ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯರ ವ್ಯಥೆ ಮತ್ತು ಒಂದಿಷ್ಟು ಸ್ವಾರಸ್ಯಕರ ಕಥೆ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಬೆಳೆಯುವ ಕಾಲದಲ್ಲಿ ಒಂದಲ್ಲ ಒಂದು ರೀತಿ ನಮ್ಮ ವಯಸ್ಸಿನವರ ಜೊತೆ ಬೆರೆತು ಆಡಿದಂತೆ ಹಿರಿಯರೊಡನೆಯೂ ಆಡಿ ಬೆಳೆದಿರುತ್ತೇವೆ. ಕೆಲವು ಪುಣ್ಯಾತ್ಮರು ಅಜ್ಜಿ-ತಾತನ ಪ್ರೀತಿಯ ಉಂಡು ಬೆಳೆದಿರುತ್ತಾರೆ. ಮತ್ತೆ ಕೆಲವರು ಹಿರಿಯರ ಅಹಂ ಅಡಿಯಲ್ಲಿ ನಲುಗಿರುತ್ತಾರೆ. ನಕ್ಕರೆ ಎಲ್ಲಿ ತಮ್ಮ ಲೆವಲ್ ಕಡಿಮೆಯಾಗುತ್ತದೆಯೋ ಎಂಬ ಅಹಂಭಾವ ಕೆಲವು ಹಿರಿಯರಿಗೆ. ತಾವು ಹೇಳಿದಂತೆಯೇ ಆಗಬೇಕು, ತಮ್ಮನ್ನು ಕಂಡು ಎಲ್ಲರೂ ಹೆದರಬೇಕು ಎಂಬೆಲ್ಲ ಕಟ್ಟಳೆಗಳನ್ನು ತಮ್ಮ ಸುತ್ತಲೂ ಕಟ್ಟಿಕೊಂಡು ದೈನಂದಿನ ಸುಖ ಅನುಭವಿಸುವುದರಲ್ಲಿ ವಂಚಿತರಾಗಿರುತ್ತಾರೆ. ಇಂಥಾ ವಿವಿಧ ಅನುಭವೀ ಹಿರಿಯರೊಡನೆ ಕಳೆದ, ಅರಿತ ಒಂದಷ್ಟು ಅನುಭವಗಳು ನಿಮ್ಮ ಮುಂದೆ.

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

ಅದೊಂದು ವಠಾರ. ಕನಿಷ್ಠ ಆರು ಅಥವಾ ಎಂಟು ಮನೆಗಳಿದ್ದವು. ಒಂದು ಮನೆಯಲ್ಲಿ ನಾಲ್ಕು ಜನ ಎಂದರೂ ಕನಿಷ್ಠ ಮೂವತ್ತು ಜನರ ಹಿಂಡು! ಮನೆಗಳ ಮಧ್ಯೆ ತೆಂಗಿನಮರ ಬೇರೆ, ಅದಕ್ಕೊಂದು ಕಟ್ಟೆ. ಅಲ್ಲೊಂದು ಮನೆಯಲ್ಲಿ ಅತಿ ದೊಡ್ಡ ಅಜ್ಜಿ ಒಬ್ಬರಿದ್ದರು. ಬೆಳಿಗ್ಗೆ ಎದ್ದು ಸ್ನಾನಾದಿಗಳಾದ ಮೇಲೆ ಕಟ್ಟೆ ಮೇಲೆ ಕೂತರು ಅಂದರೆ ಮುಗೀತು. ಕೂತಲ್ಲೇ ನಿದ್ದೆ ಮಾಡೋ ಹವ್ಯಾಸವೂ ಇದ್ದುದರಿಂದ ಹೆಚ್ಚು ಕಡಿಮೆ ಇಡೀ ದಿನ ಅಲ್ಲೇ ವಾಸ ಅವರದ್ದು.

