ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಆಚಾರವಂತ ಈ ನಾಲಿಗೆ ಅಂತ ಅನ್ನೋಣವೇ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಮೊದಲಿಗೆ ಈ ನನ್ನ ಬರಹ "ಒನ್ ಇಂಡಿಯಾ"ದ "ನವರಸಾಯನ" ಅಂಕಣದ 150ನೇ ಬರಹ. ಈವರೆಗೂ ನನ್ನೆಲ್ಲಾ ಬರಹಗಳನ್ನು ಪ್ರೋತ್ಸಾಹಿಸಿರುವ ಒನ್ ಇಂಡಿಯಾ ತಂಡಕ್ಕೂ, ಸಕಲ ಓದುಗರಿಗೂ ಅನಂತಾನಂತ ವಂದನೆಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನನ್ನೆಲ್ಲಾ ಬರಹಗಳಿಗೆ ಮೂಲ ಕಾರಣ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಮತ್ತೊಮ್ಮೆ ವಂದನೆಗಳು.
----------

Recommended Video

21 ದಿನಗಳಾದ್ಮೇಲೆ ತಾಯಿ ಮಗಳ ಮಿಲನ...ಮತ್ತೆ ಕಣ್ಣೀರು | Mother & Daughter | Oneindia Kannada

ಒಂದು ವಿಷಯವನ್ನು ಹಿಂದಿನವರು ಹೇಳಿದ್ದನ್ನು ಉಲ್ಟಾ ಹೇಳಿದರೂ, ಬೇರೊಂದು ಕೋನದಲ್ಲಿ ನೋಡಿದಾಗ ಹೌದು ಎನ್ನಿಸಬಹುದು ಅನ್ನುವ ದಿಶೆಯಲ್ಲಿ ಈ ಬಾರಿಯ ಬರಹ. ಇಂದಿನ ಬರಹದ ವಿಷಯ 'ನಾಲಿಗೆ'.

ಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದುಶ್ರೀನಾಥ್ ಭಲ್ಲೆ ಅಂಕಣ; ಎಲ್ಲದಕ್ಕೂ ಕೃತಜ್ಞತೆ ಸಲ್ಲಿಸಬೇಕಾದ ಸಮಯವಿದು

ದಾಸರು "ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ" ಎಂದಿದ್ದಾರೆ. ಎಲುಬಿಲ್ಲದ ಈ ನಾಲಿಗೆಯನ್ನು ಇಷ್ಟಬಂದ ಹಾಗೆ ತಿರುಗಿಸಿ, ಒಬ್ಬರನ್ನು ನೋಯಿಸುವುದನ್ನು ಬಿಟ್ಟು, ಓ ನಾಲಿಗೆಯೇ ನಿನ್ನ ಕೆಟ್ಟ ಬುದ್ಧಿಯ ಬಿಟ್ಟು ಭಗವನ್ನಾಮ ಸ್ಮರಣೆಯನ್ನು ಮಾಡು. ಇಲ್ಲವಾದಲ್ಲಿ ಕನಿಷ್ಠ ಕೆಟ್ಟದ್ದನ್ನು ನುಡಿಯಬೇಡ" ಎಂಬ ಮಾತನ್ನು ನಯವಾಗಿ ತಿಳಿಹೇಳಿದ್ದಾರೆ ಪುರಂದರದಾಸರು.

We Have To Know The Importance Of Tongue And Its Words In Life

ಹೀಗೊಂದು ಕಥೆ... ಒಮ್ಮೆ ಹಲ್ಲುಗಳು, ನಾಲಿಗೆಗೆ 'ನಾನು ಬಹಳ Strong', ನೀನು ಬಹಳಾ ಮೃದು. ನಾವು ನಿನ್ನ ಸುತ್ತಲೂ ಕೋಟೆಯಂತೆ ಇರೋದ್ರಿಂದ ನೀನು ಉಳಿದುಕೊಂಡಿದ್ದೀಯ" ಅಂತ ಆಡಿಕೊಳ್ಳುತ್ತದೆ. ನಾಲಿಗೆ ಶಾಂತವಾಗಿಯೇ ಹೇಳಿತಂತೆ 'ನಾನು ಮೃದುವಾಗಿ ಕಾಣಬಹುದು. ಆದರೆ ನಾನು ಇಷ್ಟಬಂದಂತೆ ಆಡಿದರೆ ನೀವೆಲ್ಲರೂ ತೊಪತೊಪ ಅಂತ ಉದುರಿ ಬೀಳುತ್ತೀರಾ'. ನಿಜವೇ!

