ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ; ಅದೇನ್ ನಾಲಿಗೆ ರೀ ಇದು?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಪಾಲಿಸಮ್ಮ ಮುದ್ದು ಶಾರದೆ, ಎನ್ನ ನಾಲಿಗೆ ಮೇಲೆ ನಿಲ್ಲಬಾರದೇ ಎಂಬ ಪುರಂದರದಾಸರ ಕೀರ್ತನೆಯನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ. ಇತ್ತೀಚಿನ ಹಾಡಿನ ಅಭಿಯಾನದಲ್ಲೂ ಈ ಹಾಡನ್ನು ಬಹಳಷ್ಟು ಮಂದಿ ಹಾಡಿ ಶಾರದೆಯನ್ನು ಸ್ತುತಿಸಿದೆವು. ತಾಯಿ ಶಾರದೆಯನ್ನು ನಾಲಿಗೆಯ ಮೇಲೆ ಬಂದು ನಿಲ್ಲು ಎಂಬುದಾಗಿ ಕೇಳುವಾಗ ನನ್ನಿಂದ ಸದಾ ಹಿತನುಡಿಗಳನ್ನೇ ಆಡಿಸು ಎಂದು ಬೇಡಿಕೊಳ್ಳುತ್ತಿದ್ದೇವೆ ಎಂದು ಅರ್ಥೈಸಿಕೊಳ್ಳಬಹುದು.

ಶಾರದೆ ನೆಲೆಸಿರುವ ನಾಲಿಗೆಯಿಂದ ಪೊಳ್ಳು ನುಡಿಗಳು, ನೀಚ ನುಡಿಗಳು ಎಂದೂ ಬಾರವು. ಇಂಥ ಶಾರದೆ ನೆಲೆಸಿರದ ನಾಲಿಗೆಯ ಬಗ್ಗೆಯೇ ದಾಸರ ಮತ್ತೊಂದು ರಚನೆಯೂ ಇದೆ. ಅದುವೇ ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಿಗೆ. ಎಂಥ ದಿವಿನಾದ ಅರ್ಥವುಳ್ಳ ಕೀರ್ತನೆಯಲ್ಲವೇ?

ಶ್ರೀನಾಥ್ ಭಲ್ಲೆ ಅಂಕಣ; ವಿದಾಯ ಹೇಳೋಣ ಬನ್ನಿ...ಶ್ರೀನಾಥ್ ಭಲ್ಲೆ ಅಂಕಣ; ವಿದಾಯ ಹೇಳೋಣ ಬನ್ನಿ...

ಹಾಗಂತ ಚಾಚಿಕೊಂಡಿರುವ ನಾಲಿಗೆಗಳೆಲ್ಲವೂ ದೋಷಪೂರಿತವೇ? ಖಂಡಿತ ಅಲ್ಲ. ಚಾಚಿಕೊಂಡಿರುವ ಮನುಜನ ನಾಲಿಗೆ ಬಹುಶಃ ಸದಾ ಕಾಲ ದೋಷಪೂರಿತ ಎನ್ನಬಹುದು. ಹೀಗೇಕೆ ಹೇಳಿದೆ ಎಂದಿರಾ? ರಕ್ತಬೀಜಾಸುರನ ಕಥೆ ಗೊತ್ತಲ್ಲವೇ? ಈ ರಕ್ಕಸ ದೇವನಲ್ಲಿ ಪಡೆದ ವರ ಏನಪ್ಪಾ ಅಂದರೆ, ತನ್ನ ದೇಹದಿಂದ ಒಂದು ರಕ್ತದ ಹನಿ ನೆಲಕ್ಕೆ ಬಿದ್ದರೆ ಅದರಿಂದ ಇದೇ ರಕ್ಕಸನ ಮತ್ತೊಂದು ರೂಪ ಹುಟ್ಟಿಕೊಳ್ಳುತ್ತದೆ ಅಂತ. ಹತ್ತು ಹನಿ ಬಿದ್ದರೆ ಹತ್ತು ರಕ್ತಬೀಜರು ಅಂತರ್ಥ.