Time well spent with senior citizens

ಅಲ್ಲಿನವರಿಗೆ ಅಭ್ಯಾಸವಾಗಿತ್ತೋ ಏನೋ ನನಗಂತೂ ಆ ವಠಾರಕ್ಕೆ ಹೋದಾಗಲೆಲ್ಲ ಇರುಸುಮುರುಸು ಆಗುತ್ತಿದ್ದ ವಿಷಯ ಎಂದರೆ ಪಾಪ ವಠಾರದ ಹಿಂದೆ ಟಾಯ್ಲೆಟ್'ಗೆ ಹೋಗಬೇಕಾದಾಗಲೆಲ್ಲ, ಎಷ್ಟೇ ಧಾವಂತ ಇದ್ದರೂ, ಒಂದು ರೀತಿ ಅಜ್ಜಿ'ಗೆ ಅಟೆಂಡನ್ಸ್ ಹಾಕಿ ಹೋಗಬೇಕಿತ್ತು! ಸುಮ್ಮನೆ ಆ ಕಡೆ ಹೋದರು, "ಯಾಕೋ ವೆಂಕಾ ಮೈಹುಷಾರಿಲ್ಲವೇನೋ? ಬೆಳಿಗ್ಗೆಯಿಂದ ನಾಲ್ಕು ಸಾರಿ ಹೋದೆಯಲ್ಲೋ? ನಿನ್ನೆ ತಿಥಿ ಊಟಕ್ಕೆ ಹೋಗಿ ವಡೆ ಜಾಸ್ತಿ ತಿಂದ್ಯೇನೋ? ಸರಸು'ಗೆ ಕಷಾಯ ಮಾಡಿ ಕೊಡಕ್ಕೆ ಹೇಳು...." ಹೀಗೆ.

ನನ್ನ ಅನುಭವದಲ್ಲಿ ಕಂಡ ಒಬ್ಬ ಹಿರಿಯರ ಲೋಕ ನೋಡುವ ರೀತಿಯೇ ಬೇರೆ! ಸ್ವಯಾರ್ಜಿತವೋ ಅಥವಾ ಪಿತ್ರಾರ್ಜಿತವೋ ಗೊತ್ತಿಲ್ಲ ಒಟ್ಟಿನಲ್ಲಿ ಅವರು ಬಿಪಿ, ಶುಗರ್ರು'ಗಳಿಗೆ ಅಂತ ತಮ್ಮ ದೇಹದಲ್ಲಿ ಮನೆ ಮಾಡಿಕೊಟ್ಟಿದ್ದರು. ಔಷದಿ, ಪಥ್ಯ ಅಂತ ವೈದ್ಯರು ಒಂದಷ್ಟು ಅವರ ತಲೆಗೆ ಕಟ್ಟಿದ್ದರು. ಆದರೆ ಈ ಹಿರಿಯರು ಮಹಾ ಭಂಡತನದಿಂದ 'ಈ ಡಾಕ್ಟ್ರುಗಳು ಹೇಳೋ ಮಾತು ಕೇಳಿಕೊಂಡು ತಿನ್ನೋದು ಬಿಟ್ಟು ಎರಡು ವರ್ಷ ಹೆಚ್ಚಿಗೆ ಬದುಕಿರ್ತೀನಿ ಅನ್ನೋದಾಗಿದ್ರೆ ಆ ಎಕ್ಸ್ಟ್ರಾ ಬದುಕೇ ಬೇಡಬಿಡು. ಇರೋ ತನಕ ತಿಂದುಕೊಂಡ್ ಹಾಯಾಗಿರ್ತೀನಿ' ಅಂತ ಹೇಳ್ತಿದ್ರು.

ಆ ಬೋನಸ್ ಎರಡು ವರ್ಷ ಬಿಡಿ, ಇರೋ ಕಾಲಾವಧಿಯಲ್ಲೇ ಇನ್ನೊಬ್ಬರ ಕೈಗೆ ಬಿದ್ದು ಅವರೂ ಒದ್ದಾಡ್ತಾ ಇದ್ದಾರೆ, ಮನೆಯವರನ್ನೂ ಒದ್ದಾಡಿಸ್ತಾ ಇದ್ದಾರೆ. ಒಮ್ಮೊಮ್ಮೆ ಅವರು ಹೇಳಿದ್ದು ಸರಿ ಏನೋ ಅನ್ನಿಸಿದರೂ ಕೆಲವೊಮ್ಮೆ ಎಲ್ಲಾ ನಮ್ಮ ಕೈಲೇ ಇದೆ ಅಂತ ಅತೀ ಆಡ್ತಾರೇನೋ ಅನ್ನಿಸುತ್ತೆ!

