ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಇಂದು ಎಲ್ಲೆಲ್ಲೂ, ಅಂದ್ರೆ ದೇಶದ ಮೂಲೆ ಮೂಲೆಯಲ್ಲೂ ಅಷ್ಟೇ ಅಲ್ಲದೇ ಹಲವಾರು ದೇಶಗಳ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿರುವ ಏಕ ಮಾತ್ರ ಪ್ರಶ್ನೆ ಎಂದರೆ "ಇವರೇಕೆ ಹೇಳಿದ್ ಮಾತು ಕೇಳೋಲ್ಲ?" ಅನ್ನೋದು. ಒಮ್ಮೆ ಒಂದು ಆದೇಶ ಬಂದ ಕೂಡಲೇ 'ಯಸ್ ಬಾಸ್' ಅಂತ ಚಾಚೂ ತಪ್ಪದೆ ಪಾಲಿಸಿದ್ರೆ ಅದು ಬೇರೆಯೇ ವಿಷಯ ಆಗ್ತಿತ್ತು. ಇದರಂತೆಯೇ, ಹೇಳಿದ್ದನ್ನೆಲ್ಲಾ ಕೋಲೇಬಸವನಂತೆ ಕೇಳಿದರೂ, ಅದೂ ತರವಲ್ಲ. ಆದರೆ, ಯಾವಾಗ ಹೇಳಿದಂತೆ ಕೇಳಬೇಕು, ಯಾವಾಗ ಕೇಳಬಾರದು ಅಥವಾ ಪ್ರಶ್ನೆ ಮಾಡಬೇಕು ಅನ್ನೋದರ ಅರಿವು ನಮಗಿರಬೇಕು. ಆದರೇನು ಮಾಡೋದು, ಈ ಅರಿವು ಮೂಡಿಸಿಕೊಳ್ಳೋದಕ್ಕೆ ಶ್ರಮಪಡಬೇಕು.

ಶಾಲೆಯ ವಿಷಯವನ್ನೇ ತೆಗೆದುಕೊಳ್ಳೋಣ... ಯಾವುದೇ ವಿಷಯದ ಶಿಕ್ಷಕರಾದರೂ ಎಲ್ಲರೂ ಮಕ್ಕಳಿಗೆ ಹೇಳುವ ಮಾತು "keep silence" ಅಥವಾ "ಗಲಾಟೆ ಮಾಡಬೇಡಿ" ಅನ್ನೋದು. ಒಂದು ಸಾರಿ ಹೀಗೆ ಹೇಳಿದ ತಕ್ಷಣ ಮಾತು/ಗಲಾಟೆ ನಿಲ್ಲುತ್ತದೆಯೇ? ಹಾಗೆ ಹೇಳಿದ ಮಾತು ತಕ್ಷಣ ಕೇಳಿದ್ರೆ ಯಾವ ಸ್ಕೇಲ್ ಗೂ, chalkpiece ಗೂ, duster ಗೂ ಕೆಲಸವೇ ಇರುತ್ತಿರಲಿಲ್ಲ. ಓದುಗರಲ್ಲಿ ಹಲವಾರು ಶಿಕ್ಷಕರಿದ್ದೀರಿ, ಏನಂತೀರಿ?

ಶ್ರೀನಾಥ್ ಭಲ್ಲೆ ಅಂಕಣ: ಹಾಸಿಗೆಯ ಬಗ್ಗೆ ಒಂದಷ್ಟು ಕಲಿಯೋಣ ಬನ್ನಿ ಶ್ರೀನಾಥ್ ಭಲ್ಲೆ ಅಂಕಣ: ಹಾಸಿಗೆಯ ಬಗ್ಗೆ ಒಂದಷ್ಟು ಕಲಿಯೋಣ ಬನ್ನಿ

