ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನದಲ್ಲಿ ಕ್ರಿಕೆಟ್ ಇದೆಯೋ, ಕ್ರಿಕೆಟ್'ನಲ್ಲಿ ಜೀವನವೋ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈ ಲೇಖನ ಓದುವ ಹೊತ್ತಿಗೆ ವಿಶ್ವಕಪ್ ಕ್ರಿಕೆಟ್ 2019 ತೆರೆಯ ಮರೆಗೆ ಸರಿದಿರುತ್ತದೆ. ಹತ್ತು ರಾಷ್ಟ್ರಗಳು ಪಾಲ್ಗೊಂಡ ಈ ಮಹಾಸಂಗ್ರಾಮದಲ್ಲಿ ಕೊನೆಯ ಹಣಾಹಣಿಯ ಸಮಯದಲ್ಲಿ ಉಳಿದುಕೊಂಡಿದ್ದು ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್. ಎರಡೂ ರಾಷ್ಟ್ರಗಳೂ ಸಮಬಲರಾಗಿಯೇ ಹೋರಾಡಿದ್ದರೂ ಕೊನೆಗೆ ಯಾರಿಗೋ ಒಬ್ಬರಿಗೆ ಸೋಲಾಗುತ್ತದೆ ಎಂಬುದು ನಿಜವೇ ಆಗಿದ್ದರೂ ಹಾಗಾಗಲಿಲ್ಲ. ಕೊನೆಗೆ ಇಂಗ್ಲೆಂಡ್'ಗೆ ವಿಶ್ವ ಕಪ್ ಚಾಂಪಿಯನ್ ಅಂತ ಪಟ್ಟ ಕಟ್ಟಿ ಕೂರಿಸಲಾಯ್ತು. ಇದಿಷ್ಟು ಸಂಕ್ಷಿಪ್ತ ಕಥೆ.

ಕ್ರಿಕೆಟ್ ಎಂಬ ಆಟವನ್ನು ನಮ್ಮ ಜೀವನಕ್ಕೆ ಹೋಲಿಸಿಕೊಂಡು ಏನೇನು ಕಲಿಯಬಹುದು ಅಂತ ನೋಡುವ.

ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ! ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ!

"ಮಕ್ಕಳಾಡಿ ಮನೆಯ ಕಟ್ಟಿದಂತೆ, ಆಟ ಸಾಕೆಂದು ಅಳಿಸಿ ಪೋದಂತೆ" ಎಂದು ದಾಸರಪದದ ಸಾಲೊಂದಿದೆ. ಇದು ಮಕ್ಕಳಾಟ ಮಾತ್ರ. ಸಮುದ್ರದ ದಂಡೆಗೆ ಹೋಗಿ, ಮರಳಲ್ಲಿ ಮನೆ ಕಟ್ಟಿ ಹೊರಡುವ ಮುನ್ನ ಕೆಡವಿ ಹೋಗುತ್ತಾರೆ. ಅಲ್ಲಿಗೆ ಆಟ ಮುಗೀತು. ಆಟವು ಎಲ್ಲಿಯವರೆಗೆ ಆಟವಾಗಿ ಇರುತ್ತದೋ ಅಲ್ಲಿ ಸಂತಸವೇ ಇರುತ್ತದೆ. ಜೊತೆಗೆ ಮೇಲು/ಕೀಳು, ಸೋಲು/ಗೆಲುವು, ಆನಂದ/ದುಗುಡ, ಗೆಲುವಿನ ಸಂತಸ/ ಸೋಲಿನ ಹತಾಶೆ ಎಂಬುದಕ್ಕೆ ಆಸ್ಪದ ಇರೋದಿಲ್ಲ. ಯಾವಾಗ ಆಟವು ಪಂದ್ಯವಾಗುತ್ತೋ ಅಲ್ಲಿನ ವಾತಾವರಣವೇ ಬೇರೆ.

