ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ ಎಲ್ಲೆಲ್ಲೂ ಈ ಹಿಂದು ಮುಂದುಗಳದ್ದೇ ಸಂತೆ ಅಲ್ಲವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈ ಹಿಂದು ಮುಂದುಗಳ ಸಂತೆ ಅಂದರೇನು? ಸಿಂಪಲ್ ಆಗಿ ಹೇಳಬೇಕು ಎಂದರೆ ಒಬ್ಬರ ಹಿಂದೆ ಮತ್ತೊಬ್ಬರು, ಒಂದರ ಹಿಂದೆ ಮತ್ತೊಂದು ಹೀಗೆ ಯಾವುದೂ ಆಗಬಹುದು. ಆದರೆ ಆಯಾ ಸಂದರ್ಭಕ್ಕೆ ತಕ್ಕಂತೆ ಅದು ಹೊಂದುತ್ತೆ. ಇಂಥ ಸನ್ನಿವೇಶಗಳನ್ನು ಎಲ್ಲಿ ಅಥವಾ ಎಲ್ಲೆಲ್ಲಿ ನೋಡಿರ್ತೀವಿ ಅನ್ನೋದನ್ನು ಒಂದೆರಡು ಉದಾಹರಣೆಗಳ ಮೂಲಕ ನೋಡೋಣ.

ಚಿತ್ರದುರ್ಗದ ಕಲ್ಲಿನಕೋಟೆಯ ಒಂದು ಕಳ್ಳಗಿಂಡಿಯಲ್ಲಿ ಹೈದರಾಲಿಯ ಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದನ್ನು ಕಂಡ ಓಬವ್ವ ತನ್ನ ಒನಕೆಯಿಂದ ಅವರನ್ನು ಬಡಿದು ಕೊಂದಳು ಎಂಬ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇಲ್ಲಿ ಸೈನಿಕರು ಒಬ್ಬೊರಾದ ನಂತರ ಒಬ್ಬರು ಬಂದರೂ, ಅವರು ಒಬ್ಬರ ಹಿಂದೆ ಮತ್ತೊಬ್ಬರು ಬಂದರು. ಒಬ್ಬರ ಹಿಂದೆ ಮತ್ತೊಬ್ಬರು ಬಂದು ಒನಕೆಯ ಹೊಡೆತ ತಿಂದು ಸತ್ತುಬಿದ್ದರು. ಕೊನೆಯಲ್ಲಿ ಬಂದವನೊಬ್ಬ ಮಾತ್ರ, ತಡಮಾಡಿ ಹಿಂದೆ ಬಂದ. ಆದರೆ ಹಿಂದಿನಿಂದ ಇರಿಯುವುದಕ್ಕೆ ಹಿಂದೆ ಬೀಳಲಿಲ್ಲ.

ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...ಶ್ರೀನಾಥ್ ಭಲ್ಲೆ ಅಂಕಣ; ಹಳೆ, ಹೊಸ ವಿಚಾರಗಳ ಬೆಸೆದು ನೋಡೋಣ...

ಇರುವೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುತ್ತಾ ಇರುವುದನ್ನು ನೋಡಿರುತ್ತೇವೆ. ಈ ಕಡೆಯಿಂದ ಆ ಕಡೆಗೆ ಮತ್ತು ಆ ಕಡೆಯಿಂದ ಈ ಕಡೆಗೆ ಸಾಗುವ ಈ ಇರುವೆಗಳು ಭೇಟಿಯಾದಾಗ kissy ಕೊಟ್ಕೊಂಡು ಹಾದು ಹೋಗುತ್ತವೆ. ಹೀಗೆ ಮಾಡುವಾಗ ಪ್ರತೀ ಇರುವೆಯು ಮತ್ತೊಂದು ಇರುವೆಯು ತನ್ನ ಗುಂಪಿಗೆ ಸೇರಿದವರೇ, ಇಲ್ಲವೇ ಎಂದು check ಮಾಡಿಕೊಳ್ಳುತ್ತದೆ. ಇಲ್ಲಾ ಎಂದಾಗ, ಥಟ್ಟನೆ ಎಲ್ಲವೂ ಚೆಲ್ಲಾಪಿಲ್ಲಿ. ಆ ವಿಷಯ ಬಿಡಿ, ಈ ಇರುವೆಗಳು ಒಂದರ ಹಿಂದೆ ಮತ್ತೊಂದು, ಒಂದು ನಿರ್ದಿಷ್ಟ ಅಂತರದಲ್ಲೇ ಸಾಗುತ್ತಾ ಮುಂದೆ ಸಾಗುತ್ತವೆ.