ಶಾಲೆಗೆ ಬೆಳಿಗ್ಗೆ ಬಸ್ ಹಿಡಿದು ಹೋಗಬೇಕಾದ ಸಂದರ್ಭ ಅಥವಾ ಈಗಿನ ವ್ಯಾನ್ ಏರುವ ಸನ್ನಿವೇಶ ತೆಗೆದುಕೊಳ್ಳೋಣ. ಪ್ರತಿ ಇಂಥ ಬೆಳಗಿನ ಹಿಂದಿನ ರಾತ್ರಿ ಅಮ್ಮಂದಿರು ಶಂಖ ಊದೋದು ಊದುತ್ತಾನೇ ಇರ್ತಾರೆ 'ನಾಳೆಯಿಂದ ಬೇಗ ಏಳಬೇಕು ಆಯ್ತಾ? ಇವತ್ತೂ ಆ ವ್ಯಾನ್ ನವನು horn ಹೊಡೀತಾನೇ ಇದ್ದ'. ಈ ಅಳಲು ನಿಜವೇ. ಈಗ ಒಂದು ಮನೆಯಲ್ಲಿ ರೋಗಿಗಳೇ ಇರಬಹುದು ಅಥವಾ ಅತೀ ಚಿಕ್ಕಮಕ್ಕಳೂ ಇರಬಹುದು... ಹೀಗೆ ವ್ಯಾನ್ ನವ ಹಾರ್ನ್ ಹೊಡೀತಾನೆ ಇದ್ರೆ ಅವರಿಗೆ ತೊಂದರೆಯಾಗೋದಿಲ್ವೇ? ಈಗ ವ್ಯಾನ್ ನವ ಹಾರ್ನ್ ಮಾಡಲಿಲ್ಲ ಅಂದುಕೊಳ್ಳಿ, ಅವನಿಗೆ ಅರ್ಜೆಂಟ್ ಇಲ್ಲ ಅಂದುಕೊಂಡು ಆಯಾ ವಿದ್ಯಾರ್ಥಿಗಳು ಸಾವಧಾನ ಮಾಡಬಹುದಲ್ಲವೇ? ಈಗ ವ್ಯಾನ್ ನವನಿಗೆ ಇದೊಂದೇ ಮನೆಯೇ? ಒಂದೊಂದೂ ಕಡೆ ತಡವಾದರೆ ಅವನು ಮತ್ತೊಬ್ಬರಿಂದ ಮಾತು ಕೇಳಬೇಕು ಅನ್ನೋದು ಒಂದು, ಶಾಲೆಗೆ ತಡವಾಗುತ್ತೆ ಅನ್ನೋದು ಮತ್ತೊಂದು.

We Wont Listen What We Actually Have To Listen

ಶಾಲೆಗೆ ತಡವಾದರೆ ಆ ಶಾಲೆಯ ಆಡಳಿತವರ್ಗದವರಿಂದ ವ್ಯಾನ್ ಸಂಸ್ಥೆಗೆ ಬೈಗುಳ. ಆ ಬೈಗುಳ ಚಾಲಕನಿಗೆ ರವಾನೆಯಾಗುತ್ತದೆ. ಆಗ ಆ ಚಾಲಕ ಯಾವ ಮನೆಯವರು ತಡ ಮಾಡುವರೋ ಅವರ ಮೇಲೆ ತನ್ನ ಸಿಟ್ಟನ್ನು ತೀರಿಕೊಳ್ಳುತ್ತಾನೆ. ಇಷ್ಟೆಲ್ಲಾ ಆಗೋದು ಯಾಕೆ ಅಂದ್ರೆ ಹೇಳಿದ ಮಾತು ಕೇಳದೇ ಇರುವುದರಿಂದ. ತಡವಾಗಿದೆ ಏಳು ಎಂದಾಗ ಏಳದೇ 'ಇನ್ನೈದು ನಿಮಿಷ' ಅಂತ ಹೇಳಿ ಅರ್ಧ ಗಂಟೆ ಮಲಗೋದೇ ಇದಕ್ಕೆಲ್ಲಾ ಕಾರಣ.