We can learn lot of things from Cricket

ಒಂದು ಪಂದ್ಯ ಎಂದರೆ ಒಂದು ಜೀವನ ಇದ್ದಂತೆ. ವೀಕ್ಷಕ ವರ್ಗದಲ್ಲಿ ನಮ್ಮ ಸ್ವಂತ ಜನರೂ ಇರುತ್ತಾರೆ, ವಿರೋಧ ವರ್ಗದವರೂ ಇರುತ್ತಾರೆ. ಅಷ್ಟೇ ಅಲ್ಲದೆ ನಮಗೆ ಸಂಬಂಧವೇ ಇಲ್ಲದವರೇ ಹೆಚ್ಚಾಗಿ ಇರುತ್ತಾರೆ. ನಾವು ಯಶಸ್ವಿಯಾದಾಗ ಚಪ್ಪಾಳೆ ತಟ್ಟುವ ಜನರೇ, ನಾವು ಸೋತಾಗ ಆಳಿಗೊಂದು ಕಲ್ಲು ಎಂದೂ ಒಗೆಯುವವರು. ಒಂದು ಕ್ಷಣದಲ್ಲಿ ಹೀರೋ ಆಗಿ ಮಾಡುವ ಅಥವಾ ಜೀರೋ ಆಗಿ ಮಾಡಿಬಿಡುವ ತಾಕತ್ ಈ ವರ್ಗಕ್ಕೆ ಸುಲಭ ಸಾಧನ. ಒಬ್ಬ ಆಟಗಾರನ ಆ ಹೊತ್ತಿನ ಜೀವನದಲ್ಲಿ ಏನು ನಡೆಯುತ್ತಿರಬಹುದು ಎಂಬ ಅರಿವೇ ಅರಿವೇ ಇಲ್ಲದೆ ತಮ್ಮ ಮೂಗಿನ ನೇರಕ್ಕೇ ನೋಡುವ ಪ್ರೇಕ್ಷಕನೇ, ಅನ್ನದಾತ ಕೂಡ.

'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ! 'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ!

ಪಂದ್ಯದ ಆರಂಭದಲ್ಲಿ ಟಾಸ್ ಹಾಕುವ ಮುನ್ನ ಎರಡೂ ಪಂದ್ಯಗಳ ಆಟಗಾರರು ಗೆಲ್ಲಬೇಕೆಂದೇ ಧೀಮಂತ ಹೆಜ್ಜೆ ಇಡುತ್ತಾರೆ. ಮೊದಲು ಬ್ಯಾಟ್ ಮಾಡಿದವರು ಔಟ್ ಆದಂತೆಲ್ಲಾ ಫೀಲ್ಡಿಂಗ್ ಆಯ್ದುಕೊಂಡ ತಂಡ ಮತ್ತು ಅವರನ್ನು ಬೆಂಬಲಿಸುವ ವೀಕ್ಷಕರು ಆನಂದ ಅನುಭವಿಸುತ್ತಾರೆ. ಆದರೆ ಎದುರಾಳಿ ಬ್ಯಾಟ್ಸಮನ್'ಗಳು ರನ್ ಗಳಿಸಿದಾಗಲೆಲ್ಲಾ ಖಿನ್ನತೆ ಮೂಡಿಸಿಕೊಳ್ಳುತ್ತಾರೆ. ವಿಕೆಟ್ ಬೀಳದೇ ರನ್'ಗಳೂ ಸೇರುತ್ತಾ ಹೋದಂತೆಲ್ಲಾ ಉತ್ಸಾಹವನ್ನೇ ಕಳೆದುಕೊಳ್ಳುತ್ತಾ ಸಾಗುತ್ತಾರೆ.

ಮುಖ್ಯವಾಗಿ, ಆ ನಂತರದ ಇನ್ನಿಂಗ್ಸ್'ನಲ್ಲಿ ಏನಾಗಬಹುದು ಎಂಬ ಆಲೋಚನೆಯೇ ಇಲ್ಲದೆ ಭಾವನಾ ಸಮುದ್ರದಲ್ಲಿ ಮುಳುಗುತ್ತಾರೆ. ಆಯಾ ಸಂದರ್ಭದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಸಾಗುವ ಈ ವೀಕ್ಷಕ ತನ್ನ ಜೀವನದಲ್ಲಿ ಮಾತ್ರ ದಿನನಿತ್ಯದ ಭಾವನೆಗಳಿಗೆ ಆಸ್ಪದ ನೀಡದೆ, ದುಡ್ಡು ಮಾಡಲೇ ಹೋರಾಡುತ್ತಾ ಬಾಂಧವ್ಯಕ್ಕೂ ವಾರಾಂತ್ಯ ಹುಡುಕುತ್ತಾ ದಿನನಿತ್ಯದಲ್ಲಿ ಭಾವನಾರಹಿತನಾಗಿ ಹೇಗೆ ಜೀವಿಸುತ್ತಾನೆ ಎಂಬುದೇ ಸೋಜಿಗ.

