ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಈ ಜಗತ್ತು ಭಯಂಕರ ಜಟಿಲ ಆಗುತ್ತಿದೆ ಅಂತ ಅನ್ನಿಸ್ತಾ ಇದೆಯೇ?

By ಶ್ರೀನಾಥ್ ಭಲ್ಲೆ
|
Google Oneindia Kannada News

ಎಲ್ಲವೂ ಚೆನ್ನಾಗಿರುವ ತನಕ ಯಾವುದೂ ದೊಡ್ಡ ವಿಷಯವಲ್ಲ. ಎಲ್ಲೋ ಒಂದು ಕಡೆ ಎಡವಟ್ಟಾದರೆ ಯಾವುದೂ ಚಿಕ್ಕ ವಿಷಯವಲ್ಲ. ಚಪ್ಪಾಳೆಯ ವಿಷಯವನ್ನೇ ತೆಗೆದುಕೊಳ್ಳಿ. ಒಂದು ಕೈ ಹೆಚ್ಚು ಸದ್ದು ಮಾಡಲಾರದು. ಆದರೆ ಇನ್ನೊಂದು ಕೈ ಸೇರಿದಾಗ ಸಪ್ಪಳವಾಗುತ್ತದೆ. ಒಂದು ಬಾಯಿ ನುಡಿದರೆ ಬಹುಶ: ಆ ಮಾತುಗಳು ಗಾಳಿಗೆ ಸಿಲುಕಿ ಚದುರಿ ಆವಿಯಾಗಬಹುದು, ಆದರೆ ಅದಕ್ಕೆ ಪ್ರತಿಕ್ರಿಯೆ ಸಿಕ್ಕಾಗ ಮಾತ್ರ ಹೇಗೂ ಆಗಬಹುದು.

ಒಂದು ಬರಹಕ್ಕೆ ಒಂದು ಪ್ರತಿಕ್ರಿಯೆ ಬಂದಾಗ ಅದು ಧನಾತ್ಮಕವಾದಾಗ ಬಹುಶ: ಮತ್ತೊಂದೂ ಧನಾತ್ಮಕವಾಗಬಹುದು. ಒಂದು ಎಡವಟ್ಟಾದರೆ ಮಾತಿಗೆ ಮಾತು ಬೆಳೆಯಬಹುದು. ಎಲ್ಲವೂ ಚೆನ್ನಾಗಿರುವಾಗ ಗಂಭೀರವೂ ಹಾಸ್ಯವೇ. ಎಡವಟ್ಟಾದರೆ ನಿಜ ಹಾಸ್ಯವೂ ಅತೀ ಗಂಭೀರವಾಗುತ್ತದೆ. ನಿಜ, ಈ ಜಗತ್ತು ಬಹಳ ಜಟಿಲವೂ ಆಗುತ್ತಿದೆ ಮತ್ತು ಸೂಕ್ಷ್ಮವಾಗುತ್ತಿದೆ.

ನಮ್ಮ ಮನದಲ್ಲೇ ಈ ಪ್ರಶ್ನೆಯನ್ನು ಹಾಕಿಕೊಂಡರೆ ಹತ್ತು ಹಲವು ವಿಚಾರಗಳು ಪುಟಿದೆದ್ದು, ಗೊಂದಲಕ್ಕೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ಹಲವೊಮ್ಮೆ ಹೇಗಪ್ಪಾ ಎಂದರೆ ಏನು ಮಾಡಬೇಕು, ಏನು ಮಾಡಬಾರದು, ಯಾವುದು ಸರಿ, ಯಾವುದು ತಪ್ಪು ಎಂದೇ ಅರ್ಥವಾಗುವುದಿಲ್ಲ. ಹೀಗಲ್ಲಾ ಹಾಗೆ ಎಂದರೆ, ನೀವು Old School ಅಥವಾ ಹಳೆಯ ಪೀಳಿಗೆಯವರು ಎಂಬ ಹಣೆಪಟ್ಟಿ ಬೀಳಬಹುದು.