We Will Go Forward Or We Will Follow Others In Many Situations Of Life

ಕ್ರಿಕೆಟ್ ಜಗತ್ತಿನ ವಿಷಯಕ್ಕೆ ಬರೋಣ. ಉತ್ತಮ ಆಟಗಾರರಾದ ಮೊಹಿಂದರ ಅಮರನಾಥ್, ಅಂದಿನ ದಿನಗಳಲ್ಲಿ ಒಮ್ಮೆ form ಕಳೆದುಕೊಂಡು, ಒಂದರ ಹಿಂದೆ ಮತ್ತೊಂದು ಅಂತ ಶೂನ್ಯ ಸಂಪಾದನೆ ಮಾಡಿ, ವಿಶ್ವ ರೆಕಾರ್ಡ್ ಮಾಡಿದ್ದರು. ಎಲ್ಲರ ಜೀವನದಲ್ಲೂ ಒಮ್ಮೆ ಹೀಗೆ ಆಗೋದು ಸಹಜ. ಸದಾ ಉತ್ತುಂಗದಲ್ಲೇ ಇರೋದು ಕಷ್ಟ. ಈಗ ಯಶಸ್ಸಿನ ವಿಷಯಕ್ಕೆ ಬರೋಣ. ಅಂದು, ಮೊಹಮ್ಮದ್ ಅಜರುದ್ದೀನ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಾಗ, ಒಂದರ ಹಿಂದೆ ಮತ್ತೊಂದು ಅಂತ ಮೂರು ಇನ್ನಿಂಗ್ಸ್‌ ನಲ್ಲಿ ಮೂರು ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.

ಶ್ರೀನಾಥ್ ಭಲ್ಲೆ ಅಂಕಣ; ಮೂವತ್ತು ಸೆಕೆಂಡುಗಳ Elevator talk ಎಂದರೇನು?ಶ್ರೀನಾಥ್ ಭಲ್ಲೆ ಅಂಕಣ; ಮೂವತ್ತು ಸೆಕೆಂಡುಗಳ Elevator talk ಎಂದರೇನು?

ಈ ಮೇಲಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂದಂಶ ಎದ್ದು ಕಾಣುತ್ತದೆ. ಹಿಂದೆ ಮುಂದೆ ಎಂಬ ವಿಚಾರವನ್ನೇ ಮನಸ್ಸಿಗೆ ತೆಗೆದುಕೊಂಡು ಅವಲೋಕಿಸಿದಾಗ, ಈ ಹಿಂದೆ-ಮುಂದೆಗಳ ನಡುವಿನ ಅಂತರ ಇಂತಿಷ್ಟು ಎಂಬ ಅಳತೆಗೋಲು ಇಲ್ಲ ಅಂತ. ನುಸುಳಿ ಬಂದ ಹೈದರನ ಇಬ್ಬರು ಸೈನಿಕರ ನಡುವೆ ಎಷ್ಟು ನಿಮಿಷಗಳ/ದೂರದ ಅಂತರ ಇತ್ತೋ ಗೊತ್ತಿಲ್ಲ. ಸಾಗುವ ಎರಡು ಇರುವೆಗಳ ನಡುವಿನ ಅಂತರ ಬಹುಶಃ 0.2 ಅಥವಾ 0.3 ಸೆಂಟಿಮೀಟರ್ ಇರಬಹುದು. ಇನ್ನು ಇನ್ನಿಂಗ್ಸ್ ಅಥವಾ ಆಟಗಳ ನಡುವಿನ ಅಂತರ ಗಮನಿಸಿದರೆ ದಿನಗಳೇ ಇರಬಹುದು.