Time well spent with senior citizens

ಮಾತ್ರೆ ಔಷಧಿ ತೆಗೆದುಕೊಳ್ಳುವ ವಿಚಾರ ಬಂದಾಗ ಈ ಹಿರಿಯರೆಲ್ಲಾ ಒಂದೇ ಎನಿಸುತ್ತದೆ. ಜಗತ್ತಿನಲ್ಲಿ ನಡೆಯೋ ವಿಷಯವೆಲ್ಲಾ ನೆನಪಿರೋ ಇವರು ಮಾತ್ರೆ, ಔಷಧಿ-ಪಥ್ಯ ಎಂಬ ವಿಚಾರ ಮಾತ್ರ ಮರೆಯುತ್ತಾರೆ. ತಾತ ಬೊಚ್ಚುಬಾಯಿ ತೆರೆದು 'ಮರೆತೇ ಹೋಯ್ತು' ಎಂದಾಗ "ಛೀ ಕಳ್ಳ" ಅಂತ ನಿಮಗೂ ಅನ್ನಿಸುತ್ತಾ? ಮೂಲೆ ಮನೆ ಶಾರದಳ ಮೊಮ್ಮಗಳಿಗೆ ಮೂರು ತುಂಬಿ ನಾಲ್ಕಾಯ್ತು ಅನ್ನೋ ಅಜ್ಜಿ, ಮಧ್ಯಾಹ್ನ ಊಟ ಆದ ಮೇಲೆ 'ಮಾತ್ರೆ ಎಷ್ಟು ತೊಗೋಬೇಕೋ ಗೊತ್ತಾಗ್ಲಿಲ್ಲ ಕಣೆ' ಅಂತ ಸಂಜೆ ಕೆಲಸ ಮುಗಿಸಿ ಬಂದ ಸೊಸೆಯ ಮುಂದೆ ಹೇಳೋವಾಗ "ಕಿಲಾಡಿ ಅಜ್ಜಿ" ಅನ್ನಿಸೋದಿಲ್ವೇ?

ನನಗೆ ಹಿರಿಯರನ್ನು ಮಾತನಾಡಿಸುವ ಹವ್ಯಾಸವೂ ಇದೆ. ಹತ್ತು ಜನರಲ್ಲಿ ಒಂದಿಬ್ಬರಾದರೂ ಏನೋ ಒಂದು ಹೊಸ ವಿಚಾರ ಹಂಚಿಕೊಳ್ಳುತ್ತಾರೆ ಮತ್ತು ಅಲ್ಲೊಂದು ಕಲಿಕೆ ಇರುತ್ತದೆ. ಅದೂ ಅಲ್ಲದೆ ಎಷ್ಟೋ ಬಾರಿ ಅವರನ್ನು ಮಾತನಾಡಿಸಿ, ಆಲಿಸಿ ಅವರನ್ನು ಕಳಿಸಿಕೊಡುವಾಗ, ಅವರಿಗೂ ಏನೋ ತೃಪ್ತಿ ಆಗಿ 'ಏನೋ ಒಂಥರಾ ಮನಸ್ಸಿಗೆ ಸಮಾಧಾನ ಆಯ್ತಪ್ಪ' ಅಂತಾರಲ್ಲ ಅಷ್ಟು ಸಾಕು ಎನಿಸುತ್ತದೆ.

ಹೀಗೆ ಒಬ್ಬರು ಹಿರಿಯರನ್ನು ಭೇಟಿ ಮಾಡಿದಾಗ "ನಮಸ್ಕಾರ ಸಾರ್, ಹೇಗಿದ್ದೀರಾ?" ಅಂತ ಕೇಳಿದೆ. ಪರಿಚಯ ಇದ್ದುದರಿಂದ ಅಷ್ಟು ಸಲೀಸಾಗಿ ಕೇಳಿದೆ ಬಿಡಿ. ಹಾಸ್ಯಪ್ರಿಯರಾದ ಅವರು "ಎಪ್ಪತ್ತು ದಾಟಿದವರನ್ನು ಕೇಳೋವಾಗ ಹೇಗಿದ್ದೀರಾ ಅಂತ ಕೇಳೋ ಬದಲು ಯಾಕಿದ್ದೀರಾ ಅಂತ ಕೇಳಬೇಕು" ಅಂತ ನಕ್ಕರು.