ಶ್ರೀನಾಥ್ ಭಲ್ಲೆ ಅಂಕಣ; ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ 'ಇಲಿ'ಯಾಗಬೇಕು!ಶ್ರೀನಾಥ್ ಭಲ್ಲೆ ಅಂಕಣ; ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ 'ಇಲಿ'ಯಾಗಬೇಕು!

ಇಷ್ಟೆಲ್ಲಾ ಹಿನ್ನೆಲೆಯಲ್ಲಿ, ನಾಲಿಗೆಯ ಮಹತ್ವವನ್ನು ಕೊಂಚ ಅರಿಯೋಣ ಬನ್ನಿ.

ಭಗವದ್ಗೀತೆಯಲ್ಲಿ ಜಿಹ್ವೆ ಅಂದ್ರೆ ನಾಲಿಗೆಯ ಬಗ್ಗೆ ಬಹಳಷ್ಟು ಹೇಳಲಾಗಿದೆ. ಸಿಂಪಲ್ಲಾಗಿ ಹೇಳಿದರೆ "ಕೃಷ್ಣನನ್ನು ಅರಿಯಬೇಕಾದರೆ, ಕೃಷ್ಣನನ್ನು ಕಾಣಬೇಕಾದರೆ ಮೊದಲು ನಾಲಿಗೆ ಶುದ್ಧ ಇರಬೇಕು" ಅಂತ. ಈ ಮಾತು ಬಹಳ ಆಳವಾಗಿದೆ. ಆಡುವ ಮಾತು ಶುದ್ಧವಾಗಿರಬೇಕು. ಇಂಗಿತ ಶುದ್ಧವಾಗಿದ್ದರೆ ಮಾತೂ ಶುದ್ಧ. ಮಾತು ಹಿತವಾಗಿದ್ದರೆ ಕೇಳಲೂ ಹಿತ. ಮಾತಿನ ಗಾರುಡಿಗ ಎನಿಸಿಕೊಂಡಾಗ, ಮಾತಿನಲ್ಲೇ ಮೋಡಿ ಹಾಕುವವ, orator, ಕಟುನುಡಿಯಾಡುವವರು, ಬಾಯಿಬಿಟ್ಟರೆ ಕೆಟ್ಟಮಾತು/ಅವಾಚ್ಯ ಅಂತೆಲ್ಲಾ ವಿಚಾರಗಳ ಹಿಂದೆ ಇರುವುದೇ ಈ ನಾಲಿಗೆ. ಮಾನವನಾಗಿ ಹುಟ್ಟಿದ ಮೇಲೆ ನಮಗೆ ಒದಗಿರುವ ಎರಡು ದಿವ್ಯ ವರಗಳಲ್ಲಿ ಮೊದಲನೆಯದು ಈ ನಾಲಿಗೆಯಾಡುವ ಮಾತು ಮತ್ತೊಂದು 'ನಗು'. ನಾಲಿಗೆಯನ್ನು ಬಳಸಿ ಹಿತವಾದ ನುಡಿಗಳಿಂದ 'ನಗು' ತರಿಸುವ ದಿಶೆಯಲ್ಲಿ ಕೆಲಸ ಮಾಡೋಣ.

We Have To Know The Importance Of Tongue And Its Words In Life

'ಸ್ವಕುಲ ಸಾಲೆ' ಎಂಬ ಮರಾಠಿ ಭಾಷೆಯನ್ನಾಡುವ ಒಂದು ಬ್ರಾಹ್ಮಣ ಪಂಗಡ ಒಂದಿದೆಯಂತೆ. ಮೂಲತಃ ಇವರುಗಳು ನೇಯ್ಗೆ ವೃತ್ತಿ ಮಾಡುವವರು. ಇವರ ಆರಾಧ್ಯದೈವ "ಜಿಹ್ವೇಶ್ವರ". ನಾಲಿಗೆಯಿಂದ ಹುಟ್ಟಿದವ ಜಿಹ್ವೇಶ್ವರ. ಶ್ರಾವಣ ಮಾಸದ ಶುದ್ಧ ತ್ರಯೋದಶಿಯಂದು ಈ ಜಿಹ್ವೇಶ್ವರನ ಹುಟ್ಟು ಎನ್ನಲಾಗಿದೆ. ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳಿ.