Using Tongue According To Situation In Good Manner

ಹಾಗಿದ್ದರೆ ಇವನನ್ನು ಕೊಲ್ಲುವುದಾದರೂ ಹೇಗೆ? ಮೊದಲೇ ರಕ್ಕಸ, ನೇಣು ಬಿಗಿಯಲು ಸಾಧ್ಯವೇ? ವಿಷ ಕುಡಿಸಲು ಸಾಧ್ಯವೇ? ಅವೆಲ್ಲಾ ಯಾವುದೂ ಕೆಲಸಕ್ಕೆ ಬರೋದಿಲ್ಲ. ಏನಿದ್ದರೂ ಯುದ್ಧದಲ್ಲೇ ಕೊಚ್ಚಿಕೊಲ್ಲಬೇಕು. ಹೀಗಿರುವಾಗ ದುರ್ಗಾಮಾತೆ, ನಾಲಿಗೆಯನ್ನು ಉದ್ದಕ್ಕೆ ಚಾಚಿ ರಕ್ತಬೀಜನನ್ನು ನಾಲಿಗೆ ಮೇಲೆ ಸೆಳೆದು, ಕೊಚ್ಚಿ ಕೊಲ್ಲುವಾಗ ಉದುರಿದ ರಕ್ತವನ್ನು ಕುಡಿದು ಅವನನ್ನು ನಿರ್ನಾಮ ಮಾಡುತ್ತಾಳೆ. ಚಾಚಿಕೊಂಡಿರುವ ನಾಲಿಗೆಗಳೆಲ್ಲವೂ ದೋಷಪೂರಿತವಲ್ಲ.

ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ snowball ಪರಿಣಾಮ ಎಂದರೆ ಏನು?ಶ್ರೀನಾಥ್ ಭಲ್ಲೆ ಅಂಕಣ; ಜೀವನದಲ್ಲಿ snowball ಪರಿಣಾಮ ಎಂದರೆ ಏನು?

ಕುರುಬನ ಪೂರ್ವಜನ್ಮದ ಪುಣ್ಯವೇ ಇರಬೇಕು ರಾಜಕುಮಾರಿಯೊಡನೆ ಮದುವೆಯಾಗುತ್ತದೆ. ಪುಣ್ಯಕ್ಕೆ ರಾಜಕುಮಾರಿ ಒಳ್ಳೆಯವಳೇ ಆಗಿದ್ದು, ಕಾಳಿಕಾ ದೇವಿಯನ್ನು ಒಲಿಸಿಕೊಳ್ಳಲು ಕಳುಹಿಸುತ್ತಾಳೆ. ಕಾಳಿಮಾತೆ ಬಂದಾಗ ತನಗೆ ವಿದ್ಯಾಬುದ್ಧಿ ಬೇಕೆಂದು ಕೇಳಿದಾಗ ಆತನ ಚಾಚಿದ ನಾಲಿಗೆಯ ಮೇಲೆ ಓಂಕಾರ ಬರೆಯುತ್ತಾಳೆ ಆ ತಾಯಿ. ಕಾಳಿದಾಸನ ಆ ನಾಲಿಗೆಯ ಮೇಲೆ ಶಾರದೆ ನೆಲೆಸಿದಳು. ಇದು ಕಥೆ ಅಂತಲೇ ಅಂದುಕೊಂಡರೂ ಶಾರದೆ ನೆಲೆಸಿರುವ ನಾಲಿಗೆಯಲ್ಲಿ ಕಾಳಿದಾಸನಂಥ ಶಾರದಾ ಪುತ್ರನಲ್ಲದೆ ಇನ್ಯಾರು ಹೊರಹೊಮ್ಮಲು ಸಾಧ್ಯ.

