ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಪೋಪು ಹೋಗೋಣ ಬಾರೋ ರಂಗ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಶ್ರೀಪಾದರಾಜರ ಈ ಪದದಲ್ಲಿ "ಪೋಪು ಹೋಗೋಣ" ಎನ್ನುವುದು ಬಾಲಭಾಷೆಯಲ್ಲಿ 'ಹೊರಗೆ ಹೋಗಿ ಬರೋಣ' ಅಥವಾ 'ಟಾಟಾ ಹೋಗಿ ಬರೋಣ' ಎಂದೂ ಹೇಳಬಹುದು. ಕೊಂಚ ಬೆಳೆದವರಾದರೆ 'ಒಂದು ರೌಂಡ್ ಹೋಗಿ ಬರೋಣ ನಡಿ' ಎಂಬಂತೆ. ಒಂದು ಹೊಸ ಕಾರನ್ನು ಕೊಂಡಾಗ ಸ್ನೇಹಿತರು ಅಥವಾ ಮನೆಯ ಜನರೊಡನೆ ಸುತ್ತಾಡಲು ಹೋಗಿಬರುವಂತೆ ಇಲ್ಲಿ ದಾಸರು ರಂಗನನ್ನು ಅವರೊಂದಿಗೆ ಒಂದು ರೌಂಡ್ ಹೋಗಿ ಬರಲು ಆಹ್ವಾನಿಸಿರುವ ಪರಿ ವಿಭಿನ್ನವಾಗಿ ಮತ್ತು ಅಪ್ಯಾಯಮಾನವಾಗಿದೆ. ಕೆಲವೆಡೆ "ಆಡ ಹೋಗೋಣ ಬಾರೋ ರಂಗ" ಎಂಬ ಉಲ್ಲೇಖವೂ ಇದ್ದರೂ ನನಗೆ "ಪೋಪು ಹೋಗೋಣ" ಬಹಳ ಇಷ್ಟ.

ಈಗ ನಾನು ನಿಮ್ಮನ್ನು ಪೋಪು ಹೋಗೋಣ ಅಂತ ಕರೆಯುತ್ತಿರುವುದು ದಾಸರ ಶೈಲಿಯಲ್ಲಿ ಅಲ್ಲ. ನಾನು ನಿಮ್ಮನ್ನು ಒಂದು ವಾಕ್ ಹೋಗೋಣ ಬನ್ನಿ ಅಂತ ಕರೆಯುತ್ತಿದ್ದೇನೆ.

 ಶ್ರೀನಾಥ್ ಭಲ್ಲೆ ಅಂಕಣ; ಹೀಗೊಂದು ಡಬ್ಬ ಬರಹ... ಶ್ರೀನಾಥ್ ಭಲ್ಲೆ ಅಂಕಣ; ಹೀಗೊಂದು ಡಬ್ಬ ಬರಹ...

ಈ ಮುನ್ನ ತಪಸ್ಸಿಗೆ ಬನ್ನಿ ಅಂದೆ. ಸ್ವಲ್ಪ ಕಾಂಪ್ಲಿಕೇಟೆಡ್ ಆಯ್ತು ಆಹ್ವಾನ ಅಂತ ಬಲ್ಲೆ. 'ಅಡುಗೆ ಮಾಡಬೇಕು' ಅಂದ್ರಿ, 'ಆಫೀಸಿಗೆ ಹೋಗಬೇಕು' ಅಂದ್ರಿ, 'ಮನೆಯಲ್ಲೇ ಮಾಡ್ಕೋತೀನಿ' ಅಂದ್ರಿ, ಕೆಲವರು 'ನಿಮ್ಮ ಜೊತೆ ಬಂದ್ರೆ ನೀವು ಬರೀ ವಟವಟ ಅನ್ನುತ್ತಾ ಇದ್ದರೆ ತಪಸ್ಸು ಮಾಡೋದು ಹೇಗೆ?' ಅಂದ್ರಿ, ಅಲ್ಲವೇ? ಹಾಗಾಗಿ, ಈಗ ವಾಕ್-ಟಾಕ್ ಮಾಡೋಣ ಬನ್ನಿ. ನಿಮಗೂ ನನಗೂ ಆರೋಗ್ಯಕ್ಕೆ ಒಳ್ಳೆಯದು. ದಾರಿಯಲ್ಲಿ ಸಾಗುತ್ತಾ ಒಂದಿಷ್ಟು ಮಾತನಾಡೋಣ.