We Will Go Forward Or We Will Follow Others In Many Situations Of Life

ಇದೇ ದಿಶೆಯಲ್ಲಿ ಮತ್ತೊಂದೆರಡು ವಿಚಾರಗಳನ್ನು ಆಲೋಚಿಸಿ. ಸಿನಿಮಾ ನಟರ ಸಿನಿಜೀವನದ ಬಗ್ಗೆ. ಇಂಥ ನಟ ಒಂದರ ಹಿಂದೆ ಮತ್ತೊಂದು ಅಂತ ಸಾಲು ಸಾಲಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಗಿ ನೋಡು ನೋಡುತ್ತಲೇ ಉತ್ತುಂಗಕ್ಕೆ ತಲುಪಿದ ಅಂತ. ಇದೇ ರೀತಿ, ಈ ರಂಗದಲ್ಲೇ iron leg (ಕಬ್ಬಿಣ ಕಾಲು?) ಎಂಬ ಕುಖ್ಯಾತರಾಗುವ ಸನ್ನಿವೇಶ ತೆಗೆದುಕೊಳ್ಳೋಣ. ಒಬ್ಬ ನಟ/ನಟಿಯು, ಸಾಲು ಸಾಲಾಗಿ ಒಂದರ ಹಿಂದೆ ಮತ್ತೊಂದು ಅಂತ flop ಚಿತ್ರಗಳನ್ನೇ ನೀಡುತ್ತಾ ಹೋದರು ಅನ್ನಿ, ಅವರ ಸಿನಿಜೀವನ ಅಲ್ಲಿಯೇ ಖತಂ ಎಂದುಕೊಳ್ಳಬಹುದು. ಯಾವ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳುತ್ತಾರೆ ಹೇಳಿ? ಒಮ್ಮೆ ಅದೃಷ್ಟ ಖುಲಾಯಿಸಿದರೆ ಅದು ಬೇರೆ ವಿಷಯ ಬಿಡಿ. ಇಲ್ಲಿನ 'ಹಿಂದೆ ಮುಂದೆ'ಗಳ ನಡುವೆ ತಿಂಗಳು/ವರುಷಗಳೂ ಇರಬಹುದು.

ಶ್ರೀನಾಥ್ ಭಲ್ಲೆ ಅಂಕಣ; ಪೂರ್ಣಗಳೆಲ್ಲಾ ಕಿರಿದಾದ ಬಿಡಿಭಾಗಗಳೇ!ಶ್ರೀನಾಥ್ ಭಲ್ಲೆ ಅಂಕಣ; ಪೂರ್ಣಗಳೆಲ್ಲಾ ಕಿರಿದಾದ ಬಿಡಿಭಾಗಗಳೇ!

ಈಗ ಇಲ್ಲಿಂದ ಸೀದಾ ತ್ರೇತಾಯುಗ ಮತ್ತು ದ್ವಾಪರಕ್ಕೆ ಹೋಗೋಣ ಬನ್ನಿ. ರಾಮ, ಸೀತೆ ಮತ್ತು ಲಕ್ಷ್ಮಣರು ವನವಾಸಕ್ಕೆ ತೆರಳುತ್ತಾರೆ. ಕಾಡಿನ ಹಾದಿ ಎಂದ ಮೇಲೆ ಅಲ್ಲೇನು 80ft ರಸ್ತೆಯಂತೂ ಇರುವುದಿಲ್ಲ. ಹಾದಿ ಅಂತೇನಾದರೂ ಇದ್ದರೆ, ಒಬ್ಬರು ಸಾಗುವಷ್ಟು ಇರುತ್ತದೆ. ಹೀಗೆ ಒಬ್ಬರು ನಡೆಯುವಷ್ಟು ಹಾದಿ ಇದ್ದ ಮೇಲೆ ಮೂವರೂ ಒಬ್ಬರ ಹಿಂದೆ ಮತ್ತೊಬ್ಬರು ಸಾಗಿರಬೇಕು ಅಲ್ಲವೇ?