ಯೋಗದಲ್ಲಿ 'ಜಿಹ್ವಾಬಂಧ' ಎಂಬುದು ಒಂದು ರೀತಿ. ನಾಲಿಗೆಯನ್ನು ಮೇಲಕ್ಕೆ ತೆಗೆದುಕೊಂಡು ಬಾಯೊಳಗಿನ ಮೇಲಿನ ಭಾಗಕ್ಕೆ ಒತ್ತಿಕೊಳ್ಳುವ ಈ ಕ್ರಿಯೆಯು, ಮುಖ, ಗಂಟಲು ಮತ್ತು ಮೆದುಳಿನ ರಕ್ತ ಸಂಚಲನೆಗೆ ಸಹಾಯಕವಾಗುತ್ತದೆ ಅಂತ ಯೋಗ ಬಲ್ಲವರ ಅಂಬೋಣ.

ಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲಶ್ರೀನಾಥ್ ಭಲ್ಲೆ ಅಂಕಣ: ಹೇಳಿದ ಮಾತು ಕೇಳೋ ಬುದ್ಧಿ ನಮಗೇಕಿಲ್ಲ

ಯಾವ ಭಾಷೆಯನ್ನು ಅಪ್ಪ-ಅಮ್ಮ-ಬಂಧುಬಳಗದವರೊಡನೆ ಕಲಿತು ಆಡಿ ಬೆಳದಿರುತ್ತೇವೆಯೋ ಅದು ಮಾತೃಭಾಷೆ. ಆಂಗ್ಲದಲ್ಲಿ mother tongue ಎನ್ನುತ್ತಾರೆ. ಈ ಮಾತೃಭಾಷೆಯ ಪರಿಣಾಮವು ಹೇಗೆ ಅಂದರೆ, ನಾವು ಆಲೋಚಿಸುವ ವಿಧಾನ ಮತ್ತು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರ ಮೇಲೆ ಅಗಾಧವಾಗಿರುತ್ತದೆ. ಜನನಿ ಮತ್ತು ಜನ್ಮಭೂಮಿಯ ನಂತರದ ಸ್ಥಾನವೇ ಈ mother tongue ನದ್ದು.

ಇಂಥ ನಾಲಿಗೆಯ ಉದ್ದಕ್ಕೂ ಹರಡಿರೋದೇ taste buds. ಕನ್ನಡದಲ್ಲಿ ರುಚಿ ಮೊಗ್ಗುಗಳು ಎಂದೆನ್ನಿಸಿಕೊಳ್ಳುವ ಈ taste buds ಜ್ವರ ಬಂದಾಗ ಮೊದಲು ಮುಷ್ಕರ ಹೂಡುತ್ತದೆ. ಉಪ್ಪು, ಹುಳಿ, ಖಾರ ತಿನ್ನೋ ದೇಹಕ್ಕೆ entry point ಈ ನಾಲಿಗೆ. ಇದನ್ನೇ 'ಜಿಹ್ವಾ ಚಾಪಲ್ಯ' ಅನ್ನೋದು. ಚಾಪಲ್ಯದಲ್ಲಿ 'ಪಲ್ಯ' ಇದೆ ಅನ್ನೋದನ್ನ ಮರೆಯದಿರಿ. ಪಲ್ಯಕ್ಕೆ ಉಪ್ಪು ಖಾರ ಚೆನ್ನಾಗಿದೆಯಾ ಅಂತ ನೋಡೋದಕ್ಕೆ 'ನಾಲಿಗೆ' ಸದಾ ಸಿದ್ಧ.

ಇಂಥಾ ನಾಲಿಗೆಯ ಮೇಲೆ ಮಚ್ಚೆ ಇರುತ್ತಂತೆ ಗೊತ್ತೇ? ಇಂಥವರು ಏನಾದರೂ ಹೇಳಿದರೆ ನಿಜವಾಗುತ್ತಂತೆ. ಏನೇ ಹೇಳಿದರೂ ನಿಜವಾಗುತ್ತದೆ ಅಂತಲ್ಲ. ಈಗ ಶಾಪ ಅಥವಾ ವರ ಕೊಡುವಾಗಿನ ಒಂದು ಮನಸ್ಥಿತಿ ಏನಿದೆಯೋ ಆ ಮನಸ್ಥಿತಿಯಲ್ಲಿ ನುಡಿದ ಮಾತು ನಿಜವಾಗುತ್ತದಂತೆ. ಅಂದ ಹಾಗೆ ಪುರಾಣ ಕಥೆಗಳನ್ನು ಓದಿರುವ ನಮ್ಮೆಲ್ಲರಿಗೂ ಎದ್ದು ಕಾಣುವ ವಿಚಾರಗಳು ಎಂದರೆ ಶಾಪ, ವರ, ಶಪಥ, ವಾಗ್ದಾನಗಳು. ನಾನಿದನ್ನು ಹೆಸರಿಸಿ ಬಿಟ್ಟಿರುತ್ತೇನೆ. ನೀವು ಉದಾಹರಣೆ ಕೊಡುತ್ತೀರಾ ತಾನೇ?