We can learn lot of things from Cricket

ಇನ್ನು ಬ್ಯಾಟಿಂಗ್ ಆಡುವ ಆಟಗಾರನ ವಿಷಯವನ್ನು ನೋಡೋಣ. ನೂರಾರು ರನ್ ಗಳಿಸಿದವ ಅಥವಾ ತನ್ನ ಟೀಮನ್ನು ಆಪತ್ತಿನಿಂದ ರಕ್ಷಿಸಿದವ ಅಥವಾ ತನ್ನದೇ ಯಾವುದು ದಾಖಲೆಯನ್ನು ಬರೆದವ ಮಾತ್ರ ಹೆಮ್ಮೆಯಿಂದ ಆ ಬ್ಯಾಟ್ ಅನ್ನು ಮುತ್ತಿಕ್ಕುತ್ತಾನೆ. ಔಟಾದವರು ಹತಾಶರಾಗುತ್ತಾರೆ. ಬಹಳಷ್ಟು ಸಾರಿ ಕಡಿಮೆ ಸ್ಕೋರಿಗೆ ಔಟಾದ ದಾಂಡಿಗ ತನ್ನ ಆಕ್ರೋಶವನ್ನು ಬ್ಯಾಟಿನ ಮೇಲೆ ತೀರಿಸಿಕೊಳ್ಳುತ್ತಾನೆ. ಬ್ಯಾಟನ್ನು ನೆಲದ ಮೇಲೆ ಕುಟ್ಟುತ್ತಾನೆ. ಈ ಎಲ್ಲಾ ಸಂದರ್ಭದಲ್ಲೂ ತನ್ನ ಕೆಲಸ ತಾನು ಮಾಡಿತ್ತು ಆ ಬ್ಯಾಟ್. ಆದರೆ ತಪ್ಪು ಒಪ್ಪು ಎಲ್ಲಾ ಇದ್ದದ್ದು ಆ ದಾಂಡಿಗನ ಕೈಯಲ್ಲಿ ಮಾತ್ರ. ಆದರೂ ಬ್ಯಾಟಿಗೆ ಅದರ ಒಡೆಯನಿಂದಲೇ ಶಿಕ್ಷೆ. ಇದ್ಯಾವ ನ್ಯಾಯ?

ಬಹಳಷ್ಟು ಸಾರಿ ನಮ್ಮ ಆಕ್ರೋಶವನ್ನು ಹತ್ತಿಕ್ಕಲಾರದೆ ಅಥವಾ ಎದುರಿಸಲು ಸಾಧ್ಯವಾಗದೆ ನಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುತ್ತೇವೆ. ಅವರನ್ನು ಬೈಯುತ್ತೇವೆ, ಹೊಡೆಯುತ್ತೇವೆ. ಪಾಪ ಆ ಮಕ್ಕಳಿಗೋ ಹೆತ್ತವರಿಗೆ ಏನಾಗಿದೆ ಎಂದು ಅರಿವಾಗದೇ ಮೂಕ ಪ್ರೇಕ್ಷಕರಾಗುತ್ತಾರೆ. ಒಟ್ಟಾರೆ ಹತಾಶೆಯಿಂದ ವಾತಾವರಣವೇ ಅಶಾಂತಿಧಾಮವಾಗುತ್ತದೆ. ಮೊದಲಿಗೆ ನಮ್ಮ ತಪ್ಪು ನಮಗೆ ಅರಿವಾಗಬೇಕು, ಅದನ್ನು ಬಿಗುಮಾನವಿಲ್ಲದೆ ನಾವೇ ಒಪ್ಪಿಕೊಳ್ಳಬೇಕು, ಪ್ರತೀ ಸೋಲಿನಿಂದ ಕಲಿಯಬೇಕು. ಇಷ್ಟೆಲ್ಲಾ ಮಾಡಲು ಸಾಧನೆ ಬೇಕು.

ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ! ಬೇಕಿದ್ದಾಗ ಜಾಗ ಬಿಡಿ, ಬೇಡದಿದ್ದಾಗ ಜಾಗ ಬಿಡಲೇಬೇಡಿ!