ತಡವಾಗಿ ಏಳೋದ್ಯಾಕೆ ಅಂದ್ರೆ ತಡವಾಗಿ ಮಲಗಿದ್ರಿಂದ ಟಿವಿಯಲ್ಲಿ ಕಾರ್ಯಕ್ರಮ, ಸಿನಿಮಾ ನೋಡಿಕೊಂಡೋ ಅಥವಾ ರಾತ್ರಿಯಲ್ಲಿ ತಡವಾಗಿ ಮೊಬೈಲ್ ನಲ್ಲಿ ಚಾಟ್ ಮಾಡಿಕೊಂಡೋ ಹೊತ್ತಾಗಿ ಮಲಗಿ ತಡವಾಗಿ ಎದ್ರೆ ಅದು ಯಾರ ತಪ್ಪು? ಹಾಗಾಗಿ, ಬೆಳಿಗ್ಗೆ ಬೇಗ ಏಳಬೇಕು ಅಂತ ಮೊದಲು ನಮಗೆ ನಾವು ಹೇಳಿಕೊಂಡು, ಅಲಾರ್ಮ್ ಬಡ್ಕೊಂಡಾಗ ಅದರ ಸದ್ದು ಕೇಳಿ ಏಳಬೇಕು. ನಮ್ಮ ಮಾತನ್ನೇ ನಾವು ಕೇಳದೇ ಹೋಗುವವರು ಮತ್ತೊಬ್ಬರ ಮಾತು ಕೇಳ್ತೀವಾ? ಹಾಗಿದ್ರೆ ಒಬ್ಬರ ಮಾತು ಕೇಳಬೇಕು ಅಂದ್ರೆ ಆ ಶಿಸ್ತು ಅಥವಾ self discipline ಬೆಳೆಸಿಕೊಳ್ಳಬೇಕು. ಇದನ್ನೇ ಆಗಲೇ ಹೇಳಿದ್ದು, ಶ್ರಮ ಪಡಬೇಕು ಅಂತ.

ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ... ಕೊರೊನಾ- ಹೇಗಿದೆ ಅಲ್ಲಿ?, ಈಗ, ಇಲ್ಲಿ ಹೇಗಿದೆ ಅಂದ್ರೆ...

ದಿನನಿತ್ಯದಲ್ಲಿ ನಾವು ಯಾವ ಯಾವ ರೀತಿ ಮಾತುಗಳನ್ನೇ ಕೇಳೋದಿಲ್ಲ. ಒಂದು ಬಸ್ಸಿನ ಪಯಣ ತೆಗೆದುಕೊಂಡರೆ 'ಮುಂದೆ ಹೋಗಿ' ಅಂತ conductor ಹೇಳಿದರೂ ಬಾಗಿಲ ಬಳಿಯೇ ಗೋಂದು ಅಂಟಿಸಿಕೊಂಡು ನಿಲ್ಲೋದು, footboard ಮೇಲೆ ನಿಲ್ಲಬೇಡಿ ಅಂತ ಆತ ಹೇಳುತ್ತಿದ್ದರೂ ಕಿವಿಯ ಮೇಲೆ ಹಾಕಿಕೊಳ್ಳದೆ ಅಲ್ಲೇ ನಿಲ್ಲೋದು, ಟ್ರಾಫಿಕ್ ನಲ್ಲಿ ಕೆಂಪು ದೀಪ ಕಂಡ ಮೇಲೂ ಸಾಗುತ್ತಲೇ ಇರೋದು, ಆಸ್ಪತ್ರೆ ವಲಯದಲ್ಲಿ ಹಾರ್ನ್ ಸದ್ದು ಮಾಡಬೇಡಿ ಅಂದ್ರೆ ಹಾರ್ನ್ ಮಾಡೋದು, ಬಸ್ಸಿನಲ್ಲಿ ಏರಿ ಚಿಲ್ಲರೆ ಇಲ್ಲ ಅಂತ ಸುಳ್ಳು ಸೋಗು ಹಾಕಿಕೊಂಡು 2000ದ ನೋಟು ಕೊಡೋದು, ತಡವಾಗಿ ಎದ್ದು ತಡವಾಗಿ ಕಚೇರಿಗೆ ಬಾಸ್ ನ ಕರಿಮೋತಿ ಕೆಂಪು ಮಾಡಿಸೋದು ಇತ್ಯಾದಿಗಳು ಹೇಳಿದ ಮಾತನ್ನು ಕೇಳದ ಕೆಲವು ವಿಚಾರಗಳು ಅಷ್ಟೇ.

ಈಗಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನವನ್ನೇ ತೆಗೆದುಕೊಂಡರೆ 'stay at home' ಎಂಬ ಮಾತಿಗೆ ಬೆಲೆಯನ್ನೇ ಕೊಡದೇ, ಪಟ್ಟುಬಿದ್ದು ಹೊರಗೆ ಹೋಗಿ ಪೆಟ್ಟು ತಿನ್ನೋದು. ಆಸ್ಪತ್ರೆಗಳಿಗೆ ಹೋಗುವವರಿಗೆ ಬೇರೆ ವಿಧಿಯಿಲ್ಲ ಅಂತ ಹೊರಕ್ಕೆ ಹೋಗೋದು ಸಹಜ. ಆದರೆ ಪಕ್ಕದ ಬೀದಿ ಸುರೇಶನ ಜೊತೆ ಮಾತನಾಡಲು ಹೋಗೋ ಅವಶ್ಯಕತೆ ಏನಿದೆ? 'ಮನೆಯಲ್ಲೇ ಇರಿ' ಎಂಬ ಕೋರಿಕೆ ಬರುವ ಮುನ್ನ ಈ ಸುರೇಶನ ದರ್ಶನ ಮಾಡುತ್ತಿದ್ದುದೇ ವರ್ಷಕ್ಕೊಮ್ಮೆ. ಈಗ ನೋಡಲೇಬೇಕು ಎಂಬ ಅವಶ್ಯಕತೆ ಏನು? ನಮ್ಮ ಆರೋಗ್ಯಕ್ಕಾಗಿ, ಇತರರ ಆರೋಗ್ಯಕ್ಕಾಗಿ ಮನೆಯಲ್ಲೇ ಇರಿ ಎಂದು ದಿನವೂ ಕೇಳಿಕೊಳ್ಳುವ ಮಂದಿಗೂ ಸಂಸಾರ ಇದೆ ಅಂತ ನಮಗೇಕೆ ಅನ್ನಿಸೋದಿಲ್ಲ? 'ಹೇಳಿದ ಮಾತನ್ನು ಕೇಳೋದಿಲ್ಲ' ಯಾಕೆ?

ಇದರಲ್ಲಿ ನಮ್ಮ ತಪ್ಪೇನಿದೆ. ಇವೆಲ್ಲವೂ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗ. ಹಿರಿಯರು ಹೋದ ಹಾದಿಯಲ್ಲಿ ಸಾಗಬೇಕು ಅಂತ ನೀವೇ ತಾನೇ ಹೇಳಿರೋದು? ನಮ್ಮ ಪೂರ್ವಜರು ಅಂದ್ರೆ ಯಾರು? ಅವರನ್ನು ನೀವು ನೋಡಿದ್ದೀರಾ? ಹೌದು, ನಾನೂ ನೋಡಿಲ್ಲ ಆದರೆ ಕಥೆ ಗೊತ್ತಲ್ಲಾ? ಯಾರ ಕಥೆ ಅಂದ್ರಾ?

 ಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿ ಯಾವುದನ್ನೂ ನಿರ್ಲಕ್ಷಿಸದಿರಿ, ಹಾಗಂತ ತಲೆಯ ಮೇಲೂ ಕೂರಿಸಿಕೊಳ್ಳದಿರಿ

ತ್ರೇತಾಯುಗದ ಕಥೆ ತೆಗೆದುಕೊಂಡರೆ ಲಕ್ಷ್ಮಣ ತಾನು ಹಾಕಿದ ಗೆರೆಯಿಂದ ಹೊರಗೆ ಬರಕೂಡದು ಅಂತ ಸೀತಾಮಾತೆಗೆ ಹೇಳಿ ಹೊರಟ ತಾನೇ? ಆಕೆ ಕೇಳಿದಳೇ? ಇಲ್ಲ, ಹೇಳಿದ ಮಾತನ್ನು ಕೆಲಸ ಸೀತೆಯನ್ನು ದುರುಳ ರಾವಣ ಹೊತ್ತೊಯ್ದ...

ಇನ್ನು ದ್ವಾಪರಯುಗಕ್ಕೆ ಬರೋಣ... ಶಾಂತನು ಮತ್ತು ಗಂಗೆಯ ಕಥೆ ಗೊತ್ತಲ್ಲವೇ? ಈಗ ಟಿ.ವಿ.ಯಲ್ಲಿ ಮತ್ತೆ ಧಾರಾವಾಹಿ ಪ್ರಸಾರವಾಗುತ್ತಿರುವುದರಿಂದ ನಿಮಗೆ ಗೊತ್ತೇ ಇರಬೇಕು. ಗಂಗೆಯ ಷರತ್ತುಗಳನ್ನು ಒಪ್ಪಿದ ಶಾಂತನು ಆಕೆ ಹೇಳಿದ ಮಾತನ್ನು ಕೇಳಿಕೊಂಡೇ ಇದ್ದ. ಆದರೆ ಕೊನೆಗೊಮ್ಮೆ ಅದನ್ನು ಮುರಿದ... ಏಳು ಬಾರಿ ಸುಮ್ಮನಿದ್ದ ಶಾಂತನು ಇನ್ನೊಮ್ಮೆ ಆಕೆ ಹೇಳಿದ ಮಾತನ್ನು ಕೇಳಿದ್ದರೆ, ಭೀಷ್ಮಾಚಾರ್ಯರಿಗೆ ಜೀವನ ಪರ್ಯಂತ ತಾವು ಕೊಟ್ಟ ಮಾತಿಗೆ ಬದ್ಧರಾಗಿ ಒದ್ದಾಡುವುದು ಇರುತ್ತಿರಲಿಲ್ಲ.

ಇವೆಲ್ಲ ನಮ್ಮ ಪೂರ್ವಜರು ಹಾಕಿಕೊಟ್ಟ ಹಾದಿ ಅಂತಲೇ ನಾವು ಒಳಿತನ್ನೆಲ್ಲಾ ಬದಿಗೊತ್ತಿ ಇಂಥವನ್ನು ಮಾತ್ರ ರೂಢಿಸಿಕೊಂಡು ಹೇಳಿದ ಮಾತನ್ನು ಕೇಳದ ಇಂದಿನ ಸ್ಥಿತಿಗೆ ಬಂದಿದ್ದೇವೆ.

