• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಮೂವತ್ತು ಸೆಕೆಂಡುಗಳ Elevator talk ಎಂದರೇನು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಈ ವಿಷಯ ಕೊಂಚ ಭಿನ್ನ. ಇಡೀ ನಮ್ಮ ಜೀವಮಾನದಲ್ಲಿ ನಮ್ಮೊಡನೆಯೇ ಇದ್ದು, ಎಷ್ಟೋ ಸಾರಿ ನಮ್ಮ ಕಾಲಡಿಯೇ ಸಾಗಿಕೊಂಡು ಹೋಗುತ್ತದೆ. ಆದರೆ ಅದರ ಅರಿವು ನಮಗಾಗೋದಿಲ್ಲ. ಅದು ಸರಿ, ಆದರೆ ಈ Elevator talk ಎಂದರೇನು?

   Rohit Sharma ಟಿ20ಗೆ ನಾಯಕನಾಗಲಿ | T20 Captain? | Oneindia Kannada

   ಒಂದು ಬಿಲ್ಡಿಂಗ್ ನ elevator ಅಥವಾ ಲಿಫ್ಟ್‌ ಎಂದುಕೊಳ್ಳಿ. ಅದರೊಳಗೆ ಹೋಗಿ, ಹದಿನಾಲ್ಕನೆಯ ಮಹಡಿಯಲ್ಲಿರುವ ನಿಮ್ಮ ಕಚೇರಿಗೆ ಹೋಗುವುದಕ್ಕೆ ಹದಿನಾಲ್ಕು ಅಂತ ಸಂಖ್ಯೆ ಒತ್ತಿ ಈ ಕಡೆ ತಿರುಗಿ ನೋಡಿದಾಗ ಅಲ್ಲೊಬ್ಬ ವ್ಯಕ್ತಿ ನಿಮ್ಮೊಂದಿಗೆ elevatorನಲ್ಲಿ ಇದ್ದಾರೆ. ಆ ವ್ಯಕ್ತಿಯೊಡನೆ ನಿಮಗಿರುವ ಸಮಯ ಮೂವತ್ತು ಸೆಕೆಂಡ್ಸ್‌ ಮಾತ್ರ. ಅಷ್ಟರಲ್ಲಿ ನೀವು ಅವರೊಂದಿಗೆ ಹೇಗೆ ಮಾತನಾಡುವಿರಿ, ಹೇಗೆ ವ್ಯವಹರಿಸುತ್ತೀರಿ ಎಂಬುದೇ Elevator talk. ಕೇಳಲು ಸುಲಭ, ಆದರೆ ಆಚರಣೆ ಕಷ್ಟವಿದೆ. ಕೆಲವೊಂದು ಉದಾಹರಣೆಗಳನ್ನು ಮತ್ತು ಸನ್ನಿವೇಶಗಳನ್ನು ನೋಡೋಣ ಬನ್ನಿ..

   ಶ್ರೀನಾಥ್ ಭಲ್ಲೆ ಅಂಕಣ; ಪೂರ್ಣಗಳೆಲ್ಲಾ ಕಿರಿದಾದ ಬಿಡಿಭಾಗಗಳೇ!

   ಸಿಂಪಲ್ ಸನ್ನಿವೇಶ ಎಂದರೆ ಆ elevatorನಲ್ಲಿರೋದು ನಿಮ್ಮ ಕನಸಿನ ಕನ್ಯೆ /ರಾಜಕುಮಾರ. ಆ ಮೂವತ್ತು ಸೆಕೆಂಡುಗಳು ನಿಮ್ಮದು. elevator ಬಾಗಿಲು ತೆರೆದು ಇಬ್ಬರಲ್ಲೊಬ್ಬರು ಹೊರಗೆ ಅಡಿಯಿಡುವ ಮುನ್ನ, ಮುಂದೆಯೂ ಭೇಟಿಗಳು ಆಗುವಂತೆ ನೀವು ಹೇಗೆ ಆ ಸಮಯವನ್ನು ಶಿಷ್ಟಾಚಾರದಿಂದ ಬಳಸಿಕೊಂಡಿರಿ ಎಂಬುದೂ ಒಂದು ರೀತಿ elevator talk.

