ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ snowball ಪರಿಣಾಮ ಎಂದರೆ ಏನು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊನ್ನೆ ಒಂದೆಡೆ ಪ್ರತಿಕ್ರಿಯೆ ಹಾಕುವಾಗ snowball effect ಎಂಬ ವಿಚಾರವಾಗಿ ಎರಡು ಸಾಲು ಬರೆದದ್ದೇ ನನ್ನ ಇಂದಿನ ಬರಹಕ್ಕೂ ಆಹಾರವಾಯ್ತು ಅನ್ನಿ. ಈ ಸ್ನೋಬಾಲ್ ಎಂದರೇನು ಅಂತ ನಾವು ನೀವೆಲ್ಲಾ ಬಹುಶಃ ಟಿ.ವಿ ಜಾಹೀರಾತುಗಳಲ್ಲಿ ಅಥವಾ ಚಲನಚಿತ್ರಗಳಲ್ಲಿ ನೋಡಿರುವುದನ್ನೇ ಹೇಳುತ್ತೇನೆ. ಒಂದು ಹಿಮದ ಪರ್ವತದ ಮೇಲೆಲ್ಲೋ ಸಣ್ಣದಾಗಿ ಆರಂಭವಾದ ಒಂದು ದುಂಡನೆಯ ಹಿಮದ ಗುಂಡು ಉರುಳುರುಳಿ ಬರುತ್ತಾ ಹಿರಿದಾಗುತ್ತದೆ. ಎಲ್ಲೋ ಒಂದೆಡೆ ದಡ ಅಂತ ಸೇರಿದಾಗ ಬೃಹತ್ ಆಗಿ ಬದಲಾಗಿ ನಿಲ್ಲುತ್ತದೆ ಅಥವಾ ಎಲ್ಲಿಗೋ ಬಡಿದು ನುಚ್ಚುನೂರಾಗುತ್ತದೆ.

ಅದು ಬೃಹತ್ತಾಗಿ ಎದುರಿಗೆ ನಿಂತಾಗ ಅದನ್ನು ಎದುರಿಸುವುದು ಅಸಾಧ್ಯ ಎಂಬುದು ಒಂದಾದರೆ, ಅದು ಉರುಳಿ ಬರುವಾಗ ಎದುರಿಸುವುದು ದುಸ್ತರ ಮತ್ತು ಅದರ ಅಡಿಗೆ ಸಿಲುಕಿ ಅಪ್ಪಚ್ಚಿಯಾಗುವುದು ಸರ್ವೇ ಸಾಮಾನ್ಯ. ಸಿನಿಮಾಗಳಲ್ಲಿ ಇಂಥ ನವಿರೇಳುವ ದೃಶ್ಯ ನೋಡಿ ಭೀತರಾಗಿರುತ್ತೇವೆ ಅಥವಾ ಆನಂದಿಸಿರುತ್ತೇವೆ. ಆದರೆ ಬೆಂಗಳೂರಿನ ಬೀದಿಯಲ್ಲಿ ಓಡಾಡುವ ನಮಗೆ ಇದು ಹೇಗೆ ಅನ್ವಯವಾದೀತು ಎಂದು ಮೂಗು ಮುರಿಯದಿರಿ.

ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...

ರಕ್ಕಸಿಯಾದ ಶೂರ್ಪನಖಿಯು ರಾಮ ಪರಿವಾರವನ್ನು ನೋಡುತ್ತಾಳೆ. ಅದು ಆರಂಭ. ಆ ನಂತರ ರಾಮನನ್ನು ಪೀಡಿಸುತ್ತಾಳೆ, ಅಲ್ಲಿಂದ ಲಕ್ಷ್ಮಣ, ಮಧ್ಯೆ ಸೀತಾ ಮಾತೆಯನ್ನು ಛೇಡಿಸುವುದು ಇತ್ಯಾದಿಗಳೇ ಉರುಳುವ ಸ್ನೋಬಾಲ್. ಪ್ರತೀ ಹಂತದಲ್ಲೂ ಆಗುವ ಸೋಲು, ಅವಳಲ್ಲಿ ಆಕ್ರೋಶ ಹೆಚ್ಚಿಸುತ್ತಾ ಸಾಗುತ್ತದೆ. ಒಂದು ಘಟ್ಟದಲ್ಲಿ ಅವಳಲ್ಲಿ ಆ ಆಕ್ರೋಶ ಬೃಹತ್ತಾಗಿ ಬೆಳೆದು ನಿಂತಾಗ ಕಿವಿ ಮೂಗು ಕಳೆದುಕೊಳ್ಳುವಂತಾಯ್ತು. ಆದರೆ ಉರುಳುವಿಕೆ ನಿಂತಿರಲಿಲ್ಲ. ಅಲ್ಲಿಂದ ಅವಳು ರಾವಣನಲ್ಲಿ ಹೋಗಿ ದೂರು ಇತ್ತಾಗ, ಆ ಸ್ನೋಬಾಲ್ ಎಂಬ ಉರಿ ವರ್ಗಾವಣೆಯಾಯ್ತು. ಒಂದರ್ಥದಲ್ಲಿ ರಾಮಾಯಣದ ಅರಣ್ಯಕಾಂಡ ಎಂಬುದು ಸ್ನೋಬಾಲ್ ಪರಿಣಾಮಕ್ಕೆ ಒಳ್ಳೆಯ ಉದಾಹರಣೆ ಎನ್ನಬಹುದು.

