• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ; ಅಷ್ಟು ಇಷ್ಟಾಗಿದ್ದು, ಇಷ್ಟು ಅಷ್ಟಾಗಿದ್ದು...

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಕೊಂಚ ಗೊಂದಲವಾಗಿದೆ. ಇಷ್ಟು ಅಷ್ಟಾಗಿದ್ದು ಅಥವಾ ಅಷ್ಟು ಇಷ್ಟಾಗಿದ್ದು ಎಂದರೇನು? ಈ ವಿಷಯದ ತಲೆಬರಹ ಇಷ್ಟು ಅಂತ ನೀವು ಅಂದುಕೊಂಡರೆ ಅದು ಅಷ್ಟಾಗಬಹುದು. ಈ ವಿಷಯದ ತಲೆಬರಹ ಅಷ್ಟು ಅಂತಾದರೆ ಇಷ್ಟೂ ಆಗಬಹುದು. ಈ ಅಷ್ಟು ಇಷ್ಟು ಎಲ್ಲವೂ ಮಾಪನಾನುಸಾರ ಅಷ್ಟೇ.

ಮೊದಲಿಗೆ ಈ ಅಷ್ಟು ಮತ್ತು ಇಷ್ಟನ್ನು, ಅಡುಗೆ ಮನೆಯಿಂದಲೇ ಆರಂಭಿಸೋಣ, ಆಗ ವಿಷಯ ಕಷ್ಟವಾಗದೆ ಎಲ್ಲವೂ ಸ್ಫಟಿಕ ಮಣಿಯಂತೆಯೇ ಸ್ಪಷ್ಟವಾಗುತ್ತದೆ. ನಾಲ್ಕಾರು ಕಂತೆ ಮೆಂತ್ಯೆ ಅಥವಾ ದಂಟಿನ ಸೊಪ್ಪು ಕೊಂಡು ತಂದಾಗ ರಾಶಿ ಅನ್ನಿಸುತ್ತದೆ. ಎಲೆಗಳನ್ನು ಬಿಡಿಸಿಕೊಂಡು ಗುಡ್ಡೆ ಹಾಕಿದಾಗ ರಾಶಿ ಕರಗಿ ಅಷ್ಟು ಇರೋದು ಇಷ್ಟಾಗುತ್ತದೆ. ಆ ನಂತರ ಅದನ್ನು ಬೇಯಿಸಿ ಪಲ್ಯೆ ಮಾಡಿದಾಗ ಆ ಅಷ್ಟು ಮತ್ತೂ ಇಷ್ಟಾಗುತ್ತದೆ. ಆದರೆ ಆ ಅಷ್ಟನ್ನು ನೇರವಾಗಿ ತಿನ್ನಲಾರದೆ ಈ ಇಷ್ಟನ್ನು ಉಂಡಾಗ ಸವಿ ಮಾತ್ರ ಅಷ್ಟು ಹಿರಿದಾಗಿರುತ್ತದೆ ಅನ್ನೋದು ಸತ್ಯ. ಹೌದು ತಾನೇ?