ಹೇಳಿದ ಮಾತನ್ನು ಕೇಳದ ಈ ಪಿಡುಗು ಬರೀ ಇಂಥ ಕಡೆ ಮಾತ್ರವಲ್ಲಾ ಅದು ವಾಟ್ಸಾಪ್ ಗುಂಪಾಗಬಹುದು ಅಥವಾ ಒಂದು ಫೇಸ್ಬುಕ್ ಗುಂಪೂ ಆಗಬಹುದು. ಅಲ್ಲೂ ಇದೇ ಕಥೆ. ಕೊರೊನಾ ಬಗ್ಗೆ ಇಲ್ಲಸಲ್ಲದ ಸುದ್ದಿ ಹಾಕಬೇಡಿ ಅಂದ್ರೆ ಅದನ್ನೇ ಹಾಕ್ತಾರೆ. ಅರ್ಥಾತ್ ಬರೀ forward ಅಷ್ಟೇ, ಅವರೇನೂ ಹುಟ್ಟುಹಾಕಿದ್ದೂ ಅಲ್ಲ. ಯಾರೋ ಪುಸ್ ಅಂದಿದ್ದನ್ನು ಇವರು ಬುಸ್ಬುಸ್ ಅಂತ ಮುಂದಕ್ಕೆ ಕಳಿಸ್ತಾ ಇರ್ತಾರೆ. ಇನ್ನು ಫೇಸ್ಬುಕ್ ಗುಂಪು ತೆಗೆದುಕೊಂಡರೆ, ಅಲ್ಲೊಂದಿಷ್ಟು ನೀತಿನಿಯಮ ಅಂತ ಇರುತ್ತೆ. ಆ ರೂಲ್ಸ್‌ ವಿರುದ್ಧ ಸಾಗೋದೇ ಒಂದು ಫ್ಯಾಷನ್ ಅಂದುಕೊಳ್ಳೋದು ಯಾಕೆ?

ಎಷ್ಟೋ ಸಾರಿ ನಮ್ಮ ಟೀಮ್ ಮೀಟಿಂಗ್ ಗಳಲ್ಲಿ ಹೀಗೆಯೇ ಆಗುತ್ತೆ. ಪ್ರಶ್ನೆ ಕೇಳಿ ಅಂದಾಗ ಮೌನ. ನಿಮ್ಮ ಅನಿಸಿಕೆ ತಿಳಿಸಿ ಎಂದಾಗ ಮೌನ. ಅರ್ಥಾತ್ ಯಾವಾಗ ಮಾತನಾಡಿ ಎಂದು ಕೇಳುತ್ತೇವೋ ಆಗ ಸಂಪೂರ್ಣ ಮೌನವೋ ಮೌನ.

ಎಷ್ಟೋ ಸಂದರ್ಭಗಳಲ್ಲಿ ಹೇಳಿದ ಮಾತನ್ನು ಕೇಳಿ ಎಂದಾಗ ಕೇಳದ ನಾವು, ಪ್ರಶ್ನೆ ಮಾಡಿ/ಅನ್ಯಾಯದ ವಿರುದ್ಧ ದನಿ ಎತ್ತಿ ಅಂದಾಗ ಮೌನಕ್ಕೆ ಶರಣಾಗ್ತೀವಿ.

ಇಂಥ ಸಂದರ್ಭಕ್ಕೆ ಸರಿಹೊಂದುವ ಚಂಡಿ ಕಥೆಯನ್ನು ಕೇಳಿಯೇ ಇರುತ್ತೇವೆ. ಒಂದೇ ಸಾಲಲ್ಲಿ ಹೇಳಬೇಕು ಅಂದ್ರೆ ಹೇಳಿದ ಕೆಲಸದ ಬದಲಿಗೆ ಅದರ ವಿರುದ್ಧವಾದ ಕೆಲಸ ಮಾಡೋದೇ ಚಂಡಿ ಕಥೆಯ ಮೂಲ.

ಇಂಥ ಕೆಲಸ ಮಾಡದಿರಿ ಎಂದಾಗ ಅದನ್ನೇ ಮಾಡುವ ನಾವ್, ಇಂಥ ಕೆಲಸ ಮಾಡಿ ಅಂದಾಗ ಮಾಡದಿರುವ ಹಿಂದಿನ ಗೂಡಾರ್ಥವಾದರೂ ಏನು? ನಿಮಗೇನಾದ್ರೂ ಗೊತ್ತಾ?

English summary
Usually people wont listen what they actually have to listen. They do opposite things which were asked them not to do,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X