Walking With Talking May Help You Learn Many Things

ಮನೆಯಿಂದ ಹೊರಟಾಗ ಎಡಬದಿ ಮತ್ತು ಬಲಬದಿಗೆ ರಸ್ತೆಗಳಿವೆ ಎಂದುಕೊಳ್ಳಿ. ಒಂದು ಕಡೆ ರಸ್ತೆಯು ಏರುಮುಖವಾಗಿ ಸಾಗಿದ್ದರೆ ಮತ್ತೊಂದು ಬದಿ ಸಮತಟ್ಟು ಅಥವಾ ಇಳಿಜಾರು ಇದ್ದರೆ, ನೀವು ಮೊದಲು ಯಾವ ಬದಿಯನ್ನು ಆರಿಸಿಕೊಳ್ಳುವಿರಿ. ಮೊದಲಿಗೆ ಏರುಮುಖವಾಗಿ ಸಾಗಿ ನಂತರ ಮನೆಗೆ ವಾಪಸ್ಸಾಗುವಾಗ ಸಮತಟ್ಟು ಅಥವಾ ಇಳಿಜಾರು ಆಯ್ದುಕೊಳ್ಳುತ್ತೀರಿ, ಅಲ್ಲವೇ? ವಾಕಿಂಗ್ ಹೊರಟಾಗ ಇನ್ನೂ ಶಕ್ತಿ ಇರುತ್ತದೆ. ಹಾಗಾಗಿ ಏರುಮುಖ ಆಯ್ದುಕೊಳ್ಳುತ್ತೇವೆ, ವಾಪಸ್ಸಾಗುವಾಗ ಬಸವಳಿದು ಹೋಗಿರುವುದರಿಂದ ಮತ್ತೊಂದು ಬದಿ ಆಯ್ದುಕೊಳ್ಳುತ್ತೇವೆ. ಜೀವನವೂ ಇಷ್ಟೇ ಅಲ್ಲವೇ? ವಯಸ್ಸಿರುವಾಗ ಶಕ್ತಿ ಇರುತ್ತದೆ. ಏರುಮುಖವಾಗಿ ಸಾಗುವ ವಯಸ್ಸು. ಆಗ ಶ್ರಮವಹಿಸಿ ಕೆಲಸ ಮಾಡುವುದು ಸರಿ. ವಯಸ್ಸಾದಂತೆ ಅರ್ಥಾತ್ ಸುಸ್ತಾದಂತೆ ಕೊಂಚ ಸಮತಟ್ಟು ಅಥವಾ ಇಳಿಜಾರು ಬಯಸೋದು ತಪ್ಪೇನಲ್ಲ.

 ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ? ಶ್ರೀನಾಥ್ ಭಲ್ಲೆ ಅಂಕಣ; ತಪಸ್ಸು ಮಾಡೋಣ ಬರ್ತೀರಾ?

ಆಯಾ ವಯಸ್ಸಿಗೆ ಏನು ಮಾಡಬೇಕೋ ಅಥವಾ ಆಯ್ದುಕೊಳ್ಳಬೇಕೋ ಅದನ್ನು ಸೂಕ್ತವಾಗಿ ಆರಿಸಿಕೊಳ್ಳೋಣ. ಶಕ್ತಿ ಇದ್ದಾಗ ಸೋಫಾ ಮೇಲೆ ಬಿದ್ದುಗೊಂಡು, ಕೈಲಾಗದ ಸಮಯದಲ್ಲಿ ದುಡಿಯುವ ಸನ್ನಿವೇಶ ಎದುರಿಸದಿರಿ ಎಂದು ಹೇಳುತ್ತಾ ಮುಂದಿನ ಹೆಜ್ಜೆ ಇರಿಸೋಣವೇ? ಇನ್ನೂ ನನ್ನ ಜೊತೆ ಇದ್ದೀರಿ ಅಲ್ಲವೇ?