We Will Go Forward Or We Will Follow Others In Many Situations Of Life

ಇನ್ನು ಯುದ್ಧದ ವಿಷಯವನ್ನೇ ತೆಗೆದುಕೊಂಡರೆ, ಲಂಕೆಯ ವೀರಾಧಿವೀರರು ಒಬ್ಬರ ಹಿಂದೆ ಮತ್ತೊಬ್ಬರು ರಾಮಸೇನೆಗೆ ತುತ್ತಾದರು. ಕೊನೆಗೆ ರಾವಣ ಅಂತ್ಯವೂ ಆದಾಗ ಯುದ್ಧವೂ ಸಮಾಪ್ತಿಯಾಯ್ತು. ಇಂಥದ್ದೇ ಸನ್ನಿವೇಶದ ಕುರುಕ್ಷೇತ್ರ ಯುದ್ಧದಲ್ಲೂ ಆಯಿತಲ್ಲವೇ? ಹದಿನೆಂಟು ದಿನಗಳ ಯುದ್ಧದಲ್ಲಿ ಎರಡೂ ಕಡೆಯ ವೀರಾಧಿವೀರರು ತಮ್ಮ ತಮ್ಮಲ್ಲೇ ಕಿತ್ತಾಡಿಕೊಂಡು ಒಬ್ಬರ ಹಿಂದೆ ಮತ್ತೊಬ್ಬರು ಹತರಾಗುತ್ತಾ ಸಾಗಿದರು. ಕೊನೆಗೂ ಧರ್ಮಕ್ಕೆ ವಿಜಯ ದೊರೆಯಿತು. ಆ ನಂತರ ಯಾದವ ಕಲಹವೂ ಆಯ್ತು. ಅಲ್ಲೂ ಯಾದವ ವೀರರು ಒಬ್ಬರ ಹಿಂದೆ ಮತ್ತೊಬ್ಬರು ಹತರಾದರು. ಪಾಂಡವರ ಸ್ವರ್ಗಾರೋಹಣದ ಸಮಯದಲ್ಲೂ ಈ ಹಿಂದೆ ಮುಂದೆ ಮುಂದುವರೆಯಿತು. ಮೊದಲು ದ್ರೌಪದಿಯಿಂದ ಆರಂಭವಾಗಿ ನಂತರ ಸಹದೇವ, ನಕುಲ, ಅರ್ಜುನ, ಭೀಮಾದಿಗಳೂ ಕುಸಿದುಬಿದ್ದು ತಮ್ಮ ಇಹಲೋಕದ ವ್ಯವಹಾರ ಮುಗಿಸಿದರು. ಕೊನೆಗೆ ಉಳಿದಿದ್ದು ಮುಂದೆ ಸಾಗುತ್ತಿದ್ದ ಧರ್ಮರಾಯ ಮತ್ತು ಅವನೊಂದಿಗೆ ನೆರಳಾಗಿ ಹಿಂದೆಯೇ ಬರುತ್ತಿದ್ದ ಒಂದು ಶ್ವಾನ.

computer ಜಗತ್ತಿನಲ್ಲಿ FIFO (First In First Out) ಎಂಬ ವಿಚಾರವಿದೆ. ಇದನ್ನು ನಮ್ಮ ಜೀವಮಾನಕ್ಕೆ ಹೊಂದಿಸಿ ನೋಡಿದಾಗ ಮೊದಲು ಈ ಜಗಕ್ಕೆ ಬಂದವರು ಮೊದಲು ಜಾಗ ಖಾಲಿ ಮಾಡಬೇಕು ಎಂಬಂತಾಗುತ್ತದೆ. ಆದರೆ ಇದು ಯಾವ ಯುಗದಲ್ಲೂ ಇಲ್ಲ ಅಲ್ಲವೇ? ಅಭಿಮನ್ಯು ಇಹಲೋಕದಿಂದ ಹೊರಟ ಮೇಲೂ ಭೀಷ್ಮರು ಇದ್ದರು. ಅವರವರ ಕರ್ಮಾನುಸಾರ ಭೂಮಿಯ ಮೇಲಿನ ವ್ಯವಹಾರ ಮುಗಿಸಿ ನಡೆಯಬೇಕು. ಯಾರ ಮನೆಯಲ್ಲಾದರೂ ಸಾವು ಸಂಭವಿಸಿದಾಗ, ಸಾಂತ್ವನ ನುಡಿಯುವಾಗ ಕೇಳಿರುವ ಮಾತುಗಳು "ಏನ್ ಮಾಡೋಕ್ಕಾಗುತ್ತೆ ಹೇಳಿ, ಋಣ ಅಷ್ಟೇ! ಒಬ್ಬರು ಮುಂದು ಇನ್ನೊಬ್ಬರು ಹಿಂದೆ ನಡೀತಾರೆ ಅಷ್ಟೇ!" ಅಂತ. ಎಲ್ಲರ ಜೀವನವೂ 'ಭಾಗ್ಯವಂತರು' ಸಿನಿಮಾದಲ್ಲಿ ನಡೆದಂತೆ ಒಟ್ಟಿಗೆ ಮೇಲಿನ ಲೋಕಕ್ಕೆ ನಡೆಯುವುದಿಲ್ಲ!!

