು ಎಂದುಕೊಂಡಿದ್ದೀರಾ? ನಿಮಗೋಸ್ಕರ ಹೆತ್ತವರನ್ನೇ ತೊರೆದು ಈ ಮನೆಗೆ ಬಂದಿದ್ದಕ್ಕೆ ಸರಿಯಾದ ಮರ್ಯಾದೆ ಸಿಕ್ಕಿದೆ ನನಗೆ. ನಿಮಗೆ ಅಮ್ಮನ ಮಾತೇ ಮುಖ್ಯವಾಗಿದ್ರೆ ನನ್ನನ್ಯಾಕೆ ಮದುವೆ ಆಗಿದ್ದು? ನನ್ನನ್ನ ಪ್ರೀತಿ ಮಾಡೋದಕ್ಕೂ ಅಮ್ಮನನ್ನು ಕೇಳಿಕೊಂಡೇ ಮಾಡಿದಿರಾ?'' ಎಂದೆಲ್ಲಾ ಮುನ್ನೂರು ಅರವತ್ತು ಡಿಗ್ರಿಯಲ್ಲಿ ಬಡಿದರೆ, ಆ ಬಡಪಾಯಿಗೆ ಇತ್ತ ದರಿ ಅತ್ತ ಪುಲಿ ಅಲ್ಲ, ಎತ್ತೆತ್ತಲೂ ಪುಲಿ, ದರಿ, ನರಿಗಳೇ ಮಾತ್ರವಲ್ಲದೇ ಅರಣ್ಯದ ಎಲ್ಲ ಪ್ರಾಣಿಗಳೂ ಕಾಣುತ್ತದೆ.

ಇಷ್ಟಾಯ್ತು ನೋಡಿ ಹಿಗ್ಗಾಮುಗ್ಗಾ ಕಥೆ. ಇತ್ತ ದರಿಯನ್ನು ಎಳೆದು ಕಂದರ ಹಿರಿದಾಯ್ತು. ಅತ್ತ ಪುಲಿಯನ್ನು ಎಳೆದು ಹುಲಿಯ ಬಾಲವೂ ಉದ್ದವಾಯ್ತು. ಆದರೆ ಅತ್ತ ದರಿ ಇತ್ತ ಪುಲಿ ಎಂದಾಗ ಎತ್ತ ಕಡೆ ವಾಲಬೇಕು ಎಂಬ ಸಾಮಾಜಿಕ ಸಮಸ್ಯೆಗಂತೂ ಉತ್ತರ ಸಿಕ್ಕ ಹಾಗಿಲ್ಲ. ಯುದ್ಧ ಎಂಬ ಭೀಕರತೆಯ ನಂತರ ಯಾವುದಾದರೂ ಇದ್ದರೆ ಅದು ಸಾಮಾಜಿಕ ಸಮಸ್ಯೆಗಳು. ಏನಂತೀರಾ?

English summary
Srinath Bhalle Column: if there is a tiger and valley, Which Way For Escaping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X