ಶ್ರೀನಾಥ್ ಭಲ್ಲೆ ಅಂಕಣ; ಮನೋಭಾವವೇ ಎಲ್ಲಾ, ಮನೋಭಾವದಿಂದಲೇ ಎಲ್ಲಾ

ಇದೇ ವಿಚಾರವನ್ನು ಬೆಂಡೆಕಾಯಿಗೂ ಹೋಲಿಸಿ ನೋಡಿ. ಅಷ್ಟು ಬೆಂಡೆಕಾಯಿ ಹೊತ್ತು ತಂದು, ತೊಳೆದು, ಅದರ ತಲೆ ಮತ್ತು ಕಾಲನ್ನು ಕಡಿದು, ಮಿಕ್ಕ ಭಾಗವನ್ನು ತುಂಡು ಮಾಡಿದಾಗ ಅಷ್ಟು ಇದ್ದಿದ್ದು ಬಹುಶಃ ಅಷ್ಟಾಗಿಯೇ ಕಾಣುತ್ತದೆ. ಚಪಾತಿಯ ಜೊತೆ, ನಂತರ ಅನ್ನದ ಜೊತೆ ಕೊನೆಯಲ್ಲಿ ಮಜ್ಜಿಗೆ ಅನ್ನಕ್ಕೂ ಕಲೆಸಿಕೊಂಡು ತಿನ್ನಬಹುದು ಎಂದು ಮನದಲ್ಲೇ ಮಂಡಿಗೆ ಸವಿಯುವಂತೆ ಆಗೋದು ಸಹಜ. ಆ ನಂತರ ಕತ್ತರಿಸಿಟ್ಟುಕೊಂಡ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಬಾಡಿಸಿ, ಬೇಯಿಸಿ, ಉಪ್ಪು ಖಾರ ಎಲ್ಲವನ್ನೂ ಹಾಕಿ ಸಿದ್ಧವಾದ ಮೇಲೆ ನೋಡಿದಾಗಲೇ ಗೊತ್ತಾಗೋದು ಒಂದು ಚಪಾತಿ ದಾಟಿ ಎರಡನೆಯ ಚಪಾತಿಗೂ ಕಡಿಮೆಯಾಗಬಹುದು ಅಂತ. ಇದನ್ನೇ ಹೇಳಿದ್ದು ಅಷ್ಟಿರೋದು ಇಷ್ಟಾಗೋದು ಅಂತ.

ಈ ಕಲಿಯುಗದ ಅಡುಗೆಯ ಮನೆಯಿಂದ ಸೀದಾ ಕೃತಯುಗ, ತ್ರೇತಾಯುಗ ಮತ್ತು ದ್ವಾಪರಕ್ಕೂ ಹೋಗಿಬರೋಣ ಬನ್ನಿ. ಇಲ್ಲೂ ಸಾಕಷ್ಟು ಸನ್ನಿವೇಶಗಳಲ್ಲಿ ಇಷ್ಟು ಅಷ್ಟಾಗಿದ್ದು ಮತ್ತು ಅಷ್ಟು ಇಷ್ಟಾದ ಕಥೆಗಳಿವೆ.

ಬಲಿ ಚಕ್ರವರ್ತಿಯ ಬಳಿಗೆ ಬಂದ ಬ್ರಹ್ಮಚಾರಿ ವಾಮನ ಇದ್ದಿದ್ದು ಇಷ್ಟೇ. ಬಲಿ ಚಕ್ರವರ್ತಿಯು, ಏನ್ನನ್ನೂ ಬೇಕಾದರೂ ಕೇಳು ಕೊಡುತ್ತೇನೆ ಎಂದು ಜಗತ್ತಿನ ತಂದೆಗೇ ವಚನ ನೀಡಿದಾಗ, ಆ ಪುಟ್ಟ ಮಹಾಶಯ ಕೇಳಿದ್ದು ಕೇವಲ ಮೂರು ಹೆಜ್ಜೆ ಜಾಗ ಮಾತ್ರ. ಬಲಿ ಚಕ್ರವರ್ತಿಯು ಕೊಡುತ್ತೇನೆ ಎಂದು ವಾಗ್ದಾನ ಮಾಡಿದ ಮೇಲೆ ಆ ವಾಮನ ತ್ರಿವಿಕ್ರಮನಾಗುತ್ತಾನೆ. ಮುಂದಿನ ಕಥೆ ಬೇಕಿಲ್ಲ, ಆದರೆ, ಇಷ್ಟಿದ್ದ ಆ ವಾಮನ, ತ್ರಿವಿಕ್ರಮನಾಗಿ ಅಷ್ಟಾಗುತ್ತಾನೆ ಎಂಬುದೇ ಇಲ್ಲಿನ ವಿಷಯ.