Using Tongue According To Situation In Good Manner

ತಾ ನಾಲಿಗೆ ಚಾಚಿ ಜಗವ ಪೊರೆದಲೊಮ್ಮೆ ಮಾತೆ, ಮಗದೊಮ್ಮೆ ನಾಲಿಗೆಯನ್ನು ಚಾಚಿಸಿ ಪೊರೆದಳು.

ನಮ್ಮ ಶ್ವಾನ ಮಹಾರಾಜರು ಸದಾ ನಾಲಿಗೆಯನ್ನು ಚಾಚಿಕೊಂಡಿರುತ್ತಾರೆ ಅನ್ನೋದು ನಿಮಗೂ ಗೊತ್ತು. ಹಾಗಂತ ನಾಯಿಯ ನಾಲಿಗೆ ದೋಷಪೂರಿತವೇ? ನಾಯಿಯು ನಾಲಿಗೆಯನ್ನು ಹಲವು ಕಾರಣಕ್ಕೆ ಚಾಚಿಕೊಂಡರೂ ಮುಖ್ಯವಾಗಿ ದೇಹದ ಉಷ್ಣಾಂಶವನ್ನು ಕಾಯ್ದುಕೊಳ್ಳಲು ತನ್ನ ನಾಲಿಗೆಯನ್ನು ಚಾಚಿಕೊಂಡೇ ಇರುತ್ತದೆ. ನಾಲಿಗೆ ಚಾಚಿಕೊಂಡರೆ ಉಷ್ಣಾಂಶ ಹೇಗೆ ಸಮತೋಲನಕ್ಕೆ ಬರುತ್ತದೆ ಎಂಬ ಕುಹಕ ಆಡಿದವರ ಬಾಯಿಗೆ ಮೆಣಸಿನಕಾಯಿ ಹಾಕಿ ಆಯ್ತಾ. ಸಿಕ್ಕಾಪಟ್ಟೆ ಖಾರವಾದಾಗ ಅವರ ನಾಲಿಗೆ ಹೊರಗೆ ಬಾರದಿದ್ದರೆ ಕೇಳಿ. ಹಾಗೆ ಮಾಡಬೇಡಿ ಪಾಪ, ಅದು ತಪ್ಪು. ಯಾವುದೇ ಪ್ರಯೋಗ ಮಾಡದೇ ಮತ್ತೊಬ್ಬರು ಹೇಳಿದ ಮಾತನ್ನು ಕೇಳಲಾರೆ ಎಂದು ಉದ್ಧಟತನ ತೋರಿದ ಮನಸ್ಸಿಗೆ ಹೀಗೆ ಮಾಡಿದಾಗ ಪಾಪ ಅವರಿಗೂ ನಂಬಿಕೆ ಬರುತ್ತದೆ ಅಂತ ಹೇಳಿದೆ ಅಷ್ಟೇ.

ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...ಶ್ರೀನಾಥ್ ಭಲ್ಲೆ ಅಂಕಣ; Comparision ಎಂಬ ದಿನನಿತ್ಯದ ಕ್ರಿಯೆ...

