ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಸಾಯನ: ಒಬ್ಬನೂ ಕನ್ನಡದವನಿಲ್ಲ ಆದರೂ 'ಈ ಸಲ ಕಪ್ ನಮ್ಮದೇ'

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಈಚೆಗಿನ ದಿನಗಳಲ್ಲಿ ದಿನಂಪ್ರತಿ ದಿನಪತ್ರಿಕೆ ತೆರೆದರೆ ಕಾಣೋದು ಒಂದು ಚುನಾವಣಾ ಸುದ್ದಿ, ಮತ್ತೊಂದು ಐಪಿಎಲ್. ಅದು ಬಿಟ್ರೆ ಮಿಕ್ಕೆಲ್ಲಾ . . . ಈ ಐಪಿಎಲ್ ಅಂದ್ರೇನು ? ಎಲ್ಲರಿಗೂ ಗೊತ್ತಿರೋ ವಿಷಯವೇ ಅಲ್ಲವೇ ? IPL ಅಂದ್ರೆ Indian Premier League.

ಈವರೆಗೆ ಹತ್ತು ಸೀಸನ್'ಗಳು ಮುಗಿದು ಮಗದೊಂದು ನಡೆಯುತ್ತಿದೆ. ಮೇ ಇಪ್ಪತ್ತೇಳರವರೆಗೆ ನಡೆಯುವ ಪಂದ್ಯಗಳು ಮತೊಮ್ಮೆ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಬಿಜಿ ಇಟ್ಟಿದೆ. ಬೆಳಗ್ಗೆಯೆಲ್ಲಾ ಆಡುವುದರಲ್ಲಿ ಬಿಜಿ, ಸಂಜೆಯಿಂದ ರಾತ್ರಿಯವರೆಗೆ ನೋಡೋದ್ರಲ್ಲಿ ಬಿಜಿ. ಆಟ ಇಷ್ಟವಿಲ್ಲದ ಧಾರಾವಾಹಿಪ್ರಿಯ ಜನರಿಗೂ, ಆಟವೆಂದರೆ ಪ್ರಾಣ ಎಂಬ ಮನೆಯ ಇತರ ಜನರ ನಡುವೆ ಸಾಮರಸ್ಯ ಇದೆಯೋ ಅಥವಾ ಸಮರವೇ ಆಗುತ್ತಿದೆಯೋ ಗೊತ್ತಿಲ್ಲ. ಹೋಗ್ಲಿ ಬಿಡಿ !

ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!ಜಗದೊಳಿರುವ ಮನುಜರೆಲ್ಲಾ ಒಂಥರಾ ಒರಟರು!

ಈಗ ಮುಂಬೈ ಇಂಡಿಯನ್ಸ್ ಕೈಯಲ್ಲಿರೋ ಕಪ್ಪು 'ಈ ಸಲ ಕಪ್ಪು ನಮ್ದೇ' ಅಂದುಕೊಳ್ಳುತ್ತಿರೋ ನಮಗೆ ಸಿಗೋದು ಅನುಮಾನವಾಗಿದೆ. ಈಗ ವಿಷಯಕ್ಕೆ ಬರೋಣ ! ಈ 'ನಮ್ದೇ' ಅಂದರೇನು ?

There is no Kannadiga in RCB, still IPL cup ours

ಎರಡು ದೇಶಗಳ ನಡುವೆ ಆಟವಿದ್ದಾಗ ಅದರಲ್ಲಿ ಒಂದು ಭಾರತವಿದ್ದರೆ ನಾವೆಲ್ಲರೂ ಭಾರಕ್ಕೆ ಒಲವು ತೋರುತ್ತೇವೆ. ಅದರಲ್ಲೂ ಭಾರತ-ಪಾಕ್ ಆದಲ್ಲಿ ಅದೊಂದು ಮಹಾಯುದ್ದವೇ ಸರಿ! ಎರಡು ರಾಜ್ಯಗಳ ನಡುವೆ ಆಟವಿದ್ದಾಗ ನಾವು ಕರ್ನಾಟಕಕ್ಕೇ ಒಲವು ತೋರಿದ್ದು. ಆದರೆ ಐಪಿಎಲ್ ಹಾಗಲ್ಲ.