ಶ್ರೀನಾಥ್ ಭಲ್ಲೆ ಅಂಕಣ; ಪೋಪು ಹೋಗೋಣ ಬಾರೋ ರಂಗ

ಇನ್ನು ಭಗೀರಥನ ಕಥೆಯ ಒಂದು ಹಂತದಲ್ಲಿ, ಗಂಗೆಯು ಭುವಿಯ ಮೇಲೆ ಹರಿದು ಬರುವಾಗ ಜಹ್ನು ಎಂಬ ಮಹರ್ಷಿಯ ಮನೆಯನ್ನು ಕೊಚ್ಚಿಕೊಂಡು ಸಾಗುತ್ತ ಅವನ ತಪೋಭಂಗವನ್ನೂ ಮಾಡುತ್ತಾಳೆ. ಇದರಿಂದ ಕುಪಿತಗೊಂಡ ಆ ಮಹರ್ಷಿಯು ಗಂಗೆಯ ಅಹಂಕಾರವನ್ನು ಮುರಿಯಲು, ಇಡೀ ಗಂಗೆಯನ್ನು ತನ್ನ ಅಂಗೈಯಲ್ಲಿ ತೆಗೆದುಕೊಂಡು ಕುಡಿದುಬಿಡುತ್ತಾನೆ. ಅರ್ಥಾತ್ ಅಷ್ಟಿದ್ದ ಗಂಗೆಯು ಮಹರ್ಷಿಯ ಅಂಗೈಯಲ್ಲಿ ಇಷ್ಟೇ ಆದಳು ಅಂತ.

ಇನ್ನು ಹನುಮನ ಕಥೆ. ಸೀತೆಯನ್ನು ಹುಡುಕಿಕೊಂಡು ಬರಲು ಮಹಾ ಸಮುದ್ರವನ್ನು ಹಾರಿ ದಾಟಿ, ಲಂಕೆಯನ್ನು ತಲುಪಿ ನಂತರ ವಾಪಸ್ಸಾಗುವ ಮುನ್ನ ಎಷ್ಟೋ ಸಂದರ್ಭಗಳಲ್ಲಿ ತನ್ನ ದೇಹವನ್ನು ಕಿರಿದಾಗಿಸಿದ್ದೂ ಇದೆ, ಹಿರಿದಾಗಿಸಿದ್ದೂ ಇದೆ. ಹನುಮ ಹಲವೊಮ್ಮೆ ಇಷ್ಟಿದ್ದವ ಅಷ್ಟಾದ, ಹಲವೊಮ್ಮೆ ಅಷ್ಟಿದ್ದವ ಇಷ್ಟಾದ ಅಂತ ಹೇಳುವುದೇ ಸರಿ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ರೀತಿ ಆದ ಎಂಬುದನ್ನು ನೀವೇ ಹೇಳಿ ಆಯ್ತಾ?

ಶ್ರೀನಾಥ್ ಭಲ್ಲೆ ಅಂಕಣ; ಹೀಗೊಂದು ಡಬ್ಬ ಬರಹ...

ಅರಣ್ಯ ಪರ್ವದ ಸಂದರ್ಭದಲ್ಲಿ ದ್ರೌಪದಿಗೆ ಪುಷ್ಪವನ್ನು ತಂದುಕೊಡಲು ಹೊರಟಿದ್ದ ಭೀಮಸೇನನಿಗೆ ಅಡ್ಡ ಬಂದಿದ್ದು ಇಷ್ಟೇ ಇರುವ ಒಂದು ಕಪಿ. ಆ ನಂತರ ಆ ಕಪಿಯ ಬಾಲವನ್ನು ಎತ್ತಲೂ ಸೋತ ಭೀಮನ ಅರಿವಿಗೆ ಬಂದಿದ್ದು ಅದೊಂದು ಸಾಮಾನ್ಯ ಕಪಿಯಲ್ಲ ಬದಲಿಗೆ ಸಾಕ್ಷಾತ್ ಹನುಮಂತ ಅಂತ. ನಂತರದಲ್ಲಿ ಹನುಮನ ವಿರಾಟ ರೂಪ ನೋಡಲು ಬಯಸಿದ ಭೀಮನ ಮುಂದೆ ಇಷ್ಟೇ ಇದ್ದ ಆ ಕಪಿ ಅಷ್ಟಾದಾಗ ಭೀಮನೇ ಭೀತನಾದ ಎಂದು ಕಥೆ ಹೇಳುತ್ತದೆ.