ಎನ್ನ ನಾಲಿಗೆಯಲ್ಲಿ ನಿಲ್ಲಬಾರದೇ ಎಂದು ಬೇಡಿಕೊಳ್ಳದಿದ್ದರೂ ಆ ಶಾರದೆ ಕುಂಭಕರ್ಣನ ನಾಲಿಗೆಯ ಮೇಲೆ ಕೊಂಚ ಕಾಲವಾದರೂ ನೆಲೆಸಿದ್ದಳು ಎಂದರೆ ಕುಂಭಕರ್ಣ ಪುಣ್ಯ ಮಾಡಿದ್ದ ಎನಿಸುವುದಿಲ್ಲವೇ? ಕುಂಭಕರ್ಣನು ಬ್ರಹ್ಮದೇವನಲ್ಲಿ ಇಂದ್ರಾಸನ ಬೇಡುವವನಿದ್ದಂತೆ ಬದಲಿಗೆ, ಇಂದ್ರನ ಕೋರಿಕೆಯಂತೆ ನಾಲಿಗೆಯ ಮೇಲೆ ನೆಲೆಸಿದ್ದ ಶಾರದೆಯ ಕೃಪೆಯಿಂದ ಇಂದ್ರಾಸನ ಹೋಗಿ ನಿದ್ರಾಸನ ಆಯ್ತು ಅಂತ ಕಥೆ ಹೇಳುತ್ತದೆ. ಇಂದ್ರಪದವಿ ಸಿಕ್ಕಿದ ನಂತರ ಅದನ್ನು ಕಾಯ್ದುಕೊಳ್ಳಲು ಅದೆಷ್ಟು ಶ್ರಮಪಡಬೇಕಾಗಿರುತ್ತಿತ್ತು ಅವನು? ನೆಮ್ಮದಿಯಾಗಿ ತಿಂದುಕೊಂಡು ಇರುತ್ತೇನೆ ಎಂಬ ವರವೇ ಅಲ್ಲವೇ ನಾವೂ ಕೇಳೋದು? ಶಾರದೆ ಒಳಿತೇ ಮಾಡಿದಳಲ್ಲವೇ?

Using Tongue According To Situation In Good Manner

ಇನ್ನು ದ್ರೌಪದಿಯ ವಿಚಾರವನ್ನೇ ತೆಗೆದುಕೊಂಡರೆ, ಆಕೆಯ ದಾಸಿ ನುಡಿದ - ಕುರುಡನ ಮಗ ಕುರುಡ ಎಂಬ ನುಡಿಯಿಂದಾಗಿ ಆಕೆ ಜೋರಾಗಿ ನಕ್ಕಳಂತೆ. ಅವಳು ನಕ್ಕಿದ್ದಕ್ಕೆ ದುರ್ಯೋಧನ ಕ್ರೋಧಗೊಂಡ. ನುಡಿದ ನಾಲಿಗೆಯೊಂದು, ನಕ್ಕ ಬಾಯೊಂದು. ಕೊನೆಗೆ ಈ ನಾಲಿಗೆಯಿಂದ ಆಗಿದ್ದು ಕುರುಕ್ಷೇತ್ರ. ಈ ನಾಲಿಗೆ ಸಾಮಾನ್ಯವಲ್ಲ ನೋಡಿ. ಒಂದು ನಾಲಿಗೆಯಿಂದ ಅದೆಷ್ಟು ತಲೆಗಳು ಉರುಳಿದವು.

ನಾಲಿಗೆಯ ಮೇಲೆ ಮಚ್ಚೆ ಇರುವವರ ವಿಷಯ ಗೊತ್ತೇ? ಅವರೇನು ನುಡಿದರೂ ನಿಜವಾಗುತ್ತೆ ಅಂತಾರಪ್ಪಾ. ನಾಲಿಗೆಯ ತುದಿಯಲ್ಲಿ ಮಚ್ಚೆ ಇರುವವರು ಬುದ್ಧಿವಂತರಂತೆ. ಬರೀ ಬುದ್ಧಿವಂತರಲ್ಲ ಬದಲಿಗೆ ರಾಜತಾಂತ್ರಿಕತೆ ಉಳ್ಳವರೇ ಆಗಿರುತ್ತಾರೆ ಅಂತಲೂ ಹೇಳುತ್ತಾರೆ. ಹೋಗಲಿ ಬಿಡಿ, ಮಚ್ಚೆ ಇದ್ದರೆ ಹೀಗೂ ಇರಬಹುದು, ಹೀಗೆಯೇ ಇರುತ್ತಾರೆ ಅಂತಾಗಲೀ ಅಥವಾ ಇಂಥ ಮಚ್ಚೆ ಇದ್ದವರೇ ಹೀಗೆ ಅನ್ನೋದು ಸರಿಯಲ್ಲ.