ಬಾಲ್ಯದಿಂದ ಹಿಡಿದು ಬಾಳು ಬೀಳುವವರೆಗಿನ ವಿದ್ಯಮಾನಗಳ ಮಜಲುಗಳನ್ನು ಕೊಂಚ ಅವಲೋಕಿಸಿ ನೋಡಿದಾಗ ಮತ್ತು ಅಂದಿನ ದಿನಕ್ಕೂ ಇಂದಿನ ದಿನಕ್ಕೂ ತುಲನೆ ಮಾಡಿದಾಗ ಅರಿವಾಗುತ್ತೆ, ಎಲ್ಲಿಂದಾ ಎಲ್ಲಿಯವರೆಗೆ ತಲುಪಿದ್ದೇವೆ ಅಂತ. ಹಾಗಂತ ಹೇಳಿ, ಅಂದಿನದ್ದೆಲ್ಲಾ ಸರಿ, ಇಂದಿನದ್ದೆಲ್ಲಾ ತಪ್ಪು ಅಂತ ಹೇಳುತ್ತಿಲ್ಲ. ಅಂದಿನದ್ದೆಲ್ಲಾ ಗೊಡ್ಡು ಸಂಪ್ರದಾಯ, ಇಂದಿನದ್ದೇ ಮುಂದುವರೆದ ಟೆಕ್ನಾಲಜಿ ಎಂದೂ ಹೊಗಳುತ್ತಿಲ್ಲ. ಹೇಗೆ ಈ ಬದಲಾವಣೆಗಳು ಜನರನ್ನು ಸೂಕ್ಷ್ಮವನ್ನಾಗಿಸಿದೆ ಎಂದು ನೋಡುವ ಒಂದು ಯತ್ನ ಅಷ್ಟೇ.

Srinath Bhalle Column: This World Is Becoming A Terrible Maze

ಅಂದು ಗರ್ಭಿಣಿ ಹೆಣ್ಣು ಬಹುಶಃ ಆರೇಳು ತಿಂಗಳು ತುಂಬಿದ ನಂತರ ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ಯಾರಾದರೂ ಮಾಟ-ಮಂತ್ರ ಮಾಡುವವರು ಹೊತ್ತಯ್ಯಬಹುದು ಎಂಬ ಭೀತಿ ಇದ್ದ ಕಾಲವೂ ಇತ್ತು. ಹೊಟ್ಟೆಕಿಚ್ಚಿನಿಂದ ತನಗೆ ತೊಂದರೆಯುಂಟು ಮಾಡಬಹುದು ಎಂಬ ಭೀತಿಯೂ ಇತ್ತು. ನಡೆಯುವಾಗ ಬೀಳಬಹುದು ಎಂದೋ, ಅಥವಾ ಮತ್ತೇನನ್ನೂ ಕಂಡು ಭೀತರಾಗಬಹುದು ಎಂದೋ ಏನೋ, ಹಲವಾರು ಕಾರಣಗಳು ಇರಬಹುದು. ಇನ್ನು ಕೂಸು ಹುಟ್ಟಿದ ನಂತರ ಫೋಟೋ ತೆಗೆಯುವುದಂತೂ ಸಲ್ಲದ ಮಾತು.

ಬಹುಶಃ ಅಲ್ಲೊಂದು ಇಲ್ಲೊಂದು ಕಡೆ ಈ ಸಂಪ್ರದಾಯಗಳು ಇನ್ನೂ ರೂಢಿಯಲ್ಲಿರಬಹುದು. ಇಂದಿನ ದಿನಗಳಲ್ಲಿ ಹೇಗಿದೆ? ಇಂತಹ ದಿನ ಡೆಲಿವೆರಿ ಎಂದು ದಿನಾಂಕ ರಿಜಿಸ್ಟರ್ ಮಾಡಿಸಿ ಆ ಹಿಂದಿನ ದಿನದವರೆಗೂ ಕಚೇರಿಯಲ್ಲಿ ಕೆಲಸ ಮಾಡಿ, ಕೆಲಸಗಳನ್ನು ಮುಗಿಸಿಟ್ಟು ಸಂಜೆ ಆಸ್ಪತ್ರೆಗೆ ದಾಖಲಾಗಿ ಮರುದಿನ ಕೂಸನ್ನು ಹೆತ್ತು, ಆ ಮರುದಿನ WFH ಅಂದ್ರೆ Work From Hospital ಅಂತ Status ಹಾಕುವವರೂ ಇದ್ದಾರೆ. ಜಗತ್ತು ಜಟಿಲವಾಗುತ್ತಿದೆ. ಬಹುಶಃ ಇನ್ನೂ ಜಟಿಲವಾಗಬಹುದು.