ನಾಯಿಗೂ ನಾಲಿಗೆಗೂ ಏನು ಲಿಂಕು ಅಂತ ಗೊತ್ತಾ? ಏನಿಲ್ಲ ಬಿಡಿ, ಎರಡೂ "ನಾ" ಇಂದಲೇ ಆರಂಭವಾಗುತ್ತದೆ. ಇರಲಿ ಬಿಡಿ, ನಾಯಿಯು ಸದಾ ನಾಲಿಗೆಯನ್ನು ಹೊರಕ್ಕೆ ಯಾಕೆ ಚಾಚಿರುತ್ತದೆ ಅಂತ ಗೊತ್ತಾ? ಅದರ ನಾಲಿಗೆ ಉದ್ದ ಇರಬೇಕು ಅದಕ್ಕೆ ಬಾಯಿ ಮುಚ್ಚಿಕೊಂಡಿರಲು ಆಗದೇ ಬಾಯಿ ಬಿಟ್ಟುಕೊಂಡಾಗ ನಾಲಿಗೆ ಸದಾ ಆಚೆಯೇ ಇರಬಹುದು. ನಾಲಿಗೆಯನ್ನು ಹೊರಕ್ಕೆ ಚಾಚುವುದರ ಮೂಲಕ ದೇಹದ ಉಷಾಂಶವನ್ನು ಕಾಯ್ದುಕೊಳ್ಳುತ್ತದೆ ಅನ್ನೋದು ವೈಜ್ಞಾನಿಕ ಉತ್ತರ.

ಇದ್ಯಾವ ಪ್ರಾಣಿ ಗೊತ್ತಾ? ಇದು ನಾಲಿಗೆಯ ಮೂಲಕ ಗಾಳಿಯಲ್ಲಿನ ವಾಸನೆಯನ್ನು ಅಘ್ರಾಣಿಸಿ ಅದಕ್ಕೆ ತಕ್ಕಂತೆ ನಡವಳಿಕೆಯನ್ನು ತೋರಿಸುತ್ತದೆ. ಇಬ್ಭಾಗವಾದ ನಾಲಿಗೆಯನ್ನು ಹೊಂದಿರುವ ಹಾವು.

ಈಗ ಒಂದಷ್ಟು assorted ವಿಚಾರಗಳು. ಕುರಿಕಾಯುವವನ ನಾಲಿಗೆಯ ಮೇಲೆ ಆ ಕಾಳಿಮಾತೆಯು 'ಓಂ ಕಾರ' ಬರೆದಾಗ ಅಲ್ಲಿ ಹುಟ್ಟಿದ್ದು ಕಾಳಿದಾಸ... ಅನಂತನಾಗ್ ಅಭಿನಯದ ಚಿತ್ರವಾದ 'ಹಂಸಗೀತೆ' ಒಂದು ಅದ್ಭುತವಾದ ಚಿತ್ರ. ಚಿತ್ರದಲ್ಲಿನ ಹಾಡುಗಾರ, ಕೊನೆಯಲ್ಲಿ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತಾರೆ. ಅಲ್ಲಿಗೆ ಆತನ ಸಂಗೀತಗಾರನ ಕೊನೆಯಾಗುತ್ತದೆ. ಕಾರಣ ಗೊತ್ತಿದ್ದರೆ ಹೇಳಿ...

ಕಾಡಿನ ಬೆಂಕಿಯ ಸಮಯದಲ್ಲಿ ಬೆಂಕಿಯು ತನ್ನ ಕೆನ್ನಾಲಿಗೆ ಚಾಚಿ ತನ್ನ ಸುತ್ತಲಿರುವ ಮರಗಿಡಗಳನ್ನು, ಪ್ರಾಣಿ ಪಕ್ಷಿಗಳನ್ನು ಆಹುತಿ ತೆಗೆದುಕೊಳ್ಳುತ್ತದೆ... ತನ್ನದೊಂದು ರಕ್ತದ ಕಣ ನೆಲದ ಮೇಲೆ ಬಿದ್ರೆ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವ ಕಥೆ ಗೊತ್ತಲ್ವಾ? ಈ ರಕ್ಕಸನ ತಲೆತರಿದಾಗ ಬಿದ್ದ ರಕ್ತವನ್ನೆಲ್ಲಾ ನಾಲಿಗೆಯಿಂದ ಹೀರಿ ರಕ್ತಬೀಜಾಸುರನನ್ನು ಅಂತ್ಯಗೊಳಿಸುತ್ತಾಳೆ ಆ ಕಾಳಿ ಮಾತೆ. ಇನ್ನು ಗಂಟೆಯ ಬಗ್ಗೆ ಗೊತ್ತಲ್ಲಾ. ಆ ಗಂಟೆ ಇನ್ನೆಷ್ಟೇ ದೊಡ್ಡದಾದರೂ ಅದಕ್ಕೊಂದು ನಾಲಿಗೆ ಇರದಿದ್ದರೆ, ಗಂಟೆಯ ಪ್ರಯೋಜನವಾದರೂ ಏನು?