   ಹೆಸರಿನಲ್ಲಿ ಇದೆ ಅಂತ ಹೇಳಿದ ಮಾತ್ರಕ್ಕೆ, Elevator talk ಎಂಬುದು Elevator ನಲ್ಲೇ ಆಗಬೇಕು ಅಂತೇನಿಲ್ಲ. ಥಟ್ಟನೆ ಹೇಳಿ ಎಂಬಂತೆ ನಿಮಗೆ ಮೂವತ್ತು ಸೆಕೆಂಡು ಸಮಯ ಕೊಟ್ಟು ತುಂಬಾ ಸಿಂಪಲ್ ಪ್ರಶ್ನೆ ನಿಮ್ಮ ಮುಂದೆ ಇಡುತ್ತೇನೆ. ಪ್ರಶ್ನೆ ಏನಪ್ಪಾ ಅಂದ್ರೆ "ನೀವು ಯಾರು?" ಅಷ್ಟೇ ! ಆ ಮೂವತ್ತು ಸೆಕೆಂಡಿನಲ್ಲಿ ನಿಮ್ಮ ಬಗ್ಗೆ ಏನು ಹೇಳಬೇಕು ಅಂತಾನೇ ತಲೆಗೆ ಹೊಳೆಯೋದಿಲ್ಲ. ಈಗ ಈ ಸುಲಭ ಪ್ರಶ್ನೆ ಎಲ್ಲಿ ಕಂಡುಬರುತ್ತದೆ ನೋಡೋಣ.

   ಒಂದು ಇಂಟರ್ವ್ಯೂಗೆ ಹೋಗಿದ್ದಾಗ, ಸಾಮಾನ್ಯವಾಗಿ ಮೊದಲಿಗೆ ಬರುವ ಪ್ರಶ್ನೆ ಎಂದರೆ "ನಿಮ್ಮ ಬಗ್ಗೆ ಹೇಳಿ" ಅಂತ. ಹೆಸರು ಹೇಳೋದು, ನಂತರ ಚಿಕ್ಕದಾಗಿ ವಿದ್ಯಾಭ್ಯಾಸದ ಬಗ್ಗೆ ಹೇಳಿ, ಮುಂದೆ, ಯಾವ ಕೆಲಸಕ್ಕೆ ಅರ್ಜಿ ಹಾಕಿರುವಿರೋ ಆ ಕೆಲಸದ ಸುತ್ತ ನಿಮ್ಮ ಅನುಭವ (ಇದ್ದಲ್ಲಿ) ಮತ್ತು ಆ ಕೆಲಸದ ಬಗ್ಗೆ ಇಷ್ಟ ಇದೆ ಎಂದು ಸಾಬೀತು ಮಾಡುವಂಥ ಆಸಕ್ತಿ ವ್ಯಕ್ತಪಡಿಸುವಂಥ ಮಾತುಗಳನ್ನು ಆಡಬೇಕು.

   ಶ್ರೀನಾಥ್ ಭಲ್ಲೆ ಅಂಕಣ; ಎಲ್ಲಾ ವಿಷಯಕ್ಕೂ ಅದರದ್ದೇ ಆಳ, ಅಳತೆ ಇದೆ

   ಇದಕ್ಕೆ ವಿರುದ್ಧವಾದ ಒಂದು ಚಿಕ್ಕ ಉದಾಹರಣೆ ಎಂದರೆ, ಉಪಾಧ್ಯಾಯರ ವೃತ್ತಿಗಾಗಿ ಅರ್ಜಿ ಹಾಕಿ, ಸಂದರ್ಶನದಲ್ಲಿ 'ಪಾಠ ಮಾಡಲು ನನಗೆ ಆಸಕ್ತಿ ಇಲ್ಲ' ಎಂದರೆ ಹೇಗಿರುತ್ತದೆ ಅಂತ ಆಲೋಚಿಸಿ. ನೀವೇ ಸಂದರ್ಶನ ಮಾಡುವವರಾಗಿದ್ದರೆ 'ಮತ್ಯಾಕೆ ಇಲ್ಲಿ ಬಂದು ನನ್ನ ಸಮಯ ವ್ಯರ್ಥ ಮಾಡಿದ್ದು?' ಎಂದು ಕೇಳುವಂತೆ ಆಗುತ್ತದೆ ಅಲ್ಲವೇ?