ಕಾಲ ಮುಂದುವರೆದಿದೆ ಎಂಬುದು ಒಂದು ವಿಷಯವಾದರೆ ಅದಕ್ಕೆ ಅಂಟಿಕೊಂಡು ಬಂದಿರುವ ಸೂಕ್ಷ್ಮಗಳೂ ಹಲವಾರು. ಕೆಲಸಕ್ಕೆ ಬರಲು ಕೈಲಾಗದು ಎಂದು ಮನೆಯಲ್ಲಿ ಕೂತಾಗ, ರೂಲ್ಸ್'ಗೆ ವಿರುದ್ಧವಾದರೂ, ಹೆಂಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಂದಿನ ದಿನಗಳಲ್ಲಿ ಇದು ಜೀರ್ಣಿಸಿಕೊಳ್ಳಲಾಗದ ಪರಿಸ್ಥಿತಿ. Commitments ಅರ್ಥಾತ್ ಬದ್ಧತೆಗಳು ಕನಸಿನಲ್ಲೂ ಬೆಚ್ಚಿ ಬೀಳಿಸಿ ಎಬ್ಬಿಸಬಲ್ಲದು. ಜೀವನ ಇಷ್ಟು ಸೂಕ್ಷ್ಮ ಇರುವಾಗ, ಇನ್ನೇನು ಮುಂದಿನ ಒಂದು ಗಂಟೆಯಲ್ಲಿ ಡೆಲಿವರಿ ಅಂತಾದಾಗಲೂ ಕೆಲಸ ಮಾಡುವ ಪರಿಸ್ಥಿತಿ ಎದುರಾಗೋದು ಅಚ್ಚರಿಯಲ್ಲ ಬದಲಿಗೆ ಅನಿವಾರ್ಯತೆ. ಅಂತಾರಾಷ್ಟ್ರೀಯ ಮಹಿಳಾ ದಿನ ಅಂತ ಆಚರಿಸಿದರೆ ಸಾಲದು, ಈ ಸೂಕ್ಷ್ಮಗಳತ್ತಲೂ ಗಮನ ಹರಿಸಬೇಕು.

ಎಲ್ಲವೂ ತ್ವರಿತ ಎಂದಾದರೂ ಅಂದಿಗೂ ಇಂದಿಗೂ ಮಗುವನ್ನು ಹೆರಲು ಸರಾಸರಿ ಒಂಬತ್ತು ತಿಂಗಳು ಬೇಕು. ಗಾಂಧಾರಿ ಕೇಸ್ ಬೇರೆ ಬಿಡಿ. ಈ ಒಂಬತ್ತು ತಿಂಗಳು ಎಂಬುದು ಎಷ್ಟು ದೊಡ್ಡ ಸಂಖ್ಯೆ ಎಂದರೆ, Career ಅಥವಾ ವೃತ್ತಿಯಲ್ಲಿನ ಸಾಧನೆಯ ಹಾದಿಯಲ್ಲಿರುವ ಹೆಂಗಳು ಮಗುವೇ ಬೇಡ ಎಂಬ ನಿರ್ಧಾರವನ್ನೂ ತಳೆಯುವ ಇಚ್ಛೆಯುಳ್ಳವರಾಗಿರುತ್ತಾರೆ. ದೊಡ್ಡ ಹುದ್ದೆಯಲ್ಲಿರುವ, ಸಿನಿಮಾ ಜಗತ್ತಿನಲ್ಲಿರುವ, ಮತ್ತು ಕ್ರೀಡಾ ಜಗತ್ತಿನಲ್ಲಿರುವ ಹೆಂಗಳಲ್ಲಿ ಈ ಪರಿ ಹೆಚ್ಚು ಕಂಡುಬರುತ್ತದೆ. ಸಿನಿಮಾ ಜಗತ್ತಿನಲ್ಲಿ ಮದುವೆಯಾದ ಕೂಡಲೇ ಆ ತಾರೆಯ ಬೆಲೆಯೇ ಬಿದ್ದುಹೋಗುತ್ತೆ. ಇನ್ನು ಕ್ರೀಡೆಯಲ್ಲಿರುವ ಮಂದಿಯ ವಿಷಯವೇ ಬೇರೆ. ಸಾಮಾನ್ಯವಾಗಿ ಅವರ ಸಾಧನೆಗಳಿಗೆ ವಯಸ್ಸು ಸದಾ ಅಡ್ಡ ಬರುತ್ತದೆ.