We Will Go Forward Or We Will Follow Others In Many Situations Of Life

ಟ್ರಾಫಿಕ್ ನಲ್ಲಿ ಕಾರುಗಳು, ಸಿಗ್ನಲ್ ನಲ್ಲಿ ವಾಹನಗಳು, ಅಂಗಡಿಯಲ್ಲಿ check out ಮಾಡಿಸುವ ಮಂದಿ, ಸಿನಿಮಾ ಟಿಕೆಟ್ ಗೆ ಕ್ಯೂನಲ್ಲಿ ನಿಂತಾಗ, ಶವ ವಾಹನದ ಹಿಂದೆ ನಿಧಾನಗತಿಯಲ್ಲಿ ಸಾಗುವ ವಾಹನಗಳು, ರಾಜಕೀಯ ವ್ಯಕ್ತಿಗಳು ಸಾಗುವಾಗ ಅವರ ಹಿಂದೆ ಮುಂದೆ ಸಾಗುವ ವಾಹನಗಳು, ಶಾಲೆಯ ಪ್ರಾರ್ಥನೆಯ ಸಮಯದಲ್ಲಿ, social distancing ಅಂತ ನಿಯಮ ಪಾಲಿಸಿದಾಗ, ಆಟೋ standನ ಆಟೋಗಳು ಹೀಗೆ ದಿನನಿತ್ಯದಲ್ಲಿ ಈ ರೀತಿಯ 'ಹಿಂದೆ ಮುಂದೆ' ವಿಚಾರದ ಹತ್ತು ಹಲವು ಸನ್ನಿವೇಶಗಳು ನಮ್ಮ ಕಣ್ಣಿಗೆ ಕಾಣುತ್ತಲೇ ಇರುತ್ತದೆ.

ಕೊನೆಹನಿ: ಜೀವಿತ ಕಾಲದಲ್ಲಿ ಮುಮ್ಮುಖವಾಗಿ ಒಬ್ಬರ ಹಿಂದೆ ನಡೆಯುತ್ತೇವೆ. ಒಬ್ಬ ಗುರುವನ್ನು ಅನುಸರಿಸಿ ಅವರ ಹಿಂದೆ ನಡೆಯುತ್ತೇವೆ ಅಥವಾ ಗುರುವಾಗಿ ಮುಮ್ಮುಖವಾಗಿ ನಡೆಯುತ್ತೇವೆ. ಮುಂದೆ ಸಾಗುವ ಒಬ್ಬರ ಹಿಂದೆ ಸಾಗುವಾಗ ಆಗಲಿ ಅಥವಾ ಮುಂದೆ ಸಾಗುವಾಗ ನಮ್ಮ ಹಿಂದೆ ಮಂದಿ ಇರುವಾಗ ಆಗಲಿ ಸಂಪೂರ್ಣ ಜವಾಬ್ದಾರಿ ನಮ್ಮದೇ ಎಂಬುದು ನೆನಪಿನಲ್ಲಿರಬೇಕು. ಕಾಲವಾದ ಮೇಲೆ ಕಾಲುಗಳು ಹಿಮ್ಮುಖವಾಗಿ 'ಭೂತಕಾಲ'ವಾದಾಗಲೂ ನಮ್ಮ ಜೀವಿತದ ಆದರ್ಶಗಳು ಹಲವರ ಮುಂದೆ ಇದ್ದು, ಅವರುಗಳು ಅದರ ಹಿಂದೆ ಇದ್ದರೆ, ನಮ್ಮ ಬಾಳು ಸಾರ್ಥಕ.

ಏನಂತೀರಾ?

English summary
In life, we follow others or we will make others to follow us. Both are important to life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X