Time well spent with senior citizens

ನಮ್ಮ ಬದುಕು ಇಷ್ಟೇ ಅಂತ ರಿಟೈರ್ಮೆಂಟ್ ಆದ ಮೇಲೆ ಶಸ್ತ್ರಾಸ್ತ್ರ ಕೆಳಗಿಡುವವರು ಹೆಚ್ಚು. 'ಏನ್ ಮಾಡ್ತಾ ಇದ್ದೀರಾ?" ಎಂದರೆ "ಏನಿದೆ ಮಾಡೋಕ್ಕೆ. ನಮ್ಮದೆಲ್ಲಾ ಆಯ್ತು. ಆರಾಮವಾಗಿ ಟಿವಿ ನೋಡ್ಕೊಂಡ್ ಕಾಲ ಮುಂದೆ ಹಾಕೋದ್ ಅಷ್ಟೇ!" ಕ್ರೈಮ್ ಡೈರಿ ನೋಡ್ಕೊಂಡು ಹೆಂಗೆ ಆರಾಮವಾಗಿ ಇರ್ತೀರಾ ಅಂತ ಕೇಳಬೇಕು ಅಂದುಕೊಂಡರೂ ದೊಡ್ಡವರನ್ನು ಹಾಗೆಲ್ಲಾ ಕೇಳಬಾರದು ಅಂತೆಲ್ಲ ನಮ್ಮ ಹಿರಿಯರು ತಲೆ ತುಂಬಿಟ್ಟಿದ್ದಾರೆ. ಈ 'ಏನಿದೆ ಮಾಡೋಕ್ಕೆ' ಅಂತಂದುಕೊಂಡು ಬದುಕಿನ ಬಾಗಿಲನ್ನು ಜಡಿದುಕೊಳ್ಳೋದು ಸರಿ ಇಲ್ಲ ಅನ್ನಿಸುತ್ತೆ.

ಸಲಹೆ ನೀಡೋಕ್ಕೆ ದೊಡ್ಡವರೇ ಆಗಬೇಕೆ ಅಂತಂದುಕೊಂಡು ನಾನೂ ಒಮ್ಮೆ ಬಿಟ್ಟೀ ಸಲಹೆ ನೀಡಿದ್ದೆ "ಸುಮ್ನೆ ಬೆಳಿಗ್ಗೆ ಸಂಜೆ ವಾಕ್ ಮಾಡಿ. ಸ್ವಲ್ಪ ಚೇಂಜ್ ಇರುತ್ತೆ" ಅಂತ. ಅದಕ್ಕವರು "ಮಂಡಿ ನೋವು. ಹತ್ತು ನಿಮಿಷ ಹತ್ತು ಹೆಜ್ಜೆ ಇಟ್ಟರೆ ಇಪ್ಪತ್ತು ನಿಮಿಷ ಕೂತ್ಕೋತೀನಿ. ಮೂವತ್ತು ನಿಮಿಷ ಹೊರಗೆ ಹೋಗಿ ನಲವತ್ತು ಹೆಜ್ಜೆ ಇಟ್ಟು ಮನೆಗೆ ಬಂದರೆ ಕಾಲುನೋವಿಗೆ ರಾತ್ರಿ ನಿದ್ದೆ ಬರೋಲ್ಲ!"

ಕಾಲುನೋವು, ನಿದ್ದೆ ಬರೋಲ್ಲ ಇತ್ಯಾದಿ ಎಲ್ಲಾ ಒಪ್ಪಿಕೊಂಡರೂ ಅವರ ಲೆಕ್ಕಾಚಾರ ಮಾತ್ರ ಅರ್ಥವೇ ಆಗಲಿಲ್ಲ. ಹತ್ತು ನಿಮಿಷಕ್ಕೆ ಹತ್ತು ಹೆಜ್ಜೆ ಇತ್ತು ಇಪ್ಪತ್ತು ನಿಮಿಷ ಕೂತಮೇಲೆ ಅಲ್ಲೇ ಮೂವತ್ತು ನಿಮಿಷ ಕಳೀತಲ್ಲ? ವಾಪಸ್ ಹೇಗೆ ಬಂದರು? ಅವರು ಹೇಳಿದ ನಲವತ್ತು ಹೆಜ್ಜೆ ಆ ದಿನದ್ದಾ? ವಾರದ್ದಾ? ಏನೇನೋ ಯೋಚನೆಗಳು. ಕೇಳೋಣ ಅಂದರೆ ಕೂತಲ್ಲೇ ಅವರು ಮಲಗಿಯಾಗಿತ್ತು!