   ಈಗ ಹೇಗೋ ಗೊತ್ತಿಲ್ಲ. ಹೆಣ್ಣನ್ನು/ ಗಂಡನ್ನು ನೋಡಲು ಹೋಗಿದ್ದಾಗ, ಮನೆಯ ಹಿರಿಯರು ನೀವಿಬ್ಬರೂ ಮಾತನಾಡಿಕೊಳ್ಳಿ ಅಂತ ಏಕಾಂತಕ್ಕೆ ಕಳಿಸುತ್ತಾರೆ ಎಂದುಕೊಳ್ಳಿ. ಆಗ ಏನು ಮಾತನಾಡಬೇಕು ಎಂಬುದು ದೊಡ್ಡ ವಿಷಯ. ಆ ಮೂವತ್ತು ಸೆಕೆಂಡುಗಳಲ್ಲಿ impress ಮಾಡಬೇಕು ಎಂಬ ಭೀತಿಯಲ್ಲಿ ಕೆಲವೊಮ್ಮೆ ಮಾತು ಹೊರಡದಿರಬಹುದು ಅಥವಾ ಮಾತನಾಡುತ್ತಾ ಸಾಗುತ್ತ ಅರ್ಥವಿಲ್ಲದ ಮಾತುಗಳೇ ಬಾಯಿಗೆ ಬರಬಹುದು.

   ಶ್ರೀನಾಥ್ ಭಲ್ಲೆ ಅಂಕಣ; Laptop ಎಂದರೆ ತೊಡೆಯೇರಿ ಕೂರೋದು ಅಂತ

   ಈಗ ಮೇಲಿನ ಎರಡು ಸನ್ನಿವೇಶಗಳನ್ನು ಕೊಂಚ ಆಳಕ್ಕೆ ಇಳಿದು ನೋಡೋಣ. ಈ ಸನ್ನಿವೇಶಗಳು ಧುತ್ತನೆ ಎದುರಿಗೆ ಬಂದದ್ದಾಗಿರೋದಿಲ್ಲ. ಹಾಗಾಗಿ ಆ ದಿನಕ್ಕೆ ಮುನ್ನವೇ ತಯಾರಿ ನಡೆಸಬಹುದು. ನಿಮ್ಮ ಕೈಲಿರೋದು ಕೇವಲ ಮೂವತ್ತು ಸೆಕೆಂಡ್ಸ್‌ ಮಾತ್ರ ಎಂಬ ಅರಿವು ಇಟ್ಟುಕೊಂಡು ಅದಕ್ಕೆ ಸಿದ್ಧವಿರಬೇಕು. ಮೂವತ್ತು ಸೆಕೆಂಡುಗಳಲ್ಲಿ ನಿಮ್ಮ ಬಗ್ಗೆ ಕುತೂಹಲ ಮೂಡುವಂತೆ ಮಾತನಾಡುವುದು ಮುಖ್ಯವಾಗುತ್ತದೆ. ಈ ಸನ್ನಿವೇಶಗಳಿಗೆ ಮುಂಚೆಯೇ ತಯಾರಿ ಇಲ್ಲದಿದ್ದರೆ ಆ first impression ಅಥವಾ ಮೊದಲ ಭೇಟಿಯಲ್ಲೇ ಎಡವಬಹುದು.