ಇಂದು ಬೆಳಿಗ್ಗೆ ನನ್ನಾಕೆಯೊಂದಿಗೆ ಗಾಳಿಯ ಸಂಚಾರಕ್ಕೆ ಹೋಗಿದ್ದಾಗ ರಸ್ತೆಯ ಮತ್ತೊಂದು ಬದಿಯಲ್ಲಿ ನಾಲ್ಕು ಮಂದಿ Cycling ಮಾಡುತ್ತಾ ಬರುತ್ತಿದ್ದುದು ಕಂಡಿತು. ಒಬ್ಬಾತ ಹಿರಿಯ ಮಿಕ್ಕ ಮೂವರು ಹತ್ತು ವಯಸ್ಸಿನ ಒಳಗಿನ ಮೂರು ಮಕ್ಕಳು. ನನ್ನಾಕೆ "ಮೂರು ಮಕ್ಕಳು" ಎಂದಾಗ ನಾನು "ಬಹುಶ: ಅವನದ್ದು ಎರಡು ಮತ್ತೊಬ್ಬ ಹುಡುಗ ಈ ಮಕ್ಕಳ ಸ್ನೇಹಿತ ಇರಬಹುದು" ಎಂದೆ. ಅದಕ್ಕೆ ನನ್ನಾಕೆ ಹೇಳಿದ್ದು "ನಾನು ಹೇಳಿದ್ದು ಮೂರು ಮಕ್ಕಳು ಅಂತ ಅಷ್ಟೇ, ಅವನದ್ದೇ ಅಂತ ಹೇಳಿಲ್ಲ" ಅಂತ. ಇಷ್ಟು ವಿಷಯ ನಿಮ್ಮ ಮುಂದೆ ಇಟ್ಟು ಈಗ ಸಂಭವನೀಯತೆಗಳನ್ನು ಕೊಂಚ ನೋಡೋಣ ಬನ್ನಿ.

Walking With Talking May Help You Learn Many Things

ಈತನದ್ದು ಒಬ್ಬ ಹುಡುಗ ಮಿಕ್ಕ ಇಬ್ಬರು ಮಕ್ಕಳು ಆ ಹುಡುಗನ ಸ್ನೇಹಿತರು ಆಗಿರಬಹುದು. ಅಥವಾ ಈತ ಒಬ್ಬ ಸೈಕ್ಲಿಂಗ್ ಕೋಚ್ ಆಗಿದ್ದು ಆ ಮೂರೂ ಮಕ್ಕಳು ಅವನಲ್ಲಿ ತರಬೇತಿ ಪಡೆಯುವವರಾಗಿರಬಹುದು. ಆಗ ಆ ಮೂರು ಮಕ್ಕಳೂ ಮೂರು ಬೇರೆ ಬೇರೆ ಸಂಸಾರಕ್ಕೆ ಸೇರಿದವರೋ ಅಥವಾ ಒಂದೇ ಸಂಸಾರಕ್ಕೆ ಸೇರಿದವರೂ ಆಗಿರಬಹುದು. ಇಬ್ಬರು ಒಂದು ಸಂಸಾರಕ್ಕೆ ಸೇರಿದ್ದು ಒಬ್ಬ ಬೇರೆ ಸಂಸಾರಕ್ಕೆ ಸೇರಿದವನಾಗಿರಬಹುದು. ಅಥವಾ ಮೂವರೂ ಬಹಶಃ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳೂ ಆಗಿರಬಹುದು.