Time well spent with senior citizens

ಈ ಮಲಗುವಿಕೆ ಬಗ್ಗೆ ಒಂದು ಮಾತು. ಯಾರದೋ ಒಬ್ಬರ ಮನೆಗೆ ಸಂಜೆ ಟೀಗೆ ಹೋಗಿದ್ದೆ. ಸ್ನೇಹಿತರ ತಂದೆ ಸ್ವಲ್ಪ ಹೊತ್ತು ಮಾತನಾಡುತ್ತಾ "ರಾತ್ರಿ ಹೊತ್ತು ನಿದ್ದೆಯೇ ಬರೋಲ್ಲ. ಟಿವಿ ನೋಡೋದು ಮಾಡ್ಕೊಂಡು ಯಾವಾಗ್ಲೋ ಒಂದು ಹೊತ್ತು ಮಲಗ್ತೀನಿ. ಬೆಳಿಗ್ಗೆ ನಾಲ್ಕು ಘಂಟೆಗೆ ಏಳ್ತೀನಿ" ಅಂದರು. ಮುಂದೆ ಇನ್ನೆರಡು ನಿಮಿಷದಲ್ಲಿ ಕೂತಲ್ಲೇ ನಿದ್ದೆ.

ಆಗ ಸ್ನೇಹಿತರು ಹೇಳಿದರು "ನಾನೂ ಅಪ್ಪಂಗೆ ಹೇಳ್ತೀನಿ, ನಾಲ್ಕಕ್ಕೆ ಎದ್ದು ಏನ್ ಮಾಡ್ತೀರಾ? ಆರಕ್ಕೆ ಏಳಿ ಏನು ಅರ್ಜೆಂಟು? ಬೇಗ ಏಳೋದ್ ಯಾಕೆ, ಬೆಳಿಗ್ಗೆ ಎಲ್ಲಾ ಕೂತಲ್ಲೇ ಮಲಗೋದ್ ಯಾಕೆ ಅಂತ. ಕೇಳಬೇಕಲ್ಲಾ? ಸಿಕ್ಕಾಪಟ್ಟೆ ಮೊಂಡುತನ" ಅಂತ. ಈ ಮೊಂಡುತನದ ವಿಷಯ ಬಂದಾಗ ಮಕ್ಕಳೂ, ಹಿರಿಯರೂ ಒಂದೇ ಅನ್ನೋದು ನಮಗೆ ಅರಿವಿರುವ ವಿಷಯವೇ.

ಹಿರಿಯರು ಅಂದ ಮೇಲೆ ನಮ್ಮಜ್ಜಿಯನ್ನು ನೆನಪಿಸಿಕೊಳ್ಳದೆ ಇದ್ದರೆ ಆದೀತೆ? ಟಿವಿಯನ್ನು ಕಂಡ ಅಜ್ಜಿ... ಮೊಬೈಲ್ ಅನ್ನು ಕಂಡ ಅಜ್ಜಿ! ವಾಟ್ಸಾಪ್, ಫೇಸ್ಬುಕ್ ಬಳಸೋ ಮುನ್ನವೇ ಆರಿಹೋದ ದೀಪ. ಕಿವಿ ಕೇಳದ ಅವರಿಗೆ ಟಿವಿಯನ್ನು ನೋಡಲು ಅತಿ ಮುಂಭಾಗದ ಸೀಟು. ಅಜ್ಜಿ ತಲೆಬಾಗಿಸಿ ಟಿವಿ ನೋಡುತ್ತಿದ್ದಾರೆ ಎಂದರೆ ಅರ್ಧ ಸ್ಕ್ರೀನ್ ಮುಚ್ಚಿಹೋಗುತ್ತಿತ್ತು. ಏನೋ ಸೀನ್ ಬರುತ್ತಿರುತ್ತದೆ, ಥಟ್ಟನೆ ನಿಂತು ಜಾಹೀರಾತು ಮೂಡಿಬಂದರೆ ಅಜ್ಜಿಗೆ ರೇಗುತ್ತಿತ್ತು. "ಅದೆಷ್ಟು ಸಾರಿ ಮುಖಮೂತಿ ಮೈ ತೊಳೀತಾರೋ ಲೆಕ್ಕವೇ ಇಲ್ಲ" ಅಂತ ಬೈತಿದ್ರು.