ಹೆಂಗಳು ನೌಕರಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರೂ, ಇಚ್ಛೆಯುಳ್ಳವರಾಗಿರುತ್ತಾರೆಯೇ ವಿನಃ, ಮಕ್ಕಳು ಬೇಡ ಎಂಬ ನಿರ್ಧಾರವನ್ನು ಅತೀ ಸಲೀಸಾಗಿ ತೆಗೆದುಕೊಳ್ಳಲು ಆಗಲಾರದು. ಇಲ್ಲಿ ಅವರ ಮೈ ಚಾಯ್ಸ್ ನಡೆಯುವುದಿಲ್ಲ. ಕೆಲವೊಮ್ಮೆ ಸಮಾಜ ಎಂಬ ಬಲವಂತದ ಮಾಘಸ್ನಾನಕ್ಕೆ ಒಳಗಾಗುತ್ತಾರೆ. ಅದರಿಂದ ಖಿನ್ನತೆಗೂ ಬೀಳುತ್ತಾರೆ. ಒಂದೊಮ್ಮೆ ತಳೆದ ನಿರ್ಧಾರವನ್ನು ಹೇಳಿದರೂ ಅಂದುಕೊಂಡರೆ, ಮನೆಯ ಜನರ ಕೆಂಗಣ್ಣಿಗೂ ಗುರಿಯಾಗಿ ಬಿರುಕೂ ಉಂಟಾಗಬಹುದು, ವಿಚ್ಛೇದನಕ್ಕೂ ಹಾದಿಯಾಗಬಹುದು. ಇದು ಅತೀ ಜಟಿಲವಾದ ಸಾಮಾಜಿಕ ಸಮಸ್ಯೆ. ಆದರೆ ಸೂಕ್ಷ್ಮ ಏನಪ್ಪಾ ಅಂದರೆ ಇದು ಸಮಸ್ಯೆಯಾ? ಅಲ್ಲವೇ? ಎಂಬುದೇ ದೊಡ್ಡ ಜಟಿಲವಾದ ಸೂಕ್ಷ್ಮ.

ಈ ಜಟಿಲತೆಯನ್ನೂ ದಾಟಿದ್ದಾಯ್ತು ಎಂದರೆ ಅಲ್ಲಿಗೆ ಎಲ್ಲಾ ಮುಗೀತು ಅಂತಲ್ಲಾ, ಇದೇ ಹೊಸ ಆರಂಭ. ಮುಂದಿನ ಹಂತ ಮಕ್ಕಳನ್ನು ಬೆಳೆಸುವುದೇ ಜೀವನದ ಒಂದು ದೊಡ್ಡ ಪ್ರಾಜೆಕ್ಟ್ ಆಗಿ ಪರಿಣಮಿಸುತ್ತದೆ. ಅಂದು ನಾವು ದಿನಗಟ್ಟಲೆ ಬೀದಿಯಲ್ಲಿ ಆಡಿಕೊಳ್ಳುತ್ತಿದ್ದ ಕಾಲವಿತ್ತು. ಮನೆಯನ್ನು ಸೇರುತ್ತಿದ್ದುದೇ ಕತ್ತಲೆ ಕವಿದಾಗ.