ಯಾವುದೇ ಸನ್ನಿವೇಶದಲ್ಲಿ ನಮ್ಮ ಮೇಲೆ ನಮ್ಮದೇ ದೃಷ್ಟಿ ಇದ್ದಾಗ ಅಥವಾ ಹಲವಾರು ಮಂದಿಯ ದೃಷ್ಟಿ ಇದ್ದಾಗ ನಾಲಿಗೆಯ ಪಸೆ ಆರುತ್ತದೆ. ಸ್ಟೇಜ್ ಮೇಲೆ ನಿಂತಾಗ ಇಂಥ ಅನುಭವ ಬಹಳ ಸಾಮಾನ್ಯ. ಅರ್ಥಾತ್ ಆ ಸಮಯದಲ್ಲಿ ದೇಹದೊಳಗಿನ ಉಷ್ಣಾಂಶ ಏರಿ ನಾಲಿಗೆಯ ದ್ರವ ಕಡಿಮೆ ಆಗುತ್ತದೆ ಅಂತ. ನಮ್ಮ ಮೇಲೆ ನಮಗೆ ಗಮನ ಬಿದ್ದಾಗಲೂ ಹೀಗೇ ಆಗೋದು. ಇಂಥ ಸಂದರ್ಭದಲ್ಲಿ ನಾಲಿಗೆಯನ್ನು ಹೊರಚಾಚಿದರೆ ದೇಹದ ಉಷ್ಣಾಂಶ ತಹಬದಿಗೆ ಬರುತ್ತದೆ. Selfie ತೆಗೆದುಕೊಳ್ಳುವಾಗ ತಾನು ಚೆನ್ನಾಗಿ ಕಾಣಿಸುತ್ತೇನೋ ಇಲ್ಲವೋ, ಲೈಕ್ಸ್ ಬರುತ್ತೋ ಇಲ್ಲವೋ, ಕಾಮೆಂಟ್ಸ್ ಹಾಕುವರೋ ಇಲ್ಲವೋ, Fabulous ಅಂದ್ರೆ ಖುಷ್ ಆದರೆ ಗೂಬೆ, ದ್ರಾಬೆ ಅಂದ್ರೆ ಎಂಬ ಭೀತಿಯಿಂದಾಗಿ ನಾಲಿಗೆಯ ದ್ರವ ಆರುವುದರಿಂದಲೇ ಸೆಲ್ಫಿ ತೆಗೆದುಕೊಳ್ಳುವವರು ನಾಲಿಗೆ ಹೊರ ಚಾಚುವುದು ಅಂತ ಹೇಳುತ್ತಿರುವುದು ನನ್ನ ಥಿಯರಿ ಮಾತ್ರ ಅಷ್ಟೇ, ಯಾವುದೇ ಪುರಾವೆ ಇಲ್ಲ, ಆಯ್ತಾ?