ಇನ್ನು ನಮ್ಮ ಶ್ರೀಕೃಷ್ಣ ಪರಮಾತ್ಮ. ಬಾಲ್ಯದಲ್ಲಿ ಇಷ್ಟಿದ್ದ ಪರಮಾತ್ಮನು ಬಾಯಿ ತೆರೆದಾಗ ಅಷ್ಟಿದ್ದ ಭೂಮಂಡಲವನ್ನೇ ತನ್ನ ಇಷ್ಟಿದ್ದ ಬಾಯಲ್ಲಿ ತೋರಿಸಿದ್ದ. ಆ ನಂತರ, ಒಮ್ಮೆ ದುರ್ಯೋಧನನ ಆಸ್ಥಾನದಲ್ಲಿ ಮತ್ತೊಮ್ಮೆ ಕುರುಕ್ಷೇತ್ರದ ರಣಭೂಮಿಯಲ್ಲಿ ತನ್ನ ವಿರಾಟರೂಪವನ್ನು ತೋರಿದ್ದ. ಇಷ್ಟಿದ್ದವ ತಾನು ಬರೀ ಇಷ್ಟೇ ಅಲ್ಲ ಅಷ್ಟಾಗಬಲ್ಲೆ ಎಂದು ಜಗಕ್ಕೆ ತೋರಿದ್ದ.

ಮೂರೂ ಯುಗಗಳಿಗೆ ಭೇಟಿ ಕೊಟ್ಟ ಮೇಲೆ ಮತ್ತೆ ಕಲಿಯುಗಕ್ಕೆ ಮರಳೋಣ ಬನ್ನಿ. ತಿರುಪತಿ ತಿಮ್ಮಪ್ಪನ ದರ್ಶನ ಬಹುಶಃ ಹಲವರು ಮಾಡಿರುತ್ತೀರಿ. ಅಷ್ಟು ದೂರ ಹೋಗಿ, ಕೆಲವೊಮ್ಮೆ ಅಷ್ಟೂ ಮೆಟ್ಟಿಲುಗಳನ್ನು ಏರಿ, ಅಷ್ಟು ಹೊತ್ತು ಸಾಲಿನಲ್ಲಿ ನಿಂತು ಅಥವಾ ಕೂತು, ಕೊನೆಗೆ ಪದಂಡಿ ಪದಂಡಿ ಮಧ್ಯೆ ಇಷ್ಟೇ ಹೊತ್ತು ಭಗವಂತನ ದರ್ಶನ ಪಡೆದರೂ ಇಷ್ಟೇ ಆದರೂ ಅಷ್ಟು ಎಂಬ ಭಾವ ಮೂಡುತ್ತದೆ ಎಂದೇ ನಮ್ಮ ಅನುಭವ. ಹೌದು ತಾನೇ?

ಪಾಪ್ ಕಾರ್ನ್ ಗೊತ್ತಲ್ಲವೇ? ಜೋಳದ ಕಾಳುಗಳು ಅಂಗೈಯಲ್ಲಿ ಹಿಡಿಯುವಷ್ಟೇ ಇದ್ದರೂ, ಅವನ್ನು ಆ ಮೆಷೀನಿನಲ್ಲಿ ಹಾಕಿ ಚಟಪಟ ಅನ್ನಿಸಿದಾಗ ಇಷ್ಟಿದ್ದಿದ್ದು ಅಷ್ಟಾಗುತ್ತದೆ. ಯಾವುದೇ ಒಂದು ಹೆಮ್ಮರವೂ ಒಂದು ಇಷ್ಟೇ ಇರುವ ಬೀಜದಿಂದಲೇ ಅಲ್ಲವೇ ಹುಟ್ಟಿ ಬೆಳೆದದ್ದು. ಈ ತತ್ವ ಮಾನವ ದೇಹಕ್ಕೂ ಭಿನ್ನವೇನಲ್ಲ.

ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆಯ ಮಾತಿನ ಮೂಲವೂ ಇದೇ ಇಷ್ಟು ಮತ್ತು ಅಷ್ಟು. ಮಕ್ಕಳ ಕಲಿಕೆಯ ಆರಂಭದ ದಿನಗಳಲ್ಲಿನ ಇಷ್ಟೇ ಎನ್ನಬಹುದಾದ ಅ, ಆ, ಇ, ಈ ಅಥವಾ ಎ, ಬಿ, ಸಿ, ಡಿ ಮುಂತಾದವುಗಳೇ ಆ ನಂತರ ಅಷ್ಟಾಗಿ ಬೆಳೆಯೋದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಯ ರಹಸ್ಯವೂ ಇದೇ. ದಿನನಿತ್ಯದ ಕಲಿಕೆಯಲ್ಲಿ ಆ ವ್ಯಕ್ತಿಯಲ್ಲಿ ಸೇರಿಕೊಂಡ ವಿಚಾರಧಾರೆಯೇ ದಿನಗಳೆದಂತೆ ಅಷ್ಟಾಗಿ ಬೆಳೆದು ನಿಲ್ಲೋದು. ದುರ್ಯೋಧನ ಒಮ್ಮೆಲೇ ದುಷ್ಟತನದಲಿ ಅಷ್ಟಾಗಿ ಬೆಳೆದು ನಿಲ್ಲಲಿಲ್ಲ. ಇಷ್ಟಿಷ್ಟೇ ಪೋಷಣೆಯು ದಿನನಿತ್ಯದಲ್ಲಿ ಅಷ್ಟಾಗಿ ಬೆಳೆದು ನಿಂತಿತ್ತು.

ದಿನನಿತ್ಯದಲ್ಲಿ ನಮಗೆ ಕಂಡು ಬರುವ ಮತ್ತೊಂದು ದಿವ್ಯವಾದ ಉದಾಹರಣೆ ಎಂದರೆ ಕೆಲವರು ಇಷ್ಟೇ ಕೆಲಸ ಮಾಡಿ ಅಷ್ಟು ಮಾಡಿದವರಂತೆ ಕೊಚ್ಚಿಕೊಳ್ಳೋದು ಮತ್ತು ಅಷ್ಟು ಕೆಲಸ ಮಾಡಿದ್ದರೂ ಇಷ್ಟೇ ಕೆಲಸ ಮಾಡಿದೆ ಎಂಬಂತೆ ಹೇಳೋದು. ಇದು ಹೇಗೆ ಎಂದರೆ ತಾನು ಹತ್ತು ಯೋಜನೆ ದಾಟಿದೆ ಎಂದು ಹೇಳಿಕೊಳ್ಳುವ ಕಪಿ ಒಂದೆಡೆಯಾದರೆ, ಇನ್ನೊಂದೆಡೆಗೆ, ಏನಿಲ್ಲ ಮಹಾಸಮುದ್ರ ಹಾರಿ, ರಕ್ಕಸರ ನಾಡಿನಲ್ಲಿ ಸೀತೆಯನ್ನು ನೋಡಿಕೊಂಡು ಬಂದೆ ಎಂಬ ಹನುಮ ಇದ್ದಂತೆ.

ದಿನನಿತ್ಯದಲ್ಲಿ ಜ್ಞಾನ ಬೆಳೆಸಿಕೊಂಡಂತೆ ಇಷ್ಟಿದ್ದ ನಾವು ಅಷ್ಟಾಗುತ್ತೇವೆ. ಆದರೆ ಪ್ರತೀ ಬಾರಿಯೂ ಅಷ್ಟಾದಾಗ ನಮಗಿಂತಾ ಅಷ್ಟಿರುವವರು ಇದ್ದೇ ಇರುತ್ತಾರೆ ಎಂಬುದು ನೆನಪಿದ್ದರೆ ಒಳಿತು, ಆಗ ನಾವೇ ಅಷ್ಟು ಎಂಬ ಅಹಂಭಾವ ಹತ್ತಿರವೂ ಸುಳಿಯುವುದಿಲ್ಲ.

ಕಣ್ಣಿಗೂ ಕಾಣದ ಇಷ್ಟೇ ಎಂದುಕೊಂಡಿದ್ದ ಮಹಾಮಾರಿ ಇಂದು ಅಷ್ಟಾಗಿ ಬೆಳೆದು ನಿಂತಿದೆ. ಅದನ್ನು ಮತ್ತೂ ಪೋಷಿಸಿ ಬೆಳೆಯುವಂತೆ ಮಾಡುವುದು ಬೇಡ. ಈಗಲಾದರೂ, ಅಷ್ಟಾಗಿ ಬೆಳೆದು ನಿಂತಿರುವುದನ್ನು ಇಷ್ಟಾಗಿ ಮಾಡುವತ್ತ ದಿನನಿತ್ಯವೂ ಶ್ರಮಿಸೋಣ. ಏನಂತೀರಿ?

English summary
Things changes as per situation. There are many examples in history to understand this...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X