   ಈಗ ನಿಜವಾದ elevator talkನತ್ತ ಗಮನ ಹರಿಸೋಣ. ನಿಮ್ಮಲ್ಲೊಂದು ಅತೀ ಉತ್ತಮ ಐಡಿಯಾ ಇದೆ ಅಂತ ಅಂದುಕೊಳ್ಳಿ. ಅದರಿಂದ ಕಂಪನಿಗೆ ಒಳಿತಾಗಬಹುದು ಅಂತಲೋ ಅಥವಾ ಆಗಬಹುದಾದ ನಷ್ಟವನ್ನು ತಡೆಯಬಹುದು ಅಂತಲೋ ಏನೋ ಒಂದು ಉತ್ತಮ ಸಲಹೆ ಅಥವಾ ಐಡಿಯಾ ಇದೆ. ಆದರೆ ಈ ವಿಷಯವನ್ನು ನಿಮ್ಮ ಕಂಪನಿಯ ಹಿರಿಯರಿಗೆ ತಲುಪಿಸೋದು ದುಸ್ತರವಾಗಿರುತ್ತದೆ. ಕಾರಣ ಆ ದೊಡ್ಡ ಮನುಷ್ಯರಿಗೆ ಸಮಯವೇ ಇರೋದಿಲ್ಲ. ಇಂಥ ಸಂದರ್ಭದಲ್ಲಿ ನೀವಿಬ್ಬರೂ ಒಂದು elevatorನಲ್ಲಿ ಭೇಟಿಯಾಗುತ್ತೀರಿ. ಈ ಸಮಯ ಬಿಟ್ಟರೆ ಅವರನ್ನು ಭೇಟಿಯಾಗುವ ಅವಕಾಶ ನಿಮಗೆ ಸಿಗೋದು ಕಷ್ಟವೇ ಅಂತ ನಿಮಗೆ ಗೊತ್ತು. ಆ ಮೂವತ್ತು ಸೆಕೆಂಡ್‌ ನಲ್ಲಿ ಅವರೊಂದಿಗೆ ಮಾತನಾಡಿ, ನಿಮ್ಮ ಕಲ್ಪನೆಯ ಕೂಸಿನ ಬಗ್ಗೆ ಅವರಿಗೆ ಸೂಕ್ಷ್ಮವಾಗಿ ತಿಳಿಸಿ, ನಿಮ್ಮ ಬಗ್ಗೆ ಮತ್ತು ಕಲ್ಪನೆಯ ಬಗ್ಗೆ ಆಸಕ್ತಿ ಹುಟ್ಟಿಸಿ, ಆ ಬಗ್ಗೆ ಹೆಚ್ಚು ಮಾತನಾಡಲು ನಿಮ್ಮನ್ನು ತಮ್ಮ ಚೇಂಬರ್ ಗೆ ಕರೆಸಿಕೊಳ್ಳುವಂತೆ ಹೇಗೆ ಆ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಲ್ಲಿರಿ ಎಂಬುದೇ elevator talk.

   ಅತೀ ಕಡಿಮೆ ಪದಗಳಲ್ಲಿ, ಆದರೆ ಅತೀ ಹೆಚ್ಚು ಪರಿಣಾಮಕಾರಿಯಾಗಿ ಕಲ್ಪನೆಯನ್ನು ಮಾತುಗಳಲ್ಲಿ ವರ್ಣಿಸುವುದು ಅಥವಾ ಭಾವನೆಗಳಲ್ಲಿ ತೋರ್ಪಡಿಸುವುದು ಒಂದು ತಂತ್ರ. ಇಂಥ ಟೆಕ್ನಿಕ್/ತಂತ್ರವನ್ನು ಇಂದು ರಾತ್ರಿಯಿಡೀ ಕಲಿತು ನಾಳೆಯಿಂದ ಅನುಷ್ಠಾನಕ್ಕೆ ತರುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ನಮ್ಮೊಂದಿಗೆ ಜೀವನವಿಡೀ ನಾವಿದ್ದು 'ನೀವು ಯಾರು?' ಎಂಬ ಪ್ರಶ್ನೆಗೆ ಉತ್ತರ ಹೇಳಲು ಪದಗಳನ್ನು ತಡಕಾಡುವ ಸಂದರ್ಭದಲ್ಲಿ, ಪೂರ್ವ ತಯಾರಿಯೇ ಇರದೇ elevator talk ಮಾಡುವುದು ಸುಲಭವಲ್ಲ.

   ಇಷ್ಟಕ್ಕೂ ಈ elevator talk ನಿಂದ ನನಗೇನಾಗಬೇಕಿದೆ? ನಾನು ಹೊರಗೆ ಕೆಲಸಕ್ಕೆ ಹೋಗೋಲ್ಲ, ಮನೆಯಲ್ಲೇ ಇರುವುದು, ಸಂದರ್ಶನ ಕೊಡೋದಿಲ್ಲ ಅಥವಾ ತೆಗೆದುಕೊಳ್ಳೋದಿಲ್ಲ ಹಾಗಾಗಿ ಈ ವಿಷಯಕ್ಕೂ ನನಗೂ ಸಂಬಂಧವಿಲ್ಲ ಎಂಬ ನಿರಾಸಕ್ತಿ ಬೇಡ.

   ಸಂಸಾರ, ಜೀವನ ಸಾಕು ಅಂತ ನಿರ್ಧಾರ ಮಾಡಿ ವಾನಪ್ರಸ್ಥಕ್ಕೆ ತೆರಳಿ ತಪಸ್ಸು ಮಾಡುತ್ತೀರಿ ಅಂದುಕೊಳ್ಳಿ. ಅಪ್ಸರೆಯರೇ ಬಾರದೇ ನೇರವಾಗಿ ಭಗವಂತನೇ ಪ್ರತ್ಯಕ್ಷನಾದಾಗ "ಏನು ವರ ಕೇಳಿಕೊಳ್ಳುತ್ತೀರಿ?"... ಇದೂ ಒಂದು elevator talk. ಹೋಗ್ಲಿ ಬಿಡಿ, ಇದೂ ದಿನನಿತ್ಯದಲ್ಲಿ ಆಗುವಂಥದ್ದಲ್ಲ.

