ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಹುಟ್ಟಿದ ದಿನದಿಂದ ಟಾಟಾ ಹೇಳುವ ತನಕ ಇದೊಂದು ಪುನರಾವರ್ತನೆಯ ಸಂತೆ

|
Google Oneindia Kannada News

ರಿಪೀಟ್ ಅಂದ್ರೆ ಪುನಃ ಮಾಡು ಅಥವಾ ಮಾಡಿದ್ದನ್ನೇ ಮತ್ತೊಮ್ಮೆ ಮಾಡು ಅಂತೆಲ್ಲಾ ಅರ್ಥವಿದೆ. ಇದು ಹೇಗೆ? ನಮ್ಮ ನಾರದ ಮಹರ್ಷಿಗಳನ್ನು ಚಲನಚಿತ್ರಗಳಲ್ಲಿ ನೋಡಿಯೇ ಇರುತ್ತೀರಾ. ನಾರದರು ಬಾಯಿ ಬಿಟ್ಟರೆ ಹೇಳೋದೇನು? ನಾರಾಯಣ ನಾರಾಯಣ ಅಂತ. ಎಂದಾದರೂ ಒಮ್ಮೆ ಸುಮ್ಮನೆ ನಾರಾಯಣ ಅಂತ ಹೇಳಿದ್ದಾರಾ? ಒಂದರ ಹಿಂದೆ ಮತ್ತೊಮ್ಮೆ ಹೇಳೋದು ರಿಪೀಟ್ ಅಥವಾ ಪುನರಾವರ್ತನೆ.

ಒಂದು ಸೀದಾ ಸಾದಾ ಲೈಫ್ ಉದಾಹರಣೆ ಕೊಡಿ ಅಂದ್ರಾ? ಒಬ್ಬ ವಿದ್ಯಾರ್ಥಿಯ ಜೀವನಕ್ಕೆ ಹೋಗೋಣ ಬನ್ನಿ. ಅಯ್ಯೋ ಪಾಪ sslc ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ ಅಂದುಕೊಳ್ಳಿ. ಎದುರಿಗೆ ಇದ್ದವರು ಸರಿಯಾಗಿ ಓದಿಲ್ಲ ಅಂದ್ರೆ ಪಾಪ ಇವನೇನು ಮಾಡಿಯಾನು ಎನ್ನಬೇಡಿ. ಒಮ್ಮೆ ಢಮ್ ಅಂದಿತು ಅಂತ ಸಪ್ಲಿಮೆಂಟರಿ ತೆಗೆದುಕೊಂಡರೆ ಮತ್ತೊಮ್ಮೆಯೂ ಹೀಗೆ ಆದರೆ ಇನ್ನೇನ್ ಮಾಡೋದು ಅಂತ ಮಗದೊಮ್ಮೆ ತೆಗೆದುಕೊಳ್ಳೋದನ್ನು ರಿಪೀಟ್ ಎನ್ನಬಹುದು.

ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ ಶ್ರೀನಾಥ್ ಭಲ್ಲೆ ಅಂಕಣ: ಒಮ್ಮೆ ಹಿಂದಿರುಗಿ ನೋಡುವ ಬಾ

ಒಂದಾನೊಂದು ಕಾಲದಲ್ಲಿ ಒಬ್ಬ ವಿದ್ಯಾರ್ಥಿ ಅರ್ಹತಾನುಸಾರ ಯಾವ ತರಗತಿಯಲ್ಲೂ ಡುಮ್ಕಿ ಹೊಡೆಯಬಹುದಿತ್ತು. ಈಗ ಹೊಸ ನಿಯಮಗಳು ಬಂದು, sslc ವರೆಗೂ ಎಲ್ಲಿಯೂ ನಿಲ್ಲದೇ ಮುಂದೆ ಹೋಗಬಹುದಂತೆ. ಅದು ಬಿಡಿ, ಈಗ ಮೂಲ ವಿಷಯಕ್ಕೆ ಬರೋಣ. ಹತ್ತನೆಯ ತರಗತಿ ಮುಂಚಿನ ತರಗತಿಗಳಲ್ಲಿ ಡುಮ್ಕಿ ಹೊಡೆದರೆ ಮತ್ತೊಮ್ಮೆ ಅದೇ ತರಗತಿ ಕಲಿಕೆಯನ್ನು ರಿಪೀಟ್ ಮಾಡಬೇಕಿತ್ತು. ಇಂಥಾ ರಿಪೀಟ್ ವಿದ್ಯಾರ್ಥಿಗಳ ಬಗ್ಗೆ ಒಂದು ಮಾತಿತ್ತು - ಹೋಗುವವರಿಗೆಲ್ಲಾ ತಮ್ಮ, ಬರುವವರಿಗೆಲ್ಲಾ ಅಣ್ಣ ಅಂತ. ಈಗ ಈ ಮಾತುಗಳು ಸವಕಲು ನಾಣ್ಯದಂತೆ. ಎಂಥಾ ಕಾಲ ಬಂತು ಸವಕಲು ನಾಣ್ಯ ಎಂಬ ಮಾತೂ ಸವಕಲು ನಾಣ್ಯವೇ! Demonetized ಎನ್ನಬೇಕು.