ಆದರೆ ಇಂದು, ಮಕ್ಕಳಿಗೆ ನಿನ್ನಷ್ಟಕ್ಕೆ ನೀನು ಬೀದಿಯಲ್ಲಿ ಆಡಿಕೋ ಹೋಗು ಎಂದು ಹೇಳುವ ಹಾಗೆ ಇದೆಯೇ? ಮೊದಲಿಗೆ safety ಎನ್ನುವುದೇ ಇಲ್ಲ, ಜೊತೆಗೆ ಮೈದಾನ ಎಂಬುದೂ ಇಲ್ಲ. ಇದೆಲ್ಲದರಾಚೆಗೆ ಅಪ್ಪ-ಅಮ್ಮನಿಗಿಂತಾ ಹೆಚ್ಚಾಗಿ ಮಕ್ಕಳೇ ಹೆಚ್ಚು ಬ್ಯುಸಿ. ಬೆಳಿಗ್ಗೆ ಎದ್ದು ಸಮಯಕ್ಕೆ ಸರಿಯಾಗಿ ಸ್ಕೂಲು ವ್ಯಾನ್ ಹತ್ತುವುದೇ ಹರಸಾಹಸ.

ಶಾಲೆಯಾದ ಮೇಲೆ ಟ್ಯೂಷನ್, ಕರಾಟೆ, ಹಾಡು, ನೃತ್ಯ ಹೀಗೆ. ಹಾಡು ಎಂದರೆ ಬರೀ ಹವ್ಯಾಸವಲ್ಲ ಬದಲಿಗೆ ವಯಸ್ಸು ಹತ್ತು ವರ್ಷವಾಗಿರುವಾಗಲೇ ತಾರೆಯಾಗುವ ಹಂತಕ್ಕೆ ಹೋಗುವಷ್ಟು. ಬರೀ ಹಿರಿಯರ ಜೀವನ ಜಟಿಲವಾಗಿಲ್ಲ ಬದಲಿಗೆ ಮಕ್ಕಳ ಜೀವನ ಕೂಡ.

ಇಲ್ಲಿನ ಸೂಕ್ಷ್ಮ ಅರ್ಥಮಾಡಿಕೊಳ್ಳೋಣ. ಎಲ್ಲರೂ ಧ್ರುವತಾರೆಯಾಗಬಲ್ಲರೇ? ಇಲ್ಲ ಅಲ್ಲವೇ? ತಾರೆಯಾಗಲಾಗದ ಮಕ್ಕಳು ಸೋಲನ್ನು ಹೇಗೆ ಸ್ವೀಕರಿಸುತ್ತಾರೆ. ಖಂಡಿತ ನನಗೆ ಗೊತ್ತಿಲ್ಲ ಏಕೆಂದರೆ ಹತ್ತಿರದಿಂದ ನಾನು ಕಂಡಿಲ್ಲ. ಆದರೆ ಯಶಸ್ಸು ಪಡೆದವರು ಹೇಗೆ ಯಶಸ್ಸನ್ನು ತಲೆಗೇರಿಸಿಕೊಂಡು ಹಾದಿತಪ್ಪಬಹುದೋ ಅದೇ ಅಪಾಯವು ಸೋತವರನ್ನೂ ಕಾಡಬಹುದು ಎಂದು ಮಾತ್ರ ಅಂದುಕೊಳ್ಳಬಲ್ಲೆ.