ಇಷ್ಟೆಲ್ಲಾ ಯಾಕೆ ವಿಷಯ ಬಂತು ಅಂದ್ರೆ, ಮೊನ್ನೆ ಭಾರತದಿಂದ ಯಾರದ್ದೋ ಕರೆ ಬಂದಾಗ ಭಾರತಕ್ಕೆ ಬರೋದು ಯಾವಾಗ ಅಂದ್ರು. ಅದೇನೋ ಗೊತ್ತಿಲ್ಲ, ಹೊಸತಾಗಿ ಆಪಲ್ ಐಫೋನ್ ಹೊರಬಂದಾಗಲೆಲ್ಲಾ ಇವರು ಕರೆ ಮಾಡಿ ಯಾವಾಗ ಬರೋದು, ಮನೆ ಕಡೆ ಬಾ ಅಂತೆಲ್ಲಾ ತುಂಬಾ ಬಲವಂತ ಮಾಡ್ತಾರೆ. ಸದ್ಯಕ್ಕೆ ಬರೋದಿಲ್ಲ, ನಮಗೆ ನಿರ್ಬಂಧ ಇದೆ ಅಂತ ಕೇಳಿದ್ದೀನಿ ಅಂತಂದೆ. ಮೊನ್ನೆ ತಾನೇ ಹಿಂದಿನ ಬೀದಿ ರಾಮಣ್ಣ ವಾಪಸ್ ಬಂದ್ರು ಅಂದ್ರು. ವಿಧಿಯಿಲ್ಲದೇ ಹೇಳಿದೆ ಹಾಗಲ್ಲ ಇಲ್ಲಿನ ಪೌರರಿಗೆ ದೇಶ ಬಿಟ್ಟು ಹೋಗಬೇಡಿ ಅಂದಿದ್ದಾರೆ ಅಂತಂದೆ. ಅದಕ್ಕವರು ಓಹೋ ಹಾಗಿದ್ರೆ ನೀನು ಪೌರ ಅಂತ ಹೇಳಿಕೊಳ್ಳುತ್ತಾ ಇದ್ದೀಯಾ? ನಾನು ಹೇಳಿದ್ನಾ? ಹೇಳಿಕೊಂಡೆನಾ? ಅದೇನ್ ನಾಲಿಗೆ ರೀ ಇವರದ್ದು?

ಇಂಥ ಸಮಯ ಬಂದಾಗ ನಮ್ಮ ನಾಲಿಗೆ ಏಳದೇ ಇರೋದಕ್ಕೆ ಕಾರಣ ನಮ್ಮ ಹಿರಿಯರು ತಲೆಗೆ ತುಂಬಿರುವ ಸಂಸ್ಕೃತಿ. ಹಿರಿಯರಿಗೆ ಎದುರಾಡಬೇಡಿ ಅಂತ.

ಸಮೀಕ್ಷೆಯ ಪ್ರಕಾರ ಸಾಮಾನ್ಯವಾಗಿ ಗಂಡಿನ ನಾಲಿಗೆ 8.5 ಸೆಂಟಿಮೀಟರ್ ಉದ್ದವಿದ್ದರೆ, ಹೆಣ್ಣಿನ ನಾಲಿಗೆ 8 ಸೆಂಟಿಮೀಟರ್ ಮಾತ್ರ. ಆದರೆ ಹೇಳೋದು ಹೆಣ್ಣಿನ ನಾಲಿಗೆ ಉದ್ದ ಅಂತಲೇ. ಸೋಜಿಗ ಅಲ್ಲವೇ?

ಕೆಲವರ ನಾಲಿಗೆ ಜೀವಕೋಶಗಳು ಇದ್ದೂ ಸತ್ತಿರುತ್ತದೆ. ಆದರೆ ಕಾರಣಗಳು ಮಾತ್ರ ಭಿನ್ನ. ಕೆಲವರ ನಾಲಿಗೆ ಸತ್ಯ ನುಡಿಯಲೇ ಏಳುವುದಿಲ್ಲ. ಕೆಲವರ ನಾಲಿಗೆ ಕುಹಕಕ್ಕೆ ಮೀಸಲು. ಕೆಲವರ ನಾಲಿಗೆ ಬಿರುಸು ನುಡಿಗೆ, ಕೆಲವು ಹಿತನುಡಿಗೆ, ಕೆಲವು ಸಾಂತ್ವನಕ್ಕೆ ಹೀಗೆ. ನಾವು ನಾಲಿಗೆಯನ್ನು ಸಾಕಿದರೆ, ನಮ್ಮನ್ನು ನಾಲಿಗೆ ಸಾಕುತ್ತದೆ ಎಂಬುದು ತುಂಬಾ ಸಿಂಪಲ್ ವಿಷಯ. ನೀವೇನಂತೀರಾ?

English summary
A Man should use his tongue according to situation. He should speak in a good manner to tackle situations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X