ಒಂದು ಟೀಮ್'ನಲ್ಲಿ ಮುಖ್ಯವಾಹಿನಿಯಲ್ಲಿ ಆಡುವವರು ಹನ್ನೊಂದೇ ಜನರು ಇದ್ದರೂ 12th man ಅಂತ ಒಬ್ಬ ಇದ್ದೇ ಇರುತ್ತಾನೆ. ಆತನ ಮೊದಲ ಕೆಲಸ ಎಂದರೆ ಮೈದಾನದಲ್ಲಿ ಆಡುವ ಬ್ಯಾಟ್ಸಮನ್'ಗಳಿಗೆ ಸಹಾಯ ಮಾಡುವುದು. ನೀರು ತಂದುಕೊಡುವುದು, ಅಥವಾ ಬ್ಯಾಟ್ / ಗ್ಲೋವ್ಸ್ ಇತ್ಯಾದಿಗಳನ್ನು ತಂದುಕೊಡುವುದು. ಇಷ್ಟೇ ಅಲ್ಲದೆ ಸಂದೇಶ ಹೊತ್ತು ತರುವ ಕೆಲಸವನ್ನೂ ಮಾಡುತ್ತಾನೆ. ಇನ್ನು ಫೀಲ್ಡಿಂಗ್ ಕಡೆಯ ಹನ್ನೆರಡನೆಯ ಆಟಗಾರ ಎಂದರೆ ಅವನೊಬ್ಬ ಎಕ್ಸ್ಟ್ರಾ fielder. ಆಡುವ ಹನ್ನೊಂದರಲ್ಲಿ ಯಾರಾದರೂ ಹಿಂದಿರುಗಿ ಬರುವ ಸಂದರ್ಭ ಒದಗಿ ಬಂದರೆ ಈ ಹನ್ನೆರಡನೆಯ ಆಟಗಾರ ಅವರ ಬದಲಿಗೆ field ಮಾಡಬೇಕು.

We can learn lot of things from Cricket

ಇಂಥಾ ಎಕ್ಸ್ಟ್ರಾ ಆಟಗಾರ field ಮಾಡುವುದರಲ್ಲೇ ಆಯ್ಕೆ ಸಮಿತಿಯ ಗಮನ ಸೆಳೆಯಬಹುದು. ಅರ್ಥಾತ್ ಯಾವುದೇ ಕೆಲಸ ನಮ್ಮ ಹಾದಿಗೆ ಬಂದಾಗ ಅದರಲ್ಲಿ ಮೇಲು ಕೀಳು ಎಂಬ ತಾರತಮ್ಯ ತೋರದೇ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಸಾಗಬೇಕು. ಇವು ಸಾಧನೆಯ ಮೆಟ್ಟಿಲು ಆಗಿರಬಹುದು, ಯಾರು ಬಲ್ಲರು?

ಕ್ಷೇತ್ರ ರಕ್ಷಕರು ನಮ್ಮ ಜೀವನದಲ್ಲಿ ಬಂಧುಗಳಿದ್ದಂತೆ. ಅಭಿಮನ್ಯುವನ್ನು ಸುತ್ತುವರೆದ ಬಂಧುಗಳಂತೆ. ನಮ್ಮ ನೆರಳನ್ನೇ ಕಾಯ್ವ ವಿಕೆಟ್ ಕೀಪರ್ ನಮ್ಮವನಲ್ಲ. ನಮ್ಮ ಬೆನ್ನ ಹಿಂದೆಯೇ ಇರುವವರು ನಮ್ಮ ಉನ್ನತಿಯನ್ನೇ ಬಯಸುತ್ತಾರೆ ಎಂಬ ಕುರುಡು ನಂಬಿಕೆ ಬೇಡ. ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿರಲಿ.

ಜೀವನದಲ್ಲಿ ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲು, ಸರಿ ದಾರಿಗೆ ನಡೆಸಲು, ಮಾಡಿದ ತಪ್ಪಿಗೆ ದಂಡ ತೆರೆವಂತೆ ಮಾಡಲು ಒಬ್ಬ ಇದ್ದೇ ಇರ್ತಾನೆ. ನಮ್ಮ ಪ್ರತೀ ಹೆಜ್ಜೆಯನ್ನೂ ಆತ ಗಮನಿಸುತ್ತಾನೆ. ಕೆಲವೊಮ್ಮೆ ಅವನ ಕೈ ಮೀರಿ ಸಾಗಿದ್ದನ್ನು ಮುಕ್ಕಣ್ಣನಿಗೆ ಬಿಡುತ್ತಾನೆ. ಇವರುಗಳೇ ನಮ್ಮ ಜೀವನದ umpires ಮತ್ತು ಮೂರನೆಯ umpireಗಳು. ಕಣ್ಣಿಗೆ ಕಾಣದಂತೆ ತಪ್ಪು ಮಾಡಿ ನಮಗೇನೂ ಗೊತ್ತಿಲ್ಲ ಎಂಬಂತೆ ಇರೋದಕ್ಕೆ ಸಾಧ್ಯವಿಲ್ಲ. ಮೇಲೊಬ್ಬ ಇದ್ದಾನೆ, ಅವನಿಗೆ ಎಲ್ಲಾ ಗೊತ್ತಾಗುತ್ತೆ ಅನ್ನೋ ಒಂದು ಅರಿವು ಇರಲಿ. ಆಗ ತಪ್ಪುಗಳು ಕಡಿಮೆಯಾಗುತ್ತದೆ.