ಹಾಗಿದ್ದರೆ ಮಕ್ಕಳು ಯಾವ ಲಲಿತಕಲೆಗಳನ್ನೂ ಕಲಿಯಬಾರದೇ? ಯಾವ ಸ್ಪರ್ಧೆಯಲ್ಲೂ ಭಾಗವಹಿಸಬಾರದೇ? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಬಹುದು ಅಲ್ಲವೇ? ಇಲ್ಲೇನು ಮಾಡಬೇಕು? ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಇರುವುದು ತಪ್ಪಲ್ಲಾ, ಆದರೆ ಗೆಲುವು ಪಡೆಯದೇ ಹೋದರೆ ಜೀವನ ದಂಡ ಎಂಬ ಮನೋಭಾವ ಬೇಡಾ ಅಷ್ಟೇ.

ಇದೆಲ್ಲದರಾಚೆಗೆ ಇರುವ ಅತೀ ಸೂಕ್ಷ್ಮ ಜಗತ್ತು ಎಂದರೆ ಸಾಮಾಜಿಕ ತಾಣ. ಬೆಳವಣಿಗೆಯ ಒಂದು ಹಂತ ದಾಟಿದ ನಂತರ ಮತ್ತು ವಯೋವೃದ್ಧರ ತನಕ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟಿರುವ ಜಗತ್ತು. ಇದನ್ನು ನಾವು ಹೇಗೆ ಬಳಸಿಕೊಳ್ಳಬೇಕೋ ಅಷ್ಟೇ ಬಳಸಿಕೊಂಡು ಇದ್ದಲ್ಲಿ ಈ ಸಾಮಾಜಿಕ ತಾಣ ನಿಜಕ್ಕೂ ಮಾಹಿತಿ ಜಗತ್ತೇ ನಿಜ. ಈ ಜಗತ್ತಿನಲ್ಲಿರುವ ಎಲ್ಲದರಲ್ಲೂ ಒಳಿತು ಕೆಡುಕು ಇರುವಂತೆ ಸಾಮಾಜಿಕ ತಾಣದಲ್ಲೂ ಮತ್ತು ಆಧುನಿಕ ತಂತ್ರಜ್ಞಾನದಲ್ಲೂ ಇದೆ. ಇದನ್ನು ಬಳಸಿಕೊಳ್ಳುವ ಬಗೆಯಲ್ಲಿ ಒಳಿತಿದೆ. ಸಾಮಾಜಿಕ ತಾಣ ಎಂದರೆ ಒಂದು ಕೈಯಲ್ಲಿ ಬೆಂಕಿಪೊಟ್ಟಣ ಮತ್ತೊಂದು ಕೈಯಲ್ಲಿ ಮದ್ದಿನ ಕಡ್ಡಿ. ಅದ್ಯಾವಾಗ ಅದು ಉಜ್ಜಿಕೊಂಡು ಕಿಡಿ ಹುಟ್ಟಿ ಕಾಳ್ಗಿಚ್ಚು ಆಗುತ್ತದೋ ಗೊತ್ತೇ ಆಗೋದಿಲ್ಲ.

ಜಗತ್ತಿನಲ್ಲಿ ಅಂದಿಗೂ ಇಂದಿಗೂ ಸಾಧನಗಳಿವೆ. ಜೀವವನ್ನೂ ತೆಗೆಯಬಹುದು, ಜೀವನವನ್ನೂ ಬೆಳಗಿಸಬಹುದು. ಬಳಕೆ ಮಾಡುವ ವಿಧಾನದ ಅರಿವು ನಮ್ಮಲ್ಲಿರಬೇಕು. ಇಂದು ಜಗತ್ತು ಜಟಿಲ ಮತ್ತು ಸೂಕ್ಷ್ಮವಾಗಿದೆ. ನಾಳೆ ಇನ್ನೂ ಜಟಿಲ ಮತ್ತು ಸೂಕ್ಷ್ಮವಾಗಲಿದೆ. ಈ ಸೂಕ್ಷ್ಮ ಜಗತ್ತಿನಲ್ಲಿ ಬಾಳುವ ಸೂಕ್ತವಾದ ಬುದ್ಧಿ ನಮ್ಮದಾಗಲಿ.

English summary
Today the world is forgetting old traditions and moving on to modern technologies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X