ಮುಂದೆ, ಇಂದಿನ ಪರಿಸ್ಥಿತಿಯಲ್ಲಿ ಮಂಚದಿಂದ ಎದ್ದೇಳಲೂ ಬೇಸರವಾಗಿರುವ ಮಂದಿಗೆ 'ತಮಗೂ ಕಪ್ಪೆಯಂತೆ ನಾಲಿಗೆ ಇದ್ದಿದ್ರೆ?' ಅಂತ ಅನ್ನಿಸಿಲ್ವಾ? ಕಪ್ಪೆಗಳು ದೂರದಲ್ಲಿರುವ ಹಾರುವ ಅಥವಾ ಕೂತಿರುವ ಕೀಟಗಳತ್ತ ತಮ್ಮ ನಾಲಿಗೆಯನ್ನು ಚಾಟಿಯಂತೆ ಬೀಸಿ ಗುಳುಂ ಮಾಡುತ್ತದೆ. ಕಪ್ಪೆಗಳಂತೆ ನಮಗೂ ನಾಲಿಗೆ ಇದ್ದಿದ್ರೆ ಕೂತ ಕಡೆಯೇ ತಿನ್ನಬಹುದಿತ್ತು ಎಂಬುದು ದಿವ್ಯಾಲೋಚನೆ.

ಬೆರಳಚ್ಚು, ಐರಿಸ್ ಸ್ಕ್ಯಾನ್, ಚರ್ಮದ ಬಣ್ಣ ಇತ್ಯಾದಿಗಳಂತೆ, ಪ್ರತೀ ಒಬ್ಬರಿಗೂ ತಮ್ಮದೇ ಛಾಪು ಅಥವಾ unique character ಅಂತ ಇರುವ ಮತ್ತೊಂದು ಅಂಶವೆಂದರೆ ನಾಲಿಗೆಯ ಅಚ್ಚು ಅಥವಾ tongue print. ಅವಳಿಜವಳಿಯಲ್ಲಿ ಕೂಡ ನಾಲಿಗೆಯ ಅಚ್ಚು ಭಿನ್ನ. forensic ನಲ್ಲಿ ಈ ನಾಲಿಗೆಯ ಅಚ್ಚು ಕೂಡ ಒಂದು ಅಂಶ. ಮೇಲೆ ಹೇಳಿದ ಇತರೆ ಅಚ್ಚುಗಳು ಕಾಲಕ್ರಮೇಣ ಕ್ಷೀಣಿಸುವ ಸಂಭವನೀಯತೆ ಇದ್ದರೂ ಒಂದು ನಾಲಿಗೆಯ ಆಕಾರ ಮತ್ತಿತರ ಮೇಲ್ಮೈ ಗುಣಲಕ್ಷಣಗಳು ಎಂದಿಗೂ ಮಾಸುವುದಿಲ್ಲ. Tongue Cleanerನಿಂದ ಉಜ್ಜಿದರೂ ಹೋಗೋಲ್ಲ ಅಂತಾರೆ.

ನಾವು ನಮ್ಮ ನಾಲಿಗೆಯನ್ನು ಚೆನ್ನಾಗಿ ಕಾಯ್ದುಕೊಂಡರೆ, ಆ ನಾಲಿಗೆ ನಮ್ಮನ್ನು ಕಾಯುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ನಾಲಿಗೆಗೂ ಒಪ್ಪುತ್ತದೆ. ಕಾಯ್ದುಕೊಂಡ ನಾಲಿಗೆಗೆ ಆಚಾರವಿರುತ್ತದೆ. ಸದ್ವಿಚಾರದ ಬುದ್ಧಿ ಮತ್ತು ಹೃದಯಗಳ ಜೊತೆ ಆಚಾರವಿರುವ ನಾಲಿಗೆಯನ್ನು ಕಾಯ್ದುಕೊಂಡು ಬದುಕೋಣ. ಏನಂತೀರಿ?

English summary
Srinath Bhalle column; We have to know the importance of tongue and its words in life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X