What Is Snow Ball Effect And Snowball Effect In Daily Life

ಆದರೆ ಇಡೀ ಮಹಾಭಾರತವೇ ಒಂದು ಸ್ನೋಬಾಲ್ ಪರಿಣಾಮ ಎಂದರೆ ನಂಬಲೇಬೇಕು. ಇಚ್ಛಾಮರಣಿಯಾದ ಭೀಷ್ಮರ ಜವಾಬ್ದಾರಿಗಳನ್ನು ಉರುಳುವ ಸ್ನೋಬಾಲ್ ಗೆ ಹೋಲಿಸಿ ನೋಡಿದಾಗ ಅರ್ಥವಾಗುತ್ತದೆ ಅವರು ಕೊಟ್ಟ ಮಾತು ಆರಂಭದ ಪುಟ್ಟ ಸ್ನೋಬಾಲ್ ಆಗಿತ್ತು ಅಂತ. ಆದರೆ ಈ ರೀತಿ ಬೆಳೆದು ನಿಲ್ಲಬಹುದು ಎಂಬ ಊಹೆಯೂ ಅವರಿಗೆ ಇರಲಿಕ್ಕಿಲ್ಲ. ಇನ್ನು ದುರ್ಯೋಧನನಿಗೆ ಶಕುನಿಯು ಉಣಬಡಿಸುತ್ತಿದ್ದ ದುರ್ಬೋಧನೆ ಎಂಬ ವಿಷ. ದಿನದಿನಕ್ಕೂ ಅದೊಂದು ಉರುಳುವ ಸ್ನೋಬಾಲ್ ಆಗಿ, ಅವನ ಸಾವಿನ ಸಮಯದಲ್ಲೂ ಕರಗದ ಹಿಮಪರ್ವತವೇ ಆಗಿತ್ತು.

ಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನಶ್ರೀನಾಥ್ ಭಲ್ಲೆ ಅಂಕಣ; ವಿಷಯವೇ ಇಲ್ಲದ ವಿಚಾರಗಳ ಮಂಥನ

ಶ್ರೀಕೃಷ್ಣನ ಸೋದರ ಮಾವ ಕಂಸನು ತನ್ನ ತಂಗಿಯನ್ನು ಕಾರಾಗೃಹಕ್ಕೆ ನೂಕಿದಾಗ ಸ್ನೋಬಾಲ್ ಆರಂಭವಾಗಿದ್ದು, ಪ್ರತೀ ಬಾರಿ ಒಂದು ಕೂಸನ್ನು ಕೊಂದಾಗ ಸ್ನೋಬಾಲ್ ಹಿರಿದಾಗುತ್ತಲೇ ಸಾಗಿತ್ತು. ಕೃಷ್ಣನ ಕಥೆಯಲ್ಲಿ ಆರಂಭವಾಗಿ ಮಹಾಭಾರತಕ್ಕೂ ಲಗ್ಗೆ ಇಟ್ಟ ಮತ್ತೊಂದು ಉತ್ತಮ ಉದಾಹರಣೆ ಎಂದರೆ ಶಿಶುಪಾಲ. ಪ್ರತೀ ನಿಂದನೆಯನ್ನೂ ಒಂದು ಉರುಳುವಿಕೆ ಎನ್ನಿ. ನೂರು ನಿಂದನೆ ತಲುಪಿದಾಗ ಮಿಕ್ಕಿದ ಕೆಲಸವನ್ನು ಸುದರ್ಶನ ಚಕ್ರ ಮಾಡಿತ್ತು.