ಒಮ್ಮೆ ಹೀಗಾಯ್ತು. ದ್ವಾರಪಾಲಕರ ಕಥೆ, ಏಳು ಜನ್ಮದ ಬದಲಿಗೆ ಮೂರೇ ಜನ್ಮ ಸಾಕು ಅಂತ ಭಗವಂತನ್ನ ಕೇಳ್ಕೋತಾರೆ ಅಂತೆಲ್ಲಾ ಆಸೆ ಇಟ್ಟುಕೊಂಡು ಹೇಳಿದರೂ ಕೇಳದೆ "ಜಯ-ವಿಜಯ" ಸಿನಿಮಾಕ್ಕೆ ಕರೆದುಕೊಂಡು ಹೋಗುವಂತೆ ಹಠ ಮಾಡಿದ್ದರಂತೆ. ವಾಪಸ್ ಬಂದು "ಥತ್! ಜಯವಿಜಯರ ಕಥೆ ಅಂದ್ಕೊಂಡ್ ಹೋದ್ರೆ ಬರೀ ಪ್ಯಾಂಟು-ಷರಟು" ಅಂತ ಬೈದುಕೊಂಡಿದ್ದೆ ಆಯ್ತು. ನಮ್ಮ ಪುಣ್ಯ 'ಮಾದೇಶ' ಬಂದಾಗ ಅಜ್ಜಿ ಇರಲಿಲ್ಲ!

ನನ್ನ ಜೀವನದಲ್ಲಿ ಮತ್ತೊಬ್ಬ ಹಿರಿಯರನ್ನು ಬೆಂಗಳೂರಿಗೆ ಭೇಟಿ ಇಟ್ಟಾಗ ಭೇಟಿ ಮಾಡಿದ್ದೆ. ಅವರಿಗೆ ನಾನು ಬರೆಯುವ ಹವ್ಯಾಸ ಇರುವವನು ಎಂದು ಅರಿವಿತ್ತು. ವಯಸ್ಸಿನಲ್ಲಿ ಸಾಕಷ್ಟು ಅಂತರವಿದ್ದರೂ ಅದೆಂಥದ್ದೋ ಸ್ನೇಹ ನಮ್ಮನ್ನು ಕಟ್ಟಿ ಹಾಕಿದ್ದು ಭೇಟಿಯ ಕೆಲವೇ ಘಂಟೆಗಳಲ್ಲಿ ಹಲವಾರು ಕಥೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಇಂದಿಗೂ ನೆನಪಿರುವ ಕಥೆ ಎಂದರೆ "ಯೂ ಟೂ ಬ್ರೂಟಸ್" ಎಂಬ ಪದಪುಂಜದ ಹಿಂದಿರುವ ಅರ್ಥ! ಆ ಹಿರಿಯರು ಇಂದಿಗೆ ಇಲ್ಲದಿರಬಹುದು ಆದರೆ ನೆನಪು ಮಾತ್ರ ಹಾಗೇ ಕುಳಿತಿದೆ.