ಈ ಹಿರಿಯವ ಕೋಚ್ ಅಲ್ಲದೆ ಒಬ್ಬ ತಂದೆಯೇ ಆಗಿದ್ದರೆ ಒಬ್ಬ ಹುಡುಗ ಮೊದಲ ಹೆಂಡತಿಯ ಮಗ, ಮತ್ತೊಬ್ಬ ಹುಡುಗ ಎರಡನೆಯ ಹೆಂಡತಿಯ ಮಗ, ಮಗದೊಬ್ಬ ಹುಡುಗ ಮೂರನೆಯ ಹೆಂಡತಿಯ ಮಗ ಆಗಿರಬಹುದು. ಹೀಗೇ ಆಲೋಚಿಸುತ್ತಾ ಅದನ್ನೇ ಹೇಳುತ್ತಾ ಸಾಗಿದ್ದೆ. ಬಹುಶಃ ಅಷ್ಟೇನೂ ತಲೆ ತಿನ್ನುತ್ತಿಲ್ಲ ಎಂದುಕೊಳ್ತೀನಿ. ನೀವುಗಳು ಇನ್ನೂ ನನ್ನ ಜೊತೆ ವಾಕ್ ಮಾಡ್ತಾ ಇದ್ದೀರಾ ಅಥವಾ ಹೊರಟುಬಿಟ್ರಾ?

ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?

ನಾವು ವಾಕ್ ಮಾಡುವಾಗ ಸಾಮಾನ್ಯವಾಗಿ ಎದುರಿಗೆ ಒಬ್ಬ ಭಾರತೀಯ ಸಿಗುತ್ತಾರೆ. ಈವರೆಗೂ ಈತನ ಮುಖ ಹೇಗಿದೆ ಎಂದು ನನಗೆ ಗೊತ್ತಿಲ್ಲ. ಅವರು ಮಾಸ್ಕ್ ಹಾಕಿರುತ್ತಾರೆ ಅಂತಲ್ಲ, ಬದಲಿಗೆ ನಾವಿನ್ನೂ ಅಷ್ಟು ದೂರ ಇದ್ದೇವೆ ಎಂದಾಗಲೇ ಈತ ತಮ್ಮ ಮುಖವನ್ನು ತೊಂಬತ್ತು ಡಿಗ್ರಿ ಬಲಕ್ಕೆ ತಿರುಗಿಸಿಕೊಂಡು ನಡೆಯುತ್ತಾ ಬರುತ್ತಾರೆ. ನಾವು ಸಾಗಿದ ಮೇಲೆ ಮುಖ ಮತ್ತೆ ವಾಪಸ್ ಯಥಾ ಸ್ಥಾನಕ್ಕೆ ಬರುತ್ತದೆ.

ಮತ್ತೊಬ್ಬರ ವಿಷಯ ಹೀಗಿದೆ. ಕೊರೊನಾ ಆರಂಭದಲ್ಲಿ ಒಬ್ಬರು ಎದುರಿಗೆ ಸಿಕ್ಕಾಗ ಮುಖ ನೋಡುತ್ತಾ ಸಾಗಿದ್ದರು. ಅವರಾರು ಅಂತ ನನಗೆ ಗೊತ್ತೇ ಆಗುತ್ತಿರಲಿಲ್ಲ. ಒಂದೆರಡು ಬಾರಿ ಹೀಗೆ ಆಗಿ, ಆಮೇಲೆ ಅವರಿಂದ ಮೆಸೇಜ್ ಬಂತು. 'ನಾನು ಸ್ಮೈಲ್ ಮಾಡಿದೆ ನೀವು ಸುಮ್ಮನೆ ನೋಡುತ್ತಾ ಸಾಗಿದಿರಿ' ಅಂತ. ನನಗನ್ನಿಸಿದ್ದು ಏನಪ್ಪಾ ಅಂದ್ರೆ "ಮಾಸ್ಕ್ ಧರಿಸಿದ ಬಾಯಿಂದ ಸ್ಮೈಲ್ ಮಾಡಿದಾಗ, ಹಣೆಯ ಮೇಲೆ 'ನಾನು ನಸುನಗು ಬೀರುತ್ತಿದ್ದೇನೆ' ಎಂಬ ಮೆಸೇಜ್ ಬಂದಿದ್ರೆ ನಾನೂ ಮರು ಸ್ಮೈಲ್ ಮಾಡಿರುತ್ತಿದ್ದೆ". ನನಗೇನು ಗೊತ್ತು ಅವರು ಸ್ಮೈಲ್ ಮಾಡಿದ್ರು ಅಂತ !