What Is Snow Ball Effect And Snowball Effect In Daily Life

ಇಷ್ಟೆಲ್ಲಾ ನೋಡುವಾಗ ಅನ್ನಿಸುತ್ತೆ ಬಹುಶಃ ಈ ಸ್ನೋಬಾಲ್ ಪರಿಣಾಮ ಎನ್ನುವುದು ಬರೀ ಋಣಾತ್ಮಕ ಅಂತ. ಆದರೆ ಅಲ್ಲ, ಈ ಸ್ನೋಬಾಲ್ ಪರಿಣಾಮವು ಸಾಂದರ್ಭಿಕ.

ಶ್ರೀನಾಥ್ ಭಲ್ಲೆ ಅಂಕಣ; ಬತ್ತಳಿಕೆಯೊಳಗಿನ ಬಾಣಗಳುಶ್ರೀನಾಥ್ ಭಲ್ಲೆ ಅಂಕಣ; ಬತ್ತಳಿಕೆಯೊಳಗಿನ ಬಾಣಗಳು

ಮತ್ತೊಮ್ಮೆ ಭಾಗವತದ ಉದಾಹರಣೆಯನ್ನೇ ಉಲ್ಲೇಖಿಸಿದರೆ, ಶ್ರೀಕೃಷ್ಣ ಹುಟ್ಟಿದ ಮರುಕ್ಷಣದಲ್ಲೇ ದೇವಕಿ-ವಸುದೇವರು ಬಂಧಮುಕ್ತರಾದರು. ಅದು ಸ್ನೋಬಾಲ್ ನ ಆರಂಭದ ಹಂತ ಎಂದುಕೊಂಡರೆ, ದಿನದಿನಕ್ಕೂ ಆತನ ಲೀಲೆಗಳು ವಿಶ್ವರೂಪವನ್ನೇ ತಾಳತೊಡಗಿತ್ತು. ಇದು ಧನಾತ್ಮಕವಾದ ಸ್ನೋಬಾಲ್ ಪರಿಣಾಮಕ್ಕೆ ಉತ್ತಮ ಉದಾಹರಣೆ. ಸ್ನೋಬಾಲ್ ಪರಿಣಾಮವನ್ನು ಮತ್ತೊಂದು ರೀತಿಯಲ್ಲಿ ಹೇಳಬಹುದು ಎಂದರೆ ಇದು ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಬೆಳೆಯುತ್ತಾ ಸಾಗುತ್ತದೆ.

What Is Snow Ball Effect And Snowball Effect In Daily Life

ಆಯ್ತು ಬಿಡಿ, ನಮ್ಮ ಜೀವನದಲ್ಲಿ ಈ ಸ್ನೋಬಾಲ್ ಪರಿಣಾಮ ಏನು? ತುಂಬಾ ಸಿಂಪಲ್. ಆರಂಭದಲ್ಲಿ ಕೊಂಚ ಕಡಿದ ಶಿಲಾಬಾಲಿಕೆಯಂತೆ ಇರುವ ದೇಹ ಆಮೇಲೆ ಕೊಂಚ ಮೈಕೈ ತುಂಬಿಕೊಳ್ಳೋದ್ರಲ್ಲಿ ತಪ್ಪೇನಿದೆ. ಈ ಕೊಂಚ ಕೊಂಚಗಳೇ ಕೊನೆಗೊಮ್ಮೆ, ಹೋಗ್ಲಿ ಬಿಡಿ ಎನ್ನುವ ಹಾಗೆ ಆಗೋದು. ಬೆಳೆಯುವ ಮರವು ಪ್ರತೀ ವರುಷ ತನಗೊಂದು ಸುತ್ತು ಬೆಳೆಸಿಕೊಳ್ಳುತ್ತದೆ ಅಂತ ನಾವೂ ಹೊಟ್ಟೆ ಬೆಳೆಸಬಹುದೇ? ಅಂದ ಹಾಗೆ, ಗಿಡವು ಮರವಾಗಿ ಕಾಂಡವನ್ನು ದಪ್ಪನಾಗಿಸಿಕೊಳ್ಳುವುದೂ ಸ್ನೋಬಾಲ್ ಪರಿಣಾಮಕ್ಕೆ ಉದಾಹರಣೆ.