Srinath Bhalle Column: This Is A Recurring Life

ಹೋಗಲಿ ಬಿಡಿ, ವಿಕ್ರಮ - ಬೇತಾಳ ಕಥೆ ಗೊತ್ತಾ? ವಿಕ್ರಮನು ಬೇತಾಳವನ್ನು ಹೊತ್ತು ತರುತ್ತಾನೆ. ಆ ಬೇತಾಳವೋ ಕಥೆಯನ್ನು ಹೇಳೋದಲ್ಲದೇ ಫ್ರೀ ಆಗಿ ಪ್ರಶ್ನೆಯನ್ನೂ ನೀಡುತ್ತದೆ. ಆದರೆ ಬಿಟ್ಟಿಯಾಗಿ ಬಂದಿದ್ದಕ್ಕೆ ಬೆಲೆ ಇಲ್ಲ ಅಂತಾಗದಿರಲಿ ಅಂತ, ಉತ್ತರ ಗೊತ್ತಿದ್ದೂ ಹೇಳದೆ ಹೋದ್ರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ ಅಂತ ಕರಾರು ಹಾಕುತ್ತದೆ. ಸಂದಿಗ್ಧ ಏನೆಂದರೆ, ಮೌನಮುರಿದರೆ ಬೇತಾಳ ವಾಪಸ್ ಹೋಗುತ್ತದೆ. ಇನ್ನೇನು ಮಾಡಿಯಾನು ವಿಕ್ರಮ, ಪ್ರತೀ ಬಾರಿಯೂ ಉತ್ತರ ಹೇಳಿಬಿಡುತ್ತಾನೆ. ವಿಕ್ರಮ ಉತ್ತರ ಹೇಳಿದ ಮೇಲೆ ಬೇತಾಳ ತಾ ಹೇಳಿದಂತೆ ವಾಪಸ್ ಹೋಗುತ್ತದೆ. ಮತ್ತೆ ನಮ್ಮ ವಿಕ್ರಮ, ರಿಪೀಟ್ ಅಂತ ಮತ್ತೆ ಬೇತಾಳವನ್ನು ಹೊತ್ತು ತರಲು ಹೋಗುತ್ತಾನೆ.

ಡುಮ್ಕಿ ಹೊಡೆದ ವಿದ್ಯಾರ್ಥಿಗೂ, ಈ ವಿಕ್ರಮನಿಗೂ ಒಂದಷ್ಟು ಹೋಲಿಕೆ ಇದೆ. ವಿದ್ಯಾರ್ಥಿಗಳು ಎಂದ ಮೇಲೆ ಗುರುಗಳನ್ನು ಬಿಡಲಾದೀತೇ? ಒಂದು ಉದಾಹರಣೆ ತೆಗೆದುಕೊಂಡರೆ, ಹೈಸ್ಕೂಲ್ ಟೀಚರ್ ಆಗಿ ಹಲವಾರು ವರುಷಗಳ ಅನುಭವ ಇರುವ ಗುರುಗಳು ಮೂರು ವರುಷಗಳ syllabus ಅನ್ನು ಅದೆಷ್ಟು ಸಾರಿ ರಿಪೀಟ್ ಮಾಡಿರಬಹುದು ಅಂತ ಯೋಚಿಸಿ ನೋಡಿ. ಸಾಮಾನ್ಯವಾಗಿ ಎಲ್ಲಾ ಗುರುಗಳು ಏನಾದರೂ ಬದಲಾವಣೆ ಮಾಡಿಯೇ ಹೇಳಿಕೊಡುತ್ತಾರಾದರೂ, ಯಾರೋ ಒಬ್ಬರು ಒಂದೇ ನೋಟ್ಸ್ ಅನ್ನು ಹತ್ತು ವರ್ಷಗಳು ಓಡಿಸಿದ್ದರು ಅಂತ ಕೇಳಿದ್ದೆ. ಈ ಅಭ್ಯಾಸ ಸ್ವಂತ ಬೆಳವಣಿಗೆಗೂ ಒಳಿತಲ್ಲ, ವಿದ್ಯಾರ್ಥಿಗಳಿಗಂತೂ ಒಳಿತೇ ಅಲ್ಲ.

ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಕಳೆದ ಐದೋ ಹತ್ತೋ ವರುಷಗಳ ಪ್ರಶ್ನೆಪತ್ರಿಕೆಯನ್ನು ಅಭ್ಯಾಸ ಮಾಡಿರುತ್ತಾರೆ. ಒಂದು ನಂಬಿಕೆ ಅಥವಾ ಗಮನಿಸಿರುವ ಅಂಶದ ಪ್ರಕಾರ ಹಲವಾರು ಪ್ರಶ್ನೆಗಳು ಸದ್ಯದ ಪರೀಕ್ಷೆಯಲ್ಲಿ ರಿಪೀಟ್ ಆಗುವ ಸಂಭವ ಇರುತ್ತದೆ ಎಂಬುದು.

ಮಗ್ಗಿ ಉರು ಹೊಡೆದು ಅಭ್ಯಾಸ ಇದೆಯಾ? ಪದ್ಯವನ್ನು ಉರು ಹೊಡೆದು ಅಭ್ಯಾಸ ಇದೆಯಾ? ಮನೆಯಲ್ಲಿ ಚೆನ್ನಾಗಿ ಉರು ಹೊಡ್ಕೊಂಡ್ ಹೋಗಿದ್ರೂ, ಟೀಚರ್ ಕೇಳಿದಾಗ ಬೆ ಬೆ ಬೆ ಅಂದಿದ್ದು ಇಲ್ಲಿನ ವಿಷಯವಲ್ಲ. ಮೊದಲಿಗೆ ಈ ಉರು ಹೊಡೆಯೋದು ಅನ್ನೋದೇ ರಿಪೀಟ್ ಮಾಡೋದು ಅಂತ. ಇದ್ದದ್ದು ಇದ್ದ ಹಾಗೆಯೇ ಒದರಿಬಿಡೋದು. ಅಲ್ಲಿ ಯಾವ ಭಾವನೆಗೂ ಆಸ್ಪದವೇ ಇರುವುದಿಲ್ಲ. ನಾಟಕದ ತಾಲೀಮಿನಲ್ಲಿ ಹೀಗೆಯೇ ಆಗೋದು. ಉರು ಹೊಡೆದ ಡೈಲಾಗ್ ಹೇಳುವಾಗ ಭಾವನೆ ಉಡೀಸ್. ಇದರ ಜೊತೆಗೆ ಬೆ ಬೆ ಬೆ ಅಂತ ಅನ್ನೋದೂ ರಿಪೀಟ್ ಅಲ್ಲವೇ? ಯಾರಾದರೂ ಒಮ್ಮೆ ಬೆ ಅಂತಂದು ಸುಮ್ಮನಾಗುವರೇ?

ಚಿಕ್ಕವನಿರುವಾಗ ಯಾವುದೋ ಒಂದು ಹಾಡಿನ ಸ್ಪರ್ಧೆಗೆ ಹೋಗಿದ್ದೆ. ಹೋಗುವಾಗ ಇದ್ದ ಶೌರ್ಯ ಅಲ್ಲಿಗೆ ಹೋದ ಮೇಲೆ ಇರಲಿಲ್ಲ. ಅದು ಬೇರೆ ವಿಷಯ, ಆದರೆ ನನ್ನ೦ತೆಯೇ ಹಲವರಿಗೆ ಇದೇ ಟೆನ್ಷನ್ ಆಗಿತ್ತು. ಒಬ್ಬ ಸ್ಟೇಜಿನ ಮೇಲೇರಿ, ಯಾವ ಹಾಡು ಶುರು ಮಾಡಿದನೋ ನೆನಪಿಲ್ಲ ಆದರೆ ಅಡಿಗಡಿಗೆ ಎಂಬ ಪದ ಅವನ ಗಂಟಲಲ್ಲೇ ಸಿಕ್ಕಿಕೊಂಡು ಅಡಿಗೆ ಅಡಿಗೆ ಅಂತ ಅದೆಷ್ಟು ಸಾರಿ ರಿಪೀಟ್ ಆಯ್ತೋ ಗೊತ್ತಿಲ್ಲ ಪಾಪ. ಮುಂದೆ ಸಾಗಲಾರದೆ ಸ್ಟೇಜಿನಿಂದ ಇಳಿದೇಬಿಟ್ಟ.