ಒಬ್ಬ ಬ್ಯಾಟ್ಸಮನ್ ಕಡೆಗೆ ಬಾಲನ್ನು ವಿವಿಧ ರೀತಿ ಒಗೆಯೋದೇ ಆ ಬೌಲರ್'ನ ಕೆಲಸ. ಈ ಬಾಲ್'ಗಳನ್ನು ಸಮಸ್ಯೆಗಳು ಅಥವಾ ಸವಾಲುಗಳು ಎಂದು ಅರ್ಥೈಸಿಕೊಳ್ಳಿ. ನಮ್ಮತ್ತ ಧಾವಿಸಿ ಬರುವ ಇವನ್ನು ಎದುರಿಸಲು ನಮಗೆ ತಾಕತ್ ಬೇಕು, ಚಾಕಚಕ್ಯತೆ ಇರಬೇಕು. ಎಲ್ಲವನ್ನೂ ಒಂದೇ ರೀತಿಯಾಗಿ ಎದುರಿಸಲಾಗದು. ಬರುವ ಸಮಸ್ಯೆಗಳು ನಮ್ಮನ್ನು ಹೇಳಿ ಕೇಳಿ ಬರೋದಿಲ್ಲ. ಅವನ್ನು ಎದುರಿಸುವ skill ನಮ್ಮದಾಗಿರಬೇಕು. ಜೀವನದಲ್ಲಿ ಸರಿಯಾದ ಕುಶಲತೆ ಇಲ್ಲದೇ ಕಾರ್ಯವೆಸಗಲು ಹೋದರೆ ಅಭಿಮನ್ಯುವಿನ ಗತಿಯಾದೀತು. ಕಲಿಕೆ ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿರಲಿ.

ಜೀವನದಲ್ಲೇ ಆಗಲಿ, ಆಟದಲ್ಲೇ ಆಗಲಿ ಸೂಕ್ತ ಕಾಲಕ್ಕೆ ಮುಖ್ಯ ವೇದಿಕೆಯಿಂದ ಸರಿದು ಮುಂದಿನವರಿಗೆ ಆಸ್ಪದ ನೀಡಬೇಕು. ನನ್ನದೇ ಆಡಳಿತ ಇರಬೇಕು ಎಂಬ ಹುಂಬತನದಿಂದ ಮುಂದುವರೆಯುತ್ತಾ ಸಾಗಿದರೆ ನಮ್ಮವರಿಂದಲೇ ನಿಂದಿತರಾಗಿ ವಿಧಿಯಿಲ್ಲದೇ ಕೈಚೆಲ್ಲಿ ಕೂರಬೇಕಾದೀತು, ಆಚಾರ್ಯ ಭೀಷ್ಮರಂತೆ. ನಿವೃತ್ತಿಯಲ್ಲೇ ವೃತ್ತಿಯೂ ಇದೆ. ಅದರನ್ನು ಗುರುತಿಸಿಕೊಳ್ಳಬೇಕು ಅಷ್ಟೇ.

ಮುಂದಿನ ವಿಶ್ವ ಕಪ್ ಕ್ರಿಕೆಟ್ ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿದೆ. ಯಾವಾಗ ಎಂದಿರಾ? 2023'ರ ಫೆಬ್ರವರಿ ಒಂಬತ್ತರಿಂದ ಆರಂಭವಾಗಿ ಮಾರ್ಚ್ 26ರವರೆಗೆ ನಡೆಯಲಿದೆ. ಸಾಮಾನ್ಯವಾಗಿ ಮಕ್ಕಳಿಗೆ ಪರೀಕ್ಷೆ ಇದ್ದಾಗಲೇ ಕ್ರಿಕೆಟ್ ಕೂಡ ಆಡುವ ಪರಿಪಾಠ ಇಲ್ಲೂ ಮುಂದುವರೆಯಲಿದೆ.

ನಾವು ಎಲ್ಲೋ ಇರುವ ನದಿಯನ್ನು ದಾಟಲು ಈಗಲೇ ಪಂಚೆ ಎತ್ತಿಕೊಂಡು ನಡೆಯುವುದು ಏಕೆ ಎಂದುಕೊಳ್ಳುವುದರ ಬದಲಿಗೆ, ಆ ಸಮಯಕ್ಕೆ ಏನಾದರೂ ಫಲ ಕಾಣಬೇಕು ಎಂದರೆ ಬಿತ್ತನೆ ಈಗಲೇ ನಡೆಯಲಿ. ಏನಂತೀರಿ?

English summary
Now, ICC World Cup Cricket championship is over, but we can relate cricket to our life and learn lot of things from players, the game, rules etc. Explaines Srinath Bhalle, Richmond, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X