ಚಿಕ್ಕಂದಿನಲ್ಲಿ ಎಲ್ಲವೂ ಹುಡುಗಾಟಿಕೆಯ ಸ್ವರೂಪ. ಕೊಂಚ ಬುದ್ಧಿ ಬೆಳೆದಂತೆ, ಮನೆಯ ವಾತಾವರಣ ಅರ್ಥವಾಗಲು ತೊಡಗಿದಂತೆ ಜವಾಬ್ದಾರಿಗಳು ಹೇರಲಾರಂಭವಾಗುತ್ತದೆ. ಅದು ಸ್ನೋಬಾಲ್ ಎಂಬುದರ ಆರಂಭ ಅಂದುಕೊಳ್ಳಿ. ಆ ನಂತರ ಹಿಂದಿರುಗಿ ಹೋಗುವ ಸನ್ನಿವೇಶವೇ ಇಲ್ಲ ಅಥವಾ ಸಂದರ್ಭವೇ ಒದಗಿ ಬರೋದಿಲ್ಲ. ಅಲ್ಲಿಂದಾಚೆ ಪ್ರತೀ ಕ್ಷಣವೂ ಪ್ರತೀ ದಿನವೂ ಆ ಸ್ನೋಬಾಲ್ ಬೆಳೆಯುತ್ತಲೇ ಸಾಗುತ್ತದೆ. ಸಾಮಾನ್ಯವಾಗಿ ಎಲ್ಲ ಸ್ನೋಬಾಲ್ ಗಳು ಕೊನೆಯಲ್ಲಿ ನುಚ್ಚುನೂರಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಒಂದೋ ಆ ಸನ್ನಿವೇಶ ಚೂರಾಗಬಹುದು ಅಥವಾ ನಾವೇ ಅದಕ್ಕೆ ಬಲಿಪಶುವಾಗಬಹುದು.

What Is Snow Ball Effect And Snowball Effect In Daily Life

ಹೀಗೆಂದರೆ ಏನು ಅಂದ್ರಾ? ಸಾಮಾಜಿಕ ಬದುಕಿನ ಸ್ನೋಬಾಲ್ ಪರಿಣಾಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಚಕ್ರಬಡ್ಡಿ ಸಾಲ. ಆರಂಭದಲ್ಲಿ ಒಂದು ರೂಪಾಯಿ ಇರೋದು ಮೂವತ್ತೊಂದನೆಯ ದಿನಕ್ಕೆ ಎಷ್ಟಾಗಬಹುದು ಎಂಬುದನ್ನು ಆಲೋಚಿಸಿದಾಗ ಊಟ, ನಿದ್ದೆ ಹತ್ತಿರ ಸುಳಿಯಲಾರದು. ತೆನಾಲಿರಾಮನ ಒಂದು ಕಥೆಯಲ್ಲಿ ಇಂಥದ್ದೊಂದು ಸನ್ನಿವೇಶ ಕಂಡುಬರುತ್ತದೆ. ತಾನೇ ಸಿರಿವಂತ ಎಂದು ಹೆಮ್ಮೆಯಿಂದ ಮೆರೆಯುತ್ತಿದ್ದ ಮಹಾರಾಜನೊಬ್ಬ ನೀನೇನೇ ಕೇಳಿದರೂ ಕೊಡ್ತೀನಿ ಎಂಬುದಾಗಿ ಹೇಳುತ್ತಾನೆ. ರಾಮ ನನಗೆ ಒಂದು ತಿಂಗಳ ಕಾಲ ಅಕ್ಕಿಕಾಳುಗಳನ್ನು ಕೊಡಬೇಕು, ಆದರೆ ಹೇಗೆ ಎಂದರೆ ಮೊದಲ ದಿನ ಒಂದು ಕಾಳು ಅಕ್ಕಿಯಾದರೆ ಮರುದಿನ ಅದಕ್ಕೆ ಎರಡರಷ್ಟು ಕೊಡಬೇಕು ಎನ್ನುವುದು. ಮೂವತ್ತು ದಿನಗಳಿಗೆ ಇದು ಎಷ್ಟಾಗಬಹುದು ಎಂದು ನೀವೇ ಹೇಳಿ. ಇದು ಸ್ನೋಬಾಲ್ ಪರಿಣಾಮ.