ನಮ್ಮಲ್ಲಿ ಎಷ್ಟೋ ಮಂದಿ ಆರ್ ಸಿಬಿ ಅಂತ ಒಲವು ತೋರಿದರೂ ಆ ಒಲವು ಆಟಗಾರರ ಬಗ್ಗೆ ಅನ್ನುವುದಕ್ಕಿಂತ ಆರ್ ಸಿಬಿಯಲ್ಲಿ ಬೆಂಗಳೂರು ಅನ್ನೋ ಹೆಸರಿದೆ ಅನ್ನೋದಕ್ಕೆ ಮಾತ್ರ. ಬೆಂಗಳೂರು ಅಂತ ಇರೋದ್ರಿಂದ ನಮ್ಮ ಕರ್ನಾಟಕದ ಟೀಮು ಅನ್ನೋ ಒಲವು. ಇಡೀ ಟೀಮಿನಲ್ಲಿ ಒಬ್ಬನೂ ಕನ್ನಡದವನಿಲ್ಲ ಆದರೂ 'ಈ ಸಲ ಕಪ್ ನಮ್ಮದೇ' ಅನ್ನುವಷ್ಟು ಒಲವು.

ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!ಏನ್ ನಿಮ್ಮಪ್ಪನ ಮನೇದಾ seatಉ? ಸರ್ಕೊಳ್ರೀ!

ಐಪಿಎಲ್ ಟೀಮಿನಲ್ಲಿ ನಮ್ಮವರು ಅಂತ ಅನ್ನೋ ಹಾಗೆ ಆಗೋದಿಲ್ಲ. ಯಾಕೆ? ಪ್ರತೀ ಟೀಮಿನಲ್ಲೂ ಅಂದರೆ ಪ್ರತೀ ಟೀಮಿನ ಹನ್ನೊಂದು ಜನರಲ್ಲಿ ಏಳು ಜನ ನಮ್ಮ ದೇಶದವರೇ ಆಗಿರುತ್ತಾರೆ. ಕೆಲವೊಮ್ಮೆ ಏಳಕ್ಕಿಂತ ಹೆಚ್ಚೂ ಇರಬಹುದು.

ಹಾಗಂತ ಬೇರೆಯವರು ಅಂದರೆ ಅವರಾರು? ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹೀಗೆ . . . ಈ ದೇಶಗಳಲ್ಲಿನ ಎಷ್ಟೋ ಆಟಗಾರರು ನಮಗೆ ಅತ್ಯಂತ ಪ್ರಿಯ, ಅಲ್ಲವೇ? ಪೊಲಾರ್ಡ್, ಬ್ರಾವೋ, ಎಬಿಡಿ ಇವರೆಲ್ಲ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರರು.

ಐಪಿಎಲ್ ನಲ್ಲಿ ಪ್ರತಿ ಟೀಮಿಗೆ ಒಬ್ಬ ಅಧಿಪತಿ ಇರುತ್ತಾರೆ. ಪ್ರತಿ ಟೀಮಿಗೆ ಆಟಗಾರರನ್ನು ಖರೀದಿಸಲಾಗುತ್ತದೆ. ಯುದ್ಧದಲ್ಲಿ ಸಹಾಯ ಬೇಡಲಾಗುತ್ತದೆ. ಕೆಲವೊಮ್ಮೆ ಈ ಟೀಮಿನಿಂದ ಮತ್ತೊಂದು ಟೀಮಿಗೂ ಆಟಗಾರರನ್ನು ಹಂಚಿಕೊಳ್ಳುತ್ತಾರೆ (trading). ಯಾವುದೇ ಕಾರಣಕ್ಕೆ ಆ ಟೀಮಿನಲ್ಲಿ ಈ ಹಿಂದೆ ಆಡಿದ್ದವರು ಆ ಸೀಸನ್ ಗೆ ಆಡಲಾಗದೆ ಹೋದಾಗ, ಮತ್ತೊಬ್ಬರನ್ನು ಖರೀದಿಸುತ್ತಾರೆ. ಒಟ್ಟಾರೆ ಸೈನ್ಯ ಕಟ್ಟಿ ಮನರಂಜನೆಗಾಗಿ ಆಡೋದು ಐಪಿಎಲ್ ನ ಉದ್ದೇಶ.