ಸಂಗೀತದ ತರಗತಿಗಳ ಒಂದು ಅವಿಭಾಜ್ಯ ಕಲಿಕೆ ಎಂದರೆ ಜಂಟಿ ವರಸೆ. ಯಾವ ಉದಾಹರಣೆಯಲ್ಲೂ ಪುನರಾವರ್ತನೆ ಅರಿವಿಗೆ ಬಾರದಿದ್ದರೆ ಇಲ್ಲಂತೂ ಖಂಡಿತ ಅರ್ಥವಾಗುತ್ತದೆ. ಕೆಲವೊಮ್ಮೆ ಡಿಸ್ಕ್ ನಲ್ಲಿ ಮೂಡಿ ಬರುವ ಹಾಡು ಒಂದೇ ಕಡೆ ಕಚ್ಚಿಕೊಂಡು ಹಾಡಿದ್ದೇ ಹಾಡುವುದೂ ರಿಪೀಟ್.

ಇಷ್ಟೆಲ್ಲಾ ಹೇಳಿ ಕೊಂಚ ಹಿಂದಿನ ಕಾಲಕ್ಕೆ ಹೋಗಿ ಬರದಿದ್ದರೆ ಹೇಗೆ? ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬುದೂ ರಿಪೀಟ್. ಋತುಗಳು ಒಮ್ಮೆ ಕಳೆದು ಮತ್ತೆ ಬರುವುದು ಪುನರಾವರ್ತನೆ. ಮರಗಿಡಗಳಲ್ಲಿ ಮೂಡಿರುವ ಎಲೆಗಳು ಉದುರಿದ ಮೇಲೆ ಅವು ಬೋಳಾಗಿ ಮತ್ತೆ ಚಿಗುರಿ ನಲಿಯುವ ಕ್ರಿಯೆಯೂ ಪುನರಾವರ್ತನೆ. ಕೃಷ್ಣಾಷ್ಟಮಿಯ ಸಮಯದಲ್ಲಿ ಅರ್ಘ್ಯ ಕೊಡುವಾಗ ಇದಮರ್ಘ್ಯಮ್, ಇದಮರ್ಘ್ಯಮ್, ಇದಮರ್ಘ್ಯಮ್ ಎಂಬುದೂ ಪುನರಾವರ್ತನೆ. ಶ್ರೀಕೃಷ್ಣನ ವಾಣಿಯಾದ ಸಂಭವಾಮಿ ಯುಗೇ ಯುಗೇ ಕೂಡಾ ಪುನರಾವರ್ತನೆಯೇ.

ಜೀವನ ಒಂದು ಆಟದಂತೆ ಎಂಬುದು ವೇದಾಂತಿಗಳ ಮಾತು ಅಂತ ಅಂದುಕೊಳ್ಳದಿರಿ. ಇಂದು ಮೇಲಿದ್ದ ನಾಳೆ ಕೆಳಕ್ಕೆ ಬರಬಹುದು. ಇಂದಿನ ಹೀರೋ ನಾಳಿನ ಜೀರೋ ಆಗಬಹುದು. ಅಥವಾ ನೆನ್ನೆಯ ಜೀರೋ ಇಂದಿನ ಹೀರೊ ಕೂಡಾ ಆಗಬಹುದು. ಎಲ್ಲವೂ ನಮ್ಮ forehead ಮೇಲೆ ಬರೆದಂತೆಯೇ ಆಗೋದು, ಏನಂತೀರಿ? ಒಮ್ಮೆ ಮೇಲೆ, ಇನ್ನೊಮ್ಮೆ ಕೆಳಗೆ, ಒಮ್ಮೆ ಕೆಳಗೆ, ಮತ್ತೊಮ್ಮೆ ಕೆಳಗೆ ಎಂಬುದೇ ನಮ್ಮ ಜೀವನದ ಅನಿವಾರ್ಯದ ರಿಪೀಟ್.