ಇಂದುಗಳು ನಾಳೆಗಳಾಗೋದೇ ಸ್ನೋಬಾಲ್ ಪರಿಣಾಮ. ನಾಳೆ ಓದಿದರಾಯ್ತು ಅಂತ ದಿನ ನೂಕಿದಾಗ ಅದು ಪರೀಕ್ಷೆಯ ಸಮಯಕ್ಕೆ ಬೆಟ್ಟವಾಗಿ ನಿಂತಿರುತ್ತದೆ. ಭಾನುವಾರ ಸಂಜೆ ತಾನೇ, ಸ್ವಲ್ಪ ವಿರಮಿಸೋಣ ಎಂದುಕೊಂಡು ಸಮಯ ನೂಕಿದಾಗ ಸೋಮವಾರದ ಹಗಲು ಅದೊಂದು ಗುಡ್ಡವೋ ಬೆಟ್ಟವೋ ಆಗಿರುತ್ತದೆ. ಹನಿಹನಿಗೂಡಿದರೆ ಹಳ್ಳ ಎಂಬುದೂ ಸ್ನೋಬಾಲ್ ಪರಿಣಾಮ.

ಈ ಸ್ನೋಬಾಲ್ ಅನ್ನು ಧನಾತ್ಮಕವಾಗಿ ನೋಡೋಣ. ಪ್ರತೀವಾರ ಇಂತಿಷ್ಟು ಅಂತ ಹಣವನ್ನು ಪಕ್ಕಕ್ಕೆ ಇರಿಸಿದ್ದನ್ನು ಪ್ರತೀ ವಾರ ದುಪ್ಪಟ್ಟು ಮಾಡಿ ನೋಡಿದಾಗ ವರ್ಷಾಂತ್ಯಕ್ಕೆ ಆರಾಮವಾಗಿ ಒಂದು ವಿಹಾರಕ್ಕೆ ಹೋಗುವಷ್ಟು ಹಣ ಕೂಡಿಡಬಹುದು. ಋಣಾತ್ಮಕವಾಗಿ ನೋಡಿದಾಗ, ಕ್ರೆಡಿಟ್ ಕಾರ್ಡ್ ಉಜ್ಜುತ್ತಾ ಸಾಗುವಾಗ ಸಾಲದ ಬೆಟ್ಟವಾಗಬಹುದು.

ನಮ್ಮ ಜೀವನದ ಪ್ರತೀ ಕ್ಷಣವೂ ಸ್ನೋಬಾಲ್ ಪರಿಣಾಮ. ಪ್ರತೀ ಕ್ಷಣವೂ ನಮ್ಮ ವಯಸ್ಸು ಹಿಂದಿನ ಕ್ಷಣಕ್ಕಿಂತ ಹೆಚ್ಚು. ಇದು ಅನಿವಾರ್ಯ. ನಾವು ಹೇಗೆ ಈ ಸ್ನೋಬಾಲ್ ಪರಿಣಾಮವನ್ನು ಬಳಕೆ ಮಾಡಿಕೊಳ್ಳಬಹುದು ಎಂದರೆ ಪ್ರತೀ ಗಳಿಗೆಯಲ್ಲಿನ ಕಲಿಕೆಯು ಆ ಹಿಂದಿನ ಕ್ಷಣಕ್ಕಿಂತ ಹೆಚ್ಚಾಗಬೇಕು. ಜ್ಞಾನ ಸಂಪತ್ತು ಪ್ರತೀ ಹಿಂದಿನ ಕ್ಷಣಕ್ಕಿಂತ ಹೆಚ್ಚಲಿ. ಪ್ರತೀ ಕ್ಷಣದ ಅನುಭವ ಹಿಂದಿನ ಅನುಭವಕ್ಕಿಂತ ಹೆಚ್ಚಾಗಲಿ. ಕಲಿಕೆಗಳು, ಅನುಭವಗಳು ನಮ್ಮಲ್ಲೇ ಚೂರಾಗದೇ ಇತರರಿಗೆ ಅದರ ಉಪಯೋಗವೂ ಆಗಲಿ. ಏನಂತೀರಾ?

English summary
Here is small article on what is Snowball effect and Snowball effect in our daily life, ಮೊನ್ನೆ ಒಂದೆಡೆ ಪ್ರತಿಕ್ರಿಯೆ ಹಾಕುವಾಗ snowball effect
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X