ಮನರಂಜನೆಗಾಗಿ ಒಂದು ಅಖಾಡ. ಆ ಅಖಾಡದಲ್ಲಿ ಇಬ್ಬರು ಅಥವಾ ಎರಡು ಟೀಮು. ಅದನ್ನು ನೋಡೋಕ್ಕೆ ನೂರಾರು, ಸಾವಿರಾರು ಜನ. ಇದು ಇಂದು ನೆನ್ನೆಯದಲ್ಲಾ! ಎಂದಿನಿಂದಲೂ ಬಂದಿದ್ದು. ಇಂಥ ಅಖಾಡದಲ್ಲೇ ತಾನೇ ಕೃಷ್ಣನು ಕಂಸನನ್ನು ಕೊಂದಿದ್ದು! ಎರಡು ಕೋಳಿಗಳನ್ನೋ, ಇಬ್ಬರು ಕುಸ್ತಿಪಟುಗಳನ್ನೋ, ಒಂದು ಕಾಡೆಮ್ಮೆ ಅದರೊಂದಿಗೆ ಒಬ್ಬ ಮನುಷ್ಯ, ಹೀಗೆ ಪ್ರತಿ ಆಟದಲ್ಲೂ ಇದೇ ರೀತಿ. ಕೆಲವೊಂದು ಮನರಂಜನೆ ಮಾರಕವೂ ಹೌದು !

ಎಲ್ಲ ಆಟದಲ್ಲೂ Foul ಇದ್ದೇ ಇರುತ್ತದೆ. ಐಪಿಎಲ್ ಕೂಡಾ ಅದಕ್ಕೆ ಹೊರತಲ್ಲ. ಹಿಂದೊಮ್ಮೆ ಎರಡು ಟೀಮುಗಳನ್ನು ಎರಡು ವರ್ಷಗಳ ಕಾಲ ಹೊರಗೆ ಹಾಕಿದ್ದರು. ಅಣ್ಣನ ವಿರುದ್ಧ ಮಾತನಾಡಿದಾಗ ವಿಭೀಷಣನನ್ನು ರಾವಣ ಹೊರಗೆ ಹಾಕಿದ್ದ. ಜಾತಿಯನ್ನೇ 'foul' ಎಂಬುದಾಗಿ ಪರಿಗಣಿಸಿ ಭೀಷ್ಮರು ತಾವು ಯುದ್ಧ ಮಾಡುವವರೆಗೂ ಕರ್ಣ ರಣರಂಗ ಮೆಟ್ಟುವಂತಿಲ್ಲ ಎಂದಿದ್ದರು. ವಾಲಿಯನ್ನು ರಾಮ ಕೊಂದಿದ್ದೂ foul ಎಂದೇ ವಾಲಿಯ ವಾದ. ಧರ್ಮರಾಯ foul ಮಾಡಲಿಲ್ಲವೇ?

ಐಪಿಎಲ್ ನನಗೇಕೆ ಮೆಚ್ಚುಗೆಯಾಗುತ್ತದೆ ಎಂದರೆ ಅದೊಂದು ತ್ವರಿತವಾದ ಆಟ. ಹನ್ನೊಂದು-ಹನ್ನೊಂದು ಜನ ಆಡೋದನ್ನ ಹನ್ನೊಂದು ಸಾವಿರ ಜನ ನೋಡ್ತಾರೆ ಅಂತ ಮೂಗು ಮುರಿಯೋ ಜನ ಇದ್ದಾರೆ. ಹೀಗೆ ಹೇಳಿದಾಗ ಈ ಜಗತ್ತಿನಲ್ಲಿ ಯಾವ ಆಟವೂ ನೋಡಲೋಗ್ಯ ಅನ್ನಿಸುವುದೇ ಇಲ್ಲ, ಅಲ್ಲವೇ? ಆಟ ಇರೋದೇ ಮನರಂಜನೆಗಾಗಿ ಅಂತ/ ಅದಕ್ಕೆ ಸಮಯ ವ್ಯರ್ಥ ಅಂತ ಪಟ್ಟಗಟ್ಟಿದರೆ ಅದಕ್ಕೇನಿದೆ ಅರ್ಥ?