   ದಿನನಿತ್ಯದಲ್ಲಿ ಕಂಡುಬರುವ sales representatives, ಬಾಗಿಲು ತಟ್ಟಿ, ನೀವು ಬಾಗಿಲು ತೆರೆದ ಮೇಲೆ, ನೀವು ಬಾಗಿಲು ಮುಚ್ಚದಂತೆ ಮಾತಿನಲ್ಲೇ ತಡೆಯುವ ವಿದ್ಯೆಯೂ elevator talk ನಂತೆಯೇ. ಆಸಕ್ತಿಯೇ ಇಲ್ಲದ ನಿಮ್ಮಲ್ಲಿ, ಮೂವತ್ತು ಸೆಕೆಂಡ್ಸ್‌ನಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದ್ದೇ ಅಲ್ಲದೇ ವ್ಯವಹಾರ ಕುದುರಿಸುವುದೂ ಒಂದು ಚಾಕಚಕ್ಯತೆ. ಇದರಂತೆಯೇ ಚಾಕಚಕ್ಯತೆಯಿಂದ ಮತ್ತೊಬ್ಬರ ಮಾತಿಗೆ ಮರುಳಾಗದಂತೆ ಆ ಸನ್ನಿವೇಶದಿಂದ ಬಿಡಿಸಿಕೊಳ್ಳಬೇಕಾದುದು ಕೂಡ ಒಂದು ತಂತ್ರವೇ ಬಿಡಿ.

   ಯಾರಿಗೂ ಯಾವುದಕ್ಕೂ ಸಮಯವಿಲ್ಲ ಎಂಬ ತ್ವರಿತ ಜೀವನದ ದಿನಗಳಲ್ಲಿ, elevator talk ಖಂಡಿತ ನಿಮಗೆ ಸಹಾಯ ಮಾಡುತ್ತದೆ. ಒಂದು ಚಿಕ್ಕ ಉದಾಹರಣೆ ತೆಗೆದುಕೊಂಡರೆ, ಏನೋ ಸಮಸ್ಯೆ ಇದೆ ಎಂದಾಗ ಯಾರಿಗೋ ಕರೆ ಮಾಡಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದಾಗ ಈ elevator talk ಬಹಳ ಉಪಯುಕ್ತ. ಗಂಟೆಗಟ್ಟಲೆ ಒಂದು ಸಮಸ್ಯೆಯ ಬಗ್ಗೆ ಮಾತನಾಡುತ್ತಾ ಹೋದರೆ ಕೇಳಿಸಿಕೊಳ್ಳಲು ಯಾರಿಗೂ ವ್ಯವಧಾನ ಇರುವುದಿಲ್ಲ. ಇದೇ ಸೂತ್ರವನ್ನು busy ಮಕ್ಕಳು/ಮೊಮ್ಮಕ್ಕಳೊಡನೆ ಮಾಡುವ ಸಂವಾದಕ್ಕೂ ಬಳಸಿಕೊಳ್ಳಬಹುದು.

   ನಮ್ಮ ಜೀವನದ ಯಾವ ಹಂತದಲ್ಲಿ ನಾವಿದ್ದೇವೆ ಅನ್ನೋದು ಮುಖ್ಯವಲ್ಲ. ಕಲಿಕೆಗೆ ವಯಸ್ಸು ಅನ್ನೋದು ಅಡ್ಡಿ ಬರಲೇಬಾರದು. ಕಲಿಕೆಗಳನ್ನು ಬಳಕೆ ಮಾಡಿಕೊಳ್ಳಲು ಜೀವನದಲ್ಲಿ ಹಲವಾರು ಅವಕಾಶಗಳಿರುತ್ತವೆ. ಅದನ್ನು ಗುರುತಿಸಿಕೊಂಡು ನಮ್ಮ ಕಲಿಕೆಯನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳಬೇಕು.

   ಏನಂತೀರಾ?

   English summary
   What is elevator talk? How you introduce yourself or speak with person with only 30 seconds of time is called elevator talk
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X