Walking With Talking May Help You Learn Many Things

ಮತ್ತೊಂದು ಅನುಭವ ಹೀಗಿದೆ. ಕೆಲವೊಮ್ಮೆ ನಡೆಯುವಾಗ ಬಲ ಪಾದ ಥಟ್ಟನೆ ರಸ್ತೆಗೆ ಉಜ್ಜಿದಂತೆ ಆಗುತ್ತೆ. ಇಷ್ಟೂ ಹೊತ್ತು ಸರಿಯಾಗಿತ್ತು ನಡಿಗೆ ಆದರೆ ಪಾದ ಉಜ್ಜಿದ್ದೇಕೆ ಅಂತ ಆಲೋಚಿಸಿದಾಗ ನನಗನ್ನಿಸೋದು, ಬಹುಶಃ ನನ್ನ ಬಲಗಾಲು ಎಡಗಾಲಿಗಿಂತ ಉದ್ದವಿರಬಹುದೇ? ಅಥವಾ ಬಲಗಾಲಿನಿಂದ ಆರಂಭವಾಗಿ ನಾನು ಮತ್ತೆ ಉದ್ದ ಬೆಳೆಯುತ್ತಿರಬಹುದೇ? 'ಆಹಾ! ಕೊನೆಗೂ ನಾನೊಂದಿಷ್ಟು ಬೆಳೆಯುತ್ತಿದ್ದೇನೆ ಎಂಬ ಖುಷಿಗಿಂತ ಇನ್ನೇನು ಬೇಕು?' ಅಂತ ನನ್ನ ಆಲೋಚನೆ ಅಲ್ಲ. ಬದಲಿಗೆ, ಬಲಗಾಲು ಮಾತ್ರ ನಾಲ್ಕು ಇಂಚು ಉದ್ದ ಬೆಳೆದು, ಎಡಗಾಲು ಹಾಗೆಯೇ ಉಳಿದುಬಿಟ್ಟರೆ ಏನು ಗತಿ? ಅನ್ನೋದೇ ನನ್ನ ಆಲೋಚನೆ.

ಕೆಲವೊಮ್ಮೆ ಮಳೆಯು ಬರುವ ಹಾಗಿದ್ರೆ, ಛತ್ರಿ ತೆಗೆದುಕೊಂಡು ಹೋಗುತ್ತೇವೆ. ಸುಮ್ಮನೆ ನಡೆದು ಹೋಗುವಾಗಲೂ, ಕೈಲಿ ಸುಮ್ಮನೆ ಛತ್ರಿ ಹಿಡ್ಕೊಂಡ್ ಹೋಗುವಾಗಲೂ ಎಷ್ಟು ವ್ಯತ್ಯಾಸ ಅನ್ನೋದು ಬಲು ಬೇಗ ಅರಿವಾಗುತ್ತದೆ. ಒಂದು ಕೈಲಿ ಮಡಚಿದ ಛತ್ರಿ ಹಿಡ್ಕೊಂಡ್ ನಡೆಯುವಾಗ ಜಾಯಿಂಟ್ಸ್ ನೋವು ಕಾಣಿಸಿಕೊಳ್ಳುತ್ತದೆ ಅಂತ ಮತ್ತೊಂದು ಕೈಗೆ ವರ್ಗಾವಣೆಯಾಗುತ್ತದೆ ಆ ಛತ್ರಿ. ಎರಡೂ ಕೈಗಳಿಗೆ ವಿಶ್ರಾಂತಿ ಬೇಕು ಎಂದಾಗ ಮಡದಿಯ ಕೈಗೆ ಹಸ್ತಾಂತರ. ಹೀಗೇ ಒಬ್ಬರಿಂದ ಮತ್ತೊಬ್ಬರ ಕೈಗೆ ಓಡಾಡಿಕೊಂಡಿರುತ್ತೆ ಆ ಛತ್ರಿ.