ಐಪಿಎಲ್ ನಲ್ಲಿ ಸಾಮರಸ್ಯ ಇದೆ ಎಂಬರ್ಥದಲ್ಲಿ ನನಗೆ ಮೆಚ್ಚುಗೆಯಾಗುತ್ತದೆ. ಎರಡು ಮೂರು ದೇಶದವರು ಒಟ್ಟುಗೂಡಿ ಮನರಂಜಿಸುತ್ತಾರೆ. ಇಪ್ಪತ್ತು ಓವರ್ ಗಳಲ್ಲಿ ದನ ಬಡಿದ ಹಾಗೆ ಬಡಿದು ಹೋಗ್ತಾರಪ್ಪಾ, ಟೆಕ್ನಿಕ್ ಎಲ್ಲಾ ಸತ್ತಿದೆ ಅನ್ನೋ ಮಂದಿ ಇದ್ದಾರೆ. ಯಾವುದೇ ರೀತಿಯ ಕ್ರಿಕೆಟ್ ಆಡಿದರೂ ಬೌಲರ್ ಬೌಲಿಂಗ್ ಮಾಡೇ ಮಾಡುತ್ತಾನೆ. ಬ್ಯಾಟ್ಸ್ ಮನ್ ಚೆಂಡನ್ನು ಬಡೀತಾನೆ, ಮಿಕ್ಕವರು ಫೀಲ್ಡ್ ಮಾಡುತ್ತಾರೆ. ಎಲ್ಲವೂ ಇದೆ. ಅಂದಿನ ಪಂದ್ಯಗಳಲ್ಲಿ ಶ್ರೀಕಾಂತ್ ಅಥವಾ ಜಯಸೂರ್ಯ ಆಡುತ್ತಿದ್ದುದು ಇದೇ ರೀತಿಯೇ ಅಲ್ಲವೇ?

ಒಂದು ಟೀಮಿನಲ್ಲಿ ಹೇಗೆ ಹಲವು ರಾಜ್ಯಗಳ, ದೇಶಗಳ ಮಂದಿಯೊಂದಿಗೆ ಕೆಲಸ ಮಾಡುತ್ತೇವೆಯೋ ಹಾಗೆ ಈ ಆಟವೂ ಕೂಡ. ಎರಡೂ ಕಡೆ ಇರುವುದೇ ಟೀಮ್ ವರ್ಕ್. ಒಟ್ಟಿಗೆ ಕೆಲಸ ಮಾಡುತ್ತಾ ಹೇಗೆ ಒಂದು ಗುರಿ ಮುಟ್ಟುತ್ತೇವೆಯೋ ಹಾಗೆಯೇ ಇಲ್ಲೂ ಕೂಡ ಅಲ್ಲವೇ?

ಎಲ್ಲ ದೇಶಗಳೂ ಒಗ್ಗೂಡಿ ಒಂದು ಕಪ್ ಗೆಲ್ಲಲು ಹೋರಾಡುವ ಹಾಗೆ, ಎಲ್ಲ ದೇಶಗಳೂ ಒಗ್ಗೂಡಿ ದುಷ್ಟಶಕ್ತಿಗಳ ವಿರುದ್ಧ ಹೋರಾಡುವ ಹಾಗಿದ್ದರೆ ಎಷ್ಟು ಚೆನ್ನಿತ್ತು!

English summary
How IPL 2018 season attracting viewers, how people think about competition and players, Oneindia Kannada columnist Srinath Bhalle writes beautiful article about IPL cricket 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X