ಹೀಗೆ ಒಂದು ಸಂದರ್ಭದಲ್ಲಿ ಸಣ್ಣ ಗುಂಪಿನಲ್ಲಿ ಮಾತನಾಡುತ್ತಾ ನಿಂತಿದ್ದೆ. ನಮ್ಮ ಊರಿನವರೇ ಆದ ಈ ಹಿರಿಯರು ಆ ಕಡೆ ಎಲ್ಲೋ ಕುಳಿತು ಮಾತನಾಡುತ್ತಾ ಇದ್ದವರು ಥಟ್ಟನೆ ಎದ್ದುಬಂದು ನನ್ನ ಪಕ್ಕ ನಿಂತರು. ಏನನ್ನೋ ಹೇಳಲೋ ಕೇಳಲೋ ಬಂದಿರಬೇಕು ಎಂದು ಮೊದಲು ಅವರಿಗೆ ಆದ್ಯತೆ ನೀಡಿ ಮಾತನಾಡಿಸಿದೆ. "ನೀವು ಮಾತನಾಡ್ತಾ ಇರಿ.. you continue. i just want to listen to you" ಅಂದರು. ಸತ್ಯವಾಗಲೂ ಹೇಳೋದಾದರೆ, ಇದಕ್ಕಿಂತ ಸಂತೋಷ ಇನ್ನೊಂದಿಲ್ಲ. ನಾನು ಮಾತನಾಡುವುದು ಮತ್ತು ಅವರು ಕೇಳುವುದು ಎಂಬ ವಿಚಾರವನ್ನು ಮಹಾಭಾರತದಲ್ಲಿ ಬರುವ ಅರ್ಜುನ ಮತ್ತು ಆಂಜನೇಯನ ನಡುವೆ ನಡೆದ ಒಂದು ಸಂದರ್ಭವನ್ನು ಉಲ್ಲೇಖಿಸಿ ಸಾಮ್ಯತೆ ತಿಳಿಸಿದರು. ಆ ದಿನ ಗಾಢವಾಗಿ ಪರಿಣಾಮ ಬೀರಿದ್ದು ಅದು ಹೇಗೆ ಮನಸ್ಸಿನಿಂದ ಜಾರಿತೋ ಗೊತ್ತಿಲ್ಲ. ಇಂದಿಗೂ ಆ ಪುಟ್ಟ ಸಂದರ್ಭವನ್ನು ಗೂಗಲಿಸಿ ಹುಡುಕುತ್ತಲೇ ಇದ್ದೇನೆ ಸಿಕ್ಕಿಲ್ಲ. ಕೇಳಲು ಹಿರಿಯರೂ ಇಲ್ಲ.

ಕೆಲವೊಮ್ಮೆ 'ಇನ್ನೊಮ್ಮೆ ಸಿಕ್ಕಾಗ ಅವರನ್ನು ಕೇಳಬೇಕು' ಎಂಬೋ ಆಲೋಚನೆ, ಅವರು 'ಲೇಟ್' ಆದರು ಎಂಬ ಸುದ್ದಿ ತಿಳಿದಾಗ, ನಾವು ತುಂಬಾ ಲೇಟ್ ಮಾಡಿದೆವೇನೋ ಎಂಬ ಹತಾಶೆಗೆ ನೂಕುತ್ತದೆ.

ಈಗಿನ ಕಾಲ ಕೆಟ್ಟಿದೆ! ಜನ ಹಾಳಾಗಿ ಹೋಗಿದ್ದಾರೆ! ಯಾರನ್ನು ನಂಬೋದು ಯಾರನ್ನ ಬಿಡೋದು? ಇಂಥಾ ಮಾತುಗಳೆಲ್ಲಾ ದಿನ ನಿತ್ಯದಲ್ಲಿ ಕೇಳುತ್ತಲೇ ಇಂಥಾ ಮಾತುಗಳೇ ಸವಕಲಾಗಿವೆ ಎನಿಸುತ್ತದೆ. ಯಾಕೆ ಹೇಳಿದೆ ಎಂದರೆ ಇಂದಿನ ಮಕ್ಕಳೇ ನಾಳಿನ ಯುವ ಜನಾಂಗ ಎಂಬಂತೆ ಇಂದಿನ ಈ 'ಪೀಳಿಗೆ'ಯೇ ಮುಂದೆ "ಹಿರಿಯರು" ಎನಿಸಿಕೊಳ್ಳುವುದು. ಅರ್ಥಾತ್ ಮುಂದೊಂದು ದಿನ 'ಯಾವ ಹಿರಿಯರನ್ನು ನಂಬೋದು? ಯಾರನ್ನು ಬಿಡೋದು' ಎಂಬ ಮಾತನ್ನು ಕಿರಿಯರು ಆಡುತ್ತಾರೋ? ಅಥವಾ ಆ ಕಿರಿಯರು ಇನ್ನೂ ಅಧೋಗತಿಗೆ ಇಳಿಯುತ್ತಾರೋ?

English summary
To know how to grow old is the master work of wisdom, and one of the most difficult chapters in the great art of living - Henri Frederic Amiel. There is a saying that old is gold, but old age is definitely not gold. Read this write up by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X