ಒಂದು ಗೋಡೆ ಗಡಿಯಾರವನ್ನು ಉದಾಹರಣೆ ತೆಗೆದುಕೊಳ್ಳಿ. ಅದಕ್ಕೊಂದು ಪೆಂಡುಲಮ್ ಅಥವಾ ಲೋಲಕ. ಈ ಲೋಲಕದ ಕೆಲಸವೇನು? ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆ. ಅಯ್ಯೋ ಪಾಪ ಈ ಲೋಲಕದಷ್ಟು ರಿಪೀಟ್ ಕೆಲಸ ಮತ್ತೊಂದು ವಸ್ತುವಿನಲ್ಲಿ ನಾನಂತೂ ಕಂಡಿಲ್ಲ. ಒಂದರ್ಥದಲ್ಲಿ ಇಡೀ ಗಡಿಯಾರದ ಕೆಲಸವೇ ರಿಪೀಟ್ ಸಂತೆ. ಸೆಕೆಂಡುಗಳ ಮುಳ್ಳು ಉಧೋ ಅಂತ ಓಡಿದ್ದೂ ಓಡಿದ್ದೇ. ಅದು ಓಡುತ್ತೆ ನಾನೇನ್ ಕಡಿಮೆ ಅಂತ ನಿಮಿಷಗಳ ಮುಳ್ಳು ತಾನೂ ಓಡುತ್ತೆ ಆದರೆ ಕೊಂಚ ನಿಧಾನ. ತಾನು ಗಡಿಯಾರದ ಹಿರಿಯ ಮುಳ್ಳು ಅಂತ ಮತ್ತೂ ನಿಧಾನವಾಗಿ ಘಂಟೆಯ ಮುಳ್ಳು ತಾನೂ ಓಡುತ್ತೆ. ಒಂದೊಂದೂ ಮುಳ್ಳುಗಳದ್ದು ಒಂದೊಂದು ರಿಪೀಟ್ ಕಥೆ.

ಧಾರಾಕಾರ ವಾಗಿ ಹರಿದು ಬರುವ , ಹರಿದು ತಿನ್ನುವ ಧಾರಾವಾಹಿಗಳು ಮರುದಿನ ಮತ್ತೊಮ್ಮೆ ಮೂಡಿ ಬರುವುದು ರಿಪೀಟ್ telecast. ಕೆಲವರು ಹೀಗೆ ಹೇಳ್ತಾರೆ ನನ್ನ ಹೆಸರು ಕವಿತಾ ಆದರೂ ಎಲ್ರೂ ನನ್ನನ್ನ ಕವೀ ಕವೀ ಅಂತಾನೆ ಕರೆಯೋದು. ಇದೊಂದು ರೀತಿ ಪುನರಾವರ್ತನೆ ತಾನೇ?

ಜೀವನದಲ್ಲಿ ಈ ಪುನರಾವರ್ತನೆ ಎಂಬುದು ಇಲ್ಲದಿರಲು ಸಾಧ್ಯವೇ ಇಲ್ಲ. ಇರುವಾ ತನಕ ಬೆಳಿಗ್ಗೆ ಏಳುವುದು, ರಾತ್ರಿ ಮಲಗೋದು ಪುನರಾವರ್ತನೆ. ದಿನನಿತ್ಯದಲ್ಲಿ ಅಡುಗೆ ಕೆಲಸ, ಊಟ, ತಿಂಡಿ ಸಿದ್ದ ಮಾಡೋದು ಅಥವಾ ಊಟ ಮಾಡುವುದೂ ಪುನರಾವರ್ತನೆಯೇ. ಜೊತೆಗೆ ನಾಳೆ ಬೆಳಕು ಹರಿದರೆ ತಿಂಡಿಗೇನು ಎಂದು ಚಿಂತಿಸುವುದೂ ರಿಪೀಟ್. ಪ್ರತೀ ವಾರ ಅಂಕಣಕ್ಕೆ ಬರೆಯುವುದೂ ಪುನರಾವರ್ತನೆಯೇ. ಒಟ್ಟಾರೆ ಹೇಳೋದಾದರೆ ಹುಟ್ಟಿದ ದಿನದಿಂದ ಟಾಟಾ ಹೇಳುವಾ ತನಕ ಇದೊಂದು ಪುನರಾವರ್ತನೆಯ ಸಂತೆ. ನೀವೇನಂತೀರಾ?

ಪುನರಪಿ ಜನನಂ ಪುನರಪಿ ಮರಣಂ ಎಂಬುದು ಪುನರಾವರ್ತನೆ ಎಂಬುದಕ್ಕೆ ಉತ್ತಮ ಉದಾಹರಣೆ. ಆತ್ಮಕ್ಕೆ ಸಾವಿಲ್ಲ ಎಂಬುದೂ ರಿಪೀಟ್ ಅಂದ್ರಾ?

English summary
This is a recurring life from the day of birth till die.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X