ಒಂದು ಸಣ್ಣ ಛತ್ರಿ ಹಿಡ್ಕೊಂಡ್ ಹೋಗುವಾಗ ಬರುವ ನೋವಿಗೇ ಉಪಶಮನ ಹುಡುಕುವ ನಾವು, ಸದಾ ಕಾಲ ತಲೆಯ ತುಂಬಾ ಇಲ್ಲದ-ಸಲ್ಲದ ಆಲೋಚನೆಗಳನ್ನೇ ಹೊತ್ಕೊಂಡ್ ಸಾಗುತ್ತೇವಲ್ಲಾ, ಇದು ಸರಿಯೇ? ಪ್ರತೀ ಬಾರಿ ಹೀಗೆ ಹೊತ್ತುಕೊಂಡ ಆಲೋಚನೆಗಳಿಗೆ ತಲೆನೋವು ಅಥವಾ ತಲೆಭಾರ ಬರುವ ಹಾಗಿದ್ರೆ, ಇಷ್ಟು ಹೊತ್ತಿಗೆ ನಾವೇನಾಗುತ್ತಿದ್ದೆವೋ ಗೊತ್ತಿಲ್ಲ. ಭೌತಿಕ (physical) ತೂಕವೇ ಬೇರೆ, ತಾರ್ಕಿಕ (logical) ತೂಕವೇ ಬೇರೆ ಬಿಡಿ.

ನಾನು ನಡೆಯುವಾಗ ದೂರದಲ್ಲಿ ಕಾರು ಬರುತ್ತಿದೆ ಅಂತ ಕಂಡಾಗ ಮಾತನ್ನೇ ಆಡದಿದ್ದರೂ ಸಿಕ್ಕಾಪಟ್ಟೆ ಆಳವಾದ ಚರ್ಚೆ ಮಾಡುತ್ತಿರುವಂತೆ ಕೈಬಾಯಿ ಆಕ್ಷನ್ ಮಾಡುತ್ತೇನೆ. ಹೀಗೇಕೆ ಅಂದ್ರಾ? ಕಾರಿನಲ್ಲಿ ಸಾಗುವವರಿಗೆ ತಾವೂ ವಾಕ್ ಮಾಡುವಾಗ ಮಾತಾಡಿಕೊಂಡು ಸಾಗಬೇಕು ಎಂಬ ಇಚ್ಛೆಯುಂಟಾಗಲಿ ಅಂತ ಅಷ್ಟೇ. ಆದರೆ "ನೋಡಿ, ನೀವೂ ಇದ್ದೀರಾ, ನನ್ ಜೊತೆ ವಾಕ್ ಬರೋವಾಗ್ಲೂ ಫೋನ್ ನೋಡ್ಕೊಂಡ್ ಬರ್ತೀರಾ! ಅವರನ್ನು ನೋಡಿ ಕಲೀರಿ' ಅಂತ ಕಾರಿನಲ್ಲಿ ಕುಳಿತಿರುವ ಆಕೆ, ಆ ಗಂಡ ಎಂಬ ಪ್ರಾಣಿಯನ್ನು ಮೂದಲಿಸಲಿ" ಅಂತ ಆಲೋಚನೆ ಅಲ್ಲಪ್ಪಾ !

ಅರರೇ ! ಗೊತ್ತೇ ಆಗಲಿಲ್ಲ ನೋಡಿ, ಮನೆ ಬಂದೇ ಬಿಡ್ತು. ಈ ವಾಕ್-ಟಾಕ್ ಈಗ ತಾನೇ ಬಿಸಿಯೇರಿತ್ತು. ಆದರೆ ಆಗಲೇ ನಿಲ್ಲಿಸುವ ಸಮಯ ಬಂತು. ಇರಲಿ ಬಿಡಿ, ಇದೊಂದು '#ವಾಕ್_ಟಾಕ್_ಚಾಲೆಂಜ್' ಅಂತ ಅಂದುಕೊಂಡು ನಿಮ್ಮ ಅನುಭವ ಇಲ್ಲೇ ಹಂಚಿಕೊಳ್ಳಿ ಅಥವಾ ಮತ್ತೊಂದು ಬರಹ ಬರೆಯಿರಿ. ವಾಕಿಂಗ್ ಮಾಡುವಾಗ ಟಾಕಿಂಗ್ ಕೂಡ ಮಾಡುವುದರ ಮಹತ್ವ ಹಂಚೋಣ. ಏನಂತೀರಾ?

English summary
Walking with talking may help in many ways. Here is an article to show how it works...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X